ಅಸ್ಪೃಶ್ಯತೆಯ ವಂಶಾವಳಿ

Update: 2017-04-28 04:15 GMT

ಹಿಂದೂಸ್ಥಾನದಲ್ಲಿ ಜನರು ಕೃಷಿ ಆರಂಭಿಸಿದ್ದು ಇತ್ತೀಚೆಗೆಲ್ಲೋ, ಅಷ್ಟೇ, ಹೀಗೆ ಪ್ರಾಚೀನ ಕಾಲದಿಂದ ನಾವು ಈ ಅಸ್ಪಶ್ಯತೆಯ ವಂಶವಾಳಿಯ ವಿಚಾರ ಮಾಡಬೇಕು. ತುಂಬ ಪ್ರಾಚೀನಕಾಲದಲ್ಲಿ ಸ್ಥಾನಬದ್ಧ ರೈತರಂತೆ ದನಕರು ಕಟ್ಟಿಕೊಂಡಿದ್ದು, ಮೇವಿಗಾಗಿ ಅಲ್ಲಲ್ಲಿ ತಿರುಗಾಡುತ್ತಿದ್ದ ದನಗಾಹಿ ಕುರುಬರು ಇವರು. ಈ ಕುರುಬರಲ್ಲಿ ಮೇವಿಗಾಗಿ ನಿತ್ಯವೂ ಕಲಹ ನಡೆಯುತ್ತಿತ್ತು. ಎಷ್ಟೋ ಸಲ ಸ್ಥಾನಬದ್ಧ ರೈತರೊಡನೆಯೂ ಸೆಣಸಬೇಕಾಗಿ ಬರುತ್ತಿತ್ತು. ಈ ನಿತ್ಯಕಲಹದಿಂದ ಈ ಅಲೆಮಾರಿ ಕುರುಬರ ಸಂತತಿ ಕ್ಷೀಣಿಸುತ್ತಾ ಬರುತ್ತಿತ್ತು; ಸಂಚಾರ ಸಾಧನಗಳೂ ಇಲ್ಲದೆ, ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇ ಆಗಿತ್ತು.

ಮೇಲೆ ಹೇಳಿದಂತೆ ಆ ಕಾಲದಲ್ಲಿ ಬಹಳಷ್ಟು ಜನರು ರೈತರಾಗಿದ್ದು, ಸ್ಥಾನಬದ್ಧರಾಗಿದ್ದರು. ಈ ಜನರಿಗೆ ತಮ್ಮ ಹೊಲಗದ್ದೆ, ಮನೆ ಮಠ, ಫಸಲು ಮತ್ತು ಉಚ್ಚ ಸಂಸ್ಕೃತಿಯನ್ನು ಈ ಅಲೆಮಾರಿಗಳಿಂದ ರಕ್ಷಿಸುವ, ಶಾಂತಿಯನ್ನೂ ಕಾಪಾಡುವ ತೀವ್ರ ಇಚ್ಛೆಯಿತ್ತು. ಆದರೆ ಈ ಅಲೆಮಾರಿಗಳನ್ನು ಎದುರಿಸುವ ಸಾಮರ್ಥ್ಯ ಮಾತ್ರ ಅವರಲ್ಲಿರಲ್ಲಿಲ್ಲವೆಂದು ಹೇಳಬೇಕಾಗಿಲ್ಲ.

ಈ ಅಲೆಮಾರಿಗಳ ಉಪದ್ರವದಿಂದ ತಮ್ಮ ಮಾಲನ್ನು ರಕ್ಷಿಸಲು, ಆ ಕಾಲದ ರೈತ ವರ್ಗವು ಅವ್ಯವಸ್ಥಿತರೂ, ಜರ್ಜರಿತರೂ ಆದ ಅವರನ್ನು ಗ್ರಾಮ ರಕ್ಷಕರಾಗಿ ನಿಯಮಿಸಿ, ಗ್ರಾಮದ ಹೊರಗೆ ಭೂಮಿಯಿತ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಅವರಿಗೊಪ್ಪಿಸಿದರು. ಗ್ರಾಮರಕ್ಷಣೆಯ ತಮ್ಮ ಕರ್ತವ್ಯವನ್ನು ಈ ರಕ್ಷಕರು ಪರಂಪರಾಗತವಾಗಿ ಮಾಡುತ್ತಾ ಬಂದಿದ್ದಾರೆ. ಆ ಕಾಲದಲ್ಲಿ ಗ್ರಾಮ ಸೀಮೆಯಲ್ಲಿ ವಾಸವಾಗಿದ್ದ ಈ ಸಂರಕ್ಷಕರು ಮತ್ತು ಗ್ರಾಮದ ರೈತರ ಮಧ್ಯೆ ಅನ್ಯೋನ್ಯ ಮಾನವೀಯ ಸಂಬಂಧವಿದ್ದು, ಅಸ್ಪಶ್ಯತೆಯ ಕಲ್ಪನೆಯೂ ಇರಲಿಲ್ಲ. ಮತ್ತೆ ಈ ಅಸ್ಪಶ್ಯತೆ ಹುಟ್ಟಿಕೊಂಡಿತಾದರೂ ಹೇಗೆ? ಅಸ್ಪಶ್ಯತೆಯ ಉಗಮ ಹೇಗಾಯಿತೆಂಬುದನ್ನು ಅರಿಯಲು ಬೌದ್ಧಧರ್ಮದ ವಿಕಾಸದ ಇತಿಹಾಸದತ್ತ ನೋಟ ಹರಿಸಬೇಕು.

ಹಿಂದೂಸ್ಥಾನದ ಇತಿಹಾಸದಲ್ಲಿ ಯಾರಿಗೂ ಸಿಗದಷ್ಟು ಯಶಸ್ಸು ಬೌದ್ಧಧರ್ಮಕ್ಕೆ ದೊರಕಿತು. ಅದು ಈ ದೇಶದ ಮೂಲೆ ಮೂಲೆಗಳಿಗೆ ವೇಗದಲ್ಲಿ ಪಸರಿಸಿತು. ಸ್ವಲ್ಪದರಲ್ಲೇ ಹಿಂದೂಸ್ಥಾನದ ರೈತರೂ, ವ್ಯಾಪಾರಿಗಳೂ, ಉದ್ದಿಮೆದಾರರೂ ಬೌದ್ಧಧರ್ಮವನ್ನು ಸ್ವೀಕರಿಸಿದರು.

ಬೌದ್ಧಧರ್ಮದ ಪ್ರಚಾರದಿಂದ ಬ್ರಾಹ್ಮಣ ಧರ್ಮಕ್ಕೆ ತುಂಬ ಭೀತಿಯುಂಟಾಗತೊಡಗಿತು. ಬ್ರಾಹ್ಮಣರು ಮಹಾಧೂರ್ತತೆಯಿಂದ ತಮಗೆ ಪ್ರಿಯವಾದ ತಮ್ಮ ಪುರಾತನ ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಕಿತ್ತೊಗೆದು ಹೊಸ ಪರಿಸ್ಥಿತಿಗೆ ಹೊಂದಿಕೊಂಡುದಲ್ಲದೆ ಹೋಗಿದ್ದರೆ, ಬ್ರಾಹ್ಮಣಧರ್ಮವು ರಸಾತಳಕ್ಕೇ ಇಳಿದು ಹೋಗುತ್ತಿತ್ತು. ಅವರ ಈ ಧೋರಣೆಯೇ ಅವರ ಧರ್ಮವನ್ನುಳಿಸಿತು.

ಬ್ರಾಹ್ಮಣರು ಆಗ ಏನು ಮಾಡಿದರೆಂದು ನೋಡುವ. ಬೌದ್ಧಧರ್ಮದ ಬೋಧೆಯು ಮುಖ್ಯವಾಗಿ ತ್ರಿವಿಧ ಸ್ವರೂಪದ್ದಾಗಿತ್ತು ಮತ್ತು ಜನಮನಕ್ಕೆ ಹಿಡಿಸಿತ್ತು. ಬೌದ್ಧಧರ್ಮದ ಸಮತೆಯ ಘೋಷಣೆ, ಹಿಂಸೆ, ಚಾತುರ್ವರ್ಣ್ಯ ಮತ್ತು ಯಜ್ಞ, ಯಾಗಗಳ ನಿಷೇಧ, ಇವೆಲ್ಲ ಜನಮನವನ್ನು ಆಕರ್ಷಿಸಿತ್ತು. ಬ್ರಾಹ್ಮಣ ಧರ್ಮದ ಯಜ್ಞ, ಯಾಗಗಳು ಜನತೆಯನ್ನು ಶೋಷಿಸುತ್ತಿದ್ದುದರಿಂದ ಈ ಧಾರ್ಮಿಕ ಕಾರ್ಯಗಳ ಬಗ್ಗೆ ಜನಮನದಲ್ಲಿ ಜಿಗುಪ್ಸೆ ಎದ್ದಿತ್ತು.

ಅಂದಿನ ಬ್ರಾಹ್ಮಣರು ಶಾಖಾಹಾರಿಗಳೇನೂ ಅಗಿರಲಿಲ್ಲ. ದೇವರ ಹೆಸರಲ್ಲಿ ಹಸು ಮತ್ತು ಇತರ ಪಶುಗಳನ್ನು ಯಜ್ಞಕ್ಕೆ ಆಹುತಿ ಕೊಟ್ಟು, ಮತ್ತೆ ತಾವೇ ಭುಜಿಸುತ್ತಿದ್ದರು.

ಈ ಮಾಂಸ ಭಕ್ಷಣೆಯ ಅತಿರೇಕದಿಂದ ಪಶುಹತ್ಯೆಯಾಗಿ ರೈತರು ಸಂಕಷ್ಟದಲ್ಲಿ ಬೀಳುತ್ತಿದ್ದರು. ತಮ್ಮ ಹಸುಗಳನ್ನು ಕಳಕೊಂಡು, ತತ್ಪರಿಣಾಮವಾಗಿ, ಹಾಲು, ಮೊಸರು ಮ್ತತಿತರ ಉತ್ಪನ್ನಗಳಿಗೆ ತತ್ವಾರವಾಗಿ ಅವರ ಅನ್ನದ ಮೂಲಕ್ಕೂ ಕು+ತ್ತು ಬಂದೆರಗುತ್ತಿತ್ತು.

ಬುದ್ಧನ ಕಾಲದಲ್ಲಿ ಅವನು ಈ ಯಜ್ಞಯಾಗಾದಿಗಳ ಹಿಂಸೆಯ ವಿರುದ್ಧ ಬಂಡೆದ್ದನು. ಜನತೆಗೆ ಆರ್ಥಿಕ ಮತ್ತು ನೈತಿಕ ದೃಷ್ಟಿಯಿಂದ ಬುದ್ಧನ ಬೋಧೆ ಚೆನ್ನಾಗಿ ಹಿಡಿಸಿತು ಮತ್ತು ಅವರು ಬ್ರಾಹ್ಮಣ ಧರ್ಮವನ್ನು ಬಿಟ್ಟುಕೊಟ್ಟು, ಬೌದ್ಧ ಧರ್ಮವನ್ನು ಅಂಗೀಕರಿಸಿದರು.

ಬೌದ್ಧಧರ್ಮದ ಉತ್ಕೃಷ್ಟವನ್ನು ಕಂಡು ಬ್ರಾಹ್ಮಣ ಧರ್ಮವು ತನ್ನನ್ನು ಹೇಗೆ ರಕ್ಷಿಸಿಕೊಂಡಿತೆಂಬುದು ನೋಡುವಂತಿದೆ. ಆ ಧರ್ಮವು ಅದುವರೆಗಿನ ತನ್ನ ಯಜ್ಞ, ಯಾಗಾದಿಗಳನ್ನು ಧಾರ್ಮಿಕ ವಿಧಿತಂತ್ರಗಳನ್ನು ಕೆಡವಿಕೊಂಡಿತು. ಗೋಮಾಂಸ ಭಕ್ಷಕರಾದ ಈ ಬ್ರಾಹ್ಮಣರು, ಬೌದ್ಧ ಧರ್ಮದ ಮೇಲೆ ಜಯ ಸಾಧಿಸುವ ಪಾಪಿ ದೃಷ್ಟಿಯಿಂದ ಗೋವನ್ನು ತಮ್ಮ ಪವಿತ್ರ ಗೋಮಾತೆಯಾಗಿಸಿಬಿಟ್ಟರು.

ಈ ರೀತಿಯಾಗಿ ಮಾಂಸಭಕ್ಷಕ ಬ್ರಾಹ್ಮಣರು ಶಾಖಾಹಾರಿಗಳಾಗಿ, ಸೋಮರಸ ಕುಡಿದು ತೂರಾಡುವವರ ರೂಪಾಂತರವಾಗಿ, ಸುರಾಪಾನವು ಮಹಾಪಾತಕ ಎಂದವರು ಸಾರಿದರು. ಕ್ಷತ್ರಿಯರನ್ನು ಬುದ್ಧಧರ್ಮದಿಂದ ಪರಾವೃತ್ತರಾಗಿಸಲು ಮತ್ತು ಅವರನ್ನು ಬ್ರಾಹ್ಮಣಧರ್ಮದಲ್ಲೇ ಉಳಿಸಿಕೊಳ್ಳಲು, ಅವರಿಗೆ ತಮ್ಮ ಸಮಾನ ಹಕ್ಕು ನೀಡಿದರು. ವೈಶ್ಯ ಶೂದ್ರರೂ ಬ್ರಾಹ್ಮನನ ಧರ್ಮ ತೊರೆದು ಹೋಗದಂತೆ ಬ್ರಾಹ್ಮಣರೂ, ಕ್ಷತ್ರಿಯರೂ ಪೊಲೀಸ್ ಸಿಪಾಯಿಗಳಂತೆ ಅವರ ಅತ್ತಿತ್ತ ಕಾವಲು ನಿಂತಿರಬೇಕೆಂಬರ್ಥದ ವಚನಗಳು ಬ್ರಾಹ್ಮಣ ಧರ್ಮಗ್ರಂಥಗಳಲ್ಲಿವೆ.

ಗೋವನ್ನು ಪವಿತ್ರವೆಂದು ಕರೆದು, ಬೌದ್ಧಧರ್ಮದ ಬೋಧನೆಗಳನ್ನು ಬ್ರಾಹ್ಮಣ ಧರ್ಮದಲ್ಲಿ ಅವಿರ್ಭಜಿಸಿಕೊಂಡು, ಯಜ್ಞಯಾಗಾದಿಗಳನ್ನು ಕೈ ಬಿಟ್ಟು, ಬೌದ್ಧಧರ್ಮಕ್ಕೆ ಹೋದವರನ್ನು ಮರಳಿ ತಮ್ಮ ಧರ್ಮಕ್ಕೆ ಸೇರಿಕೊಂಡರು. ಬುದ್ಧನ ಸಮತೆಯನ್ನು ಸ್ವೀಕರಿಸಿ, ಚಾತುರ್ವರ್ಣ್ಯದ ಚೌಕಟ್ಟು ಇಲ್ಲವಾಗುವಂತೆ ಮಾತ್ರ ಮಾಡಲಿಲ್ಲ ಎಂಬುದನ್ನು ಗಮನಿಸಬೇಕು. ಕ್ಷತ್ರಿಯರಿಗೆ ತಮ್ಮ ಸಮಾನ ಹಕ್ಕು ಕೊಟ್ಟು, ಬ್ರಾಹ್ಮಣ ವೈದಿಕ ದೇವತೆಗಳಾದ ಇಂದ್ರ, ವರುಣ, ಅಗ್ನಿ ಮುಂತಾದವರನ್ನು ಉಚ್ಚಾಟಿಸಿ, ಅವರ ಸ್ಥಳದಲ್ಲಿ ಕ್ಷತ್ರಿಯರಿಗೆ ಪ್ರಿಯವಾದ ರಾಮ, ಕೃಷ್ಣ ಮುಂತಾದ ದೇವರನ್ನು ಸ್ಥಾಪಿಸಿದರು. ಹೀಗೆ ಹಲವು ಹೊಂದಾಣಿಕೆಗಳಿಂದ ತಮ್ಮ ಉದ್ದೇಶ ಸಾಧಿಸಿದರು.

ಈ ಹೊಂದಾಣಿಕೆಯ ಚಾಣಕ್ಯ ಬುದ್ಧಿಯಿಂದ ಬೌದ್ಧಧರ್ಮವನ್ನು ತಿರಸ್ಕರಿಸುವಂತಹ ಸಂಗತಿ ನಡೆಯಿತು. ಬುದ್ಧನೇ ಗೋಯಜ್ಞವನ್ನು ನಿಲ್ಲಿಸಿದ್ದ, ಹಿಂದೂಗಳೂ ಗೋವಧೆ ತ್ಯಜಿಸಿದ್ದರು. ಇಂದು ನಾವು ಅಸ್ಪಶ್ಯರೆಂದುಕೊಳ್ಳುವವರೇ ಗೋವಧೆ ನಿಲ್ಲಿಸಿದ್ದರು. ಆದರೆ ಮಾಂಸ ಭಕ್ಷಣೆಯನ್ನು ಬೌದ್ಧರಾಗಲಿ, ಬ್ರಾಹ್ಮಣರಾಗಲಿ ನಿಲ್ಲಿಸಿರಲಿಲ್ಲ. ಆದರೆ, ದಾರಿದ್ರದ ಕಾರಣ ಇಂದು ಅಸ್ಪಶ್ಯರೆಂದುಕೊಳ್ಳುವವರು ತಾಜಾ ಮಾಂಸ ಕೊಳ್ಳಲು ಅಶಕ್ಯರಾಗಿದ್ದರು. ಮೃತ ಮಾಂಸ ಭಕ್ಷಿಸುವ ತಮ್ಮ ಹಳೆಯ ಅಭ್ಯಾಸವನ್ನು ಮಾತ್ರ ಅವರು ಮುಂದುವರಿಸಿದರು.

ಇಂದಿನ ಅಸ್ಪಶ್ಯರು ಮಾಡಿದ ‘ದೊಡ್ಡ ತಪ್ಪು’ ಯಾವುದೆಂದರೆ ದಾರಿದ್ರದಿಂದ ಪೀಡಿತವಾದ ಸಮಾಜದ ಪೊರೆಯಲ್ಲಿ ದೀರ್ಘಕಾಲ ಬೌದ್ಧಧರ್ಮಕ್ಕೆ ಅಂಟಿಕೊಂಡಿದ್ದುದು. ಅವರನ್ನು ದಾರಿಗೆ ತರಲು ಬ್ರಾಹ್ಮಣರು ವರ್ಷಾನುವರ್ಷ ಮಹಾಪ್ರಯಾಸವನ್ನೇ ಮಾಡಬೇಕಾಯಿತು. ನಂತರ ಅವರಿಗೆ ಕಠಿಣ ಬಹಿಷ್ಕಾರ ಹಾಕಿ, ಮರಳಿ ಅವರನ್ನು ಅಸ್ಪಶ್ಯತೆಯ ಕೂಪಕ್ಕೆ ತಳ್ಳಲಾಯಿತು.

ಅವರ ಮೃತಮಾಂಸ ಭಕ್ಷಣೆಯನ್ನೇ ಅವರ ವಿರುದ್ಧ ಶಸ್ತ್ರವಾಗಿ ಬಳಸಲಾಯ್ತು. ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದು, ಕೋಟ್ಯವಧಿ ಜನರನ್ನು ಅಸ್ಪಶ್ಯರೆಂದು ತಳ್ಳಿ ಹಾಕಿದರು. ಇತರ ಜನರು ಬೌದ್ಧಧರ್ಮ ತ್ಯಜಿಸಿದಂತೆ ಈ ಜನರು ತಮ್ಮ ಪಗಡಿ ಬಿಚ್ಚಲಿಲ್ಲವೆಂದು ಜನುಮ ಜನುಮದ ವಂಶಪರಂಪರಾಗತ ಶಿಕ್ಷೆ ಅನುಭವಿಸುವಂತಾಯಿತು. ಅಸ್ಪಶ್ಯತೆಯ ಪಾರಂಪರಿಕ ಕಥೆ ಹೀಗಿರುವಾಗ, ಇಂದಿನ ಸುಶಿಕ್ಷಣದ, ಸ್ವಾತಂತ್ರ ಧ್ಯೇಯದ ಮತ್ತು ಸಮಾಜ ಸಮತೆಯ ನವಯುಗದಲ್ಲೂ ಅವರು ಸುಖರೂಪದಿಂದಿರುವುದು ಆಶ್ಚರ್ಯವಲ್ಲವೇ?

ಡಾ. ಬಿ. ಆರ್. ಅಂಬೇಡ್ಕರ್ ಅವರಆಯ್ದ ಭಾಷಣ-ಬರಹಗಳು 

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75