ಮದುವೆ ಸಮಾರಂಭದಲ್ಲಿ ಎಮ್ಮೆಯ ಮಾಂಸದ ಬದಲು ಕೋಳಿ ಪದಾರ್ಥ ತಯಾರಿಸಿದ ದಾದ್ರಿಯ ಮುಸ್ಲಿಂ ಕುಟುಂಬ
ನೊಯ್ಡ,ಎ.18 : ದಾದ್ರಿಯ ರಝಾಕ್ ಕಾಲನಿಯಲ್ಲಿನ ಮುಸ್ಲಿಂ ಕುಟುಂಬವೊಂದರಲ್ಲಿ ನಡೆಯಲಿರುವ ವಿವಾಹದ ಸಂದರ್ಭ ಆಗಮಿಸುವ ಗಂಡಿನ ಕಡೆಯವರಿಗೆ ಎಮ್ಮೆಯ ಮಾಂಸದ ಪದಾರ್ಥದ ಬದಲು ಕೋಳಿ ಪದಾರ್ಥದ ಔತಣವನ್ನು ಸಿದ್ಧಪಡಿಸಲಾಗಿದೆ. ಸಮಾರಂಭಕ್ಕಾಗಿ ಎಮ್ಮೆಯನ್ನು ಕಡಿಯಲು ಕುಟುಂಬವು ನಿಗದಿತ ಸಮಯದೊಳೆಗೆ ಆಡಳಿತದ ಅನುಮತಿ ಪಡೆಯಲು ಸಾಧ್ಯವಾಗದೇ ಇರುವುದೇ ಈ ಕ್ರಮಕ್ಕೆ ಕಾರಣವಾಗಿದೆ.
ಇಂದು ಈ ವಿವಾಹ ನಡೆಯಲಿದ್ದು ಕುಟುಂಬ ಈ ಹಿಂದೆ ಝರ್ದಾ, ಅಂದರೆ ಎಮ್ಮೆಯ ಮಾಂಸದ ಪದಾರ್ಥ ತಯಾರಿಸಲು ನಿರ್ಧರಿಸಿ ಸುಮಾರು 300 ಅತಿಥಿಗಳಿಗೆ ಉಣಬಡಿಸಲು ನಿರ್ಧರಿಸಿತ್ತು. ಆದರೆ ಕುಟುಂಬ ಅದಕ್ಕೆ ಅಗತ್ಯ ಅನುಮತಿಯನ್ನು ಪಡೆಯುವ ಸಲುವಾಗಿ ಸೋಮವಾರ ಸಂಬಂಧಿತ ಅಧಿಕಾರಿಯನ್ನು ಭೇಟಿಯಾಗಲು ಸಾಧ್ಯವಾಗಿಲ್ಲದ ಕಾರಣ 150 ಕೆಜಿ ಕೋಳಿ ಮಾಂಸ ಖರೀದಿಸಿ ಅದರ ಪದಾರ್ಥ ತಯಾರಿಸಿದೆ ಎಂದು ವಧುವಿನ ಸಂಬಂಧಿ ನೂರ್ ಮುಹಮ್ಮದ್ ಹೇಳಿದ್ದಾರೆ.
ನಾವು ಎಮ್ಮೆಯ ಮಾಂಸದ ಅಡುಗೆ ತಯಾರಿಸಿ ಬೇರೆಯವರ ಭಾವನೆಗಳಿಗೆ ನೋವುಂಟು ಮಾಡಲು ಬಯಸದೆ ಕೋಳಿ ಮಾಂಸ ಖರೀದಿಸಿದೆವು ಎಂದು ವಧುವಿನ ತಂದೆ ನಝರ್ ಝೈಫಿ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ದಾದ್ರಿಯ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಸಿಂಗ್, ‘‘ಪ್ರಾಣಿಯ ಹತ್ಯೆಗೈಯ್ಯಲು ಅವರು ಅನುಮತಿಯನ್ನು ಉತ್ತರ ಪ್ರದೇಶ ಸರಕಾರದಿಂದಲೇ ಪಡೆಯಬೇಕಿದೆ. ನಮಗೆ ಆ ಅಧಿಕಾರವಿಲ್ಲ’’ ಎಂದು ಹೇಳಿದರು.
ಉತ್ತರ ಪ್ರದೇಶ ಗೋಹತ್ಯೆ ನಿಷೇಧ ಕಾಯಿದೆ 1955 ಅನ್ವಯ ನಿಷೇಧಿತ ಪ್ರಾಣಿಯ ಹತ್ಯೆ ನಡೆಸುವ ಹಾಗಿಲ್ಲ. ದನ, ಎತ್ತು ಹಾಗೂ ಕೋಣವನ್ನು ಹತ್ಯೆಗೈಯ್ಯುವ ಹಾಗಿಲ್ಲ. ಆದರೆ ಇತರ ಪ್ರಾಣಿಗಳ ಮಾಂಸದ ಮೇಲೆ ನಿಷೇಧವಿಲ್ಲ’’ ಎಂದು ರಾಜ್ಯದ ಆಹಾರ ಸುರಕ್ಷತಾ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.