‘ನಕ್ಸಲ್‌ಬಾರಿ’ಗೆ ಐವತ್ತು...

Update: 2017-05-20 18:27 GMT

ಕ್ರಾಂತಿಯ ಭೂಪಟದಲ್ಲಿ ರಕ್ತಲೇಪಿತ ಚಿರಸ್ಥಾಯಿಯಾಗಿ ಉಳಿದಿರುವ ನಕ್ಸಲ್‌ಬಾರಿ ಉತ್ತರ ಬಂಗಾಳದ ಒಂದು ಅನಾಮಧೇಯ ಗ್ರಾಮ. ಐವತ್ತು ವರ್ಷಗಳ ಹಿಂದೆ ಘಟಿಸಿದ ರೈತ ಕ್ರಾಂತಿಯ ಸುವರ್ಣ ಮಹೋತ್ಸವ ಆಚರಿಸಲು ಸಿದ್ಧತೆ ನಡೆಸಿರುವ ಗ್ರಾಮ. ಪ್ರಸುದ್ಯೋಜ್ಯೋತ್ ನಕ್ಸಲ್‌ಬಾರಿಯ ಒಂದು ಕೊಪ್ಪಲು. ನಮ್ಮ ಮೈಸೂರಿನಲ್ಲಿರುವ ಕೊಪ್ಪಲುಗಳ ಹಾಗೆ. ಇಲ್ಲಿ ಒಬ್ಬಿಬ್ಬರು ಜಮೀನ್ದಾರರು. ಉಳಿದವರೆಲ್ಲ ಗೇಣಿದಾರ ರೈತರು, ಕೃಷಿ ಕೂಲಿಕಾರ್ಮಿಕರು. 1967ರ ಮೇ 25ರಂದು ಇಲ್ಲಿನ ರೈತರು ಜಮೀನ್ದಾರರು ಮತ್ತು ಜಾತೇದಾರರ ವಿರುದ್ಧ ಸಶಸ್ತ್ರ ದಂಗೆ ಎದ್ದರು. ಇದು ಮುಂದೆ ರಾಷ್ಟ್ರದಲ್ಲಿ ನಕ್ಸಲೀಯ ಕ್ರಾಂತಿ ಎಂಬ ದೊಡ್ಡ ಆಂದೋಲನಕ್ಕೆ ನಾಂದಿ ಹಾಡಿದ್ದು ಈಗ ಇತಿಹಾಸ.

ಸಮಾಜ ವಾದ, ಸಮಾನತೆ, ಉಳುವವನೇ ಭೂಮಿಯ ಒಡೆಯ-ಇವೆಲ್ಲ ಇಂದು ಸವಕಲಾಗಿ ನಿಘಂಟಿನಲ್ಲಿ ಮಾತ್ರ ಉಳಿದಿರುವ ಪದಗಳು.ಅಂತೆಯೇ ಮಾರ್ಕ್ಸ್ ಸಿದ್ಧಾಂತವೂ.ಶೋಷಿತರು ಮತ್ತು ಶ್ರಮಜೀವಿಗಳ ಹೋರಾಟದ ಚಕ್ರ ಒಂದು ಸುತ್ತು ತಿರುಗಿದ್ದು,ಈಗ ಮತ್ತೆ ಬಲಪಂಥೀಯ ಬಂಡವಾಳಶಾಹಿ ಮೇಲೆದ್ದು, ರೈತಕಾರ್ಮಿಕರು ಮೊದಲಾದ ಶ್ರಮಜೀವಿಗಳು, ದೀನದಲಿತರು, ಮತ್ತಿತರ ಶೋಷಿತರು ತಳದಲ್ಲಿದ್ದು ಅವರ ತುಳಿತ ಮುಂದುವರಿದಿದೆ. ಭೂಸುಧಾರಣಾ ಕಾನೂನುಗಳು, ಕಾರ್ಮಿಕ ಕಾನೂನುಗಳು ಹೊಸಕಾನೂನು ಗಳ ಮುಂದೆ ಹಲ್ಲು ಕಳೆದುಕೊಂಡಿವೆ.

ಭೂದಾಹಿ ಉದ್ಯಮಪತಿಗಳು ಮತ್ತು ಗೃಹಕಟ್ಟಡ ನಿರ್ಮಾಣೋದ್ಯಮಿಗಳಿಗೆ ಅನುಕೂಲ ಮಾಡಿಕೊಡುವಂಥ ಕಾನೂನೊಂದನ್ನು ತರುವುದರಲ್ಲಿ ವಿಫಲವಾದ ಮೋದಿ ಸರಕಾರ ಭೂಸ್ವಾಧೀನ ಕುರಿತಂತೆ ಶಾಸನ ಮಾಡುವ ಹೊಣೆಯನ್ನು ರಾಜ್ಯ ಸರಕಾರಗಳ ಹೆಗಲಿಗೇ ವರ್ಗಾಯಿಸಿದೆ. ರಾಜ್ಯಗಳೂ ಕೈಗಾರಿಕೀಕರಣ, ಗೃಹ ನಿರ್ಮಾಣ ಮತ್ತು ನಗರೀಕರಣಗಳ ನೆಪದಲ್ಲಿ ಪಟ್ಟಭದ್ರಹಿತಗಳಿಗೆ ಅನುಕೂಲವಾ ಗುವಂಥ ಕಾನೂನುಗಳನ್ನೇ ರಚಿಸುತ್ತಿದ್ದು ಶೋಷಿತ ರೈತರ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಇಂಥ ಸಂದರ್ಭದಲ್ಲಿ ರೈತರ ಹೋರಾಟದ ಇತಿಹಾಸವನ್ನು ಮೆಲುಕು ಹಾಕುವಂಥ ಸಂದರ್ಭವೊಂದು ಒದಗಿ ಬಂದಿದೆ. ಅದು, ಐವತ್ತು ವರ್ಷಗಳ ಹಿಂದೆ ನಡೆದ ನಕ್ಸಲ್‌ಬಾರಿ ರೈತ ಹೋರಾಟ.

ಕ್ರಾಂತಿಯ ಭೂಪಟದಲ್ಲಿ ರಕ್ತಲೇಪಿತ ಚಿರಸ್ಥಾಯಿಯಾಗಿ ಉಳಿದಿರುವ ನಕ್ಸಲ್‌ಬಾರಿ ಉತ್ತರ ಬಂಗಾಳದ ಒಂದು ಅನಾಮ ಧೇಯ ಗ್ರಾಮ. ಐವತ್ತು ವರ್ಷಗಳ ಹಿಂದೆ ಘಟಿಸಿದ ರೈತ ಕ್ರಾಂತಿಯ ಸುವರ್ಣ ಮಹೋತ್ಸವ ಆಚರಿಸಲು ಸಿದ್ಧತೆ ನಡೆಸಿರುವ ಗ್ರಾಮ. ಪ್ರಸುದ್ಯೋಜ್ಯೋತ್ ನಕ್ಸಲ್‌ಬಾರಿಯ ಒಂದು ಕೊಪ್ಪಲು. ನಮ್ಮ ಮೈಸೂರಿನಲ್ಲಿರುವ ಕೊಪ್ಪಲುಗಳ ಹಾಗೆ. ಇಲ್ಲಿ ಒಬ್ಬಿಬ್ಬರು ಜಮೀನ್ದಾರರು. ಉಳಿದವರೆಲ್ಲ ಗೇಣಿದಾರ ರೈತರು, ಕೃಷಿ ಕೂಲಿಕಾರ್ಮಿಕರು. 1967ರ ಮೇ 25ರಂದು ಇಲ್ಲಿನ ರೈತರು ಜಮೀನ್ದಾರರು ಮತ್ತು ಜಾತೇದಾರರ ವಿರುದ್ಧ ದಂಗೆ ಎದ್ದರು. ಅದೂ ಸಶಸ್ತ್ರ ದಂಗೆ. ಇದು ಮುಂದೆ ರಾಷ್ಟ್ರದಲ್ಲಿ ನಕ್ಸಲೀಯ ಕ್ರಾಂತಿ ಎಂಬ ದೊಡ್ಡ ಆಂದೋಲನಕ್ಕೆ ನಾಂದಿ ಹಾಡಿದ್ದು ಈಗ ಇತಿಹಾಸ.

ನಕ್ಸಲ್‌ಬಾರಿಯ ಈ ಸಶಸ್ತ ದಂಗೆ ಪಶ್ಚಿಮ ಬಂಗಾಳದಲ್ಲಿ ಪ್ರಥಮವೇನಲ್ಲ. 1950-60ರ ಕಾಲಘಟ್ಟದಲ್ಲೇ ಆ ರಾಜ್ಯದ ರೈತರು ಕಿಸಾನ್ ಸಭಾ ಸ್ಥಾಪಿಸಿಕೊಂಡು ಜಮೀನ್ದಾರಿ ಪದ್ಧತಿಯನ್ನು ಕೊನೆಗಾಣಿ ಸುವಂತೆ ಸರಕಾರಕ್ಕೆ ಆಗ್ರಹಪಡಿಸಿ ಹೋರಾಟ ಆರಂಭಿಸಿದ್ದರು. ಭೂಮಿಯ ಒಡೆತನದ ಹಕ್ಕುಪತ್ರ ತೋರಿಸುವಂತೆ ಜೋತೆರದಾರರಿಗೆ(ಬೇನಾಮಿ ಜಮೀನದ್ದಾರರು) ಆಗ್ರಹಪಡಿಸಬೇಕೆಂದೂ ಹಕ್ಕುಪತ್ರ ತೋರಿಸದ ಬೇನಾಮಿಗಳಿಗೆ ಸುಗ್ಗಿಯಲ್ಲಿ ಫಸಲು ನೀಡಬಾರದೆಂದೂ ಕಿಸಾನ್ ಸಭಾ ಗೇಣಿದಾರ ರೈತರಿಗೆ ಸ್ಪಷ್ಟ ಸೂಚನೆ ನೀಡಿತ್ತು ಹಾಗೂ ತಮ್ಮ ಬೆಳೆಯನ್ನು ಕಾಯ್ದುಕೊಳ್ಳಲು ಶಸ್ತ್ರಸಜ್ಜಿತರಾಗಿರು ವಂತೆಯೂ ತಿಳಿವಳಿಕೆ ನೀಡಿತ್ತು.

ಇದೇ ಕಾಲದಲ್ಲಿ ಆಗಿನ ಮೈಸೂರು ರಾಜ್ಯದ ಶಿವಮೊಗ್ಗ ಜಿಲ್ಲೆಯ ಕಾಗೋಡಿನಲ್ಲಿ ಭೂಮಿಯ ಹಕ್ಕಿಗಾಗಿ ರೈತ ಸಂಘ ಮತ್ತು ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ರೈತ ಸತ್ಯಾಗ್ರಹ ನಡೆದಿತ್ತು.ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸೆರೆಮನೆ ಶಿಕ್ಷೆಗೊಳಗಾಗಿದ್ದರು. 1967ರ ಮೇ 25ರಂದು ಪ್ರಸುದ್ಯೋಜ್ಯೋತ್‌ನಲ್ಲಿ ರೈತರು ನಡೆಸಿದ ಪ್ರತಿಭಟನಾ ಪ್ರದರ್ಶನ ವಿಕೋಪಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಎರಡು ಮಕ್ಕಳೂ ಸೇರಿದಂತೆ ಹನ್ನೊಂದು ಮಂದಿ ಅಸುನೀಗಿದ್ದರು.

ರೈತರ ಒಗ್ಗಟ್ಟಿನ ಪ್ರತಿಭಟನೆಯನ್ನು ವಿಫಲಗೊಳಿಸಲು ಪೊಲೀಸರು ಗ್ರಾಮ ಪ್ರವೇಶಿಸಿದಾಗಿನಿಂದ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿತ್ತು.ರೈತರ ಪ್ರತಿಭಟನಾ ಪ್ರದರ್ಶನದಲ್ಲಿ ಕೋಲಾ ಹಲವುಂಟಾಗಿ ರೈತನೊಬ್ಬ ಬಿಟ್ಟ ಬಾಣಕ್ಕೆ ಪೊಲೀಸ್ ಅಧಿಕಾರಿಯೊಬ್ಬ ಬಲಿಯಾದ. ಕೋಪೋದ್ರಿಕ್ತ ರೈತರನ್ನು ಚದುರಿಸಲು ಪೊಲೀಸ್ ಕಾರ್ಯಾಚರಣೆಗೆ ಅಂದಿನ ಗೃಹ ಸಚಿವ ಜ್ಯೋತಿಬಸು ಆಜ್ಞೆ ಮಾಡಿದರು. ಮರು ದಿನ ಪೊಲೀಸರು ಪ್ರಸುದ್ಯೋಜ್ಯೋತ್ ಕೊಪ್ಪಲಿನ ದೊಡ್ಡಾಲದ ಮರದ ನೆರಳಲ್ಲಿ ಸೇರಿದ್ದ ಶಾಂತಿಯುತ ರೈತರನ್ನು ಚದುರಿಸಲು ಗುಂಡು ಹಾರಿಸಿದರು. (ಇತ್ತೀಚೆಗೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಭೋಜನ ಮಾಡಿದ ಆದಿವಾಸಿ ಕುಟುಂಬದ ಮನೆಯ ಸಮೀಪದಲ್ಲೇ ಈ ಆಲದ ಮರವಿದೆ).

ಪೊಲೀಸರ ಗೋಲಿಬಾರ್ ಸುದ್ದಿ ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಳ್ಗಿಚ್ಚಿನಂಥೆ ಹರಡಿತು. ಆದಿವಾಸಿ ರೈತರು ಸ್ವಯಂಪ್ರೇರಿತರಾಗಿ ಬಿಲ್ಲುಬಾಣಗಳಿಂದ ಪೊಲೀಸ್ ಪಡೆಯ ಮೇಲೆರಗಿದರು. ಪೂರ್ಣಪ್ರಮಾಣದ ಸಶಸ್ತ್ರ ಹೋರಾಟದ ರಣರಂಗವಾಯಿತು ಆ ತಾಣ. ರೈತರು ಬೆಳೆದ ಫಸಲನ್ನು ಜಮೀನ್ದಾರರಿಗೆ ಕೊಡಲು ನಿರಾಕರಿಸಿದರು. ಅಷ್ಟೇ ಅಲ್ಲ, ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೊಲಗದ್ದೆಗಳಲ್ಲಿ ಕೆಂಬಾವುಟ ನೆಟ್ಟರು. ಬಲಿಷ್ಠ ಸರಕಾರವೇನೋ ಬಲಪ್ರಯೋಗದಿಂದ ರೈತರನ್ನು ಬಗ್ಗುಬಡಿಯಿತು. ಆದರೆ ಹೋರಾಟವನ್ನು ಭಗ್ನಗೊಳಿಸುವುದು ಅದರಿಂದ ಸಾಧ್ಯವಾಗಲಿಲ್ಲ. ಪ್ರಸುದ್ಯೋಜ್ಯೋತ್, ರೈತರ ಹೋರಾಟ, ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಹೋರಾಟ ಬಲಗೊಳ್ಳಲು ಸ್ಫೂರ್ತಿದಾಯಕವಾಯಿತು.

ನಕ್ಸಲ್‌ಬಾರಿ ಸುತ್ತಮುತ್ತ ಪ್ರಬಲಗೊಂಡ ರೈತರ ಹೋರಾಟ ಸೀಮೋಲ್ಲಂಘನೆ ಮಾಡಿ ಬೇರೆಡೆಗೂ ಹಬ್ಬಿ ನಕ್ಸಲೀಯ ಚಳವಳಿ ಎಂದು ಪ್ರಖ್ಯಾತವಾಯಿತು. ಸರಕಾರವನ್ನು ಮತ್ತು ಶೋಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ನಕ್ಸಲ್‌ಬಾರಿ ಆಂದೋಲನದ ತಾಯಿ. ಆದರೆ ಈ ಆಂದೋಲನವೇ ಮಾತೃಪಕ್ಷವನ್ನು ಒಡೆದು ಹೋಳಾಗಿಸಿತು. ಕಮುನಿಸ್ಟ್ ಪಕ್ಷದ ಮಾವೋವಾದಿ ಬಣ, ಸಶಸ್ತ್ರ ಹೋರಾಟದ ಮೂಲಕ ಜಮೀನ್ದಾರರನ್ನು ನಿರ್ನಾಮಗೊಳಿಸುವ ಹಾಗೂ ಸರಕಾರವನ್ನು ಕಿತ್ತೊಗೆದು ತಾನು ಅಡಳಿತ ಸೂತ್ರ ಹಿಡಿಯುವ ಬಿಗಿಪಟ್ಟಿನ ನಿರ್ಧಾರ ಕೈಗೊಂಡು ಮಾತೃ ಪಕ್ಷದಿಂದ ಬೇರೆಯಾಯಿತು.

ಹೀಗೆ ಹುಟ್ಟಿತು ನಕ್ಸಲೀಯ ಆಂದೋಲನ. ಚಾರು ಮಜುಂದಾರ್, ಕಾನು ಸನ್ಯಾಲ್ ರಕ್ತಸಿಕ್ತ ನಕ್ಸಲ್ ಹೋರಾಟದ ಮುಂಚೂಣಿಯ ನಾಯಕರು. ಸಶಸ್ತ್ರ ಹೋರಾಟ ಮಾರ್ಗದಿಂದ ಮಾತ್ರ ಗೇಣಿ ರೈತರು,ಕೃಷಿ ಕಾರ್ಮಿಕರು ತಮ್ಮ ಗುರಿ ತಲುಪಲು ಸಾಧ್ಯ ಎನ್ನುವುದು ಚಾರುಮಜುಂದಾರ್ ಅವರ ದೃಢ ನಿಲುವಾಗಿತ್ತು. ಈ ಬಿಗಿನಿಲುವು ನಕ್ಸಲ್‌ಬಾರಿ ರೈತ ಹೋರಾಟಗಾರರನ್ನು ಅಧಿಕಾರಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸರಕಾರದಿಂದ ಭಿನ್ನವಾಗಿಸಿತು. ಕಮುನಿಸ್ಟ್ ಸರಕಾರದಿಂದ ಪಥಭ್ರಮಣ ಹೊಂದುವುದು ನಕ್ಸಲೀಯರಿಗೆ ಅನಿವಾರ್ಯವಾಯಿತು.

ರೈತರು, ಭೂರಹಿತ ಕೃಷಿ ಕಾರ್ಮಿಕರು, ದಲಿತರು, ಆದಿವಾಸಿಗಳು, ಗುಡ್ಡಗಾಡು ಜನರು, ನೇಪಾಳಿಗಳು ಪ್ರಾರಂಭಿಸಿದ ಹೋರಾಟ ಬಂಗಾಳದ ಮಧ್ಯಮವರ್ಗದ ಜನರನ್ನೂ ಬುದ್ಧಿಜೀವಿಗಳನ್ನೂ ಆಕರ್ಷಿಸಿತು ಹಾಗೂ ಚಾರುಮಜುಂದಾರ್ ಈ ಹೋರಾಟಕ್ಕೊಂದು ಸೈದ್ಧಾಂತಿಕ ಭೂಮಿಕೆಯನ್ನು ಒದಗಿಸಿದರು.ಚಾರು ಮಜುಂದಾರ್ 1969ರಲ್ಲಿ ಮಾರ್ಕ್ಸ್‌ವಾದಿ ಲೆನಿನ್‌ವಾದಿ ಪಕ್ಷವನ್ನು ಆರಂಭಿಸಿದರು. ಜಂಗಲ್ ಸಂತಾಲ್, ಕಾನು ಸನ್ಯಾಲ್, ಖೊಕೊನ್ ಮಜುಂದಾರ್, ನಿಮು ಸಿಂಗ್ ಮತ್ತು ಮುಜೀಬುರ್ ರಹ್ಮಾನ್ ಮುಂತಾದವರು ತಳಮಟ್ಟದಲ್ಲಿ ಹೊಸ ಪಕ್ಷವನ್ನು ಕಟ್ಟುವ ಹಾಗೂ ಹೋರಾಟ ಮುಂದುವರಿಸುವ ಹೊಣೆಹೊತ್ತರು.

ಗಾಳೇಶ್ವರಿ ದೇವಿ, ಸಾವಿತ್ರಿ ದಾಸ್, ಕೃಷ್ಣಮಾಯಾ ಸರ್ಜನ್, ಶಾಂತಿ ಮುಂಡ ಮೊದಲಾದ ಜಾಗೃತ ಮಹಿಳೆಯರೂ ಈ ರೈತ-ಕಾರ್ಮಿಕ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. 1972ರಲ್ಲಿ ಚಾರುಮಜುಂದಾರ್ ನಿಧನಾನಂತರದ ಹಲವು ವರ್ಷಗಳಲ್ಲಿ ಆಂದೋಲನ ದುರ್ಬಲಗೊಂಡಿತು. ಆದರೆ ನಕ್ಸಲಬಾರಿ ಸ್ಫೂರ್ತಿ ಚೈತನ್ಯ ಸಾಯಲಿಲ್ಲ. 1980 ಮತ್ತು1990ರ ದಶಕಗಳಲ್ಲಿ ಬಿಹಾರ್, ತೆಲಂಗಾಣಗಳಲ್ಲಿ ನಡೆದ ರೈತ ಹೋರಾಟಗಳಲ್ಲಿ ನಕ್ಸಲ್‌ಬಾರಿ ವಿಲೀನಗೊಂಡಿತು. ಛತ್ತೀಸ್‌ಗಡದಲ್ಲಿ ನಕ್ಸಲ್ ಆಂದೋಲನ ಇಂದಿಗೂ ಉಗ್ರವಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳೆ ರಡಕ್ಕೂ ತಲೆನೋವಾಗಿ ಪರಿಣಮಿಸಿದೆ. ಛತ್ತೀಸ್‌ಗಡದಲ್ಲಿ ನಕ್ಸಲೀಯರಿಗೆ ಚಾರುಮಜುಂದಾರರ ಸಿದ್ಧಾಂತವೇ ಇಂದಿಗೂ ಪರಮವೇದ. ಬಂದೂಕಿನ ನಳಿಕೆಯಿಂದಲೇ ಅಧಿಕಾರಗ್ರಹಣ ಸಾಧ್ಯ ಎಂದು ಅವರ ದೃಢ ನಂಬಿಕೆ.

 ಶೋಷಣೆ ವಿರೋಧಿ ಹೋರಾಟಗಾರರು ನಕ್ಸಲೀಯರೆನಿಸಿಕೊಂಡರು. ಹೋರಾಟ ದೇಶದ ಶೋಷಿತ ಭಾಗಗಳಿಗೆ ವ್ಯಾಪಿಸಿತು. ಛತ್ತೀಸ್‌ಗಡ, ಜಾರ್ಖಂಡ್, ಬಿಹಾರ್, ಮಧ್ಯಪದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರ, ತೆಲಂಗಾಣ-ಹೀಗೆ ದೇಶದ ವಿವಿಧ ಭಾಗಗಳಲ್ಲಿ ನಕ್ಸಲೀಯರ ಸಶಸ್ತ್ರ ಹೋರಾಟ ಮುಂದುವರಿದಿದ್ದು ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಆದರೆ, ಹೋರಾಟದ ಜನ್ಮಭೂಮಿಯಾದ ನಕ್ಸಲ್‌ಬಾರಿ ಗ್ರಾಮೀಣ ಪ್ರದೇಶ ಈ ಇಪ್ಪತ್ತೊಂದನೆಯ ಶತಮಾನದಲ್ಲಿ, ಇಪ್ಪತ್ತನೆಯ ಶತಮಾನದ ಅರವತ್ತರ ದಶಕದಲ್ಲಿ ನಕ್ಸಲೀಯ ಆಂದೋಲನ ಆರಂಭವಾದಾಗ ಹೇಗಿತ್ತೋ ಹಾಗೆಯೇ ಇದೆ. ಈಗಲೂ ಇದು ಒಂದೇ ಒಂದು ರಸ್ತೆ ಇರುವ ಗ್ರಾಮ. ಆದರೆ ಗ್ರಾಮದ ಗೋಡೆಗಳು ಮಾತ್ರ ಶೋಷಿತ ರೈತಕಾರ್ಮಿಕರ ಹೃದಯಗಳ ಕನಸುಗಳಿಗೆ ಭಿತ್ತಿಯೇ ಆಗಿದೆ. ಗ್ರಾಮದ ಗೋಡೆಗಳನ್ನು ನಕ್ಸಲ್‌ಬಾರಿ ಸುವರ್ಣ ಮಹೋತ್ಸವಾಚರಣೆಯ ಘೋಷಣೆಗಳು ಮತ್ತು ಭಿತ್ತಿಚಿತ್ರಗಳು ಅಲಂಕರಿಸಿವೆ. ಇವುಗಳ ಮಧ್ಯೆ ಅಮಿತ್ ಶಾ ಭೇಟಿಯ ಚಿತ್ರಗಳೂ ನುಸುಳದೇ ಇಲ್ಲ.

 ಸುವರ್ಣ ಮಹೋತ್ಸವ ಆಚರಿಸಲು ಗ್ರಾಮದ ಜನತೆ ಸಡಗರ ಸಂಭ್ರಮಗಳಿಂದ ಸಿದ್ಧತೆ ನಡೆಸಿದ್ದಾರೆ. ಚಾರು ಮಜುಂದಾರ್ ಅವರ ಮಗ ಅಭಿಜಿತ್ ಮಜುಂದಾರ್ ಸುವರ್ಣ ಮಹೋತ್ಸವ ಆಚರಣೆಯ ಪ್ರಚಾರದ ನಾಯಕತ್ವ ವಹಿಸಿದ್ದಾರೆ. ಗೋಡೆಗಳ ಮೇಲೆ ಬರೆಯಬೇಕಾದ ಘೋಷಣೆಗಳು, ಚಿತ್ರಗಳು ಇವುಗಳ ವಿನ್ಯಾಸವೆಲ್ಲ ಹಗಲುರಾತ್ರಿ ಶ್ರಮಿಸುತ್ತಿರುವ ಅಭಿಜಿತ್ ಮಜುಂದಾರನದ್ದೇ. ಮಾರ್ಕ್ಸ್‌ವಾದಿ ಲೆನಿನ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಹಗಲುರಾತ್ರಿಯೆನ್ನದೆ ಗೋಡೆ ಬರಹಗಳಲ್ಲಿ, ಕರಪತ್ರಗಳ ಹಂಚಿಕೆಯಲ್ಲಿ ನಿರತರಾಗಿದ್ದಾರೆ.ರಾಷ್ಟ್ರದ ವಿವಿಧ ಭಾಗಳಿಂದ ಬುದ್ಧಿಜೀವಿಗಳು, ನಾಗರಿಕ ಸೇವಾ ಸಂಘಸಂಸ್ಥೆಗಳ ಪ್ರತಿನಿಧಿಗಳು ನಕ್ಸಲ್‌ಬಾರಿ ಸುವರ್ಣಮಹೋ ತ್ಸವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಕ್ಸಲ್‌ಬಾರಿ ರೈತ ಹೋರಾಟದಲ್ಲಿ ಹುತಾತ್ಮರಾದವರ ಕುಟುಂಬಗಳೂ ಎದೆಯಲ್ಲಿ ರಕ್ತಸಂಬಂಧಿಗಳನ್ನು ಕಳೆದುಕೊಂಡ ನೋವಿನ ಜೊತೆಗೆ ಹೊಸ ಭರವಸೆ ನಿರೀಕ್ಷೆಗಳ ಕನಸುಗಳನ್ನು ಹೊತ್ತು ಭಾಗವಹಿಸಲಿದ್ದಾರೆ. ಈ ಸಮಾವೇಶದ ಸಂದೇಶ ಏನಿದ್ದೀತೋ?

ನಕ್ಸಲ್‌ಬಾರಿ ಗ್ರಾಮಸ್ಥರಿಗೆ ಇದು ವಾಮವಾದಿ ಉಗ್ರಚಿಂತನೆ ಕುಡಿಯೊಡೆದ ಕ್ಷಣದ ಉತ್ಸವವಾದರೆ ಅತ್ತ ದೇಶದ ಏಳೆಂಟು ರಾಜ್ಯಗಳ ಅರವತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶೋಷಣೆ ವಿರುದ್ಧ ಹೋರಾಟವನ್ನೇ ಜೀವದುಸಿರಾಗಿಸಿಕೊಂಡು ಕ್ರಿಯಾಶೀಲರಾಗಿರುವ ಮಾವೋವಾದಿ ನಕ್ಸಲೀಯರಿಗೆ ಈ ಹೋರಾಟ ವೊಂದು ನಿತ್ಯೋತ್ಸವವಿದ್ದಂತೆ. ಅಜ್ಞಾತ ಪಾಳಯಗಳಲ್ಲಿ ಸರಕಾರವನ್ನು ಬುಡಮೇಲುಗೊಳಿಸುವ ಸಂಚು ನಡೆದೇ ಇದೆ. ಬಂದೂಕಿನ ನಳಿಕೆಯಿಂದಲೇ ದಿಲ್ಲಿಯ ಕೆಂಪುಕೋಟೆ ಹಿಡಿಯುವ ಚಿರಕನಸುಗಾರರು ಅವರು. ನಕ್ಸಲೀಯರು ಹೆಜ್ಜೆಯಿರಿಸಿರುವ ಪ್ರದೇಶಗಳಲ್ಲಿ ಯಾವ ಕ್ಷಣ ದಾಳಿಯೋ ಎಂಬ ಆತಂಕ ಅಮಾಯಕ ಪ್ರಜೆಗಳಲ್ಲಿ ಮತ್ತು ಕಾಯುವ ಪೊಲೀಸ್ ಪಡೆಗಳಲ್ಲಿ. ಮೊನ್ನೆಮೊನ್ನೆಯಷ್ಟೇ ಛತ್ತೀಸ್‌ಗಡದ ಸುಕ್ಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 25 ಮಂದಿ ನಕ್ಸಲೀಯರ ದಾಳಿಯಲ್ಲಿ ಹುತಾತ್ಮರಾದರು.

ನಂತರ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಹದಿನೈದು ಮಂದಿ ಮಾವೋವಾದಿ ನಕ್ಸಲೀಯರು ಹತರಾದರು- ಸಿದ್ಧಾಂತವೊಂದಕ್ಕಾಗಿ ಪ್ರಾಣತ್ಯಾಗಮಾಡಿದ ಅವರೂ ಹುತಾತ್ಮರೇ. ಶಸ್ತ್ರಾಸ್ತ್ರ ತ್ಯಜಿಸಿ ಬಂದರೆ ಮಾತುಕತೆಗೆ ಸಿದ್ಧ ಎನ್ನುತ್ತದೆ ಕೇಂದ್ರ ಸರಕಾರ. ಇಂಥ ಮಾತುಕತೆಯಲ್ಲಿ ನಂಬಿಕೆ ಕಳೆದುಕೊಂಡಿರುವ ಮಾವೋವಾದಿ ನಕ್ಸಲೀಯರದ್ದು ಒಂದಲ್ಲ ಒಂದು ದಿನ ಬಂದೂಕಿನ ನಳಿಕೆಯಿಂದಲೇ ದಿಲ್ಲಿ ಹಿಡಿಯುವ ಅಚಲ ನಂಬಿಕೆ. ಒಂದು ನಿದರ್ಶನ. ಛತ್ತೀಸ್‌ಗಡದ ದಾಂತೇವಾಡ ಕಳೆದ ಎರಡು ದಶಕಗಳಿಂದ ಮಾವೋವಾದಿಗಳ ಕ್ರಿಯಾ ಕೇಂದ್ರವಾಗಿದೆ. ಛತ್ತೀಸ್‌ಗಡದಿಂದ ಆಂಧ್ರಪ್ರದೇಶ ಮತ್ತು ಮಹಾ ರಾಷ್ಟ್ರವರೆಗೆ ಚಾಚಿಕೊಂಡಿರುವ ದಟ್ಟಾರಣ್ಯದ ಭಾಗವಾಗಿರುವ ದಾಂತೇವಾಡ ಗೆರಿಲ್ಲಾ ಮಾದರಿಯ ಹೋರಾಟಕ್ಕೆ ಹೇಳಿಮಾಡಿಸಿದಂಥ ಪ್ರದೇಶ.ಇದೇ ಪುರಾಣದಲ್ಲಿ ಬರುವ ದಂಡಕಾರಣ್ಯ.

ಈ ಪ್ರದೇಶವನ್ನು ಮಾವೋವಾದಿಗಳು ತಮ್ಮ ಹೋರಾಟದ ಕೇಂದ್ರವಾಗಿ ದತ್ತು ತೆಗೆದುಕೊಂಡಿ ದ್ದಾರೆ. ದಂಡಕಾರಣ್ಯದ ಹಳ್ಳಿಹಳ್ಳಿಗಳಲ್ಲೂ ನಕ್ಸಲೀಯರ ಸಮಿತಿಗಳಿವೆ. ಪ್ರತೀ ಹಳ್ಳಿಯಲ್ಲೂ ಬದ್ಧ ಕಾರ್ಯಕರ್ತರಿ ದ್ದಾರೆ. ಈ ಕಾರ್ಯಕರ್ತರನ್ನು ‘ಸಂಗಂ’ ಎಂದು ಕರೆಯ ಲಾಗುತ್ತದೆ. ಜಲ, ಜಂಗಲ್, ಮತ್ತು ಜಮೀನ್ ಈ ಮೂರರ ಮೇಲಣ ದಾಂತೇವಾಡದ ಜನರ ಹಕ್ಕಿನ ರಕ್ಷಣೆ ತಮ್ಮ ಹೊಣೆ ಎನ್ನುತ್ತಾರೆ ‘ಸಂಗಂ’ ಕಾರ್ಯಕತರು. ಈ ಹಕ್ಕಿನ ರಕ್ಷಣೆಗಾಗಿ ಮಾವೋವಾದಿಗಳು ಸರಕಾರದ ಅಧಿಕಾರಿಗಳ ಮೇಲೆ, ವಿಶೇಷವಾಗಿ ಪೊಲೀಸರ ಮೇಲೆ ದಾಳಿ ನಡೆಸು ತ್ತಲೇ ಇದ್ದಾರೆ. ದಂಡಕಾರಣ್ಯವನ್ನು ಶೋಷಣೆಮುಕ್ತ ವಲಯವನ್ನಾಗಿಸುವುದು ಮಾವೋವಾದಿಗಳ ಕನಸು. ಒಮ್ಮೆ ಈ ಕನಸು ಈಡೇರಿದರೆ ಅದು ದಿಲ್ಲಿಯಲ್ಲಿ ಅಧಿಕಾರಗ್ರಹಣ ಮಾಡಲು ಚಿಮ್ಮುಹಲಗೆಯಾಗುವುದೆಂದು ಅವರ ಭರವಸೆ. ಈ ನಿಟ್ಟಿನಲ್ಲಿ ನಿರಂತರವಾಗಿ ಸಂಘರ್ಷ ನಡೆದಿದೆ.

ಈ ಸಂಘರ್ಷದಲ್ಲಿ ಪೊಲೀಸರು, ಮಾವೋ ವಾದಿಗಳು, ಅಮಾಯಕ ನಾಗರಿಕರು ಸೇರಿದಂತೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಆದರೆ ಮಾವೋವಾದಿಗಳು ಭಗ್ನಮನೋರಥರಾಗಿಲ್ಲ. ಸದ್ಯ ಗೆರಿಲ್ಲಾ ಮಾದರಿ ಹೋರಾಟದ ಪ್ರಾವೀಣ್ಯತೆಯಿಂದಾಗಿ ದಂಡಕಾರಣ್ಯದ ಮೇಲೆ ಅವರಿಗೆ ಹಿಡಿತ ಸಾಧ್ಯವಾಗಿರಬಹುದು. ಆದರೆ ಬಯಲು ಸೀಮೆಯ ಮೇಲೆ ಅವರು ಇದೇ ಹಿಡಿತ ಸಾಧಿಸುತ್ತಾರೆಂದು ಹೇಳಲಾಗದು. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿರುವಂತೆ ದೇಶದ ಮಿಲಿಟರಿ ಶಕ್ತಿಯ ಎದುರು ಅವರ ಆಟ ನಡೆಯದು. ಅವರ ಕನಸು ಒಂದು ಭ್ರಮೆಯಷ್ಟೆ. ದಿಲ್ಲಿಯ ಕೆಂಪು ಕೋಟೆಯ ಮೇಲೆ ಕೆಂಪು ಧ್ವಜ ಹಾರಿಸುವ ಅವರ ಕನಸು ಎಂದಿಗಾದರೂ ಈಡೇರೀತೆಂಬ ಭರವಸೆಯಿಲ್ಲ.

 ನರಮೇಧದಲ್ಲಿ ಫ್ಯಾಶಿಸ್ಟರಾಗಲೀ, ತೀವ್ರಗಾಮಿ ಬಲಪಂಥೀಯರಾಗಲೀ, ಎಡಪಂಥೀಯರಾಗಲೀ ಯಾರೂ ಕಡಿಮೆಯಲ್ಲ. ಹಿಟ್ಲರ್‌ನ ಜನಾಂಗೀಯ ದ್ವೇಷ ಮೂವತ್ತು ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತು.ಕ್ರಾಂತಿಕಾರಿ ಕಮ್ಯುನಿಸ್ಟ್ ಸಿದ್ಧಾಂತ ಇದಕ್ಕೂ ಹೆಚ್ಚಿನ ಜನರನ್ನು ಬಲಿತೆಗೆದುಕೊಂಡಿದೆಯೆಂದು ಕೆಲವರು ಅಂದಾಜು ಮಾಡಿದ್ದಾರೆ. ಪುಣ್ಯಭೂಮಿ, ಭರತ ಭೂಮಿಯ ರಕ್ತದಾಹ ಇಂಗುವುದೆಂತೋ ಎಂದೋ....

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News