ಇನ್ನು ಮುಂದೆ ಪ್ರಾಣಿಗಳೂ ಯೋಗ ಕಲಿಯಬೇಕಂತೆ...!
ಲಕ್ನೊದ ಪ್ರಖ್ಯಾತ ಝೂನೊಳಗೆ ಅವತ್ತು ಒಂದು ವಿಶೇಷ ನಡೆಯಿತು. ಎಂದಿನಂತೆ ಬೆಳಗ್ಗೆ ಎದ್ದು ಆಕಳಿಸಿದ ಸಿಂಹವೊಂದು ತನಗೆ ಯಾವತ್ತಿನಂತೆ ಬರುವ ಕಳಪೆ ಮಾಂಸಕ್ಕಾಗಿ ಕಾಯುತ್ತಿತ್ತು. ಮೊದ ಮೊದಲು ಒಳ್ಳೆಯ ಬೀಫ್‌ಗಳನ್ನೇ ಹಾಕುತ್ತಿದ್ದರು. ಇತ್ತೀಚೆಗೆ ಒಣಗಿದ, ರೋಗಗ್ರಸ್ತ ಬೀಫ್‌ಗಳನ್ನು ಪೂರೈಸುತ್ತಿದ್ದಾರೆ ಎನ್ನುವುದು ಅದರ ಗೊಣಗಾಟವಾಗಿತ್ತು. ಹತ್ತಿರದಲ್ಲೇ ಇರುವ ಹುಲಿಗಳ ಜೊತೆಗೆ ಇದನ್ನು ಪದೇ ಪದೇ ಹೇಳುತ್ತಿತ್ತು. ‘‘ಈ ಬೀಫ್‌ಗಿಂತ ಆ ಬೀಫ್ ಹಂಚುವವನನ್ನೇ ತಿಂದರೆ ಹೇಗೆ ಎಂದು ಅನ್ನಿಸುತ್ತದೆ’’ ಎಂದು ಒಮ್ಮೆ ಹೇಳಿತ್ತು.
‘‘ಅವನು ಕೈಗೆ ಸಿಗಬೇಕಲ್ಲ, ನಮಗೆ ಕೊಡುವ ಬೀಫನ್ನೆಲ್ಲ ಅವನೇ ಮನೆಗೆ ಸಾಗಿಸುತ್ತಿದ್ದಾನೆ. ಬೀಫ್ ಎಂದು ಹೇಳಿ ನಾಯಿ ಮಾಂಸವನ್ನೆಲ್ಲ ಕಲಬೆರಕೆ ಮಾಡಿ ತರುತ್ತಾನೆ. ವಾಸನೆಯಲ್ಲೇ ನಮಗೆ ಗೊತ್ತಾಗುತ್ತೆ, ಬೀಫ್ ಯಾವುದು, ನಾಯಿ ಯಾವುದು ಅಂತ. ಆದರೆ ಲೆಕ್ಕ ಎಲ್ಲ ಬೀಫ್‌ನದ್ದೇ ಹಾಕಿ ಚೆನ್ನಾಗಿ ದುಡ್ಡು ಮಾಡಿದ್ದಾನೆ. ಅವನನ್ನು ನೋಡಿದರೆ ಒಳ್ಳೆ ಕಾಡುಕೋಣ ನೋಡಿದ ಹಾಗೆ ಬಾಯಲ್ಲಿ ನೀರಿಳಿಯುತ್ತೆ’’ ಹುಲಿರಾಯ ಸಿಂಹರಾಯನಿಗೆ ಪ್ರತಿಕ್ರಿಯಿಸಿತ್ತು. ಅಂದು ಬೆಳಗ್ಗೆ ಯಾವತ್ತಿನ ಸಮಯಕ್ಕೆ ಸರಿಯಾಗಿ ಬೀಫ್ ಬರದೇ ಇದ್ದುದರಿಂದ ಸಿಂಹರಾಯ ಸಿಟ್ಟಿನಿಂದ ಗರ್ಜಿಸಿತು. ಅಷ್ಟರಲ್ಲಿ ಅದೇನೋ ದೊಡ್ಡ ಕಟ್ಟು ಸಿಂಹವಿದ್ದ ಕಡೆಗೆ ಬಂದು ಬಿತ್ತು. ಎಂದಿನಂತೆ ಬೀಫ್‌ನ ಪರಿಮಳವೂ ಇಲ್ಲ. ಸಿಂಹ ಅಚ್ಚರಿಯಿಂದ ಅದನ್ನು ಬಿಡಿಸಿದರೆ ಅದು ಮಾಂಸ ಅಲ್ಲ. ಬದಲಿಗೆ ಅದರಲ್ಲಿ ಇನ್ನೇನೇನೋ ಇತ್ತು. ಅಷ್ಟರಲ್ಲಿ ಹುಲಿರಾಯ ಏದುಸಿರು ಬಿಡುತ್ತಾ ಓಡೋಡಿ ಬಂತು ‘‘ನಿನಗೆ ಉಪಾಹಾರ ಬಂತ...?’’ ಕೇಳಿತು.
‘‘ಬಂತು. ಆದರೆ ಅದೇನೋ ಅಸಹ್ಯವಾಗಿದೆ. ಮಾಂಸವಂತೂ ಅಲ್ಲ....’’ ಸಿಂಹರಾಯ ಗೊಂದಲದಿಂದ ಹೇಳಿತು. ‘‘ಅದು ಅನ್ನ ಸಾಂಬಾರ್. ಮನುಷ್ಯರು ಅದನ್ನೇ ತಿನ್ನುವುದಂತೆ...ಇನ್ನು ಮುಂದೆ ಈ ರಾಜ್ಯದಲ್ಲಿ ಬೀಫ್ ತಿನ್ನೋ ಹಂಗೇ ಇಲ್ವಂತೆ. ಬೀಫ್ ಎಲ್ಲವನ್ನೂ ಪರದೇಶಕ್ಕೆ ರಫ್ತು ಮಾಡುತ್ತಾರಂತೆ...ನಾವೆಲ್ಲ ಅನ್ನಸಾಂಬಾರ್ ತಿನ್ನ ಬೇಕಂತೆ....’’ ಹುಲಿರಾಯ ಗಾಬರಿಯಿಂದ ಹೇಳಿತು.
‘‘ಎಷ್ಟು ಹೊಲಸಾಗಿದೆ. ಇದನ್ನು ಮನುಷ್ಯರು ಹೇಗೆ ತಿನ್ನುತ್ತಾರೆ? ಅವರೂ ಮಾಂಸ ತಿನ್ನುತ್ತಾರಲ್ಲ...?’’ ಸಿಂಹ ತನ್ನ ಗಾಂಭೀರ್ಯ ಬಿಟ್ಟುಕೊಡದೆ ಕೇಳಿತು.
‘‘ಇದು ಎಲ್ಲ ಮನುಷ್ಯರು ತಿನ್ನುವ ಆಹಾರವಲ್ಲವಂತೆ. ಮೇಲ್ಮಟ್ಟದ ಮನುಷ್ಯರು ತಿನ್ನುವುದಂತೆ. ಇದೀಗ ಇಡೀ ಉತ್ತರ ಪ್ರದೇಶದಲ್ಲಿ ಎಲ್ಲರನ್ನೂ ಮೇಲ್ಮಟ್ಟದ ಮನುಷ್ಯರಾಗಿ ಮಾಡುವ ಉದ್ದೇಶವನ್ನು ಹೊಸ ಮುಖ್ಯಮಂತ್ರಿ ಹೊಂದಿದ್ದಾರಂತೆ...ಅದಕ್ಕಾಗಿ ರಾಜ್ಯದಲ್ಲಿ ಸಸ್ಯಾಹಾರವನ್ನು ಕಡ್ಡಾಯ ಮಾಡುತ್ತಾರಂತೆ...’’ ಹುಲಿರಾಯ ವಿವರಿಸಿತು.
‘‘ಅಂದರೆ ನಮ್ಮನ್ನೂ ಮನುಷ್ಯರನ್ನಾಗಿ ಮಾಡುವ ಉದ್ದೇಶವೇ...?’’ ಸಿಂಹರಾಯ ಕೇಳಿತು.
‘‘ಹೌದು. ನೂತನ ಮುಖ್ಯಮಂತ್ರಿ ಬೇರೆ ಬೇರೆ ಯೋಜನೆ ಹಾಕಿದ್ದಾರಂತೆ. ನಮಗೆಲ್ಲ ವಾರಕ್ಕೊಮ್ಮೆ ವಿಶೇಷ ಪಾಯಸ ಕೊಡುತ್ತಾರಂತೆ. ಜೊತೆಗೆ ಬಾಳೆ ಹಣ್ಣು ಕೂಡ ಉಂಟಂತೆ...’’ ಹುಲಿರಾಯ ಹೇಳಿತು.
‘‘ಅದೆಂತ ಪಾಯಸ ಎಂದರೆ?’’ ಸಿಂಹರಾಜನಿಗೆ ಅರ್ಥವಾಗಲಿಲ್ಲ.
‘‘ಪಾಯಸ ಎಂದರೆ ಬೆಲ್ಲ, ತೆಂಗಿನ ಕಾಯಿ ಹಾಕಿ ಮಾಡುವುದು...ಮೇಲ್ಜಾತಿಯ ಮನುಷ್ಯರಿಗೆ ಪಾಯಸವೆಂದರೆ ಇಷ್ಟ...’’
‘‘ಅವರಿಗಿಷ್ಟವಾದರೆ ಅವರೇ ಕುಡಿಯಲಿ. ನನಗೆ ವಾರಕ್ಕೊಮ್ಮೆ ಬಿಸಿ ಬಿಸಿ ರಕ್ತ ಕೊಟ್ಟರೆ ಸಾಕು...’’
‘‘ಹಾಗೆಲ್ಲ ನಾವು ಕೇಳಿದ್ದು ಇನ್ನು ಸಿಗುವುದಿಲ್ಲ. ಅವರು ಕೊಟ್ಟದ್ದು ತಿನ್ನಬೇಕಂತೆ...’’ ಹುಲಿರಾಯ ಹೇಳಿತು.
‘‘ಅಯ್ಯೋ ಇದನ್ನು ಮೂಸುವಾಗಲೇ ವಾಂತಿ ಬರುತ್ತದೆ. ಈ ಮನುಷ್ಯರು ಇಷ್ಟು ನೀಚರಾಗಿದ್ದು ಇದನ್ನು ತಿಂದೇ ಇರಬೇಕು....’’ ಸಿಂಹರಾಯ ಸಿಟ್ಟಿನಿಂದ ಗರ್ಜಿಸಿತು.
‘‘ಅಷ್ಟೇ ಅಲ್ಲ, ಇನ್ನು ಮುಂದೆ ಪ್ರತಿ ದಿನ ಯೋಗ ಮಾಡಬೇಕಂತೆ.... ಅದಕ್ಕಾಗಿ ಯೋಗ ಕಲಿಸಿಕೊಡಲು ಒಬ್ಬ ಯೋಗ ಅಧ್ಯಾಪಕನನ್ನು ಕೊಡುತ್ತಾರಂತೆ...’’ ಹುಲಿರಾಯ ಇನ್ನಷ್ಟು ವಿವರಗಳನ್ನು ನೀಡಿತು.
‘‘ಹೇಗೆ ಅಧ್ಯಾಪಕ ದಷ್ಟಪುಷ್ಟವಾಗಿದ್ದಾನಾ...? ದಿನಾ ಒಬ್ಬೊಬ್ಬ ಯೋಗ ಅಧ್ಯಾಪಕನನ್ನು ನಮಗೆ ಕೊಟ್ಟರೆ ನಾನು ಖಂಡಿತ ಯೋಗ ಮಾಡುವೆ...’’ ಸಿಂಹರಾಯ ಆಸೆಯಿಂದ ಹೇಳಿತು.
‘‘ಯೋಗ ಅಧ್ಯಾಪಕನನ್ನು ತಿನ್ನುವುದಕ್ಕೆ ಕೊಡುವುದಲ್ಲ. ಅವನು ಯೋಗ ಕಲಿಸುವುದಕ್ಕೆ ಬರುವುದಂತೆ...’’ ಹುಲಿರಾಯ ತಿದ್ದುಪಡಿ ಮಾಡಿತು.
‘‘ಅವನು ಕಲಿಸುವುದಕ್ಕೇ ಬರಲಿ. ಅವನು ಕಲಿಸುವುದು ಮುಗಿದ ಬಳಿಕ ನಾವು ಅವನನ್ನು ತಿಂದರೆ ಆಯಿತು. ಅವನು ಕಲಿಸಿದ ಹಾಗೂ ಆಯಿತು. ನಾವು ತಿಂದ ಹಾಗೆಯೂ ಆಯಿತು. ಯೋಗ ಅಧ್ಯಾಪಕನ್ನು ತಿಂದರೆ ಒಂದು ವಾರದಲ್ಲೇ ನಾವೂ ಅವನಂತೆ ಯೋಗ ಪಟುಗಳಾಗಬಹುದು...’’
‘‘ಆದರೆ ಯೋಗ ಪಟು ನಮಗೆ ವೀಡಿಯೊ ಮೂಲಕ ಯೋಗಕಲಿಸುತ್ತಾನಂತೆ. ಅವನು ನಮ್ಮ ಎದುರಿಗೆ ಬರುವುದಿಲ್ಲವಂತೆ...’’ ಹುಲಿರಾಯ ಹೇಳಿತು.
ಸಿಂಹರಾಯನಿಗೆ ಮತ್ತೆ ನಿರಾಶೆಯಾಯಿತು. ‘‘ಇನ್ನು ಮುಂದೆ ಇವರು ವೀಡಿಯೊದಲ್ಲೇ ನಮಗೆ ಆಹಾರಗಳನ್ನು ತೋರಿಸಿ ಮೋಸ ಮಾಡುತ್ತಾರೇನೋ...’’
‘‘ಯೋಗ ಅಂದರೆ ತಲೆ ಮೇಲೆ ನಿಂತುಕೊಳ್ಳುವುದಂತೆ...’’ ಹುಲಿರಾಯ ಇನ್ನಷ್ಟು ಹೆದರಿಸಿತು.
‘‘ನಾಲ್ಕು ಕಾಲಿರುವಾಗ ತಲೆಯ ಮೇಲೆ ಯಾಕೆ ನಿಂತುಕೊಳ್ಳುವುದು’’ ಸಿಂಹರಾಯ ಗೊಂದಲದಿಂದ ಕೇಳಿತು.
‘‘ಗೊತ್ತಿಲ್ಲ, ದಿನಾ ಬೆಳಗ್ಗೆ ಎದ್ದು ಕಾಲು ಮೇಲೆ, ತಲೆ ಕೆಳಗೆ ಮಾಡಿ ನಿಂತುಕೊಳ್ಳಬೇಕಂತೆ....ಇಲ್ಲದಿದ್ದರೆ ಈ ಆಹಾರವೂ ನಮಗೆ ಸಿಗುವುದಿಲ್ಲವಂತೆ..’’ ಹುಲಿರಾಯ ಉತ್ತರಿಸಿತು. ‘‘ಇದೊಳ್ಳೆ ಕತೆಯಾಯಿತು...ಇನ್ನೇನೇನು ಕಾನೂನು ಬರುತ್ತದೋ?’’
‘‘ಈ ಮನುಷ್ಯರದು ತುಂಬಾ ಅತಿಯಾಯಿತು...’’ ಸಿಂಹರಾಯ ಸಿಟ್ಟಿನಿಂದ ಹೇಳಿತು. ‘‘ಹೌದೌದು...ಇನ್ನು ಮುಂದೆ ನಾವು ಬಹಿರಂಗವಾಗಿ ಪ್ರೇಮಿಸುವ ಹಾಗೆ ಇಲ್ಲವಂತೆ...ಅದಕ್ಕಾಗಿ ಝೂನಲ್ಲಿ ವಿಶೇಷ ರೋಮಿಯೋ ಪಡೆ ಕಾವಲು ಹಾಕುತ್ತಾರಂತೆ...’’ ಹುಲಿರಾಯ ಸ್ಫೋಟಕ ವಿಷಯ ಹೇಳಿತು.
‘‘ಅಂದರೆ....’’ ಸಿಂಹರಾಯ ಕೇಳಿತು.
‘‘ಅಂದರೆ ಪ್ರೇಮಿಸುವುದು ಅಶ್ಲೀಲವಂತೆ. ನಾವೆಲ್ಲ ರಾತ್ರಿ ಗುಟ್ಟಾಗಿ ಮನುಷ್ಯರ ಹಾಗೆಯೇ ಪ್ರೇಮಿಸಬೇಕಂತೆ. ಇಲ್ಲವಾದರೆ, ಗಂಡು ಹೆಣ್ಣು ಪ್ರಾಣಿಗಳನ್ನು ಜೊತೆಯಾಗಿ ಇರುವುದಕ್ಕೇ ಬಿಡುವುದಿಲ್ಲವಂತೆ...’’ ಹುಲಿರಾಯ ಬೇಜಾರಿನಲ್ಲಿ ಹೇಳಿತು.
‘‘ಯಾರದು ಹೊಸ ಮುಖ್ಯಮಂತ್ರಿ... ಪ್ರೇಮದ ಬೆಲೆ ಗೊತ್ತಿಲ್ಲದವನು...’’ ಸಿಂಹರಾಯ ಗರ್ಜಿಸಿತು.
‘‘ಆತ ಸನ್ಯಾಸಿಯಂತೆ. ಆತ ಈವರೆಗೆ ಯಾರನ್ನೂ ಪ್ರೀತಿಸಿಯೇ ಇಲ್ಲವಂತೆ. ನಮ್ಮ ಪ್ರಧಾನಿಗಳೂ ಹೆಂಡತಿಯನ್ನು ಬಿಟ್ಟು ಬಿಟ್ಟರಂತೆ. ಅವರೀಗ ಯಾರನ್ನೂ ಪ್ರೀತಿಸುವುದೇ ಇಲ್ಲವಂತೆ...’’
‘‘ಪ್ರೀತಿಯ ಬಗ್ಗೆ ಗೊತ್ತಿಲ್ಲದವರಷ್ಟೇ ಇಂತಹ ಕಾನೂನನ್ನು ತರಬಹುದು. ಅಂತೂ ಇಡೀ ರಾಜ್ಯವನ್ನೇ ಝೂ ಮಾಡುವ ತಯಾರಿಯಲ್ಲಿದ್ದಾರೆೆ. ಈ ಮನುಷ್ಯರೂ ಸ್ವಲ್ಪ ಅನುಭವಿಸಲಿ...ಕಾಡಿನ ರಾಜನಾಗಿರುವ ನಾನು ಈ ಮನುಷ್ಯರೆಂಬ ಮೂರ್ಖರ ಕೈಯಲ್ಲಿ ಆಳಿಸಿಕೊಳ್ಳಬೇಕಿದೆ...ನನ್ನ ಹಣೆಬರಹ’’ ಎಂದು ಸಿಂಹ ಅನ್ನಸಾಂಬಾರ್‌ನ್ನು ತಿನ್ನಲು ಯತ್ನಿಸಿ, ವಾಂತಿ ಮಾಡಲು ಶುರು ಮಾಡಿತು.