ಇಲಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಲ್ಲವೇ?

Update: 2017-04-29 18:48 GMT

‘‘ಆಧಾರ್ ಕಾರ್ಡ್...ಆಧಾರ್ ಕಾರ್ಡ್...’’ ಎಂಬ ಕರೆ ಕೇಳಿ ಪತ್ರಕರ್ತ ಎಂಜಲು ಕಾಸಿಗೆ ಎಚ್ಚರವಾಯಿತು. ಯಾರೋ ತರಕಾರಿ ಮಾರುವವರು ಕೂಗಿರಬೇಕು ಎಂದು ಎನಿಸಿ ಬಾಗಿಲು ತೆರೆದರೆ, ಅಕಾರಿಯೊಬ್ಬ ತಳ್ಳುವ ಗಾಡಿಯಲ್ಲಿ ವಿವಿಧ ಮಾದರಿಯ ಆಧಾರ್ ಕಾರ್ಡ್‌ನ್ನು ಇಟ್ಟುಕೊಂಡು ಬಾಗಿಲ ಮುಂದೆ ನಿಂತಿದ್ದ.

‘‘ಸಾರ್ ಆಧಾರ್ ಕಾರ್ಡ್ ಇದೆಯಾ?’’ ಅಕಾರಿ ಕೇಳಿದ.

‘‘ಇದೆ ಕಣ್ರೀ...’’

‘‘ನಿಮ್ಮ ಮನೆಯೋರಿಗೆ...’’

‘‘ಅವರಿಗೂ ಇದೆ...’’

‘‘ಸಾರ್ ನಿಮ್ಮ ಕೊಟ್ಟಿಗೆಯಲ್ಲಿರುವ ದನಗಳಿಗೆ ಆಧಾರ್ ಕಾರ್ಡ್ ಇದೆಯಾ?’’

‘‘ಕೊಟ್ಟಿಗೆಯಲ್ಲಿ ಹಾಲು ಕರೆಯುವ ಹಸುಗಳಿದ್ದವು. ಅವನ್ನು ಗೋರಕ್ಷಕರು ತೆಗೆದುಕೊಂಡು ಹೋದರು...’’

‘‘ನೋಡಿ ಸಾರ್...ಹಸುಗಳಿಗೆ ಆಧಾರ್ ಇದ್ದಿದ್ರೆ ಗೋರಕ್ಷಕರಿಂದ ರಕ್ಷಣೆ ಪಡೆಯಬಹುದಿತ್ತು...’’

‘‘ಆಧಾರ್ ಇತ್ತು...ಆದ್ರೂ ಎತ್ಕೊಂಡು ಹೋದ್ರು...ಆಧಾರ್ ಕಾರ್ಡ್ ತೋರಿಸಿದಾಗ ಅದರ ಡೇಟ್ ಆ್ ಬರ್ತ್ ಸರ್ಟಿಫಿಕೇಟ್ ತೋರ್ಸಿ ಎಂದ್ರು...ಅದನ್ನು ತೋರಿಸಿದೆ...ಅದಕ್ಕೆ ಪಾಸ್‌ಪೋರ್ಟ್ ಮಾಡ್ಸಿದೀರಾ? ಎಂದು ಕೇಳಿದ್ರು. ಪಾಸ್‌ಪೋರ್ಟ್ ಯಾಕೆ ಮಾಡಿಸ್ಬೇಕು ಸಾರ್? ಎಂದು ಕೇಳಿದ್ದಕ್ಕೆ ಮನೆಯವರಿಗೆಲ್ಲ ಥಳಿಸಿ ಹಸುಗಳನ್ನು ಎತ್ಕೊಂಡು ಹೋದ್ರು...’’

‘‘ಸಾರ್...ನಿಮ್ಮ ಮನೆಯಲ್ಲಿ ಬೆಕ್ಕು ಇದೆಯಾ?’’

‘‘ಇದೆ ಸಾರ್...’’

‘‘ಅದಕ್ಕೆ ಆಧಾರ್ ಕಾರ್ಡ್ ಮಾಡ್ಸಿದ್ದೀರಾ...?’’

‘‘ಇಲ್ಲ...’’

‘‘ಹಾಗಾದ್ರೆ ತಕ್ಷಣ ಮಾಡಿಸ್ಕೊಳ್ಳಿ. ಆಧಾರ್ ಕಾರ್ಡ್ ಇಲ್ಲದೆ ಬೆಕ್ಕು ಸಾಕೋದು ಈಗ ಅಪರಾಧ....ತಗೊಳ್ಳಿ ಈ ಫಾರ್ಮ್ ಫಿಲ್ಲಪ್ ಮಾಡಿ...ತಕ್ಷಣ ಬೆಕ್ಕಿನ ಸಹಿತ ಆಧಾರ್ ಕಾರ್ಡ್ ಸೆಂಟರ್‌ಗೆ ಹೋಗಿ. ಅದರ ಹೆಬ್ಬೆಟ್ಟು ಹಾಕಿಸಿ ಆಧಾರ್ ಕಾರ್ಡ್ ಮಾಡಿಸ್ಕೊಳ್ಳಿ....’’

‘‘ಬೆಕ್ಕಿಗೆ ಆಧಾರ್ ಕಾರ್ಡ್ ಯಾಕೆ ಸಾರ್?’’ ಕಾಸಿ ಆತಂಕದಿಂದ ಕೇಳಿದ.

‘‘ನೋಡ್ರಿ...ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಬೇರೆ ಬೇರೆ ಯೋಜನೆ ಹಮ್ಮಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ಇರುವ ಬೆಕ್ಕುಗಳಿಗೆ ಪ್ರತೀ ದಿನ ಒಂದು ಲೀಟರ್ ಹಾಲು ಉಚಿತ ಕೊಡುತ್ತಾರಂತೆ...ಬೆಕ್ಕುಗಳಿಗೆ ಮರಿಗಳು ಇದ್ದರೆ ಅದಕ್ಕೂ ಬೇರೆ ಬೇರೆ ಆಧಾರ್ ಕಾರ್ಡ್ ಮಾಡಿಸ್ಬೇಕು...’’ ಅಕಾರಿ ವಿವರಿಸಿದ.

‘‘ಸಾರ್...ಬೆಕ್ಕುಗಳಿಗೆ ಹಾಲು ಕೊಡುವ ಯೋಜನೆ ಇರೋದು ನಿಜವಾ?’’ ಕಾಸಿ ಆಸೆಯಿಂದ ಕೇಳಿದ.

‘‘ನೋಡ್ರಿ...ನಮ್ಮ ಮೋದಿಯವರು ಮಾತು ಕೊಟ್ರು ಅಂದ್ರೆ ಮುಗೀತು. ಅವರು ಯಾವತ್ತಾದರೂ ಮಾತು ತಪ್ಪಿದ್ದಾರಾ?’’ ಅಕಾರಿ ಕೇಳಿದ.

‘‘ಅದಕ್ಕೆ ಸಾರ್ ಅನುಮಾನ....’’ ಕಾಸಿ ಹಲ್ಲುಕಿರಿಯುತ್ತಾ ಕೇಳಿದ.

‘‘ನೋಡ್ರಿ...ಹಾಗೆಲ್ಲ ಅಂದು ಸುಮ್ಮನೆ ದೇಶದ್ರೋಹ ಕೇಸು ಜಡಿಸಿಕೊಂಡು ಬಳ್ಳಾರಿ ಜೈಲು ಸೇರ್ಕೋಬೇಡಿ. ತಗ್ಗೊಳ್ಳಿ. ಈ ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ಬೆಕ್ಕಿಗೆ ಆಧಾರ್ ಕಾರ್ಡ್ ಮಾಡಿಸ್ಕೊಳ್ಲಿ...ಮುಂದಿನ ದಿನಗಳಲ್ಲಿ ಇನ್ನೂ ಒಂದು ಯೋಜನೆ ಇದೆ...’’

‘‘ಏನ್ ಸಾರ್ ಅದು...’’ ಕಾಸಿ ಆಸೆಯಿಂದ ಮತ್ತೆ ಕೇಳಿದ.

‘‘ಬೆಕ್ಕು ಸಾಕುವುದಕ್ಕೆ ಶೇ. 1ರಷ್ಟು ಸೆಸ್ ಹಾಕ್ತಾರೆ. ನೀವೇನು ಕೈಯಿಂದ ಕೊಡ್ಬೇಕಾಗಿಲ್ಲ. ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಕಟ್ ಆಗತ್ತೆ....’’

ಕಾಸಿ ಬೆಚ್ಚಿ ಬಿದ್ದು ಹೇಳಿದ ‘‘ಸಾರ್ ಅದು ನನ್ನ ಬೆಕ್ಕು ಅಲ್ಲ ಸಾರ್...ಪಕ್ಕದ ಮನೆಯ ಬೆಕ್ಕು...’’

‘‘ಜೋರಾಗಿ ಹೇಳ್ಬೇಡ್ರಿ...ಪಕ್ಕದ ಮನೆಯ ಬೆಕ್ಕನ್ನು ನೀವು ಅನಕೃತವಾಗಿ ಇಟ್ಕೊಂಡಿರುವುದಕ್ಕೆ ಐಟಿಯವರು ನಿಮ್ಮ ಮನೆ ಮೇಲೇ ದಾಳಿ ಮಾಡಬಹುದು...ಅದಿರ್ಲಿ...ನಿಮ್ಮ ಮನೇಲಿ ಇಲಿಗಳು ಇವೆಯಾ?’’

‘‘ಹೌದು ಸಾರ್. ಸಖತ್ ಇಲಿಗಳಿವೆ. ಅದಕ್ಕೆ ಈ ಬೆಕ್ಕು ಸಾಕಿರೋದು’’ ಕಾಸಿ ತಪ್ಪೊಪ್ಪಿಕೊಂಡ.

‘‘ಇಲಿಗಳಿಗೆ ಆಧಾರ್ ಕಾರ್ಡ್ ಮಾಡಿಸಿಲ್ಲವೇ?’’

‘‘ಸಾರ್ ಇಲಿಗಳನ್ನು ಸಾಕ್ತಿಲ್ಲ ಸಾರ್...ಅವುಗಳೇ ನಮ್ಮ ಮನೆಯನ್ನು ಆಕ್ರಮಿಸಿಕೊಂಡಿವೆ...’’ ಕಾಸಿ ವಿನೀತನಾಗಿ ಹೇಳಿದ.

‘‘ನೋಡ್ರೀ...ನಿಮ್ಮ ಮನೆಯಲ್ಲಿ ಯಾರೆಲ್ಲ ವಾಸಿಸುತ್ತಿದ್ದಾರೆಯೋ ಅವರಿಗೆಲ್ಲ ಆಧಾರ್ ಕಡ್ಡಾಯ ಎಂದು ಮೋದಿ ಸರಕಾರ ಆದೇಶ ಮಾಡಿದೆ. ಅಷ್ಟೇ ಅಲ್ಲ ಪ್ರತಿ ತಿಂಗಳೂ ನೀವು ಇಲಿಗಳ ಲೆಕ್ಕವನ್ನು ಸರಕಾರಕ್ಕೆ ಒಪ್ಪಿಸಬೇಕಾಗುತ್ತದೆ....ಹಾಗೆಯೇ ಇಲಿ ಸಾಕುವುದಕ್ಕೆ ಶೇ. 1ರಷ್ಟು ಸೆಸ್‌ನ್ನು ಸರಕಾರ ಕಡಿತ ಮಾಡುತ್ತದೆ. ನೀವೇನೂ ಕಟ್ಟಬೇಕಾಗಿಲ್ಲ. ನೇರವಾಗಿ ನಿಮ್ಮ ಅಕೌಂಟ್‌ನಿಂದ ಸರಕಾರವೇ ಕತ್ತರಿಸಿಕೊಳ್ಳುತ್ತದೆ...’’

‘‘ಇಲಿಗಳಿಗೆ ಯಾಕೆ ಸಾರ್ ನಾವು ತೆರಿಗೆ ಕಟ್ಟಬೇಕು?’’

‘‘ನೋಡ್ರೀ...ಇಲಿಜ್ವರ, ಪ್ಲೇಗ್ ಅದು ಇದು ಎಂದು ಕಾಯಿಲೆ ಬಂದರೆ ಅದರ ಜವಾಬ್ದಾರಿ ಸರಕಾರದ್ದು ತಾನೆ. ಅದಕ್ಕಾಗಿ ನೀವು ಇಲಿ ಟ್ಯಾಕ್ಸ್ ಕಟ್ಟಬೇಕು. ಅದಕ್ಕಾಗಿಯೇ ನಿಮ್ಮ ಮನೆಯಲ್ಲಿ ಎಷ್ಟು ಇಲಿಗಳಿವೆ ಎಂದು ಹೇಳಿ ಅದರ ಹೆಸರಲ್ಲಿ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಎಲ್ಲ ಮಾಡ್ಬೇಕಾಗತ್ತೆ....’’ ಅಕಾರಿ ಹೇಳಿದ.

‘‘ಸಾರ್ ನನ್ನ ಮನೆಗಳಲ್ಲಿ ಇಲಿಗಳಿದ್ದವು ಸಾರ್...ಆದರೆ ಅದನ್ನೆಲ್ಲ ನಿನ್ನೆ ರಾತ್ರಿ ಬೆಕ್ಕು ತಿಂದು ಬಿಟ್ಟಿವೆ...’’ ಕಾಸಿ ಮೆಲ್ಲಗೆ ಜಾರಿಕೊಳ್ಳಲು ಹವಣಿಸಿದ. ‘‘ನೋಡ್ರೀ...ಇಲಿಗಳನ್ನು ನೀವು ಸಾಕಿಲ್ಲ ಅನ್ನುತ್ತೀರಿ? ಹಾಗಾದರೆ ನಿಮ್ಮ ಬೆಕ್ಕು ಹೇಗೆ ಅದನ್ನು ತಿಂದು ಹಾಕಿತು? ನೀವು ಸಾಕದ ಇಲಿ ರಾಷ್ಟ್ರೀಯ ಸೊತ್ತು. ಇಲಿಗಳು ಮೋದಿ ಸಾಮ್ರಾಜ್ಯದಲ್ಲಿ ಮೂಷಿಕಾ ಎಂಬ ಅಭಿದಾನವನ್ನು ಪಡೆದು ಸರ್ವ ನಾಗರಿಕ ಹಕ್ಕುಗಳನ್ನು ಪಡೆದುಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಗೋರಕ್ಷಣಾ ಪಡೆ ಇದ್ದಂತೆಯೇ, ಮೂಷಿಕ ರಕ್ಷಣ ಪಡೆ ಜಾಗೃತವಾಗಲಿದೆ. ಆದುದರಿಂದ, ನಿಮ್ಮ ಬೆಕ್ಕು ತಿಂದ ಇಲಿಗಳ ಲೆಕ್ಕವನ್ನು ಹೇಳಿ ಅದಕ್ಕೆ ದಂಡ ಪಾವತಿ ಮಾಡಬೇಕಾಗುತ್ತದೆ... ನಿಮಗೆ ತಕ್ಷಣ ಜಿಲ್ಲಾಡಳಿತದಿಂದ ನೋಟಿಸ್ ಬರುತ್ತದೆ...ಅದಿರಲಿ...ನಿಮ್ಮ ಮನೆಯಲ್ಲಿ ಜಿರಳೆಗಳಿವೆಯಾ?’’

‘‘ಇಲ್ಲ ಸಾರ್...ಮೋದಿಯಾಣೆಗೂ ಇಲ್ಲ...ಆದಿತ್ಯನಾಥ್ ಆಣೆಗೂ ಇಲ್ಲ ಸಾರ್...’’

‘‘ಸರಿ...ಹಲ್ಲಿಗಳು....’’

‘‘ಅಯ್ಯಯ್ಯೋ ಹಲ್ಲಿಗಳಿಗೆ ನನ್ನ ಮನೆ ಕಂಡ್ರೆ ಆಗಲ್ಲ ಸಾರ್. ನಾನೇ ಎರಡು ಮೂರು ಹಲ್ಲಿಗಳನ್ನು ತಂದು ಸಾಕಲು ಯತ್ನಿಸಿದೆ. ಆದ್ರೆ ಹಲ್ಲಿಗಳಿಗೆ ನನ್ನ ಮನೆ ಇಷ್ಟವಾಗದೆ ಎರಡೇ ದಿನದಲ್ಲಿ ಹೊರಟು ಹೋದವು...’’ ಕಾಸಿ ತಪ್ಪಿಸಿಕೊಳ್ಳಲು ನೋಡಿದ.

‘‘ಎಲ್ಲಿಗೆ ಹೋದವು ಎಂದೇನಾದ್ರೂ ಗೊತ್ತಿದೆಯಾ?’’

‘‘ಇಲ್ಲ ಸಾರ್...ಅವು ನನಗೆ ಹೇಳಿ ಬಿಟ್ಟು ಹೋಗಲಿಲ್ಲ ಸಾರ್...’’ ಕಾಸಿ ಅಂಗಲಾಚಿದ.

‘‘ಪೊಲೀಸ್ ಕಂಪ್ಲೇಟ್ ಕೊಟ್ರಾ...?’’

‘‘ಹಲ್ಲಿಗಳಿಗೆ ಪೊಲೀಸ್ ಕಂಪ್ಲೇಟಾ?’’

‘‘ಸರಿ, ಗೋರಕ್ಷಕರಿಗಾದರೂ ಕಂಪ್ಲೇಟ್ ಕೊಟ್ರಾ...’’

‘‘ಇಲ್ಲ ಸಾರ್....’’

‘‘ನೋಡ್ರೀ ಹಲ್ಲಿ ನಮ್ಮ ದೇಶದ ಬೆನ್ನೆಲುಬು. ಮೋದಿಜಿ ಮತ್ತು ಗಾಂೀಜಿ ಇದನ್ನೇ ಹೇಳಿರೋದು...’’

‘‘ಅದು ಹಲ್ಲಿ ಅಲ್ಲ ಸಾರ್ ಹಳ್ಳಿ ಹಳ್ಳಿ...’’

‘‘ಹಲ್ಲಿಯಾದರೇನು, ಹಳ್ಳಿಯಾದರೇನು ಉಚ್ಚಾರದಲ್ಲಿ ಸಣ್ಣ ವ್ಯತ್ಯಾಸ. ಹಲ್ಲಿಯಲ್ಲೇ ನಮ್ಮ ದೇಶ ಇದೆ. ಆದುದರಿಂದ ತಕ್ಷಣ ಕಾಣೆಯಾಗಿರುವ ಹಲ್ಲಿಗಳನ್ನು ಪತ್ತೆ ಮಾಡಿ ಸರಕಾರಕ್ಕೆ ಒಪ್ಪಿಸಬೇಕು. ಇಲ್ಲವಾದರೆ ನಿಮ್ಮ ಅಕೌಂಟ್‌ನಿಂದ....’’

‘‘ಗೊತ್ತಾಯಿತು ಸಾರ್...ಒಟ್ಟಲ್ಲಿ ನನ್ನ ಅಕೌಂಟ್‌ನಲ್ಲಿ ಹಣ ಇರಬಾರದು ಅಷ್ಟೇ ಅಲ್ವಾ ಆಯಿತು ಸಾರ್...’’ ಎಂದವನೇ ಕಾಸಿ ಬಾಗಿಲು ಹಾಕಿಕೊಂಡ.

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News