ಕನ್ನಡ-ಮರಾಠಿ ‘ಅನುವಾದಕರ ಸಮಾವೇಶ’, ಜಯಂತ್ ಕಾಯ್ಕಿಣಿ ಮಾತಿನ ಮೆಲುಕು
ಮುಂಬೈಯ ಖ್ಯಾತ ಅನುವಾದಕರಾದ ಅಕ್ಷತಾ ದೇಶಪಾಂಡೆಯವರು ಆದರ್ಶ ಅನುವಾದ ಅಕಾಡಮಿ, ಮಹಾರಾಷ್ಟ್ರ ಇದರ ಸಹಯೋಗದಲ್ಲಿ (ಎಪ್ರಿಲ್ 15 ಮತ್ತು 16) ಮೀರಾರೋಡ್ ಪೂರ್ವದ ಶ್ರೀಜಿ ಟವರ್‌ನ ಮಿನಿ ಸಭಾಗೃಹದಲ್ಲಿ ‘ಅನುವಾದಕರ ಸಮಾವೇಶ’ ಹಮ್ಮಿಕೊಂಡಿದ್ದರು. ಕನ್ನಡದ ಹಿರಿಯ ಸಾಹಿತಿ ಪ್ರೇಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮರಾಠಿಯ ಹಿರಿಯ ಸಾಹಿತಿ ಡಾ. ನೀರಜಾ ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ನಾನು, ಮನೋಹರ ನಾಯಕ್, ಹಿರಿಯ ಚಿತ್ರ ಕಲಾವಿದ ವಾಸುದೇವ ಕಾಮತ್ ಉಪಸ್ಥಿತರಿದ್ದೆವು. ಈ ಸಂದರ್ಭದಲ್ಲಿ ಆದರ್ಶ ಅನುವಾದ ಅಕಾಡಮಿಯ ನಿರ್ದೇಶಕ ಖ್ಯಾತ ಕತೆಗಾರ ಗಿರೀಶ ಚಂದ್ರಕಾಂತ ಜಕಾಪುರೆ ಅವರು ಸಂಪಾದಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದ ‘ಸದಾ ಮಲ್ಲಿಗೆ’ ಎನ್ನುವ 24 ಮರಾಠಿ ಕತೆಗಳ ಕನ್ನಡ ಅನುವಾದ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇಮಶೇಖರ್‌ರು ‘‘ಇಂದಿನ ಲೇಖಕರಿಗೆ ತಾಳ್ಮೆ ಇಲ್ಲ. ಪೋಸ್ಟ್‌ಮೆನ್ ಹಿಡಿದುಕೊಂಡು ಬರುತ್ತಿದ್ದ ಸ್ವೀಕೃತ - ಅಸ್ವೀಕೃತ ಪತ್ರಕ್ಕೆ ಕಾಯುವ ಸ್ಥಿತಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ದಿಢೀರ್ ಕವಿತೆಗಳ ಹಾವಳಿಯಲ್ಲೇ ಆಸಕ್ತಿ ತಳೆಯುತ್ತಿದ್ದಾರೆ. ಸಾಹಿತ್ಯ ರಚನೆಯಲ್ಲಿ ಧ್ಯಾನಸ್ಥ ಮನಸ್ಥಿತಿ ಬೇಕು. ಹೊಸ ಕತೆಗಾರರು ಇದಕ್ಕೆ ಸಿದ್ಧರಾಗಬೇಕಿದೆ. ಇಂದು ಕಮ್ಯುನಿಸಂ ಸೋತಿದೆ ಅನ್ನುತ್ತಿದ್ದಾರೆ. ಆದರೆ ಕಮ್ಯುನಿಸಂ ಸೋತಿಲ್ಲ. ಕಮ್ಯುನಿಸ್ಟರು ಸೋತಿರಬಹುದು. ಅಕ್ಟೋಬರ್ ಕ್ರಾಂತಿಗೆ ಇದೀಗ ಶತಮಾನದ ಸಂಭ್ರಮ. ಈ ನಿಟ್ಟಿನಲ್ಲಿ ನಮ್ಮ ಬರವಣಿಗೆಯನ್ನು ಆ ದಿಕ್ಕಿನತ್ತ ಒಯ್ಯಬೇಕು. ಹೊಸ ನೀತಿ ಹೊಸ ಅವಕಾಶಗಳನ್ನು ಲೇಖಕರು ಸಮರ್ಥಕವಾಗಿ ಬಳಸಿಕೊಳ್ಳಬೇಕು. ಸ್ವಾತಂತ್ರ್ಯ ಸಿಕ್ಕಿ ನಮಗೆ 70 ವರ್ಷಗಳಾಗುತ್ತಿವೆ. ಈ ಎರಡು ವಿಷಯಗಳನ್ನು ಲೇಖಕರು ತಮ್ಮ ಮುಂದಿನ ಬರಹಗಳಲ್ಲಿ ಗಮನಿಸಿ ಅಳವಡಿಸಬೇಕಾಗಿದೆ’’ ಎನ್ನುತ್ತಾ ಅನುವಾದಕ ‘ಮರುಸೃಷ್ಟಿ ಕರ್ತ’ ಎಂದರು.
ಎರಡು ದಿನದ ಈ ಕಾರ್ಯಕ್ರಮದಲ್ಲಿ ಅನುವಾದಿತ ಕತೆಗಳ ಚರ್ಚೆಗಳ ನಾಲ್ಕು ಗೋಷ್ಠಿಗಳಿದ್ದುವು. ಬಿಡುಗಡೆಗೊಂಡ 24 ಮರಾಠಿ ಕತೆಗಳ ಅನುವಾದಗಳ ‘ಸದಾ ಮಲ್ಲಿಗೆ’ ಕೃತಿ ಸುಮಾರು 400 ಪುಟಗಳ ಬೃಹತ್ ಗ್ರಂಥ. ‘‘ಅನುವಾದ ನನ್ನ ಸಂತೋಷ ಕರ್ಮ’’ ಎನ್ನುವ ಸಂಪಾದಕ ಅಕ್ಕಲಕೋಟೆಯ ಗಿರೀಶ್ ಜಕಾಪುರೆ ಅವರು ಈಗಾಗಲೇ ಅಣ್ಣಾ ಹಝಾರೆ ಹಾಗೂ ಅಣ್ಣಾ ಸಾಠೆಯವರ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದವರು. ಹಿಂದಿಗೂ ಕನ್ನಡದ ಕೃತಿ ಅನುವಾದಿಸಿದ್ದಾರೆ. ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಹಿಡಿತವಿರುವ ಗಿರೀಶ್ ಜಕಾಪುರೆಯವರು ತಮ್ಮ ಮಾತುಗಳಲ್ಲಿ ಕತೆಗಳ ಆಯ್ಕೆಯಲ್ಲಿ ಪಟ್ಟ ಶ್ರಮವನ್ನು ತಿಳಿಸಿದರು. ಅನುವಾದಕರ ಸಮಾವೇಶದ ರೂವಾರಿ ಅಕ್ಷತಾ ದೇಶಪಾಂಡೆ ಕಾರ್ಯಕ್ರಮ ಹಮ್ಮಿಕೊಂಡ ಉದ್ದೇಶವನ್ನು ಸಭೆಗೆ ತಿಳಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನ್ನು ಮನೋಹರ್ ನಾಯಕ್ ಅವರು ವಹಿಸಿದ್ದರು. ಮುಂಬೈಯ ಸೃಜನಾ ಲೇಖಕಿಯರ ಬಳಗದವರು (ಡಾ. ಸುನೀತಾ ಶೆಟ್ಟಿ ಮತ್ತು ತಂಡ) ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಕನ್ನಡ-ಮರಾಠಿ ಸಂಬಂಧ ಗಟ್ಟಿಗೊಳ್ಳಲು ಇಂತಹ ಕಾರ್ಯಕ್ರಮ ಆಗಾಗ ನಡೆಯುತ್ತಿರಲಿ.
* * *
ಬದುಕಿನ ಪಠ್ಯಪುಸ್ತಕವೆಂದರೆ ಸಾಹಿತ್ಯ
ಸಾಹಿತ್ಯಕ ರಚನೆಗಳು ಮತ್ತು ಸಿನೆಮಾ ಗೀತೆ ರಚನೆಗಳು ಹೀಗೆ ಎರಡು ಕ್ಷೇತ್ರಗಳಲ್ಲೂ ಪ್ರಶಂಸೆ ಪಡೆಯುತ್ತಿರುವ ಮುಂಬೈ ಕನ್ನಡಿಗರ ನೆಚ್ಚಿನ ಸಾಹಿತಿ ಡಾ. ಜಯಂತ ಕಾಯ್ಕಿಣಿಯವರು ಎಪ್ರಿಲ್ 23 ರಂದು ‘ವೀಕೆಂಡ್ ವಿದ್ ರಮೇಶ್’ ಸೆಶನ್-3ರಲ್ಲಿ ರಾತ್ರಿ ಝೀ ಟಿ.ವಿ. ಕನ್ನಡದಲ್ಲಿ ಕಾಣಿಸಿಕೊಂಡರು. ಈ ಕಾರ್ಯಕ್ರಮಕ್ಕಿಂತ ಸುಮಾರು ಎರಡು ವಾರ ಮೊದಲು ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆಶ್ರಯದಲ್ಲಿ ಪ್ರಖ್ಯಾತ ಸಿನೆಮಾಟೋಗ್ರಾಫರ್, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಕನ್ನಡಿಗ ವಿ.ಕೆ. ಮೂರ್ತಿ ಅವರ ಕುರಿತಂತೆ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಜಯಂತ್ ಕಾಯ್ಕಿಣಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಪುಣೆಯಿಂದ ಮರುದಿನ ಅವರು ನೇರವಾಗಿ ಮುಂಬೈಗೆ ಬಂದವರು, 3 ದಿನ ಇಲ್ಲಿದ್ದರು. ಆ ಸಂಜೆಗೆ ಜಯಂತ್ ಅವರು ಕರ್ನಾಟಕ ಸಂಘ, ಮುಂಬೈಗೆ ಭೇಟಿ ನೀಡುವುದಾಗಿ ಮುಂಚಿತವಾಗಿಯೇ ನನ್ನಲ್ಲಿ ತಿಳಿಸಿದ್ದರು.
ಜಯಂತ್ ಜೊತೆ ಆರಾಮವಾಗಿ ಕುಳಿತು ಮಾತುಕತೆ ನಡೆಸದೆ ಬಹಳ ದಿನಗಳಾಗಿತ್ತು. ಅಂದು ಸಂಜೆ ಆ ಅವಕಾಶ ಕೂಡಿ ಬಂದಿತು. ಸದ್ಯ ಜಯಂತರದ್ದು ಬರಲಿರುವ ಕೃತಿ ‘ಕಂಪಿನ ಕರೆ’. ಕಳೆದ ಆರೇಳು ವರ್ಷಗಳಲ್ಲಿ ಬರೆದಿರುವ ಅಂಕಣ, ಬರಹ, ವಿಮರ್ಶೆ, ಸ್ಪಂದನಗಳು......ಇತ್ಯಾದಿಗಳನ್ನು ‘ಕಂಪಿನ ಕರೆ’ ಎನ್ನುವ ಪ್ರಬಂಧ ಒಳಗೊಂಡಿದೆ. ಈ ಸಲ ಯುಗಾದಿ ಸಂಚಿಕೆಯೊಂದರಲ್ಲಿ ಅವರ ಕತೆಯೂ ಬಂದಿದೆ. ಇದನ್ನೆಲ್ಲ ಮುಂದಿಟ್ಟ ಜಯಂತ್ ತಾನು ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯ ಇದ್ದೇನೆ ಅನ್ನುವುದನ್ನು ಮರೆಯಲಿಲ್ಲ. ತಮ್ಮ ಚಿತ್ರಗೀತೆಗಳ ಬಗ್ಗೆ ಅವರು ಮಾತನಾಡುತ್ತಾ ‘‘ಸಿನೆಮಾ ಹಾಡುಗಳನ್ನು ನಾನು ಗಂಭೀರವಾಗಿಯೇ ತೆಗೆದುಕೊಂಡಿದ್ದೇನೆ. ಇಂದು ರಿಯಾಲಿಟಿ ಶೋಗಳಲ್ಲಿ ಮಕ್ಕಳು ಕನ್ನಡ ಹಾಡು ಹಾಡ್ತಾರೆ, ಪಿಕ್ನಿಕ್‌ಗಳಿಗೆ ಹೋದಾಗಲೂ ಹಾಡ್ತಾರೆ. ಇಂಗ್ಲಿಷ್ ಮಾಧ್ಯಮದವರಾಗಿದ್ದರೂ ಈ ಮಕ್ಕಳು ಕನ್ನಡ ಹಾಡುಗಳನ್ನು ಅಲ್ಲಾದರೂ ಹಾಡ್ತಾರಲ್ಲಾ, ಕನ್ನಡದ ಹಾಡುಗಳು ಇಲ್ಲಿ ಉಸಿರಾಡುತ್ತಿದೆಯಲ್ಲಾ ಎನ್ನುವುದು ನನಗೂ ಸಂತೋಷ’’ ಎಂದರು.
‘‘ಕನ್ನಡ ವೈಚಾರಿಕವಾಗಿದ್ದಾಗ ಅದು ಉಳಿಯುತ್ತದೆ, ಬೆಳೆಯುತ್ತದೆ. ವಿಚಾರಗಳು ಆ ಭಾಷೆಯಲ್ಲಿ ವ್ಯಕ್ತವಾಗಬೇಕು’’ ಎನ್ನುವ ಜಯಂತರು ವೈಚಾರಿಕತೆ ಎನ್ನುವ ಕುರಿತಂತೆ ನಮ್ಮಲ್ಲಿ ಇರುವ ಸಾಮಾನ್ಯ ಗ್ರಹಿಕೆಗಳನ್ನು ಪ್ರಶ್ನಿಸುತ್ತಾ ‘‘ವೈಚಾರಿಕತೆಯೇ ಮನುಷ್ಯನ ಲಕ್ಷಣ, ವೈಚಾರಿಕತೆ ಬೇಡ ಅಂದರೆ, ಆತ ಪ್ರಾಣಿ, ಈಗ ವೈಚಾರಿಕತೆಯನ್ನು (ಬುದ್ಧಿಯನ್ನು) ಗೇಲಿ ಮಾಡುವ ಸಂಪ್ರದಾಯ ಬರ್ತಿದೆ. ಇನ್ನೂ ವಿಸ್ತಾರವಾಗಿ ವಿವರಿಸುವುದಾದರೆ ಯಾವುದೇ ಕಾಲದ ಕೆಟ್ಟ ರಾಜಕಾರಣ ಜನ ಬುದ್ಧಿಗೇಡಿಗಳಾಗಲಿ ಎಂದು ಬಯಸುತ್ತದೆ. ಆಗಲೇ ಆ ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಲಭವಾಗುತ್ತದೆ’’ ಎನ್ನುತ್ತಾ ಜಾಗೃತಿಯತ್ತ ಬೆಳಕು ಚೆಲ್ಲಿದರು.
ತಮ್ಮ ತಂದೆ ಗೌರೀಶರ ವಿಷಯ ಬರುತ್ತಿದ್ದಂತೆ ಜಯಂತ್ ಹೇಳಿದ್ದು ಹೀಗೆ ‘‘ ಗೌರೀಶರು ವೈಚಾರಿಕರು. ಹಾಗಿದ್ದೂ ಅವರ ಅತ್ಯಂತ ಪ್ರೀತಿಯ ಸ್ತೋತ್ರವೆಂದರೆ ಗಾಯತ್ರಿ ಮಂತ್ರ ಆಗಿತ್ತು. ಅದು ಕಾಣುವ ಸೂರ್ಯನನ್ನು ಪ್ರಾರ್ಥಿಸುತ್ತದೆ ಮತ್ತು ನನ್ನ ಧೀ ಶಕ್ತಿಯನ್ನು ಪ್ರಚೋದಿಸು ಅನ್ನುತ್ತದೆ. ಧೀ ಶಕ್ತಿ ಬೇಡ ಅಂದರೆ ಹೇಗೆ....?’’ ಮತ್ತೆ ಬುದ್ಧಿ ಜೀವಿಗಳತ್ತ ಚರ್ಚೆ ಹರಿಯಿತು. ಜಯಂತ್ ಸ್ವಲ್ಪಬೇಸರದಿಂದಲೇ ಹೇಳಿದರು ‘‘ಇಂದು ತಮಗಾಗದ ನಾಲ್ಕು ಚಿಂತಕರನ್ನು ಹೀಯಾಳಿಸಲು ಕೆಲವು ಜನಗಳು ‘ಬುದ್ಧಿ ಜೀವಿಗಳು’ ಎನ್ನುವ ಪದವನ್ನು ಬಳಸಿ ಹೀಯಾಳಿಸುತ್ತಾರೆ. ಹೀಗಾದರೆ ನಮ್ಮ ಇಡೀ ವಿಕಾಸ ಪಥವನ್ನೇ ಉಲ್ಟಾ ಮಾಡಿ ಮತ್ತೆ ಶಿಲಾಯುಗಕ್ಕೆ ನಾವು ಹೋಗಬೇಕಾಗುತ್ತದೆ. ಬೇಕಿದ್ದರೆ ತಮಗಾಗದ ಆ ನಾಲ್ಕು ಚಿಂತಕರಿಗೆ ಬೇರೆ ಹೆಸರು ಇಟ್ಟು ಕರೆಯಲಿ. ಆದರೆ ‘ಬುದ್ಧಿ ಜೀವಿಗಳು’ ಎಂದು ಕರೆದು ಆ ಶಬ್ದಕ್ಕೆ ಅವಮಾನ ಮಾಡಬಾರದು. ಶಿಕ್ಷಣ, ಕಾಮರ್ಸ್, ಮೆಡಿಸಿನ್.....ಇತ್ಯಾದಿ ಎಲ್ಲದಕ್ಕೂ ಬುದ್ಧಿಶಕ್ತಿ ಬೇಕು.’’
‘‘ನಮ್ಮ ಕಾಲದ ಆಧ್ಯಾತ್ಮ ನಮ್ಮ ಕಲೆ - ಸಾಹಿತ್ಯದಲ್ಲೇ ಇರುವುದು. ನಮಗೆ ಗೊತ್ತಿರುವುದನ್ನು ಮೀರುವಂತಹ ಆವರಣವೇ ಅಧ್ಯಾತ್ಮ. ವೈದ್ಯಕೀಯ ಕೂಡಾ ಅಧ್ಯಾತ್ಮ, ಆಪರೇಷನ್ ಥಿಯೇಟರ್‌ನಲ್ಲಿ ನಡೆಯುವುದು ಕೂಡಾ ಯಜ್ಞ. ಒಬ್ಬ ಜೀವಿಯನ್ನು ಉಳಿಸುವ ಪ್ರಯತ್ನ ಅಲ್ಲಿ ನಡೆಯುತ್ತದೆ’’ ಎನ್ನುವ ಜಯಂತ್ ಕೊನೆಗೆ ಹೇಳಿದ್ದು ‘‘ಬದುಕಿನ ಪಠ್ಯ ಪುಸ್ತಕಗಳು ಸಾಹಿತ್ಯ ಮಾತ್ರ. ಬದುಕಿನಲ್ಲಿ ಬರುವ ಪರೀಕ್ಷೆಗೆ ನೆರವು ನೀಡುವುದು ಸಾಹಿತ್ಯ ಮಾತ್ರ. ಬದುಕಿನ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುವುದಿಲ್ಲ. ನಾವಿಂದು ಮನಸ್ಸಿಗಿಂತ ದೇಹದ ಮೇಲೆ ಪ್ರಾಮುಖ್ಯತೆ ಹೆಚ್ಚು ಕೊಡುತ್ತಿದ್ದೇವೆ. ಒಂದೊಮ್ಮೆ ಲೈಬ್ರೆರಿ ಇದ್ದ ಜಾಗದಲ್ಲಿ ಇಂದು ಜಿಮ್ ಬಂದಿದೆ. ಮನಸ್ಸಿಲ್ಲದ ದೇಹ ವ್ಯರ್ಥ. ಟ್ರ್ಯಾಕ್ಟರ್ ತರಹ ಆಗ ನಾವೆಲ್ಲ ಕಾಣುತ್ತೇವೆ. ಮನಸ್ಸು ಇರಲು, ಮನಸ್ಸು ಕಟ್ಟಲು ಸಾಹಿತ್ಯ, ಸಂಗೀತ, ನಾಟಕ ಇರಲೇ ಬೇಕು. ಜೊತೆಗೆ ನಮಗಿಂದು ಮರುಓದು ಕೂಡಾ ಅಷ್ಟೇ ಅಗತ್ಯ. ಈ ಟಿವಿಯ ನಮಸ್ಕಾರ ಮಾಲಿಕೆಯಲ್ಲಿ ನಾನು ಕಾರಂತರ ಅನೇಕ ಕಾದಂಬರಿಗಳನ್ನು ಮತ್ತೆ ಓದಿದೆ. ಅವೆಲ್ಲ ನಮ್ಮ ಅಧ್ಯಾತ್ಮವೂ ಹೌದು.’’ ಕೊನೆಯದಾಗಿ ಇತ್ತೀಚಿನ ಹೊಸ ಗೀತ ರಚನೆಗಳ ಬಗ್ಗೆ ಕೇಳಿದಾಗ ಚಿತ್ರ ನಿರ್ದೇಶಕ ಯೋಗರಾಜ್ ಭಟ್‌ರ ‘ಮುಗುಳು ನಗೆ’, ದುನಿಯಾ ಸೂರಿ ಅವರ ‘ಟಗರು’, ದರ್ಶನ್‌ರ ‘ತಾರಕ್’......ಇತ್ಯಾದಿಗಳನ್ನು ಹೆಸರಿಸಿದರು.
ಜಯಂತ್ ಹೊರಡುವ ಮೊದಲು ಸ್ಪಷ್ಟವಾಗಿ ನುಡಿದ ಒಂದು ಮಾತು ನನ್ನಲ್ಲಿ ಮತ್ತೆ ಮತ್ತೆ ಮೆಲುಕು ಹಾಕುತ್ತಿತ್ತು. ಅದೇನೆಂದರೆ ‘‘ನಾವು ಆಪ್ತರಾಗಿದ್ದರೆ ಭೇಟಿಯಾಗದಿದ್ದರೂ ಒಟ್ಟಾಗಿರುತ್ತೇವೆ. ನಾವು ಆಪ್ತರಾಗದಿದ್ದರೆ ಭೇಟಿಯಾದರೂ ಒಟ್ಟಾಗಿರುವುದಿಲ್ಲ.’’ ಮನುಷ್ಯ ಸಂಬಂಧಗಳಿಗೆ ನಿಜವಾಗಿ ಅನ್ವಯಿಸುವ ಮಾತಿದು ಅಲ್ಲವೇ?
* * *
ಬಿಸಿಲು: 3 ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಪಕ್ಷಿಗಳು ಆಸ್ಪತ್ರೆೆ
ಮುಂಬೈಯಲ್ಲಿ ವಿಪರೀತ ಸೆಕೆ ಆರಂಭವಾಗಿದೆ. ಜನಕ್ಕೆ ಓಡಾಡಲು ಭಾರೀ ಕಿರಿಕಿರಿ. ರೈಲು ಪ್ರಯಾಣಿಕರ ಸ್ಥಿತಿಯಂತೂ ಇನ್ನೂ ಶೋಚನೀಯ. ಮನುಷ್ಯರಷ್ಟೇ ಅಲ್ಲ. ಪಶು ಪಕ್ಷಿಗಳ ಸಂಕಷ್ಟವಂತೂ ಇನ್ನೂ ಹೆಚ್ಚು. ಬಿಸಿಲ ಬೇಗೆಯ ಕಾರಣ ಜನವರಿಯಿಂದ ಎಪ್ರಿಲ್ ಮೂರನೆ ವಾರದ ತನಕ ಪರೇಲ್‌ನ ವೆಟೆರ್ನರಿ ಆಸ್ಪತ್ರೆಗೆ ತರಲಾದ ಪಕ್ಷಿಗಳ ಸಂಖ್ಯೆ ಸಾವಿರದ ಸಂಖ್ಯೆ ದಾಟಿವೆ. ಬಿಸಿಲ ಝಳಕ್ಕೆ ರಸ್ತೆ ಪಕ್ಕ ಬಿದ್ದಿರುವ ಪಕ್ಷಿಗಳನ್ನು ಪಕ್ಷಿಪ್ರೇಮಿಗಳು ಪರೇಲ್‌ನ ಪಶು ಆಸ್ಪತ್ರೆಗೆ ತರುತ್ತಿದ್ದಾರೆ. ಮುಂಬೈಯಲ್ಲಿ ಹವಾಮಾನ ಇಲಾಖೆಯ ಪ್ರಕಾರ ಈ ದಿನಗಳಲ್ಲಿ 36 ಡಿಗ್ರಿ ಸೆಲ್ಸಿಯಸ್‌ನಷ್ಟು ಸೆಖೆ ಇದೆ.
ಪರೇಲ್‌ನ ವೆಟೆರ್ನರಿ ಹಾಸ್ಪಿಟಲ್‌ನ ಇನ್‌ಚಾರ್ಜ್ ಡಾ. ಜೆ.ಸಿ. ಖನ್ನಾ ಅವರು ತಿಳಿಸಿದಂತೆ ಈ ವರ್ಷ ಮುಂಬೈಯಲ್ಲಿ ಸೆಕೆ ಒಂದು ತಿಂಗಳ ಮೊದಲೇ ಆರಂಭವಾಗಿದೆ. ಈಗಿನ ದೃಶ್ಯ ಗಮನಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸೆಕೆ ಕಾಣಿಸಿಕೊಳ್ಳಲಿದೆ. ಸಮಯಕ್ಕೆ ಸರಿಯಾಗಿ ನೀರು ಸಿಗದಿರುವುದರಿಂದಾಗಿ ಪಕ್ಷಿಗಳು ಮೂರ್ಛೆ ಬೀಳುತ್ತಲೇ ಇವೆ.