ಹಿಂದೂ ಧರ್ಮಕ್ಕೆ ನೋಟಿಸ್

Update: 2017-04-20 18:54 GMT


ವರಾಡ್‌ನ ಜಲ್‌ಗಾಂವ್ ಮತ್ತದರ ಸುತ್ತುಮುತ್ತಣ ಹಳ್ಳಿಗಳಲ್ಲಿನ ಐದು ಸಾವಿರ ಮಹಾರ್ ಜನರ ಕಡೆಯಿಂದ, ‘‘ಹಿಂದೂ ಧರ್ಮಕ್ಕೆ ತೆರೆದ ಆಹ್ವಾನ’’ ಎಂಬ ಶೀರ್ಷಿಕೆಯಡಿಯಲ್ಲಿ ಹೊರ ಬಂದು ಪ್ರಸಿದ್ಧವಾದ ಮಜಕೂರಿನತ್ತ ಹಿಂದೂಧರ್ಮೀಯರೆಂದೂ, ಶ್ರೇಷ್ಠ ವರ್ಣೀಯರೆಂದೂ ಕರೆದು ಕೊಳ್ಳುವ ಜನರ ಲಕ್ಷ ಸರಿದೀತೆಂದು ನಮ್ಮ ಆಶೆ. ಹಿಂದೂ ಸಮಾಜದಲ್ಲಿನ ಜಾತಿಭೇದಕ್ಕೆ, ಉಚ್ಚ- ನೀಚ ಎಂಬ ವರ್ಗಭೇದಕ್ಕೆ, ಸ್ಪಶ್ಯಾಸ್ಪಶ್ಯ ನಿರ್ಬಂಧಕ್ಕೆ, ಉಚ್ಚವರ್ಣೀಯರೆಂದು ಕರೆದುಕೊಳ್ಳುವವರು ಗೈವ ಅನ್ಯಾಯ, ದಬ್ಬಾಳಿಕೆಗೆ, ಪದೇ ಪದೇ ಕಾಡುವ ವಿಷಮತೆಗೆ ಬೇಸತ್ತು, ಈ ವರೆಗೆ, ಲಕ್ಷಾನುಲಕ್ಷ ಜನರು ಹಿಂದೂಧರ್ಮವನ್ನು ತ್ಯಜಿಸಿ, ಪರಧರ್ಮವನ್ನು ಅಂಗೀಕರಿಸಿದ್ದಾರೆ.

ಯಾವ ಮಟ್ಟದಲ್ಲಿ ಬಹುಜನ ಸಮಾಜದಲ್ಲಿ ಶಿಕ್ಷಣ ಪ್ರಗತಿಯಾಗುತ್ತದೋ, ವೈಚಾರಿಕ ಪ್ರವೃತ್ತಿ ಹೆಚ್ಚುವುದೋ, ಸ್ವಾಭಿಮಾನ ಜಾಗೃತವಾಗುವುದೋ, ಆ ಮಟ್ಟದಲ್ಲಿ ಅನ್ಯಾಯ ಮತ್ತು ವಿಷಮತೆಯ ಮೇಲೆ ಎದ್ದು ನಿಂತಿರುವ ಸಮಾಜರಚನೆಯ ಸಂಬಂಧ ಅಸಮಾಧಾನ ಹೆಚ್ಚಬೇಕು, ಅನ್ಯಾಯದ ಬಗೆಗೆ ಸಿಟ್ಟಾಗಬೇಕು, ವಿಷಮತೆಯಿಂದ ಸಂತಾಪ ಉತ್ಪನ್ನವಾಗಬೇಕು. ಯಾವ ಧರ್ಮ ಮತ್ತು ಸಮಾಜ ತನ್ನ ಮನುಷ್ಯತ್ವದ ಹಕ್ಕನ್ನು ಕಾಲಕೆಳಗೆ ತುಳಿಯುತ್ತದೋ, ಯಾವುದು ತನ್ನ ಮನುಷ್ಯತ್ವವನ್ನು ತೊಡೆದು ಹಾಕಲು ನೋಡುತ್ತದೋ, ಆಧರ್ಮ ಮತ್ತು ಸಮಾಜವನ್ನು ಧಿಕ್ಕರಿಸಬೇಕೆನ್ನುವುದು ನಿಜಕ್ಕೂ ಸ್ವಾಭಾವಿಕ.

ಒಂದು ವೇಳೆ, ಅನ್ಯಾಯವು ಶತಕಗಳಿಂದಲೂ ನಡೆಯುತ್ತಾ ಬಂದಿದ್ದರೂ, ಅಧಿಕಾರಶಾಹಿಯಲ್ಲಿ ಅದು ಕೆತ್ತಲ್ಪಟ್ಟಿದ್ದರೂ, ಜನರ ಅಜ್ಞಾನದಿಂದಾಗಿ ಹಾಗೂ ಧಾರ್ಮಿಕತೆಯ ಕಪಟ ಸೋಗಿನಿಂದಾಗಿ ಶತಕಗಳಿಂದಲೂ ಪ್ರತೀಕಾರ ಸಲ್ಲದಿರುವುದೂ ಅನ್ಯಾಯವೇ. ಆ ಅನ್ಯಾಯಕ್ಕೆ ಧರ್ಮದ ಬೇಗಡೆ ಹಚ್ಚಿದ ಮಾತ್ರಕ್ಕೆ ಅದು ನ್ಯಾಯ ಆಗುವುದೆಂದೇನೂ ಇಲ್ಲ ಮತ್ತು ಎಲ್ಲಿ ಮನುಷ್ಯತ್ವದ ಹಕ್ಕಿನ ಪ್ರಶ್ನೆಯಿದೆಯೋ, ಅಲ್ಲಿ ಪ್ರಸಕ್ತ ವಹಿವಾಟಿನ ಪ್ರಶ್ನೆಯನ್ನು ಮುಂದಿಟ್ಟು, ಇಲ್ಲವೇ ಕಾಲಮಿತಿಯ ಕಾಯ್ದೆಯತ್ತ ಬೊಟ್ಟು ಮಾಡಿ ಅನ್ಯಾಯದ ಸಮರ್ಥನೆ ಮಾಡುವುದೆಂದರೆ ಮನುಷ್ಯತ್ವದ ಪ್ರವಿತ್ರ ಹಕ್ಕಿನ ಬಗ್ಗೆ ನಮ್ಮ ಅಜ್ಞಾನವನ್ನು ತೋರಿದಂತೆ. ಯಾವ ವರ್ಗವನ್ನು ಹಿಂದೂ ಸಮಾಜವು ಇದುವರೆಗೆ ತುಳಿದು, ದಬ್ಬಾಳಿಕೆಯ ಹೊರೆಯಡಿ ದಮನಿಸಿ ಮನುಷ್ಯತ್ವದ ಹಕ್ಕನ್ನೇ ನಷ್ಟಗೊಳಿಸಿತೋ, ಯಾವ ವರ್ಗದ ಭೌತಿಕ ಮತ್ತು ಮಾನಸಿಕ ಅವನತಿಗೆ ಕಾರಣವಾಯಿತೋ, ಆ ಬಹಿಷ್ಕೃತ ವರ್ಗದ ಮೇಲೆ ಹಿಂದೂ ಸಮಾಜಕ್ಕೆ ಯಾವುದೇ ಹಕ್ಕು ಇಲ್ಲ.

ಬಹಿಷ್ಕೃತ ವರ್ಗದ ಜನರು ಈಗಲೂ ಹಿಂದೂಧರ್ಮಕ್ಕೆ ಅಂಟಿಕೊಂಡಿದ್ದರೆ ಅದು ಹಿಂದೂ ಸಮಾಜದ ಬಗ್ಗೆ ಅವರಲ್ಲಿ ಆತ್ಮೀಯತೆ ಇದೆ ಎಂದೇನೂ ಅಲ್ಲ. ಆ ಆತ್ಮೀಯತೆ ಯಾಕೆ ಅನಿಸಬೇಕು? ಕುರಿಮರಿಗೆ ತೋಳನ ಬಗ್ಗೆ ಆತ್ಮೀಯತೆ ಹುಟ್ಟುವುದು ಎಂದಾದರೂ ಸಾಧ್ಯವೇ? ಹಿಂದೂ ಸಮಾಜದ ಬಗೆಗಲ್ಲ, ಹಿಂದೂಧರ್ಮದ ಬಗ್ಗೆ ಅವರಿಗೆ ಆತ್ಮೀಯತೆ ಇನ್ನೂ ಇದೆ ಎಂಬುದು ನಿಜ. ಅದಕ್ಕೆ ಕಾರಣವಿಷ್ಟೇ; ಅದು ಅವರ ಪೂರ್ವಜರ ಧರ್ಮ; ಆ ಧರ್ಮದಲ್ಲೇ ಅವರು ಬೆಳೆದು ದೊಡ್ಡವರಾದವರು. ಆದರೆ, ಇದಿಷ್ಟೇ ಕಾರಣ ಅವರನ್ನು ಹಿಂದೂ ಧರ್ಮದಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಲು ಸಾಕಾಗಲಾರದು. ಧರ್ಮ ಬೇರೆ, ಸಮಾಜ ಬೇರೆ. ಧರ್ಮದ ನಿಯಮಗಳು ಸಮಾಜದಲ್ಲಿ ನಡೆಯುವುದಿಲ್ಲ. ಸಾಮಾಜಿಕ ನಿರ್ಬಂಧ ಧಾರ್ಮಿಕ ವಿಷಯದಲ್ಲಿ ಅಡ್ಡ ಬರುವುದಿಲ್ಲ ಎಂದೇನೂ ಇಲ್ಲ.

ಹಿಂದೂಧರ್ಮ ಹಾಗೂ ಹಿಂದೂ ಸಮಾಜದಲ್ಲಿ ಪರಸ್ಪರ ತುಂಬ ನಿಕಟ ಸಂಬಂಧವಿದೆಯಷ್ಟೇ ಅಲ್ಲ, ಅವು ಒಂದೇ ಜೀವದಂತಿವೆ. ಇತರ ಧರ್ಮಗಳು ಸಾಮಾಜಿಕ ವಿಷಯಗಳಲ್ಲಿ ಹೀಗೆ ಮಧ್ಯ ಪ್ರವೇಶಿಸುವುದಿಲ್ಲ. ಆದರೆ, ಸಾಮಾಜಿಕ ವಿಷಯಗಳಲ್ಲಿ ಬಾಯಿ ಹಾಕುವುದು, ಸಾಮಾಜಿಕ ಆಚಾರ ವಿಚಾರಗಳನ್ನು ನಿಯಂತ್ರಿಸಲೆತ್ನಿಸುವುದು ಹಿಂದೂ ಧರ್ಮದ ವಿಶೇಷ. ತಿನ್ನುವುದೇನು, ಕುಡಿಯುವುದೇನು, ಏಳುವುದು ಹೇಗೆ, ಕೂರುವುದು ಹೇಗೆ, ಮಲಗಿಸುವುದು ಹೇಗೆ ಎಂಬಂತಹ ವಿಷಯಗಳಲ್ಲೂ ಧರ್ಮದ ನಿಯಂತ್ರಣವಿರುತ್ತದೆ.

ಹಿಂದೂ ಧರ್ಮದಂತೆ ಇತರ ಯಾವ ಧರ್ಮದಲ್ಲೂ ಇಷ್ಟೊಂದು ಸಾಮಾಜಿಕ ನಿರ್ಬಂಧಗಳಿಲ್ಲ. ಜಾತಿಭೇದವು ಹಿಂದೂಧರ್ಮದಲ್ಲಿ ಬೇರೊಂದೇ ವಿಧ!
ಇಂತಹ ವೈಚಿತ್ರ ಬೇರಾವುದೇ ಧರ್ಮದಲ್ಲಿ ಕಾಣಸಿಗುವುದಿಲ್ಲ. ಜಾತಿಭೇದದಲ್ಲೂ ಅಸ್ಪಶ್ಯತೆಯೆಂಬುದನ್ನು ಈ ಜಗತ್ತಿನಲ್ಲಿ ಬೇರೆಲ್ಲೂ ಕಾಣುವಂತಿಲ್ಲ. ಸಾಮಾಜಿಕ ಭೇದ ಇತರೆಡೆ ಇರುತ್ತದೆ; ಅಸ್ಪಶ್ಯತೆಗೆ ಪರ್ಯಾಯವಾಗಿರುವಂತಹದೂ ಇತರೆಡೆ ಕಂಡುಬರುತ್ತದೆ; ಆದರೆ ಹಿಂದೂಸಮಾಜದಲ್ಲಿ ಆ ಭೇದದ ಮೇಲೆ ಹಾಗೂ ಅಸ್ಪಶ್ಯತೆಯ ಮೇಲೆ ಧರ್ಮದ ಮೊಹರೊತ್ತಲಾಗಿದೆ. ಹಾಗೆಂದೇ ಹಿಂದೂ ಸಮಾಜದಲ್ಲಿ ಧಾರ್ಮಿಕ ಸುಧಾರಣೆಯಾಗದೆ ಸಾಮಾಜಿಕ ಸುಧಾರಣೆ ಆಗುವಂತಿಲ್ಲ. ಹಿಂದೂ ಸಮಾಜಕ್ಕೆ ನೋಟಿಸ್ ಅಂದರೆ, ಹಿಂದೂ ಧರ್ಮಕ್ಕೇ ನೋಟಿಸ್ ಕೊಟ್ಟಂತೆ. ಈಗ ಅಸ್ಪಶ್ಯರೆನಿಸಿಕೊಳ್ಳುವ ವರ್ಗದ ಜನರು ಹಿಂದೂ ಸಮಾಜದಲ್ಲೇ ಇರಬೇಕೋ, ಹಿಂದೂ ಸಮಾಜದಿಂದ ಹೊರಗೆ ಹೋಗಿ, ತಮ್ಮ ಜೀವನೋಪಾಯ ನೋಡಿಕೊಳ್ಳಬೇಕೋ ಎಂಬ ನಿರ್ಧಾರ, ಹಿಂದೂ ಧರ್ಮದ ಸುಧಾರಣೆಯನ್ನು ಇಷ್ಟವೆನಿಸುವ ದಿಕ್ಕಿನಲ್ಲಿ ಒಯ್ಯುವುದರ ಮೇಲೆ ಅವಲಂಬಿತವಿದೆ.

ಹಾಗೆ ಸುಧಾರಣೆಗೈಯುವುದು ಬಹಿಷ್ಕೃತ ವರ್ಗದ ಕೈಯಲ್ಲಿಲ್ಲ. ಸ್ವತಃ ಉಚ್ಚ ವರ್ಣೀಯರೆಂದು ಕರೆದುಕೊಳ್ಳುವವರು ಮನಸ್ಸು ಮಾಡಿದರಷ್ಟೇ ಇದು ಸಾಧ್ಯ. ಆದರೆ ತಮ್ಮ ಕೃತ್ರಿಮ ಶ್ರೇಷ್ಠತ್ವವನ್ನು ತೊರೆದುದಲ್ಲದೆ, ಅವರ ಕೈಯಿಂದ ಈ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆ ಆಗುವುದು ಶಕ್ಯವಿಲ್ಲ. ಉಚ್ಚ ವರ್ಣೀಯರೆಂದು ಕರೆದುಕೊಳ್ಳುವವರು ತಮ್ಮ ಪಾರಂಪರ್ಯವನ್ನು ಶಾಶ್ವತವಾಗಿರಿಸಿಕೊಂಡಿರುವುದರಿದಲೇ ಹಿಂದೂ ಸಮಾಜದಲ್ಲಿ ಜಾತಿಜಾತಿಗಳೊಳಗೆ ಕಚ್ಚಾಟ ನಡೆದಿದೆ ಹಾಗೂ ಅಸ್ಪಶ್ಯತೆಯ ದಂಗೆ ನಿಲ್ಲುತ್ತಿಲ್ಲ. ಬಹಿಷ್ಕೃತ ವರ್ಗದ ಜನರು ಮತಾಂತರದ ಪ್ರಶ್ನೆ ಎತ್ತಿದರೆಂದರೆ ಹಿಂದೂ ಧರ್ಮದ ತತ್ವಜ್ಞಾನವನ್ನು ಪಾಶ್ಚಾತ್ಯ ದೇಶದ ಜನರೂ ಒಪ್ಪಿಕೊಳ್ಳುವುದಿಲ್ಲ. ಇಂತಹ ಪ್ರಾಚೀನ, ಶ್ರೇಷ್ಠ ಧರ್ಮವನ್ನು ಬಿಡಬೇಡಿರೆಂದು ಸ್ಪಶ್ಯ ಹಿಂದೂಗಳು ಉಪದೇಶಿಸುತ್ತಾರೆ. ಆದರೆ ತತ್ವಜ್ಞಾನವೇನು ಸವಿದು ಮೆಲ್ಲುವಂತಹುದೇ? ವ್ಯಾಕರಣದಿಂದ ಹಸಿವು ಇಂಗುವುದಿಲ್ಲ, ಕಾವ್ಯರಸದಿಂದ ನೀರಡಿಕೆ ತಣಿಯುವುದಿಲ್ಲ ಎಂಬರ್ಥದ ಸಂಸ್ಕೃತ ಭಾಷೆಯ ನುಡಿಗಟ್ಟು, ಧರ್ಮದ ತತ್ವಜ್ಞಾನಕ್ಕೂ ಅನ್ವಯಿಸುತ್ತದೆ.

ಧರ್ಮದ ವ್ಯಾಖ್ಯೆಯಾದರೂ ಏನು? ‘‘ಯತೋಭ್ಯುದಯಾನಿ ಶ್ರೇಯಸ್‌ಸಿದ್ಧಿ ಸಧರ್ಮಃ’’
ಅಂದರೆ, ಯಾವ ಯೋಗದಿಂದ ಅಭ್ಯುದಯ, ಅಂದರೆ ಐಹಿಕ ಉತ್ಕರ್ಷವೂ, ಮೋಕ್ಷಪ್ರಾಪ್ತಿಯೂ ಆಗುವುದೋ, ಅದೇ ಧರ್ಮ. ಅಂದರೆ, ಐಹಿಕ ಉತ್ಕರ್ಷ ಮೊದಲು, ನಂತರ ಮೋಕ್ಷವೆಂಬುದೇ ಕ್ರಮ. ಬಹಿಷ್ಕೃತ ವರ್ಗದ ಮೇಲೆ ಎಂತಹ ಸಾಮಾಜಿಕ ನಿರ್ಬಂಧ ಹೇರಲ್ಪಟ್ಟಿದೆಯೆಂದರೆ, ಆ ವರ್ಗದ ಜನರು ತಮ್ಮ ಮುಖ ಎತ್ತಿ ನಿಲ್ಲಬಾರದು, ತಮ್ಮ ಬುದ್ಧಿಮತ್ತೆಯನ್ನು ಉಪಯೋಗಿಸುವ ಯೋಗ್ಯತೆ ಅವರಿಗಿದೆಯೆಂದು ತೋರುವ ಅವಕಾಶವೇ ಅವರಿಗೆ ಸಿಗಲಾರದು, ಇದೇ ಅಸ್ಪಶ್ಯತೆಯ ಅರ್ಥ. ಉತ್ಕರ್ಷವಂತೂ ಬದಿಗಿರಲಿ, ಆದರೆ ಸುಲಭ ಸಾಧ್ಯ ಸವಲತ್ತೂ ಅಸ್ಪಶ್ಯತೆಯ ಕಾರಣ ಸಿಗುವಂತಿಲ್ಲ. ಅದಕ್ಕಾಗಿ ಅಸ್ಪಶ್ಯರು ನಾನಾ ವಿಧದ ವಿಪತ್ತು, ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ ಪಾರಮಾರ್ಥಿಕ ಮುಕ್ತಿ ಹಾಗೂ ಮೋಕ್ಷ ಪ್ರಾಪ್ತವಾಗುವ ದಾರಿ ತೆರೆದಿದೆಯೇ? ಮೋಕ್ಷವೆಂಬುದು ಹೇಗಿದೆ? ಈ ಜಗತ್ತಿನಲ್ಲಿ ಮೋಕ್ಷಕ್ಕಾಗಿ ಮುಗಿಬಿದ್ದು, ಐಹಿಕ ಉತ್ಕರ್ಷವನ್ನು ಬೇಡವೆಂದು ಒದೆಯುವವರು ಎಲ್ಲೋ ಒಬ್ಬಿಬ್ಬರಿರಬಹುದು. ಉಳಿದವರೆಲ್ಲರ ಐಹಿಕ ಉತ್ಕರ್ಷ, ಐಹಿಕ ಸುಖದ ಅರಸುವಿಕೆ ಸಾಗಿರುತ್ತದೆ. ಹಿಂದೂ ಧರ್ಮವು ಕೇವಲ ಮೋಕ್ಷ ಸಾಧನೆಗಾಗಿಯೇ ಇದೆ, ಹಿಂದೂ ಸಮಾಜದಲ್ಲಿ ಯಾರೂ ಸುಖದ ಅಪೇಕ್ಷೆ ಮಾಡಬೇಕಿಲ್ಲ ಎಂದು ಕೊಂಡರೂ, ಧರ್ಮಾಭಿಮಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿವ, ಅಸ್ಪಶ್ಯತೆಯನ್ನು ಸಮರ್ಥಿಸುತ್ತಾ, ಸ್ವಧರ್ಮದಲ್ಲೇ ಉಳಿಯರೆಂದು ಬಹಿಷ್ಕೃತ ವರ್ಗಕ್ಕೆ ದೊಡ್ಡದಾಗಿ ಉಪದೇಶಿಸುವ ಉಚ್ಚವರ್ಣೀಯರೆನ್ನುವವರ ಪೈಕಿ, ಒಂದು ದೊಡ್ಡ ಇಸಮ್ ಹಿಂದೂ ಧರ್ಮದಲ್ಲಿ ಉಳಿಯುತ್ತಿಲ್ಲವೆಂದು ನಾವು ಖಂಡಿತವಾಗಿ ಹೇಳುತ್ತೇವೆ.

ಧರ್ಮಾಭಿಮಾನದ ವೇದಾಂತವು, ಪರದುಃಖವು ಶೀತಲವೆಂಬ ನ್ಯಾಯದಂತೆ ಇದೆ. ಉಚ್ಚವರ್ಣೀಯರೆನ್ನುವವರು ವಿದೇಶಕ್ಕೆ ಹೋಗಿ ಗೋಮಾಂಸ ತಿಂದು ಬಂದರೆ ಜಾತಿಬಾಂಧವರು ಸಿಟ್ಟಾಗುವರು. ವ್ಯಕ್ತಿಯೊಬ್ಬ ವಿದೇಶ್ಕೆ ಹೋಗಿ ಹಿಂದಿರುಗಿದನೆಂದರೆ ಅವನು ಅಭಕ್ಷವನ್ನು ಭುಜಿಸಿ, ಅಪೇಯವನ್ನು ಕುಡಿವಂಥವನಾಗಿದ್ದಾನೋ, ಇಲ್ಲವೋ, ಎಂಬುದನ್ನು ಚರ್ಚಿಸದೆ, ಅದು ಖಂಡಿತವಿದ್ದರೂ ಒಂದೋ ಆತನಿಗೆ ಜಾತೀಯರಿಂದ ನಿರೋಪ ಹೊರಡಿಸಬಹುದು, ಇಲ್ಲವೇ, ಆತನನ್ನು ಸ್ವಾಗತಿಸಬಹುದು. ಅಸ್ಪಶ್ಯನೊಬ್ಬ ಕ್ರೈಸ್ತನೋ, ಮುಸಲ್ಮಾನನೋ ಆಗಿದ್ದರೆ, ಅವನನ್ನು ಅಪವಿತ್ರನೆಂದು ಗಣಿಸದೆಯೇ ಸಮಾಜದೊಳಗೆ ಕರಕೊಳ್ಳಬಹುದು, ಆದರೆ, ಹಿಂದೂ ಧರ್ಮದಲ್ಲಿದ್ದೇ ಅಸ್ಪಶ್ಯರ ಅಸ್ಪಶ್ಯತೆಯನ್ನು ಇಲ್ಲವಾಗಿಸೋಣವೆಂದರೆ, ಸ್ಮತಿ, ಪುರಾಣಗಳಲ್ಲಿನ ಶಾಸ್ತ್ರಾಧಾರ, ಕಪಟ, ಮೋಸ ಎಲ್ಲ ಮುಂದೆ ಬರುತ್ತದೆ. ಬ್ರಾಹ್ಮಣರಾದಿಯಾಗಿ ಉಚ್ಚ ವರ್ಗದವರೆನ್ನುವವರು ಸ್ಮತಿಗ್ರಂಥಗಳನ್ನು, ಶಾಸ್ತ್ರಗಳನ್ನು, ರೂಢಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುತ್ತಾರೆ. ಆದರೆ, ಬಹಿಷ್ಕೃತರಿಗೆ ಮಾತ್ರ ಶಾಸ್ತ್ರ ರೂಢಿಗಳನ್ನು ಮಹತ್ವದ್ದಾಗಿ ಬಿಂಬಿಸಲಾಗುತ್ತದೆ.

ಪ್ರಸ್ತುತ ಕ್ರೈಸ್ತರನ್ನೂ, ವಿಶೇಷವಾಗಿ ಮುಸಲ್ಮಾನರನ್ನೂ ಎತ್ತಿ ಕಟ್ಟುವ ಧೋರಣೆಯಿಂದಾಗಿ, ಉಚ್ಚವರ್ಣೀಯರೆನ್ನುವವರಿಗೆ ಹಿಂದೂಗಳ ಸಂಖ್ಯಾಬಲ ಕಡಿಮೆ ಆಗುತ್ತಿದೆಯೆಂಬ ಅರಿವಿದ್ದು, ಹಾಗಾಗಬಾರದೆಂದು ಸಂಘಟನೆ ಮತ್ತು ಶುದ್ಧಿ ಎಂಬ ಚಳವಳಿಯನ್ನು ಆರಂಭಿಸಿದ್ದಾರೆ. ಆದರೆ ಪ್ರಸ್ತುತ ಸಂಘಟನೆ ಮತ್ತು ಶುದ್ಧಿ ಎಂಬ ಚಳವಳಿ ಸಂಭಾವಿತ ಲಫಂಗತನವಷ್ಟೇ. ಮಾನವ ಹಕ್ಕುಗಳ ಪವಿತ್ರತೆಯ ಭಾವನೆ ಎಲ್ಲಿ ಇಲ್ಲವೋ, ಎಲ್ಲಿ ಅನ್ಯಾಯ ಮತ್ತು ಸ್ವಾರ್ಥದ ಬಗ್ಗೆ ಸಂತಾಪವಿಲ್ಲವೋ, ಎಲ್ಲಿ ಸಮತೆಯ ಬಗ್ಗೆ ಶ್ರದ್ಧೆಯಿಲ್ಲವೋ, ಅಂಥಲ್ಲಿ ಸಂಘಟನೆ ಮತ್ತು ಶುದ್ಧಿ ಕೇವಲ ನಾಟಕವಷ್ಟೇ. ಈ ನಾಟಕದ ಮೇಲೆ ಬಹಿಷ್ಕೃತ ವರ್ಗಕ್ಕೆ ವಿಶ್ವಾಸವಿಲ್ಲವೆಂದು ಹೇಳಬೇಕಾಗಿಯೇ ಇಲ್ಲ. ವ್ಯಕ್ತವಾಗಿ ವಿರೋಧಿಸಲು ಪುರಾತನವಾದಿಗಳು ಕರೆ ನೀಡಿದರು; ಆದರೆ, ಶುದ್ಧಿ ಸಂಘಟನೆಯವರು ಇದು ಮೋಸವೆಂದು ಇನ್ನೂ ಹೆಚ್ಚು ಭಯಂಕರರಾದರು.

ಬಹಿಷ್ಕೃತರ ಸ್ವಾಭಿಮಾನಪರ ಚಳವಳಿಯನ್ನು ದ್ವೇಷಿಸುವವರು, ನಿಜವಾದ ಸಮಾಜ ಸುಧಾರಣೆ ಮತ್ತು ಉದಾರಮತವಾದವನ್ನು ಕದ್ದು ಮುಚ್ಚಿ ಆಘಾತಿಸುವವರೇ ಈಗ ಸಂಘಟನೆಯ ಮಂಚೂಣಿಯಲ್ಲಿದ್ಧಾರೆ. ಬ್ರಹ್ಮೀಭೂತಸ್ವಾಮಿ ಶ್ರದ್ಧಾನಂದರ ಪವಿತ್ರ ಚಳವಳಿಯನ್ನು ಈ ಕಪಟಿಗಳು ಈಗ ಗೊಂದಲಮಯವಾಗಿಸಿದ್ದಾರೆ. ಪುಕ್ಕಟೆ ಆತ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಲಫಂಗರೇ ಈ ಚಳವಳಿಯಲ್ಲಿ ತುಂಬಿದ್ದಾರೆ. ಹಿಂದೂ ಮುಸ್ಲಿಮರಲ್ಲಿ ಕಲಹ ತಂದು ಹಾಕುವುದು ಈಗೊಂದು ದಂಧೆೆಯೇ ಆಗಿದೆ. ಅಂಥವವರನ್ನು ಒದ್ದು ಹೊರಹಾಕದ ಹೊರತು ಈ ಚಳವಳಿಗೆ ನಿಜವಾದ ಬಲ ಬರುವಂತಿಲ್ಲ. ಈ ನಿರ್ಲಜ್ಜ ಜನರು, ಬಹಿಷ್ಕೃತರು ತಮ್ಮ ಪ್ರಸಕ್ತ ಸ್ಥಿತಿಯಿಂದ ಬೇಸತ್ತು, ಪರಧರ್ಮ ಸ್ವೀಕರಿಸುವ ಮಾತೆತ್ತಿದೊಡನೆ, ಹೋಗಿ, ನೀವು ಖುಶಿಯಿಂದ ಪರಧರ್ಮಕ್ಕೆ ಹೋಗಿ. ನಮಗೆ ನಿಮ್ಮ ಪರಿವೇಯಿಲ್ಲ; ನಿಮ್ಮ ಬೆದರಿಕೆಯನ್ನು ನಾವೇನೂ ಕೇಳಿಸಿಕೊಳ್ಳುವುದಿಲ್ಲ.

ನಿಮಗೆ ಹಿಂದೂ ಸಮಾಜದಲ್ಲಿ ಇರಬೇಕಾದರೆ, ನಾವು ಹೇಳಿದಂತೆ ಇರಬೇಕು ಎನ್ನಲು ಹಿಂಜರಿಯುವವರಲ್ಲ. ಯಾರಿಗಾದರೂ ಬೆದರಿಕೆ ಒಡ್ಡುವುದು ಬಹಿಷ್ಕೃತರ ಇಚ್ಛೆಯಲ್ಲ. ಹಿಂದೂ ಸಮಾಜದಲ್ಲಿರುವುದು ಅಸಹನೀಯವಾದುದರಿಂದಲೇ ಅವರು ಪರಧರ್ಮಕ್ಕೆ ಹೋಗುವುದು ಒಳ್ಳೆಯದೆನ್ನುತ್ತಾರೆ. ಆದರೆ, ಅದು ಅವರ ಬೆದರಿಕೆಯೆಂದು, ಈ ಸ್ವಾರ್ಥಿಗಳು ಮರು ಬೆದರಿಕೆಯೊಡ್ಡುತ್ತಿದ್ದಾರೆ. ಹೀಗೆನ್ನುವ ಧೈರ್ಯ ಅವರಿಗಿರಲು ಕಾರಣ, ಸಾಮಾಜಿಕ ದಬ್ಬಾಳಿಕೆಯಿಂದ ಬಹಿಷ್ಕೃತ ವರ್ಗ ಎಷ್ಟೇ ಬಸವಳಿದಿದ್ದರೂ, ಹಿಂದೂ ಧರ್ಮದ ಮೇಲೆ ಅವರಿಗಿರುವ ಪ್ರೀತಿಯೇ ಅವರು ಮುಂದಕ್ಕೂ ಸಹಿಸುವಂತೆ ಮಾಡುತ್ತದೆಂಬ ನಂಬಿಕೆಯೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News