ಜಾಗತಿಕ ಕಂಪ್ಯೂಟರ್ ಜಾಲಗಳಲ್ಲಿ ಅಲ್ಲೋಲ ಕಲ್ಲೋಲ
ವಾಶಿಂಗ್ಟನ್, ಮೇ 16: ಜಗತ್ತಿನಾದ್ಯಂತದ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಬೃಹತ್ ಸೈಬರ್ ದಾಳಿಗೆ ಸಂಭಾವ್ಯ ಉತ್ತರ ಕೊರಿಯದ ನಂಟಿರುವ ಬಗ್ಗೆ ಭದ್ರತಾ ಸಂಶೋಧಕರು ಸೋಮವಾರ ವರದಿ ಮಾಡಿದ್ದಾರೆ.
ವೈರಸ್ ದಾಳಿ ಆರಂಭಗೊಂಡ ಕೆಲವೇ ದಿನಗಳಲ್ಲಿ, ಸೋಂಕಿಗೊಳಗಾದ ಕಂಪ್ಯೂಟರ್‌ಗಳ ಸಂಖ್ಯೆ ಮೂರು ಲಕ್ಷವನ್ನು ತಲುಪಿದೆ, ಆದರೆ ಸೋಂಕು ದರದಲ್ಲಿ ಇಳಿಕೆಯಾಗಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಬೃಹತ್ ಒತ್ತೆಹಣ ವೈರಸ್ (ರ್ಯಾನ್ಸಮ್‌ವೇರ್)ನ ಮೂಲಕ್ಕೆ ಸಂಬಂಧಿಸಿದಂತೆ ಗೂಗಲ್ ಸಂಶೋಧಕಿ ನೀಲ್ ಮೆಹ್ತಾ ಕಂಪ್ಯೂಟರ್ ಕೋಡ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈಗ ದಾಂಧಲೆ ನಡೆಸುತ್ತಿರುವ ಸುಲಿಗೆ ಸಾಫ್ಟ್‌ವೇರ್ ‘ವಾನ್ನಾಕ್ರೈ’ ಮತ್ತು ಉತ್ತರ ಕೊರಿಯ ನಡೆಸುತ್ತಿದೆಯೆಂದು ವ್ಯಾಪಕವಾಗಿ ಭಾವಿಸಲಾಗಿರುವ ಬೃಹತ್ ಕನ್ನ ಪ್ರಯತ್ನಗಳ ನಡುವೆ ಸಾಮ್ಯತೆ ಇರುವುದನ್ನು ಈ ಕಂಪ್ಯೂಟರ್ ಕೋಡ್ ತೋರಿಸುತ್ತದೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ರಶ್ಯದ ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿ, ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದಿದೆ.
‘‘ಈ ದಾಳಿಯ ಸುತ್ತವಿರುವ ಕೆಲವು ರಹಸ್ಯಗಳನ್ನು ಪರಿಹರಿಸಲು ಈ ಕೋಡ್ ನೆರವಾಗಬಹುದು ಎಂದು ನಾವು ಭಾವಿಸುತ್ತೇವೆ’’ ಎಂದು ಕ್ಯಾಸ್ಪರ್ಸ್ಕಿಯ ಸಂಶೋಧಕರು ಹೇಳಿದ್ದಾರೆ.
ಉತ್ತರ ಕೊರಿಯದ ಬಗ್ಗೆ ಅನುಮಾನ ಪಟ್ಟಿರುವುದು ಸರಿಯಾಗಿಯೇ ಇದೆ ಎಂದು ಇಸ್ರೇಲ್‌ನ ಭದ್ರತ ಸಂಸ್ಥೆ ಇಂಟಿಝರ್ ಲ್ಯಾಬ್ಸ್ ಹೇಳಿದೆ.
ಅಮೆರಿಕ ರಶ್ಯ ಆರೋಪ, ಪ್ರತ್ಯಾರೋಪ
‘ಒತ್ತೆಹಣ’ ವೈರಸ್ ದಾಳಿಗೆ ಅಮೆರಿಕವನ್ನೇ ದೂರಬೇಕು ಎಂಬ ಆರೋಪಗಳನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಉನ್ನತ ಸೈಬರ್ ಮತ್ತು ಆಂತರಿಕ ಭದ್ರತಾ ಸಲಹೆಗಾರ ಟಾಮ್ ಬೊಸರ್ಟ್ ತಳ್ಳಿಹಾಕಿದ್ದಾರೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಪತ್ತೆಹಚ್ಚಿರುವ ಹಾಗೂ ಬಳಿಕ ಸೋರಿಕೆ ಮಾಡಿರುವ ‘ದೋಷ’ವೇ ಇಂದಿನ ಈ ಬೃಹತ್ ಸೈಬರ್ ದಾಳಿಗೆ ಕಾರಣವಾಗಿದೆ ಎಂಬ ಆರೋಪಗಳಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘‘ಇದು ಕಂಪ್ಯೂಟರ್‌ಗಳ ದತ್ತಾಂಶಗಳನ್ನು ಒತ್ತೆಯಿಟ್ಟುಕೊಳ್ಳಲು ಎನ್‌ಎಸ್‌ಎ ಅಭಿವೃದ್ಧಿಪಡಿಸಿದ ಸಲಕರಣೆಯಲ್ಲ’’ ಎಂದು ಅವರು ಹೇಳಿದರು. ಅಮೆರಿಕ ಸರಕಾರದ ಯಾವುದೇ ಜಾಲಕ್ಕೆ ಇದರಿಂದ ಹಾನಿಯಾಗಿಲ್ಲ’’ ಎಂದು ಅವರು ನುಡಿದರು.
‘‘ಇದು ಜಾಗತಿಕ ದಾಳಿಯಲ್ಲ’’ ಎಂದು ಅವರು ಪ್ರತಿಪಾದಿಸಿದರು. ಈ ಮೊದಲು, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕದತ್ತವೇ ಬೆಟ್ಟು ಮಾಡಿದ್ದರು.
‘‘ಬಾಟಲಿಯಿಂದ ಹೊರಬಿಟ್ಟ ರಾಕ್ಷಸನು, ಅದರಲ್ಲೂ ಮುಖ್ಯವಾಗಿ ಗುಪ್ತಚರ ಸಂಸ್ಥೆಗಳು ಸೃಷ್ಟಿಸಿದ ರಾಕ್ಷಸರು ತಮ್ಮ ಸೃಷ್ಟಿಕರ್ತರನ್ನೇ ನಾಶಪಡಿಸಲು ಪ್ರಯತ್ನಿಸುತ್ತಾರೆ’’ ಎಂದು ಬೀಜಿಂಗ್‌ನ ಶೃಂಗಸಮ್ಮೇಳನದ ನೇಪಥ್ಯದಲ್ಲಿ ಪುಟಿನ್ ಸೋಮವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಮೈಕ್ರೊಸಾಫ್ಟ್‌ನಿಂದ ಅಮೆರಿಕಕ್ಕೆ ತರಾಟೆ
ತನ್ನಿಂದ ರಕ್ಷಿಸಿಡಲು ಸಾಧ್ಯವಿಲ್ಲದ ಸಾಫ್ಟ್‌ವೇರ್ ದೋಷಗಳನ್ನು ಸಂಗ್ರಹಿಸಿಡುತ್ತಿರುವುದಕ್ಕಾಗಿ ಮೈಕ್ರೊಸಾಫ್ಟ್ ಕಾರ್ಪ್ ಅಧ್ಯಕ್ಷ ಬ್ರಾಡ್ ಸ್ಮಿತ್ ಅಮೆರಿಕ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
‘‘ಸರಕಾರದ ವಶದಲ್ಲಿರುವ ದುರ್ಬಲ ಅಂಶಗಳು ಪದೇ ಪದೇ ಸಾರ್ವಜನಿಕವಾಗಿ ಸೋರಿಕೆಯಾಗುತ್ತಿದೆ ಹಾಗೂ ಅದು ಬೃಹತ್ ಹಾನಿಯನ್ನು ಉಂಟುಮಾಡುತ್ತಿದೆ’’ ಎಂದು ಸ್ಮಿತ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಎನ್‌ಎಸ್‌ಎ ‘ಕನ್ನ ಸಲಕರಣೆ’ ಬಳಸಿ ದಾಳಿ
ಮೈಕ್ರೊಸಾಫ್ಟ್ ವಿಂಡೋಸ್ ಸಾಫ್ಟ್‌ವೇರ್‌ನಲ್ಲಿರುವ ದೋಷವೇ ಇಂದಿನ ಈ ಅಗಾಧ ಸೈಬರ್ ದಾಳಿಗೆ ಕಾರಣವಾಗಿದೆ. ಈ ದೋಷವನ್ನು ಬಳಸಿಕೊಂಡು ಎನ್‌ಎಸ್‌ಎ ತನ್ನ ಸ್ವಂತ ಉದ್ದೇಶಕ್ಕಾಗಿ ಕನ್ನ ಸಾಧನವೊಂದನ್ನು ನಿರ್ಮಿಸಿತು. ಆದರೆ, ಆ ಸಾಧನವು ‘ಶ್ಯಾಡೋ ಬ್ರೋಕರ್ಸ್’ ಎಂಬ ಹೆಸರಿನ ನಿಗೂಢ ಗುಂಪಿನ ಪಾಲಾಯಿತು. ಆ ಗುಂಪು ಈ ಸಾಧನಗಳನ್ನು ಬಳಿಕ ಆನ್‌ಲೈನ್‌ನಲ್ಲಿ ಬಹಿರಂಗಪಡಿಸಿತು.
‘ಬಿಟ್ ಕಾಯಿನ್’ ಮೂಲಕವೇ ಯಾಕೆ ಪಾವತಿ?
‘ವಾನ್ನಾಕ್ರೈ’ ವೈರಸ್ ದಾಳಿಗೆ ತುತ್ತಾದ ಕಂಪ್ಯೂಟರ್‌ಗಳಲ್ಲಿ ನಿಮ್ಮ ಫೈಲ್‌ಗಳನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ಕಂಪ್ಯೂಟರ್‌ಗಳು ತೆರೆದುಕೊಳ್ಳುವುದಿಲ್ಲ. ಕನಿಷ್ಠ 300 ಡಾಲರ್ ಮೊತ್ತವನ್ನು ಬಿಟ್‌ಕಾಯಿನ್ ಮೂಲಕ ಪಾವತಿಸಲು ನೀವು ಒಪ್ಪಿಕೊಂಡರೆ ನಿಮ್ಮ ಕಂಪ್ಯೂಟರ್ ಸರಿಯಾಗುತ್ತದೆ ಎಂದು ಕನ್ನಗಾರರ ಸಂದೇಶ ತಿಳಿಸುತ್ತದೆ.
ಹಾಗಾದರೆ, ‘ಬಿಟ್ ಕಾಯಿನ್’ ಮೂಲಕವೇ ಪಾವತಿ ಯಾಕೆ?
‘ಬಿಟ್ ಕಾಯಿನ್’ ಎನ್ನುವುದು ಡಿಜಿಟಲ್ ಪಾವತಿ ವಿಧಾನ. ಡಾಲರ್ ಮತ್ತು ಯುರೋ ಮೂಲಕ ಇದಕ್ಕೆ ಪಾವತಿ ಮಾಡಬಹುದು. ಇದರಲ್ಲಿ ಮಾಡಲಾಗುವ ವ್ಯವಹಾರ ದಾಖಲಾಗುತ್ತದೆ, ಆದರೆ, ಎಲ್ಲಿಯೂ ವ್ಯವಹಾರ ಮಾಡುವವರ ಗುರುತು ದಾಖಲಾಗುವುದಿಲ್ಲ.