‘ಗ್ಯಾರಂಟಿ ಸರಕಾರ’ಕ್ಕೆ ದೊರೆತ ವಾರಂಟಿ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ದೇಶಾದ್ಯಂತ ನಡೆದಿರುವ ಉಪಚುನಾವಣೆಗಳಲ್ಲಿ ಮತದಾರರು ನೀಡಿರುವ ತೀರ್ಪನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲ ಎಲ್ಲ ಪಕ್ಷಗಳಲ್ಲೂ ಎದ್ದು ಕಾಣುತ್ತಿದೆ. ಮಹಾರಾಷ್ಟ್ರವನ್ನು ಬಿಜೆಪಿ ನೇತೃತ್ವದ ಮಹಾಯುತಿ ಆಹುತಿ ತೆಗೆದುಕೊಂಡಿದ್ದರೆ, ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿ ಮೇಲುಗೈ ಸಾಧಿಸಿದೆ. ಇದೇ ಸಂದರ್ಭದಲ್ಲಿ ಪಶ್ಚಿಮಬಂಗಾಳದಲ್ಲಿ ನಡೆದ ಉಪಚುನಾವಣೆಯ ಎಲ್ಲ ಕ್ಷೇತ್ರಗಳನ್ನು ಟಿಎಂಸಿ ಗೆದ್ದುಕೊಂಡಿದ್ದರೆ, ಕರ್ನಾಟಕದಲ್ಲಿ ಮೂರೂ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವ ಮೂಲಕ, ಬಿಜೆಪಿ ಮಾಡುತ್ತಾ ಬಂದಿರುವ ಎಲ್ಲ ಆರೋಪಗಳಿಗೂ ಉತ್ತರ ನೀಡಿದೆ. ಕರ್ನಾಟಕದಲ್ಲಿ ಮೂರೇ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿರುವುದಾದರೂ, ಇದು ಹಲವು ಕಾರಣಗಳಿಗಾಗಿ ಮಹತ್ವದ್ದಾಗಿತ್ತು. ಮುಖ್ಯವಾಗಿ, ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳು ತಮ್ಮ ಪುತ್ರರನ್ನೇ ಕಣಕ್ಕಿಳಿಸುವ ಮೂಲಕ, ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದರು. ಸಿದ್ದರಾಮಯ್ಯ ನೇತೃತ್ವದ ಸರಕಾರ ಕರ್ನಾಟಕದಲ್ಲಿ ಜಾರಿಗೊಳಿಸಿದ ‘ಗ್ಯಾರಂಟಿ’ಗಳ ಅಸಲಿಯತ್ತನ್ನು ಒರೆಗೆ ಹಚ್ಚಿ ನೋಡುವುದಕ್ಕೆ ಈ ಉಪಚುನಾವಣೆಯನ್ನು ಬಳಸಲಾಗಿತ್ತು. ಒಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೆ, ಗ್ಯಾರಂಟಿಗಳ ವಿರುದ್ಧದ ಹೋರಾಟಗಳಿಗೆ ಬಲ ಬರುತ್ತಿತ್ತು. ಕಳೆದ ಒಂದು ವರ್ಷದಿಂದ ಬಿಜೆಪಿಯು ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬಂದಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಇದೀಗ ಈ ಚುನಾವಣಾ ಫಲಿತಾಂಶ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೂ ಗ್ಯಾರಂಟಿಯನ್ನು ನೀಡಿದೆ. ವಕ್ಫ್ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಾ, ರಾಜ್ಯದ ರೈತರನ್ನು ಈ ನಾಡಿನ ಒಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಲು ಯತ್ನಿಸಿದ ಸಂಘಪರಿವಾರಕ್ಕೆ ಫಲಿತಾಂಶ ತೀವ್ರ ಮುಜುಗರ ಸೃಷ್ಟಿಸಿದೆ.
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯ ಸೋಲು, ರಾಜ್ಯದಲ್ಲಿ ಜೆಡಿಎಸ್‌ನ ಅವಸಾನದ ದಿನಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ತನ್ನ ಅಳಿದುಳಿದ ಗುರುತುಗಳನ್ನು ಕಳೆದುಕೊಂಡಿರುವ ಜೆಡಿಎಸ್ ಮುಂದೆ ಅಧಿಕೃತವಾಗಿ ಬಿಜೆಪಿಯ ಜೊತೆಗೆ ವಿಲೀನವಾಗುವ ಸೂಚನೆಗಳನ್ನು ಈ ಚುನಾವಣೆಯ ಫಲಿತಾಂಶ ನೀಡಿದೆ. ಕುಮಾರಸ್ವಾಮಿಯವರು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದು, ಕೇಂದ್ರ ಸರಕಾರದ ಭಾಗವಾಗಿದ್ದಾರೆ. ಲೈಂಗಿಕ ಹಗರಣಗಳ ಕಾರಣದಿಂದಾಗಿ ರೇವಣ್ಣ ಹಾಗೂ ಅವರ ಪುತ್ರ ರಾಜ್ಯದಲ್ಲಿ ಸಂಪೂರ್ಣ ಮೂಲೆಗುಂಪಾಗಿದ್ದಾರೆ. ಆ ಹಗರಣಗಳ ಕಳಂಕದಿಂದ ಹೊರ ಬರಲು ರಾಜ್ಯದಲ್ಲಿ ಜೆಡಿಎಸ್ ಇನ್ನೂ ಯಶಸ್ವಿಯಾಗಿಲ್ಲ. ಇಂತಹ ಹೊತ್ತಿನಲ್ಲಿ ತನ್ನ ಮಗನನ್ನು ಚನ್ನಪಟ್ಟಣದಲ್ಲಿ ಗೆಲ್ಲಿಸಿ, ರಾಜ್ಯದ ಜೆಡಿಎಸ್ ಚುಕ್ಕಾಣಿಯನ್ನು ಒಪ್ಪಿಸುವುದು ಕುಮಾರಸ್ವಾಮಿಯವರ ಲೆಕ್ಕಾಚಾರವಾಗಿತ್ತು. ಆದರೆ, ಅದಕ್ಕಾಗಿ ಅವರು ಭಾರೀ ಬೆಲೆಯನ್ನೇ ತೆರಬೇಕಾಯಿತು. ಚನ್ನಪಟ್ಟಣದ ಕ್ಷೇತ್ರದ ಮೇಲೆ ಯೋಗೇಶ್ವರ್ ಅವರಿಗಿರುವ ನಿಯಂತ್ರಣ, ಈ ಬಾರಿ ಕಾಂಗ್ರೆಸ್ ಪಕ್ಷ ಸೇರ್ಪಡೆಯೊಂದಿಗೆ ಇನ್ನಷ್ಟು ಬಲ ಪಡೆದುಕೊಂಡಿತ್ತು. ಒಕ್ಕಲಿಗ ಮತಗಳ ಜೊತೆಗೆ, ಸಿದ್ದರಾಮಯ್ಯರ ಗ್ಯಾರಂಟಿ ಫಲಾನುಭವಿಗಳಾಗಿರುವ ದುರ್ಬಲ ವರ್ಗಗಳೂ ಯೋಗೇಶ್ವರ್ ಕಡೆಗೆ ವಾಲಿದ್ದವು. ಇತ್ತ ಬಿಜೆಪಿ ಎರಡು ಬಣಗಳಾಗಿ ಒಡೆದಿತ್ತು. ವೈಯಕ್ತಿಕವಾಗಿ ಯೋಗೇಶ್ವರ್ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪರವಾಗಿ ಕೆಲಸ ಮಾಡಿರಲಿಲ್ಲ. ಕರ್ನಾಟಕ ಜಾರಿಗೊಳಿಸಿರುವ ಗ್ಯಾರಂಟಿಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು ಮಾದರಿಯಾಗಿಸಿಕೊಂಡಿರುವ ಹೊತ್ತಿನಲ್ಲಿ, ರಾಜ್ಯದ ಬಿಜೆಪಿಯ ನಾಯಕರು ‘ಗ್ಯಾರಂಟಿಯ ವಿರುದ್ಧ’ ಮಾತನಾಡುತ್ತಿದ್ದರು. ‘ಗೃಹ ಲಕ್ಷ್ಮಿ’ ಹಣವನ್ನು ಪಾವತಿಸಲು ಅವಕಾಶ ನೀಡಬಾರದು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದರು. ಇದು ಸಹಜವಾಗಿಯೇ ಮಧ್ಯಮ ವರ್ಗದ ಗೃಹಿಣಿಯರಿಗೆ ಸಿಟ್ಟು ತರಿಸಿತ್ತು. ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಚುನಾವಣೆಯಲ್ಲಿ ಪೂರಕವಾಗಿ ಬಳಸುತ್ತಿರುವ ಹೊತ್ತಿನಲ್ಲೇ, ಬಿಜೆಪಿಯು ವಕ್ಫ್ ಮಂಡಳಿಯ ವಿರುದ್ಧ ರೈತರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಸುತ್ತಿತ್ತು. ರೈತರಿಗೆ ಬಿಜೆಪಿಯ ಹುನ್ನಾರ ಅದಾಗಲೇ ಸ್ಪಷ್ಟವಾಗಿತ್ತು. ಈ ನಾಡಿನ ರೈತರ ಸಮಸ್ಯೆಯ ಲೋಕವೇ ಬೇರೆಯಾಗಿದ್ದರೆ, ಬಿಜೆಪಿಯ ಪಾಲಿಗೆ ರೈತರ ಸಮಸ್ಯೆಯೇ ಇನ್ನೊಂದಾಗಿತ್ತು. ರೈತರ ಗದ್ದೆಯಲ್ಲಿ ದ್ವೇಷದ ಬೀಜ ಬಿತ್ತಿ, ಉಪಚುನಾವಣೆಯ ಬೆಳೆ ಕೊಯ್ಯಲು ಹೊರಟ ಬಿಜೆಪಿಗೆ ರೈತರೇ ಪಾಠ ಕಲಿಸಿದರು.
ಇಂದು ತನ್ನ ಸೋಲಿಗೆ ನಿಖಿಲ್ ಅವರು ಯಾರನ್ನಾದರೂ ಹೊಣೆ ಮಾಡುವುದಾದರೆ ತನ್ನ ತಂದೆ ಕುಮಾರಸ್ವಾಮಿಯನ್ನೇ ಹೊಣೆ ಮಾಡಬೇಕು. ಅವರ ಸಮಯ ಸಾಧಕ ರಾಜಕಾರಣದಿಂದಾಗಿ ಜೆಡಿಎಸ್‌ಗೆ ಸ್ವತಃ ಒಕ್ಕಲಿಗರೂ ಮತ ಹಾಕಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸೋಲಿನ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಿಖಿಲ್, ‘ಒಂದು ನಿರ್ದಿಷ್ಟ ಸಮುದಾಯ ತನಗೆ ಮತ ಹಾಕಲಿಲ್ಲ’ ಎಂದು ದುಃಖ ತೋಡಿಕೊಂಡರು. ಒಂದು ನಿರ್ದಿಷ್ಟ ಸಮುದಾಯ ಎಂದು ಅವರು ಬೆರಳು ತೋರಿಸಿರುವುದು ಮುಸ್ಲಿಮರೆಡೆಗೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಕಳೆದ ಒಂದು ವರ್ಷದಿಂದ ಬಿಜೆಪಿ ಮತ್ತು ಸಂಘಪರಿವಾರದ ಜೊತೆ ಸೇರಿ ಮುಸ್ಲಿಮ್ ಸಮುದಾಯದ ವಿರುದ್ಧ ಕುಮಾರಸ್ವಾಮಿ ಬಹಿರಂಗವಾಗಿಯೇ ಹಗೆ ಸಾಧಿಸುತ್ತಿದ್ದಾರೆ. ಮಂಡ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದಿರುವ ದೌರ್ಜನ್ಯಗಳು, ವಕ್ಫ್‌ನ ಹೆಸರಿನಲ್ಲಿ ಬಿಜೆಪಿಯೊಂದಿಗೆ ಸೇರಿ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟಿರುವುದು, ಕಲ್ಲಡ್ಕ ಪ್ರಭಾಕರ ಭಟ್ಟರ ಜೊತೆಗೆ ವೇದಿಕೆ ಹಂಚಿಕೊಂಡು ಮುಸ್ಲಿಮ್ ಮಹಿಳೆಯರನ್ನು ನಿಂದಿಸಿರುವುದು, ಇವೆಲ್ಲವೂ ಕೇಂದ್ರದ ಸಚಿವರಾದ ಬಳಿಕ ಕುಮಾರಸ್ವಾಮಿಯವರು ನಾಡಿನ ಮುಸ್ಲಿಮ್ ಸಮುದಾಯಕ್ಕೆ ನೀಡಿದ ಕೊಡುಗೆಗಳು ಮತ್ತು ಈ ಕೊಡುಗೆಗಳಿಗಾಗಿ ಚನ್ನಪಟ್ಟಣದಲ್ಲಿ ಮುಸ್ಲಿಮರು ಜೆಡಿಎಸ್‌ನ್ನು ಬೆಂಬಲಿಸಬೇಕಾಗಿತ್ತು ಎನ್ನುವುದು ನಿಖಿಲ್ ಕುಮಾರಸ್ವಾಮಿಯ ಪ್ರತಿಪಾದನೆ. ನಿಜ ನೋಡಿದರೆ, ಈ ಬಾರಿ ಮುಸ್ಲಿಮರು ಮಾತ್ರವಲ್ಲ, ಒಕ್ಕಲಿಗರೇ ಜೆಡಿಎಸ್‌ನ ಕೈ ಬಿಟ್ಟಿದ್ದಾರೆ. ಬಿಜೆಪಿಯ ಸಂಸರ್ಗದಿಂದ ಯಾರಿಗೂ ಸಲ್ಲದ ಪಕ್ಷವಾಗಿ ಜೆಡಿಎಸ್ ರಾಜ್ಯದಲ್ಲಿ ಗುರುತಿಸುತ್ತಿದೆ. ಇದಕ್ಕೆ ಯಾರು ಕಾರಣ, ಏನು ಕಾರಣ ಎನ್ನುವ ಪ್ರಾಮಾಣಿಕ ಆತ್ಮವಿಮರ್ಶೆ ಮಾಡಿಕೊಳ್ಳದೇ ಇದ್ದರೆ, ಜೆಡಿಎಸ್ ಉಳಿಯುವುದು ಕಷ್ಟ. ಉಳಿದಂತೆ, ಬಿಜೆಪಿಯ ಕೋಮುದ್ವೇಷದ ರಾಜಕಾರಣಕ್ಕೆ ಸ್ಪಷ್ಟ ಉತ್ತರವಾಗಿದೆ, ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯ ಪುತ್ರ ಭರತ್ ಬೊಮ್ಮಾಯಿಯ ಸೋಲು. ಅಲ್ಲಿನ ಜನರು ಧರ್ಮ, ಜಾತಿಗಳನ್ನು ಮೀರಿ ಮತ ಚಲಾಯಿಸಿ ಒಬ್ಬ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯನ್ನು ಗೆಲ್ಲಿಸಿದರು. ಇದರಿಂದ ಬಿಜೆಪಿಗೆ ಮತದಾರರು ಬಹುದೊಡ್ಡ ಸಂದೇಶವನ್ನು ನೀಡಿದ್ದಾರೆ. ಅದನ್ನು ಬಿಜೆಪಿ ನಾಯಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿನ ಆಘಾತದಿಂದ ಉದ್ಧವ್‌ಠಾಕ್ರೆ ಶಿವಸೇನೆ ಮತ್ತು ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಗುಜರಾತ್‌ನಿಂದ ಹರಿದು ಬಂದ ಹಣವೇ ಬಿಜೆಪಿಯ ಈ ಮಹಾ ಗೆಲುವಿಗೆ ಕಾರಣ ಎಂದು ಹಲವರು ವ್ಯಾಖ್ಯಾನಿಸುತ್ತಿದ್ದಾರೆ. ಮಹಾರಾಷ್ಟ್ರವನ್ನು ಅದಾನಿಗೆ ಗೆಲ್ಲಲೇ ಬೇಕಾದ ಅನಿವಾರ್ಯವಿತ್ತು. ಈ ಕಾರಣದಿಂದಲೇ ಜಾರ್ಖಂಡ್‌ನ್ನು ಬಿಟ್ಟುಕೊಟ್ಟು ಮಹಾರಾಷ್ಟ್ರವನ್ನು ಅದಾನಿ ಕಬಳಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ, ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಯ ನಕಲು ಮಾಡಿರುವುದೇ ಮಹಾಯುತಿ ಗೆಲುವಿಗೆ ಕಾರಣ ಎಂದು ಸ್ವತಃ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ವ್ಯಾಖ್ಯಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿ ಭಾರೀ ಅಂತರದಲ್ಲಿ ಗೆದ್ದಿರುವುದು ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆಯಾಗಿದೆ. ಒಂದೆಡೆ ಗಾಂಧಿ ಕುಟುಂಬವನ್ನು ರಾಜಕೀಯದಿಂದ ಹೊರಗಿಡಲು ಮೋದಿ ನೇತೃತ್ವದ ಬಳಗ ಶತ ಪ್ರಯತ್ನ ನಡೆಸುತ್ತಿರುವಾಗ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಯಾಗಿ ಸಂಸತ್‌ನ್ನು ಪ್ರವೇಶಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ನ ಬೆಳವಣಿಗೆಯಲ್ಲಿ ಪ್ರಿಯಾಂಕಾ ಗೆಲುವು ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆೆ ಎನ್ನುವುದನ್ನೂ ಕಾದು ನೋಡಬೇಕು. ಇಷ್ಟಾದರೂ, ಈ ಚುನಾವಣೆಗಳಲ್ಲಿ ಬಿಜೆಪಿಯ ಬಲ ವರ್ಧಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.