ಗೋಹತ್ಯಾ ನಿಷೇಧದ ರಾಜಕೀಯ ಲಾಭವೂ, ಬೀಫ್ ಉದ್ದಿಮೆಯ ಸಮಾಜೋಆರ್ಥಿಕ ಲಾಭವೂ

Update: 2017-04-26 18:55 GMT

ಭಾಗ 1

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಯೋಗಿ ಸರಕಾರ ಒಂದು ಅಪ್ಪಟ ಫ್ಯಾಶಿಸ್ಟ್ ಸರಕಾರವಾಗಿದ್ದು ಕೇಂದ್ರ ಮತ್ತು ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳಿದ್ದರೆ ದೇಶದ ಪರಿಸ್ಥಿತಿ ಏನಾಗಲಿದೆ ಎಂಬುದರ ಸೂಚಕವಾಗಿದೆ. ಮೋದಿ ಯಾವತ್ತು ಯೋಗಿ ಆದಿತ್ಯನಾಥ್‌ರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿಸಿದರೋ ಆವತ್ತಿನಿಂದಲೆ ಭಾರೀ ಹುರುಪಿನಿಂದ ಕಾರ್ಯಕ್ಷೇತ್ರಕ್ಕೆ ಇಳಿದಿರುವ ಸಂಘ ಪರಿವಾರ ಯೋಗಿ ಸರಕಾರದ ನೇರ ಹಾಗೂ ಪರೋಕ್ಷ ಬೆಂಬಲದೊಂದಿಗೆ ರಾಜ್ಯದಲ್ಲಿ ತನ್ನ ವಿವಿಧ ಕಾರ್ಯಸೂಚಿಗಳನ್ನು ಜಾರಿಗೊಳಿಸತೊಡಗಿದೆ. ಅದು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಸುತ್ತಿರುವ ನಾನಾ ರೀತಿಯ ದಮನ ಕಾರ್ಯಾಚರಣೆಗಳಲ್ಲಿ ಬಲಪ್ರಯೋಗದ್ದೇ ಪ್ರಧಾನ ಪಾತ್ರ.

ಯೋಗಿ ಸರಕಾರದ ಕೃಪಾದೃಷ್ಟಿಯಲ್ಲಿ ಎಲ್ಲಿಲ್ಲದ ತಾಕತ್ತು ಪಡೆದುಕೊಂಡಿರುವ ಗೋರಕ್ಷಕ ದಳಗಳಿಗೆ ಅವರ ತಥಾಕಥಿತ ಗೋರಕ್ಷಣೆಗಾಗಿ ಮನುಷ್ಯರನ್ನು ಬಲಿಕೊಡಲೂ ಮುಕ್ತ ರಹದಾರಿ ದೊರೆತಿದೆ. ಕಾನೂನುಬಾಹಿರ ಎನ್ನಲಾದ ಕಸಾಯಿಖಾನೆಗಳನ್ನು ಬಲವಂತವಾಗಿ ಮುಚ್ಚಿಸಲಾಗುತ್ತಿದೆ. ತಥಾಕಥಿತ ‘ಲವ್ ಜಿಹಾದ್’ ವಿರುದ್ಧ ಎನ್ನಲಾದ ರೋಮಿಯೊ ನಿಗ್ರಹ ದಳದ ಪೊಲೀಸರು ಕಾನೂನನ್ನು ಗಾಳಿಗೆ ತೂರಿ ಕಂಡಕಂಡ ಯುವ ಜೋಡಿಗಳನ್ನು ಬೇಟೆಯಾಡುತ್ತ ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿದ್ದಾರೆ. ಯೋಗಿ ಸ್ಥಾಪಿತ ‘ಹಿಂದೂ ಯುವ ವಾಹಿನಿ’ಯ ಪುಂಡರು ಅಂತರ್ಧರ್ಮೀಯ ಪ್ರೇಮ ಪ್ರಕರಣಗಳನ್ನು ತಡೆಯಲು ಮನೆಮನೆಗೆ ನುಗ್ಗುವ ಮಟ್ಟಕ್ಕೆ ತಲಪಿದ್ದಾರೆ. ಮತಾಂತರದ ಹೆಸರಿನಲ್ಲಿ ಕ್ರೈಸ್ತರ ಮೇಲೆ ದೌರ್ಜನ್ಯಗಳು ಮಿತಿಮೀರುತ್ತಿವೆ. ಪೊಲೀಸ್ ವ್ಯವಸ್ಥೆ ಸಂವಿಧಾನ, ಧರ್ಮ ನಿರಪೇಕ್ಷತೆ ಎಲ್ಲವನ್ನೂ ಆಚೆಗಿಟ್ಟು ಆಳುವ ಸರಕಾರದ ಗುಲಾಮನಾಗಿಬಿಟ್ಟಿದೆ. ಅದು ಇಂದು ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಕಂಡರೂ ಕಾಣದಂತೆ ನಟಿಸುತ್ತ ಕಾನೂನು ಪಾಲನೆಯಲ್ಲಿ ತಾರತಮ್ಯ ಮಾಡುತ್ತಿರುವುದು ಪ್ರಜಾಸತ್ತೆಗೆ ಬಗೆದ ಮಹಾದ್ರೋಹವಾಗಿದೆ.

ಏನಿದು ಕಾನೂನುಬಾಹಿರ ಕಸಾಯಿಖಾನೆ? 

ಉತ್ತರ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೂ ಚುನಾವಣೆಗಳ ಕಾಲದಲ್ಲಿ ಭಾವನಾತ್ಮಕವಾದ ಗೋಹತ್ಯೆಯ ವಿಚಾರವನ್ನು ಮುಂದಿಟ್ಟುಕೊಂಡ ಬಿಜೆಪಿ, ಉತ್ತರ ಪ್ರದೇಶದ ಜನತೆ ತನ್ನನ್ನು ಗೆಲ್ಲಿಸಿದರೆ ತಾನು ಎಲ್ಲಾ ಕಾನೂನುಬಾಹಿರ ಕಸಾಯಿಖಾನೆಗಳನ್ನು ಮುಚ್ಚಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಈ ಹೊತ್ತು ಪಕ್ಷವಾಕ್ಯ ಪರಿಪಾಲನೆಗೆ ಮುಂದಾಗಿರುವ ಯೋಗಿ ಸರಕಾರ ಕಾನೂನುಬಾಹಿರ ಎಂಬ ನೆಪವೊಡ್ಡಿ ಕಸಾಯಿಖಾನೆಗಳಿಗೆ ಬೀಗ ಜಡಿಯುತ್ತಿದೆ. ವಾಸ್ತವವಾಗಿ ಇವುಗಳಲ್ಲಿ ಉತ್ಪಾದನೆಯಾಗುತ್ತಿರುವುದು ಎಮ್ಮೆ, ಕೋಣಗಳ ಮಾಂಸ.

ಈ ಸಂದರ್ಭದಲ್ಲಿ ಕಸಾಯಿಖಾನೆಗಳ ಬಗ್ಗೆ ಮತ್ತು ಈ ಇಡೀ ಪ್ರಕ್ರಿಯೆ ಕುರಿತು ಒಂದಿಷ್ಟು ವಿವರಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಕಸಾಯಿಖಾನೆಗಳಲ್ಲಿ ಎರಡು ವಿಧಗಳಿವೆ. ಒಂದು ಸಾರ್ವಜನಿಕ ಕಸಾಯಿಖಾನೆಗಳು. ಇನ್ನೊಂದು ಖಾಸಗಿ ಸಂಸ್ಕರಣಾ ಕಾರ್ಖಾನೆಗಳ ಭಾಗವಾಗಿರುವ ಕಸಾಯಿಖಾನೆಗಳು. ಒಂದು ಅಂದಾಜಿನಂತೆ ಭಾರತದಲ್ಲಿರುವ ಒಟ್ಟು ಕಸಾಯಿಖಾನೆಗಳಲ್ಲಿ ಶೇ. 98ರಷ್ಟು ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಗೆ ಸೇರಿವೆಯಾದರೆ ಮಿಕ್ಕ ಸುಮಾರು ಶೇಕಡಾ 2 ಕಸಾಯಿಖಾನೆಗಳು ಕಾನೂನುಬಾಹಿರವಾಗಿವೆ. ಬೀಫ್‌ಗೆ (ಎಮ್ಮೆ, ಕೋಣಗಳ ಮಾಂಸ) ಸಂಬಂಧಪಟ್ಟಂತೆ ಎರಡು ವಿಭಿನ್ನ ಮಾರುಕಟ್ಟೆಗಳಿವೆ. ಸಾರ್ವಜನಿಕ ಕಸಾಯಿಖಾನೆಗಳ ಉತ್ಪನ್ನಗಳು ಸ್ಥಳೀಯರ ಅಗತ್ಯಗಳನ್ನು ಪೂರೈಸಿದರೆ ಸಂಸ್ಕರಣಾ ಕಾರ್ಖಾನೆಗಳ ಉತ್ಪನ್ನಗಳನ್ನು ನೇರವಾಗಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಸಾರ್ವಜನಿಕ ಘಟಕಗಳು
ಸಾರ್ವಜನಿಕ ವಲಯದ ಕಸಾಯಿಖಾನೆ ಎಂದರೆ ಪಂಚಾಯತ್, ನಗರಪಾಲಿಕೆ, ಮುನಿಸಿಪಾಲಿಟಿ ಅಥವಾ ಮಹಾನಗರಪಾಲಿಕೆಗಳಂತಹ ಸ್ಥಳೀಯಾಡಳಿತಗಳ ಕೈಕೆಳಗಿರುವ ಅಧಿಕೃತ ಕಸಾಯಿಖಾನೆ. ಇವುಗಳ ನಿರ್ಮಾಣ, ನಿರ್ವಹಣೆ ಮತ್ತು ಅಗತ್ಯವಿರುವ ಲೈಸೆನ್ಸ್ ಮತ್ತಿತರ ದಾಖಲೆಗಳನ್ನು ಹೊಂದುವುದು ಸ್ಥಳೀಯಾಡಳಿತದ ಜವಾಬ್ದಾರಿ. ಈಗ ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಬಂದ್ ಮಾಡತೊಡಗಿರುವುದು ಸ್ಥಳೀಯರ ಅಗತ್ಯಗಳನ್ನು ಪೂರೈಸುವ ಈ ಸಾರ್ವಜನಿಕ ವಲಯದ ಕಸಾಯಿಖಾನೆಗಳನ್ನು. ಆದರೆ ಕಸಾಯಿಖಾನೆಗಳು ಮತ್ತು ಅವುಗಳ ನ್ಯಾಯಸಮ್ಮತತೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಗೊಂದಲದಿಂದ ಕೂಡಿವೆ. (ಇಂತಹ ಭಿನ್ನಭಿನ್ನವಾದ ವರದಿಗಳ ಪ್ರಕಾರ ರಾಜ್ಯದಲ್ಲಿ 126ರಿಂದ 140 ಸಾರ್ವಜನಿಕ ಕಸಾಯಿಖಾನೆಗಳಿವೆ; ಅವುಗಳ ಪೈಕಿ 40ರಿಂದ 125 ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿವೆ; ಇಂತಹ 20ರಿಂದ 40 ಕಸಾಯಿಖಾನೆಗಳನ್ನು ಮತ್ತು 5000ಕ್ಕೂ ಅಧಿಕ ಮಾಂಸದಂಗಡಿಗಳನ್ನು ಮುಚ್ಚಲಾಗಿದೆ).

ಖಾಸಗಿ ಘಟಕಗಳು
ರಫ್ತು ಉದ್ದೇಶದ ಖಾಸಗಿ ಸಂಸ್ಕರಣಾ ಘಟಕಗಳು ಬೃಹದ್ಗಾತ್ರದ ವಾಗಿರುತ್ತವೆ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತವೆ. ಇಡೀ ದೇಶದಲ್ಲಿ ಇಂತಹ 99 ಘಟಕಗಳಿದ್ದು ಇವುಗಳಲ್ಲಿ ಪ್ರಾಣಿಗಳಿಗೆ ವಾಸದ ವ್ಯವಸ್ಥೆಯಿಂದ ಹಿಡಿದು ಶೈತ್ಯಾಗಾರ ಮತ್ತು ಆಧುನಿಕ ಪ್ಯಾಕಿಂಗ್ ವ್ಯವಸ್ಥೆಗಳಿರುತ್ತವೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News