ಭ್ರಷ್ಟಾಚಾರ ನಿರ್ಮೂಲನ: ಜನರಿಗೆ ಪಂಗನಾಮ!
ಮೋದಿ ಸರಕಾರ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಅದರ ‘ಸ್ವಚ್ಛತೆಯ ಅಭಿಯಾನ’ ಬರೀ ಕಸಕಡ್ಡಿ ಎತ್ತುವುದಕ್ಕಷ್ಟೆ ಸೀಮಿತ ಎಂದಾಗಿದ್ದು ಒಳಗಿನ ಭ್ರ್ರಷ್ಟಾಚಾರದ ಹೊಲಸನ್ನು ಸ್ವಚ್ಛಮಾಡುವ ವಿಷಯದಲ್ಲಿ ಕಿಂಚಿತ್ತಾದರೂ ಧನಾತ್ಮಕ ಬೆಳವಣಿಗೆ ಆಗಿಲ್ಲ. ತದ್ವಿರುದ್ಧವಾಗಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿರುವಂತಿದೆ.
ಹೆಚ್ಚುಕಮ್ಮಿ ಒಂದು ಬಾಳೆಕಾಯಿ ಜನತಂತ್ರದಂತಾಗಿರುವ ನಮ್ಮ ದೇಶದಲ್ಲಿ ಒಂದು ಕಡೆ ಆ ಪಕ್ಷ ಈ ಪಕ್ಷ ಎನ್ನದೆ ಪ್ರಭಾವಶಾಲಿಗಳು ಕೆಲವರು ಇಡೀ ದೇಶವನ್ನೆ ಕೊಳ್ಳೆ ಹೊಡೆಯುತ್ತಾ ಕಾನೂನಿನ ಕುಣಿಕೆಯಿಂದ ಪಾರಾಗುತ್ತಾ ಹಲವು ತಲೆಮಾರುಗಳಿಗೆ ಸಾಕಾಗುವಷ್ಟು ಸಂಪತ್ತನ್ನು ಕೂಡಿಹಾಕುತ್ತಿದ್ದರೆ ಇನ್ನೊಂದು ಕಡೆ ಬಡವರು ಇನ್ನಷ್ಟು ದರಿದ್ರರಾಗುತ್ತಿದ್ದಾರೆ. ಇದರಿಂದ ಮತ್ತು ಇಲ್ಲಿನ ಅನಿಯಂತ್ರಿತ ಭ್ರಷ್ಟಾಚಾರದಿಂದ ಕಂಗೆಟ್ಟು ರೋಷತಪ್ತರಾಗಿರುವ ಜನಸಾಮಾನ್ಯರಿಗೆ ಅಹಿಂಸಾತ್ಮಕ ರೀತಿಯಲ್ಲಿ ವ್ಯವಸ್ಥೆಯ ಮೇಲೆ ಸೇಡು ತೀರಿಸಿಕೊಳ್ಳಲು ಇರುವ ಏಕೈಕ ಅವಕಾಶವೆಂದರೆ ಚುನಾವಣೆಗಳು. ಇದನ್ನು ಗಮನಿಸಿರುವ ರಾಜಕೀಯ ಪಕ್ಷಗಳು ಇತ್ತೀಚಿನ ಕೆಲವು ವರ್ಷಗಳಿಂದ ಭ್ರಷ್ಟಾಚಾರದ ವಿಷಯವನ್ನೇ ತಮ್ಮ ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರವಾಗಿ ಮಾಡಿಕೊಂಡಿವೆ.
2014ರ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ ಅಭೂತಪೂರ್ವ ಯಶಸ್ಸಿನ ಗುಟ್ಟೂ ಇದೇ ಆಗಿದೆ. ಅದು ಕೈಗೊಂಡ ರಾಷ್ಟ್ರವ್ಯಾಪಿ ಪ್ರಚಾರಾಂದೋಳನದಲ್ಲಿ ಕಳೆದ 70 ವರ್ಷಗಳ ಕಾಲ ದೇಶವನ್ನಾಳಿದವರ ಭ್ರಷ್ಟಾಚಾರವನ್ನು ಖಂಡಿಸಲಾಯಿತು. ‘‘ಭ್ರಷ್ಟಾಚಾರ ದೇಶದ್ರೋಹಕ್ಕೆ ಸಮಾನ’’ ಎನ್ನಲಾಯಿತು. ‘‘ನಾವು ಸ್ವಚ್ಛ ಆಡಳಿತ ನೀಡುವೆವು, ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬನಿಗೂ ರೂ. 15 ಲಕ್ಷ ಹಂಚುವೆವು’’ ಎಂದು ಪುಂಗಿ ಊದಲಾಯಿತು. ‘‘ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಇರಬೇಕು’’ ಎಂಬ ದೊಡ್ಡ ದೊಡ್ಡ ಮಾತುಗಳನ್ನು ತೇಲಿಬಿಡಲಾಯಿತು. ಈಗಲೂ ಹೊರಬೀಳುತ್ತಲೇ ಇರುವ ಇಂತಹ ಬೂಟಾಟಿಕೆಯ ಘೋಷಣೆಗಳ ಇತ್ತೀಚಿನ ಸ್ಯಾಂಪಲ್‌ಗಳು ಹೀಗಿವೆ: ‘‘ಪ್ರಾಮಾಣಿಕತೆಯ ಯುಗ ಪ್ರಾರಂಭವಾಗಿದೆ, ಬಡವರನ್ನು ದೋಚಿದವರು ಅದನ್ನೆಲ್ಲ ಅವರಿಗೆ ಮರಳಿಸಲೇಬೇಕಾಗುತ್ತದೆ.’’ ಆದರೆ ಬರಬರುತ್ತಾ ಇವರ ನಡೆ, ನುಡಿಗಳ ನಡುವಣ ಅಗಾಧ ವ್ಯತ್ಯಾಸಗಳು ಒಂದೊಂದಾಗಿ ಬಯಲಾಗತೊಡಗಿವೆ.
2014ರ ನಂತರ ಭ್ರಷ್ಟಾಚಾರ ಕಡಿಮೆಯಾಗಿದೆಯೇ ಎಂದು ನೋಡಹೊರಟವರಿಗೆ ನಿರಾಸೆ ಕಾದಿದೆ. ಸರಕಾರಿ ಕಚೇರಿಗಳಿಗೆ ಎಡತಾಕುವ ಶ್ರೀಸಾಮಾನ್ಯನನ್ನು ಕೇಳಿದರೆ ಸಾಕು ಲಂಚಾವತಾರ ಯಥಾರೀತಿಯಾಗಿ ಮುಂದುವರಿದಿರುವ ಅಸಲಿಯತ್ತು ತಿಳಿಯುತ್ತದೆ. ಇನ್ನು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಕಾರ್ಪೊರೇಟು ವಲಯ ಮೊದಲಾದೆಡೆಗಳಲ್ಲಿಯೂ ಭ್ರಷ್ಟಾಚಾರ ಇಳಿಕೆಯಾಗಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಭ್ರಷ್ಟಾಚಾರ ಅಂದರೆ ಕೇವಲ ದುಡ್ಡಿಗೆ ಸೀಮಿತವಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ಹೀಗೆ ನೋಡಿದಾಗ 2002ರ ಗುಜರಾತ್ ನರಮೇಧದ ಆರೋಪಿಗಳಿಗೆ, ನಕಲಿ ಎನ್‌ಕೌಂಟರ್ ಆರೋಪದಲ್ಲಿ ಜೈಲುಪಾಲಾಗಿದ್ದ ಪೊಲೀಸ್ ಅಧಿಕಾರಿಗಳಿಗೆ ಜಾಮೀನು ದೊರೆಯುವುದು ಭ್ರಷ್ಟಾಚಾರ ಅಲ್ಲವೇ? ಅವರಲ್ಲಿ ಕೆಲವರಿಗೆ ಹಳೆ ಹುದ್ದೆಗಳು ಸಿಕ್ಕರೆ ಇನ್ನಿತರರಿಗೆ ಮೇಲ್ಭ್ಬಡ್ತಿ ದೊರಕುವುದು; ಸ್ವಾಮಿ ಅಸೀಮಾನಂದ, ಸಾಧ್ವಿ ಪ್ರಜ್ಞಾರಂಥವರು ಇದ್ದಕ್ಕಿದ್ದಂತೆ ನಿರ್ದೋಷಿಗಳೆಂದಾಗುವುದು; ಅಮಿತ್ ಶಾರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವುದು ಭ್ರಷ್ಟಾಚಾರ ಅಲ್ಲವೇ? ವಾಸ್ತವದಲ್ಲಿ ಮೋದಿ ಸರಕಾರ ಜನರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಅದರ ‘ಸ್ವಚ್ಛತೆಯ ಅಭಿಯಾನ’ ಬರೀ ಕಸಕಡ್ಡಿ ಎತ್ತುವುದಕ್ಕಷ್ಟೆ ಸೀಮಿತ ಎಂದಾಗಿದ್ದು ಒಳಗಿನ ಭ್ರ್ರಷ್ಟಾಚಾರದ ಹೊಲಸನ್ನು ಸ್ವಚ್ಛಮಾಡುವ ವಿಷಯದಲ್ಲಿ ಕಿಂಚಿತ್ತಾದರೂ ಧನಾತ್ಮಕ ಬೆಳವಣಿಗೆ ಆಗಿಲ್ಲ. ತದ್ವಿರುದ್ಧವಾಗಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿರುವಂತಿದೆ.
ಮೋದಿ ಸರಕಾರ ಇಂದು ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ಮತ್ತು ಆ ಮೂಲಕ ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಲು ಹೊರಟಿದೆ. ಇದಕ್ಕೆ ಸಾಕ್ಷಿಯಾಗಿ 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಮತ್ತು ನಗದು ವಹಿವಾಟಿಗೆ ಮಿತಿ ಹೇರಿರುವುದನ್ನು ಹೆಸರಿಸಬಹುದು. ಇದರ ಜತೆ ಆದಾಯ ತೆರಿಗೆ ಇಲಾಖೆಗೆ ನೀಡಲಾಗಿರುವಂತಹ ಅನಿಯಂತ್ರಿತ ಅಧಿಕಾರವು ಹುಟ್ಟುಹಾಕಲಿರುವ ತೆರಿಗೆ ಭಯೋತ್ಪಾದನೆಯೂ ಭ್ರಷ್ಟಾಚಾರಕ್ಕೆ ಇಂಬುಗೊಡಲಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ
1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದ್ದು ಅದರಂತೆ ಸರಕಾರಿ ನೌಕರರ ವಿರುದ್ಧ ಕಾನೂನುಕ್ರಮ ಜರಗಿಸುವ ಮುನ್ನ ಸರಕಾರದ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯ ಎಂದಾಗಲಿದೆ. ಆದರೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವಾಗ ಅಥವಾ ಸ್ವೀಕರಿಸಲು ಯತ್ನಿಸುತ್ತಿರುವಾಗ ಸಿಕ್ಕಿಬಿದ್ದ ಸಂದರ್ಭಗಳಲ್ಲಿ ಇಂತಹ ಪೂರ್ವಾನುಮತಿಯ ಅಗತ್ಯ ಇರುವುದಿಲ್ಲ. ತಿದ್ದುಪಡಿಗಳನ್ನು ಮಾಡಿರುವುದರ ಹಿಂದೆ ಎರಡು ಉದ್ದೇಶಗಳಿವೆ ಎಂದು ಮೋದಿ ಸರಕಾರ ಹೇಳುತ್ತಿದೆ. ಒಂದು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವುದು. ಎರಡು, ಅವರನ್ನು ಭಯಮುಕ್ತಗೊಳಿಸಿ, ಅವರಲ್ಲಿ ಧೈರ್ಯ ತುಂಬಿ, ಅವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಮಾಡುವುದು. ಆದರೆ ಈ ವಾದದಲ್ಲಿ ಯಾವುದೇ ಹುರುಳಿಲ್ಲ.
ನಿಜವಾಗಿ ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೂಲ ಕಾಯ್ದೆಯೇ ಅತ್ಯುತ್ತಮ ಅಸ್ತ್ರ ಎನ್ನುವುದು ಅನುಭವದಿಂದ ಸಿದ್ಧವಾಗಿದೆ. ಇವತ್ತು ಬೋಫೋರ್ಸ್, 2ಜಿ ತರಂಗಗುಚ್ಛ, ಕಲ್ಲಿದ್ದಲು ಗಣಿಗಾರಿಕೆ ಮೊದಲಾದವುಗಳಿಗೆ ಸಂಬಂಧಿಸಿದ ಹಗರಣಗಳು ಬೆಳಕಿಗೆ ಬಂದು ತಪ್ಪಿತಸ್ಥ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕಾನೂನುಕ್ರಮ ಜರಗಿಸಲು ಸಾಧ್ಯವಾಗಿದೆ ಎಂದಾದರೆ ಅದಕ್ಕೆ ಮೂಲ ಕಾಯ್ದೆಯೆ ಕಾರಣ. ಮೇಲ್ಕಂಡ ಹಗರಣಗಳು ಬಯಲಾಗುತ್ತಿದ್ದಂತೆ ಅಂದಿನ ಯುಪಿಎ ಸರಕಾರ ಕಾಯ್ದೆಯನ್ನು ಬದಲಾಯಿಸಲು ಹೊರಟಿತು.