ಮೋದಿ ಸರಕಾರದ ಲೊಳಲೊಟ್ಟೆ ‘ವಿಕಾಸ’

Update: 2017-07-05 06:52 GMT

ಭಾಗ-2

ಕೃಷಿಯೇತರ ಸರಕು ಮತ್ತು ಸೇವೆಗಳಿಗಿರುವ ಹೊರಗಣ ಬೇಡಿಕೆಯ ಒಂದು ಪ್ರಮುಖ ಅಂಶ ನಿಸ್ಸಂದೇಹವಾಗಿ ಕೃಷಿ ಆದಾಯಗಳಿಂದ ಬರುತ್ತದೆ. ಆದರೆ ಈಗಾಗಲೆ ನೋಡಿರುವಂತೆ ಮೋದಿ ಆಡಳಿತದ ಮೂರು ವರ್ಷಗಳ ಅವಧಿಯಲ್ಲಿ ಕೃಷಿ ವಲಯದ ಆದಾಯಗಳ ಪ್ರಮಾಣದಲ್ಲಿ ಆಗಿರುವ ಹೆಚ್ಚಳ ಕೇವಲ 0.8 ಪ್ರತಿಶತ ಅಂದರೆ ಹೆಚು ್ಚ ಕಡಿಮೆ ಶೂನ್ಯ. ಇದರರ್ಥ ಈ ಅವಧಿಯಲ್ಲಿ ಬೇಡಿಕೆಯ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದಾಯಿತು. ಆದುದರಿಂದ ಹೂಡಿಕೆಯನ್ನು ಬಿಟ್ಟರೆ (ಹೂಡಿಕೆಯನ್ನು ಹೊರಗಣ ಬೇಡಿಕೆಯ ಅಂಶವಾಗಿ ಪರಿಗಣಿಸಲು ಸಾಧ್ಯವಿಲ್ಲ ಏಕೆಂದರೆ ಅದು ಉತ್ಪಾದನೆಯ ಪ್ರಮಾಣದ ಮೇಲೆ ಹೊಂದಿಕೊಂಡಿದೆ) ಬೇಡಿಕೆಯ ಹೊರಗಣ ಭಾಗದಲ್ಲಿ ಉಳಿಯುವುದೆಂದರೆ ಎರಡೇ ಅಂಶಗಳು: ನಿವ್ವಳ ರಫ್ತು (ರಫ್ತಿನಿಂದ ಆಮದನ್ನು ಕಳೆದಾಗ ಉಳಿಯುವ ಅಂಶ) ಮತ್ತು ಸರಕಾರದ ವೆಚ್ಚಗಳು.

ನಿವ್ವಳ ರಫ್ತು

ಕಳೆದ ಮೂರು ವರ್ಷಗಳ ದಾಖಲೆಗಳನ್ನು ಗಮನಿಸಿದರೆ ನಿವ್ವಳ ರಫ್ತಿನಿಂದ ಜನಿಸುವ ಬೇಡಿಕೆ ಮಂದಗತಿಯಲ್ಲಿರುವುದು ಕಂಡುಬರುತ್ತದೆ. ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಮತ್ತು ಅಮೆರಿಕ ಹೆಚ್ಚೆಚ್ಚಾಗಿ ಅಳವಡಿಸಿಕೊಳ್ಳುತ್ತಿರುವ ಆರ್ಥಿಕ ರಕ್ಷಣಾ ನೀತಿಗಳೇ ಇದಕ್ಕೆ ಕಾರಣ. ಅಮೆರಿಕದ ಕಂಪೆನಿಗಳು ತಮ್ಮ ಸೇವಾ ವಲಯದ ಚಟುವಟಿಕೆಗಳನ್ನು ವಿದೇಶಿ ಕಂಪೆನಿಗಳಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆಗೆ ಅಡೆತಡೆಗಳು ಎದುರಾಗಿವೆ. ಇದರ ನೇರ ಪರಿಣಾಮವೆಂದರೆ ಭಾರತದಂತಹ ದೇಶಗಳ ರಫ್ತು ಉದ್ಯಮಕ್ಕೆ ಧಕ್ಕೆಯಾಗಿದೆ.

ಸರಕಾರದ ವೆಚ್ಚಗಳು

ನೈಜ ಸಮಸ್ಯೆ ಇಲ್ಲೇ ಇದೆ. ಸರಕಾರದ ವೆಚ್ಚಗಳಲ್ಲಿ ಅಲ್ಪಸ್ವಲ್ಪ ಹೆಚ್ಚಳವಾಗಿದೆ ಅಷ್ಟೆ. ಅದರ ವರ್ಷಾವಾರು ಪ್ರಮಾಣ ಹೀಗಿದೆ: 2014-15ರಲ್ಲಿ ಶೇ. 6.7, 2015-16ರಲ್ಲಿ ಶೇ. 7.6 ಮತ್ತು 2016-17ರಲ್ಲಿ ಶೇ. 12.5 ಇನ್ನು 2017-18ರ ಬಜೆಟ್ಟಿನಲ್ಲಿ ಬರೀ ಶೇ. 6 ಹೆಚ್ಚಳದ ಪ್ರಸ್ತಾಪ ಮಾಡಲಾಗಿದೆ. ಮೇಲಿನ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರದ ವೆಚ್ಚಗಳನ್ನು ಒಟ್ಟು ಜಿಡಿಪಿಯ ಅನುಪಾತವಾಗಿ ಪರಿಗಣಿಸಿದಾಗ ವೆಚ್ಚಗಳಲ್ಲಿ ಇಳಿಕೆಯಾಗುತ್ತಿರುವುದನ್ನು ಕಾಣಬಹುದು. 2016-17ರಲ್ಲಿ ವೇತನ ಆಯೋಗದ ಸಲಹೆ ಮೇರೆಗೆ ಆಗಿರುವಂಥಾ ಶೇ. 12.5ರ ಹೆಚ್ಚಳದಿಂದ ಈ ಅನುಪಾತದಲ್ಲಿ ಯಾವ ಏರಿಕೆೆಯೂ ಆಗುವುದಿಲ್ಲ. ಹೀಗಾಗಿ ಸಮಗ್ರವಾಗಿ ನೋಡಿದರೆ ದೇಶದಲ್ಲಿಂದು ಒಂದು ಕಡೆ ತಲಾ ಕೃಷಿ ಆದಾಯ ಹೆಚ್ಚುತ್ತಿಲ್ಲ. ಇನ್ನೊಂದು ಕಡೆ ನಿವ್ವಳ ರಫ್ತಿನಿಂದ ಜನಿಸುವ ಬೇಡಿಕೆ ಇಳಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ತನ್ನ ವೆಚ್ಚಗಳನ್ನು ಹೆಚ್ಚಿಸಬೇಕಿತ್ತು. ಸರಕಾರದ ವೆಚ್ಚಗಳಲ್ಲಿ ಗಮನಾರ್ಹ ಹೆಚ್ಚಳ ಆಗಿದ್ದಿದ್ದರೆ ಬೇಡಿಕೆಯೂ ಹೆಚ್ಚಾಗಿ ಅದರ ಪರಿಣಾಮವಾಗಿ ಕೃಷಿಯೇತರ ವಲಯದಲ್ಲಿ ಉತ್ಪಾದನೆ, ಉದ್ಯೋಗಾವಕಾಶ ಎರಡರಲ್ಲೂ ಹೆಚ್ಚಳ ಆಗಬಹುದಿತ್ತು. ಆದರೆ ತದ್ವಿರುದ್ಧ ಬೆಳವಣಿಗೆ ಆಗುತ್ತಿರುವುದನ್ನು ಕಾಣಬಹುದು.

ಆರೋಗ್ಯ, ಶಿಕ್ಷಣ ಮೊದಲಾದ ಕ್ಷೇತ್ರಗಳಿಗೆ ಬಜೆಟ್ ಅನುದಾನ ಕಡಿಮೆಯಾಗಿದೆ. ಮೋದಿ ಸರಕಾರ ತನ್ನ ವೆಚ್ಚಗಳಲ್ಲಿ ಕಡಿತ ಮಾಡುವ ಮೂಲಕ ವಾಸ್ತವದಲ್ಲಿ ಖಾಸಗಿ ವಿತ್ತೀಯ ಬಂಡವಾಳ ಸಂಸ್ಥೆಗಳ ಓಲೈಕೆ ಮಾಡುತ್ತಿದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಾದ ಇಳಿಕೆಯ ಲಾಭವನ್ನು ಜನರಿಗೆ ದಾಟಿಸುತ್ತಿದ್ದರೂ ಬೇಡಿಕೆಯಲ್ಲಿ ಹೆಚ್ಚಳ ಆಗಬಹುದಿತ್ತು. ಆದರೆ ಲಾಭವನ್ನೆಲ್ಲ ಸರಕಾರವೇ ಕಬಳಿಸುತ್ತಿದೆ! ಮೋದಿ ಸರಕಾರದ ಆರ್ಥಿಕ ನೀತಿಗಳಲ್ಲಿ ಹಿಂದೆಂದೂ ಇರದ ದೂರಾಲೋಚನೆಯ ಕೊರತೆ ಎದ್ದುಕಾಣುತ್ತಿದೆ. ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಎನ್ನಲಾದ ‘ಮೇಕ್ ಇನ್ ಇಂಡಿಯ’, ‘ಸ್ಕಿಲಿಂಗ್ ಇಂಡಿಯ’, ‘ಸ್ಟ್ಯಾಂಡ್ ಅಪ್ ಇಂಡಿಯ’ ಯೋಜನೆಗಳೆಲ್ಲವೂ ಫ್ಲಾಪ್ ಆಗಿವೆ.

ಉದ್ಯೋಗಗಳ ಅಂಕಿಅಂಶಗಳನ್ನು ನೋಡಿದರೆ ಇದು ತಿಳಿಯುತ್ತದೆ. 2010 ಮತ್ತು 2011ರಲ್ಲಿ ಸಂಘಟಿತ ಆರ್ಥಿಕ ಕ್ಷೇತ್ರದಲ್ಲಿ ವರ್ಷಕ್ಕೆ 8, 9 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದರೆ ಈಗ ಅದು 2 ಲಕ್ಷಕ್ಕೂ ಕಡಿಮೆ ಇದೆ. ಮೂರು ವರ್ಷಗಳ ಹಿಂದೆ 2.3 ಲಕ್ಷ ಕೋಟಿಯಷ್ಟಿದ್ದ ಬ್ಯಾಂಕುಗಳ ಎನ್‌ಪಿಎ ಇಂದು 6.8 ಲಕ್ಷ ಕೋಟಿಯಷ್ಟಾಗಿದೆ. ಇನ್ನು ಕಪ್ಪುಹಣವನ್ನು ಹೊರತೆಗೆಯಲೆನ್ನಲಾದ ನೋಟು ರದ್ದತಿಯಿಂದ ಕಪ್ಪುಹಣದ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ! 2012-13ರಲ್ಲಿ ಒಟ್ಟು ಅಘೋಷಿತ ಆದಾಯ (ಕಪ್ಪು ಹಣ) ರೂ. 29,629 ಕೋಟಿ ಇದ್ದರೆ 2013-14ರಲ್ಲಿ ರೂ. 1,01,182 ಕೋಟಿಯಷ್ಟಾಗಿತ್ತು! ನೋಟು ರದ್ದತಿ ನಡೆದ 2016-17ರಲ್ಲಿ ಇದು ಇನ್ನೂ ಹೆಚ್ಚಾಗಬೇಕಿತ್ತಲ್ಲವೆ. ಆದರೆ 2016-17ರಲ್ಲಿ ಒಟ್ಟು ಅಘೋಷಿತ ಆದಾಯದ ಪ್ರಮಾಣ ಸುಮಾರು 3 ಪಟ್ಟು ಕಡಿಮೆಯಾಗಿದ್ದು ಅದೀಗ ರೂ. 31,211 ಕೋಟಿಗಿಂತ ಸ್ವಲ್ಪ ಜಾಸ್ತಿ ಇರಬಹುದಷ್ಟೆ! ನವ ಉದಾರೀಕರಣ ನೀತಿಗಳು ಸೃಷ್ಟಿಸಿರುವ ಬಿಕ್ಕಟ್ಟಿನೊಂದಿಗೆ ನೋಟು ರದ್ದತಿ ಸೇರಿದಾಗ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಬ್ರಿಟನ್‌ನ ಪ್ರತಿಷ್ಠಿತ ಇಕನಾಮಿಸ್ಟ್ ನಿಯತಕಾಲಿಕವನ್ನು ರಾಜಕೀಯ ಹಾಗೂ ಆರ್ಥಿಕ ವಲಯದ ಗಣ್ಯಾತಿಗಣ್ಯರು ಓದುತ್ತಾರೆ. ತನ್ನ ಇತ್ತೀಚಿನ ಆವೃತ್ತಿಯಲ್ಲಿ ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ಚರ್ಚಿಸಿರುವ ಪತ್ರಿಕೆ ‘ತಾನು ಸುಧಾರಣಾವಾದಿ ಎಂದು ತೋರಿಸಿಕೊಳ್ಳುವ ಮೋದಿ ನಿಜಕ್ಕೂ ಹಾಗಿಲ್ಲ; ಅವರೊಬ್ಬ ರಾಷ್ಟ್ರೀಯವಾದಿ, ಕಲಹಪ್ರಚೋದಕ....... ಆರ್ಥಿಕ ಸಮಸ್ಯೆಗಳು ಎದುರಾದಾಗ ಕೋಮು ಸಂಘರ್ಷಗಳನ್ನು ಹುಟ್ಟುಹಾಕಲಾಗುತ್ತದೆ....... ಅನೇಕ ಆರ್ಥಿಕ ಸಮಸ್ಯೆಗಳನ್ನು ರಾಜ್ಯಗಳಿಗೆ ದಾಟಿಸಲಾಗಿದೆ....... ಜಿಎಸ್‌ಟಿಯನ್ನು ಅನಗತ್ಯವಾಗಿ ಸಂಕೀರ್ಣಗೊಳಿಸಲಾಗಿದೆ. ಅದರಲ್ಲಿ ಕೆಂಪುಪಟ್ಟಿ ತುಂಬಿದೆ’’ ಎಂದು ಟೀಕಾಪ್ರಹಾರ ಮಾಡಿದೆ.

(ಆಧಾರ: newsclick.inನಲ್ಲಿ ಪ್ರಭಾತ್ ಪಟ್ನಾಯಕ್ ಲೇಖನ ಮತ್ತು ಇತರ ಮೂಲಗಳಿಂದ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News