ಭ್ರಷ್ಟಾಚಾರ ನಿರ್ಮೂಲನ: ಜನರಿಗೆ ಪಂಗನಾಮ!

Update: 2017-04-21 18:54 GMT

ಭ್ರಷ್ಟಾಚಾರ ನಿರ್ಮೂಲನ, ಪಾರದರ್ಶಕತೆ, ಪ್ರಾಮಾಣಿಕತೆ, ಉತ್ತರದಾಯಿತ್ವದ ಮಾತುಗಳೆಲ್ಲವೂ ಬರೀ ಪೊಳ್ಳು, ಅದೆಲ್ಲ ಕೇವಲ ಜನರನ್ನು ಮೂರ್ಖರಾಗಿಸುವ ತಂತ್ರವಲ್ಲದೆ ಇನ್ನೇನೂ ಅಲ್ಲ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟವಲ್ಲವೇ?


ಏತನ್ಮಧ್ಯೆ ಚುನಾವಣೆಗಳು ನಡೆದು ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. ಆದರೆ ತಾನು ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಬದ್ಧವೆಂದು ಹೇಳಿಕೊಂಡ ಮೋದಿ ಸರಕಾರ ದಶಕಗಳಿಂದ ತನ್ನ ಉಪಯುಕ್ತತೆಯನ್ನು ಸಾಬೀತುಪಡಿಸಿರುವಂತಹ ಕಾಯ್ದೆಯನ್ನು ಬಲಪಡಿಸುವ ಬದಲು ಯುಪಿಎ ಉದ್ದೇಶಿಸಿದ್ದ ಅದೇ ತಿದ್ದುಪಡಿಗಳಿಗೆ ಒಪ್ಪಿಗೆ ನೀಡುವ ಮೂಲಕ ಅದನ್ನು ದುರ್ಬಲಗೊಳಿಸಲು ಮುಂದಾಗಿದೆ. ಮೋದಿ ಸರಕಾರದ ಆಷಾಢಭೂತಿತನ, ಅದರ ಮಾತು ಮತ್ತು ಕೃತಿಗಳ ನಡುವಿನ ಅಜಗಜಾಂತರಗಳನ್ನು ತೋರಿಸಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.

ಮೋದಿ ಸರಕಾರ ತಿದ್ದುಪಡಿಗಳನ್ನು ಸಂಸತ್ತಿನ ಸಮಿತಿಯೊಂದಕ್ಕೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಹೇಳಿತು. ಸಮಿತಿ ಕೆಲವೊಂದು ಪ್ರಸ್ತಾಪಗಳನ್ನು ತಿರಸ್ಕರಿಸಿದೆಯಾದರೂ ಸರಕಾರಿ ಅಧಿಕಾರಿಗಳ ಸಂರಕ್ಷಣೆಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಹಾಗೇ ಉಳಿಸಿಕೊಂಡಿದೆ. ಅಂತಿಮವಾಗಿ ಇದಕ್ಕೆ ಸಚಿವಸಂಪುಟದ ಒಪ್ಪಿಗೆಯೂ ದೊರೆತಿದೆ. ಇದರ ನಂತರ ಮೋದಿ ಸರಕಾರದ ನಡೆ ನಿಗೂಢವಾಗಿಬಿಟ್ಟಿದೆ. ಸಮಿತಿಯ ಸಲಹೆಗಳ ಬಗ್ಗೆ ಏನು ಮಾಡಲಾಗಿದೆ, ನೂತನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದೆ ಇಲ್ಲವೆ ಎಂಬ ಕುರಿತು ಯಾವುದೇ ವಿವರಣೆಯನ್ನು ನೀಡಲಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೋರುವ ಅರ್ಜಿಗಳನ್ನೂ ತಿರಸ್ಕರಿಸಲಾಗುತ್ತಿದೆ.

ಇದರರ್ಥ ಮೋದಿ ಸರಕಾರಕ್ಕೆ ಸಾರ್ವಜನಿಕ ಚರ್ಚೆ ಬೇಡವಾಗಿದೆ ಎಂದಲ್ಲವೇ? ಸರಕಾರ ಕಾಯ್ದೆಯನ್ನು ತೆಳುಗೊಳಿಸುವ ನಿರ್ಧಾರಕ್ಕೆ ಬರುವ ಮುನ್ನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ದಶಕಗಳ ಕಾಲದಿಂದ ಭ್ರಷ್ಟಾಚಾರ ಪ್ರಕರಣಗಳೊಂದಿಗೆ ವ್ಯವಹರಿಸುತ್ತಿರುವ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳಿಂದು ಆತಂಕಿತರಾಗಿದ್ದಾರೆ. ‘ಪಿಆರ್‌ಎಸ್ ಸಂಸದೀಯ ಸೇವೆಗಳು’ ಎಂಬ ಎನ್‌ಜಿಒ ನಡೆಸಿದ ವಿಶ್ಲೇಷಣೆ ಹೇಳುವಂತೆ ತಿದ್ದುಪಡಿಗಳು ಕಾಯ್ದೆಯನ್ನು ತುಂಬಾ ದುರ್ಬಲಗೊಳಿಸಲಿವೆ.

ಉದಾಹರಣೆಗೆ * ಬೊಫೋರ್ಸ್‌, 2 ಜಿ ಮುಂತಾದ ಹಗರಣಗಳಲ್ಲಿ ಹಿರಿಯ ಸರಕಾರಿ ಅಧಿಕಾರಿಗಳ ವಿರುದ್ಧ ಕಾನೂನುಕ್ರಮವನ್ನು ಸಾಧ್ಯವಾಗಿಸಿದ ವಿಧಿ 13(1)ನ್ನು ಕೈಬಿಡಲಾಗಿದೆ. ಮೂಲ ಕಾಯ್ದೆ ಆರು ವಿಭಿನ್ನ ರೀತಿಯ ಅಪರಾಧಗಳನ್ನು ಒಳಗೊಂಡಿದ್ದರೆ ಉದ್ದೇಶಿತ ತಿದ್ದುಪಡಿಗಳು ಕೇವಲ ಎರಡನ್ನಷ್ಟೆ ಒಳಗೊಂಡಿವೆ. * ಮೂಲ ಕಾಯ್ದೆಯ ಅಡಿಯಲ್ಲಿ ಆರೋಪಿ ಲಂಚ ಸ್ವೀಕರಿಸುವುದನ್ನು, ಸದಾ ಅಪರಾಧ ಎಸಗುವುದನ್ನು, ಅಪರಾಧಕೃತ್ಯಕ್ಕೆ ಕುಮ್ಮಕ್ಕು ನೀಡುವುದನ್ನು ಆತನ ದೋಷಿತ್ವ ಎಂದು ಪರಿಗಣಿಸಲಾಗುತ್ತಿತ್ತು. ಇದರಿಂದಾಗಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಶೀಘ್ರ ಕಾನೂನುಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಉದ್ದೇಶಿತ ತಿದ್ದುಪಡಿಗಳ ಪರಿಣಾಮವಾಗಿ ದೋಷಿತ್ವದ ಎಣಿಕೆ ಕೇವಲ ಲಂಚ ಸ್ವೀಕಾರಕ್ಕೆ ಸೀಮಿತವಾಗಿದೆ.

*ಲಂಚ ನೀಡುವವರಲ್ಲಿ ಸಹಭಾಗಿಗಳು ಮತ್ತು ಬಲಾತ್ಕಾರಕ್ಕೆ ಒಳಗಾಗುವವರು ಎಂಬ ಎರಡು ಗುಂಪುಗಳಿವೆ. ಮೊದಲನೆಯವರು ಸಾಮಾನ್ಯವಾಗಿ ಉನ್ನತ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಂಡುಬರುವ ಹವ್ಯಾಸಿ ಅಪರಾಧಿಗಳು. ಆದರೆ ಬಲಾತ್ಕಾರಕ್ಕೆ ಒಳಗಾಗುವವರಲ್ಲಿ ಹೆಚ್ಚಿನವರು ಸಣ್ಣಪುಟ್ಟ ಅಪರಾಧಗಳನ್ನು ಮಾಡಿದವರಾಗಿದ್ದು ಇಂಥವರು ಮಾಫಿ ಸಾಕ್ಷಿಗಳಾಗುವ ಸಾಧ್ಯತೆ ಇದೆ. ಆದರೆ ತಿದ್ದುಪಡಿಗಳ ನಂತರ ಈ ಭಿನ್ನತೆಗಳನ್ನು ತೆಗೆದುಹಾಕಲಾಗಿದೆ. ಪರಿಣಾಮವಾಗಿ ಕಾನೂನುಕ್ರಮ ಜರಗಿಸುವವರ ಕೆಲಸ ಮೊದಲಿಗಿಂತ ಹೆಚ್ಚು ಕಠಿಣವಾಗಲಿದೆ.

ಭಾರತ ವಿಶ್ವಸಂಸ್ಥೆಯ ‘ಭ್ರಷ್ಟಾಚಾರ ವಿರೋಧಿ ಒಪ್ಪಂದ 2011’ಕ್ಕೆ ಸಹಿಹಾಕಿದ ಬಳಿಕ ತಿದ್ದುಪಡಿಗಳು ಅವಶ್ಯವಾಗಿವೆ ಎಂಬುದು ಅನೇಕ ಸರಕಾರಿ ಅಧಿಕಾರಿಗಳ ಸಮರ್ಥನೆಯಾಗಿದೆ. ಆದರೆ ವಾಸ್ತವದಲ್ಲಿ ಈ ತಿದ್ದುಪಡಿಗಳು ಅಂತಾರಾಷ್ಟ್ರೀಯವಾಗಿ ಒಪ್ಪಿತವಾಗಿರುವ ಮಾನದಂಡಗಳನ್ನು ಅನುಸರಿಸುವ ಬದಲು ಇನ್ನಷ್ಟು ದುರ್ಬಲಗೊಳಿಸಲಿವೆ. ಇದರ ಪರಿಣಾಮ ಏನೆಂದರೆ ಮೂಲ ಕಾಯ್ದೆಯಲ್ಲಿರುವ ‘ಅಪರಾಧಕ್ಕೆ ಕುಮ್ಮಕ್ಕು’ (ವಿಧಿ 10), ‘ಹಿತಾಸಕ್ತಿಗಳ ಘರ್ಷಣೆ’ (ವಿಧಿ 11), ‘ಮಧ್ಯವರ್ತಿಗಳನ್ನು ಬಲೆಗೆ ಬೀಳಿಸುವ ವಿಧಿ’ (ವಿಧಿ 8)ಗಳನ್ನು ಒಂದೋ ರದ್ದುಗೊಳಿಸಲಾಗುವುದು ಅಥವಾ ಬದಲಾಯಿಸಲಾಗುವುದು.

ಅಪಾರದರ್ಶಕ ಆಡಳಿತ 

ಇನ್ನು ಕಳೆದ ಮೂರು ವರ್ಷಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆಯೆ ಎಂದು ನೋಡಿದರೆ ಅದೂ ಇಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ಸದೃಢಗೊಳಿಸುವ ಬದಲು ಸರಕಾರದ ಅಕ್ರಮಗಳನ್ನು ಮುಚ್ಚಿಹಾಕುವ ಸಲುವಾಗಿ ಕಾಯ್ದೆಯನ್ನು ತೆಳುಗೊಳಿಸುವ ಷಡ್ಯಂತ್ರಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾಗುತ್ತಿರುವ ಅನಾನುಕೂಲಿ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತಿಲ್ಲ.

ಉದಾಹರಣೆಗೆ ಮೋದಿಯ ವಿದೇಶ ಪ್ರಯಾಣಗಳಿಗೆ ತಗಲಿದ ಖರ್ಚು, ಅವರ ಜೊತೆ ಯಾರೆಲ್ಲ ಇದ್ದರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ನೋಟುರದ್ದತಿ ಮಾಡಿರುವುದು ಭ್ರಷ್ಟಾಚಾರ ತಡೆಗಟ್ಟುವ ಅಭಿಯಾನದ ಭಾಗವಾಗಿದೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಅತ್ತ ರಾಜಕಾರಣಿಗಳು, ಅಧಿಕಾರಿಗಳು ಬಿಲ್ಡರ್‌ಗಳಿಂದ ಮತ್ತು ಕಾರ್ಪೊರೇಟುಗಳಿಂದ ಪಡೆಯುವ ಲಂಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೂ ಮಾಡದೆ ಯಥಾಸ್ಥಿತಿಯನ್ನು ಮುಂದುವರಿಸುತ್ತಿದೆ. ವಾಸ್ತವದಲ್ಲಿ ಅದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ತೆಳುಗೊಳಿಸುತ್ತಿದೆ. ಆದಾಯ ತೆರಿಗೆ ಇಲಾಖೆಗೆ ನೀಡಲಾಗಿರುವ ಅನಿಯಂತ್ರಿತ ಅಧಿಕಾರದ ಫಲವಾಗಿ ತಲೆಯೆತ್ತಲಿರುವ ತೆರಿಗೆ ಭಯೋತ್ಪಾದನೆಯೂ ವ್ಯಾಪಕ ಭ್ರಷ್ಟಾಚಾರಕ್ಕೆ ಇಂಬುಗೊಡದಿರುತ್ತದೆಯೆ?

ಭ್ರಷ್ಟಾಚಾರ ನಿರ್ಮೂಲನ, ಪಾರದರ್ಶಕತೆ, ಪ್ರಾಮಾಣಿಕತೆ, ಉತ್ತರದಾಯಿತ್ವದ ಮಾತುಗಳೆಲ್ಲವೂ ಬರೀ ಪೊಳ್ಳು, ಅದೆಲ್ಲ ಕೇವಲ ಜನರನ್ನು ಮೂರ್ಖರಾಗಿಸುವ ತಂತ್ರವಲ್ಲದೆ ಇನ್ನೇನೂ ಅಲ್ಲ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟವಲ್ಲವೇ?

(ಆಧಾರ: scroll.in ನಲ್ಲಿ ಸೈಕತ್ ದತ್ತ ಮತ್ತು ಡೈರಿಯಲ್ಲಿ ವಿವೇಕ್ ಕೌಲ್‌ರ ಲೇಖನಗಳು) 

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News