ಫ್ಯಾಶಿಸ್ಟ್ ಮೋದಿ ಸರಕಾರದಡಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಕುತ್ತು

Update: 2017-06-21 06:46 GMT

ಭಾಗ-2

ಎನ್‌ಡಿಟಿವಿ ಪ್ರಕರಣ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣ ನಡೆಯುತ್ತಿರುವುದಕ್ಕೆ ಇತ್ತೀಚಿನ ನಿದರ್ಶನವಾಗಿದೆ. ಇದಕ್ಕೆ ಪೂರಕವಾಗಿ ಬಂದಿದೆ ಗಡಿಗಳಿಲ್ಲದ ವರದಿಗಾರರು ಸಿದ್ಧಪಡಿಸಿರುವ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಕ ಪಟ್ಟಿ. ಆ ಪಟ್ಟಿಯಲ್ಲಿ ಈ ವರ್ಷ ಭಾರತದ ಸ್ಥಾನ 133ರಿಂದ 136ಕ್ಕೆ ಇಳಿದಿದ್ದು ಇದಕ್ಕೆ ಹಿಂದೂ ರಾಷ್ಟ್ರೀಯವಾದಿಗಳ ಕಾರ್ಯಾಚರಣೆಗಳೇ ಮುಖ್ಯ ಕಾರಣವೆಂದು ಅವರು ಹೇಳಿರುವುದು ವಾಸ್ತವ ಸ್ಥಿತಿಯನ್ನು ಬಿಂಬಿಸುತ್ತದೆ.


ದಾಳಿಯ ವಿವರಗಳನ್ನೊಂದಿಷ್ಟು ನೋಡೋಣ...

ಸಿಬಿಐನ ಜೂನ್ 2ರ ಎಫ್‌ಐಆರ್‌ನಲ್ಲಿ ರಾಯ್ ದಂಪತಿ ಐಸಿಐಸಿಐ ಬ್ಯಾಂಕಿನ ಕೆಲವು ಅಜ್ಞಾತ ಅಧಿಕಾರಿಗಳೊಂದಿಗೆ ಒಳಸಂಚು ನಡೆಸಿ ಕಾನೂನುಬಾಹಿರವಾಗಿ ರೂ. 48 ಕೋಟಿ ಸಾಲ ಬಾಕಿ ದುಡ್ಡನ್ನು ಜೇಬಿಗಿಳಿಸಿದ್ದಾರೆ; ರಿಸರ್ವ್ ಬ್ಯಾಂಕಿನ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ; ಎನ್‌ಡಿಟಿವಿಯ ಪ್ರವರ್ತಕರು ಷೇರುಗಳನ್ನು ಅಡವಿಟ್ಟ ವಿಚಾರವನ್ನು ಸೆಬಿ, ಷೇರು ಮಾರುಕಟ್ಟೆಗಳು ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ತಿಳಿಸದೆ ಮುಚ್ಚಿಟ್ಟಿದ್ದರು; ಎನ್‌ಡಿಟಿವಿ ಮಾಲಕತ್ವವನ್ನು ಬೇರೊಂದು ಕಂಪೆನಿಗೆ ವರ್ಗಾಯಿಸುವ ಉದ್ದೇಶ ಹೊಂದಿದ್ದರು ಎಂದು ಮುಂತಾಗಿ ಆರೋಪಿಸಲಾಗಿದೆ.

ಎಫ್‌ಐಆರ್ ದಾಖಲಿಸುವ ಮುನ್ನ ಸಾಕಷ್ಟು ಶ್ರದ್ಧೆ ವಹಿಸಲಾಗಿದೆ ಎಂದು ಸಿಬಿಐ ವಾದಿಸುತ್ತಿದೆ. ತಾನು ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ ಎಂದೂ ಹೇಳಿಕೊಂಡಿದೆ. ಆದರೆ ವಾಸ್ತವ ಏನೆಂದರೆ ಸಿಬಿಐನ ಎಫ್‌ಐಆರ್ ಸಂಜಯ್ ದತ್ತ್ ಎಂಬಾತ ನೀಡಿದ್ದ ಖಾಸಗಿ ದೂರಿನ ಪಡಿಯಚ್ಚಾಗಿದೆ! ಅಂದ ಹಾಗೆ ಈ ಸಂಜಯ್ ‘ಕ್ವಾಂಟಮ್ ಸೆಕ್ಯೂರಿಟೀಸ್ ಲಿಮಿಟೆಡ್’ ಎಂಬ ಕಂಪೆನಿಯ ನಿರ್ದೇಶಕರಲ್ಲೊಬ್ಬ. ಈ ಕಂಪೆನಿ ಎನ್‌ಡಿಟಿವಿ ಮತ್ತು ಐಸಿಐಸಿಐ ಬ್ಯಾಂಕುಗಳಲ್ಲಿ ಅಲ್ಪಸಂಖ್ಯೆಯ ಷೇರುಗಳನ್ನು ಹೊಂದಿದೆ.

ಸಾಲದ ವಿವರಗಳು
ಐಸಿಐಸಿಐ ಬ್ಯಾಂಕು ತನ್ನ ಸಾಲ ಪೂರ್ತಿಯಾಗಿ ತೀರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದೆ. ಎನ್‌ಡಿಟಿವಿ ಕೂಡಾ ಸಿಬಿಐನ ಆರೋಪಗಳನ್ನು ನಿರಾಕರಿಸಿದೆ. ಬ್ಯಾಂಕಿನಿಂದ ಪಡೆದ ಸಾಲವನ್ನು ಏಳು ವರ್ಷಗಳ ಹಿಂದೆಯೇ ತೀರಿಸಲಾಗಿದೆ; ಇದೇ ಆರೋಪಗಳನ್ನು ಈ ಹಿಂದೆಯೂ ಮಾಡಲಾಗಿತ್ತಾದರೂ ನ್ಯಾಯಾಲಯಗಳು ಅವೆಲ್ಲವನ್ನು ತಿರಸ್ಕರಿಸಿವೆ ಎಂದು ತಿಳಿಸಿದೆ. ಎನ್‌ಡಿಟಿವಿ ಪ್ರಕಾರ 2007-08ರಲ್ಲಿ ಅದು ಕಡಿಮೆ ಷೇರುಗಳನ್ನು ಹೊಂದಿದ್ದ ಷೇರುದಾರರಿಂದ ಷೇರುಗಳನ್ನು ಖರೀದಿಸಲು ಬಯಸಿತ್ತು. ಆ ಸಂದರ್ಭದಲ್ಲಿ ಇಂಡಿಯಾ ಬುಲ್ಸ್ ಎಂಬ ಸಂಸ್ಥೆಯಿಂದ ರಾಧಿಕಾ ರಾಯ್ ಪ್ರಣೊಯ್ ರಾಯ್ ಹೋಲ್ಡಿಂಗ್ಸ್ ಪ್ರೈ. ಲಿ. (ಆರ್‌ಆರ್‌ಪಿಆರ್) ಎಂಬ ಸಂಸ್ಥೆಯ ಹೆಸರಿನಲ್ಲಿ ರೂ. 500 ಕೋಟಿ ಸಾಲ ಪಡೆದುಕೊಳ್ಳಲಾಗಿತ್ತು.

ಇಂಡಿಯಾ ಬುಲ್ಸ್ ಕಡೆಯಿಂದ ಸಾಲ ಮರುಪಾವತಿಗೆ ಒತ್ತಾಯ ಹೆಚ್ಚಿದಾಗ ಆರ್‌ಆರ್‌ಪಿಆರ್ ಸಂಸ್ಥೆ ಅಕ್ಟೋಬರ್ 2008ರಲ್ಲಿ ಐಸಿಐಸಿಐ ಬ್ಯಾಂಕಿನಿಂದ ರೂ. 375 ಕೋಟಿ ಸಾಲ ಪಡೆದುಕೊಂಡಿತ್ತು. ನಂತರದ ಬೆಳವಣಿಗೆಯೊಂದರಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈ. ಲಿ. (ವಿಸಿಪಿಎಲ್) ಹೆಸರಿನ ಸಣ್ಣ ಸಂಸ್ಥೆಯೊಂದು ಆರ್‌ಆರ್‌ಪಿಆರ್‌ಗೆ ರೂ 403.85 ಕೋಟಿ ಸಾಲ ನೀಡಲು ಮುಂದೆ ಬಂದಿದೆ. ವಿಸಿಪಿಎಲ್‌ಗೆ ಈ ಮೊತ್ತ ಸಿಕ್ಕಿರುವುದು ಶಿನಾನೊ ರೀಟೇಲ್ ಪ್ರೈ. ಲಿ. ಎಂಬ ಇನ್ನೊಂದು ಕಂಪೆನಿಯಿಂದ.

ಶಿನಾನೊ ರೀಟೇಲ್ ಈ ಹಣವನ್ನು ಮುಕೇಶ್ ಅಂಬಾನಿಯ ರಿಲಯನ್ಸ್ ವೆಂಚರ್ಸ್‌ನಿಂದ ಪಡೆದಿದೆ ಎನ್ನಲಾಗಿದೆ. ಕುತೂಹಲಕಾರಿಯಾಗಿ ಸಿಬಿಐನ ಎಫ್‌ಐಆರ್‌ನಲ್ಲಿ ಈ ರೀತಿ ಎನ್‌ಡಿಟಿವಿಯ ಮಾಲಕತ್ವ ಬದಲಾಯಿಸಲು ತೆರೆಮರೆಯ ಕಸರತ್ತು ನಡೆಸಿದ ರಿಲಯನ್ಸ್ ವೆಂಚರ್ಸ್‌ನ ಹೆಸರೂ ಇಲ್ಲ, ಅದರ ಷೆಲ್ ಕಂಪೆನಿಗಳೆನ್ನಲಾದ ವಿಶ್ವಪ್ರಧಾನ್ ಕಮರ್ಷಿಯಲ್, ಶಿನಾನೊ ರೀಟೇಲ್ ಇತ್ಯಾದಿಗಳ ಹೆಸರೂ ಇಲ್ಲ. ಈ ಷೆಲ್ ಕಂಪೆನಿಗಳು ನಡೆಸಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆಯೆ ಎಂಬ ಪ್ರಶ್ನೆಗೂ ಸಿಬಿಐ ಉತ್ತರಿಸಿಲ್ಲ. ಹೀಗಾಗಿ ಕೇವಲ ಎನ್‌ಡಿಟಿವಿಯನ್ನೇಕೆ ಗುರಿಯಾಗಿಸಲಾಗಿದೆ ಎಂಬ ನ್ಯಾಯಯುತವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಕಷ್ಟವಿಲ್ಲ.

ದಾಳಿ ಹುಟ್ಟುಹಾಕಿರುವ ಪ್ರಶ್ನೆಗಳು 
ಎನ್‌ಡಿಟಿವಿಯ ಪ್ರವರ್ತಕರು ಮತ್ತು ಐಸಿಐಸಿಐ ಬ್ಯಾಂಕಿನ ಅಜ್ಞಾತ ಅಧಿಕಾರಿಗಳು ಬ್ಯಾಂಕ್ ವ್ಯವಸ್ಥೆ ನಿಯಂತ್ರಣ ಕಾಯ್ದೆ 1949ರ (Banking Regulation Act, 1949) ವಿಧಿ 19(2)ನ್ನು ಮತ್ತು ಆರ್‌ಬಿಐ ಸುತ್ತೋಲೆಯನ್ನು (DBOD No. Dir B90/13.07.05/98-99 dated 28.08.1998) ಉಲ್ಲಂಘಿಸಿದ್ದಾರೆಂದು ಸಿಬಿಐ ಹೇಳುತ್ತಿದೆ.

ಆದರೆ ಗಮನಾರ್ಹವಾಗಿ, ಬ್ಯಾಂಕ್ ವ್ಯವಸ್ಥೆ ನಿಯಂತ್ರಣ ಕಾಯ್ದೆ ಕೇವಲ ಬ್ಯಾಂಕ್ ನೌಕರರಿಗಷ್ಟೆ ಅನ್ವಯಿಸುತ್ತದೆ. ಎರ ಡನೆಯ ಮತ್ತು ಭಾರೀ ಮಹತ್ವದ ಅಂಶವೆಂದರೆ ಬ್ಯಾಂಕ್ ವ್ಯವಸ್ಥೆ ನಿಯಂತ್ರಣ ಕಾಯ್ದೆಯನ್ವಯ ಇಂತಹ ದೂರು ನೀಡುವ ಅಧಿಕಾರ ಇರುವುದು ಕೇವಲ ಇದಕ್ಕೋಸ್ಕರವೇ ರಿಸರ್ವ್ ಬ್ಯಾಂಕು ಅಧಿಕೃತವಾಗಿ ನೇಮಿಸಿರುವ ಅಧಿಕಾರಿಗೆ ಮಾತ್ರ. ಆದರೆ ಇಲ್ಲಿ ಅಂತಹ ಯಾವುದೇ ದೂರು ದಾಖಲಾದಂತಿಲ್ಲ. ಬದಲು ಸಾಮಾನ್ಯ ಪ್ರಜೆಯಾಗಿರುವ ಸಂಜಯ್ ದತ್ತ್ ಎಂಬಾತ ದೂರು ನೀಡಿದ್ದಾರೆ.

ಸಿಬಿಐ ಈ ರೀತಿ ಖಾಸಗಿ ದೂರನ್ನು ಪುರಸ್ಕರಿಸಬಾರದಿತ್ತು. ಆದರೂ ಅದು ದೂರಿನಲ್ಲಿ ಹುರುಳಿದೆಯೆ ಇಲ್ಲವೆ ಎಂದು ತನಿಖೆ ಮಾಡದೆ, ಆರೋಪಿಗಳನ್ನು ಸಂಪರ್ಕಿಸಿ ಅವರ ವಿವರಣೆಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ನೇರವಾಗಿ ಕಾರ್ಯಪ್ರವೃತ್ತವಾಗಿ ದಾಳಿ ನಡೆಸುವುದು ನಿಜಕ್ಕೂ ವಿಚಿತ್ರವಾಗಿದೆ ಮಾತ್ರವಲ್ಲ ಸಂವಿಧಾನದ ವಿಧಿ 19 (1) (ಎ) ಅಡಿಯಲ್ಲಿ ಖಾತರಿಪಡಿಸಲಾದ ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಪ್ರತಿಕ್ರಿಯಿಸಿರುವ ಖ್ಯಾತ ನ್ಯಾಯವಾದಿ ಫಾಲಿ ನಾರಿಮನ್, ಎರಡು ಮುಖ್ಯ ಅಂಶಗಳನ್ನು ಎತ್ತಿದ್ದಾರೆ:

1) ತನಿಖಾ ಸಂಸ್ಥೆಯಾದ ಸಿಬಿಐ ಕರ್ತವ್ಯ ಏನೆಂದರೆ ಅದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಸಂಜಯ್ ದತ್ತ್ ಈ ದೂರು ನೀಡಲು 7, 8 ವರ್ಷ ವಿಳಂಬ ಮಾಡಿರುವುದೇಕೆಂದು ತನಿಖೆ ಮಾಡಿ ವಿವರಣೆ ನೀಡಬೇಕಾಗಿತ್ತು. 2) ಸಂಜಯ್ ದತ್ತ್ ಕೂಡಾ ಸಿಬಿಐಗೆ ದೂರು ನೀಡುವ ಮುನ್ನ ಎನ್‌ಡಿಟಿವಿಗೆ ಪತ್ರ ಬರೆದು ಅವರಿಂದ ವಿವರಣೆ ಕೇಳಬಹುದಿತ್ತು. ವಿವರಣೆ ತೃಪ್ತಿಕರ ಇರದಿದ್ದಲ್ಲಿ ನೇರವಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದಿತ್ತು. ಆದರೆ ಆತ ಇವೆರಡನ್ನೂ ಮಾಡದೆ ಸಿಬಿಐಗೆ ದೂರು ನೀಡಿರುವುದು ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಸಿಬಿಐ ಸಂಸ್ಥೆಯನ್ನು ತನ್ನ ಖಾಸಗಿ ಬೇಟೆನಾಯಿಯನ್ನಾಗಿ ಪರಿವರ್ತಿಸಿರುವ ಮೋದಿ ಸರಕಾರ ಅದರ ಮೂಲಕ ತನಗಾಗದವರನ್ನು ಅಟ್ಟಾಡಿಸಿ ಕಿರುಕುಳ ನೀಡುವ ಕೆಲಸ ಮಾಡುತ್ತಿದೆ. ಅದೇ ವೇಳೆ ಮೋದಿ ಕೃಪಾಪೋಷಿತ ಕಾರ್ಪೊರೇಟುಗಳ ಅವ್ಯವಹಾರಗಳು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ನಡೆಯುತ್ತಿವೆ! ಉದಾಹರಣೆಗೆ ರೂ 30,000 ಕೋಟಿಗೂ ಮೀರಿದ ಕಲ್ಲಿದ್ದಲು ಆಮದು ಹಗರಣದಲ್ಲಿ ಅದಾನಿ ಗುಂಪಿನ 6, ಅನಿಲ್ ಅಂಬಾನಿಯ 2, ಜಿಂದಾಲ್ ಗುಂಪಿನ 1 ಮತ್ತು ಎಸ್ಸಾರ್ ಗುಂಪಿನ 2 ಕಂಪೆನಿಗಳು ಕಂದಾಯ ಸುದ್ದಿಸಂಗ್ರಹ ನಿರ್ದೇಶನಾಲಯದ (ಡಿಆರ್‌ಐ) ಪರಿಶೀಲನೆಗೊಳಪಟ್ಟಿವೆ. ಈ ಅಕ್ರಮ ಸಂಪಾದನೆಗಳನ್ನೆಲ್ಲ ವಿದೇಶಗಳಲ್ಲಿ ಬಚ್ಚಿಡಲಾಗಿದೆ.

ಈ ರೀತಿ ಆಮದಿತ ಕಲ್ಲಿದ್ದಲಿನ ಬೆಲೆಗಳನ್ನು ಕೃತಕವಾಗಿ ಏರಿಸಿದಾಗ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ವಿದ್ಯುತ್ತಿನ ದರವನ್ನು ಏರಿಸುವ ಮೂಲಕ ಹೊರೆಯನ್ನೆಲ್ಲ ಬಡಪಾಯಿ ಗ್ರಾಹಕರಾದ ನಮಗೆ ದಾಟಿಸುತ್ತವೆ! ಕಂದಾಯ ಸುದ್ದಿಸಂಗ್ರಹ ನಿರ್ದೇಶನಾಲಯದ ಗುಪ್ತಚರರು ಕಲೆಹಾಕಿರುವ ಮಾಹಿತಿಗಳ ಪ್ರಕಾರ ಅದಾನಿ ಮತ್ತು ಎಸ್ಸಾರ್ ಗುಂಪಿನ ಕಂಪೆನಿಗಳು ಸಾವಿರಾರು ಕೋಟಿಗಳ ಇನ್ನೆರಡು ಹಗರಣಗಳಲ್ಲಿ ಭಾಗಿಯಾಗಿವೆ.

ಭ್ರಷ್ಟಾಚಾರ ವಿರೋಧಿ ಎಂದು ಟಾಂಟಾಂ ಮಾಡಿಕೊಳ್ಳುವ ಮೋದಿ ಸರಕಾರ ವಿದೇಶಗಳಲ್ಲಿರುವ ಬ್ಯಾಂಕು ಖಾತೆಗಳಿಗೆ ಜಮೆಯಾಗುವ ಈ ಕಪ್ಪುಹಣದ ವ್ಯವಹಾರಗಳ ಕುರಿತು ಯಾಕೆ ಮೌನವಾಗಿದೆ? ಎನ್‌ಡಿ ಟಿವಿ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಯ ದೂರನ್ನು ಪುರಸ್ಕರಿಸುವ ಸಿಬಿಐ ಸರಕಾರದ್ದೇ ಸಂಸ್ಥೆಯಾದ ಡಿಆರ್‌ಐ ನೀಡಿರುವ ದೂರಿನ ಬಗ್ಗೆ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಸುಮ್ಮನಿರಲು ಕಾರಣವೇನು? ಲಲಿತ್ ಮೋದಿ ಪ್ರಕರಣ, ಮಲ್ಯ ಪ್ರಕರಣ, ವ್ಯಾಪಂ ಹಗರಣ ಮೊದಲಾದುವುಗಳಲ್ಲಿ ಸಿಬಿಐ ಯಾರ ಆದೇಶದ ಮೇರೆಗೆ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ? ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬನ ಜೇಬಿಗೆ ರೂ. 15 ಲಕ್ಷ ಇಳಿಸುವ ಭರವಸೆ ಕೊಟ್ಟ ಕತೆ ನೆನಪಿದೆ ತಾನೆ? ಆದರೆ ಈ ಹಗರಣಗಳು ಬೇರೊಂದು ಕತೆಯನ್ನು ಹೇಳುತ್ತಿವೆ. ವಿದೇಶಗಳಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ತರುವುದು ಒತ್ತಟ್ಟಿಗಿರಲಿ, ಪ್ರತಿಯೊಬ್ಬನ ಜೇಬಿಗೆ ಕತ್ತರಿ ಹಾಕಿ ಕೋಟಿಗಟ್ಟಲೆ ಕಪ್ಪುಹಣವನ್ನು ವಿದೇಶಗಳಿಗೆ ರವಾನಿಸಲಾಗುತ್ತಿರುವ ಕತೆಯನ್ನು!

ಎನ್‌ಡಿಟಿವಿ ಪ್ರಕರಣ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣ ನಡೆಯುತ್ತಿರುವುದಕ್ಕೆ ಇತ್ತೀಚಿನ ನಿದರ್ಶನವಾಗಿದೆ. ಇದಕ್ಕೆ ಪೂರಕವಾಗಿ ಬಂದಿದೆ ಗಡಿಗಳಿಲ್ಲದ ವರದಿಗಾರರು ಸಿದ್ಧಪಡಿಸಿರುವ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಕ ಪಟ್ಟಿ. ಆ ಪಟ್ಟಿಯಲ್ಲಿ ಈ ವರ್ಷ ಭಾರತದ ಸ್ಥಾನ 133ರಿಂದ 136ಕ್ಕೆ ಇಳಿದಿದ್ದು ಇದಕ್ಕೆ ಹಿಂದೂ ರಾಷ್ಟ್ರೀಯವಾದಿಗಳ ಕಾರ್ಯಾಚರಣೆಗಳೇ ಮುಖ್ಯ ಕಾರಣವೆಂದು ಅವರು ಹೇಳಿರುವುದು ವಾಸ್ತವ ಸ್ಥಿತಿಯನ್ನು ಬಿಂಬಿಸುತ್ತದೆ.
(ಆಧಾರ: ವಿವಿಧ ಮೂಲಗಳಿಂದ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News