ಪ್ರತಿಯೊಬ್ಬರ ಕಟಾಕ್ಷ ಮಹಾರರ ಮೇಲೆ
ಏನೇ ಇರಲಿ ಮಹಾರ ಜಾತಿಯ ಜನರು ಎಲ್ಲರ ಕಣ್ಣಿಗೆ ಚುಚ್ಚುತ್ತಾರೆ. ಪೇಶ್ವೆಕಾಲದಲ್ಲಿ ಅಸ್ಪಶ್ಯತೆ ತುಂಬ ಕಠೋರವಾಗಿತ್ತು. ಅದರ ಧಗೆ ಮಹಾರರಿಗೆ ಹತ್ತಿಕೊಂಡಷ್ಟು ಉಳಿದ ಯಾವ ಅಸ್ಪಶ್ಯ ಜಾತಿಯವರಿಗೂ ಹತ್ತಿಕೊಳ್ಳಲಿಲ್ಲ. ಅಸ್ಪಶ್ಯರನ್ನು ನೋಡಿದ ಕೊಡಲೇ ಗುರುತು ಸಿಗಲೆಂಬ ಕಾರಣಕ್ಕೆ ಕೊರಳಲ್ಲಿ ಕರಿದಾರ ಕಟ್ಟುವ ನಿಯಮ ಜಾರಿಗೆ ಬಂತು. ಆದರೆ ಕಟ್ಟಿದ್ದು ಮಾತ್ರ ಮಹಾರರ ಕೊರಳಿಗೆ!
ಅಸ್ಪಶ್ಯರ ಹೆಜ್ಜೆಯ ಗುರುತಿನಿಂದ ಮೈಲಿಗೆಯಾದ ಧೂಳನ್ನು ಅಳಿಸಿಹಾಕಲು ಅವರ ಸೊಂಟಕ್ಕೆ ಕಸಬರಿಗೆ ಕಟ್ಟಬೇಕೆಂಬ ಆಜ್ಞೆಯನ್ನು ಪೇಶ್ವೆಯವರು ಹೊರಡಿಸಿದರು. ಆದರೆ ಅವನ್ನೂ ಕಟ್ಟಿದ್ದು ಕೇವಲ ಮಹಾರರ ಸೊಂಟಕ್ಕೆ! ಅಸ್ಪಶ್ಯರ ಉಗುಳು ನೆಲಕ್ಕೆ ಬಿದ್ದರೆ, ಅದರ ಮೇಲೆ ಕಾಲಿಟ್ಟರೆ ಮೈಲಿಯಾಗುತ್ತದೆ ಎಂಬ ಕಾರಣಕ್ಕಾಗಿ ಅವರ ಉಗುಳನ್ನು ಸಂಗ್ರಹಿಸಲು, ಅದು ರಸ್ತೆಯ ಮೇಲೆ ಬೀಳದಂತೆ ತಡೆಗಟ್ಟಲು ಅವರ ಕೊರಳಿಗೆ ಮಡಕೆ ಕಟ್ಟುವ ಆಜ್ಞೆ ಹೊರಬಿತ್ತು. ಮತ್ತೆ ಮಡಕೆ ಕಟ್ಟಿದ್ದು ಮಹಾರರ ಕೊರಳಿಗೆ. ಅಸ್ಪಶ್ಯ ಹಿಂದೂಗಳು ಮಹಾರರಿಗೆ ಕೊಟ್ಟ ಉಪಟಳವನ್ನು ಇತರ ಯಾವ ಅಸ್ಪಶ್ಯ ಜಾತಿಯವರಿಗೂ ಕೊಡಲಿಲ್ಲ. ಹಿಂದೂಗಳು ಮಹಾರರ ಮೇಲೆ ಇಷ್ಟೆಲ್ಲ ಕಟಾಕ್ಷವಿಡಲು ಏನು ಕಾರಣ ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ಉಭಯತರಲ್ಲಿರುವ ಶತ್ರುತ್ವ ಮಾತ್ರ ಪುರಾತನ ಎನ್ನುವುದು ಮಾತ್ರ ಸತ್ಯ. ಇದಕ್ಕೆ ಮಹಾರರ ಜಾತಿ ಚಳವಳಿ ಕಾರಣವಾಗಿರಬಹುದು. ಆಂಗ್ಲ ಸರಕಾರ ಬಂದ ಮೇಲೂ ಮಹಾರರು ತಮ್ಮ ಚಳವಳಿಯನ್ನು ದಿಟ್ಟತನದಿಂದ ಮುಂದುವರಿಸಿದರು. ಅಸ್ಪಶ್ಯರ ಉನ್ನತಿಯ ಕಾದಾಟಕ್ಕೆ ಅವರು ಕಂಕಣಬದ್ಧರಾದರು.
1886ರಲ್ಲಿ ಪುಣೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಮಹಾರರು ಹಿಂದೂ ಧರ್ಮದ ಪ್ರತಿಕೃತಿಯನ್ನು ಸುಟ್ಟರು. ಅಸ್ಪಶ್ಯರನ್ನು ಗುಲಾಮಗಿರಿಯಲ್ಲಿರಿಸಿ ಸ್ವರಾಜ್ಯವನ್ನು ಬೇಡುವ ಅಧಿಕಾರ ನಿಮಗೆಲ್ಲಿದೆ ಎಂದು ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದೂ ಮಹಾರರೇ. ಇದರಿಂದಾಗಿ ಸನಾತನ ಹಿಂದೂಗಳ ವಿರೋಧಕ್ಕೆ ರಾಜಕಾರಣದ ಹಿಂದೂಗಳ ಬೆಂಬಲ ಸಿಕ್ಕಂತಾಯಿತು. ಅಸ್ಪಶ್ಯರ ಉನ್ನತಿಯ ಕಾಯಕವನ್ನು ಗಾಂಧೀಜಿಯವರು ಕೈಗೆತ್ತಿಕೊಂಡಾಗ ಹಿಂದೂಗಳು ಮಹಾರರನ್ನು ಒಳಗೆ ಬರೆದುಕೊಳ್ಳಬಹುದು ಎಂದುಕೊಂಡಿದ್ದೆವು. ಆದರೆ ಆ ಆಸೆಯೂ ವಿಫಲವಾಯಿತು. ಗಾಂಧಿಯವರು ಸ್ಥಾಪಿಸಿದ ಹರಿಜನ ಸೇವಕ ಸಂಘದ ಪ್ರಣೀತರಾದ ಠಕ್ಕರ ಬಾಪ್ಪಾ (ಠಕ್ಕ ಬಾಪ್ಪಾ ಅಲ್ಲ) ಅವರು, ಸರಕಾರದ ಸವಲತ್ತಿನ ಲಾಭವನ್ನು ಮಹಾರರೇ ಪಡೆಯುತ್ತಿರುವುದರಿಂದ ಇದನ್ನು ನಿರ್ಬಂಧಿಸಬೇಕೆಂದು ಮುಂಬೈ ಇಲಾಖೆಯ ಬ್ಯಾಕ್‌ವರ್ಡ್ ಕ್ಲಾಸ್ ಬೋರ್ಡಿಗೆ ತಕರಾರು ಸಲ್ಲಿಸಿದರು. ಸತ್ಯ ಸಂಗತಿ ಏನು ಅನ್ನುವುದು ವಿಚಾರಣೆಯ ಬಳಿಕ ಗೊತ್ತಾಗುತ್ತದೆ.
ಆದರೆ ಮಹಾರರ ಬಗೆಗೆ ಹಿಂದೂಗಳ ಉದರದಲ್ಲಿ ಅದೆಷ್ಟು ನಂಜು ತುಂಬಿಕೊಂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇಷ್ಟು ದಿನ ಕೇವಲ ಹಿಂದೂಗಳಷ್ಟೇ ಮಹಾರರನ್ನು ದ್ವೇಷಿಸುತ್ತಿದ್ದರು. ಅವರ ಜೊತೆಗೆ ಈಗ ಸಮಗಾರರೂ, ಮಾದಿಗರೂ ಸೇರಿದ್ದಾರೆ. ಅವರು ಮಹಾರರನ್ನು ದ್ವೇಷಿಸಲಾರಂಭಿಸಿದ್ದು ಕಂಡುಬರುತ್ತಿದೆ. ಮಹಾರರನ್ನು ದ್ವೇಷಿಸುವುದನ್ನು ಬಿಟ್ಟು ಬೇರೆ ಯಾವ ಕಾರ್ಯವನ್ನೂ ಅವರು ಮಾಡಿದ್ದೂ ಕಂಡು ಬರುವುದಿಲ್ಲ. ಮಹಾರರ ವಿರುದ್ದ ಸಮಗಾರರೂ, ಮಾದಿಗರೂ ಸಿಡಿದೇಳಲು ಹಿಂದೂಗಳೇ ಕಾರಣವೆಂಬ ವಿಶ್ವಾಸ ನನ್ನದು. ಆದರೆ ಮಹಾರರ ವಿರುದ್ಧ ಎದ್ದ ಸಮಗಾರ, ಮಾದಿಗರಿಗೆ ನಾನು ಕೇಳುವುದಿಷ್ಟೇ: ಮಹಾರರ ಶ್ರಮದಿಂದ ಚಳವಳಿಯಿಂದಾಗಿಯೇ ಈ ಸವಲತ್ತುಗಳೂ ಸಿಕ್ಕಿವೆ. ಮಹಾರರ ಮೇಲೆ ಅರೋಪ ಮಾಡುವುದೇ ಆಗಿದ್ದರೆ, ಯಾವುದು ಸತ್ಯವೋ ಅದನ್ನಷ್ಟೇ ಮಾಡಿ. ಹುರುಳಿಲ್ಲದ ವಿಷಯವನ್ನು ಪ್ರಸ್ತಾಪ ಮಾಡಬೇಡಿ. ಸದ್ಯಕ್ಕಂತೂ ಎಲ್ಲೆಡೆ ಮಹಾರರ ವಿರುದ್ಧ ಅಸಮಾಧಾನ ಕಂಡುಬರುತ್ತಿದೆ.
ಈಗಷ್ಟೇ ನಾಗಪುರದ ನವಮತವಾದಿ ಮಾತಂಗ ಸಮಾಜದವರು ಕೌಂಡಣ್ಯಪುರ ಎಂಬಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಮಧ್ಯಪ್ರಾಂತ ವರ್ಹಾಡ ಮಹಾರೇತರ ‘ಹರಿಜನ’ ಪರಿಷತ್ತನ್ನು ಆಯೋಜಿಸಲಾಗಿತ್ತು. ಅಲ್ಲಿ ಹುಸಿ ಆರೋಪದ ಮಾತು ಕೇಳಿಬಂತು. ಆ ಪರಿಷತ್ತಿನಲ್ಲಿ ಮಹಾರ ಸಮಾಜವು ‘‘ಮಹಾರೇತರ ಹರಿಜನರನ್ನು ಶೋಷಣೆ ಮಾಡುತ್ತಿದೆ, ಡಾ. ಅಂಬೇಡ್ಕರ್‌ರು ಮಹಾರೇತರ ಹರಿಜನ ಪುಢಾರಿಯಲ್ಲ’’ ಎಂಬ ಎರಡು ಗೊತ್ತುವಳಿಯನ್ನು ಸ್ವೀಕರಿಸಲಾಯಿತು. ಈ ಕಾರ್ಯ ಯಾರದ್ದು ಎನ್ನುವುದು ಪ್ರಾಜ್ಞರಿಗೆ ಗೊತ್ತೇ ಆಗುತ್ತದೆ. ನಾನು ಮೇಲೆ ಹೇಳಿದಂತೆ ಇದೇನು ಹೊಸದಲ್ಲ. ತೀರ ಹಳೆಯದೆ. ಆದರೆ ಈಗ ಅನೀರಿಕ್ಷಿತ. ಏಕೆಂದರೆ, ಕಾಂಗ್ರೆಸ್ ಕಾರ್ಯಾಲಯದಿಂದ ತಾವು ಆರಂಭಿಸಿದ ಸತ್ಯಾಗ್ರಹದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಅಂಥವರು ನೂಲುವುದು, ಗ್ರಾಮೋದ್ಧಾರದ ಕಾರ್ಯಮಾಡುವುದು ಮತ್ತು ಜಾತಿ-ಜಾತಿಯಲ್ಲಿ ಐಕ್ಯತೆ ನಿರ್ಮಾಣ ಮಾಡುವಂಥ ವಿಧಾಯಕ ಕಾರ್ಯಕ್ರಮವನ್ನು ಪ್ರಾಮಾಣಿಕವಾಗಿ ಮಾಡುವಂತೆ ಗಾಂಧೀಜಿಯವರು ಆದೇಶ ಅಥವಾ ಆಜ್ಞೆ ನೀಡಿದ್ದಾರೆ.
ಮಗಳಿಗೆ ಮಾತಾಡಿದ್ದು ಸೊಸೆಗೆ ನೋವಾದಂತೆ ಗಾಂಧಿಯವರ ಭಾಷೆಯು ಇಬ್ಬಂದಿತನದಲ್ಲದ್ದು ಎಂಬ ನಂಬಿಕೆ ಹಲವರಿಗೆ ಇರುವುದರಿಂದ, ಗಾಂಧಿಗಣ ಸವೆದರೂ ಕಾದಾಡಿದರೂ, ಅದು ದೇಶ ಕಲ್ಯಾಣಕ್ಕಾಗಿಯೇ ಎಂದು ಹಲವರು ಭಾವಿಸುವುದು ಸಹಜ. ಆದರೆ ಮೇಲಿನ ಪರಿಷತ್ತು ಕಾಂಗ್ರೆಸ್ ಪಕ್ಷದ ಚಳವಳಿಯಲ್ಲೇ ಹುಟ್ಟಿಕೊಂಡಿದ್ದು. ಇದನ್ನು ನೋಡಿದರೆ ಸಾಮಾನ್ಯ ಜನರ ಬುದ್ಧಿ ಕುಂಠಿತವಾಗದೇ ಇರದು.
ಈ ಆರೋಪಕ್ಕೆ ಮಹಾರ ಜನರು ಉತ್ತರ ನೀಡುವರು. ಇಲ್ಲವೆಂದೇನಲ್ಲ. ಆದರೆ ಅನ್ಯರೇ ಕಿವಿ ಚುಚ್ಚುವುದು ಶ್ರೇಯಸ್ಕರ. ಹೀಗಾಗಿ ರಾಷ್ಟ್ರವೀರರೇ ಈ ಪರಿಷತ್ತಿನ ಗೊತ್ತುವಳಿಯನ್ನು ಟೀಕಿಸಿದ್ದಾರೆ. ಅಲ್ಲಿಯ ಪರಿಚ್ಛೇದವನ್ನು ನಮ್ಮ ಸಮಗಾರ, ಮಾತಂಗ ಬಂಧುಗಳ ಕಣ್ಣು ತೆರೆಯಲೆಂದು ಇಲ್ಲಿ ನೀಡುತ್ತಿದ್ದೇನೆ. ಅವರು ಸರಿಯಾಗಿ ಯೋಚಿಸಬೇಕು. ರಾಷ್ಟ್ರವಾದಿಕಾರ ಹೇಳುತ್ತಾರೆ-
‘‘ಮಹಾರ ಸಮಾಜವು ಮಹಾರೇತರ ಹರಿಜನರನ್ನು ಶೋಷಣೆ ಮಾಡುತ್ತಿದೆ ಎಂದು ಹೇಳುವುದು ಅತಿಶಯೋಕ್ತಿಯದು! ಇದರ ಮೇಲಿಂದ ಮೇಲಿನ ಮಹಾರೇತರ ಹರಿಜನ ಪರಿಷತ್ತಿನ ಒಬ್ಬ ಮನುಷ್ಯನಿಗೂ ಯಾವುದೇ ಸ್ವಾತಂತ್ರವಿರಲಿಲ್ಲ. ಎಲ್ಲರೂ ಕಾಂಗ್ರೆಸ್ ಪುಢಾರಿಗಳ ಸಾಕಿದ ಗಿಳಿಯಾಗಿದ್ದರು ಎನ್ನುವುದು ಸಿದ್ದವಾಗುವದಿಲ್ಲವೇ? ಸವರ್ಣೀಯರ ಕಾಲ್ತುಳಿತಕ್ಕೆ ಸಿಕ್ಕು ಮಹಾರ ಸಮಾಜವೂ ಸಹ ಈಗಲೂ ಚಿಂದಿಚಿಂದಿಯಾಗುತ್ತಿದೆ. ಅವರ ಹಲ್ಲು, ಕೈ ಎರಡೂ ಮುರಿದಿವೆ. ಅಂದರೆ ಅವನು ಸಹ ಸವರ್ಣೀಯರಿಗಾಗಿ ಬೆವರು ಸುರಿಸಿ ದುಡಿಯುತ್ತಿದ್ದಾನೆ. ಇಂಥ ಸ್ಥಿತಿಯಲ್ಲಿ ಅವನು ಮಹಾರೇತರ ಹರಿಜನರ ಶೋಷಣೆ ಮಾಡುತ್ತಿದ್ದಾನೆ ಎಂದು ಅಸ್ಪಶ್ಯ ಸಮಾಜದವರೇ ಮಾತಾಡುತ್ತಿರುವದು ದೇಶದ ದೌರ್ಭಾಗ್ಯ!
ಮಹಾರ ಜನರ ಕೈಯಲ್ಲಿ ಸಾವಕಾರಿತನ, ಕಾರ್ಖಾನೆ, ಡಾಕ್ಟರ್, ವಕೀಲ, ದಲಾಲ ಮತ್ತು ಅಮಲದಾರರಂತಹ ಉದ್ಯೋಗವು ಅರ್ಧದಷ್ಟಲ್ಲ, ಕಾಲು ಅಂಶದಷ್ಟೂ ಇಲ್ಲ. ಮನೆಯ ಸೊಸೆಯ ಮಾತನ್ನೂ ಲೆಕ್ಕಿಸದೆ, ನೆಲ್ಲಿನಲ್ಲಿದ್ದ ಬೆಣ್ಣೆಯನ್ನು ಕಬಳಿಸುವಾಗ, ಅತ್ತೆ ಬರುವದನ್ನು ಕಂಡು ಗೋಪಾಲಕೃಷ್ಣನು ಕೊನೆಯ ತುತ್ತು ತಿಂದು ಮುಗಿಸಿ, ಬೆರಳಿಗೆ ಮೆತ್ತಿಕೊಂಡಿದ್ದ ಬೆಣ್ಣೆಯನ್ನು ಸೊಸೆಯ ಮುಖಕ್ಕೆ ಒರೆಸಿದಂತಹದೇ ಚಾಣಕ್ಯ ಚಂಡಿರಾಮನ ಕಾರಸ್ತಾನ ಅಲ್ಲವೇ ಇದು?
ಪರಿಷತ್ತಿನ ಅಧ್ಯಕ್ಷರಾದ ಮಿ.ವರ್ಹಾಡೆಯವರು ಹೇಳಿದಂತೆ ಬೋರ್ಡ್, ಅಸೆಂಬ್ಲಿ ಮುಂತಾದ ಚುನಾವಣೆಯಲ್ಲಿ ಅಸ್ಪಶ್ಯ ಸಮಾಜದಲ್ಲಿಯ ಮಹಾರ ಜಾತಿಯ ಅಭ್ಯರ್ಥಿಗಳು ಮಹಾರೇತರಿಗಿಂತ ಹೆಚ್ಚು ಯಶಸ್ವಿಯಾಗುತ್ತಿರಲೂಬಹುದು. ಆಗಲಿಕ್ಕೂ ಇಲ್ಲ. ಆದರೆ ಮಹಾರ ಜನರು ಬಹುಸಂಖ್ಯೆಯಲ್ಲಿರುವುದರ ಪರಿಣಾಮವಿದು. ಚುನಾವಣೆಯಲ್ಲಿ ಉಪಜಾತಿಗಳಿಗೆ ಪಾಲು ಹಂಚಿ ನೀಡುವಷ್ಟು ನಾಯಕತ್ವವು ಎಂದಿಗೂ ನಿರ್ಮಾಣವಾಗುವುದೂ ಸಾಧ್ಯವಿಲ್ಲ. ಗಾಂಧಿ-ನೆಹರೂರಂತಹ ಮಹಾನ್ ಪುಢಾರಿಗಳು ಕಾಂಗ್ರೆಸ್ ಪಕ್ಷದಲ್ಲಿದ್ದೂ ಏಳೂ ಪ್ರಾಂತಗಳಿಗೆ ಅಲ್ಪಸಂಖ್ಯಾತ ಬ್ರಾಹ್ಮಣ ಜಾತಿಯವರೇ ಮುಖ್ಯ ಪ್ರಧಾನರಾದರು. ಹೀಗಿರುವಾಗ ಚುನಾವಣೆಯಲ್ಲಿ ಮಹಾರೇತರ ಹರಿಜನರಿಗೆ ವಾಸ್ತವಿಕ ಪಾಲು ಕೊಡುವಲ್ಲಿ ಡಾ. ಅಂಬೇಡ್ಕರ್ ಸಮರ್ಥರಾಗಿಲ್ಲವಾದ್ದರಿಂದ ಅವರು ಅಸ್ಪಶ್ಯ ಜಾತಿಯ ಪುಢಾರಿಯಲ್ಲ ಎಂದು ಆಟವಾಡಿಸುವ ಧಣಿಗಾಗಿ ಅಪಸ್ವರ ಎತ್ತುವುದು ಎಂದರೆ ಸ್ವಂತಕ್ಕೇ ಘಾತ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದಲೇ ಅಸ್ಪಶ್ಯರ ಮಾತಂಗ ಸಮಾಜಕ್ಕೆ ಡಾ. ಅಂಬೇಡ್ಕರ್ ದೂರದವರಾಗಿ ಉಮರಾವತಿಯ ಡಾ. ಸಬನೀಸ್‌ರಂತಹ ಜನರು ಸನಿಹದವರೂ ಕಲ್ಯಾಣಮಾಡುವವರೂ ಆದರು! ಒಟ್ಟಿನಲ್ಲಿ ಬಹುಜನಸಮಾಜದ ಉದ್ಧಾರ ಮಾಡುವುದು ಮತ್ತು ಅವರನ್ನು ಸವರ್ಣೀಯರ ಕಪಿಮುಷ್ಟಿಯಿಂದ ಹೊರತರುವಂಥ ಕೆಲಸ ತುಂಬ ಕಷ್ಟದಾಯಕವಾಗಿದ್ದರೂ ಸಮಾಜಸೇವಕರು ಅದನ್ನು ಮಾಡಲೇ ಬೇಕು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ- ಬರಹಗಳ ಸಂಪುಟ)