ದಿಲ್ಲಿ ದರ್ಬಾರ್

Update: 2017-05-27 18:35 GMT

ಯೆಚೂರಿ ಸಲಹೆ
ಸದ್ಯದಲ್ಲೇ ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಅಂದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತಮ್ಮ ರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಆದರೆ ಬಹುತೇಕ ವಿರೋಧ ಪಕ್ಷಗಳ ನೆಚ್ಚಿನ ಅಭ್ಯರ್ಥಿ ಎಂದರೆ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಹಾಗೂ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ. ಆದರೆ ಅವರು ಕಣಕ್ಕೆ ಇಳಿಯುತ್ತಾರೆಯೇ ಎನ್ನುವುದು ಖಚಿತವಾಗಿಲ್ಲ. ಆದರೆ ಅವರ ಹೆಸರನ್ನು ಮೊದಲು ಯಾರು ಪ್ರಸ್ತಾವಿಸಿರುವುದು ಎಂಬ ಬಗ್ಗೆ ಇನ್ನೂ ಮುಖಂಡರಲ್ಲಿ ಒಮ್ಮತ ಇಲ್ಲ. ಟಿಎಂಸಿ ಈ ಹೆಸರನ್ನು ಮೊದಲು ಪ್ರಸ್ತಾವಿಸಿದ್ದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಈ ಹೆಸರನ್ನು ಮೊದಲು ಪ್ರಸ್ತಾವಿಸಿದ್ದು ಎಂದು ಪಕ್ಷ ಸಮರ್ಥಿಸಿಕೊಳ್ಳುತ್ತಿದೆ. ಗಾಂಧಿ ಹೆಸರು ಯೆಚೂರಿಯವರ ಸಲಹೆ ಎಂದು ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇದೀಗ ವಿವಾದ ಇತ್ಯರ್ಥವಾಗಿದೆ. ರಾಷ್ಟ್ರಪತಿ ಚುನಾವಣೆಗೆ ಸಂಘಟಿತ ಹೋರಾಟ ಮಾಡುವ ಸಲುವಾಗಿಯಾದರೂ ಎಲ್ಲರೂ ಒಂದೇ ವೇದಿಕೆಗೆ ಬರುತ್ತಾರೆಯೇ?

ಸಿಂಧ್ಯಾ ನಿಯಮ
ಭೋಪಾಲ್ ಅಥವಾ ದಿಲ್ಲಿ? ಎಲ್ಲಿಯಾದರೂ, ಜ್ಯೋತಿರಾದಿತ್ಯ ಸಿಂಧ್ಯಾ ಈಗ ಮ್ಯಾನ್ ಆಫ್ ದ ಸೀಸನ್. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಜಾಗಕ್ಕೆ ಅವರ ಹೆಸರು ಗಂಭೀರವಾಗಿ ಪರಿಗಣನೆಯಲ್ಲಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ವಾಪಸಾಗುತ್ತಾರೆ ಎನ್ನಲಾಗುತ್ತಿದೆ. ಸಿಂಧ್ಯಾ ಅವರು ಮಧ್ಯಪ್ರದೇಶ ಕಾಂಗ್ರೆಸ್‌ಗೂ ತೀರಾ ನೆಚ್ಚಿನ ಆಯ್ಕೆ. ಮಧ್ಯಪ್ರದೇಶದಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಹುದ್ದೆಯನ್ನು ಅವರು ವಹಿಸಿಕೊಂಡರೆ, ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆ ಇದೆ. ಅಂತೆಯೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರೆ, ರಾಷ್ಟ್ರೀಯ ನಾಯಕರಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಯೂ ಇದೆ. 2019ರ ಚುನಾವಣೆಯಲ್ಲಿ ಅಥವಾ ಮುಂದೆ ಅತಂತ್ರ ಸಂಸತ್ ನಿರ್ಮಾಣವಾದರೆ, ರಾಹುಲ್ ಗಾಂಧಿಯವರ ಮನಮೋಹನ್ ಸಿಂಗ್ ಆಗುವ ಸಾಧ್ಯತೆಯೂ ಇದೆ ಎಂದು ಕೆಲವರು ವಿಶ್ಲೇಷಿಸುತ್ತಾರೆ. ಸಿಂಧ್ಯಾ ಅವರ ತಂದೆ ಮಾಧವರಾವ್, 2001ರ ಸೆಪ್ಟಂಬರ್‌ನಲ್ಲಿ ವಿಮಾನ ಅಪಘಾತದಲ್ಲಿ ಮಡಿಯುವವರೆಗೂ 10, ಜನಪಥ್‌ಗೆ ತೀರಾ ನಿಕಟವಾಗಿದ್ದವರು. ಅತ್ಯಂತ ದಕ್ಷ ಹಾಗೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಮಾಧವರಾವ್, 2004ರ ವೇಳೆಗೆ ಇದ್ದಿದ್ದರೆ, ಮನಮೋಹನ್ ಸಿಂಗ್ ಅವರ ಸ್ಥಾನಕ್ಕೆ ಸಹಜ ಆಯ್ಕೆಯಾಗುತ್ತಿದ್ದರು ಎಂದು ಹೇಳುವವರೂ ಇದ್ದಾರೆ.

ವಿನೋದ್ ಖನ್ನಾ ಅವರ ರಾಜಕೀಯ ಉತ್ತರಾಧಿಕಾರಿ ಯಾರು?
ಇದು ಬಹುಶಃ ಅತೀಂದ್ರಿಯ ವಿಚಾರ. ಖ್ಯಾತ ಗಾಯಕ ಅನೂಪ್ ಜಲೋಟಾ ಅವರು ಇತ್ತೀಚೆಗೆ ಪಠಾಣ್‌ಕೋಟ್‌ನಲ್ಲಿ ನಡೆದ ಸಂಸದ ವಿನೋದ್ ಖನ್ನಾ ಅವರ ಗೌರವಾರ್ಥ ಏರ್ಪಡಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಕೆಲ ಭಕ್ತಿಪೂರ್ವಕ ಭಜನ್‌ಗಳನ್ನು ಹಾಡಿದ ಅವರು, ವಿಧಿ ಹೇಗೆ ತಮ್ಮನ್ನು ಇಲ್ಲಿಗೆ ಕರೆತಂದು ನಿಮ್ಮಿಂದಿಗೆ ಇರುವಂತೆ ಮಾಡಿದೆ ಎಂದು ಪ್ರೇಕ್ಷಕರಿಗೆ ವಿವರಿಸಿದರು. ಕೆಲ ವಾರಗಳ ಹಿಂದೆ, ಜಲೋಟ್ ಅವರನ್ನು ಕುರಿತು ಖನ್ನಾ, ಪಠಾಣ್‌ಕೋಟ್‌ನಲ್ಲಿ ಕಾರ್ಯಕ್ರಮ ನೀಡುವಂತೆ ಆಹ್ವಾನಿಸಿದ್ದರು. ಇದಕ್ಕೆ ಒಪ್ಪಿದ ಗಾಯಕ ಸದ್ಯದಲ್ಲೇ ಆಗಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಖನ್ನಾ ನಿಧನದ ಬಳಿಕ, ಪತ್ನಿ ಕವಿತಾ ಅವರು ಜಲೋಟಾ ಅವರನ್ನು ಪ್ರಾರ್ಥನಾ ಸಭೆಗೆ ಬರುವಂತೆ ಆಹ್ವಾನಿಸಿದರು. ಖನ್ನಾ ಅವರ ಮಗ ಅಕ್ಷಯ ಕೂಡಾ ಖ್ಯಾತ ನಟ. ತಂದೆಯ ಸ್ಥಾನಕ್ಕೆ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಕವಿತಾ ತಮ್ಮ ಪತಿಯ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರೂ, ಬಿಜೆಪಿ ಮಾತ್ರ ಅವರ ಉಮೇದುವಾರಿಕೆ ಬಗ್ಗೆ ಆಸಕ್ತಿ ಹೊಂದಿಲ್ಲ. ಕೆಲವರು ಹೇಳುವಂತೆ ಬಿಜೆಪಿ ಸ್ಥಳೀಯ ಮುಖಂಡರನ್ನು ಕಣಕ್ಕೆ ಇಳಿಸಲಿದೆ. ಮತ್ತೆ ಕೆಲವರು ಹೇಳುವಂತೆ ಪಂಜಾಬಿ ನಟರೊಬ್ಬರನ್ನು ಈ ಸ್ಥಾನಕ್ಕೆ ಹುಡುಕುತ್ತಿದೆ. ಅವರು ಹೇಳುವಂತೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಟ್ವಿಟರ್‌ನಲ್ಲಿ ಜೈಶಂಕರ್
ರಾಜತಾಂತ್ರಿಕ ಕೌಶಲ ಎಂದರೆ, ಸದ್ದುಗದ್ದಲವಿಲ್ಲದೇ ತಮ್ಮ ಅಸ್ತಿತ್ವವನ್ನು ತೋರ್ಪಡಿಸುವುದು. ಭಾರತದ ವಿದೇಶಾಂಗ ಖಾತೆ ಕಾರ್ಯದರ್ಶಿ ಎಸ್.ಜೈಶಂಕರ್ ಸದ್ದುಗದ್ದಲವಿಲ್ಲದೇ ಟ್ವಿಟರ್ ಸೇರಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅವರು ತಮ್ಮ ಅಸ್ತಿತ್ವವನ್ನು ಇನ್ನೂ ತೋರ್ಪಡಿಸಿಲ್ಲವಾದರೂ, ಅವರು ನಿಯತವಾಗಿ ಎಲ್ಲ ವಿಚಾರಗಳ ಬಗ್ಗೆ ಟ್ವೀಟ್ ಮಾಡುವಂತೆಯೂ ಇಲ್ಲ. ಈ ಸಾಮಾಜಿಕ ಜಾಲತಾಣ ಸೇರಿದ ಮುಖ್ಯ ಉದ್ದೇಶವೆಂದರೆ, ಅವರ ಆಪ್ತ ಅಧಿಕಾರಿ ವಲಯಗಳು ಅವರಿಗೆ ಸಲಹೆ ನೀಡಿದ್ದು. ಟ್ವಿಟರ್ ಅನ್ನು ಮಾಧ್ಯಮವಾಗಿ ಹೆಚ್ಚುಹೆಚ್ಚು ಬಳಸಿಕೊಳ್ಳುತ್ತಿರುವ ರಾಜತಾಂತ್ರಿಕರ ಬಗ್ಗೆ ಕಣ್ಣಿಡುವ ಸಲುವಾಗಿ ಹಾಗೂ ಹೊರದೇಶಗಳಲ್ಲಿ ಭಾರತೀಯರು ಸಂಕಷ್ಟದಲ್ಲಿದ್ದರೆ, ಸುಲಭವಾಗಿ ವಿದೇಶಾಂಗ ಸಚಿವಾಲಯದ ಸಹಕಾರ ಪಡೆಯಲು ಅವಕಾಶವಾಗಬೇಕು ಎನ್ನುವುದು. ಕೇಂದ್ರ ವಿದೇಶಾಂಗ ವ್ಯವಹಾರ ಖಾತೆಯ ರಾಜ್ಯ ಸಚಿವೆ ಸುಷ್ಮಾ ಸ್ವರಾಜ್ ಕೂಡಾ, ಭಾರತೀಯ ಮಿಷನ್ ಬಗ್ಗೆ ಜನಸಾಮಾನ್ಯರ ಅಹವಾಲುಗಳನ್ನು ಆಲಿಸಲು ಟ್ವಿಟರ್ ಬಳಸುತ್ತಿದ್ದಾರೆ. ಜೈಶಂಕರ್ ಅವರು ಟ್ವಿಟರ್‌ನಲ್ಲಿ ಕ್ಷಿಪ್ರವಾಗಿ ಸ್ಪಂದಿಸುವಂತಾದರೆ, ಭಾರತದ ಪ್ರಮುಖ ರಾಜತಾಂತ್ರಿಕ ಮಿಷನ್ ಆದ ನೆರೆ ದೇಶಗಳ ರಾಜಧಾನಿ ಹಾಗೂ ಪ್ರಮುಖ ದೇಶಗಳ ಭಾರತೀಯರ ಅಹವಾಲುಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಆದರೆ ಟ್ವಿಟರ್‌ನಲ್ಲಿರುವ ಕೆಲ ಯುವ ಭಾರತೀಯ ರಾಜತಾಂತ್ರಿಕರಿಗೆ, ವಿದೇಶಾಂಗ ಕಾರ್ಯದರ್ಶಿಯ ಇರುವಿಕೆ ಇರಿಸು ಮುರಿಸು ಉಂಟುಮಾಡಿದೆ. ಆದ್ದರಿಂದ ಸರಕಾರದ ಅಧಿಕೃತ ಅಭಿಪ್ರಾಯಗಳನ್ನಲ್ಲದೇ, ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರಿಗಳ ಪಾಲಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸ್ಮತಿ ಮೌನ
ವಿದೇಶಾಂಗ ವ್ಯವಹಾರಗಳ ಖಾತೆ ಕಾರ್ಯದರ್ಶಿ ಜೈಶಂಕರ್ ಅವರ ಟ್ವಿಟ್ಟರ್ ಜಗತ್ತಿನ ಆರಂಭಿಕ ಹೆಜ್ಜೆಗಳಿಗೆ ವಿರುದ್ಧವಾಗಿ, ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿ ಮಾಧ್ಯಮ ನಿರ್ವಹಿಸುವಲ್ಲಿ ನಿಸ್ಸೀಮರು. ಅವರು ತಮ್ಮ ಮಾಧ್ಯಮ ಸಂವಾದಗಳಿಗೆ ಕೆಲ ತಳಮಟ್ಟದ ನಿಯಮಾವಳಿಗಳನ್ನೂ ರೂಪಿಸಿದ್ದಾರೆ. ಯಾವುದೇ ವೈಯಕ್ತಿಕ ಪ್ರಶ್ನೆಗಳಿಗೆ ಈ ಮಾಜಿ ಟಿವಿ ತಾರೆ ಅವಕಾಶ ನೀಡುವುದಿಲ್ಲ. ಅಂತೆಯೇ ಹಿಂದಿನ ಖಾತೆಯಾದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಬಗೆಗಿನ ಪ್ರಶ್ನೆಗಳಿಗೂ ಅವಕಾಶ ಕೊಡುವುದಿಲ್ಲ. ಅಂತೆಯೇ ಅವರಲ್ಲಿ ಕೇಳಬಾರದ ಪ್ರಶ್ನೆಗಳ ಪಟ್ಟಿಗೆ ಇದೀಗ ಜಮ್ಮು ಮತ್ತು ಕಾಶ್ಮೀರ ಕೂಡಾ ಸೇರಿದೆ. ಆದ್ದರಿಂದ ಅವರ ಮಾಧ್ಯಮಗೋಷ್ಠಿಗಳು ಇದೀಗ ಸಂಘರ್ಷ ಅಥವಾ ಪ್ರತಿಕ್ರಿಯಾತ್ಮಕವಾಗಿರುವುದಿಲ್ಲ. ಕಠಿಣ ಪ್ರಶ್ನೆಗಳು ಎದುರಾದರೂ ಮುಖದಲ್ಲಿ ಮಂದಹಾಸ ತಂದುಕೊಳ್ಳುತ್ತಾರೆ. ಸಮರೋತ್ಸಾಹದಲ್ಲಿ ತೆರಳಿದರೆ, ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಾರೆ ಎನ್ನುವ ವಾಸ್ತವ ಅವರಿಗೆ ಆಗಿದೆ. ಇದೇ ಕಾರಣಕ್ಕೆ ಅವರು ಮತ್ತೊಂದು ಖಾತೆಗೆ ಎತ್ತಂಗಡಿ ಆಗಬಹುದು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News