ಮೋದಿ ಸರಕಾರದ ಲೊಳಲೊಟ್ಟೆ ‘ವಿಕಾಸ’

Update: 2017-07-03 18:31 GMT

ಭಾಗ -1 

ನಾನಾ ರಂಗಗಳಲ್ಲಿ ವಿಫಲವಾಗಿರುವ ಮೋದಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡುವುದಕ್ಕೋಸ್ಕರ ಇಡೀ ದೇಶದ ಗಮನವೆಲ್ಲಾ ಅಸಲಿ ವಿಚಾರಗಳಿಂದ ಆಚೆಗೆ ತಿರುಗಿಸಲು ಯತ್ನಿಸುತ್ತಿದೆ. ಇದೇ ಪ್ರಯತ್ನಗಳ ಭಾಗವಾಗಿ ತುತ್ತೂರಿ ಮಾಧ್ಯಮಗಳಲ್ಲಿ ಗೋಮಾಂಸ ಭಕ್ಷಣೆ, ಲವ್ ಜಿಹಾದ್, ರಾಷ್ಟ್ರೀಯತೆ, ಗಡಿ ಸಂಘರ್ಷಗಳಂತಹ ಭಾವನಾತ್ಮಕ ವಿಚಾರಗಳ ಕುರಿತ ರೋಚಕ ಸುದ್ದಿಗಳು ಮತ್ತು ಗಲಾಟೆ, ಗದ್ದಲಗಳಿಂದ ಕೂಡಿದ ಸಂವಾದ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತಿದೆ. ಇದಕ್ಕೆ ದನಿಗೂಡಿಸುವ ಕೆಲಸವನ್ನು ಸಂಘ ಪರಿವಾರದ ಬೂಸಿ ಸಾಮಾಜಿಕ ಜಾಲತಾಣಗಳು, ನಕಲಿ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್ ಗುಂಪುಗಳು ಮಾಡುತ್ತಿವೆ. ಇವೆಲ್ಲವೂ ಸತ್ಯಾಂಶಗಳನ್ನು ಒಂದೋ ಮುಚ್ಚಿ ಇಲ್ಲಾ ತಿರುಚಿ ಸುಳ್ಳು ಸುದ್ದಿಗಳನ್ನು ಉತ್ಪಾದಿಸಿ ಪ್ರವಾಹೋಪಾದಿಯಲ್ಲಿ ಹರಿಬಿಡುತ್ತಿವೆ.

ಈ ಗೋಬೆಲ್ಸ್ ತಂತ್ರದ ಫಲವಾಗಿ ಆರ್ಥಿಕ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿ ಆಗಿರುವ ಪೂರ್ತಿ ವೈಫಲ್ಯದ ವಿಚಾರ ಹೆಚ್ಚು ಕಡಿಮೆ ತೆರೆಮರೆಗೆ ಸರಿದಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಪುಂಖಾನುಪುಂಖ ಜಾಹೀರಾತುಗಳು, ಪ್ರಾಯೋಜಿತ ಲೇಖನಗಳು, ಸಂವಾದಗಳು ಮತ್ತು ಬೀದಿಬೀದಿಗಳಲ್ಲಿ ಎದ್ದಿರುವ ಫ್ಲೆಕ್ಸ್, ಕಟೌಟ್, ಬ್ಯಾನರ್‌ಗಳನ್ನು ನೋಡುವ ಅಮಾಯಕ ಮತದಾರರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ ಭಾರೀ ಅಭಿವೃದ್ಧಿ ಸಾಧಿಸಿದೆ ಎಂದೇ ನಂಬುತ್ತಿದ್ದಾರೆ. ಇವರು ವಿಷಯದ ಮತ್ತೊಂದು ಮಗ್ಗುಲನ್ನು ತಿಳಿಯುವ ಗೋಜಿಗೆ ಹೋಗದಿರುವುದರಿಂದ ಇವರಿಗೆ ನೈಜ ಪರಿಸ್ಥಿತಿಯ ಅರಿವಾಗುತ್ತಿಲ್ಲ.

ಕಳೆದ ಮೂರು ವರ್ಷಗಳ ಮೋದಿ ಆಡಳಿತದಲ್ಲಿ ನಡೆದಿರುವುದನ್ನೆಲ್ಲಾ ವಿಶ್ಲೇಷಣೆಗೊಳಪಡಿಸಿದಾಗ, ಪ್ರಮುಖ ಕ್ಷೇತ್ರಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮ ಅವಲೋಕನಕ್ಕೆ ಒಡ್ಡಿದಾಗ ಪ್ರಚಾರ ಮತ್ತು ಅಸಲಿ ಪರಿಸ್ಥಿತಿ ಮಧ್ಯದ ಅಗಾಧ ವ್ಯತ್ಯಾಸಗಳ ಚಿತ್ರಣವೊಂದು ನಮ್ಮ ಮುಂದೆ ತೆರೆಯುತ್ತದೆ. ದೇಶದ ಮಹತ್ವದ ರಂಗಗಳಲ್ಲೊಂದಾದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯನ್ನು ಪರಿಶೀಲಿಸಿದಾಗ ಮೋದಿ ಸರಕಾರದ ಹೇಳಿಕೆಗಳೆಲ್ಲಾ ಬರೀ ಲೊಳಲೊಟ್ಟೆ ಎನ್ನುವುದು ಸ್ಪಷ್ಟವಾಗುತ್ತದೆ.

ಕೃಷಿ ವಲಯ
ಮೋದಿ ಸರಕಾರ ಇಂದು ಆರ್ಥಿಕ ರಂಗದಲ್ಲಿನ ವೈಫಲ್ಯಗಳನ್ನು ಮುಚ್ಚಿಟ್ಟು ಅಂಕಿಅಂಶಗಳಲ್ಲಿ ಆಟವಾಡಿ ಜಿಡಿಪಿ ದರದಲ್ಲಿ ಹೆಚ್ಚಳವಾಗಿದೆ ಎಂದು ಬಿಂಬಿಸಲು ಹೊರಟಿರುವುದನ್ನು ಗಮನಿಸಬಹುದು. ಮೋದಿ ಸರಕಾರದ ಆಡಳಿತದಲ್ಲಿ ಜಿಡಿಪಿ (ನಿವ್ವಳ ದೇಶೀಯ ಉತ್ಪನ್ನ) ದರಗಳು ಎಂದರೆ ಸುಳ್ಳುಗಳ ಫ್ಯಾಕ್ಟರಿಯ ಉತ್ಪನ್ನಗಳಂತಾಗಿದೆ. ಆದರೆ ಅದೆಷ್ಟೇ ಪ್ರಯತ್ನಪಟ್ಟರೂ ಕೆಲವೊಂದು ಸತ್ಯಾಂಶಗಳನ್ನು ಮರೆಮಾಚಲು ಸಾಧ್ಯವಾಗಿಲ್ಲ.

ಸರಿಯಾಗಿ ಗಮನಿಸಿದರೆ ಅದರ ಹುಳುಕುಗಳೆಲ್ಲ ಬಯಲಾಗುತ್ತವೆ. ಕೃಷಿವಲಯವನ್ನು ತೆಗೆದುಕೊಂಡರೆ ಕೃಷಿ ಕಾರ್ಮಿಕರ, ರೈತರ, ಬಂಡವಾಳಿಗ ರೈತರ, ಊಳಿಗಮಾನ್ಯ ಹಾಗೂ ಬಂಡವಾಳಿಗ ಭೂಮಾಲಕರ ಆದಾಯಗಳ ಮೂಲವೇ ಕೃಷಿವಲಯದ ಜಿಡಿಪಿ. ಇವರಲ್ಲಿ ಕೆಲವು ಬಂಡವಾಳಿಗ ರೈತರು ಮತ್ತು ಭೂಮಾಲಕರಿಗೆ ವ್ಯಾಪಾರ, ಸಿನೆಮಾ, ಶಿಕ್ಷಣಸಂಸ್ಥೆಗಳು, ಸರಕು ಸಾಗಾಟಗಳಂತಹ ವಾಣಿಜ್ಯ ವಹಿವಾಟುಗಳಿಂದ ಬರುವ ಕೃಷಿಯೇತರ ಆದಾಯಗಳೂ ಇರಬಹುದು. ಆದರೆ ಇಂಥವರ ಸಂಖ್ಯೆ ಕಡಿಮೆ. ಕೃಷಿವಲಯದ ಜಿಡಿಪಿಯಲ್ಲಿ ಇವರ ಪಾಲು ಕಡಿಮೆಯಾಗದಿದ್ದರೆ ಒಂದನ್ನಂತೂ ಊಹಿಸಿಕೊಳ್ಳಬಹುದು. ಅದೇನೆಂದರೆ ಕೃಷಿಯನ್ನು ಅವಲಂಬಿಸಿರುವವರ ನಿವ್ವಳ ಆದಾಯಗಳು ಕಡಿಮೆಯಾದಾಗ ಸಹಜವಾಗಿ ಕೃಷಿವಲಯದ ಜಿಡಿಪಿಯಲ್ಲಿ ಇಳಿಕೆಯಾಗುತ್ತದೆ. ವಾಸ್ತವದಲ್ಲಿ ಆಗಿರುವುದೂ ಅದೇ.

2014-15 ಮತ್ತು 2015-16ರಲ್ಲಿ ಬರಗಾಲದ ಕಾರಣಕ್ಕೆ ಬೆಳೆ ಅಷ್ಟೊಂದು ಚೆನ್ನಾಗಿಲ್ಲ. ಆದರೆ 2016-17ರಲ್ಲಿ ಉತ್ತಮ ಬೆಳೆಯಾಗಿರುವು ದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದುದರಿಂದ 2013-14 ಮತ್ತು 2016-17ರ ಮಧ್ಯೆ ಹೋಲಿಕೆ ಮಾಡುವುದು ತಪ್ಪಾಗದು. ಈ ಮೂರು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಆಧಾರಿತ ಜನರ ಸಂಖ್ಯೆಯಲ್ಲಿ ವಿಶೇಷ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಆದುದರಿಂದ ಕೃಷಿಯನ್ನು ಅವಲಂಬಿಸಿರುವ ಜನಸಂಖ್ಯೆಯ ಬೆಳವಣಿಗೆ ಇಡೀ ದೇಶದ ಜನಸಂಖ್ಯೆಯ ಬೆಳವಣಿಗೆಗೆ ಸಮನಾಗಿದೆ ಎಂದು ಹೇಳಬಹುದು. ಇದರೊಂದಿಗೆ ಕಾರ್ಮಿಕರು ಮತ್ತು ಒಟ್ಟು ಜನಸಂಖ್ಯೆ ನಡುವಿನ ನಿಷ್ಪತ್ತಿ ಇತರೆಲ್ಲಾ ಕ್ಷೇತ್ರಗಳಲ್ಲಿ ಒಂದೇ ವಿಧದಲ್ಲಿ ಇರುವಂತೆ ಕೃಷಿರಂಗದಲ್ಲಿಯೂ ಇರಬೇಕು ಎಂದು ಊಹಿಸಿಕೊಂಡರೆ ದೇಶದ ಒಟ್ಟು ಕಾರ್ಮಿಕರ ಪೈಕಿ ಅರ್ಧದಷ್ಟು ಮಂದಿ ಕೃಷಿವಲಯದಲ್ಲಿ ದುಡಿಯುತ್ತಿರುವುದಾಗಿ ತಿಳಿಯುತ್ತದೆ.

ಈಗ 2013-14ರಿಂದ 2016-17ರ ವರೆಗಿನ ಮೂರು ವರ್ಷಗಳ ಅವಧಿಯಲ್ಲಿ ತಲಾ ಜಿಡಿಪಿ ಕೊಡುಗೆಯಲ್ಲಿ ಶೇ. 16ರಷ್ಟು ಹೆಚ್ಚಳ ಆಗಿದೆ ಎಂದು ಮೋದಿ ಸರಕಾರ ಕೊಚ್ಚಿಕೊಳ್ಳುತ್ತಿದೆ. ಆದರೆ ಇದೇ ಅವಧಿಯಲ್ಲಿ ಗ್ರಾಮೀಣ ಭಾರತದ ಗ್ರಾಹಕ ಬೆಲೆ ಸೂಚ್ಯಂಕದಲ್ಲಿಯೂ (Consumer Price Index) ಏರಿಕೆಯಾಗಿದ್ದು ಶೇ. 16.8ಕ್ಕೆ ತಲುಪಿದೆ. ಇದರರ್ಥ ಏನೆಂದರೆ ಈ ಅವಧಿಯಲ್ಲಿ ಕೃಷಿ ಆಧಾರಿತ ಜನರ ತಲಾ ನೈಜ ಆದಾಯದಲ್ಲಿ ಶೇ. 0.8ರಷ್ಟು (16.8 - 16) ಇಳಿಕೆಯಾಗಿದೆ. ಅಲ್ಲಿಗೆ ದೇಶದ ಅರೆವಾಸಿ ಜನರ ನೈಜ ಆದಾಯ ಕಡಿಮೆಯಾಗಿದೆ ಎಂದಾಯಿತು. ಇದೊಂದು ಭಾರಿ ಮಹತ್ವದ ವಿಷಯ.

ಕೃಷಿಯೇತರ ಕ್ಷೇತ್ರ
ಕೃಷಿಯೇತರ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಉತ್ಪಾದನೆ ಮತ್ತು ಉದ್ಯೋಗಗಳು ಬೇಡಿಕೆಯನ್ನು ಅವಲಂಬಿಸಿವೆ. ಈ ಬೇಡಿಕೆಯ ಒಂದು ಭಾಗ ಆಂತರಿಕವಾಗಿದ್ದು ಅದು ಇದೇ ಕ್ಷೇತ್ರದ ಉತ್ಪಾದನೆಯಿಂದ ಬರುತ್ತದೆ. ಹಾಗಾಗಿ ಉತ್ಪಾದನೆ ಏರಿಕೆಯಾದಾಗ ಆದಾಯಗಳೂ ಹೆಚ್ಚುತ್ತವೆ ಮತ್ತು ಈ ಹೆಚ್ಚಿದ ಆದಾಯಗಳು ಕ್ಷೇತ್ರದ ಉತ್ಪನ್ನಗಳಿಗೆ ಆಂತರಿಕ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹೀಗಾಗಿ ಕೃಷಿಯೇತರ ಕ್ಷೇತ್ರದ ಉತ್ಪಾದನೆಯ ನೈಜ ಪರಿಸ್ಥಿತಿಯನ್ನು ತಿಳಿಯಬೇಕಿದ್ದರೆ ಆಂತರಿಕ ಆದಾಯಗಳ ಮೇಲೆ ಹೊಂದಿರದ, ಬೇಡಿಕೆಯ ಹೊರಗಣ ಭಾಗವನ್ನು ಪರಿಗಣಿಸಬೇಕಾಗುತ್ತದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News