ಕಾವ್ಯ ಮೀಮಾಂಸೆಗೊಂದು ಹೊಸ ದಿಕ್ಕು

Update: 2017-04-22 18:52 GMT

ಸಾಹಿತ್ಯ ಮತ್ತು ಸೃಜನಶೀಲತೆಯನ್ನು ಪ್ರಾಚೀನ ಕಾವ್ಯಮೀಮಾಂಸೆೆಯ ದರ್ಶನದಾಚೆಗಿನ ವೈಜ್ಞಾನಿಕ ದರ್ಶನಗಳ ಮುಖೇನ ಅಧ್ಯಯನ ಮಾಡಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಗಿರಿಯವರ ಈ ಗ್ರಂಥ, ಸಂಪೂರ್ಣವಾಗಿ ಪ್ರಾಚೀನ ಕಾವ್ಯಮೀಮಾಂಸೆೆಯನ್ನು ಧಿಕ್ಕರಿಸುವ ಕ್ರಾಂತಿ ಧಾವಂತವನ್ನು ಹೇರುವುದಿಲ್ಲವಾದರೂ, ಸಾಹಿತ್ಯ ಮತ್ತು ಸೃಜನಶೀಲ ಕಲೆಗಳನ್ನು ಅಪ್ಪಟ ವೈಜ್ಞಾನಿಕ ದೃಷ್ಟಿಯಿಂದ, ಈವರೆಗಿನ ಎಲ್ಲ ವೈಜ್ಞಾನಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಬಹುದಾದ ಸಾಧ್ಯತೆಯನ್ನು ಮಂಡಿಸುತ್ತದೆ.


ಇಂದು ವಿಶ್ವ ಪುಸ್ತಕ ದಿನ(23-04-2017). ಈ ದಿನಕ್ಕೆ ಮಹತ್ವದ ಕೊಡುಗೆ ಎನ್ನಬಹುದಾದಂಥ ಹೊಸ ಪುಸ್ತಕವೊಂದು ಈಗ ನನ್ನ ಮುಂದಿದೆ. ಹೊಸ ಪುಸ್ತಕ ಎಂದರೆ ಹತ್ತುಹನ್ನೊಂದು ಹೊಸ ಪ್ರಕಟನೆ ಗಳಲ್ಲೊಂದು ಎನ್ನುವಂಥ ಹೊಸ ಪುಸ್ತಕವಲ್ಲ. ಇದೊಂದು ವಿನೂತನ ಕೃತಿ. ಸಾಹಿತ್ಯ ವಿಮರ್ಶೆಗೆ ಹೊಸ ದಿಕ್ಕು ತೋರುವ, ಹಳೆಯ ಮಾನದಂಡಗಳನ್ನೆಲ್ಲ ಪ್ರಶ್ನಿಸುವ, ಆಮೂಲಾಗ್ರವಾಗಿ ಶೋಧಿಸುವ 684 ಪುಟಗಳ ಬೃಹದ್ಗ್ರಂಥ: ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’. ಲೇಖಕರು: ಗಿರಿ.

ಸಾಹಿತ್ಯ ಮತ್ತು ಸೃಜನಶೀಲತೆಯನ್ನು ಪ್ರಾಚೀನ ಕಾವ್ಯಮೀಮಾಂಸೆೆಯ ದರ್ಶನದಾಚೆಗಿನ ವೈಜ್ಞಾನಿಕ ದರ್ಶನಗಳ ಮುಖೇನ ಅಧ್ಯಯನ ಮಾಡಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಗಿರಿಯವರ ಈ ಗ್ರಂಥ, ಸಂಪೂರ್ಣವಾಗಿ ಪ್ರಾಚೀನ ಕಾವ್ಯಮೀಮಾಂಸೆೆಯನ್ನು ಧಿಕ್ಕರಿಸುವ ಕ್ರಾಂತಿ ಧಾವಂತವನ್ನು ಹೇರುವುದಿಲ್ಲವಾದರೂ, ಸಾಹಿತ್ಯ ಮತ್ತು ಸೃಜನಶೀಲ ಕಲೆಗಳನ್ನು ಅಪ್ಪಟ ವೈಜ್ಞಾನಿಕ ದೃಷ್ಟಿಯಿಂದ, ಈವರೆಗಿನ ಎಲ್ಲ ವೈಜ್ಞಾನಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಬಹುದಾದ ಸಾಧ್ಯತೆಯನ್ನು ಮಂಡಿಸುತ್ತದೆ. ಹಾಗೆ ನೋಡಿದರೆ ವೈಜ್ಞಾನಿಕ ದೃಷ್ಟಿಕೇಂದ್ರಿತ ಅಧ್ಯಯನ ಕನ್ನಡ ಸಾಹಿತ್ಯಕ್ಕೆ ಹೊಸದೇನಲ್ಲ.

ಶೇಕಡಾ ನೂರಕ್ಕೆ ನೂರು ಶುದ್ಧ ವಿಜ್ಞಾನದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ಓದುವ ಪ್ರಯತ್ನ ಇಲ್ಲವೇ ಇಲ್ಲ ಎನ್ನಬಹುದಾದರೂ ಮನೋವಿಜ್ಞಾನದ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ನೋಡುವ ಪ್ರಯತ್ನಗಳು ಅಲ್ಪಸ್ವಲ್ಪನಡೆದಿದೆ. ಫ್ರಾಯ್ಡಾ, ಯೂಂಗ್ ಮೊದಲಾದವರನ್ನು ಚೂರುಪಾರು ಓದಿಕೊಂಡನಂತರ ಕನ್ನಡ ಸಾಹಿತ್ಯದಲ್ಲಿ ‘ಇದು ಮನೋವೈಜ್ಞಾನಿಕ ಕಾದಂಬರಿ’ ಎಂದು ಹಣೆಪಟ್ಟಿ ಹಚ್ಚುವಷ್ಟರ ಮಟ್ಟಿನ ಕೆಲಸ ನಡೆದಿದೆ. ನಂತರ ವರ್ತನ ವಿಜ್ಞಾನ, ನರ ವಿಜ್ಞಾನ ಮೊದಲಾದ ಶಾಖೆಗಳಲ್ಲಿ ಆಗಿರುವ ಸಂಶೋಧನೆ ಮತ್ತು ನಿರ್ಣಯಗಳ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಅಭ್ಯಸಿಸುವ ಗಂಭೀರ ಪ್ರಯತ್ನ ನಡೆದಂತೆ ತೋರುವುದಿಲ್ಲ. ಪ್ರಸ್ತುತ ಗಿರಿಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಅಂಥ ಸಾಧ್ಯತೆಯತ್ತ ನಮ್ಮ ವಿಮರ್ಶೆಯ ಗಮನ ಸೆಳೆಯುವ ವಿದ್ವತ್ಪೂರ್ಣ ಚಿಂತನೆಯ ಒಂದು ಗಂಭೀರ ಪ್ರಯತ್ನ.

ಗಿರಿ ಇಪ್ಪತ್ತೊಂದನೆ ಶತಮಾನದ ಹೊಸ ತಲೆಮಾರಿನವರಿಗೆ ಹೊಸಬರು ಅಥವಾ ಅಪರಿಚಿತರು ಎನ್ನಿಸಬಹುದು. ಗೋಪಾಲಕೃಷ್ಣ ಅಡಿಗರ ‘ಚಂಡಮದ್ದಲೆ’ಯ ಉದ್ಘೋಷದೊಂದಿಗೆ ಆಗಮಿಸಿದ ನವ್ಯ ಸಾಹಿತ್ಯದ ಉಚ್ಛ್ರಾಯದ ದಿನಗಳಲ್ಲೇ ಪ್ರಕಾಶಕ್ಕೆ ಬಂದ ನವ್ಯ ಕಾದಂಬರಿಕಾರರು ಗಿರಿ. ಎಪ್ಪತ್ತರ ದಶಕದಲ್ಲಿ ‘ಗತಿಸ್ಥಿತಿ’ ಕಾದಂಬರಿ ಮೂಲಕ ಕನ್ನಡ ಕಾದಂಬರಿಗೆ ಹೊಸ ದಿಗಂತ ತೋರಿಸಿದ ಗಿರಿ ಕನ್ನಡ ಗದ್ಯಕ್ಕೆ ಹೊಸ ರಕ್ತ ಪೂರಣ ಮಾಡಿದವರು. ಅಡಿಗರ ‘ಸಾಕ್ಷಿ’ಯಲ್ಲಿ ಕೆಲವು ಸಣ್ಣ ಕಥೆಗಳನ್ನು ಪ್ರಕಟಿಸಿ ಸಣ್ಣಕಥೆಯಲ್ಲೂ ನವ್ಯದ ಪ್ರಯೋಗಶೀಲತೆಯನ್ನು ಮೆರೆದವರು. ‘ಕಂಡದ್ದು ಕಾಣದ್ದು’ ಇನ್ನೊಂದು ಕಾದಂಬರಿ.ಗಿರಿ- ಕಾವ್ಯ ನಾಮ. ತಂದೆತಾಯಿ ಇಟ್ಟ ಹೆಸರು ಮಹಾಬಲಗಿರಿ ಎನ್.ಹೆಗ್ಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನ ಓದಿ ಸ್ನಾತಕೋತ್ತರ ಪದವಿ ಪಡೆದರು. ಉನ್ನತ ಅಧ್ಯಯನ ಮತ್ತು ಉದ್ಯೋಗ ಅರಸಿ ಅಮೆರಿಕ ಸೇರಿದರು. ವರ್ತನ ವಿಜ್ಞಾನದಲ್ಲಿ ಪಿಎಚ್.ಡಿ. ಗಳಿಸಿದರು. ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕೀರ್ತಿವಂತರಾದರು.ಮನೋವಿಜ್ಞಾನ ಮತ್ತು ವರ್ತನ ವಿಜ್ಞಾನಗಳಲ್ಲಿ ಪ್ರೌಢ ವ್ಯಾಸಂಗಮಾಡಿ, ಇಂಗ್ಲಿಷ್‌ನಲ್ಲಿ ಕೃತಿಗಳನ್ನು ರಚಿಸಿ, ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾದರು. ಅವರ ಸುದೀರ್ಘ ಅಧ್ಯಯನದ ಹೊಸ ಕಾಣ್ಕೆಯ ಫಲ:ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ.

ಸಾಹಿತ್ಯ, ಸೃಜನಶೀಲತೆ, ಸಾಹಿತ್ಯ ವಿಮರ್ಶೆ ಕುರಿತ ನಮ್ಮೆಲ್ಲ ಪರಿಕಲ್ಪನೆ ಮತ್ತು ಗ್ರಹಿಕೆಗಳನ್ನು ಬುಡಮೇಲುಗೊಳಿಸುವ ಈ ಕೃತಿಯಲ್ಲಿ ಒಂಬತ್ತು ಅಧ್ಯಾಯಗಳಿವೆ. ವೈಜ್ಞಾನಿಕ ಬುನಾದಿಯ ಮೇಲೆ, ವಿಶೇಷವಾಗಿ ವರ್ತನ ವಿಜ್ಞಾನದ ಮಾನದಂಡಗಳಿಂದ ಭಾರತೀಯ ಕಾವ್ಯ ಮೀಮಾಂಸೆಯನ್ನು ಪರಾಮರ್ಶಿಸುವುದು ಈ ಕೃತಿಯ ಮುಖ್ಯ ಉದ್ದೇಶವಾಗಿದೆ. ಸೃಜನಶೀಲತೆ, ಸಾಹಿತ್ಯ ಸೃಷ್ಟಿ, ಅದರ ಹಿಂದಿನ ಪ್ರತಿಭೆ ಇತ್ಯಾದಿಯಾಗಿ ನಾವು ಯಾವುದನ್ನು ದೈವದತ್ತವಾದ ವರ, ಜನ್ಮಜಾತ ಗುಣವಿಶೇಷ, ಒಂದು ದಿವ್ಯಶಕ್ತಿ, ಹುಚ್ಚು ಎಂದೆಲ್ಲ ಭಾವಿಸುತ್ತೇವೋ ಅದೆಲ್ಲವನ್ನೂ ಅಲ್ಲಗಳೆಯುವ ಈ ಕೃತಿ, ತಾತ್ಪರ್ಯದಲ್ಲಿ, ಇವೆಲ್ಲವೂ ವರ್ತನಾಮೂಲವಾದವು ಎನ್ನುವ ಸಿದ್ಧಾಂತವನ್ನು ಮಂಡಿಸುತ್ತದೆ. ಗಿರಿಯವರೇ ಹೇಳಿರುವಂತೆ, ಬಿ.ಎಫ್.ಸ್ಕಿನರ್ ಅವರ ವರ್ತನ ವಿಜ್ಞಾನದ ಸೂತ್ರಗಳನ್ನು ಸಾಹಿತ್ಯಕ್ಕೆ ಅನ್ವಯಿಸಿನೋಡುವ ಪ್ರಯತ್ನ ಇದಾಗಿದೆ.

ಸಾಹಿತ್ಯದ ಮೀಮಾಂಸೆ ಮತ್ತು ವಿಜ್ಞಾನ-ಈ ಪೀಠಿಕಾ ಅಧ್ಯಾಯದಲ್ಲಿ ಸೂಕ್ತವಾದ ವಿಷಯ ಪ್ರವೇಶಿಕೆಯನ್ನು ನೀಡಿದ್ದು, ಮುಂದಿನ ಅಧ್ಯಾಯದಲ್ಲಿ ಸಾಹಿತಿಗಳ ಮೇಲೆ ಬಂದೆರಗುವ ಪರಿಸರದ ಪ್ರಚೋದನೆಗಳು, ವರ್ತನೆಗಳನ್ನು ಹುಟ್ಟಿಸಿ ಹೇಗೆ ಸಾಹಿತ್ಯ ರಚನೆಗೆ ಕಾರಣವಾಗುತ್ತವೆ ಎಂಬುದನ್ನು ವಿಶ್ಲೇಷಿಸಿದ್ದಾರೆ. ಭಾಷೆಯನ್ನು ಪದೀಯ ವರ್ತನೆ (ವರ್ಬಲ್ ಬಿಹೇವಿಯರ್)ಎಂದು ವ್ಯಾಖ್ಯಾನಿಸುವ ವರ್ತನ ವಿಜ್ಞಾನ, ಮಾತಾಡುವ, ಕೇಳುವ, ಓದುವ ಮತ್ತು ಬರೆಯುವ ಪಕ್ರಿಯೆಗಳಲ್ಲಿನ ಸಾಮಾಜಿಕ ಒಡನಾಟದಿಂದ ರೂಪುಗೊಳ್ಳುವ ಪದೀಯ ವರ್ತನೆಯೇ ಸಾಹಿತ್ಯ ಎನ್ನುತ್ತದೆ. ಸಾಹಿತ್ಯದ ಪರಿಣಾಮ ಕುರಿತ ಎರಡು ಅಧ್ಯಾಯಗಳಲ್ಲಿ ಪೂರ್ವ ಹಾಗೂ ಪಡುವಣದ ಕಾವ್ಯ ಮೀಮಾಂಸೆಗಳನ್ನು ತುಲನಾತ್ಮಕವಾಗಿ ಗ್ರಹಿಸಿ, ಧ್ವನಿ ಸಿದ್ಧಾಂತ, ಭಾಷೆಯ ಅರ್ಥಸಿದ್ಧಾಂತವೆಂಬ ನಿರ್ಣಯಕ್ಕೆ ಬರುತ್ತಾರೆ. ಸಾಹಿತ್ಯದಲ್ಲಿ ಭಾವ, ರಸ ಮತ್ತು ಧ್ವನಿಗಳ ಪಾತ್ರ ಮತ್ತು ಪರಿಣಾಮಗಳನ್ನು ಕುರಿತು ಸುದೀರ್ಘವಾಗಿ ಚರ್ಚಿಸಿರುವ ಗಿರಿಯವರು, ಭಾವಗಳ ಪ್ರಚೋದನೆಗಳು ಮನಸ್ಸಿನೊಳಗಿಲ್ಲ, ಮನಸ್ಸಿನ ಹೊರಗಿನವು ಎನ್ನುವ ಎಲಿಯಟ್ಟನ ಅಭಿಪ್ರಾಯುವನ್ನು ವೈಜ್ಞಾನಿಕವಾಗಿ ಮಹತ್ವದ್ದು ಎಂದು ಗುರುತಿಸಿ, ಭಾವಗಳು ಮೈಯೊಳಗಿನ ಉದ್ರಿಕ್ತ ಸ್ಥಿತಿಗಳು, ಚಿತ್ತವೃತ್ತಿಗಳಲ್ಲ ಎನ್ನುವ ನಿರ್ಣಯಕ್ಕೆ ಬರುತ್ತಾರೆ.

ವರ್ತನ ವಿಜ್ಞಾನದ ಬೆಳಕಿನಲ್ಲಿ ಭಾರತೀಯ ಕಾವ್ಯ ಮೀಮಾಂಸೆಯ ವಿಶೇಷಗಳನ್ನೂ ಕೊರತೆಗಳನ್ನೂ ಶೋಧಿಸುತ್ತಾರೆ. ಪ್ರಾಚೀನ ಭಾರತೀಯ ಕಾವ್ಯ ಮೀಮಾಂಸೆೆಯಲ್ಲಿ ಕಾರಣ ಮತ್ತು ಪರಿಣಾಮಗಳು ಮುಖ್ಯವಾಗುವುದರಿಂದ, ಭಾರತೀಯ ಕಾವ್ಯ ಮೀಮಾಂಸೆ ಪಾಶ್ಚಾತ್ಯ ಕಾವ್ಯ ಮೀಮಾಂಸೆೆಗಿಂತ ಹೆಚ್ಚು ವೈಜ್ಞಾನಿಕವಾದದ್ದು ಹಾಗೂ ಭಾರತೀಯ ಕಾವ್ಯ ಮೀಮಾಂಸೆಯ ‘ಸಹೃದಯತೆಯ’ ಪರಿಕಲ್ಪನೆ ಅನನ್ಯವೂ ವೈಜ್ಞಾನಿಕವೂ ಆದದ್ದು ಎಂಬ ತೀರ್ಮಾನಕ್ಕೆ ಬರುತ್ತಾರೆ.

ಸಾಹಿತಿ, ಸಾಹಿತ್ಯ, ಸೃಜನಶೀಲಪ್ರತಿಭೆಗಳನ್ನು ವರ್ತನ ವಿಜ್ಞಾನದ ರೀತಿಯಲ್ಲಿ ವಿವರಿಸಿರುವಂತೆಯೇ ಗಿರಿಯವರು, ವಿಮರ್ಶೆ, ವಿಮರ್ಶಕರು ಮತ್ತು ಓದುಗರ ಬಗೆಗಿನ ವರ್ತನ ವಿಜ್ಞಾನದ ಪರಿಕಲ್ಪನೆಗಳನ್ನು ನಿರೂಪಿಸುವ ಮೂಲಕ ಈ ಮೂರರ ನಡುವಣ ಪದೀಯ ಸಂಬಂಧದ ಸಮಗ್ರ ಚಿತ್ರವನ್ನು ಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ. ವಿಮರ್ಶೆಯೆಂದರೆ-ವರ್ತನ ವಿಜ್ಞಾನದ ದೃಷ್ಟಿಯಲ್ಲಿ ಕೃತಿಯೊಂದರ ಪದೀಯ ಪ್ರಚೋದನೆಗಳು ಪರಿಣಿತ ಓದುಗರಲಿ ಕೆರಳಿಸುವ ಪದೀಯ ಪ್ರತಿಕ್ರಿಯೆಯೇ. ವಿಮರ್ಶಕರ ಈ ಪದೀಯ ಪ್ರತಿಕ್ರಿಯೆ (ಅಂದರೆ ಅವರು ಬರೆದ ವಿಮರ್ಶೆ)ಓದುಗರಿಗೆ ಅನುಭವ ವಿಸ್ತರಣೆಯ ಪ್ರಚೋದನೆ.ಒಂದು ಸಾಹಿತ್ಯ ಕೃತಿಯಿಂದ ಹೇಗೆ ಓದುಗರು ಅನುಭವ ವಿಸ್ತರಣೆಯನ್ನು ಪಡೆಯುತ್ತಾರೋ ಹಾಗೆಯೆ ಅದೇ ಕೃತಿಯ ವಿಮರ್ಶೆಯನ್ನು ಓದುವವರೂ ಅನುಭವ ವಿಸ್ತರಣೆಯನ್ನು ಪಡೆದುಕೊಳ್ಳುತ್ತಾರೆ.(ಪುಟ 527).

ಓದುಗರನ್ನು ಭಾರತೀಯ ಕಾವ್ಯ ಮೀಮಾಂಸೆ ಸಹೃದಯರು ಎಂದು ಕರೆದಿದೆ. ಸಹೃದಯರು ಕವಿಗೆ ಸಮಾನವಾದ ಹೃದಯವನ್ನುಳ್ಳವರು. ಅಷ್ಟೇ ಅಲ್ಲ ಅವರು ಕಾವ್ಯಮೀಮಾಂಸಕ ರಾಜಶೇಖರ ಹೇಳಿರುವಂತೆ ‘ಭಾವಯಿತ್ರೀ’ ಪ್ರತಿಭಾವಂತರೂ ಆಗಿರಬೇಕಾಗುತ್ತದೆ. ವರ್ತನ ವಿಜ್ಞಾನದ ಪ್ರಕಾರ-ಓದುಗರೂ ವ್ಯಕ್ತಿಗಳೇ; ಮನಸ್ಸಿಗೆ ಅಕ್ಷರಾಭ್ಯಾಸವಿಲ್ಲ. ಓದುವುದೂ ಒಂದು ಬಗೆಯ ವರ್ತನೆ. ಓದು ನಿಗೂಢ ಸಂಜ್ಞಾನದಲ್ಲಿ ಅಡಗಿಕೊಂಡು ಹರಿಯುವ ಸರಸ್ವತಿಯಲ್ಲ. ಸಾಹಿತ್ಯ ಮಾಡುವ ಭಾವ ಪ್ರಚೋದನೆ ಮತ್ತು ಅನುಭವ ವಿಸ್ತರಣೆ ಆಗುವುದು ಓದುವವರಲ್ಲಿ, ಓದುವುದರಿಂದ ಮತ್ತು ಓದಿದ್ದರಲ್ಲಿ ಸಾಹಿತಿಗಳು ಜೋಡಿಸಿಟ್ಟ ಪದೀಯ ಪ್ರಚೋದನೆಗಳಿಂದ.ಸಾಹಿತಿಗಳು ತಮ್ಮ ಕೃತಿಗಳಲ್ಲಿ ಅಳವಡಿಸಿದ ಪ್ರಚೋದನೆಗಳು ಎಷ್ಟು ಕಸುವಿನದ್ದಾಗಿರಬಹುದೆಂದರೆ, ಓದುವವರಲ್ಲಿ ಅಥವಾ ಓದಿದ್ದನ್ನು ಕೇಳಿದವರಲ್ಲಿ ಅನಿರೀಕ್ಷಿತ ವರ್ತನೆಗಳು ಹೊಮ್ಮಬಹುದು. ಈ ಅನಿರೀಕ್ಷಿತ ವರ್ತನೆಯೇ ‘ಭಾವಯಿತ್ರೀ’ ಪ್ರತಿಭೆಯಾಗಿರಬಹುದೇ?

ಕೃತಿಯ ಬೆಲೆ ಕಟ್ಟುವುದು ವಿಮರ್ಶೆಯ ಕೆಲಸ ಎನ್ನುವುದು ಒಂದು ಸಾಮಾನ್ಯ ನಂಬಿಕೆ. ವರ್ತನ ವಿಜ್ಞಾನದ ಪರಿಭಾಷೆಯಲ್ಲಿ, ಸಮಾಜದ ವರ್ತನ ವಿನ್ಯಾಸಗಳನ್ನು ‘ಮೌಲ್ಯ’ ಎಂಬ ಪದೀಯ ಬಣ್ಣಿಸುತ್ತದೆ. ಸಾಹಿತ್ಯ ಕೃತಿಗಳ ‘ಬೆಲೆಕಟ್ಟುವುದು’ ವ್ಯಕ್ತಿಗಳ, ಸಮಾಜದ ಮತ್ತು ನಾಗರಿಕತೆಯ ಒಳಿತಿಗೆ ಅನುಕೂಲಕರವಾದ ಪ್ರಚೋದನೆಗಳು, ವರ್ತನೆಗಳು, ಪರಿಣಾಮಗಳು. ಬೆಲೆಕಟ್ಟುವುದೂ ವಿಮರ್ಶಕರು ಕೃತಿಯೊಳಗಿನ ಪದೀಯ ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯೇ ಹೌದು. ಈ ರೀತಿಯಾಗಿ, ಸಾಹಿತಿ-ಸಾಹಿತ್ಯ-ವಿಮರ್ಶೆಯನ್ನು ವರ್ತನ ವಿಜ್ಞಾನದ ಬೆಳಕಿನಲ್ಲಿ ವಿನೂತನವಾಗಿ ಬಿಂಬಿಸುವ ಗಿರಿಯವರು ಆಖೈರಾಗಿ ಆನಂದವರ್ಧನ-ಅಭಿನವಗುಪ್ತರ ಸಾಂಪ್ರದಾಯಿಕ ರಸ-ಧ್ವನಿ ಸಿದ್ಧಾಂತಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಪರಿಷ್ಕರಿಸ ಬೇಕಾದ ಅಗತ್ಯವನ್ನು ಮನಗಾಣಿಸುತ್ತಾರೆ ಹಾಗೂ ಪರಿಷ್ಕೃತ ವೈಜ್ಞಾನಿಕ ರಸ-ಧ್ವನಿ ಸಿದ್ಧಾಂತದ ರೂಪುರೇಷೆಯನ್ನು ನೀಡಿದ್ದಾರೆ.

ಗಿರಿಯವರ ಈ ಗ್ರಂಥದ ಇನ್ನೊಂದು ವಿಶೇಷವೆಂದರೆ, ಅವರು ಕನ್ನಡ ಸಾಹಿತ್ಯವನ್ನು ವರ್ತನ ವಿಜ್ಞಾನದ ದೃಷ್ಟಿಕೋನದಿಂದ ನೋಡಿ ಒಂದು ವೈಜ್ಞಾನಿಕ ಕಾವ್ಯಮೀಮಾಂಸೆಯನ್ನು ಕಟ್ಟಿಕೊಡುವುದಕ್ಕೆ ಅಗತ್ಯವಾದ ಭಾಷೆ-ಪರಿಭಾಷೆಯನ್ನು ರೂಪಿಸಿಕೊಂಡಿರುವುದು. ಕೊನೆಯಲ್ಲಿ ಕೊಟ್ಟಿರುವ ಇಪ್ಪತ್ತೈದು ಪುಟಗಳ ಪಾರಿಭಾಷಿಕ ಪದಕೋಶದಲ್ಲಿನ ಅವರ ಹೊಸಪದಗಳ ಸೃಷ್ಟಿ ನಮ್ಮನ್ನು ಬೆರಗುಗೊಳಿಸುತ್ತದೆ. ಇನ್ನೊಂದು ವಿಶೇಷವೆಂದರೆ, ವರ್ತನ ವಿಜ್ಞಾನಾನುಸಾರಿಯಾದ ವೈಜ್ಞಾನಿಕ ಕಾವ್ಯ ಮೀಮಾಂಸೆೆಯನ್ನು ಸುಲಭ ಗ್ರಹಿಕೆಗೆ ಒಗ್ಗಿಸಲು, ವಚನ ಸಾಹಿತ್ಯ, ದಾಸಸಾಹಿತ್ಯ, ಮೊಹರಂ ಸಾಹಿತ್ಯ, ಬೇಂದ್ರೆ, ಅಡಿಗ, ಲಂಕೇಶ್, ನಿಸಾರ್ ಅಹಮದ್, ಅನಂತ ಮೂರ್ತಿ, ರಹಮತ್ ತರೀಕೆರೆ, ಪ್ರತಿಭಾ ನಂದ ಕುಮಾರ್, ಹ.ಮಾ.ಕನಕ, ಜ್ಯೋತಿ ಗುರುಪ್ರಸಾದ್ ಮೊದಲಾದ ಕವಿಗಳು ಮತ್ತು ವಿಮರ್ಶಕರ ರಚನೆಗಳನ್ನು, ಅನ್ನಿಸಿಕೆಗಳನ್ನು ಅನ್ವಯಿಕ ನಿದರ್ಶನಗಳನ್ನಾಗಿ ಎತ್ತಿಕೊಂಡಿರುವುದು.

ಮಾನವನ ಸಂವೇದನೆಗಳನ್ನು ಹದಗೊಳಿಸುವ ಅಂಗವೊಂದು ಮೈಯೊಳಗೆ ಇರಲೇಬೇಂದು ತತ್ವಜ್ಞರು ತೀರ್ಮಾನಿಸಿದ ಮೇಲೆ ಆ ಅಂಗಕ್ಕೆ ಮನಸ್ಸು ಎಂಬ ಹೆಸರು ಬಂತು. ನಮ್ಮೆಲ್ಲ ವರ್ತನೆಗಳಿಗೆ ಮನಸ್ಸೇ ಕಾರಣ ಎನ್ನುತ್ತಾರೆ ಮನೋವಿಜ್ಞಾನಿಗಳು. ವರ್ತನ ವಿಜ್ಞಾನ ಇದನ್ನು ಒಪ್ಪಿಕೊಳ್ಳುವುದಿಲ್ಲ. ಮನಸ್ಸೆಂಬುದೇ ಇಲ್ಲ ಎಂದು ವರ್ತನ ವಿಜ್ಞಾನದ ಸಿದ್ಧಾಂತ. ಮನಸ್ಸು ಸಾಹಿತ್ಯದ, ಎಲ್ಲ ಬಗೆಯ ಸೃಜನಶೀಲತೆಯ ತಾಯಿ ಎಂಬುದು ತಪ್ಪು ಕಲ್ಪನೆ. ವಾಸ್ತವಿಕವಾಗಿ ಮನಸ್ಸು ಯಾವುದರ ತಾಯಿಯೂ ಅಲ್ಲ, ಯಾವುದರ ಮಗುವೂ ಅಲ್ಲ. ಮನಸ್ಸು ಮನುಷ್ಯರ ಅಹಂಗೆ ಮಾಡುವ ಕಾಲ್ಪನಿಕ ಮಾಲೀಸು. ಮನಸ್ಸು ಮನುಷ್ಯರ ಸೊಕ್ಕು ಸವಾರಿಮಾಡುವ ಕತ್ತೆ ಎನ್ನುವ ನಿರ್ಧಾರಕ್ಕೆ ಬರುತ್ತಾರೆ ಗಿರಿ.

ಮನಸ್ಸೆಂಬುದಿಲ್ಲ ಎಂಬುದನ್ನು ಒಪ್ಪಿಕೊಂಡಲ್ಲಿ ಉಳಿಯುವುದು ಭೌತಿಕ ಪ್ರಪಂಚ ಮತ್ತು ಭೌತಿಕ ಶರೀರವಷ್ಟೆ. ಭೌತಿಕ ಪ್ರಪಂಚದ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿ ಹುಟ್ಟುವ ಪದೀಯ ವರ್ತನೆಯ ಸಾಹಿತ್ಯವನ್ನು ಮನೋಮೂಲದ್ದೆನ್ನಲಾದ ಭಾವ-ರಸ-ಧ್ವನಿಗಳಿಂದ ಬೇರ್ಪಡಿಸಿದಲ್ಲಿ ಉಳಿಯುವುದು ಬಾಹ್ಯವರ್ತನೆಗಳಷ್ಟೆ. ಮನಸ್ಸಿನ ಮಾರ್ದವವೂ ಇಲ್ಲ, ಅರಿಷಡ್ವರ್ಗಗಳೂ ಇಲ್ಲ. ಬಾಹ್ಯ ವರ್ತನೆಗಳಷ್ಟೆ ಸಾಹಿತ್ಯ ಎಂದಾದಲ್ಲಿ ಬಾಹ್ಯ ವರಸೆಗಳಷ್ಟೆ ಅಭಿವ್ಯಕ್ತಿ ಕ್ರಮ ಎಂದು ತಿಳಿಯಬೇಕೆ? ಹಾಗಾದಲ್ಲಿ, ‘ಮೈಸೂರು ಮಲ್ಲಿಗೆ’ಯ ಪದುಮಳನ್ನು ಕೇವಲ ಒಂದು ಬಾಹ್ಯಾಕೃತಿಯಾಗಿ ತಿಳಿಯುವಂತಾಯಿತೆ, ಕಾರಂತರ ಮೂಕಜ್ಜಿಗೆ, ಕುವೆಂಪು ಅವರ ಹೂವಯ್ಯನಿಗೆ ಸ್ಥಾನವೇ ಇಲ್ಲವಾಯಿತೆ ಎಂದು ಇದು ಕೆಲವರನ್ನು ಬೆಚ್ಚಿಬೀಳಿಸಬಹುದು. ನಮ್ಮ ಮೇರು ಕೃತಿಗಳಿಗೆಲ್ಲ ಇನ್ನು ರದ್ದಿ ಉಗ್ರಾಣವೇ ಗತಿ, ರೌಡಿಗಳು, ಕುಸ್ತಿ ಪೈಲ್ವಾನರುಗಳು, ರೇಪಿಸ್ಟರುಗಳು, ರುದ್ರಭಯಂಕರರೇ ಶ್ರೇಷ್ಠ ಸಾಹಿತ್ಯ ಎಂದು ಕುಹುಕಿಗಳು ಕೇಳಬಹುದಲ್ಲವೇ? ಸೃಜನಶೀಲ ಕೃತಿಯೊಂದರಲ್ಲಿ ನಿರೀಕ್ಷಿಸಲಾಗುವ ಸಾವಯವ ಸೌಷ್ಠತೆ, ಪ್ರಮಾಣ ಬದ್ಧತೆ, ಶಿಲ್ಪಸದೃಶ ಕಲಾತ್ಮಕತೆ, ಭಾಷೆಯ ಬೆಡಗು-ಬಿನ್ನಾಣ ಇತ್ಯಾದಿಗಳೆಲ್ಲವೂ ಅಸಂಗತವಾಗುತ್ತದೆಯಲ್ಲವೇ?

ಏನೇ ಇರಲಿ, ದೈವದತ್ತವಾದ ಅಭಿಜಾತ ಪ್ರತಿಭೆಯ ಮಹಾನುಭಾವರು ತಾವೆಂದು ಭಾವಿಸಿರುವ ದಂತಗೋಪುರದ ಸಾಹಿತಿಗಳು ಇತ್ಯಾದಿಗರನ್ನು ಗಿರಿಯವರ ಈ ಕೃತಿ ಸಿಟ್ಟಿಗೆಬ್ಬಿಸಿದರೆ, ಆಗಿನ ವರ್ತನೀಯ ಸಾಹಿತ್ಯವನ್ನು ಯಾವ ಮಾನ ದಂಡದಿಂದ ಅಳೆಯಬೇಕು ಎಂದು ವಿಮರ್ಶಕರು ವರ್ತನ ವಿಜ್ಞಾನಕ್ಕೇ ಮೊರೆ ಹೋಗಬೇಕಾಗುತ್ತದೆ. ಒಬ್ಬ ವಿಮರ್ಶಕರಿಗಂತೂ ಅವರೊಡನೆ ಜಗಳವಾಡಬೇಕೆನಿಸಿದೆಯಂತೆ. ಗಿರಿ ಕೊನೆಯಲ್ಲಿ ಕೊಟ್ಟಿರುವ ಪರಿಷ್ಕೃತ ರಸ-ಧ್ವನಿ ಸಿದ್ಧಾಂತ ಚಿಂತನ-ಮಂಥನಕ್ಕೆ ಅರ್ಹವಾದುದು. ಸಾಹಿತ್ಯ, ಸೃಜನಶೀಲತೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿ ಹೊಸಹೊಸ ಚರ್ಚೆ-ಸಂವಾದಗಳನ್ನು ಹುಟ್ಟುಹಾಕುವ ಯೋಗ್ಯತೆಯುಳ್ಳ ಇಂಥ ಕೃತಿಯೊಂದನ್ನು ಕನ್ನಡಕ್ಕೆ ಕೊಟ್ಟಿರುವ ಗಿರಿ, ಪ್ರಕಟಿಸಿರುವ ಧಾರವಾಡದ ಮನೋಹರ ಗ್ರಂಥ ಮಾಲೆ ಅಭಿನಂದನಾರ್ಹರು.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News