ಪ್ರಜಾಪ್ರಭುತ್ವವಾದ ಅಥವಾ ನಾಜೀವಾದ
ಭಾರತೀಯ ಸರಕಾರದ ಶ್ರಮ ಸದಸ್ಯರಾದ ಮಾನವೀಯ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರು ಪ್ರಕಟಣೆಗೆಂದು 27 ಜುಲೈ 1942ರಂದು ವೃತ್ತಪತ್ರಗಳಿಗೆ ನೀಡಿದ ಹೇಳಿಕೆ:
‘‘ಯಾರೂ ಗಾಂಧೀಜಿಯವರ ಯೋಚನೆಗಳು ಯಾವಾಗಲೂ ಒಂದೇ ಬಗೆಯಾಗಿ ಇರುವವೆಂದು ನಿರೀಕ್ಷಿಸುವುದಿಲ್ಲ. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳುವರೆಂದು ಎಲ್ಲರೂ ಆಶಿಸಿದ್ದರು. ಅಲ್ಲದೆ ಎಲ್ಲರಿಗೂ ಹೀಗೆ ಆಶಿಸುವ ಅಧಿಕಾರ ಇದೆ. ಗಾಂಧೀಜಿಯವರು ನಡೆಸುತ್ತಿರುವ ಜನ-ಆಂದೋಲನವು ಹೊಣೆಗೇಡಿತನದ್ದು ಹಾಗೂ ಹುಚ್ಚುತನದ್ದು ಎನ್ನುವಲ್ಲಿ ಯಾವುದೇ ಸಂದೇಹವಿಲ್ಲ.’’
‘‘ಇಂತಹ ದೊಡ್ಡ ಸಂಕಟಕಾಲದಲ್ಲಿ, ಇಂತಹ ಅನರ್ಥಕರವಾದ ಯೋಜನೆಯನ್ನು ನಡೆಸುವುದು ಆವಶ್ಯಕವೆಂದು ಗಾಂಧೀಜಿಯವರು ಏಕೆ ಬಗೆದರೆಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನನಗೆ ಕೆಲವು ಸಂಗತಿಗಳು ಸ್ಪಷ್ಟವಾಗಿವೆ. ಭಾರತೀಯರು ರಾಜಕೀಯ ಉದ್ದೇಶಗಳನ್ನು ಪಡೆದುಕೊಳ್ಳುವ ಕುರಿತು, ಆಂಗ್ಲರು ಆಡಳಿತವನ್ನು ನಡೆಸುವ ಅಧಿಕಾರವನ್ನು ಅವರಿಗೆ ಹೊತ್ತುಹೊತ್ತಿಗೆ ನೀಡುತ್ತಲೇ ಬಂದಿರುವರೆಂಬುದನ್ನು ಹಾಗೂ ಇತ್ತೀಚೆಗೆ ಇಂಥ ಅಧಿಕಾರಗಳು ಶೀಘ್ರವಾಗಿ ಲಭಿಸುತ್ತಿವೆ ಎಂಬ ಸಂಗತಿಯನ್ನು ಯಾರಾದರೂ ಒಪ್ಪಿಕೊಳ್ಳದೆ ಇರಲಾರರು, ಹೀಗೆಯೇ ಇನ್ನೊಂದು ಸಂಗತಿಯೂ ಸ್ಪಷ್ಟವಿದೆ. ಅದೆಂದರೆ, ಆಂಗ್ಲರು ಕೊನೆಯ ಹೊಂಡವನ್ನು ತಲುಪಿದ ಬಳಿಕ ಯುದ್ಧವನ್ನು ಸ್ವೀಕರಿಸಲು ಬಯಸುವುದಿಲ್ಲವಲ್ಲದೆ ಭಾರತದ ರಾಜಕೀಯ ಉನ್ನತಿಗೆ ಯಾವುದೇ ಬಗೆಯ ಅಡೆತಡೆಯನ್ನು ಒಡ್ಡಲು ಇಚ್ಛಿಸುವುದಿಲ್ಲ. ಈ ಸಂಗತಿಗಾಗಿ ಪುರಾವೆ ಅಗತ್ಯವೆನಿಸಿದರೆ ಅದಕ್ಕಾಗಿ ಕ್ರಿಪ್ಸ್‌ರವರ ಮಸೂದೆಗಳು ಹಾಜರಿವೆ. ಕಾಂಗ್ರೆಸ್‌ನ ಬೇಡಿಕೆಗಳಾದ (1) ಸ್ವಾತಂತ್ರ ಮತ್ತು (2) ಸಂವಿಧಾನ-ಸಮಾವೇಶ ಇವೆರಡನ್ನೂ ಅವುಗಳಲ್ಲಿ ಒಪ್ಪಿಕೊಳ್ಳಲಾಗಿದೆ.’’
‘‘ಕ್ರಿಪ್ಸ್ ಮಸೂದೆಗಳು ಆಗಲೇ ಬಂದಿರುವಾಗ, ಆಂಗ್ಲರು ಭಾರತೀಯರಿಗೆ ಅಧಿಕಾರವನ್ನು ಕೊಡಲು ಇಚ್ಛಿಸುವುದಿಲ್ಲವೆಂಬ ಗಾಂಧೀಜಿಯವರ ಹೇಳಿಕೆಯನ್ನು ಒಪ್ಪಿಕೊಳ್ಳುವುದು ಕಷ್ಟ. ತಿಳಿದೂ ತಿಳಿದೂ ಬೇಕೆಂದೇ ಈ ಸುಳ್ಳು ಮಾತನ್ನು ಹೇಳಲಾಗಿದೆ. ನನ್ನ ಅರಿವಿನಂತೆ, ಭಾರತೀಯರು ವಸಾಹತುಶಾಹಿಯ ಸ್ವರಾಜ್ಯಕ್ಕಿಂತ ಸ್ವಾತಂತ್ರವನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದರೆ, ಕ್ರಿಪ್ಸ್ ಅವರ ಮಸೂದೆಯನ್ನು ತಳ್ಳಿಹಾಕುವುದೆಂದರೆ, ಬ್ರಿಟಿಷ್ ಸರಕಾರವು ಸ್ವಾತಂತ್ರವನ್ನು ಕೊಡುವ ಬಾಧ್ಯತೆಯನ್ನು ಹೊಂದಿಲ್ಲ ಎಂದಲ್ಲ. ಕ್ರಿಪ್ಸ್ ಮಸೂದೆಗಳಿಂದಾಗಿ ಸ್ವಾತಂತ್ರ ಹಾಗೂ ಸಂವಿಧಾನ- ಸಮಾವೇಶಗಳು ಲಭಿಸುತ್ತಿವೆಯಾದರೂ ಕಾಂಗ್ರೆಸ್‌ಅವನ್ನು ಒಪ್ಪಿಕೊತ್ತಿಲ್ಲವೇಕೆ ಎನ್ನುವ ಮಾತು ನನಗೆ ಅರ್ಥವಾಗುತ್ತಿಲ್ಲ.’’
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)
ಭಾರತೀಯರಿಗೆ ಭದ್ರತಾ ಇಲಾಖೆಯನ್ನು ಕೊಡಲಾಗುತ್ತಿಲ್ಲವೇಕೆ ಎನ್ನುವುದು ಸವಿನಯ ಕಾನೂನು-ಭಂಗ ಚಳವಳಿಯನ್ನು ನಡೆಸಲು ಕಾರಣವಾಗಿದ್ದರೆ, ಮುಂದಾಲೋಚನೆಯಿಲ್ಲದ ಇಂಥ ವಿಚಾರಗಳನ್ನು ಸೂಕ್ತವೆಂದು ತೀರ ಕಡಿಮೆ ಜನ ಬಗೆಯುವರೆಂಬ ವಿಶ್ವಾಸ ನನ್ನಲ್ಲಿದೆ. ಮೊದಲಿಗಂತೂ ಕಾಂಗ್ರೆಸ್, ಆಂಗ್ಲರು ಯುದ್ಧದ ಹಿಂದಿರುವ ತಮ್ಮ ಉದ್ದೇಶಗಳನ್ನು ಹೇಳಿಬಿಡಬೇಕೆಂದು ಅವರೆದುರು ತನ್ನ ಬೇಡಿಕೆಯನ್ನು ಮುಂದಿಟ್ಟಿತ್ತು. ಆದರೆ ಅದು, ಯುದ್ಧ ನಡೆಯುತ್ತಿರುವಾಗಲೇ ಅವುಗಳನ್ನು ಅನುಷ್ಠಾನಕ್ಕೆ ತರಬೇಕೆಂಬ ಬೇಡಿಕೆಯಾಗಿರಲಿಲ್ಲ. ಎರಡನೆಯ ಸಂಗತಿಯೆಂದರೆ, ನನಗೆ ತಿಳಿದಿರುವ ಮಟ್ಟಿಗೆ ಭದ್ರತೆಯ ಕಲೆಯನ್ನರಿತ ಹಾಗೂ ಸೈನಿಕ ಕಾರ್ಯಾಚರಣೆಯನ್ನು ನಡೆಸಬಲ್ಲ ಭಾರತೀಯ ರಾಜಕೀಯ ತಜ್ಞನು ಒಬ್ಬನೂ ಇಲ್ಲ. ಯಾವುದೇ ಬಗೆಯ ಸಹಾನುಭೂತಿ ಇಲ್ಲ
ಮೂರನೆಯ ಸಂಗತಿ ಯಾವುದೆಂದರೆ, ಕ್ರಿಪ್ಸ್ ಮಸೂದೆಯಂತೆ ಎಲ್ಲ ಇಲಾಖೆಗಳನ್ನೂ ಒಪ್ಪಿಸಿ, ಭದ್ರತಾ ಇಲಾಖೆಯನ್ನು ಮಾತ್ರ ನೀಡದ್ದಕ್ಕಾಗಿ ಜಗಳಾಡುವುದೆಂದರೆ ಹುಡುಗಾಟಿಕೆಯಾಯಿತು. ಹಸ್ತಾಂತರಗೊಂಡ ಇಲಾಖೆಗಳು ಆವಶ್ಯಕ ಹಾಗೂ ಸೂಕ್ತ ಸಂಗತಿಗಳಿಗೆ ಒತ್ತು ನೀಡಿದ್ದರೆ ಸುರಕ್ಷಿತವಾದ ಇಲಾಖೆಗಳು ಹಠ ಹಿಡಿಯುತ್ತಿರಲಿಲ್ಲ ಎಂಬುದನ್ನು ತಿಳುವಳಿಕೆಯುಳ್ಳ ಯಾವನಾದರೂ ಅರ್ಥಮಾಡಿಕೊಳ್ಳಬಲ್ಲನು. ಗವರ್ನರರ ವಿಶೇಷಾಧಿಕಾರಗಳನ್ನು ಕಾರ್ಯಾನ್ವಿತಗೊಳಿಸುವಾಗ ಕಾಂಗ್ರೆಸ್‌ಅಧಿಕಾರ ಗ್ರಹಣವನ್ನು ಮಾಡಿದ ಕಾಲಕ್ಕೂ ಇಂಥದೇ ಸಂಗತಿ ನಡೆಯಿತು. ಕಾಂಗ್ರೆಸ್ ಆಗಿನ ತನ್ನ ಅನುಭವಗಳನ್ನು ಮರೆತೇ ಬಿಟ್ಟಿರುವುದು ತುಂಬ ಅಚ್ಚರಿಯ ಸಂಗತಿ. ‘‘ಕಾಂಗ್ರೆಸ್‌ನ ಈ ಸವಿನಯ ಕಾನೂನು ಭಂಗ ಚಳುವಳಿಯು ಯಾವುದೇ ಬಗೆಯ ಸಹಾನುಭೂತಿಗೆ ತಕ್ಕುದಲ್ಲವೆಂದು ನನ್ನ ಸ್ಪಷ್ಟ ಅಭಿಪ್ರಾಯ.
ಅದು ತನಗೆ ಒದಗಿಸಲಾದ ದೇಶಸೇವೆಯ ಅವಕಾಶವನ್ನು ತಳ್ಳಿಹಾಕಿತು. ಇದನ್ನು ಕಂಡು, ಗಾಂಧೀಜಿಯವರ ಈ ಕೆಲಸವು ಯಾವ ರೀತಿಯಾಗಿ ದೇಶಕ್ಕೆ ಹಿತಕರವೆಂಬುದು ನನಗೆ ತಿಳಿಯದಂತಾಗಿದೆ. ಗಾಂಧೀಜಿ ಹಾಗೂ ಅವರ ಕಾಂಗ್ರೆಸ್ ಯುದ್ಧ ಶುರುವಾಗುವ ಹೊತ್ತಿನಲ್ಲಿ ಕಳೆದುಕೊಂಡ ಗೌರವವನ್ನು ಮತ್ತೆ ಮರಳಿ ಪಡೆಯಲು ಯತ್ನಿಸುತ್ತಿರುವರೆಂದು ನನಗೆ ತಿಳಿದು ಬಂದಿದೆ. ಕಾಂಗ್ರೆಸ್ ಇವೆರಡರಲ್ಲಿ ಯಾವುದೇ ಒಂದು ಬಗೆಯಾಗಿ ಗೌರವದಿಂದ ಇರಬಲ್ಲುದು. ಪ್ರಕಟ ಆಂದೋಲನ ಇಲ್ಲವೆ ಅಧಿಕಾರವನ್ನು ಸ್ವೀಕರಿಸುವ ಮೂಲಕ ಅದು ಜೀವಿಸಬಲ್ಲುದು. ಗಾಂಧೀಜಿಯವರು ಕಾಂಗ್ರೆಸ್‌ಗೆ ಅಧಿಕಾರವನ್ನು ತ್ಯಜಿಸಹಚ್ಚಿ, ಸತ್ಯಾಗ್ರಹದಲ್ಲಿ ಪಾಲ್ಗೊಳ್ಳದಂತೆ ಅದನ್ನು ತಡೆದರು. ಏನನ್ನೂ ಮಾಡದ ತಮ್ಮೀ ನೀತಿಯಿಂದಾಗಿ ಗಾಂಧೀಜಿಯವರು ಕಾಂಗ್ರೆಸ್‌ನ ಗೌರವಕ್ಕೆ ಉಂಟುಮಾಡಿದ ಗಾಯವು ಅವರಿಗೂ, ಕಾಂಗ್ರೆಸ್‌ಗೂ ಅನರ್ಥಕಾರಿಯಾಯಿತು.
ತಮ್ಮ ಹಳೆಯ ಸ್ಥಾನವನ್ನು ಮರಳಿ ಪಡೆಯಲೆಂದೇ ಅವರು ಇಂಥ ದುಸ್ಸಾಹಸದ ನಡೆಯನ್ನು ಆರಂಭಿಸಿದರು. ಈ ನಡೆಯು ಕಾಂಗ್ರೆಸ್ ಪಕ್ಷಕ್ಕೆ ಹಿತಕರವೆಂದು ಅನ್ನಿಸಬಹುದಾದರೂ ಅದು ದೇಶ- ಸೇವೆಯ ಬಗೆಯಂತೂ ಖಂಡಿತಾ ಅಲ್ಲ. ಗಾಂಧೀಜಿಯವರ ಈ ಹೊತ್ತಿನ ನಡೆಯು ಕೀಟಲೆಯದು. ಇದರಿಂದ ದೇಶಕ್ಕೆ ಖಂಡಿತ ಬಲು ದೊಡ್ಡ ನಷ್ಟವಾಗಲಿದೆ.’’ ‘‘ಈ ದೇಶದ ಉನ್ನತಿಗಾಗಿ ಕಾಂಗ್ರೆಸ್‌ನೆದುರು ಎರಡು ದಾರಿಗಳಿವೆ: (1) ಪ್ರಕಟವಾಗಿ ಅಂದೋಲನವನ್ನು ಹೂಡುವುದು (2) ದೇಶದ ಬೇರೆ ಪಕ್ಷಗಳನ್ನು ಪ್ರತಿನಿಧಿಸುವ ಎಲ್ಲ ಪಕ್ಷಗಳ ಒಟ್ಟು ಬೇಡಿಕೆಯನ್ನು ಮುಂದೆ ಮಾಡುವುದು.
ಗಾಂಧೀಜಿ ಹಾಗೂ ಕಾಂಗ್ರೆಸ್ ಮೊದಲ ದಾರಿಯನ್ನು ಹಿಡಿಯಲು ತುಂಬ ಉತ್ಸುಕರಾಗಿದ್ದಾರೆ. ಇಂಥ ಯೋಜನೆಯನ್ನು ಸಿದ್ಧಪಡಿಸಲು ಆಲೋಚನೆಯ ಅಗತ್ಯವಿಲ್ಲ. ಈ ಯೋಜನೆಯು ಕೆಲಕಾಲ ಕೆಲಸ ಮಾಡಿದ ಬಳಿಕ ತೀರ ನಿರುಪಯುಕ್ತವೆನ್ನಿಸಲಿದೆ. ಅದು ಯಶಸ್ವಿ ಎನ್ನಿಸಿದರೂ ಬ್ರಿಟಿಶ್ ಸರಕಾರವು ನಾಜಿ ಸರಕಾರದ ಹಾಗೆ ಪಾಶವಿ ಶಕ್ತಿಯನ್ನು ಬಳಸುವ ಅಭ್ಯಾಸವನ್ನು ಹೊಂದಿಲ್ಲವಲ್ಲದೆ ಅದು ಆಂದೋಲನ ವನ್ನು ಹತ್ತಿಕ್ಕಲು ನೈತಿಕವಲ್ಲದ ಯಾವುದೇ ಕೃತ್ಯವನ್ನು ಮಾಡುವುದಿಲ್ಲ, ಎಂಬ ಸಂಗತಿಯು ಗಾಂಧೀಜಿಯವರನ್ನುಳಿದು ಎಲ್ಲರಿಗೂ ಗೊತ್ತಿದೆ.’’
‘‘ಗಾಂಧೀಜಿ ಈ ಮಾತನ್ನು ಒಪ್ಪಿಕೊಳ್ಳಲಾರರು, ನಾಜಿಗಳು ಅವರ ಆಂದೋಲನದೊಂದಿಗೆ ಹೇಗೆ ನಡೆದುಕೊಳ್ಳಬಹುದೆಂಬ ಅನುಭವ ಅದೃಷ್ಟದಿಂದ ಅವರಿಗೆ ಇಲ್ಲದಿರುವುದೇ ಇದಕ್ಕೆ ಕಾರಣ. ಗಾಂಧೀಜಿಯವರನ್ನು ದಮನಿಸಲು ನಾಜಿಗಳಿಗೆ ಹೆಚ್ಚು ವೇಳೆ ಬೇಕಿಲ್ಲವಲ್ಲದೆ ಪ್ರಕಟ ಆಂದೋಲನ ಶುರುವಾಗುವಾಗಲೇ ಮುಗಿಯಲು ಸಾಧ್ಯವೆಂದು ಅವರು ಸಿದ್ಧಪಡಿಸಿ ತೋರಿಸಬಲ್ಲರು.’’
ಸುಳ್ಳು ಅಪಾದನೆಗಳು ‘‘ಪ್ರಕಟ ಆಂದೋಲನವು ಇಷ್ಟೊಂದು ನಿರುಪಯೋಗಿಯೆಂದು ಸಿದ್ಧವಾಗಿರುವಾಗಲೂ ಗಂಧೀಜಿಯವರು ಅದನ್ನೇಕೆ ನಡೆಸುತ್ತಿರುವರೆಂಬ ಪ್ರಶ್ನೆಯಿಂದ ಆತಂಕಕ್ಕೆ ಒಳಗಾಗಿದ್ದೇನೆ. ಎರಡನೆಯ ಉಪಾಯವಾದ ಎಲ್ಲ ಪಕ್ಷಗಳನ್ನು ಒಂದುಗೂಡಿಸಲು ಅವರೇಕೆ ಯತ್ನಿಸುತ್ತಿಲ್ಲ? ಗಾಂಧೀಜಿಯವರು ದೇಶದ ಬೇರೆ ಬೇರೆ ಪಕ್ಷಗಳ ನಾಯಕರ ಒಂದು ಕಾನ್‌ಫರೆನ್ಸ್‌ನ್ನು ಏಕೆ ಕರೆಯುತ್ತಿಲ್ಲ? ತಮ್ಮ ಬೇಡಿಕೆಗಳನ್ನು ಕುರಿತು ಆ ನಾಯಕರಲ್ಲಿ ಜಗಳಗಳಿದ್ದರೆ ಏಕೆ ಅವುಗಳನ್ನು ಬಗೆಹರಿಸುತ್ತಿಲ್ಲ? ಈ ಬಗೆಯ ಒಂದು ಉಪಾಯವನ್ನು ಕೈಕೊಳ್ಳಲು ಯತ್ನಿಸಬೇಕಾದುದು ಅವಶ್ಯಕ. ಇದು, ರಾಜಕಾರಣಿಗಳು ಜಾತಿ ಜಾತಿಗಳಲ್ಲಿ ಖಾಯಮ್ಮಾಗಿ ಶಾಂತಿ ನೆಲೆಸುವಂತೆ ಮಾಡಲೆಂದು ಬಳಸುವ ವಿಧಾನ. ಆದರೆ ಗಾಂಧೀಜಿಯವರು ಎಂದಿಗೂ ಇಂಥ ಯತ್ನವನ್ನು ಮಾಡಲೇ ಇಲ್ಲ. ಅವರು ಈ ಸಮಸ್ಯೆಯನ್ನು ಏಕೆ ಈ ರೀತಿಯಾಗಿ ಬಗೆಹರಿಸಲಿಲ್ಲ ಎಂಬ ಸಂಗತಿ ನನಗೆಂದಿಗೂ ಅರ್ಥವಾಗಲೇ ಇಲ್ಲ.
ಆಂಗ್ಲರು ಭಾರತದಲ್ಲಿ ಇರುವವರೆಗೆ ಯಾವುದೇ ಬಗೆಯ ಒಪ್ಪಂದ ಸಾಧ್ಯವಿಲ್ಲ ಎನ್ನುವ ಸಂಗತಿಯನ್ನು ಕುರಿತು ಎರಡು ಬಗೆಯ ಅರ್ಥಗಳು ಸಾಧ್ಯ; (1) ಅಲ್ಪಸಂಖ್ಯ ಜಾತಿಯ ನಾಯಕರು ಆಂಗ್ಲರ ಕೈಗೊಂಬೆಗಳೇ? (2) ಬ್ರಿಟಿಷ್ ಸರಕಾರ ಹೊರಟು ಹೋದ ಬಳಿಕ ಸಾಂಪ್ರದಾಯಿಕ ಒಪ್ಪಂದಗಳನ್ನು ಕುರಿತು ಮಾತುಕತೆ ನಡೆಸುವುದು ಒಳ್ಳೆಯದಾದೀತೆಂದು ಕಾಂಗ್ರೆಸ್ ಬಗೆಯುತ್ತದೆ. ಏಕೆಂದರೆ ಆಗ ಶಾಂತಿಯನ್ನು ಸ್ಥಾಪಿಸುವ ಅಧಿಕಾರವು ಕಾಂಗ್ರೆಸ್‌ನ ಕೈಯಲ್ಲಿ ಇರಲಿದೆ. ಅದನ್ನು ಬಳಸಿಕೊಂಡು ಅದು ತನ್ನ ಷರತ್ತುಗಳನ್ನು ಒಪ್ಪಿ ಒಪ್ಪಂದವನ್ನು ಮಾಡಿಕೊಳ್ಳುವಂತೆ ಅಲ್ಪಸಂಖ್ಯ ಜಾತಿಯವರನ್ನು ಒತ್ತಾಯಕ್ಕೆ ಒಳಪಡಿಸುವ ಒಳ್ಳೆಯ ಅವಕಾಶವನ್ನು ಪಡೆಯಲಿದೆ.’’
‘‘ಇದರ ಅರ್ಥವು ಮೊದಲಿನ ಸಂಗತಿಗೆ ಸಂಬಂಧಪಟ್ಟದ್ದಾದರೆ ಇದು ಅಲ್ಪಸಂಖ್ಯ ಜಾತಿಯ ನಾಯಕರ ನಡತೆಯನ್ನು ಕುರಿತಾದ ಬಲು ಕೆಟ್ಟ ಹಾಗೂ ಅಶಿಷ್ಟವಾದ ಆಪಾದನೆಯಾಗಿದೆ. ತಾನು ಧರ್ಮದ ಪಥದ ಮೇಲಿದ್ದೇನೆಂಬ ವಿಚಾರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟು, ತನ್ನೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದವರು ಕೂಡ ಹೆಚ್ಚಲ್ಲದಿದ್ದರೂ ತನ್ನಷ್ಟೇ ದೇಶಭಕ್ತರೆಂಬುದನ್ನು ಒಪ್ಪಿಕೊಳ್ಳತಕ್ಕದ್ದು. ಕಾಂಗ್ರೆಸ್ ಹಾಗೂ ಅದರ ವೃತ್ತಪತ್ರಗಳು ಒಂದೇ ಸಮನೆ ಅಲ್ಪಸಂಖ್ಯ ಜಾತಿಗಳ ನಾಯಕರ ಮೇಲೆ ಮೂರ್ಖತನದಿಂದ ಕೂಡಿದ ಆಪಾದನೆಗಳನ್ನು ಹೊರಿಸುತ್ತಿದ್ದು, ಅದರಿಂದಾಗಿ ಸಾಂಪ್ರದಾಯಿಕ ಒಪ್ಪಂದಗಳ ಪ್ರಶ್ನೆಯು ಇನ್ನಷ್ಟು ಬಿಕ್ಕಟ್ಟಾಗಿದೆಯೆಂದು ಭಾವಿಸುತ್ತೇನೆ. ಇದು ಎರಡನೆಯ ಸಂಗತಿಗೆ ಸಂಬಂಧಪಟ್ಟದ್ದಾದರೆ, ಖಂಡಿತ ಇದೊಂದು ದಾರಿ ತಪ್ಪಿಸಲೆಂದು ಹೂಡಿದ ಹೂಟವಾಗಿದೆ. ಇವೆರಡೂ ಸಂಗತಿಗಳಿಂದ, ಗಾಂಧೀಜಿಯವರ ರಾಜಕೀಯವು ದಿವಾಳಿ ತೆಗೆದಿದೆಯೆಂಬುದು ಕಂಡು ಬರುತ್ತದೆ.’’
‘‘ಒಂದು ಸಂಗತಿಯು ಮಾತ್ರ ಗಾಂಧೀಜಿಯವರ ಗಮನಕ್ಕೆ ಬಂದಂತಿಲ್ಲ. ಅವರು ಆದಷ್ಟು ಬೇಗ ಅದನ್ನು ಅರಿತುಕೊಂಡರೆ ಒಳ್ಳೆಯದು. ಅವರ ರಾಜಕೀಯ ಗುಣಗಳನ್ನು ಕುರಿತು ಬಹಳಷ್ಟು ಡಂಗುರ ಸಾರಲಾದ ಸಂಗತಿಗಳು ಹೀಗಿದ್ದವು: ಹಿಂದೂ ಮುಸಲ್ಮಾನರ ಒಗ್ಗಟ್ಟನ್ನು ಸಾಧಿಸುವುದು ಹಾಗೂ ಅಸ್ಪಶ್ಯರ ಸೇವೆಯನ್ನು ಮಾಡುವುದು. 20 ವರ್ಷಗಳ ತರುವಾಯ ಇಂದು ಮುಸಲ್ಮಾನರಾಗಲಿ, ಅಸ್ಪಶ್ಯರಾಗಲಿ ಗಾಂಧೀಜಿಯವರನ್ನು ನಂಬುತ್ತಿಲ್ಲ.’’
‘‘ಇದೊಂದು, ಗಾಂಧೀಜಿಯವರ ಜೀವನದ ಬಲು ದೊಡ್ಡ ದುರ್ಘಟನೆಯಾಗಿದೆ. ಅವರು ಆದಷ್ಟು ಬೇಗನೆ ಇದನ್ನು ತಿಳಿದುಕೊಂಡರೆ ಒಳ್ಳೆಯದು. ಇನ್ನು ಅವರು ಅಲ್ಪಸಂಖ್ಯರ ಮುಂದಾಳುಗಳನ್ನು ಸಲಹೆಗಾಗಿ ಕರೆಯಬಹುದು. ಆದರೆ ಆ ಮುಂದಾಳುಗಳು ಪೂರೈಸಲಾಗದ ಬೇಡಿಕೆಗಳನ್ನು ಮುಂದಿರಿಸಬಹುದೆಂದು ಯೋಚಿಸುವುದು ವ್ಯರ್ಥ. ಏಕೆಂದರೆ, ಗಾಂಧೀಜಿಯವರು ತಮ್ಮ ಇಚ್ಛೆಯ ಮೇರೆಗೆ, ಅಲ್ಪಸಂಖ್ಯರು ತಮ್ಮೀ ವಿವಾದಗಳನ್ನು ತೀರ್ಮಾನಕ್ಕಾಗಿ ಅಂತಾರಾಷ್ಟ್ರೀಯ ಪಂಚಾಯಿತಿಗೆ ಕಳುಹಿಸಿಕೊಡಲುಒಪ್ಪಿಸಿಕೊಳ್ಳಬೇಕೆಂದು ಯಾವಾಗ ಬೇಕಾದರೂ ಹೇಳಬಲ್ಲವರಾಗಿದ್ದರು.’’
‘‘ಗಾಂಧೀಜಿಯವರ ಈ ಬಗೆಯ ಕೆಲಸವನ್ನು ಸಮರ್ಥಿಸಲು ಸಾಮಾನ್ಯ ಮನುಷ್ಯರ ಬಳಿ ಯಾವುದೇ ಕಾರಣವಿಲ್ಲ. ಇಂಥ ಕೆಲಸವು ನಡೆಯಬಾರದಿತ್ತು. ಗಾಂಧೀಜಿಯವರನ್ನು ಕಾಣಲು ಅಲ್ಪಸಂಖ್ಯರ ಬಳಿ ಯಾವುದೇ ಕಾರಣವಿರಲಿಲ್ಲ. ಏಕೆಂದರೆ ಗಾಂಧೀಜಿಯವರು ಹೊಸ ಸಂವಿಧಾನದಲ್ಲಿ ಅಲ್ಪಸಂಖ್ಯರ ಹಿತಾಸಕ್ತಿಗಳನ್ನು ಕಾಪಾಡುವ ಬಗೆಗೆ ಯಾವುದೇ ಸ್ವಚ್ಛ ಹಾಗೂ ಪ್ರಾಮಾಣಿಕ ಭರವಸೆಯನ್ನು ನೀಡಲು ಸಿದ್ಧರಿರಲಿಲ್ಲ.’’
‘‘ಗಾಂಧೀಜಿಯವರೊಡನೆ ನಮ್ಮ ಭಿನ್ನಾಭಿಪ್ರಾಯಗಳನ್ನು ಕೇವಲ ವ್ಯಕ್ತ ಪಡಿಸಿದರೆ ನಮ್ಮ ಕರ್ತವ್ಯ ಮುಗಿದುಬಿಟ್ಟಿತು ಎಂದೆನ್ನಲಾಗದ ಸಂಕಟಕಾಲದಲ್ಲಿ ನಾವಿದ್ದೇವೆ. ಗಾಂಧೀಜಿಯವರ ಆಂದೋಲನ ಶುರುವಾಗದಂತೆ ಮಾಡುವುದು ಆಂದೋಲನವನ್ನು ನಂಬದ ನಮ್ಮಂಥ ಜನರ ಕರ್ತವ್ಯ. ಏಕೆಂದರೆ ಮುಸ್ಲಿಮರು ಮತ್ತು ಅಸ್ಪಶ್ಯರು ಇ. ಸ. 1930ರ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಕೇವಲ ಎರಡು ಸಾಧ್ಯತೆಗಳಿದ್ದವು: ರಾಜಕೀಯ ಸಾಮರ್ಥ್ಯವು ಒಂದೆಂದರೆ ಆಂಗ್ಲರ ಕೈಯಲ್ಲಿ ಇರುತ್ತಿತ್ತು ಇಲ್ಲವೇ ಅದು ಭಾರತೀಯರ ಕೈಗೆ ಹೋಗುತ್ತಿತ್ತು.
ಜಪಾನ್ ಇಲ್ಲವೇ ಜರ್ಮನಿಗೆ ಭಾರತಕ್ಕೆ ಬಂದು ಅದರ ಒಡೆಯನಾಗುವ ಯಾವುದೇ ಬಗೆಯ ಸಾಧ್ಯತೆ ಆಗ ಇರಲಿಲ್ಲ. ಇಂದು ನಮ್ಮೆದುರು ಅಂತಹ ಸಾಧ್ಯತೆ ಇದೆ. ಇಂದು ಕಾಡು ಜಾತಿಗಳು ನಮ್ಮ ಬಾಗಿಲೆದುರು ಬಂದು ನಿಂತಿದ್ದು, ಅವುಗಳ ಇರಾದೆಯು ಆಂಗ್ಲರನ್ನು ಸೋಲಿಸುವುದಷ್ಟೇ ಆಗಿರದೆ ನಮ್ಮನ್ನು ಗುಲಾಮರನ್ನಾಗಿ ಮಾಡುವುದೂ ಆಗಿರುವಾಗ ಇಲ್ಲಿಯ ಶಾಂತಿಗೆ ಭಂಗ ತರುವಂತಹ ಯಾವುದೇ ಸಂಗತಿಗಾಗಿ ಯತ್ನಸುವುದೆಂದರೆ ಅದು ನಮ್ಮ ಹುಚ್ಚುತನವಾದೀತು. ಇದೇ ಈ ಹೊತ್ತು ಗಾಂಧೀಜಿಯವರು ಬೆದರಿಕೆಯನ್ನು ಒಡ್ಡುತ್ತಿರುವ ಜನಾಂದೋಲನಕ್ಕೂ ಇ.ಸ. 1930ರ ಆಂದೋಲನಕ್ಕೂ ಇರುವ ಎಲ್ಲಕ್ಕೂ ದೊಡ್ಡ ಇತಿಹಾಸ.’’
‘‘ತಾವು ದೇಶದ ವತಿಯಿಂದ ಮಾತನಾಡುತ್ತಿರುವುದಾಗಿ ಕಾಂಗ್ರೆಸ್ ಮತ್ತು ಗಾಂಧೀಜಿಯವರು ಬೆದರಿಕೆ ಹಾಕುತ್ತಿರುವರು. ಇದೊಂದು ಸುಳ್ಳುವಾದ ಆದರೆ ಯಾರಲ್ಲಿಯೂ ಇದನ್ನು ಖಂಡಿಸ ಬೇಕೆಂಬ ಪರಿವೆಯೇ ಇರಲಿಲ್ಲ. ಇದಕ್ಕೆ ಕಾರಣ ಹೀಗಿದೆ: ದೇಶದ ಹಿತಕ್ಕೆ ಯಾವುದೇ ಬಗೆಯ ನಷ್ಟವನ್ನು ಉಂಟುಮಾಡದೆ ಕಾಂಗ್ರೆಸ್ ದೇಶದ ಹೆಸರಿನಿಂದಾಗಲಿ ಇಲ್ಲವೇ ತನ್ನ ಹೆಸರಿನಿಂದಾಗಲಿ ಮಾತ ನಾಡುವ ಹಕ್ಕನ್ನು ನಡೆಸುವವರೆಗೆ ಯಾರಿಗೂ ಯಾವುದೇ ಬಗೆಯ ಅಭ್ಯಂತರವಿಲ್ಲ. ಆದರೆ ಕೇವಲ ಒಂದು ಪಕ್ಷವಾಗಿರುವ ಕಾಂಗ್ರೆಸ್ ದೇಶದ ಸುರಕ್ಷೆ ಹಾಗೂ ಅದರ ಸ್ವಾತಂತ್ರವನ್ನು ಅಪಾಯಕ್ಕೆ ಈಡು ಮಾಡುವಂತಹ ನೀತಿಯನ್ನು ಅನುಸರಿಸಲು ಹೇಳುತ್ತಿರುವಾಗ ತಮ್ಮ ಉದಾರ, ತಟಸ್ಥ ನೀತಿಯನ್ನು ಕೈಬಿಟ್ಟು ಕಾಂಗ್ರೆಸನ್ನು ವಿರೋಧಿಸುವುದು ಇತರ ಪಕ್ಷಗಳ ಕರ್ತವ್ಯವಾಗಿದೆ.’’
‘‘ಭಾರತದ ಜನರು ಎರಡು ಸಂಗತಿಗಳನ್ನು ಅರ್ಥಮಾಡಿಕೊಳ್ಳ ಬೇಕೆಂದು ಇಚ್ಛಿಸುತ್ತೇನೆ. ಮೊದಲನೆಯದಾಗಿ, ತಮ್ಮ ಅದೃಷ್ಟವು ಪ್ರಜಾಪ್ರಭುತ್ವದ ನಾಜೀವಾದದ ಮೇಲಿನ ಗೆಲುವಿನೊಡನೆ ತಳಕುಹಾಕಿಕೊಂಡಿದೆ ಎನ್ನುವುದನ್ನು ಅವರು ಮೊಟ್ಟಮೊದಲಿಗೆ ತಿಳಿದುಕೊಳ್ಳಬೇಕಿದೆ. ಎರಡನೆಯ ಸಂಗತಿ ಎಂದರೆ, ಭಾರತೀಯರು ಒಗ್ಗಟ್ಟಾಗಿ ಅದರ ಮೂಲಕ ಪ್ರಜಾಪ್ರಭುತ್ವವಾದವು ವಿಜಯವನ್ನು ಪಡೆಯಿತೆಂದರೆ ಪ್ರಪಂಚದ ಯಾವುದೇ ಶಕ್ತಿಯು ಭಾರತವನ್ನು ಸ್ವತಂತ್ರವಾಗದಂತೆ ತಡೆಯಲಾರದು. ಪ್ರಜಾಪ್ರಭುತ್ವವಾದದ ವಿಜಯವಾಯಿತೆಂದರೆ ಯಾವನೇ ಆಗಲಿ ಭಾರತದ ಸ್ವಾತಂತ್ರದ ದಾರಿಯಲ್ಲಿ ತಡೆಯನ್ನು ಒಡ್ಡಲಾರನು. ಗಾಂಧೀಜಿಯವರು ಯಾವುದೇ ಬಗೆಯ ಇಂತಹ ಕೆಲಸವನ್ನು ಮಾಡಲೇ ಬಾರದಿತ್ತು ಎಂದು ನಂಬಿದ್ದೇನೆ. ಭಾರತೀಯರು ಈ ಕಾಲಕ್ಕೆ ಮಾಡಬೇಕಿದ್ದ ಎಲ್ಲಕ್ಕೂ ದೊಡ್ಡ ಕೆಲಸವೆಂದರೆ ಅವರು ಪ್ರಜಾತಂತ್ರಕ್ಕೆ ಯಶಸ್ಸು ಲಭಿಸುವಂತೆ ಯತ್ನಿಸಬೇಕು. ಅವರು ಕೇವಲ ಸಿದ್ಧಾಂತಕ್ಕಾಗಿ ಹೀಗೆ ಮಾಡಬಾರದು. ನಮ್ಮ ದೇಶದ ಭವಿಷ್ಯಕ್ಕಾಗಿ ಇದನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ.’’
‘‘ಗಾಂಧೀಜಿ ಮುಪ್ಪಿನವರಿದ್ದು ಅವಸರದಲ್ಲಿರುವರು. ಭಾರತೀ ಯರು ಅವಸರದಲ್ಲಿ ಯಾವುದೇ ಕೆಲಸವನ್ನು ಮಾಡಿ ತರುವಾಯ ಪರಿತಪಿಸುವ ಸರದಿ ನಮ್ಮದಾಗದಂತೆ ಎಚ್ಚರ ವಹಿಸತಕ್ಕದ್ದು.’’
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)