ಮಕ್ಕಳ ಶಾಲಾಬ್ಯಾಗ್ ಭಾರದ ತನಿಖೆ, ಸಾಲಮನ್ನಾ ಪೋಸ್ಟರ್‌ವಾರ್!
ಜೂನ್ 15ರಿಂದ ಮುಂಬೈಯಲ್ಲಿ ಶಾಲಾ ಮಕ್ಕಳು ಮತ್ತೆ ತರಗತಿಗಳಿಗೆ ಹಾಜರಾಗಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಆ ದಿನದಿಂದಲೇ ಸಮವಸ್ತ್ರ ಸಹಿತ ವಿವಿಧ ಶಾಲಾ ಪರಿಕರಗಳ ವಿತರಣೆ ಆರಂಭವಾಗಿದೆ. ಪ್ರತೀ ವರ್ಷ ಮಹಾನಗರ ಪಾಲಿಕೆ ತನ್ನ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ 27 ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತದೆ. ಈ ಮೊದಲು ತಡವಾಗಿ ವಿತರಿಸುತ್ತಿದ್ದು ಭಾರೀ ಟೀಕೆಗಳು ಬರುತ್ತಿದ್ದ ಕಾರಣ ಈ ಬಾರಿ ಶಾಲಾ ಆರಂಭದಿಂದಲೇ ವಿತರಿಸಲು ಮುಂದಾಗಿದೆ.
ಇನ್ನೊಂದೆಡೆ ಶಾಲಾ ಮಕ್ಕಳ ಪಠ್ಯ ಪುಸ್ತಕಗಳ ಬ್ಯಾಗ್ ಲೆಕ್ಕಕ್ಕಿಂತ ಹೆಚ್ಚು ಭಾರವಾಗಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿರುವ ರಾಜ್ಯ ಸರಕಾರ ಇದು ಮಕ್ಕಳ ಆರೋಗ್ಯಕ್ಕೆ ತೀವ್ರ ಪರಿಣಾಮ ಬೀರಲಿದೆ ಎಂಬ ಬಗ್ಗೆ ಹೆತ್ತವರಿಂದ, ಅನೇಕ ಶಿಕ್ಷಣ ಸಂಘಟನೆಗಳಿಂದ ಮತ್ತು ವೈದ್ಯರಿಂದ ಆಕ್ಷೇಪ ಬಂದ ಕಾರಣ ಶಿಕ್ಷಣ ವರ್ಷ 2017 -2018ರಿಂದ ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ ಶಿಕ್ಷಣ ನಿರ್ದೇಶನಾಲಯಕ್ಕೆ ವರದಿ (ಪುಣೆ) ಕಳುಹಿಸಬೇಕು ಎಂದು ತಮ್ಮ ಅಧಿಕಾರಿಗಳಿಗೆ ರಾಜ್ಯ ಶಿಕ್ಷಣ ವಿಭಾಗವು ಇತ್ತೀಚೆಗೆ ಒಂದು ಆದೇಶ ಜಾರಿಗೊಳಿಸಿತ್ತು. ಶಿಕ್ಷಣ ನಿರ್ದೇಶಕರು (ಪ್ರಾಥಮಿಕ) ಪ್ರತೀ ತಿಂಗಳ 15ನೆ ತಾರೀಕಿಗೆ ಎಲ್ಲಾ ಜಿಲ್ಲೆಗಳಿಂದ ಬಂದ ವರದಿಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸುತ್ತಾರೆ. ಹೊಸ ಶೈಕ್ಷಣಿಕ ಅವಧಿ ಆರಂಭವಾಗುತ್ತಲೇ ಇದರ ಪ್ರಭಾವ ಕಂಡುಬರತೊಡಗಿದೆ. ಇದೀಗ ಅಧಿಕಾರಿಗಳ ಟೀಮ್ ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್‌ನ ಭಾರವನ್ನು ಅಳೆಯಲು ಉತ್ಸುಕರಾಗಿದ್ದಾರೆ.
* * *
ಡ್ಯೂಟಿಯಲ್ಲಿರುವ ಪೊಲೀಸರಿಗೆ ಮೊಬೈಲ್ ಕ್ಯಾಂಟೀನ್
ಪೊಲೀಸ್ ಇಲಾಖೆಯು ಮುಂಬೈಯಲ್ಲಿ ಪ್ರತೀ ಸ್ಥಳದಲ್ಲಿ ಡ್ಯೂಟಿಯಲ್ಲಿರುವ ಪೊಲೀಸರಿಗೆ ಮನೆಯೂಟದಂತಹ ಊಟವನ್ನು ತಲುಪಿಸಲು ನಿರ್ಣಯಿಸಿದೆ. ಮುಂಬೈ ಪೊಲೀಸ್ ಆಯುಕ್ತ ದತ್ತಾ ಪಡ್ಸಲ್ಗೀಕರ್ ಅವರು ಡ್ಯೂಟಿಯಲ್ಲಿರುವ ಪೊಲೀಸರಿಗೆ ಊಟ ಪೂರೈಸಲು ಹೊಸ ಸಿದ್ಧತೆಗೆ ಮುಂದಾಗಿದ್ದಾರೆ. ಶೀಘ್ರವೇ ನಗರದ ಪ್ರತೀ ಸ್ಥಳದಲ್ಲೂ ಡ್ಯೂಟಿಯಲ್ಲಿರುವ ಪೊಲೀಸರಿಗೆ ಕ್ಯಾಂಟೀನ್ ಊಟವನ್ನು ತಲುಪಿಸಲಾಗುವುದು.
ಮುಂಬೈ ಪೊಲೀಸ್ ಪೇದೆಗಳು ಹೆಚ್ಚಿನ ಸಮಯ ಡ್ಯೂಟಿಯಲ್ಲಿರುವ ಕಾರಣ ಸಮಯಕ್ಕೆ ಸರಿಯಾಗಿ ಉಣ್ಣುವುದಕ್ಕಾಗುವುದಿಲ್ಲ. ಹೀಗಾಗಿ ಪೊಲೀಸರಿಗೆ ಖಿನ್ನತೆ, ಮಧುಮೇಹ, ರಕ್ತದೊತ್ತಡ ಮುಂತಾದ ಕಾಯಿಲೆಗಳು ಕಂಡು ಬರುತ್ತಿವೆ. ಕಮಿಷನರ್ ಇಂತಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಪೊಲೀಸರಿಗೆ ಉತ್ತಮ ಭೋಜನವನ್ನು ಒದಗಿಸಲು ನಿರ್ಧರಿಸಿದ್ದಾರೆ. ಸದ್ಯ ನಗರದ ಆಯ್ದ ಕ್ಷೇತ್ರಗಳಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದಾರೆ. ಇದಕ್ಕಾಗಿ ಮುಂಬೈ ಪೊಲೀಸರ ಹಳೆಯ ಪೆಟ್ರೋಲಿಂಗ್ ವ್ಯಾನ್‌ನ್ನು ಬಳಸಲಾಗುತ್ತಿದೆ.
ಮುಂಬೈ ಪೊಲೀಸರು ಇಂತಹ 8 ಪೆಟ್ರೋಲಿಂಗ್ ವ್ಯಾನ್‌ಗಳನ್ನು ಸದ್ಯ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಾರೆ. ಡ್ಯೂಟಿಯಲ್ಲಿರುವ ಪೊಲೀಸರಿಗೆ ರಾತ್ರಿ ಮತ್ತು ಹಗಲು ಊಟವನ್ನು ಈ ವ್ಯಾನ್‌ಗಳ ಮೂಲಕ ತಲುಪಿಸಲಾಗುವುದು.
* * *
ಕೋಟಿಗಟ್ಟಲೆ ರೂ.ನ ಸ್ಕೈವಾಕ್‌ಗಳ ಧ್ವಂಸಕ್ಕೆ ಸಿದ್ಧತೆ
ಯಾವುದೇ ಸಮರ್ಪಕವಾದ ಯೋಜನೆ ಇಲ್ಲದೆ ನಿರ್ಮಿಸಿದ ಮುಂಬೈಯ ಎರಡು ಸ್ಕೈವಾಕ್‌ಗಳನ್ನು ಮುಂಬೈ ಮಹಾನಗರ ಪ್ರದೇಶ ವಿಕಾಸ ಪ್ರಾಧಿಕರಣ(ಎಂಎಂಆರ್‌ಡಿಎ)ವು ಮೆಟ್ರೋ ನಿರ್ಮಾಣಕ್ಕಾಗಿ ಕೆಡವಿಹಾಕಲಿದೆ. ಸರಿಯಾದ ಯೋಜನೆ ಇಲ್ಲದೆ ಕೋಟಿಗಟ್ಟಲೆ ಖರ್ಚುಮಾಡಿ ನಿರ್ಮಿಸಿದ ಎರಡು ಸ್ಕೈವಾಕ್‌ಗಳನ್ನು ಕೆಡವಿ ಹಾಕುವ ಮೂಲಕ ಈ ಹಣ ವ್ಯರ್ಥವೆನಿಸಲಿದೆ.
ಎಂಎಂಆರ್‌ಡಿಎ ಮುಂಬೈಯ ಡಿ.ಎನ್. ನಗರದಿಂದ ಮಾನ್‌ಖುರ್ದ್ ನಡುವೆ ಮೆಟ್ರೋಲೈನ್ 2-ಬಿ ನಿರ್ಮಾಣ ಮಾಡಲಿದೆ. ಈ ನಿರ್ಮಾಣ ರಸ್ತೆಯಲ್ಲಿ ವಿಲೇಪಾರ್ಲೆಯ ಎಸ್.ವಿ.ರೋಡ್ ಕ್ರಾಸಿಂಗ್‌ನ ಸ್ಕೈವಾಕ್, ಬಾಂದ್ರಾ (ಪಶ್ಚಿಮ)ದ ಸ್ಕೈವಾಕ್‌ಗಳ ಅಧಿಕಾಂಶ ಭಾಗ ಮತ್ತು ಸಿಎಸ್‌ಟಿ ರೋಡ್ ಕುರ್ಲಾದ ಪಾದಚಾರಿ ಸೇತುವೆಯನ್ನು ಧ್ವಂಸಗೊಳಿಸಲಿದೆ ಮುಂಬೈ ಮಹಾನಗರದ ರೈಲ್ವೆ ಸ್ಟೇಷನ್‌ಗಳ ಬಳಿ ಎಂಎಂಆರ್‌ಡಿಎ ಸ್ಕೈವಾಕ್‌ಗಳನ್ನು ನಿರ್ಮಿಸಲು ನಿರ್ಣಯ ಕೈಗೊಂಡ ನಂತರ ಇದಕ್ಕಾಗಿ 600 ಕೋಟಿ ರೂ. ಖರ್ಚು ಮಾಡಿತ್ತು. 37 ಸ್ಕೈವಾಕ್‌ಗಳಲ್ಲಿ 28ನ್ನು ಎಂಎಂಆರ್‌ಡಿಎ ನಿರ್ಮಿಸಿತ್ತು. 11ನ್ನು ಮನಪಾ -ಎಂಎಸ್‌ಆರ್‌ಡಿಸಿ ನಿರ್ಮಿಸಿತ್ತು.
* * *
191 ದೇಶಗಳ ಪ್ರವಾಸಿಗರನ್ನು ಸೆಳೆಯಲಿರುವ ಮಹಾರಾಷ್ಟ್ರ
ಮಹಾರಾಷ್ಟ್ರ ಸರಕಾರವು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸಲು ವಿದೇಶಿ ಕಂಪೆನಿ ಏರ್ ಬಿಎನ್‌ಬಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಉಪಸ್ಥಿತಿಯಲ್ಲಿ ಕಂಪೆನಿ ಮತ್ತು ಪ್ರವಾಸೋದ್ಯಮ ವಿಭಾಗದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ಸರಕಾರ 191 ದೇಶಗಳ ಪ್ರವಾಸಿಗರನ್ನು ಆಕರ್ಷಿಸಲಿದೆ ಹಾಗೂ ಪ್ರವಾಸಿಗರ ಆತಿಥ್ಯಕ್ಕಾಗಿ 50 ಸಾವಿರ ಕಿರು ಉದ್ಯಮಗಳನ್ನು ಸೃಷ್ಟಿಸುವ ಲಕ್ಷ್ಯ ವಹಿಸಲಿದೆ. ಏರ್ ಬಿಎನ್‌ಬಿ ಈಗಾಗಲೇ ಸೈನಿಕರಿಗಾಗಿ ಕಡಿಮೆ ಬಜೆಟ್‌ನಲ್ಲಿ ವಸತಿ, ಸೇವೆ-ಸೌಲಭ್ಯ ಉಪಲಬ್ದಗೊಳಿಸುವ ಖ್ಯಾತ ಕಂಪೆನಿ ಆಗಿದೆ. ಈ ಕಂಪೆನಿಯ ವ್ಯಾಪ್ತಿ 191 ದೇಶಗಳಿಗೆ ಹರಡಿದೆ. ಕಂಪೆನಿಯ ಸಹಾಯದಿಂದ 191 ದೇಶಗಳ ಪ್ರವಾಸಿಗರನ್ನು ಮಹಾರಾಷ್ಟ್ರದತ್ತ ಆಕರ್ಷಿಸುವುದಕ್ಕೆ ವಿಶ್ವಾಸಾರ್ಹ ವೇದಿಕೆಯನ್ನು ನಿರ್ಮಿಸಲಾಗುವುದು.
ಮುಖ್ಯಮಂತ್ರಿ ಫಡ್ನವೀಸ್ ಅನುಸಾರ ಪ್ರವಾಸೋದ್ಯಮ ವ್ಯವಹಾರ ಆನ್‌ಲೈನ್ ಆಗಿದೆ. ಅಧಿಕಾಂಶ ಪ್ರವಾಸಿಗರು ಪ್ರವಾಸಕ್ಕೆ ತೆರಳುವ ಮೊದಲು ಆನ್‌ಲೈನ್ ಬುಕ್ಕಿಂಗ್ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಐತಿಹಾಸಿಕ ಪ್ರವಾಸ ಸ್ಥಳ ಮತ್ತು ಸಾಂಸ್ಕೃತಿಕ ಸ್ಮಾರಕಗಳಿವೆ. ಏರ್ ಬಿಎನ್‌ಬಿ ಜೊತೆ ಕರಾರು ಮಾಡಿದ್ದರಿಂದ ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲಿದೆ.
ಪ್ರವಾಸೋದ್ಯಮ ಸಚಿವ ಮಂತ್ರಿ ಜೈಕುಮಾರ್ ರಾವಲ್ ಅವರ ಈ ಒಪ್ಪಂದದ ಕಾರಣ 50 ಸಾವಿರ ಕಿರು ಉದ್ಯಮಗಳು ಸೃಷ್ಟಿಯಾಗುವ ಗುರಿ ಇರಿಸಲಾಗಿದೆ. ರಾಜ್ಯದ ನಿರ್ಲಕ್ಷಿತ ಪರ್ಯಟನ ಸ್ಥಳಗಳಲ್ಲಿ ಸೇವಾ ಸೌಕರ್ಯ ವಿಸ್ತರಿಸಲಾಗುವುದು ಎಂದಿದ್ದಾರೆ.
* * *
ವಿಮಾನ ನಿಲ್ದಾಣ ಪರಿಸರದ ಎತ್ತರದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ
ಮುಂಬೈ ವಿಮಾನ ನಿಲ್ದಾಣದ ಅಕ್ಕಪಕ್ಕಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಎತ್ತರದ ವಿಷಯದಲ್ಲಿ ಬಾಂಬೆ ಹೈಕೋರ್ಟ್ ತೀವ್ರ ಚಿಂತೆ ವ್ಯಕ್ತಪಡಿಸಿದ್ದು ಈ ಎತ್ತರ ಲಕ್ಷಗಟ್ಟಲೆ ವಿಮಾನ ಪ್ರಯಾಣಿಕರ ಸುರಕ್ಷೆಗೆ ಗಂಭೀರ ಅಪಾಯ ತರುವ ಸಾಧ್ಯತೆಗಳಿವೆ ಎಂದಿದೆ. ಕೋರ್ಟ್ ನಾಗರಿಕ ವಿಮಾನಯಾನ ಮಂತ್ರಾಲಯದಿಂದ ಈ ಪ್ರಕರಣದಲ್ಲಿ ತನಿಖೆ ನಡೆಸಿ ಸಮರ್ಪಕ ಹೆಜ್ಜೆ ಇರಿಸುವಂತೆ ಆದೇಶಿಸಿದೆ.
ಮುಂಬೈ ವಿಮಾನ ನಿಲ್ದಾಣವು ಅಂಧೇರಿ ಪೂರ್ವ ಮತ್ತು ವಿಲೇಪಾರ್ಲೆ ಪೂರ್ವದಲ್ಲಿ ವ್ಯಾಪಿಸಿದ್ದು ಇದರ ನಾಲ್ಕೂ ಕಡೆ (ಬಿಕೆಸಿ, ಕುರ್ಲಾ, ಬಾಂದ್ರಾ, ಖಾರ್, ಪಾರ್ಲಾ, ಅಂಧೇರಿ) ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ಎತ್ತರ ವಿಮಾನ ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡಬಹುದಾಗಿದೆ. ಇಲ್ಲಿ ಕಟ್ಟಡಗಳನ್ನು ಕಟ್ಟುವ ಬಿಲ್ಡರ್‌ಗಳು ಮಹಾನಗರ ಪಾಲಿಕೆ, ನಾಗರಿಕ ವಿಮಾನಯಾನ ಮಂತ್ರಾಲಯದ ಅಧಿಕಾರಿಗಳು ಮತ್ತು ಇತರ ಸರಕಾರಿ ಏಜನ್ಸಿಗಳ ಜೊತೆಗೂಡಿ ಎತ್ತರದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ವಿಮಾನ ಹಾರಾಟಕ್ಕೆ ಅಪಾಯ ಎದುರಾಗುವ ಸಂಭವವಿದೆ ಎಂದು ನ್ಯಾ. ವಿ.ಎಂ.ಕಾನಾಡೆ ಮತ್ತು ನ್ಯಾ. ಎಂ.ಎಸ್. ಸೋನಕ್ ಅವರು ಹೇಳಿದ್ದಾರೆ.
ಸಮಾಜ ಸೇವಕ ಯಶವಂತ್ ಶಿನಾಯ್ ಅವರ ಜನಹಿತ ಅರ್ಜಿಯ ವಿಚಾರಣೆ ಸಮಯ ಕೋರ್ಟ್ ಈ ಆದೇಶ ನೀಡಿದೆ. ವಿಮಾನ ನಿಲ್ದಾಣದ ಪರಿಸರದ ಅನೇಕ ಮನೆಗಳು, ಕಟ್ಟಡಗಳು, ಇಂಟರ್‌ನ್ಯಾಶನಲ್ ಟರ್ಮಿನಲ್‌ಗೆ ಸಂಬಂಧಿಸಿದ ಮಾನದಂಡಗಳನ್ನು ಉಲ್ಲಂಘಿಸಿವೆ ಎಂದು ಕೋರ್ಟ್ ನಾಗರಿಕ ವಿಮಾನಯಾನ ಮಂತ್ರಾಲಯಕ್ಕೆ 2010- 2011ರಲ್ಲಿ ಸಮೀಕ್ಷೆ ಮಾಡಲು ಹೇಳಿತ್ತು. ಅದು ವಿಮಾನ ನಿಲ್ದಾಣದ ಅಕ್ಕ ಪಕ್ಕಗಳ 137 ಕಟ್ಟಡಗಳ ತನಿಖೆ ನಡೆಸಿ 45 ಕಟ್ಟಡಗಳು ನಿಯಮ ಉಲ್ಲಂಘಿಸಿವೆ ಎಂದಿದೆ. ಮೂರು ತಿಂಗಳಲ್ಲಿ ಈ 45 ಕಟ್ಟಡಗಳನ್ನು ಕೆಡವಿ ಹಾಕಿರಿ ಎಂದು ಹೈಕೋರ್ಟ್ ಡಿಜಿಸಿಎಗೆ ಆದೇಶಿಸಿದೆ.
* * *
ರೈತರ ಸಾಲಮನ್ನಾ ಪೋಸ್ಟರ್‌ವಾರ್
ರೈತರ ಸಾಲ ಮನ್ನಾ ಮುಂದಿಟ್ಟು ಇದೀಗ ಮಹಾರಾಷ್ಟ್ರದ ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶ್ರೇಯಸ್ಸನ್ನು ಪಡೆಯಲು ಸ್ಪರ್ಧೆ ಆರಂಭಿಸಿವೆ. ಅದರಲ್ಲಿ ಶಿವಸೇನೆಯ ಒಂದು ಹೋರ್ಡಿಂಗ್ ಈಗ ಚರ್ಚೆಯಲ್ಲಿದೆ. ಇದರಲ್ಲಿ ಬರೆದಿರುವಂತೆ ‘‘ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆಯವರ ನೇತೃತ್ವದಲ್ಲಿ ರೈತ ಸಂಘಟನೆಯವರು ಹೋರಾಟ ನಡೆಸಿದ ನಂತರ ಸರಕಾರವು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಘೋಷಣೆ ಮಾಡಲಾಗಿದೆ. ಈಗ ಹೊಸ ಸಣ್ಣ ಕೃಷಿಕರಿಗೆ ಹೊಸ ಸಾಲ ಒದಗಿಸಲಾಗುವುದು’’ ಎಂದು ಬರೆಯಲಾಗಿದೆ.
ಈ ಪೋಸ್ಟರ್ ವಾರ್‌ನ ಬಗ್ಗೆ ಶಿವಸೇನಾ ನೇತಾ ರಾಜ್ಯದ ಪರ್ಯಾವರಣ ಮಂತ್ರಿ ರಾಮದಾಸ್ ಕದಮ್ ಹೇಳುತ್ತಾರೆ- ಪಾರ್ಟಿಯು ರೈತ ಆಂದೋಲನಕ್ಕೆ ಬೆಂಬಲಿಸಿತ್ತು. ಶಿವಸೇನೆಯ ಒತ್ತಡದ ಕಾರಣವೇ ಸರಕಾರ ಸಾಲ ಮನ್ನಾ ಘೋಷಣೆ ಮಾಡಿತು. ಹೀಗಾಗಿ ನಮ್ಮ ಪೋಸ್ಟರ್ ಬಗ್ಗೆ ಯಾರೂ ಅಪಸ್ವರ ಎತ್ತಬೇಕಾಗಿಲ್ಲ ಎಂದಿದ್ದಾರೆ.
ಇತ್ತ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವ್ಹಾಣ್ ಅವರು ‘‘ವಿಪಕ್ಷದ ಸಂಘರ್ಷ ಯಾತ್ರೆಯ ಕಾರಣ ಮತ್ತು ರೈತರು ಆಂದೋಲನ ಹಮ್ಮಿಕೊಂಡ ಕಾರಣ ಸಾಲ ಮನ್ನಾ ಘೋಷಣೆ ಸರಕಾರ ಮಾಡಿದೆ. ಆದರೆ ಸರಕಾರ ಇದನ್ನು ಜಾರಿಗೆ ತರುವ ತನಕ ಕೇವಲ ಘೋಷಣೆಯಾಗಿ ಉಳಿಯುವ ಅಪಾಯವಿದೆ. ಸರಕಾರ ಇಲ್ಲಿ ಕೆಲವು ನಿಯಮ ಜಾರಿಗೆ ತಂದಿದೆ. ಈ ಬಗ್ಗೆ ಎಲ್ಲರೂ ಗಮನ ಇರಿಸಬೇಕು. ಇಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಬೇಕಾಗಿದೆ. ಹಾಗಿದ್ದೂ ಸರಕಾರದ ಹೆಜ್ಜೆಯನ್ನು ಸ್ವಾಗತಿಸುತ್ತೇವೆ’’ ಎಂದಿದ್ದಾರೆ.
ಈ ನಡುವೆ ವಿಪಕ್ಷ ಮತ್ತು ಸಹಯೋಗಿ ಪಕ್ಷಗಳ ಹೇಳಿಕೆ - ಪೋಸ್ಟರ್ ವಾರ್‌ನ್ನು ಮುಂದಿಟ್ಟು ಬಿಜೆಪಿ ವರಿಷ್ಠ ನಾಯಕ ಚಂದ್ರಕಾಂತ ಪಾಟೀಲ್ ಅವರು ಪ್ರತಿಕ್ರಿಯಿಸಿ ‘‘ವಿವಿಧ ರಾಜಕೀಯ ಪಕ್ಷಗಳು ಶ್ರೇಯಸ್ಸು ಪಡೆಯುತ್ತಿವೆ. ರೈತರ ನಡುವೆ ಅವರೂ ತೆರಳಲಿ’’ ಎಂದಿದ್ದಾರೆ. ಆದರೆ ಇನ್‌ಕಮ್ ಟ್ಯಾಕ್ಸ್ ತುಂಬಿಸುವ ರೈತರಿಗೆ ಸಾಲ ಮನ್ನಾ ಇಲ್ಲ. ಸರಕಾರಿ ನೌಕರಿ ಮಾಡುವ ರೈತರಿಗೂ ಸಾಲಮನ್ನಾ ಇಲ್ಲ ಎನ್ನುತ್ತಾ ‘‘ರೈತರಿಗೆ ಸಂಪೂರ್ಣ ಸಾಲ ಮನ್ನಾಕ್ಕಾಗಿ ಒಂದು ಮಾನದಂಡ ತಯಾರಿಸಲಾಗುತ್ತಿದೆ. ಇದರ ಆಧಾರದಲ್ಲೇ ರೈತರಿಗೆ ಲಾಭ ದೊರೆಯಲಿದೆ. ಸಾಲ ಮನ್ನಾದ ಮಾನದಂಡಕ್ಕಾಗಿ ವಿಭಿನ್ನ ಮಗ್ಗಲುಗಳಲ್ಲಿ ವಿಚಾರ ಮಾಡಲಾಗುವುದು’’ ಎಂದು ಹೇಳಿದ್ದಾರೆ.