ಮತ್ತೆ ಹಿಂದಿ ಹೇರುವ ಹುನ್ನಾರ

Update: 2017-05-27 18:40 GMT

ಇಷ್ಟು ವರ್ಷ ಈ ಭಿನ್ನತೆ ಮತ್ತು ವೈವಿಧ್ಯತೆಗಳೇ ಅಲ್ಲವೇ ನಮ್ಮನ್ನು ಭಾರತೀಯರನ್ನಾಗಿರಿಸಿರುವುದು? ಅಥವಾ ನಾವು ಬೇರೆ ಏನಾದರೂ ಆಗಿದ್ದೇವೆಯೇ? ಹಲವು ಉಪಸಂಸ್ಕೃತಿಗಳು ಸೇರಿಯೇ ಅಲ್ಲವೇ ಭಾರತೀಯ ಸಂಸ್ಕೃತಿಯ ಪರಿಕಲ್ಪನೆ ಹುಟ್ಟಿರುವುದು? ವೈದಿಕ ಸಂಸ್ಕೃತಿಯೊಂದೇ ಭಾರತೀಯ ಸಂಸ್ಕೃತಿ ಎಂಬ ಹಠವೇಕೆ? ಈ ಸಾಂಸ್ಕೃತಿಕ ವೈವಿಧ್ಯತೆಯೇ ಅಲ್ಲವೇ ಜಗತ್ತು ಗುರುತಿಸಿರುವ ಭಾರತೀಯತೆಯ ವೈಶಿಷ್ಟ? ಕಳೆದ ಮಾರ್ಚ್ ತಿಂಗಳ ಒಂದು ಬೆಳಗ್ಗೆ ತಮಿಳರಿಗೆ ಆಘಾತವೊಂದು ಕಾದಿತ್ತು.

ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀಟರು ಕಲ್ಲುಗಳು ಮತ್ತು ಮಾರ್ಗಸೂಚಕ ಫಲಕಗಳೆಲ್ಲ ಹಿಂದಿಗೆ ಭಾಷಾಂತರಗೊಂಡಿದ್ದವು. ಇದು ತಮಿಳರಿಗೆ ಹಿಂದಿ ಹೇರಿಕೆಯ ಆಘಾತಕಾರಿ ಸುದ್ದಿ. ಡಿಎಂಕೆ, ಮರುಮಲರ್ಚಿ ಡಿಎಂಕೆ, ಪಾಟಾಳಿ ಮಕ್ಕಳ್ ಕಚ್ಚಿ ಮೊದಲಾದ ರಾಜಕೀಯಪಕ್ಷಗಳು ಮತ್ತು ಕೆಲವು ತಮಿಳು ಸಂಘಟನೆಗಳು ಹೆದ್ದಾರಿಗಳಲ್ಲಿ ಹಿಂದಿ ಫಲಕಗಳನ್ನು ಸ್ಥಾಪಿಸಿರುವುದು ಹಿಂದಿ ಹೇರಿಕೆಯ ಸೂಚನೆ ಎಂದು ಉಗ್ರ ಪ್ರತಿಭಟನೆ ನಡೆಸಿದವು. ನಂತರ, ಅಲ್ಪಸಮಯದಲ್ಲೇ ಅಧಿಕೃತ ಭಾಷೆ ಕುರಿತಂತೆ ಸಂಸದೀಯ ಸಮಿತಿಯ ಶಿಫಾರಸುಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ ಸುದ್ದಿ ಪ್ರಸಾರವಾಗಿ ಪ್ರತಿಭಟನೆ ಜ್ವಾಲಾಮುಖಿಯಾಯಿತು.

ಸಿಬಿಎಸ್‌ಸಿ ಮತ್ತು ಎಲ್ಲ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ ಕಡ್ಡಾಯಗೊಳಿಸಬೇಕು, ಹಿಂದಿ ಬಲ್ಲ ಗಣ್ಯರು ಹಿಂದಿ ಭಾಷೆಯಲ್ಲೇ ಭಾಷಣ ಮಾಡಬೇಕು ಹಾಗೂ ಹೇಳಿಕೆಗಳನ್ನು ನೀಡಬೇಕು, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಲಿ ನಿರ್ಮಿಸುವ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಬೇಕು ಅಥವಾ ಹಿಂದಿಯಲ್ಲಿ ಉಪಶೀರ್ಷಿಕೆಗಳಿರಬೇಕು ಇತ್ಯಾದಿ ಶಿಫಾರಸುಗಳ ಅನುಷ್ಠಾನಕ್ಕೆ ರಾಷ್ಟ್ರಪತಿಯವರು ಒಪ್ಪಿಗೆ ನೀಡಿದ ಸುದ್ದಿಯಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಹಿಂದಿ ವಿರೋಧಿ ಚಳವಳಿಗೆ ಗಾಳಿ ಹಾಕಿದಂತಾಗಿತ್ತು. 1986ರಲ್ಲಿ ಕೇಂದ್ರ ಸರಕಾರ ಸುತ್ತೋಲೆಯೊಂದರ ಮೂಲಕ ಹಿಂದಿ ಹೇರುವ ಪ್ರಯತ್ನ ಮಾಡಿದಾಗ ತಮಿಳುನಾಡಿನಲ್ಲಿ ವಿರೋಧ ಭುಗಿಲೆದ್ದಿತ್ತು. ಆಗ ಅಮೆರಿಕದಲ್ಲಿದ್ದ ತಮಿಳುನಾಡಿನ ಮುಖ್ಯ ಮಂತ್ರಿ ರಾಮಚಂದ್ರನ್ ಅವರು ಬಲಾತ್ಕಾರವಾಗಿ ಹಿಂದಿಯನ್ನು ಹೇರುವ ಸುತ್ತೋಲೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಪಡಿಸಿದ್ದರು. ಮಿತ್ರ ಪಕ್ಷವಾಗಿದ್ದ ಎಐಎಡಿಎಂಕೆಯ ವಿರೋಧ ಕಟ್ಟಕೊಳ್ಳಲಾಗದೆ ಕಾಂಗ್ರೆಸ್ ಸರಕಾರ ಸುತ್ತೋಲೆಯನ್ನು ಹಿಂದಕ್ಕೆ ತೆಗೆದುಕೊಂಡಿತು.'ಹೋದೆಯಾ ಪಿಶಾಚಿ ಎಂದರೆ, ಬಂದೆ ಗಾವಾಕ್ಷೀಲಿ' ಎಂಬಂತೆ ಹಿಂದಿ ಈಗ ಮತ್ತೆ ದಕ್ಷಿಣ ಭಾರತೀಯರ ಮೇಲೆ ವಕ್ಕರಿಸಿದೆ.

ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಆಂದೋಲನಕ್ಕೆ ಏಳು ದಶಕಗಳ ಇತಿಹಾಸವಿದೆ. ಇಸವಿ 1937-ಸೆಕೆಂಡರಿ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವ ನಿರ್ಣಯವೊಂದನ್ನು ಆಗಿನ ಸಿ.ರಾಜಗೋಪಾಲಾಚಾರಿಯವರ ಸರಕಾರ ಕೈಗೊಂಡಾಗ ಹಿಂದಿ ವಿರೋಧಿ ಆಂದೋಲನ ಶುರುವಾಯಿತು. ಪೆರಿಯಾರ್ ಎಂದೇ ಖ್ಯಾತರಾದ ಎ. ವಿ. ರಾಮಸ್ವಾಮಿ ನಾಯ್ಕರ್ ಈ ಚಳವಳಿಯ ನಾಯಕತ್ವ ವಹಿಸಿದ್ದರು. ಆಗ ರಾಜಾಜಿಯವರು ಮದ್ರಾಸ್ ಪ್ರೆಸಿಡೆನ್ಸಿಯ ಪ್ರಧಾನಿಯಾಗಿದ್ದರು. ಆಗ 125 ಶಾಲೆಗಳಲ್ಲಿ ಹಿಂದಿ ಕಲಿಕೆಯನ್ನು ಜಾರಿಗೆ ತರಲಾಗಿತ್ತು. ''ಇದು ಎಲೆ ಕೊನೆಯ ಚಟ್ನಿ ಇದ್ದಂತೆ ರುಚಿ ನೋಡುವುದು ಬಿಡುವುದು ನಿಮಗೆ ಸೇರಿದ್ದು'' ಎಂದು ರಾಜಾಜಿ ಚಳವಳಿಗಾರರಿಗೆ ತಿಳಿಸಿ ದ್ದರು. ರಾಜಾಜಿ ವಿರೋಧಿಗಳಿಗೆ ಬಗ್ಗಲಿಲ್ಲ. ಆದರೆ ಬ್ರಿಟಿಷ್ ಸರಕಾರ 1940ರಲ್ಲಿ ಹಿಂದಿಯನ್ನು ಐಚ್ಛಿಕ ವಿಷಯವನ್ನಾಗಿಸಿತು.

ಇಂಗ್ಲಿಷ್‌ನ ಸ್ಥಾನದಲ್ಲಿ ಹಿಂದಿಯನ್ನು ಅಧಿಕೃತ ಭಾಷೆ ಯನ್ನಾಗಿ ಮಾಡಲು ಕೇಂದ್ರ ಸರಕಾರ ಪ್ರಯತ್ನಿಸಿದಾಗ ಎರಡನೆ ಸುತ್ತಿನ ಪ್ರತಿಭಟನೆ ಶುರುವಾಯಿತು. ಇದು ಉಗ್ರ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು. ಉದಯೋನ್ಮುಖ ಡಿಎಂಕೆ ಇದರ ರಾಜಕೀಯ ಲಾಭ ಪಡೆದುಕೊಂಡು ಎರಡು ವರ್ಷಗಳ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಹಿಂದಿಯನ್ನು ಹೇರುವುದಿಲ್ಲವೆಂದು ವಿವಿಧ ಕಾಲಘಟ್ಟಗಳಲ್ಲಿ ಜವಾಹರಲಾಲ್ ನೆಹರೂ ಸೇರಿದಂತೆ ಹಲವಾರು ನಾಯಕರು ತಮಿಳುನಾಡಿನ ಜನತೆಗೆ ಭರವಸೆ ನೀಡಿರುವ ದಾಖಲೆಗಳಿವೆ. 1967ರಲ್ಲಿ ಡಿಎಂಕೆ ಸರಕಾರ ಅಧಿಕಾರವಹಿಸಿಕೊಂಡಿತು.

1968ರ ಜನವರಿಯಲ್ಲಿ ತಮಿಳುನಾಡು ವಿಧಾನ ಸಭೆ ಕೇಂದ್ರ ಸರಕಾರದ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ಶಾಲೆಗಳಲ್ಲಿ ತಮಿಳು ಮತ್ತು ಇಂಗ್ಲಿಷ್ ಬೋಧಿಸುವ ನೀತಿಯನ್ನು ಜಾರಿಗೆ ತಂದ ದಿನದಿಂದ ಇಂದಿನವರೆಗೆ ಈ ದ್ವಿಭಾಷಾ ಸೂತ್ರವೇ ಆ ರಾಜ್ಯದಲ್ಲಿ ಜಾರಿಯಲ್ಲಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಭಾಷಾ ನೀತಿಯಲ್ಲಿ ಬದಲಾವಣೆಯಾಗಿಲ್ಲ. 2006ರಲ್ಲಿ ತಮಿಳುನಾಡು ಸರಕಾರ ದ್ವಿಭಾಷಾ ಸೂತ್ರ ಒಳಗೊಂಡಂತೆ ತಮಿಳು ಕಲಿಕೆ ಶಾಸನವನ್ನು ಜಾರಿಗೆ ತಂದಿತು.

ಎಐಎಡಿಎಂಕೆ ಸರಕಾರ 2014ರಲ್ಲಿ ಈ ಶಾಸನವನ್ನು ಸಿ.ಬಿ.ಎಸ್.ಇ.ಗೂ ವಿಸ್ತರಿಸಿತು. ಹಿಂದಿ ಹೇರಿಕೆ ಹೀಗೆ ಆಗಿಂದಾಗ್ಗೆ ಎದ್ದು ತೋರಿಸಿಕೊಳ್ಳುತ್ತಲೇ ಬಂದಿದೆ. ಈಗ 'ಹಿಂದು ರಾಷ್ಟ್ರೀಯತೆಯನ್ನು' ತರುವ ಉತ್ಸಾಹದಲ್ಲಿರುವ ನರೇಂದ್ರ ಮೋದಿಯವರ ಸರಕಾರ ಆ ನಿಟ್ಟಿನಲ್ಲಿ ಬಹು ಸಂಸ್ಕೃತಿ ಮತ್ತು ಪ್ರಾದೇಶಿಕ ಅಸ್ಮಿತೆಯುನ್ನು ಅಳಿಸಿಹಾಕುವ ಮೊದಲ ಕ್ರಮವಾಗಿ ಹಿಂದಿಯನ್ನು ಹೇರಲು ಮುಂದಾಗಿರುವಂತಿದೆ. ಉತ್ತರ ದಕ್ಷಿಣದ ನಡುವಣ ಭಾಷಾ ಅಡ್ಡಗೋಡೆಯನ್ನು ಒಡೆದು ಹಾಕಿದರೆ ಹಿಂದು ರಾಷ್ಟ್ರೀಯತೆಯ ಹಾದಿ ಸುಗಮವಾದೀತು ಎಂಬುದು ಕೇಂದ್ರ ಸರಕಾರದ ಹಿಂದಿ ಹೇರುವ ಈ ಹುನ್ನಾರದ ಹಿಂದಿನ ಉದ್ದೇಶವಿದ್ದೀತು. ಇದು ದ್ರಾವಿಡ ಸಂಸ್ಕೃತಿಯ ಅಸ್ಮಿತೆಯನ್ನು ನಾಶಗೊಳಿಸಿ ಆರ್ಯ ಸಂಸ್ಕೃತಿಯನ್ನು ಸ್ಥಾಪಿಸುವ ಸಂಚು ಎನ್ನುತ್ತಾರೆ ದ್ರಾವಿಡ ಸಂಸ್ಕೃತಿ ಮೂಲದವರು.

ಸಂವಿಧಾನದಲ್ಲಿ ನಮೂದಾಗಿರುವ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ. ಪ್ರತಿಯೊಂದು ರಾಜ್ಯದಲ್ಲೂ ಅಲ್ಲಿಯ ಭಾಷೆಯೇ ಪ್ರಥಮ, ಪ್ರಧಾನ. ಹಿಂದಿ ಏನಿದ್ದರೂ ಸಂಪರ್ಕ ಭಾಷೆ. ಇದೊಂದು ಸಹಜ ಸೂತ್ರ. ಹಿಂದಿ ಜನ ಏಕೆ ಇದನ್ನು ಒಪ್ಪುವುದಿಲ್ಲ ಎನ್ನುವುದು ಸಮಸ್ಯೆ ತಲೆದೋರಿದಾಗಿನಿಂದ ಬಗೆಹರಿಯದೇ ಉಳಿದಿರುವ ಪ್ರಶ್ನೆ. ಕಾಲಕಾಲಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಪಕ್ಷಗಳು ರಾಜಕೀಯ ಕಾರಣಗಳಿಗಾಗಿ ಇದನ್ನು ಬಳಸಿಕೊಳ್ಳುತ್ತಲೇ ಬಂದಿವೆ. ಕೇಂದ್ರ ಸರಕಾರ ಈಗ ದಕ್ಷಿಣ ಭಾರತೀಯರ ಮೇಲೆ ಮತ್ತೆ ಹಿಂದಿ ಹೇರುವ ಪ್ರಯತ್ನ ಶುರುಮಾಡಿದೆ.

ಇದರಿಂದ ರಾಜಕೀಯವಾಗಿ ಏನು ಪರಿಣಾಮವಾದೀತು-ವಿಶೇಷವಾಗಿ ತಮಿಳನಾಡಿನ ಇಂದಿನ ಸಡಿಲ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎಂಬುದು ಕುತೂಹಲದಾಯಕ. ಹಿಂದಿ ವಿರೋಧಿ ಚಳವಳಿಯನ್ನು ಮತ್ತೆ ಆರಂಭಿಸುವುದರಿಂದ ಯಾವ ಪಕ್ಷಕಾದರೂ ರಾಜಕೀಯವಾಗಿ ಲಾಭವಾದೀತೆ? ಭಾಷಾ ವಿವಾದವೊಂದೇ ಅಧಿಕಾರದಲ್ಲಿ ಉಲ್ಲಟಪಲ್ಲಟ ಉಂಟುಮಾಡುವಂಥ ಪ್ರಬಲ ಅಸ್ತ್ರವಾಗದು. ತಮಿಳುನಾಡಿನ ರಾಜಕೀಯ ಪಕ್ಷಗಳೂ ಇದನ್ನು ಕೇವಲ ಭಾಷಾ ವಿವಾದವನ್ನಾಗಿಯಷ್ಟೇ ಪರಿಗಣಿಸಿಲ್ಲ.

ಹಾಗೆ ನೋಡಿದರೆ ಹಿಂದಿ ಕಲಿಕೆಗೆ ತಮಿಳುನಾಡಿನಲ್ಲಿ ಅಂಥ ಪ್ರಬಲ ವಿರೋಧವೇನೂ ಇಲ್ಲ. ದಕ್ಷಿಣ ಭಾರತೀಯ ಹಿಂದಿ ಪರಿಷತ್ ಕಳೆದ ತೊಂಬತ್ತೊಂಬತ್ತು ವರ್ಷಗಳಿಂದ ಚೆನ್ನೈನಲ್ಲಿ ಹಿಂದಿ ಕಲಿಸುವ ಕಾರ್ಯದಲ್ಲಿ ನಿರತವಾಗಿದೆ. ಅದು ನಡೆಸುವ 'ರಾಷ್ಟ್ರಭಾಷಾ', 'ಪ್ರವೀಣ' ಹಿಂದಿ ಪರೀಕ್ಷೆಗಳಿಗೆ ಕುಳಿತುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಈ ಪರೀಕ್ಷೆಗಳನ್ನು ಬರೆದ ತಮಿಳು ಮಾತೃಭಾಷೆಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಆರು ಲಕ್ಷ ಎಂದು ವರದಿಯಾಗಿದೆ. ಹಾಗಿದ್ದಲ್ಲಿ ಹಿಂದಿಯನ್ನು ಆಡಳಿತ ವ್ಯವಹಾರಗಳಲ್ಲ್ಲಿ ಮತ್ತೆ ಸಿಬಿಎಸ್‌ಸಿ-ಕೇಂದ್ರೀಯ ವಿದ್ಯಾಲಯಗಳ ಪರೀಕ್ಷೆಗಳಲ್ಲಿ ಕಡ್ಡಾಯಗೊಳಿಸುತ್ತಿರುವುದಕ್ಕೆ ವಿರೋಧ ಏಕೆ?

ಕೇಂದ್ರ ಸರಕಾರದ ಹಿಂದಿ ಹೇರಿಕೆಯ ಕ್ರಮವನ್ನು, ದಕ್ಷಿಣದ ಮೇಲೆ ಉತ್ತರ ಭಾರತದ ಸಾಂಸ್ಕೃತಿಕ ಯಜಮಾನಿಕೆಯನ್ನು ಸ್ಥಾಪಿಸುವ ಪ್ರಯತ್ನವೆಂದು ತಮಿಳರು ಭಾವಿಸಿರುವುದೇ ಸಮಸ್ಯೆಯ ತಿರುಳು. ಹೀಗಾಗಿ ಹಿಂದಿ ವಿವಾದ ಆರ್ಯ ಮತ್ತು ದ್ರಾವಿಡ ಸಂಸ್ಕೃತಿ ನಡುವಣ ಘರ್ಷಣೆಯ ಸ್ವರೂಪವನ್ನು ಪಡೆದುಕೊಂಡಿದೆ. ಹಿಂದಿ ಹೇರಿಕೆ ಮೂಲಕ ಭಾರತದಾದ್ಯಂತ ಅಖಂಡ ಸಂಸ್ಕೃತಿಯೊಂದನ್ನು ಸ್ಥಾಪಿಸುವ ಹುನ್ನಾರ ಇದಾಗಿದೆ ಎಂಬುದು ಹಿಂದಿ ವಿರೋಧಿಗಳ ದೂರು. ಆರೆಸ್ಸೆಸ್ ಜೊತೆ ಭಾರತೀಯ ಜನತಾ ಪಕ್ಷದ ನಂಟು ಹಾಗೂ ಆರೆಸ್ಸೆಸ್‌ನ ಹಿಂದೂ ರಾಷ್ಟ್ರೀಯತೆ ಕಾರ್ಯಸೂಚಿ ಬಲ್ಲವರಿಗೆ, ಆಖೈರಾಗಿ ಹಿಂದಿ ಆರ್ಯ ಸಂಸ್ಕೃತಿಯ ಪ್ರಾಬಲ್ಯಕ್ಕೆಡೆಮಾಡಿಕೊಟ್ಟು ದ್ರಾವಿಡ ಸಂಸ್ಕೃತಿಗೆ ಧಕ್ಕೆಯುಂಟಾಗಬಹುದೆಂಬ ತಮಿಳರ ಭೀತಿ ಅರ್ಥವಾಗದೇ ಇರದು.

ಭಾಷೆಯನ್ನು ರಾಜಕೀಯ ಅಸ್ತ್ರವನ್ನಾಗಿ ಈ ಹಿಂದೆಯೂ ತಮಿಳು ರಾಜಕಾರಣಿಗಳು ಬಳಸಿಕೊಂಡ ನಿದರ್ಶನಗಳಿವೆ. ಈಗಲೂ ತಮಿಳುನಾಡಿನ ರಾಜಕೀಯ ಪಕ್ಷಗಳು ಸುಮ್ಮನಿರಲಾರವು. ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿ ಪುನುರುಜ್ಜೀವಗೋಳ್ಳುವುದೇ? ಅದೊಂದು ರಾಜಕೀಯ ಆಂದೋಲನಕ್ಕೆ ಅನುವು ಮಾಡಿಕೊಡುವುದೇ ಎಂಬುದು ಬರಲಿರುವ ದಿನಗಳಲ್ಲಿ ತಿಳಿಯಲಿದೆ. ಆದರೆ ಜಯಲಲಿತಾ ಅವರ ನಿಧನಾನಂತರ ಎಐಎಡಿಎಂಕೆಯಲ್ಲಿ ಉಂಟಾಗಿರುವ ಒಡಕಿನ ಲಾಭ ಪಡೆದುಕೊಂಡು ಅಲ್ಲಿ ರಾಜಕೀಯ ನೆಲೆ ಸ್ಥಾಪಿಸಿಕೋಳ್ಳಲು ಭಾರತೀಯ ಜನತಾ ಪಕ್ಷ ನಡೆಸಿರುವ ಪ್ರಯತ್ನಗಳಿಗಂತೂ ಇದರಿಂದ ಹಿನ್ನಡೆಯಾಗುವುದು ಖಚಿತ. ಹಿಂದಿ ಹೇರಿಕೆಯ ಈಗಿನ ಪ್ರಯತ್ನ ಬಿಜೆಪಿ ವಿರೋಧಿಗಳನ್ನು ರಾಜಕೀಯವಾಗಿ ಒಂದುಗೂಡಿಸುವುದೂ ಅಷ್ಟೇ ಖಚಿತ.

ಹಿಂದಿಯಿಂದ ತಮ್ಮ ಭಾಷೆ ಮತ್ತು ಸಂಸ್ಕೃತಿ ಕ್ರಮೇಣ ನಶಿಸಿಹೋಗಬಹುದೆಂಬ ದಕ್ಷಿಣ ಭಾರತೀಯರ ಭೀತಿ ಸುಳ್ಳಲ್ಲ. ನಮ್ಮದು ಬಹು ಭಾಷೆಗಳ ದೇಶ.ಒಂದೊಂದು ಭಾಷೆಗೂ ಅದರದೇ ಆದ ಶ್ರೀಮಂತ ಇತಿಹಾಸವಿದೆ; ವೈವಿಧ್ಯವಿದೆ; ಸಾಂಸ್ಕೃತಿಕ ವೈಶಿಷ್ಟ್ಯವಿದೆ. ನಮ್ಮಲ್ಲಿ ಹಿಂದಿಗಿಂತಲೂ ಹೆಚ್ಚು ಪ್ರಾಚೀನವಾದ, ಶೀಮಂತವಾದ ಕೆಲವಾದರೂ ಭಾಷೆಗಳಿವೆ. ಆದರೆ ಅಖಂಡ ಹಿಂದೂ ರಾಷ್ಟ್ರೀಯತೆಯ ಅಮಲಿನಲ್ಲಿರುವ ಆರೆಸ್ಸೆಸ್ಸಾಗಲೀ ಬಿಜೆಪಿಯಾಗಲೀ ಇದನ್ನು ಒಪ್ಪುವುದಿಲ್ಲ. ಇತ್ತೀಚಿನ ಪತ್ರಿಕಾ ಸಂದರ್ಶನವೊಂದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಡಿರುವ ಈ ಮಾತುಗಳನ್ನು ಗಮನಿಸಿ.

''ಭಾಷೆ, ಸಂಸ್ಕೃತಿ ಮತ್ತು ಆಹಾರ ನಮ್ಮನ್ನು ವಿಭಜಿಸುವುದಾದಲ್ಲಿ ನಾವು ಭಾರತೀಯರಾಗಿರುವುದು ಹೇಗೆ ಸಾಧ್ಯ?'' ಎಂಬುದು ಶಾ ಅವರ ಅಂಬೋಣ. ಇಷ್ಟು ವರ್ಷ ಈ ಭಿನ್ನತೆ ಮತ್ತು ವೈವಿಧ್ಯತೆಗಳೇ ಅಲ್ಲವೇ ನಮ್ಮನ್ನು ಭಾರತೀಯರನ್ನಾಗಿರಿಸಿರುವುದು? ಅಥವಾ ನಾವು ಬೇರೆ ಏನಾದರೂ ಆಗಿದ್ದೇವೆಯೇ? ಹಲವು ಉಪಸಂಸ್ಕೃತಿಗಳು ಸೇರಿಯೇ ಅಲ್ಲವೇ ಭಾರತೀಯ ಸಂಸ್ಕೃತಿಯ ಪರಿಕಲ್ಪನೆ ಹುಟ್ಟಿರುವುದು? ವೈದಿಕ ಸಂಸ್ಕೃತಿಯೊಂದೇ ಭಾರತೀಯ ಸಂಸ್ಕೃತಿ ಎಂಬ ಹಠವೇಕೆ? ಈ ಸಾಂಸ್ಕೃತಿಕ ವೈವಿಧ್ಯತೆಯೇ ಅಲ್ಲವೇ ಜಗತ್ತು ಗುರುತಿಸಿರುವ ಭಾರತೀಯತೆಯ ವೈಶಿಷ್ಟ? ಇನ್ನು ಕರ್ನಾಟಕದಲ್ಲಿ ಇದರ ರಾಜಕೀಯ ಪರಿಣಾಮಗಳೇನೂ ಇರಲಾರದು ಎಂದು ಹೇಳಬಹುದಾದರೂ ಹಿಂದಿ ಹೇರಿಕೆಯಿಂದ ಕನ್ನಡದ ಅಭಿವೃದ್ಧಿಗೆ ಕುಂದುಂಟಾಗದೇ ಇರದು. ಶಿಕ್ಷಣ ಮಾಧ್ಯಮ ವಿಷಯದಲ್ಲಿ ಕನ್ನಡ ಈಗಾಗಲೇ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಾತ್ಮಕ ಕ್ರಮ ಕೈಗೊಳ್ಳುವರೆಂಬ ನಿರೀಕ್ಷೆಯಲ್ಲಿರುವಾಗಲೇ ಹಿಂದಿಯನ್ನು ಹೇರಲು ಮುಂದಾಗಿರುವುದು ಕನ್ನಡಿಗರಿಗೆ ನುಂಗಲಾರದ ತುತ್ತಾಗಿದೆ.

ಹಿಂದಿ ಹೇರಿಕೆಯ ಕ್ರಮ ಕೈಬಿಡದಿದ್ದಲ್ಲಿ ಫೆಡರಲ್ ವ್ಯವಸ್ಥೆಗೆ ಭಂಗ ಉಂಟಾಗುವುದೆಂದೂ ದಕ್ಷಿಣ ಭಾರತ ಒಕ್ಕೂಟ ವ್ಯವಸ್ಥೆಯಿಂದ ಹೊರ ಬರಬೇಕಾಗಬಹುದೆಂದೂ ಖ್ಯಾತ ಕವಿಗಳೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿರುವ ಕನ್ನಡಪರ ಹೋರಾಟಗಾರ ಚಂದ್ರಶೇಖರ ಪಾಟೀಲರು ಆಡಿರುವ ಮಾತುಗಳು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಮಾತೃಭಾಷೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಬೇಕು.ಈ ನಿಟ್ಟಿನಲ್ಲಿ ಪ್ರದೇಶ ಭಾಷೆಗಳನ್ನು ಸಂವಿಧಾನ ರಕ್ಷಿಸಬೇಕಾಗಿದೆ. ಇಲ್ಲವಾದಲ್ಲಿ ಪ್ರದೇಶ ಭಾಷೆಗಳು ಮೃತಭಾಷೆಗಳಾಗುವ ದಿನ ದೂರವಿರಲಾರದು. ಇದು ಕೇಂದ್ರ ಸರಕಾರ ತಕ್ಷಣ ಮಾಬೇಕಾಗಿರುವ ಜರೂರು ಕೆಲಸ. ಹಿಂದಿ ಹೇರಿಕೆಯಲ್ಲ. ಹಿಂದಿಯನ್ನು ಕಲಿಯುವವರ ಪ್ರೀತಿಗೆ ಬಿಡುವುದು ಒಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ