ನನ್ನೂರಿನ ಸರಳ ಸಜ್ಜನಿಕೆಯ ಶಾಸಕರು
ನಾವು ಕಾಪಿಕಾಡಿನಲ್ಲಿದ್ದಾಗಲೇ ಮಂಗಳೂರಿಗೆ ಸಾರ್ವಜನಿಕ ನಳ್ಳಿಗಳು ರಸ್ತೆಯಲ್ಲಿದ್ದು, ಸಾರ್ವಜನಿಕ ಬಾವಿಗಳನ್ನು ಮುಚ್ಚಲಾಗಿತ್ತು. ಕೆಲವರು ತಮ್ಮ ಹಿತ್ತಿಲಿನೊಳಗಿನ ಬಾವಿಯ ನೀರನ್ನು ಕೂಡಾ ಕುಡಿಯಲು ಉಪಯೋಗಿಸುವುದನ್ನು ಬಿಟ್ಟವರೂ ಇದ್ದಾರೆ. ಬೇಸಗೆಯ ರಜಾ ದಿನಗಳಲ್ಲಿ ನಮ್ಮ ಬಾವಿಯಲ್ಲಿ ನೀರು ಬತ್ತಿ ಹೋಗುತ್ತಿತ್ತು. ನಾವು ಹತ್ತಿರದ ಮಲ್ಲಿಗೆ ತೋಟಗಳ ಬಾವಿಗಳಿಂದ ನೀರು ಸೇದಿ ತರಲು ಅವಕಾಶವಿದ್ದರೂ ಮಲ್ಲಿಗೆ ತೋಟಕ್ಕೆ ನೀರು ಬೇಕಾಗಿದ್ದುದರಿಂದ ಹೆಚ್ಚಿನ ನೀರಿಗಾಗಿ ರಸ್ತೆ ಬದಿಯ ನಳ್ಳಿ ನೀರಿಗೆ ಕೊಡಪಾನವಿಟ್ಟು ಕ್ಯೂ ನಿಂತು ತರುತ್ತಿದ್ದೆವು. ಆಗ ಅಲ್ಲಿ ಯಾರೂ ಜಗಳವಾಡಿದ್ದು ನೆನಪಿಲ್ಲ. ಬಹುಶಃ ಎಲ್ಲರ ಮನೆಯ ಬಾವಿಗಳ ನೀರು ಕೂಡಾ ಉಪಯೋಗವಾಗುತ್ತಿದ್ದಿರಬೇಕು. ಆದರೆ ಈಗ ಸಾರ್ವಜನಿಕ ನಳ್ಳಿಗಳು ಇಲ್ಲವಾಗಿ ಪಟ್ಟಣದ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ಅಂದರೆ ನಳ್ಳಿ ನೀರಿನ ವ್ಯವಸ್ಥೆಯನ್ನು ಮುನಿಸಿಪಾಲಿಟಿ ಮಾಡಿತ್ತು. ಆದರೆ ಬೇಸಗೆ ಬಂತು ಎಂದರೆ ನಮ್ಮ ಇಷ್ಟು ಮನೆಗಳಿಗೆ ನೀರು ಸಾಕಾಗುತ್ತಿರಲಿಲ್ಲ. ಮನೆಯೊಳಗಿನ ನೀರಿನ ನಳ್ಳಿ ವ್ಯವಸ್ಥೆ ಎಪ್ರಿಲ್ ಮೇ ತಿಂಗಳಲ್ಲಿ ಬರಿದಾಗಿರುತ್ತಿತ್ತು. ಈ ಕಾರಣದಿಂದ ದಡ್ಡಲ್‌ಕಾಡ್‌ನ ಪ್ರಾರಂಭದಲ್ಲಿಯೇ ಬಲ ಬದಿಯ ಖಾಲಿ ಜಾಗದಲ್ಲಿ ಒಂದು ಬೋರ್‌ವೆಲ್ ಕೊರೆದ ನೆನಪು. ಹಾಗೆಯೇ ಇದರ ಉಪಯೋಗ ಹೆಚ್ಚಾಗಿ ಬೇಕಾಗುತ್ತಿದ್ದುದು ನಮ್ಮ ಸಾಲಿನ ಮನೆಗಳವರಿಗೆ ಮತ್ತು ನಮ್ಮ ಧಣಿಗಳ ಮನೆಗೆ. ರಾತ್ರಿಯ 7 ಗಂಟೆಯಿಂದ ಈ ನೀರನ್ನು ಬಿಡುವ ವ್ಯವಸ್ಥೆಯಿದ್ದು ಅದಕ್ಕಾಗಿ ಸರತಿ ಸಾಲಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಸರತಿ ಸಾಲು ಮನುಷ್ಯರಿಗೆ ಮಾತ್ರ ಆಗಿ ಅವರು ಇಡಬಹುದಾದ ಕೊಡಪಾನ, ಬಕೆಟ್ ಇತರ ಪಾತ್ರೆ ಪಗಡಿಗಳ ಸಂಖ್ಯೆಗೆ ಸಂಬಂಧಿಸದೆ ಹೋದುದರಿಂದ ಒಬ್ಬ ವ್ಯಕ್ತಿ ಹತ್ತು ಪಾತ್ರೆಗಳನ್ನು ತುಂಬಿದ ಬಳಿಕ ಒಂದೇ ಕೊಡ ಇರುವವಳು ಅಷ್ಟನ್ನೇ ತುಂಬಿ ಒಯ್ಯಬೇಕಾಗುತ್ತಿತ್ತು. ಇದು ನ್ಯಾಯವಲ್ಲದ ಲೆಕ್ಕಾಚಾರ. ಹೀಗೆ ಸರತಿ ಸಾಲಲ್ಲಿ ನಿಂತು ನೀರು ಒಯ್ಯುವ ಕೆಲಸ ಮನೆಯ ಹೆಂಗಸರು ಮತ್ತು ಸ್ವಲ್ಪ ದೊಡ್ಡ ಮಕ್ಕಳದ್ದು. ಇಲ್ಲಿ ನಾನು ಸೋತು ಹೋದೆ. ಆಗಲೇ ಹೇಳಿದಂತೆ ಧಣಿಯ ಮನೆಯ ಕೆಲಸದ ಹುಡುಗಿ ಅಷ್ಟೇ ಪಾತ್ರೆಗಳಲ್ಲಿ ತುಂಬಿ ಪಕ್ಕಕ್ಕಿಟ್ಟು ಒಂದೊಂದನ್ನೇ ಒಯ್ದು ಮನೆಯ ಟಾಂಕಿ ತುಂಬಿಸಿಟ್ಟರೆ ನಮಗೆಲ್ಲಾ ಸಿಗುವ ನೀರಿನ ಪ್ರಮಾಣ ಕಡಿಮೆ. ಜೊತೆಗೆ ಅವಳ ಸಾಲಲ್ಲಿ ಒಂದೆರಡು ತನ್ನ ಕೊಡ ಇಟ್ಟು ತನ್ನ ಸರತಿ ಸಾಲಲ್ಲಿಯೂ ಇನ್ನೆರಡು ಕೊಡ ತುಂಬಿಸಿಕೊಳ್ಳುವ ಜಾಣ್ಮೆಯನ್ನು ಮೆರೆವ ಹೆಂಗಸರ ಬಗ್ಗೆ ಅವರ ಅಪೂರ್ವವಾದ ಈ ಸ್ನೇಹಾಚಾರ ಉಳಿದವರಿಗೆ ಬೇಸರ ಉಂಟು ಮಾಡುತ್ತಿತ್ತು. ಆಗ ನ್ಯಾಯದ ಮಾತು ಆಡಿದರೆ ಅದು ತಪ್ಪಾಗಿ ಕಾಣಿಸುತ್ತಿತ್ತು. ಮಾತ್ರವಲ್ಲ ಅದು ಧಣಿ ಮನೆಯ ಯಜಮಾನನಿಗೆ ಉಪ್ಪು ಖಾರ ಬೆರೆಸಿ ರುಚಿಯಾಗಿ ಹೇಳಲ್ಪಡುತ್ತಿತ್ತು. ಆಗ ಸಾಲಿನ ಮನೆಗಳ ಹೆಂಗಸರ ನಡುವೆ ಅಸಮಾಧಾನ ಉಂಟಾಗುತ್ತಿತ್ತು. ಹಾಗೆಯೇ ನೀರಿನ ಕಟ್ಟೆಯ ಈ ಅಸಮಾಧಾನ ಅಲ್ಲಿಗೇ ನಿಲ್ಲದೆ ಮುಂದಿನ ಸ್ನೇಹಾಚಾರಗಳನ್ನು ಆಲೋಚಿಸಿ ವ್ಯವಹರಿಸುವಂತೆ ಮಾಡುತ್ತಿತ್ತು ಎಂದರೆ ತಪ್ಪಲ್ಲ. ಇಂತಹ ಅನುಭವ ನನಗೆ ಹೊಸದು. ಜೊತೆಗೆ ಸರಳವಾದ ನ್ಯಾಯಪಾಲನೆಯೊಳಗೆ ಇಂತಹ ಜಾಣ್ಮೆ ತೋರುವ ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎಂದು ನನಗೆ ಸಾಬೀತಾಯಿತು. ಇಂತಹ ನೆರೆಕರೆಯ ಕರೆಕರೆಯಿಂದ ನೆರೆಯೆನ್ನುವುದು ಹೊರೆಯಾಗುತ್ತಿತ್ತು ಮನಸ್ಸಿಗೆ. ಇಂತಹ ಅಸಮಾಧಾನಗಳು ಶಾಶ್ವತವೆಂದಲ್ಲವಾದರೂ ಮತ್ತೆ ವ್ಯವಹರಿಸುವಾಗ ಪೇಟೆಯ ಜನರ ಜಾಣ್ಮೆಯೊಂದಿಗೆ ಮನುಷ್ಯ ಸಹಜ ಮುಗ್ಧತೆಗೆ, ವಿಶ್ವಾಸಕ್ಕೆ ಸ್ಥಾನ ಇಲ್ಲ ಎನ್ನುವುದನ್ನು ತಿಳಿದೇ ಚಕ್ರವ್ಯೆಹಕ್ಕೆ ಬಲಿಯಾಗದಂತೆ ಬದುಕುವ ಜಾಣ್ಮೆ ನಾನೂ ಕಲಿಯಬೇಕಾಯಿತು.
ಈ ನಡುವೆ ನನ್ನ ಮಾವನವರನ್ನು ಸ್ವಂತ ಮನೆ ಹಿತ್ತಲಿನ ಕನಸು ಕೋಟೆಕಾರಿನಿಂದ ಇಲ್ಲಿಗೂ ಬೆಂಬತ್ತಿಕೊಂಡೇ ಬಂದಿತ್ತು. ಅವರು ಸಮಯ ಸಿಕ್ಕಾಗಲೆಲ್ಲಾ ಕೊಟ್ಟಾರ ಕ್ರಾಸಿನಿಂದ ಚಿಲಿಂಬಿಗುಡ್ಡೆಗೆ ಹೋಗುವ ಎಲ್ಲಾ ಓಣಿಗಳಲ್ಲಿ ಓಡಾಡಿ ಮಾರುವ ಮನೆ ಹಿತ್ತಲು ಇದೆಯಾ? ಎಂದು ವಿಚಾರಿಸುತ್ತಲೇ ಇದ್ದುದು ನಮ್ಮ ಗಮನಕ್ಕೂ ಬರುತ್ತಿತ್ತು. ಹೀಗೆ ಸ್ವಂತ ಮನೆ ಹಿತ್ತಿಲಿನ ಕನಸನ್ನು ಅವರು ನನ್ನ ಮನಸ್ಸಿನೊಳಗೂ ತುಂಬಿದ್ದರು. ನಾವು ಕಾಲೇಜಿನಲ್ಲಿ ಒಂದೇ ವರ್ಷ ಸೇರಿಕೊಂಡ ಮೂವರು ಉಪನ್ಯಾಸಕರು ಕಾಕತಾಳೀಯವೆಂಬಂತೆ ಒಂದೇ ವರ್ಷದ ಆರು ತಿಂಗಳೊಳಗೆ ಗೃಹಸ್ಥರಾಗಿದ್ದೆವು. ಆದರೆ ಯಾರಿಗೂ ಸ್ವಂತ ಗೃಹ ಇರಲಿಲ್ಲ. ಈಗ ಎಲ್ಲರೂ ಒಂದು ಮಗುವಿನ ಹೆತ್ತವರಾದ ಬಳಿಕ ಮದುವೆ ಆಗಿ ನೋಡು ಎನ್ನುವ ಗಾದೆಯ ಬಳಿಕದ ಮನೆ ಕಟ್ಟಿ ನೋಡು ಎಂಬ ಗಾದೆಯ ಸುತ್ತಲೇ ಚರ್ಚಿಸುತ್ತಿದ್ದೆವು. ಹಣ ಇದ್ದು ಅಲ್ಲ, ಹಣ ಕೂಡಿಟ್ಟು ಆಗುವ ಕೆಲಸಗಳಲ್ಲ. ಧೈರ್ಯದಿಂದ ಸಾಲ ಮಾಡಲು ಕಲಿಯಬೇಕು ಎಂದು ನಮ್ಮ ಹಿರಿಯ ಸಹೋದ್ಯೋಗಿಗಳ ಉಪದೇಶವೂ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಾವು ಮೂರು ಸಂಸಾರದ ಆರು ಮಂದಿ ಕೆಲವಾರು ಕಡೆ ಜಾಗ ನೋಡಲು ಹೋದುದು ಇತ್ತು. ನಮ್ಮ ಸಾಲದ ಬಜೆಟ್‌ನೊಳಗೆ ಸಾಧ್ಯವಾಗಲಿಲ್ಲ ಎನ್ನುವುದರ ಜೊತೆಗೆ ಒಬ್ಬರಿಗೆ ಮೆಚ್ಚುಗೆಯಾದುದು ಇನ್ನೊಬ್ಬರಿಗೆ ಮೆಚ್ಚುಗೆಯಾಗುತ್ತಿರಲಿಲ್ಲ. ಜೊತೆಗೆ ಅವರಿಗೆ ಮಂಗಳೂರಿನಲ್ಲಿ ಕಾಲೇಜಿಗೆ ಐದಾರು ಕಿಲೋ ಮೀಟರ್‌ನೊಳಗೆ ಎಲ್ಲಾದರೂ ಆಗಬಹುದಿತ್ತು. ಆದರೆ ನನಗೆ ಮಂಗಳೂರು ನನ್ನದೇ ಪೇಟೆಯಾಗಿದ್ದುದರಿಂದ ಈ ಪೇಟೆಯೊಳಗಿನ ಸಣ್ಣ ಸಣ್ಣ ಊರುಗಳ ಸ್ಥಳ ಮಹಾತ್ಮೆಗಳು ನನ್ನ ಅಪ್ಪನ, ಅಮ್ಮನ ಅನುಭವಗಳಿಂದ ಗೊತ್ತಿತ್ತು. ಈ ಎಲ್ಲಾ ಕಾರಣಗಳಿಂದ ಅವರಿಬ್ಬರು ಜೊತೆ ಸೇರಿ ಜಾಗ ಖರೀದಿಸಿದರು. ಜೊತೆಗೆ ನಮ್ಮಿಬ್ಬರಿಗೂ ಸಾಹಿತ್ಯದ ಹುಚ್ಚು ಇದ್ದು ನಮ್ಮ ಸಮಯ, ಶ್ರಮ ಹಾಗೂ ಹಣ ಕೂಡಾ ಅದಕ್ಕೆ ವ್ಯಯವಾಗುತ್ತಿದ್ದುದರಿಂದ ಜಾಗ ಖರೀದಿಸಿ ಮನೆ ಕಟ್ಟುವುದು ನಮ್ಮಿಂದ ಸಾಧ್ಯವಿಲ್ಲದ ಕೆಲಸವೆಂದೇ ನನಗನ್ನಿಸುತ್ತಿತ್ತು. ಆದ್ದರಿಂದ ಎಲ್ಲಾದರೂ ಹಳೆ ಮನೆಯನ್ನು ಖರೀದಿಸಿದರೆ ಸ್ವಲ್ಪ ಹಿತ್ತಲು, ಅಂಗಳ ಅಂತ ಇದ್ದರೆ ಮಾವನಿಗೆ ತರಕಾರಿ ಬೆಳೆಸಲು ಸಾಧ್ಯವಾಗಬಹುದು ಎಂದು ನಮ್ಮಿಬ್ಬರ ಯೋಚನೆ. ಮಾವನಿಗೆ ಈ ಮೂರು ಕೋಣೆಯ ಮನೆ ಜೈಲಿನಂತೆಯೇ ಅನ್ನಿಸುತ್ತಿದ್ದುದೂ ಕೂಡಾ ಸತ್ಯವೇ.
ನನ್ನ ಸಹೋದ್ಯೋಗಿಯೊಬ್ಬರು ಸುರತ್ಕಲ್‌ನಿಂದ ಬರುತ್ತಿದ್ದರು. ಅಂದರೆ ಪಣಂಬೂರು ಪ್ರದೇಶದ ಆಸುಪಾಸಿನಲ್ಲಿದ್ದ ಜನವಸತಿಯನ್ನು ಬಿಡಬೇಕಾದ ಅನಿವಾರ್ಯತೆ ಆ ಕೆಲವು ವರ್ಷಗಳ ಹಿಂದೆ ನಡೆದಿತ್ತು. ಒಂದು ನವ ಮಂಗಳೂರು ಸರ್ವಋತು ಬಂದರಿಗಾಗಿ. ಅದರ ಇನ್ನಿತರ ಎಲ್ಲಾ ವಿಭಾಗಗಳ ಅಭಿವೃದ್ಧಿಗಾಗಿ. ಹಾಗೆಯೇ ಎಂಸಿಎಫ್ ಎಂಬ ಮಂಗಳೂರು ಗೊಬ್ಬರ ಕಾರ್ಖಾನೆ ಬಂತು. ಅದಕ್ಕಾಗಿ ಜನ ತಮ್ಮ ಕೃಷಿ ಭೂಮಿಯನ್ನು ನೀಡಬೇಕಾಯಿತು. ಜೊತೆಗೆ ಬೈಕಂಪಾಡಿ ಎನ್ನುವುದನ್ನು ಸಣ್ಣ ಕೈಗಾರಿಕಾ ವಲಯ ಎಂದು ಸರಕಾರ ಘೋಷಿಸಿತು. ಹೀಗೆ ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಈ ಯೋಜನೆಯಿಂದ ನಿರ್ವಸಿತರಾದವರಿಗೆ ಕಾಟಿಪಳ್ಳ ಎಂಬ ವಿಸ್ತಾರವಾದ ಒಂದು ಕಾಲಕ್ಕೆ ನಿಜವಾಗಿಯೂ ಕಾಡು ಕೋಣಗಳು ಸಂಚರಿಸುತ್ತಿದ್ದ ಹುಲಿಗಳೂ ಇತ್ತು ಎನ್ನುವ ಕಾಡನ್ನು ಕಡಿದು ಆಧುನಿಕ ನಾಡನ್ನಾಗಿ ಪರಿವರ್ತಿಸುವ ಯೋಜನೆ ನಡೆದು, ಹಲವು ಸಾವಿರ ಕುಟುಂಬಗಳು ತಮ್ಮ ಅನ್ನದ ಬಟ್ಟಲನ್ನು ತ್ಯಜಿಸಿ ಕಾಟಿಪಳ್ಳಕ್ಕೆ ವಲಸೆ ಹೋದರು. ಸರಕಾರ ತಮ್ಮ ಕುಟುಂಬಕ್ಕೆ ಕೊಟ್ಟ 12.5 ಸೆಂಟ್ಸ್ ಜಾಗಗಳಲ್ಲಿ ಅವರು ಕೊಟ್ಟ ಮೂರು ಸಾವಿರ ರೂಪಾಯಿಯ ಸಾಲದೊಂದಿಗೆ ಮನೆ ಕಟ್ಟಿಕೊಂಡು ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದರು. ಇಂತಹ ಕುಟುಂಬದ ಸದಸ್ಯರಾದ ನನ್ನ ಸಹೋದ್ಯೋಗಿಗಳು ಅಲ್ಲಿ ಕೆಲವು ಮನೆ ಹಿತ್ತಿಲುಗಳು ಮಾರಾಟಕ್ಕಿವೆ ಎಂದು ಹೇಳುತ್ತಿದ್ದರು. ನಿಜವಾಗಿಯೂ ಸರಕಾರ ಕೊಟ್ಟ ಈ ಸ್ಥಳವನ್ನು ಹನ್ನೆರಡು ವರ್ಷವಾಗುವವರೆಗೆ ಮಾರುವಂತಿಲ್ಲ ಎಂಬ ಷರತ್ತು ಇತ್ತು. ಅದು ಪೂರ್ಣಗೊಳ್ಳುವುದಕ್ಕೆ ಕೆಲವು ತಿಂಗಳೋ, ಒಂದು ವರ್ಷವೋ ಬಾಕಿ ಇತ್ತು. ಆದರೂ ಬಹಳಷ್ಟು ಜನರು ತಮ್ಮ ಹೆಸರಿಗೆ ರಿಜಿಸ್ಟ್ರೇಶನ್ ಮಾಡದೆಯೇ ‘‘ಕೈಕಾಗದ’’ ಎಂಬ ಒಪ್ಪಂದದ ಮೂಲಕ ಜಾಗ ಮಾರುತ್ತಿದ್ದರು. ಉಳಿದವರು ಖರೀದಿಸುತ್ತಿದ್ದರು. ಈ ವಿಷಯವೂ ನಮ್ಮಲ್ಲಿ ಚರ್ಚೆಯಾಗುತ್ತಿತ್ತು. ಆ ಮನೆಗಳಾದರೋ ಮಣ್ಣಿನ ಮನೆ, ಹೆಂಚಿನ ಮನೆಗಳಾಗಿದ್ದು ಈಗಾಗಲೇ ಪೇಟೆಯನ್ನು ವಿನ್ಯಾಸಗೊಳಿಸಿದ ತಾರಸಿ ಮನೆಗಳು ಅಲ್ಲಿಲ್ಲ ಎನ್ನುವುದೂ ತಿಳಿದಿತ್ತು. ಜೊತೆಗೆ ಅಷ್ಟು ದೂರ ಹೋಗಿ ಇರುವುದು ಸಾಧ್ಯವೇ? ಎಂಬ ಪ್ರಶ್ನೆಯೂ ಮುಖ್ಯವಾಗಿತ್ತು. ಅಂತೂ ಮನೆ ಹಿತ್ತಿಲು ಖರೀದಿಸುವ ಯೋಚನೆ ಏನಿದ್ದರೂ ನಿಧಾನವಾಗಿ ಆಲೋಚಿಸಿ ತೆಗೆದುಕೊಳ್ಳಬೇಕಾದ ನಿರ್ಣಯವಾದ್ದರಿಂದ ಮನಸ್ಸಿನ ಮೂಲೆಯೊಳಗೆ ತಣ್ಣಗೆ ಕುಳಿತಿತ್ತು.
ದಡ್ಡಲ್‌ಕಾಡಿನಲ್ಲಿದ್ದ ನಿವಾಸಿಗಳಲ್ಲಿ ಒಬ್ಬರಾಗಿದ್ದ ಹಿರಿಯರಾದ ರಾಮಚಂದ್ರರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ನನ್ನ ಅಪ್ಪನ ಸ್ನೇಹಿತರೂ ಆಗಿದ್ದರು. ನನ್ನ ಪರಿಚಯವೂ ಅವರಿಗಿತ್ತು. ದಾರಿಯಲ್ಲಿ ಸಿಕ್ಕಿದಾಗ ಉಭಯ ಕುಶಲೋಪರಿ ಮಾತನಾಡುವ ಸಲುಗೆ ಇತ್ತು. ನಾನು ಈ ಮನೆಯಲ್ಲಿದ್ದ ಅವಧಿಯಲ್ಲಿ ಅವರು ಶಾಸಕರಾಗಿದ್ದರು. ಈ ದಿನಗಳಲ್ಲಿ ಕರ್ನಾಟಕ ಸರಕಾರದ ಒಂದು ಆದೇಶ ಹಲವು ಮಹಿಳೆಯರಿಗೆ ವರವಾಯ್ತು. ಎಸೆಸೆಲ್ಸಿ ಮುಗಿಸಿ ಬಳಿಕ ಶಿಕ್ಷಕ ತರಬೇತಿ ಮಾಡಿದ ಅದೆಷ್ಟೋ ಹೆಣ್ಣು ಮಕ್ಕಳು ಸರಕಾರದ ಶಾಲೆಗಳಿಗೆ ನೇಮಕಾತಿ ಇಲ್ಲದೆ ಇದ್ದುದರಿಂದ ಹಾಗೆಯೇ ಉಳಿದಿದ್ದರು. ಇವರಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಶಿಕ್ಷಕ ವೃತ್ತಿಯ ದಾರಿ ಬಿಟ್ಟು ಬೇರೆ ಸಣ್ಣ ಪುಟ್ಟ ವೃತ್ತಿಗಳಿಗೆ ಹೋದವರೂ ಇದ್ದರು. ಆಗ ಹೊಸ ಖಾಸಗಿ ಶಾಲೆಗಳು, ಇಂಗ್ಲಿಷ್ ಮಾಧ್ಯಮದ ಶಾಲೆಗಳೆಲ್ಲ ಪ್ರಾರಂಭವಾಗಿರಲಿಲ್ಲ. ಶಿಕ್ಷಕ ವೃತ್ತಿ ಸಿಗುವುದಿದ್ದರೆ ಸರಕಾರಿ ಶಾಲೆಗಳು ಅಥವಾ ಅನುದಾನಿತ ಶಾಲೆಗಳಲ್ಲಿ ಮಾತ್ರ ಸಾಧ್ಯವಾಗುವಂತಹುದು.
ಇದೀಗ ಸರಕಾರಿ ಶಾಲೆಗಳಿಗೆ ನೇಮಕಾತಿಯ ಅವಕಾಶ ಕಲ್ಪಿಸಿ ಅದಕ್ಕೆ ಸಂಬಂಧಿಸಿದಂತೆ ಒಂದು ಪರೀಕ್ಷೆಯನ್ನೂ ನಡೆಸಿ ಅದರ ಫಲಿತಾಂಶ ಪ್ರಕಟವಾಗಿತ್ತು. ನೇಮಕಾತಿಯ ಸಂದರ್ಶನ ಆಗಬೇಕಿತ್ತು. ಈ ನಡುವೆ ನನ್ನ ಸಹೋದ್ಯೋಗಿಯೋರ್ವರ ಮಡದಿ ಕೆಲಸ ಸಿಕ್ಕದೆ ಇದ್ದವರು ವಿವಾಹಿತರಾಗಿ ಎರಡು ಮಕ್ಕಳ ತಾಯಿಯಾಗಿ ಮಕ್ಕಳೂ ಶಾಲೆಗೆ ಹೋಗುವಷ್ಟು ವಯಸ್ಸಾಗಿದ್ದು ಸಾಂಸಾರಿಕ ಒತ್ತಡವಿಲ್ಲದೆ ಮನೆಯಲ್ಲಿದ್ದವರು ಅರ್ಜಿ ಹಾಕಿ, ಪರೀಕ್ಷೆ ಪಾಸು ಮಾಡಿಕೊಂಡು ಸಂದರ್ಶನಕ್ಕೆ ಸಿದ್ಧರಾಗಿದ್ದರು. ಆಗ ಈಗಿನಂತೆ ಲಂಚಾವತಾರದ ಅಬ್ಬರವಿರಲಿಲ್ಲ. ಆದರೆ ಸ್ನೇಹ, ಪರಿಚಯಗಳ ಶಿಫಾರಸು ನಡೆಯುತ್ತಿತ್ತು ಎನ್ನುವುದು ನನಗೂ ಗೊತ್ತಿತ್ತು. ಯಾಕೆಂದರೆ ಅಪ್ಪ ಬಹಳ ಮಂದಿಗೆ ಬೇರೆ ಬೇರೆ ಕಡೆಗಳಲ್ಲಿ ಕೆಲಸ ತೆಗೆಸಿ ಕೊಟ್ಟಿರುವುದು ಗೊತ್ತಿತ್ತು. ನನ್ನ ಸಹೋದ್ಯೋಗಿ ಮಿತ್ರರು ಈ ಸಂದರ್ಶನದ ಕಮಿಟಿಯಲ್ಲಿ ಶಾಸಕರೂ ಇದ್ದಾರೆ ಎಂದು ತಿಳಿದುಕೊಂಡು ನನ್ನಲ್ಲಿ ಅವರನ್ನು ಭೇಟಿ ಮಾಡಿ ಮಾತನಾಡಿಸಬಹುದೇ ಎಂದಾಗ ಇಂತಹ ಸಂದರ್ಭ ನನಗೆ ಹೊಸತು. ಆದರೆ ಶಾಸಕರ ಪರಿಚಯವಿದ್ದುದಲ್ಲದೆ ಅವರು ಬಹಳ ಸರಳ ಸಜ್ಜನಿಕೆಯ ವ್ಯಕ್ತಿ ಎನ್ನುವುದೂ ಗೊತ್ತಿತ್ತು. ಒಂದೊಮ್ಮೆ ಅವರು ನನ್ನ ಅಪ್ಪನನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಲು ಕಾಪಿಕಾಡಿನ ಮನೆಗೂ ಬಂದದ್ದು ನನಗೆ ತಿಳಿದಿತ್ತು. ಈ ಧೈರ್ಯದಿಂದ ಸಹೋದ್ಯೋಗಿ ಮಿತ್ರರನ್ನು ಅವರ ಮಡದಿಯ ಸರ್ಟಿಫಿಕೇಟು ಮತ್ತು ಉಳಿದ ಎಲ್ಲಾ ವಿವರಗಳೊಂದಿಗೆ ಅವರ ಮನೆಯಲ್ಲೇ ಭೇಟಿಯಾಗಿ ವಿಷಯವನ್ನು ವಿವರಿಸಿದೆವು. ಅವರು ನನ್ನನ್ನು ಗೌರವದಿಂದ ಕಂಡು ನೀವು ಬಂದು ಕೇಳಿದಾಗ ಇಲ್ಲವೆನ್ನಲಾಗುತ್ತದೆಯೇ. ‘‘ನೀವು ನಮ್ಮ ಮಾಸ್ಟ್ರ ಮಗಳಲ್ಲವೇ?’’ ಎಂದು ಹೇಳುತ್ತಾ ‘‘ಅರ್ಹತೆ ಇದೆಯಲ್ಲಾ. ತಪ್ಪಿ ಹೋಗದಂತೆ ನೋಡಿಕೊಳ್ಳುತ್ತೇನೆ’’ ಎಂದರು. ಅವರು ಆಡಿದ ಮಾತಿನಂತೆ ಸಂದರ್ಶನದಲ್ಲಿ ಆಯ್ಕೆಯಾದರು. ಮೂಲ್ಕಿಯ ಹಳ್ಳಿಯ ಒಂದು ಶಾಲೆಯಲ್ಲಿ ಅವರಿಗೆ ನೇಮಕವಾಯ್ತು. ಉಪಕಾರ ಮಾಡಿದರು ಎನ್ನುವುದರೊಂದಿಗೆ ಪಡಕೊಂಡವರಿಗೆ ಅರ್ಹತೆ ಇತ್ತು ಎನ್ನುವುದು ನಿಜವಾದರೂ ನನ್ನ ಮನಸ್ಸಿಗೆ ಇಂದು ಬರುವ ಆಲೋಚನೆ ಬೇರೆಯ ರೀತಿಯದ್ದು. ಇಂತಹ ಶಾಸಕರು ಇಂದು ಇಷ್ಟೊಂದು ಸರಳವಾಗಿ ಬದುಕುತ್ತಿದ್ದಾರೆಯೇ. ಈ ಶಾಸಕರ ಹಿಂದೆ ಮುಂದೆ ಇರುವ ದಂಡುಪಾಳ್ಯವನ್ನು ನೋಡಿದರೆ ಶಾಸಕರ ಕೆಲಸದ ವೈಖರಿಗಳ ಬಗ್ಗೆ, ಶಾಸಕರ ಬಗೆಗಿನ ಘನತೆಯ ಬಗ್ಗೆ ಸಂದೇಹವಾಗುತ್ತದೆ. ಶಾಸಕರಾದ ವೇಳೆ ಅವರಿಗೆ ದೊರೆತ ಅಂಬಾಸಿಡರ್ ಕಾರು ಇತ್ತು. ಹಿಂದೆಯೂ ಇರಲಿಲ್ಲ. ಮುಂದೆಯೂ ಇರಲಿಲ್ಲ. ಅವರು ಶಾಸಕರಾಗಿದ್ದಾಗಲೂ ಅವರ ಮಡದಿ ಕೃಷಿಯ ಕೂಲಿ ಕೆಲಸಕ್ಕೆ, ನೇಜಿ ನೆಡುವುದಕ್ಕೆ, ತೆನೆ ಕೊಯ್ಯುವುದಕ್ಕೆ ನಮ್ಮ ಉರ್ವಸ್ಟೋರಿನ ಮನೆಯ ಬಳಿಯಲ್ಲಿದ್ದ ಗದ್ದೆಗಳಿಗೆ ಬರುತ್ತಿದ್ದುದನ್ನು ನೋಡಿದರೆ ಅದು ಎಪ್ಪತ್ತರ ದಶಕ. ಇದು 21ನೆಯ ಶತಮಾನ. ನಮ್ಮ ದೇಶದ ಶಾಸಕರು, ಮಂತ್ರಿಗಳು, ಅಧಿಕಾರಿಗಳು ಹೇಗೆ ಶ್ರೀಮಂತರಾಗುತ್ತಿದ್ದಾರೆ, ಎಷ್ಟು ಶ್ರೀಮಂತರಾಗುತ್ತಿದ್ದಾರೆ ಎನ್ನುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಅಸಹ್ಯವಾಗುವುದು ಪ್ರಜೆಗಳಿಗೇ ಹೊರತು ಜನಪ್ರತಿನಿಧಿಗಳಿಗಲ್ಲ. ಅವರು ಪ್ರಭುಗಳಾಗಿದ್ದಾರೆಯೇ ಹೊರತು ಜನಪ್ರತಿನಿಧಿಗಳೂ ಅಲ್ಲ, ಪ್ರಜೆಗಳ ಸೇವಕರೂ ಅಲ್ಲ. ವೇದಿಕೆಯಲ್ಲಿ ಅಂತಹ ಬಣ್ಣದ ಮಾತುಗಳನ್ನು ಕೇಳಿ ನಾವು ಹೊಟ್ಟೆ ತುಂಬಿಸಿಕೊಳ್ಳಬೇಕಷ್ಟೇ ಎಂದನ್ನಿಸುತ್ತದೆ. ಈ ವಾಸ್ತವದೊಂದಿಗೆ ಅಂದಿನ ಈ ನೆನಪುಗಳೊಂದಿಗೆ ಅಪ್ಪಟ ಗಾಂಧೀವಾದಿಯಾಗಿದ್ದ ರಾಮಚಂದ್ರರನ್ನು ಗೌರವದಿಂದ ನೆನಪಿಸಿಕೊಳ್ಳುತ್ತಿದ್ದೇನೆ. ಇಷ್ಟೇ ಸರಳವಾಗಿದ್ದ ವಾರ್ಡ್ ಕೌನ್ಸಿಲರಾಗಿ, ಮುಂದೆ ಶಾಸಕರಾಗಿ, ಮೀನುಗಾರಿಕಾ ಸಚಿವರಾಗಿಯೂ ಇದ್ದ ಬಿಜೈನ ಪಿ.ಎಫ್.ರೊಡ್ರಿಗಸ್‌ರನ್ನೂ ಹತ್ತಿರದಿಂದ ಕಂಡ ನಾನು ಅವರ ಮನೆಯೂ ಅದೇ ಹೆಂಚಿನ ಮನೆಯಾಗಿ ಇಂದಿಗೂ ಉಳಿದುಕೊಂಡು ಇರುವು ದನ್ನು ಕಂಡಾಗ ನನ್ನೂರಿನ ಶಾಸಕರು, ಮಂತ್ರಿಗಳು ಹೀಗಿದ್ದರು ಎಂದು ಹೆಮ್ಮೆಯಾಗುತ್ತಿದೆ.