ದಣಿವರಿಯದ ಹೋರಾಟಗಾರನಿಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯ ಗರಿ

Update: 2017-04-14 04:58 GMT

ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯ ಗರಿ ಪ್ರಶಸ್ತಿ ಬಂದಿರುವುದು ಸಂತೋಷ. ಇದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ದಲಿತ, ಪ್ರಗತಿಪರ ಚಳವಳಿಯನ್ನು ಮತ್ತಷ್ಟು ಸಶಕ್ತಗೊಳಿಸುವುದಕ್ಕೆ ಪ್ರಯತ್ನವನ್ನು ಮಾಡಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯ ಮತ್ತು ವಿಚಾರಕ್ಕನುಗುಣವಾಗಿ ಚಳವಳಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ವಾಸ್ತವವಾಗಿ ದಲಿತ ಚಳವಳಿಯೂ ಸೇರಿದಂತೆ ಎಲ್ಲಾ ಪ್ರಗತಿಪರ ಚಳವಳಿಗಳು ಒಂದು ರೀತಿಯಲ್ಲಿ ಜಾಗತಿಕ ವಿದ್ಯಮಾನಗಳಿಂದಾಗಿ ಕುಂಟುತ್ತಾ ಸಾಗುತ್ತಿರುವಂತಹ ಸಂದರ್ಭ ಇದು. ಈ ಸಂದರ್ಭದಲ್ಲಿ ನನಗೆ ಅಂಬೇಡ್ಕರ್ ಪ್ರಶಸ್ತಿ ಸಂದಿರುವುದು ಚಳವಳಿಯನ್ನು ನಿಜದ ಅರ್ಥದಲ್ಲಿ ಚಳವಳಿಯ ದಿಕ್ಕಿನೆಡೆಗೆ ಕೊಂಡೊಯ್ಯಬೇಕಾದಂತಹ ಜವಾಬ್ದಾರಿಯನ್ನು ವಹಿಸಿದಂತಾಗಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯಡೆಗೆ ಸಾಗಬೇಕಾಗಿದೆ.

-ಗುರುಪ್ರಸಾದ್ ಕೆರಗೋಡು, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು.


ನೋವಿನಲ್ಲೂ ಅರಳಿದ ಹೂವು ಗುರುಪ್ರಸಾದ್ ಕೆರಗೋಡು. ಹತ್ತಾರು ಕೌಟುಂಬಿಕ ಸಂಕಷ್ಟ ಮತ್ತು ದೈನಂದಿನ ತಾಪತ್ರಯಗಳನ್ನು ಒಡಲೊಳಗೆ ಕರಗಿಸಿಕೊಂಡು ದೀನದಲಿತರಿಗೆ ದನಿಯಾದ ವ್ಯಕ್ತಿತ್ವ ಅವರದು.

ಚಳವಳಿಗಾರರು, ಸಿದ್ಧಾಂತಿಗಳು ಆಯಾ ಸಮಕಾಲೀನ ಸಮಾಜದೊಂದಿಗೆ ಸಮೀಕರಿಸಿಕೊಳ್ಳಲಾಗದೆ ಅಥವಾ ಅದರೊಂದಿಗೆ ಸಂಘಟನೆಯನ್ನು ಮುನ್ನಡೆಸಲಾಗದೆ ಹಿಂದೆ ಸರಿದಿದ್ದು ಅಥವಾ ಕಳೆದೇ ಹೋಗಿದ್ದು ಗೊತ್ತಿರುವ ವಿಚಾರ.

ಕೆಲವರು ಮಾತ್ರ ಗಟ್ಟಿತನ, ನಂಬಿದ ತತ್ವ, ಸಿದ್ಧಾಂತಗಳ ನಡುವೆ ಉಳಿಯಬಲ್ಲರು. ಅಂತಹ ವ್ಯಕ್ತಿತ್ವಗಳ ನಡುವೆ ಗುರುಪ್ರಸಾದ್ ಕೆರಗೋಡು ಭರವಸೆ ಹುಟ್ಟಿಸಬಲ್ಲರು. ಎಂದೋ ಸಲ್ಲಬಹುದಾಗಿದ್ದ ಪ್ರಶಸ್ತಿ ಇಂದು ಸಂದಿತು ಎಂಬ ವಿಷಯ ಬಿಟ್ಟರೆ, ಇಂತಹ ಪ್ರಶಸ್ತಿಗಳನ್ನು ಮೀರಿ ಬರಬಹುದಾದ ಸನ್ಮಾನ-ಪುರಸ್ಕಾರಗಳಿಗೆ ಅವರು ಅರ್ಹರು. ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸಕಲ ಜನಾಂಗವನ್ನೂ ನಿಸ್ಪಹ ಭಾವದೊಂದಿಗೆ ಚಳವಳಿಗಳನ್ನು ಸಂಘಟಿಸಿದವರು. ಜಾತಿ ಸಮಸ್ಯೆಯನ್ನು ಮಾನವೀಯ ಭಾವದಲ್ಲಿ ತೊಡೆದು ಹಾಕಬೇಕೆಂಬ ಹಂಬಲ ಹೊಂದಿರುವವರು. ರಾಜ್ಯ ಸರಕಾರ ಇಂದು ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸುವ ಮೂಲಕ ಸ್ತುತ್ಯರ್ಹ ಕಾರ್ಯ ಮಾಡುತ್ತಿದೆ.

ಕಳೆದ ಮೂವತ್ತೈದು ನಲವತ್ತು ವರ್ಷಗಳಿಂದ ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಸಂಭಾವಿತ ಗುರುಪ್ರಸಾದ್, ದಲಿತ, ರೈತ, ಜನಪರ ಹೋರಾಟಗಳಲ್ಲದೆ, ಸಾಂಸ್ಕೃತಿಕ, ನಾಡುನುಡಿ ರಕ್ಷಣೆ ಹಾಗೂ ಜೀವಪರವಾದ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಾ ಅಂಬೇಡ್ಕರ್ ಅವರ ಆಶಯಗಳ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.

ಪ್ರೊ. ಬಿ. ಕೃಷ್ಣಪ್ಪಪ್ರೇರಿತ ದಲಿತ ಸಂಘರ್ಷ ಸಮಿತಿ ಆಶಯಗಳಿಗೆ ಚ್ಯುತಿಬಾರದಂತೆ ಇಂದಿಗೂ ನಡವಳಿಕೆ ರೂಪಿಸಿಕೊಂಡಿರುವ ಗುರುಪ್ರಸಾದ್, ದೇವನೂರ ಮಹಾದೇವ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರೊ.ಕೆ.ರಾಮದಾಸ್ ಸೇರಿದಂತೆ ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ನೇತಾರರ ಆತ್ಮೀಯ ಒಡನಾಟ ಹೊಂದಿ, ತಮ್ಮ ತವರು ಮಂಡ್ಯ ಜಿಲ್ಲೆಯ ಪ್ರಸಿದ್ಧ ಸಾಹಿತಿ, ಚಿಂತಕರಾದ ಪ್ರೊ.ಎಚ್.ಎಲ್.ಕೇಶವಮೂರ್ತಿ, ಡಾ.ಬೆಸಗರಹಳ್ಳಿ ರಾಮಣ್ಣ, ಪ್ರೊ.ಡಿ.ಕೃಷ್ಣಪ್ಪಗೌಡ ಅರಕೆರೆ, ಶಿವಳ್ಳಿ ಕೆಂಪೇಗೌಡ, ಪ್ರೊ.ಹುಲ್ಕೆರೆ ಮಹದೇವು ಮುಂತಾದವರ ಸಂಪರ್ಕದಿಂದ ಚಳವಳಿಗೆ ಬೇಕಾದ ವೈಚಾರಿಕ ನೆಲೆಗಟ್ಟನ್ನು ಮೈಗೂಡಿಸಿಕೊಂಡಿದ್ದಾರೆ.

ಅಂಬೇಡ್ಕರ್ ಅವರ ಹೋರಾಟದ ಪ್ರೇರಣೆಯೊಂದಿಗೆ ಸಾಮಾಜಿಕ ಸಂಘರ್ಷಕ್ಕೆ ಐತಿಹಾಸಿಕ ನಾಂದಿ ಹಾಡಿದ ದಲಿತ ಚಳವಳಿಗೆ 1978-79ರಲ್ಲಿ ಪಾದಾರ್ಪಣೆ ಮಾಡಿದ ಗುರುಪ್ರಸಾದ್, ಇಂದು ದಸಂಸ ರಾಜ್ಯ ಸಂಚಾಲಕರಾಗಿ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಬಿಡುವಿಲ್ಲದ ಹೋರಾಟದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಬಳಿಗೊಂದು ವಸತಿಶಾಲೆ, ಬಡವರಿಗೆ ಭೂಮಿಯ ಹಕ್ಕು, ಹೆಂಡ-ಸಾರಾಯಿ ನಿಷೇಧ, ವಿದ್ಯಾರ್ಥಿನಿಲಯಗಳ ಮೂಲ ಸೌಕರ್ಯ, ಹಿಂದಿ ಹೇರಿಕೆ ವಿರೋಧಿ ಹೋರಾಟ, ಪ್ಲಾಂಟೇಷನ್ ಒತ್ತುವರಿ ಭೂಮಿ ಸಕ್ರಮದ ವಿರುದ್ಧದ ಹೋರಾಟ, ದೇವದಾಸಿ, ಬೆತ್ತಲೆ ಸೇವೆ ನಿಷೇಧ, ಇನ್ನೂ ಮುಂತಾದ ಹೋರಾಟಗಳಲ್ಲಿ ಪ್ರಸಾದ್ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ವಿಶೇಷವಾಗಿ 1989-90ರ ವರ್ಷದಲ್ಲಿ ಮಂಡ್ಯ ಜಿಲ್ಲೆಯ ಸಾಕ್ಷರತಾ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿಲ್ಲೆಯ ಪ್ರತಿಹಳ್ಳಿಗೂ ಸಾಕ್ಷರತಾ ಆಂದೋಲನವನ್ನು ಕೊಂಡೊಯ್ದು ಯಶಸ್ವಿಗೊಳಿಸಿದ ಹೆಗ್ಗಳಿಕೆ ಗುರುಪ್ರಸಾದ್ ಅವರಿಗೆ ಸಲ್ಲುತ್ತದೆ.

ಬೆಂಡಿಗೇರಿ ಮಲ ಪ್ರಕರಣ, ಬದನವಾಳು, ಕಂಬಾಲಪಲ್ಲಿ, ಮೈಸೂರಿನ ಸರಗೂರು-ಹಂಚಿಪುರ ದಲಿತರ ಕಗ್ಗೊಲೆ, ಮಂಡ್ಯ ಜಿಲ್ಲೆ ನಾಗತಿಹಳ್ಳಿಯ ಒಕ್ಕಲಿಗ ಸಮುದಾಯದ ಮೀನಾಕ್ಷಮ್ಮಳ ಬಹಿಷ್ಕಾರ ಪ್ರಕರಣ, ಹಿಂದುಳಿದ ವರ್ಗಕ್ಕೆ ಸೇರಿದ ವಕೀಲ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ವಿರುದ್ಧ ಹೋರಾಟ, ಮದ್ದೂರಿನ ಆಬಲವಾಡಿ ಮರ್ಯಾದಾ ಹತ್ಯೆ ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧೆಡೆ ದಲಿತರು, ಮಹಿಳೆಯರು ಮತ್ತು ಶೋಷಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದೀಗ 58 ವರ್ಷಗಳನ್ನು ಪೂರೈಸಿರುವ ಗುರುಪ್ರಸಾದ್ ಕೆರಗೋಡು ಬಿ.ಕಾಂ. ಪದವಿ ಪಡೆದಿದ್ದರೂ ಸರಕಾರಿ ಉದ್ಯೋಗದ ಕಡೆಗೆ ಗಮನಕೊಡದೆ ಪೂರ್ಣಪ್ರಮಾಣದಲ್ಲಿ ಪ್ರಗತಿಪರ ಚಳವಳಿಗಳಲ್ಲಿ ತೊಡಗಿಸಿಕೊಂಡು ಅಂಬೇಡ್ಕರ್ ಅವರು ಆಶಿಸಿದ ಸಾಮಾಜಿಕ ನ್ಯಾಯದ ಪರವಾಗಿ ದಣಿವರಿಯದೆ ಹೋರಾಟ ಮುಂದುವರಿಸಿದ್ದಾರೆ.

Writer - ಕುಂಟನಹಳ್ಳಿ ಮಲ್ಲೇಶ

contributor

Editor - ಕುಂಟನಹಳ್ಳಿ ಮಲ್ಲೇಶ

contributor

Similar News