ವೆಂಕಟೇಶ ಕುಮಾರ್: 64

Update: 2017-06-30 18:32 GMT

‘‘ಸಂಗೀತ ಕ್ಷೇತ್ರ ಸುಲಭಕ್ಕೆ ಎಲ್ರಿಗೂ ಸಿಗುವಂತದಲ್ಲ. ಶಿಸ್ತು ಮತ್ತು ಶ್ರದ್ಧೆ ಬೇಡುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಲೀಲಿಕ್ಕೂ ಮತ್ತ ಜನಮನ್ನಣೆ ಗಳಿಸಲಿಕ್ಕೂ ಭಾಳ ತ್ರಾಸ ಪಡಬೇಕು. ಕಲೀವಾಗ ರಿಯಾಜ್ ರಿಯಾಜ್ ರಿಯಾಜ್... ಕಲ್ತಮೇಲ ನಸೀಬ್ ಇರಬೇಕು. ಹಾಗಾಗಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಂದ್ರ ಭಾಳ ತಾಳ್ಮೆ ಬೇಕು. ಏನೇ ಅಡೆ-ತಡೆ ಬಂದ್ರು ಸಹಿಸಿಕೊಳ್ಳೋ ಸಹನೆ ಇರಬೇಕು. ಅಂಥವರು ಸಾಧಕರಾಗ್ತಾರ...’’


‘‘ಈ ಜುಲೈ ಒಂದಕ್ಕ... ಅರವತ್ಮೂರು ತುಂಬಿ ಅರವತ್ನಾಲ್ಕಕ್ಕ ಬೀಳ್ತದ್ರಿ... ಹುಟ್ಟಿದ್ದು 1953ರಲ್ಲಿ. ಹುಟ್ಟೂರು ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರ. ಕರ್ನಾಟಕ-ಆಂಧ್ರದ ಗಡಿ ಭಾಗ. ನಮ್ಮದು ಕಲಾವಿದರ ಕುಟುಂಬ. ನಮ್ತಂದೆ ಜಾನಪದ ಕಲಾವಿದರು. ಒಳ್ಳೆಯ ಹಾಡುಗಾರರು. ನಮ್ಮಜ್ಜನೂ ಹಾಡ್ತಿದ್ದನಂತೆ. ಹಂಗಾಗಿ... ನಮ್ಮದು ಒಂಥರಾ ಪರಂಪರಾಗತ ಕಲಾ ಕುಟುಂಬ....’

ಹೀಗೆಂದವರು ಪದ್ಮಶ್ರೀ ಪುರಸ್ಕೃತ ಹಿಂದೂಸ್ಥಾನಿ ಸಂಗೀತಗಾರ ಪಂಡಿತ್ ಎಂ. ವೆಂಕಟೇಶಕುಮಾರ್. ವಿರಳ ಮಾತಿನ ಸರಳ ಸಜ್ಜನಿಕೆಯ ವೆಂಕಟೇಶ ಕುಮಾರ್ ಗಾಯನಕ್ಕೆ ಕೇಳುಗರ ಹೃದಯವನ್ನು ಸ್ಪರ್ಶಿಸುವ, ಆನಂದವನ್ನುಂಟುಮಾಡುವ ಶಕ್ತಿ ಇದೆ. ಅವರ ಕಂಚಿನ ಕಂಠದ ಗಾಯನಕ್ಕೆ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುವ ಕಲೆಗಾರಿಕೆ ಸಿದ್ಧಿಸಿದೆ. ಅವರ ಘರಾಣಾ ಪ್ರಧಾನ ಕಾರ್ಯಕ್ರಮಗಳಿಗೆ ಹುಡುಕಿಕೊಂಡು ಹೋಗಿ ಕಿವಿಗೊಟ್ಟು ಕೇಳುವ ಅಭಿಮಾನಿ ಬಳಗವೇ ಇದೆ. ಅವರ ಮಾಗಿದ ಸ್ವರದ ಭಾವಸೌರಭಕ್ಕೆ ಮನ ಸೋಲದವರೇ ಇಲ್ಲ.

ನಾಡು ಕಂಡ ಅಪರೂಪದ ಗಾಯಕನನ್ನು ‘ಸ್ವರಸಾಧಕ’ನೆಂದು ಬಿರುದು ನೀಡಿ ಪುರಸ್ಕರಿಸಿ, ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಅವರ ಈ ಸಾಧನೆಯ ಹಿಂದೆ ಹತ್ತಾರು ವರ್ಷಗಳ ಅವಿರತ ಶ್ರಮ, ಶ್ರದ್ಧೆ ಮತ್ತು ಕಠಿಣ ಅಭ್ಯಾಸವಿದೆ. ಜೊತೆಗೆ ಅಪಾರ ಸಹನೆ ಇದೆ. ಅದಕ್ಕೆ ಸಹೃದಯತೆಯೂ ಸೇರಿಕೊಂಡಿದೆ. ನಿಮ್ಮ ಹಾಡುಗಾರಿಕೆಯೂ ವಿಭಿನ್ನ, ವ್ಯಕ್ತಿತ್ವವೂ ವಿಶಿಷ್ಟ ಎಂದರೆ, ‘‘ಗುರುಗಳ ಆಶೀರ್ವಾದ ಮತ್ತು ನಸೀಬಿನ ಮುಂದೆ ನಮ್ಮದೇನ್ರಿ’’ ಎಂದು ವಿನಯವಂತಿಕೆ ಇದೆ. ಅವರ ಈ ಮುಗ್ಧತೆ, ವಿಧೇಯತೆ ಅವರ ಸಾಧನೆಗೆ ಸಾಥ್ ನೀಡಿ ಅವರನ್ನು ಈ ಮಟ್ಟಕ್ಕೆ ಏರಿಸಿದೆ.

ಬಳ್ಳಾರಿಯ ಗಡಿನಾಡಲ್ಲಿ ತಳವರ್ಗದ ಶೋಷಿತ ಕುಟುಂಬದಲ್ಲಿ, ಕಡು ಕಷ್ಟದಲ್ಲಿ ಹುಟ್ಟಿ ಬೆಳೆದ ವೆಂಕಟೇಶ ಕುಮಾರ್‌ಗೆ, ಹಾಡುಗಾರಿಕೆ ಎನ್ನುವುದು ರಕ್ತದಲ್ಲಿಯೇ ಕರಗತವಾಗಿತ್ತು. ತಾತ-ತಂದೆಯ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವರು, ಸಮಯ ಸಿಕ್ಕಾಗಲೆಲ್ಲ ಏನಾದರೊಂದು ಗುನುಗುತ್ತಲೇ ಇದ್ದರು. ಹುಡುಗನ ಹಾಡುಗಾರಿಕೆಯನ್ನು ಕೇಳಿದವರು, ‘‘ಏಯ್ ಹುಡುಗ ಚಲೋ ಹಾಡ್ತನ, ಒಳ್ಳೆ ಕಂಠೈತಿ, ಸಂಗೀತ ಕಲಸ್ರಲ..’’ ಎಂಬ ಒತ್ತಾಯ ಮಾಮೂಲಿಯಾಗಿತ್ತು. ಆದರೆ, ಕಲಿಕೆಗೆ ಬೇಕಾದ ಕೌಟುಂಬಿಕ ವಾತಾವರಣವಾಗಲಿ, ಆರ್ಥಿಕ ಸ್ಥಿತಿಗತಿಯಾಗಲಿ, ಏನನ್ನು-ಯಾರಲ್ಲಿ ಕಲಿಸಬೇಕೆಂಬ ತಿಳಿವಳಿಕೆಯಾಗಲಿ ಪೋಷಕರಿಗಿರಲಿಲ್ಲ. ಊರು-ಕೇರಿಯ ಪರಿಸರವೂ ಅದಕ್ಕೆ ಪೂರಕವಾಗಿರಲಿಲ್ಲ.

‘‘ನಮ್ಮದು ಕೂಡು ಕುಟುಂಬರಿ... ಮೂವತ್ತು ಮೂವತ್ತೈದು ಮಂದಿಯಿದ್ದೋ... ಹೊಟ್ಟೆ ಬಟ್ಟೆಗೆ ಭಾರೀ ಕಷ್ಟಿತ್ತು. ನಮ್ಮಪ್ಪಂಗೆ 16 ಎಕ್ರೆ ಹೊಲಿತ್ತು. ಆದರ ಅದರಲ್ಲಿ ಬೆಳೆ ಬರ್ತಿರಲಿಲ್ಲ. ಬಂದರೂ ಕುಟುಂಬಕ್ಕೆ ಸಾಕಾಗ್ತಿರಲಿಲ್ಲ. ಅಂಥಾದ್ದರಲ್ಲಿ ನಮಗೆ ಸಂಗೀತಾಭ್ಯಾಸವಿರಲಿ, ಶ್ಯಾಲಿ ಕಲಿಯಕ್ ಕಳಸೋದೆ ಕಷ್ಟಿತ್ತು. ಆ ಸಂದರ್ಭದಾಗ ನಮ್ಮ ಸೋದರಮಾವ, ಬೆಣಗಲ್ ವೀರಣ್ಣ ನವರು ನಮ್ ಮನಿಗ್ ಬಂದ್ರು. ನಮ್ ತಾಯಿ ತಮ್ಮ ಅವರು. ನಮ್ಮಮ್ಮಿದ್ದೋರು, ಇವನ ಕಂಠ ಚೆನ್ನಾಗೈತಂತ ಎಲ್ರೂ ಹೇಳ್ತರ, ಇವನಿಗೆ ಹೆಂಗಾದ್ರು ಮಾಡಿ ದಾರಿ ತೋರ್ಸು... ಸಂಗೀತ ಕಲಿಸೋ ಗುರುಗಳಿದ್ದರೆ ನೋಡು... ಎಂದು ಒತ್ತಾಯಿಸಿದರು.’’

‘‘ನನಗಾಗ 12 ವರ್ಷ. 1967-68ರ ಸುಮಾರು. ನಮ್ ಸೋದರಮಾವ ನನ್ನನ್ನು ಕರೆದುಕೊಂಡು ಹೋಗಿ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ ಮುಂದೆ ನಿಲ್ಲಿಸಿದರು. ಅವರನ್ನು ನೋಡ್ತಿದ್ದಂಗೆ ಕೈಮುಗಿಬೇಕು ಅನ್ನಿಸಿತು. ಕಣ್ಣಿರಲಿಲ್ಲ. ದೈವ ಸಮಾನರು. ಅವರು ಕೇಳಿದ್ದಿಷ್ಟೇ, ಎಲ್ಲಪಾ ಹಾಡು ಅಂದರು. ಹಾಡಿದೆ. ಕಂಠ ಚಲೋ ಐತಿ, ಸಂಗೀತ ಕಲಿತಿಯ ಅಂದರು. ಹೂಂ ಅಂದೆ... ಅಷ್ಟೇ ನೋಡ್ರಿ.’’

‘‘12 ವರ್ಷಗಳ ಕಾಲ ನಿರಂತರವಾಗಿ ಸಂಗೀತ ಅಭ್ಯಾಸ ಮಾಡಿದೆ. ಗದುಗಿನ ಗುರುಗಳು ಸಂಗೀತದ ಓನಾಮದಿಂದ ಹಿಡಿದು ಸ್ವರಸಾಧನೆ, ಚೀಜುಗಳ ಪಠನ, ರಾಗಚಿಂತನೆ, ಅಲಂಕಾರಗಳ ಅಭ್ಯಾಸಗಳನ್ನೆಲ್ಲ ಕಲಿಸಿದರು. ಸುಮಾರು 1979ರವರೆಗೂ ಆಶ್ರಮದಲ್ಲಿದ್ದೆ. ಬೆಳಗ್ಗೆ 4 ಗಂಟೆಗೆ ಏಳುತ್ತಿದ್ದೆ. ಮುಂಜಾನೆ ಪ್ರಾರ್ಥನೆಯಿಂದ ಶುರುವಾಗೋದು... ಸುಮಾರು ಏಳು ಗಂಟೆಗಳ ತನಕ ಸತತ ಸಂಗೀತಾಭ್ಯಾಸ. ಒಮ್ಮಾಮ್ಮೆ ಕತ್ತಲಾರಂಭಿಸಿದ್ದೂ ಉಂಟು. ನಂತರ ಆಶ್ರಮದ ಕೆಲಸ ಕಾರ್ಯಗಳು. ಮತ್ತೆ ಸಂಗೀತ. ಶಿಸ್ತು ಅಂದರೆ ಅದು ಬರಿ ಶಿಸ್ತಲ್ಲ, ಭಯಂಕರ ಶಿಸ್ತು.’’

‘‘ನಮ್ಮ ಗುರುಗಳಂದ್ರೆ... ದೇವರು. ಅವರು ನೋಡ್ತಿದ್ರು... ನಮ್ಮಲ್ಲಿ ಕಲಿಯುವ ಆಸಕ್ತಿ ಇದೆ ಅಂತ ಗೊತ್ತಾತು ಅಂದ್ರ ಸಾಕು... ತಮ್ಮಲ್ಲಿರುವ ಪ್ರತಿಭೆಯನ್ನೆಲ್ಲ ಧಾರೆ ಎರೆಯುತ್ತಿದ್ದರು. ಸಂಗೀತದ ಜೊತೆ ಸಹನೆ, ಸಂಯಮ, ಸಹಬಾಳ್ವೆಯನ್ನೂ ಕಲಿಸಿದರು. ಬದುಕಿನ ಪಾಠವನ್ನೂ ಹೇಳಿಕೊಟ್ಟರು. ನನಗೆ ಸಂಗೀತದ ಹಸಿವಿತ್ತು. 12 ವರ್ಷ ಆಶ್ರಮದಲ್ಲಿಟ್ಟುಕೊಂಡು ಅನ್ನ ಮತ್ತು ವಿದ್ಯೆ, ಎರಡನ್ನೂ ಕೊಟ್ಟರು.

ಕಣ್ಣಿಲ್ಲದವರಾಗಿ ಹುಟ್ಟಿ ಕಣ್ಣಿದ್ದವರನ್ನು ಉದ್ಧಾರ ಮಾಡಿದ ಮಹಾನುಭಾವರು. ನನ್ನಂತಹ ಸಾವಿರಾರು ಮಂದಿ ಬಡವರನ್ನು ಉದ್ಧಾರ ಮಾಡಿದಾರೆ. ಅವರ ಬಗ್ಗೆ ಎಷ್ಟು ಹೇಳಿದ್ರು ಸಾಲದು ಬಿಡ್ರಿ... ಇನ್ನು ಆಶ್ರಮ, ಅದು ಆಶ್ರಮವಲ್ಲ ಪವಿತ್ರ ಸ್ಥಳ. ಸುತ್ತಮುತ್ತಲ ಜನರಿಂದ ಅಷ್ಟು ಇಷ್ಟು ಸಂಗ್ರಹಿಸಿ, ದೀನ- ದಲಿತರು, ವಿಕಲಚೇತನರು-ಅಂಧರಿಗೆ ಸಂಗೀತ ಕಲಿಸುವ ಆಶ್ರಮವದು. ನನ್ನ ತಿಳಿವಳಿಕೆಯ ಮಟ್ಟಿಗೆ ಹೇಳಬೇಕಂದ್ರ.. ಇಂತಹ ಆಶ್ರಮ ವಿಶ್ವದಲ್ಲಿ ಬೇರೆಲ್ಲೂ ಇಲ್ಲ’’ ಎಂದರು.

ಪುಟ್ಟರಾಜ ಗವಾಯಿಗಳಿಂದ ಸಂಗೀತದ ಮಟ್ಟುಗಳನ್ನು ಕಲಿತ ನಂತರ ಕಛೇರಿ ಕಾರ್ಯಕ್ರಮ ದುಡಿಮೆ... ಎಲ್ಲ ಹೇಗಿತ್ತು ಎಂದರೆ, ‘‘ಅಯ್ಯೋ.. ಅದೊಂದು ಪರ್ವ. ಆಶ್ರಮ ಬಿಟ್ಟು ಕೆಲವು ವರ್ಷಗಳ ಕಾಲ ಹಾಡಲು ಅವಕಾಶವೂ ಸಿಗಲಿಲ್ಲ, ನೌಕರಿಯೂ ಇಲ್ಲ. ಭಾರೀ ಕಷ್ಟದ್ ಕಾಲ ಅದು. ಮತ್ತೆ ಗುರುಗಳ ಬಳಿ ಓಡಿದೆ. ಭಾಳ ತ್ರಾಸ ಆಗ್ತದ ಅಂದೆ... ಗುರುಗಳು ಅಷ್ಟೇ ಸಮಾಧಾನದಿಂದ ಕಾಯಬೇಕಪ್ಪಾ.... ಕಾಯಬೇಕು... ನೌಕರಿ ಸಿಕ್ತದ ಹೋಗು ಅಂದರು. ನೋಡಿದರೆ, ಅವರು ಹೇಳಿದಂಗೇ ಆಯ್ತು, ನೌಕರಿ ಸಿಕ್ತು. ಬಚಾವಾದೆ. ಮೊದಲಿಗೆ ಧಾರವಾಡದ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿ, ಆನಂತರ ಬೇರೆ ಬೇರೆ ಕಾಲೇಜುಗಳಲ್ಲಿ ಒಟ್ಟು 31 ವರ್ಷಗಳ ಕಾಲ ಸಂಗೀತ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದೆ.’’

‘‘ನಿಮಗೆ ಗೊತ್ತಿಲ್ಲ... ನಮ್ಮ ಹಿರಿಯರು ಎಷ್ಟು ಕಷ್ಟ ಪಟ್ಟಿದಾರಂದ್ರ... ಭೀಮಸೇನ ಜೋಷಿಯವರು ಪುಣೆಯಲ್ಲಿ ಮನೆ ಮಾಡಿ, 40 ವರ್ಷ ಸೈಕಲ್ ತುಳಿದು, ಮನೆಮನೆಗೆ ತಿರುಗಿ ಪಾಠ ಮಾಡಿ ಬದುಕಿದಾರೆ. ಈ ಸಂಗೀತ ನೆಚ್ಚಿಕೊಂಡ ಒಬ್ಬೊಬ್ಬರ ಕತೆ ಕೇಳಿದ್ರೆ, ಕಣ್ಣಲ್ಲಿ ನೀರು ಬರ್ತದ. ಸವಾಯಿ ಗಂಧರ್ವ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್... ಒಸಿ ಕಷ್ಟ ಪಟ್ಟಿಲ್ಲ. ಮನ್ಸೂರರಿಗೆ ಮಾನ ಸಮ್ಮಾನ ಸಿಕ್ಕಿದ್ದು ಎಷ್ಟನೇ ವಯಸ್ಸಿಗೆ ಗೊತ್ತೇನ್ರಿ... 65ಕ್ಕೆ. ನನ್ನ ವಾರಿಗೆಯವರಿಗೆ ನೌಕರಿ ಸಿಗದೆ ಹಾಗೇ ಉಳಿದೋಗಿದಾರೆ.

ವರ್ಷಕ್ಕೆ 3-4 ಕಾರ್ಯಕ್ರಮ ಸಿಗ್ತವ. ಮನೆ ಬಾಡಿಗೆ ಮಡದಿ ಮಕ್ಕಳು ಗತಿ ಏನು. ಸಂಗೀತ ನೆಚ್ಚಿಕೊಂಡವರ ಕತೆ ಅಷ್ಟು ಒಳ್ಳೆಯದಾಗಿರಲಿಲ್ಲ, ನಮ್ಮ ಕಾಲದಾಗ. ಆದರೆ ಈಗ ಹಂಗಿಲ್ಲ, ಸರಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ನಾನು ಸಂಗೀತ ಕಲ್ತಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಇರಲಿಲ್ಲ. ಇಂದು ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ನೂರಾರು ಕೋಟಿ ಕೊಟ್ಟು, ಪ್ರೋತ್ಸಾಹಿಸುತ್ತಿದೆ. ಈಗಿನವರು ಅದನ್ನು ಸದುಪಯೋಗಪಡಿಸಿಕೊಂಡು ನಾಡಿನ ಕಲೆ ಸಂಸ್ಕೃತಿಯನ್ನು ಸಮೃದ್ಧಗೊಳಿಸಬೇಕು, ಜಗತ್ತಿಗೆ ಸಾರಬೇಕು. ಹಂಗ್ ಬೆಳೀಬೇಕು. ಬೆಳೆಸಬೇಕು.’’

‘‘ಸಂಗೀತ ಕ್ಷೇತ್ರ ಸುಲಭಕ್ಕೆ ಎಲ್ರಿಗೂ ಸಿಗುವಂತದಲ್ಲ. ಶಿಸ್ತು ಮತ್ತು ಶ್ರದ್ಧೆ ಬೇಡುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಲೀಲಿಕ್ಕೂ ಮತ್ತ ಜನಮನ್ನಣೆ ಗಳಿಸಲಿಕ್ಕೂ ಭಾಳ ತ್ರಾಸ ಪಡಬೇಕು. ಕಲೀವಾಗ ರಿಯಾಜ್ ರಿಯಾಜ್ ರಿಯಾಜ್... ಕಲ್ತಮೇಲ ನಸೀಬ್ ಇರಬೇಕು. ಹಾಗಾಗಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಂದ್ರ ಬಾಳ ತಾಳ್ಮೆ ಬೇಕು. ಏನೇ ಅಡೆ-ತಡೆ ಬಂದ್ರು ಸಹಿಸಿಕೊಳ್ಳೋ ಸಹನೆ ಇರಬೇಕು. ಅಂಥವರು ಸಾಧಕರಾಗ್ತಾರ...’’

ವೆಂಕಟೇಶ್‌ಕುಮಾರ್ ಅವರು ರಿಯಾಜ್ ರಿಯಾಜ್ ರಿಯಾಜ್ ಅಂದಾಕ್ಷಣ ನನಗೆ ಮಲ್ಲಿಕಾರ್ಜುನ ಮನ್ಸೂರರ ‘ರಸಯಾತ್ರೆ’ಯಲ್ಲಿನ ಪ್ರಸ್ತಾಪ ನೆನಪಾಗಿ, ಈ ನಿಮ್ಮ ರಿಯಾಜ್‌ಗೆ ಸಾಧನೆ, ನಿತ್ಯ ಸಾಧನೆ, ನಿರಂತರ ಸಾಧನೆ ಎಂದಿದ್ದಾರೆ ಮನ್ಸೂರರು ಎಂದೆ. ಅದಕ್ಕವರು ‘‘ಹೂಂನ್ರಿ... ಸಂಗೀತಗಾರರಿಗೆ ಅಭ್ಯಾಸ ಅನ್ನೋದು ನಿರಂತರ. ಮನ್ಸೂರರು ಅಂದಾಗ ನೆನಪಾತು ನೋಡಿ... ಅಭಿಮಾನಿಯೊಬ್ಬರು, ನಿಮಗೆ ಇಷ್ಟೆಲ್ಲ ಗೌರವಗಳು ಸಿಕ್ಕಿವೆ, ಇನ್ಯಾವ ಗೌರವಕ್ಕಾಗಿ ಅಭ್ಯಾಸ ಎಂದು ಪ್ರಶ್ನಿಸಿದರಂತೆ. ಅದಕ್ಕೆ ಮನ್ಸೂರರು, ನಾನು ಯಾವ ಗೌರವ-ಸನ್ಮಾನಕ್ಕಾಗಿಯೂ ಹಾರೈಸಿ ಹಾಡಿಲ್ಲ. ಅಕಸ್ಮಾತ್ ಸಿಕ್ಕಿದ್ದನ್ನು ವಿನಯದಿಂದ ಸ್ವೀಕರಿಸಿ ಮರುದಿನವೇ ಮರೆಯುತ್ತೇನೆ. ನಾನು ಈ ದಿವ್ಯ ರಸಯಾತ್ರೆಯ ಪಥಿಕ, ಹಾಡುತ್ತ ನಡೆಯುತ್ತಿರುವುದೇ ನನ್ನ ಧ್ಯೇಯ ಎಂದರಂತೆ. ಎಂತಹ ದೊಡ್ಡ ಮಾತು ಅದು...’’

ಈ ನಿಮ್ಮ ಸ್ವರಸಾಧನೆಯ ಹಾದಿಯಲ್ಲಿ ಎಲ್ಲಾದರೂ ಏನಾದರೂ... ಅಂದರೆ, ಕರ್ನಾಟಕ ಶಾಸ್ತ್ರೀಯ ಸಂಗೀತ ಅನ್ನುವುದು ಯಾವುದೋ ಒಂದು ಜಾತಿಯ ಪ್ರಾಬಲ್ಯಕ್ಕೆ ಒಳಗಾಗಿದೆ ಎಂದು ಸಂಗೀತಗಾರ ಟಿ.ಎಂ.ಕೃಷ್ಣ ಹೇಳುತ್ತಾರೆ... ಆ ರೀತಿಯಲ್ಲಿ ನಿಮಗೇನಾದರೂ... ತಾರತಮ್ಯ, ಭೇದಭಾವದಂತಹ ಇಕ್ಕಟ್ಟಿನ ಸಂದರ್ಭಗಳು ಎದುರಾಗಿದ್ದಿದೆಯೇ?

‘‘ಇಲ್ರಿ...ಜಾತಿ ಅನ್ನೋದು ನನಗೆ ಎಲ್ಲೂ ತೊಡಕಾಗಲಿಲ್ಲ. ನನಗೆ ಸಂಗೀತ ಕಲಿಸಿದ ನಮ್ಮ ಜಂಗಮರು, ಗುರುಗಳು ಯಾವುದೇ ಜಾತಿ ನೋಡಲಿಲ್ಲ. ನಮ್ಮ ದೇಶದಲ್ಲಿ ಎಷ್ಟು ಜಾತಿಗಳಿವೆಯೋ ಅಷ್ಟೂ ಜಾತಿಗಳ ಜನ ನಮ್ಮ ಆಶ್ರಮದಲ್ಲಿದ್ದರು. ಅವರನ್ನೆಲ್ಲ ನಮ್ಮ ಗುರುಗಳು ಸ್ವಂತ ಮಕ್ಕಳಂತೆ ನೋಡಿಕೊಂಡರು, ನಮಗೂ ಅದನ್ನೇ ಕಲಿಸಿದರು. ನನಗೆ ಆ ರೀತಿಯ ತಾರತಮ್ಯ, ಭೇದಭಾವ... ಯಾವುದೋ ಒಂದು ಜಾತಿಯ ಪ್ರಾಬಲ್ಯ ಅಂಥದ್ದೇನೂ ಕಾಣಲಿಲ್ಲ....’’

ಸಂಗೀತ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು, ಕೈ ಹಿಡಿಯುವುದು, ಸೈ ಎನಿಸಿಕೊಳ್ಳುವುದು ಕೆಲವರಿಗೆ ಮಾತ್ರ... ಹಾಗೆಯೇ ಸಂಗೀತದ ಪಾರಿಭಾಷಿಕ ಪ್ರಪಂಚವೇ ಬೇರೆ ಅಲ್ಲವೇ ಎಂದರೆ, ‘‘ಶಾಸ್ತ್ರೀಯ ಸಂಗೀತ ಕೇಳೋರು ಕಡಿಮೆ. ಜನರಿಗೆ ತಿಳಿಯಂಗಿಲ್ಲ. ಆದ್ರೂ ಒಟ್ಟಾ ಏನಪ್ಪಾ ಅಂದ್ರ... ಜನರಿಗೆ ಸಂಗೀತ ಬೇಕು. ಅದು ಸಿನೆಮಾ ಸಂಗೀತವಾಗಿರಬಹುದು, ಜನಪದ ಹಾಡಾಗಿರಬಹುದು. ಏನಾದ್ರು ಒಂದ್ ಗುನುಗ್ತನೇ ಇರ್ತಾರೆ. ಆದರೆ ಶಾಸ್ತ್ರೀಯವಾಗಿ ಸಂಗೀತ ಕಲಿಯೋರು, ಅದನ್ನು ಬದುಕಿನ ಭಾಗವಾಗಿಸಿಕೊಳ್ಳೋರು ಕಡಿಮೆ ಮಂದಿ.

ಇಲ್ಲಿ ಬಾಳ ಅಭ್ಯಾಸ ಬೇಕ್ರಿ... ಚಲೋ ಗುರುಗಳು ಸಿಗಬೇಕು... ಗುರುಗಳ ಸೇವಾ ಮಾಡಬೇಕು... ಶಿಷ್ಯನ ಮೇಲೆ ಗುರುಗಳ ದೃಷ್ಟಿ ಬೀಳಬೇಕು, ಬರೀ ದೃಷ್ಟಿಯಲ್ಲ ಅಂತರಂಗದ ದೃಷ್ಟಿ ಬೀಳಬೇಕು. ಮನಸು ಸಂಗೀತದೊಂದಿಗೆ ಮೀಯಬೇಕು. ನಿಷ್ಠೆ ನೇಮದಿಂದ ವಿದ್ಯೆ ಕಲಿತರೆ, ಅದು ನಮ್ನ ಹಿಡಿತದೆ... ಇಂದು ನಾನು ಕೂಡ ಗುರುಸ್ಥಾನದಲ್ಲಿದ್ದೇನೆ, ಮೂರ್ನಾಲ್ಕು ವಿದ್ಯಾರ್ಥಿಗಳಿಗೆ ಸಂಗೀತಾಭ್ಯಾಸ ಮಾಡಿಸುತ್ತಿದ್ದೇನೆ. ಹಿಂದೂಸ್ಥಾನಿ ಸಂಗೀತ ಕಲಿಯುವ ಯಾರೇ ಬಂದರೂ ನಮ್ಮ ಗುರುಗಳು ನನಗೆ ಕಲಿಸಿದಂತೆಯೇ ಅವರಿಗೂ ಕಲಿಸುತ್ತೇನೆ...’’

ಪುಟ್ಟರಾಜ ಗವಾಯಿಗಳ ಸ್ವಾರ್ಥರಹಿತ ಸಂಗೀತ ಸೇವೆ ವೆಂಕಟೇಶ ಕುಮಾರ್‌ರಂತಹ ಸ್ವರಸಾಧಕರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಸಂಗೀತಕ್ಕೆ ಜಾತಿಯಿಲ್ಲ, ಸಾಧನೆಗೆ ಮಿತಿಯಿಲ್ಲ ಎಂಬುದನ್ನು ಸಾರಿದೆ. ಈಗ ವೆಂಕಟೇಶ ಕುಮಾರ್ ಕೂಡ ಅದೇ ದಾರಿಯಲ್ಲಿ ಸಾಗುತ್ತಿರುವುದು ಸಂಗೀತ ಕ್ಷೇತ್ರದ ಆಶಾದಾಯಕ ಬೆಳವಣಿಗೆ. ಇಂತಹವರ ಸಂಖ್ಯೆ ಇನ್ನಷ್ಟು ಹೆಚ್ಚಲಿ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News