ಕಲಿಯುಗದ ಕರ್ಣಾಕರ್ಣಿ

Update: 2017-05-13 18:38 GMT

ಕರ್ಣನ್ ಅವರನ್ನು ಶಿಕ್ಷಿಸುವುದರಲ್ಲಿ ಅಥವಾ ಕ್ಷಮಿಸುವುದರಲ್ಲಿ ಈ ಹಗರಣ ಪರ್ಯವಸಾನಗೊಳ್ಳಬಹುದು. ಮುಂದೆ ಇಂಥ ಅಶಿಸ್ತು ಮತ್ತು ಮುಜುಗರಗಳು ಮರುಕಳಿಸದಂತೆ ನೋಡಿಕೊಳ್ಳುವ ದೃಷ್ಟಿಯಿಂದ, ಕರ್ಣನ್ ಎತ್ತಿರುವ ಓಬೀರಾಯನ ಕಾಲದ ನ್ಯಾಯಾಲಯ ನಿಂದನೆ ಕಾನೂನು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂವಿಧಾನದ ಕಾರ್ಯಯೋಜನಾ ಕಲಂಗಳನ್ನು ಮರುವ್ಯಖ್ಯಾನಿಸಬೇಕಾದ ಅಗತ್ಯ ಈಗ ತಲೆದೋರಿದೆ.


ಮಹಾಭಾರತದ ಪ್ರಮುಖ ಪಾತ್ರಗಳಲ್ಲೊಂದಾದ ಕರ್ಣ, ತ್ಯಾಗ-ಪರಾಕ್ರಮಗಳಿಗೆ ಪ್ರಖ್ಯಾತನಾದವನು. ಇವನ ತಾಯಿ ಕನ್ಯೆಯಾಗಿದ್ದ ಕುಂತಿ. ಸಾಕು ತಂದೆ-ತಾಯಿಯರು ಇವನಿಗಿಟ್ಟ ಹೆಸರು ವಸುಷೇಣ; ಆದರೆ ಇವನ ತ್ಯಾಗ, ಶೌರ್ಯ, ಪ್ರತಾಪಗಳ ಕೀರ್ತಿ ಲೋಕದ ಎಲ್ಲರ ಕಿವಿಗೆ ಬಿದ್ದದ್ದರಿಂದ ಕರ್ಣ ಎಂಬ ಹೆಸರೂ ಬಂತು. ಇದು ದ್ವಾಪರ ಯುಗದ ಮಾತಾಯಿತು. ಈಗ ವಿವಾದಗಳ ಸರಮಾಲೆಯಿಂದಾಗಿ ಕರ್ಣಾಕರ್ಣಿಯಾಗಿ ಸುದ್ದಿಯಲ್ಲಿರುವ ಕಲಿಯುಗದ ಕರ್ಣನ್ ಒಬ್ಬರು ನಮ್ಮ ಮುಂದಿದ್ದಾರೆ. ಅವರೇ ನ್ಯಾಯಮೂರ್ತಿ ಕರ್ಣನ್-ಜಸ್ಟಿಸ್ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್. ಇವರು ಕೋಲ್ಕತಾ ಹೈಕೋರ್ಟಿನ ನ್ಯಾಯಾಧೀಶರು. ಪ್ರಸ್ತುತ ನ್ಯಾಯಾಲಯ ನಿಂದನೆಗಾಗಿ, ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯ ನ್ಯಾ. ಮೂ. ಕರ್ಣನ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತರಾದ ನ್ಯಾ. ಮೂ. ಕರ್ಣನ್ ಅವರು ತಮಿಳನಾಡಿನವರು. ಹುಟ್ಟಿದ್ದು (1955) ಕಡಲೂರ್ ಜಿಲ್ಲೆಯ ವಿರುಧಾಚಲಮ್ ತಾಲೂಕಿನ ಕರ್ಣಥಾಮ್ ಹಳ್ಳಿಯ ದಲಿತ ಕುಟುಂಬವೊಂದರಲ್ಲಿ. ವಕೀಲರಾಗಿದ್ದ ಕರ್ಣನ್ ಅವರು ಪ್ರಕಾಶಮಾನರಾಗಿ ಸಾರ್ವಜನಿಕ ಜೀವನದ ಗಮನಕ್ಕೆ ಬಂದದ್ದು 2009ರಲ್ಲಿ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡಾಗ. ನವೆಂಬರ್ 2011-ಹಿಂದುಳಿದ ವರ್ಗಕ್ಕೆ ಸೇರಿದ ತಮಗೆ ಸಹೋದ್ಯೋಗಿ ನ್ಯಾಯಾಧೀಶರುಗಳು ಕಿರುಕುಳ ನೀಡುತ್ತಿದ್ದಾರೆಂದು ಕರ್ಣನ್ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ದೂರು ಸಲ್ಲಿಸಿದರು. ಈ ದೂರು ವಿವಾದಾತ್ಮಕ ವ್ಯಕ್ತಿ ಕರ್ಣನ್ ಉಗಮಕ್ಕೆ ಕಾರಣವಾಯಿತು. ತದನಂತರ ಅವರು, ನ್ಯಾಯಮೂರ್ತಿಗಳಿಗೆ ತರವಲ್ಲವೆನ್ನುವಂಥ ನಡವಳಿಕೆಯಿಂದ ಒಂದಲ್ಲ ಒಂದು ಬಗೆಯಲ್ಲಿ ವಿವಾದದ ಕೇಂದ್ರ ಬಿಂದುವಾಗಿಯೇ ಮುಂದುವರಿದಿದ್ದಾರೆ.

ಜನವರಿ 2014: ಮದ್ರಾಸ್ ಹೈಕೋರ್ಟಿನ ನ್ಯಾಯ ಸಭೆ. ನ್ಯಾಯಪೀಠ ನ್ಯಾಯಾಧೀಶರುಗಳ ಹುದ್ದೆಗೆ ನೇಮಕಮಾಡಲು ಶಿಫಾರಸು ಮಾಡಲಾಗಿದ್ದ ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದ ಮೊಕದ್ದಮೆಯೊಂದರ ವಿಚಾರಣೆ ನಡೆಸುತ್ತಿತ್ತು. ವಿಚಾರಣೆ ಮಧ್ಯೆ ನ್ಯಾಯಾಂಗಣಕ್ಕೆ ಬಿರುಗಾಳಿಯಂತೆ ನುಗ್ಗಿದ ಕರ್ಣನ್ ಆಯ್ಕೆ ಅನ್ಯಾಯವಾದುದೆಂದೂ ಅದಕ್ಕೆ ಸಂಬಂಧಿಸಿದಂತೆ ತಾವು ಪ್ರಮಾಣಪತ್ರ ಸಲ್ಲಿಸಲಿರುವುದಾಗಿಯೂ ಆರ್ಭಟಿಸಿ ನ್ಯಾಯಾಂಗ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದರು. ಕರ್ಣನ್ ಅವರ ಈ ನಡತೆಯಿಂದ ಅಸಮಾಧಾನಗೊಂಡ ಸುಪ್ರೀಂ ಕೋರ್ಟ್ 2014ರ ಮಾರ್ಚಿ ಮಾಹೆಯಲ್ಲಿ ಕರ್ಣನ್ ಅವರ ವರ್ತನೆ ಬಗ್ಗೆ ‘‘ಔದಾರ್ಯರಹಿತ, ಅನುದಾತ್ತ ಮತ್ತು... ಅಸಭ್ಯ’’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಕರ್ಣನ್ ಅವರ ವಿವಾದಾತ್ಮಕ ವರ್ತನೆಗಳಿಂದ ಜಿಗುಪ್ಸೆಗೊಂಡ ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಆರ್.ಕೆ.ಅಗರ್ವಾಲ್, ಕರ್ಣನ್‌ರನ್ನು ಬೇರೆಡೆಗೆ ವರ್ಗಾಯಿಸುವಂತೆ ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸದಾಶಿವಂ ಅವರಿಗೆ ಪತ್ರ ಬರೆದರು.ಕರ್ಣನ್ ಹಠಾತ್ತನೆ ತಮ್ಮ ಕೊಠಡಿಗೆ ನುಗ್ಗಿ ವಹಿಸಿರುವ ಕೆಲಸದಲ್ಲಿ ಬದಲಾವಣೆ ಮಾಡುವಂತೆ ಕೂಗಾಡಿದರೆಂದೂ ಅಗರ್ವಾಲ್ ದೂರಿನಲ್ಲಿ ಆಪಾದಿಸಿದ್ದರು. 2015ರಲ್ಲಿ ಕರ್ಣನ್ ಅವರು ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ತಮ್ಮ ಕೈಕೆಳಗೆ ತರಬೇತಿಪಡೆಯುತ್ತಿರುವವರೊಬ್ಬರ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆಂದು ಆಪಾದಿಸಿದ್ದರು. ಸಿವಿಲ್ ನ್ಯಾಯಾಧೀಶರ ಆಯ್ಕೆಗೆ ಸಂಬಂದಿಸಿದಂತೆ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ನ್ಯಾ. ಮೂ. ಎಸ್. ಕೆ. ಕೌಲ್ ಅವರು ಹೊರಡಿಸಿದ್ದ ಆಡಳಿತಾತ್ಮಕ ಆಜ್ಞೆಯೊಂದನ್ನು ತಡೆಹಿಡಿದಿದ್ದರು ಹಾಗೂ ಕೌಲ್ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿರುದ್ಧ ಘೋರಕ್ರೌರ್ಯಗಳನ್ನು ನಿಷೇಧಿಸುವ ಕಾನೂನಿನನ್ವಯ ಕ್ರಮ ಜರಗಿಸುವಂತೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದರು. 2016 ಫೆಬ್ರವರಿಯಲ್ಲಿ ‘‘ಜಾತಿ ಪದ್ಧತಿ ಇನ್ನೂ ಉಳಿದಿರುವ ದೇಶದಲ್ಲಿ ಹುಟ್ಟಿದ್ದಕ್ಕಾಗಿ ತಮಗೆ ನಾಚಿಕೆಯಾಗುತ್ತಿದೆ’’ಯೆಂದು ಕರ್ಣನ್ ಹೇಳಿಕೆ ನೀಡಿದ್ದರು.

2016 ಮಾರ್ಚ್ 11ರಂದು ನ್ಯಾ.ಮೂ. ಕರ್ಣನ್ ಅವರನ್ನು ಕೋಲ್ಕತಾ ಹೈಕೋರ್ಟಿಗೆ ವರ್ಗಮಾಡಲಾಯಿತು. ಸುಪ್ರೀಂ ಕೋರ್ಟ್ ತಮ್ಮ ವಾದವನ್ನು ಆಲಿಸದೇ ವರ್ಗಮಾಡಿದೆಯೆಂದು ಆಪಾದಿಸಿದ ಕರ್ಣನ್ ವರ್ಗದ ಆಜ್ಞೆ ಸಂವಿಧಾನಬಾಹಿರವಾದುದೆಂದು ಹೇಳಿದರು ಹಾಗೂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಆಜ್ಞೆಮಾಡುವುದಾಗಿಯೂ ತಿಳಿಸಿದರು. ನ್ಯಾ.ಮೂ. ಕರ್ಣನ್ ಅವರ ಮುಂದಿನ ವಿವಾದಾತ್ಮಕ ಹೆಜ್ಜೆ ಪ್ರಧಾನ ಮಂತ್ರಿಯವರಿಗೆ ಪತ್ರಬರೆದುದಾಗಿತ್ತು. ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟುಗಳ ಅನೇಕ ಮಂದಿ ನ್ಯಾಯಾಧೀಶರು ಭ್ರಷ್ಟಾಚಾರಿಗಳೆಂದು ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಕರ್ಣನ್ ತಿಳಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿತು.

ವಿಚಾರಣೆ ಎದುರಿಸಲು ಕರ್ಣನ್ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠದೆದುರು ಹಾಜರಾಗಲೇ ಇಲ್ಲ. ಬದಲಾಗಿ ತಮ್ಮೆದುರು ವಿಚಾರಣೆಗೆ ಹಾಜರಾಗುವಂತೆ ಈ ನ್ಯಾಯಪೀಠದ ನ್ಯಾಯಾಧೀಶರುಗಳಿಗೇ ಸಮನ್ಸ್ ಜಾರಿಮಾಡಿದರು. ನಂತರ ಅವರ ಬಂಧನಕ್ಕೆ ಆಜ್ಞೆಮಾಡಿದರು. ಸಹಜವಾಗಿಯೇ ಇದು ನ್ಯಾಯಾಂಗಕ್ಕೆ ಕಿರಿಕಿರಿಯುಂಟುಮಾಡುವಂಥ, ಪೇಚಿಗೆ ಸಿಕ್ಕಿಸಿರುವಂಥ ಘಟನೆಯೇ ಸರಿ. ನ್ಯಾಯಾಧೀಶರು ನ್ಯಾಯಾಧೀಶರ ವಿರುದ್ಧವೇ ಸೆಣಸಾಡುತ್ತಿರುವ ಮತ್ತು ಸಂವಿಧಾನದತ್ತ ಹಕ್ಕುಗಳನ್ನು ಎತ್ತಿಹಿಡಿಯಲು ನಡೆದಿರುವ ಈ ‘ನ್ಯಾಯ ಸಮರ’; ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೇ ನ ಭೂತೋ.....

ಹೈಕೋರ್ಟಿನ ನ್ಯಾಯಾಧೀಶರೊಬ್ಬರನ್ನು ಶಿಸ್ತಿನ ಹಾದಿಗೆ ತರಲು ಸುಪ್ರೀಂ ಕೋರ್ಟ್ ನಡೆಸಿದ ಪ್ರಯತ್ನಗಳು ಆರು ತಿಂಗಳ ಕಾರಾಗೃಹ ಶಿಕ್ಷೆಯಲ್ಲಿ ಪರ್ಯವಸಾನಗೊಂಡಿರುವುದು ದುರದೃಷ್ಟಕರವೇ ಸರಿ. ತಮ್ಮ ವಿಚಿತ್ರ ನಡವಳಿಕೆಯಿಂದ ನ್ಯಾಯಾಂಗವನ್ನೇ ಹಾಸ್ಯಾಸ್ಪದವಾಗಿಸುವಂಥ ವರ್ತನೆಯನ್ನೇ ರೂಢಿಮಾಡಿಕೊಂಡ ಅವಿಧೇಯ ನ್ಯಾಯಾಧೀಶರನ್ನು ಸರಿದಾರಿಗೆ ತರಲು ನಡೆಸಿದ ಪ್ರಯತ್ನಗಳೆಲ್ಲಕ್ಕೂ ಸದರಿ ನಾಯಾಧೀಶರು ಸೊಪ್ಪುಹಾಕದಿದ್ದಾಗ, ತನ್ನ ಕೀರ್ತಿಪ್ರತಿಷ್ಠೆ-ಮಾನಮರ್ಯಾದೆಗಳನ್ನು ರಕ್ಷಿಸಿಕೊಳ್ಳಲು ಸುಪ್ರೀಂ ಕೋರ್ಟಿಗೆ ನ್ಯಾಯಾಂಗ ನಿಂದನೆಗಾಗಿ ಜೈಲು ಶಿಕ್ಷೆ ವಿಧಿಸುವುದು ಹೊರತು ಅನ್ಯಮಾರ್ಗ ಉಳಿದಿರಲಿಲ್ಲ. ಈ ತೀರ್ಪು ಅಕ್ಷೇಪಿಸಲಾಗದಂಥ ತೀರ್ಪು ಎಂಬ ಮಾತು ನಿಜವಿದ್ದೀತು.

ಈ ತೀರ್ಪನ್ನು ಎರಡು ಮುಖ್ಯಾಂಶಗಳ ದೃಷ್ಟಿಕೋನದಿಂದ ಪರಾಮರ್ಶಿಸಬೇಕಾಗುತ್ತದೆ.ಒಂದು, ಕರ್ಣನ್ ಹಲವು ಮಂದಿ ನ್ಯಾಯಾಧೀಶರುಗಳ ವಿರುದ್ಧ ಬೇಕಾಬಿಟ್ಟಿಯಾಗಿ ಭ್ರಷ್ಟಾಚಾರದ ಆಪಾದನೆ ಮಾಡಿದ್ದಾರೆ.ಅಲ್ಲದೆ ತಮ್ಮ ದಲಿತಮೂಲವನ್ನು ರಾಜಕೀಯ ಬಂಡವಾಳಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ಅವರು ತಮ್ಮ ಪರವಾಗಿ ತಾವೇ ತೀರ್ಪುಗಳನ್ನು ಬರೆದಿರುವುದೂ ಉಂಟು. ನಿಶ್ಚಯವಾಗಿಯೂ ಈ ಎಲ್ಲ ಬೆಳವಣಿಗೆಗಳು ಹಾಗೂ ಅವರ ಬಂಧನ ರಾಷ್ಟ್ರದ ನ್ಯಾಯಾಂಗವನ್ನು ಅದರ ಇತಿಹಾಸ ಕಂಡರಿಯದಿದ್ದಂಥ ಪಾತಾಳಕ್ಕೆ ನೂಕಿದೆ.ನ್ಯಾಯಾಂಗವನ್ನು ಮುಜುಗರಕ್ಕೀಡುಮಾಡಿದೆ. ಕರ್ಣನ್ ಅವರ ಮೇಲಿನ ತೀರ್ಪುಗಳು ಮತ್ತು ಟೀಕೆಗಳನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವ ಸುಪ್ರೀಂ ಕೋರ್ಟಿನ ಆದೇಶ ಅದು ಅನುಭವಿಸುತ್ತಿರುವ ಮುಜುಗರ ಮತ್ತು ಆಘಾತಗಳಿಗೆ ತೋರುಬೆರಳಾಗಿದೆ.

ಇಂಥದ್ದೊಂದು ಅವಹೇಳನಕಾರಿ ಸನ್ನಿವೇಶ-ಸಂದರ್ಭವನ್ನು ತಪ್ಪಿಸಬಹುದಿತ್ತಲ್ಲವೆ? ನ್ಯಾ.ಮೂ.ಕರ್ಣನ್ ಹೇಗೂ ಮುಂದಿನ ತಿಂಗಳು ಸೇವೆಯಿಂದ ನಿವೃತ್ತಿಹೊಂದುತ್ತಿದ್ದರು. ಅಲ್ಲಿಯವರೆಗೂ ಸುಮ್ಮನಿದ್ದು ನಂತರ ಶಿಕ್ಷೆಯ ತೀರ್ಪು ನೀಡಿದ್ದಿದ್ದರೆ ಸೇವಾವಧಿಯಲ್ಲೇ ನ್ಯಾಯಾಧೀಶರೊಬ್ಬರನ್ನು ಬಂಧಿಸಿದ ಮುಜುಗರವಾದರೂ ತಪ್ಪುತ್ತಿತ್ತು ಎಂದು ಅಭಿಪ್ರಾಯ ಪಡುವವರೂ ಉಂಟು. ತೀರ್ಪಿಗೆ ಒಂದುವಾರದಷ್ಟು ಹಿಂದೆಯೇ ಸರ್ವೋಚ್ಚ ನ್ಯಾಯಾಲಯಕ್ಕೆ ಕರ್ಣನ್ ಅವರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಸಂಶಯ ತಲೆದೋರಿರಬಹುದು.

ಏಕೆಂದರೆ, ಹೈಕೋರ್ಟಿನ ನ್ಯಾಯಧೀಶರೊಬ್ಬರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವಿರುದ್ಧ ಪೈಶಾಚಿಕ ವರ್ತನೆಯ ಆರೋಪ ಹೊರಿಸುವುದು ಹಾಗೂ ಅವರ ಮೇಲೆ ಕಾನೂನು ಕ್ರಮ ಜರಗಿಸುವ ಬೆದರಿಕೆ ಹಾಕುವುದು ಸಾಧಾರಣ ಸಂಗತಿಯಲ್ಲ, ಅಪರೂಪದ್ದು. ತಮಗೇ ತಿರುಗುಬಾಣವಾಗುವಂಥಾದ್ದು. ನಿರೀಕ್ಷೆಯಂತೆ ಕರ್ಣನ್ ನ್ಯಾಯಾಲಯದ ಆದೇಶಾನುಸಾರ ಮನೋಸ್ವಾಸ್ಥ್ಯ ಪರೀಕ್ಷೆಗೊಳಪಡಲು ನಿರಾಕರಿಸಿದ್ದಾರೆ. ಕರ್ಣನ್ ಅವರ ಮಾನಸಿಕ ಸ್ವಾಸ್ಥ್ಯವನ್ನೇ ಶಂಕಿಸಿದ್ದ ಸರ್ವೋಚ್ಚ ನ್ಯಾಯಾಲಯ ಅವರು ನಿವೃತ್ತಿಯಾಗುವವರೆಗೆ, ಇನ್ನೊಂದು ತಿಂಗಳು ಕಾಯುವಷ್ಟು ವ್ಯಾವಹಾರಿಕ ಜಾಣ್ಮೆ-ತಾಳ್ಮೆಗಳನ್ನು ತೋರಬಹುದಿತ್ತು ಎನ್ನುವ ಅಭಿಪ್ರಾಯವೂ ಇದೆ. ಈ ಅವಧಿಯಲ್ಲಿ ಕರ್ಣನ್ ಅವರು ನ್ಯಾಯ ನೀಡಿಕೆಗೆ ಸಂಬಂಧಿಸಿದಂತೆ ಏನನ್ನೂ ಮಾಡುವಂತಿರಲಿಲ್ಲ. ಅವರನ್ನು ನ್ಯಾಯ-ವಿಚಾರಣೆಗೆ ಸಂಬಂಧಿಸಿದ ಎಲ್ಲ ಕೆಲಸಕಾರ್ಯಗಳಿಂದ ಮುಕ್ತಗೊಳಿಸಲಾಗಿತ್ತು.

ಸುಪ್ರೀಂ ಕೋರ್ಟಿನ ಅಧಿಕಾರವನ್ನು ಪ್ರಶ್ನಿಸುವ ಕರ್ಣನ್ ಅವರ ಕ್ರಮಗಳನ್ನು ಯಾವರೀತಿಯಿಂದಲೂ ತಡೆಯಲಾಗದು ಎಂಬುದಕ್ಕೆ ತಮ್ಮ ಬಂಧನದ ತೀರ್ಪಿನ ಸಂವಿಧಾನಬದ್ಧತೆ ಪ್ರಶ್ನಿಸಿ ಅವರು ಸಲ್ಲಿಸಿರುವ ಅರ್ಜಿಯೇ ಸಾಕ್ಷಿ. ಕರ್ಣನ್ ಅವರ ಬಂಧನದ ವಾರೆಂಟ್ ಹಿಡಿದುಕೊಂಡು ತಮಿಳುನಾಡಿಗೆ ಹೋಗಿದ್ದ ಕೋಲ್ಕತಾ ಪೊಲೀಸರು ಬರಿಗೈಯಲ್ಲಿ ವಾಪಸಾಗಿದ್ದಾರೆ. ಕರ್ಣನ್ ಎಲ್ಲಿದ್ದಾರೋ ತಿಳಿಯದು. ಅವರು ಗಡಿ ದಾಟಿ ನೇಪಾಳ ಅಥವಾ ಬಾಂಗ್ಲಾದೇಶಕ್ಕೆ ಹೋಗಿರಬಹುದೆಂಬ ಊಹಾಪೋಹಗಳೂ ಕೇಳಿ ಬರುತ್ತಿವೆ. ಅವರು ಮೇ 10ರಂದು ಚೆನ್ನೈನಲ್ಲಿದ್ದರು ಎಂದು ವಕಾಲತ್ತಿಗೆ ಸಹಿಪಡೆದುಕೊಂಡಿರುವ ಅವರ ವಕೀಲರು ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.

ಕರ್ಣನ್ ಅವರ ಪ್ರಕರಣದ ವಿಶೇಷವೆಂದರೆ ಅದರಲ್ಲಿನ ನಾಟಕೀಯತೆ. ಅವರ ನಡೆನುಡಿಗಳಲ್ಲೇ ನಾಟಕೀಯತೆ ಇದೆ. ಗುರುವಾರ (ಮೇ 11) ಅವರ ವಕೀಲರಾದ ಮ್ಯಾಥ್ಯೂಸ್ ನೆಡುಂಪಾರಾ ಅವರು ತ್ರಿವಳಿ ತಲಾಖ್ ಮೊಕದ್ದಮೆಯ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೇಹರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ, ವಿಚಾರಣೆ ಕೊನೆಯ ಹಂತದಲ್ಲಿ ನಾಟಕೀಯವಾಗಿ ಪ್ರವೇಶಿಸಿ ಜೈಲು ಶಿಕ್ಷೆಯನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿರುವ ಕರ್ಣನ್ ಅವರ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯ ನಿಂದನೆ ವಿಚಾರಣೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿರುವ ಕರ್ಣನ್, ತಾವು ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರವನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಲಯ ನಿಂದನಾ ಕ್ರಮ ಜರಗಿಸಲಾಗದೆಂದೂ ಹಾಗೂ ಪ್ರಧಾನಿಯವರಿಗೆ ಪತ್ರ ಬರೆಯುವುದು ನಿಂದನೆಯಾಗದೆಂದೂ ವಾದಿಸಿದ್ದಾರೆ.

‘‘ನ್ಯಾಯಾಧೀಶರೊಬ್ಬರಿಲ್ಲದೆ ನ್ಯಾಯಾಲಯವಿರುವುದು ಸಾಧ್ಯವಿಲ್ಲವಾದರೂ ನ್ಯಾಯಾಧೀಶರೇ ನ್ಯಾಯಾಲಯವಲ್ಲ. ಆದ್ದರಿಂದ ಕೆಲವು ಮಂದಿ ಭ್ರಷ್ಟ ನ್ಯಾಯಾಧೀಶರ ಬಗ್ಗೆ ಪತ್ರ ಬರೆದಿರುವುದರಿಂದಾಗಿ ನನ್ನಿಂದ ನ್ಯಾಯಾಲಯ ನಿಂದನೆಯಾಗಿಲ್ಲ’’ ಎಂದು ಪ್ರತಿಪಾದಿಸಿರುವ ಕರ್ಣನ್, ತಮ್ಮ ಗೈರುಹಾಜರಿಯಲ್ಲಿ ನಿಂದನಾ ವಿಚಾರಣೆ ನಡೆಸಿರುವುದರಿಂದ ಸಹಜ ನ್ಯಾಯತತ್ವಗಳ ಉಲ್ಲಂಘನೆಯಾಗಿದೆ ಎಂದೂ ತಿಳಿಸಿದ್ದಾರೆ. ತಾವು ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯ ಪೀಠದ ಏಳು ಮಂದಿ ನ್ಯಾಯಾಧೀಶರ ಶಿಸ್ತಿನ ಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಸಂವಿಧಾನದ ಕಾರ್ಯಯೋಜನೆಯನ್ವಯ ಹೈಕೋರ್ಟ್ ಸುಪ್ರೀಂ ಕೋರ್ಟಿನಂತೆಯೇ ಸ್ವತಂತ್ರ. ತಮ್ಮನ್ನು ನೇಮಿಸಿರುವ ರಾಷ್ಟ್ರಪತಿಯವರಿಗೆ ಮಾತ್ರ ತಮ್ಮನ್ನು ಶಿಕ್ಷಿಸುವ ಅಧಿಕಾರವಿದೆ ಎಂಬ ವಾದವನ್ನೂ ಮಂಡಿಸಿದ್ದಾರೆ.

ಕರ್ಣನ್ ಅವರ ಈ ವಾದ ಸಂವಿಧಾನಾತ್ಮಕವಾಗಿ ಎಷ್ಟರಮಟ್ಟಿಗೆ ಸಮರ್ಥನೀಯ, ಅದು ಸರಿಯೇ ಎಂಬುದು ಅವರ ಅರ್ಜಿ ವಿಚಾರಣೆ ನಂತರವೇ ತಿಳಿಯಬೇಕು. ಕರ್ಣನ್ ಅವರ ಈ ವಾದ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಆರುತಿಂಗಳ ಶಿಕ್ಷೆಯನ್ನು ಖಾಯಂಗೊಳಿಸಲೂಬಹುದು. ಅಖೈರು ತೀರ್ಪು ಏನೇ ಇರಲಿ, ಕರ್ಣನ್ ಅವರ ಹಗರಣ ಕೆಲವು ಪ್ರಶ್ನೆಗಳಿಗೆಡೆ ಮಾಡಿಕೊಟ್ಟಿದೆ. ಮೊದಲನೆಯದಾಗಿ ಕರ್ಣನ್ ಅವರನ್ನು ಜೈಲಿಗೆ ಕಳುಹಿಸುವುದರಿಂದ ನಿಜವಾಗಿ ಏನನ್ನಾದರೂ ಸಾಧಿಸಿದಂತಾಗುವುದೇ? ಜೈಲಿಗೆ ಅಟ್ಟಿದಲ್ಲಿ, ಹುತಾತ್ಮನಂತೆ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ವಿರುದ್ಧ ಸಮರ ನಡೆಸಿ ಬಲಿಪಶು ಆದವರಂತೆ ತಮ್ಮನ್ನು ಬಿಂಬಿಸಿಕೊಳ್ಳಲು ಕರ್ಣನ್ ಅವರಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲದೇ ಇಲ್ಲ.

ಅಶಿಸ್ತಿನಿಂದ, ಅವಿಧೇಯತೆಯಿಂದ ವರ್ತಿಸುವ ಇಂಥ ನ್ಯಾಯಾಧೀಶರನ್ನು ಜೈಲಿಗಟ್ಟುವುದೊಂದೇ ಶಿಕ್ಷೆಯೇ? ಅಂಥವರನ್ನು ಸರಿದಾರಿಗೆ ತರುವಂಥ ಶಿಸ್ತು ವ್ಯವಸ್ಥೆ ನ್ಯಾಯಾಂಗದಲ್ಲಿ ಇಲ್ಲವೇ? ತಪ್ಪು ಎಸಗಿದ ನ್ಯಾಯಾಧೀಶರನ್ನು ಖಂಡನೆ/ದಂಡನೆಗೆ ಗುರಿಪಡಿಸುವ ಅಧಿಕಾರ ಸಂಸತ್ತಿಗಿದೆ. ಆದರೆ ಕರ್ಣನ್ ಅವರ ವಿಷಯದಲ್ಲಿ ನಮ್ಮ ರಾಜಕೀಯ ನಾಯಕರು ದಿವ್ಯ ಮೌನತಾಳಿರುವುದರ ಗುಟ್ಟೇನೋ ತಿಳಿಯದು. ಕರ್ಣನ್ ಅವರನ್ನು ಶಿಕ್ಷಿಸುವುದರಲ್ಲಿ ಅಥವಾ ಕ್ಷಮಿಸುವುದರಲ್ಲಿ ಈ ಹಗರಣ ಪರ್ಯವಸಾನಗೊಳ್ಳಬಹುದು.

ಮುಂದೆ ಇಂಥ ಅಶಿಸ್ತು ಮತ್ತು ಮುಜುಗರಗಳು ಮರುಕಳಿಸದಂತೆ ನೋಡಿಕೊಳ್ಳುವ ದೃಷ್ಟಿಯಿಂದ, ಕರ್ಣನ್ ಎತ್ತಿರುವ ಓಬೀರಾಯನ ಕಾಲದ ನ್ಯಾಯಾಲಯ ನಿಂದನೆ ಕಾನೂನು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂವಿಧಾನದ ಕಾರ್ಯಯೋಜನಾ ಕಲಂಗಳನ್ನು ಮರುವ್ಯಾಖ್ಯಾನಿಸಬೇಕಾದ ಅಗತ್ಯ ಈಗ ತಲೆದೋರಿದೆ. ಮಿಗಿಲಾಗಿ ದಲಿತ ಎಂಬ ಕಾರಣದಿಂದಾಗಿಯೇ ತಮಗೆ ಕಿರುಕುಳ ನೀಡಲಾಗಿದೆ ಇತ್ಯಾದಿ ಕರ್ಣನ್ ಅವರ ಆಪಾದನೆಗಳ ಸತ್ಯಾಸತ್ಯತೆಯನ್ನು ಜನತೆಗೆ ಮನವರಿಕೆ ಮಾಡಿಕೊಡುವುದೂ ನ್ಯಾಯಾಂಗದ ಪಾವಿತ್ರ್ಯದ ಹಿತದೃಷ್ಟಿಯಿಂದ ಉಚಿತ 

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News

ನಾಸ್ತಿಕ ಮದ