ವಿನಾಶಕಾಲೇ ವಿಪರೀತ ಬುದ್ಧಿಃ

Update: 2017-07-05 11:08 GMT

ಕೃಷ್ಣಾಪುರದಿಂದ ಮಂಗಳೂರಿನ ಕಾಲೇಜಿಗೆ ಬರುತ್ತಿದ್ದ ಪ್ರಾರಂಭದ ದಿನಗಳಲ್ಲಿ ಪ್ರಯಾಣಿಸುವುದಕ್ಕೆ ಸೀಟುಗಳು ಸಿಕ್ಕಾಗ ದಾರಿಯುದ್ದಕ್ಕೂ, ಬೆಳಗಿನ ಮನೆಕೆಲಸದ ದಣಿವು ಮಾಯುವಂತೆ ಕಣ್ಣಿಗೆ ತಂಪಾದ ಗಾಳಿ ಬೀಸುತ್ತಿತ್ತು. ಇನ್ನೂ ಹೆಚ್ಚು ಮಂದಿಯ ಪರಿಚಯವಾಗಿರಲಿಲ್ಲ. ಹಾಯಾಗಿ ಕುಳಿತು ಯಾರ ಗೊಡವೆಯೂ ಇಲ್ಲದೆ ಕಾಣುವ ಹಸಿರು ಮರಗಿಡಗಳು, ನಾವು ಹಳ್ಳಿಯಿಂದ ಪೇಟೆಯ ಕಡೆಗೆ ಸಾಗುತ್ತಿದ್ದೇವೆ ಎನ್ನುವಂತಿರುತ್ತಿತ್ತು. ಅದಕ್ಕೆ ಪೂರಕವೆಂಬಂತೆ ಶೆಟ್ಟಿ ಐಸ್‌ಕ್ರೀಂನವರ ಸಾಲು ಸಾಲು ಎಮ್ಮೆಗಳು ಕುಳಾಯಿಯಿಂದ ಪಣಂಬೂರು ಕಡೆಗೆ ಮೇಯಲು ಹೋಗುತ್ತಿದ್ದುದನ್ನು ನೋಡಲು ಖುಷಿಯಾಗುತ್ತಿತ್ತು.

ಬೈಕಂಪಾಡಿಯಿಂದ ಮುಂದೆ ಹಳ್ಳಿಯ ದಾರಿ ಬದಲಾಗಿ ಕೈಗಾರಿಕಾ ವಲಯ ಪ್ರಾರಂಭಗೊಳ್ಳುವ ಲಕ್ಷಣಗಳಂತೆ ಲಾರಿ-ಟ್ರಕ್ಕುಗಳು, ರಸ್ತೆಯ ಅಗಲೀಕರಣ, ಪಣಂಬೂರು ಬಳಿಕ ಪೆಟ್ರೋಲ್ ಪಂಪ್‌ಗಳು, ಶಾಲಾ ವಾಹನಗಳು, ನವ ಮಂಗಳೂರು ಬಂದರು, ಎಂಸಿಎಫ್ ಕಾರ್ಖಾನೆ, ಕುದುರೆ ಮುಖ ಕಬ್ಬಿಣದ ಕಾರ್ಖಾನೆ, ಕೂಳೂರು ಸೇತುವೆ ಇವುಗಳೆಲ್ಲ್ಲಾ ನನ್ನ ದೇಶದ ಬ್ರಿಟಿಷರ ಆಡಳಿತದ ನೆನಪುಗಳೊಂದಿಗೆ, ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಬಳಿಕದ ವಿಕಾಸದ ಯೋಜನೆಗಳು ಕಣ್ಣೆದುರಿಗೇ ಕಾಣುತ್ತಿತ್ತು, ದೇಶ ಪ್ರಗತಿ ಪಥದಲ್ಲಿದೆ ಎಂಬ ಘೋಷಣೆಗೆ ಇದು ಸಾಕ್ಷಿ ಎನ್ನುವಂತೆ ಭಾಸವಾಗುತ್ತಿತ್ತು. ಆಗ ಮುಂದೆ ಕೈಗಾರಿಕೀಕರಣದ ಸೋಲುಗಳು, ಕೃಷಿಯ ಪಲ್ಲಟದಿಂದಾದ ಅನಿಷ್ಟಗಳು ಯಾವುದೂ ನನಗೆ ಅರ್ಥವಾಗಿರಲಿಲ್ಲ ಎಂದರೂ ಸರಿಯೇ.

 ನವ ಮಂಗಳೂರು ಬಂದರಿನ ಎದುರು ನಮ್ಮ ಮಂಗಳೂರಿನ ಸಂಸದ, ಸಚಿವರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ಮೂರ್ತಿ ಸರ್ವಋತು ಬಂದರಾಗುವುದಕ್ಕೆ ಯೋಗ್ಯವಾದ ಮಲ್ಪೆಯ ಬದಲಿಗೆ ಮಂಗಳೂರಿಗೆ ಬಂದರು ಒದಗಿಸುವುದಕ್ಕೆ ಅವರು ಕಾರಣರೆನ್ನುವುದನ್ನು ನೆನಪಿಸುತ್ತಿತ್ತು. ನಮ್ಮ ಮಂಗಳೂರು ಜಗತ್ತಿನ ಬಂದರುಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದೇ ಹೆಮ್ಮೆಯ ವಿಚಾರ. ಬಂದರಿಗೆ ಇನ್ನೂ ಗೋಡೆಯಾಗಿರಲಿಲ್ಲ. ಆ ಕಡೆ ಎಮ್‌ಸಿಎಫ್‌ನ ಗೋಡೆಗಳೂ ಪೂರ್ಣವಾಗಿರಲಿಲ್ಲ. ಇಲ್ಲಿಂದ ಹೊಸದಾಗಿ ನೆಟ್ಟ ಯಾವುದೋ ಅಪರಿಚಿತ ಮರಗಳ ಕಾಡು ಕಾಣಸಿಗುತ್ತಿದ್ದರೆ ಆ ಕಡೆ ಬಂದರಿನಲ್ಲಿ ಬಂದು ನಿಂತಿರುವ ವಿದೇಶೀ ಹಡಗುಗಳು, ನಮ್ಮ ದೇಶದ ಹಡಗುಗಳು ಕಾಣಿಸುತ್ತಿದ್ದವು.

ಹಡಗುಗಳ ಮೇಲೆ ಎತ್ತರಕ್ಕೆ ಕಾಣಿಸುವಂತಿರುವ ಧ್ವಜಗಳಿಂದ ಯಾವ ದೇಶದ ಹಡಗು ಎನ್ನುವುದನ್ನು ತಿಳಿಯುತ್ತಿದ್ದೆವು. ಮಕ್ಕಳನ್ನು ಮಂಗಳೂರಿಗೆ ಶಾಲೆಗೆ ಕರೆತರುವಾಗ ಅವರಿಗೆ ಇವೆಲ್ಲವೂ ನೋಡುವುದಕ್ಕೆ ಸಿಗುವುದರ ಮೂಲಕ ಅವುಗಳ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೆ. ಆಗ ಬೈಕಂಪಾಡಿಯಿಂದ ಮುಂದೆ ಎರಡೂ ಬದಿಯ ವಿಸ್ತಾರವಾದ ಜಾಗಗಳಲ್ಲಿ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳನ್ನು ಲಾರಿಗಳು ತಂದು ರಾಶಿ ಹಾಕುತ್ತಿದ್ದವು. ಹಾಗೆಯೇ ರಾಶಿ ಹಾಕಿದನ್ನು ಮತ್ತೆ ಎತ್ತಿ ಲಾರಿಗಳು ಪುನಃ ತುಂಬಿ ಬಂದರಿನೊಳಗೆ ರಫ್ತು ಮಾಡುವುದಕ್ಕೆ ಒಳಗೆ ಕೊಂಡುಹೋಗುತ್ತಿದ್ದವು.

ಹೀಗೆ ಕಲ್ಲುಗಳನ್ನು ಲಾರಿಯಿಂದ ಇಳಿಸುವುದಕ್ಕೂ, ಮತ್ತೆ ಪುನಃ ಲಾರಿಗಳಲ್ಲಿ ಇಡುವುದಕ್ಕೂ ದೊಡ್ಡದಾದ ಕ್ರೇನ್‌ಗಳು ಅಂದರೆ ಕೊಕ್ಕರೆ ಕುತ್ತಿಗೆ, ಕೊಕ್ಕಿನಂತ ಉದ್ದವಾದ ಮೂತಿಯಳ್ಳ ಯಂತ್ರಗಳು ಮಕ್ಕಳನ್ನು ಮಾತ್ರವಲ್ಲ ನಮ್ಮನ್ನೂ ಆಶ್ಚರ್ಯಗೊಳ್ಳುವಂತೆ ಮಾಡುತ್ತಿದ್ದವು. ಇಂತಹ ಲಾರಿಗಳು ನಮ್ಮ ಬಸ್ಸುಗಳ ನಡುವೆ ಸಿಕ್ಕರೆ ಆಮೆಯಂತೆ ನಿಧಾನವಾಗಿ ಸಾಗುವ, ಅವುಗಳಿಂದಾಗಿ ನಮ್ಮ ಬಸ್ಸು ಕೂಳೂರು ತಲುಪುವವರೆಗೆ ಅರ್ಧ ಗಂಟೆ ತೆೆಗೆದುಕೊಳ್ಳುತ್ತಿದ್ದುದೂ ಇತ್ತು. ಆಗ ಅರ್ಥವಾಗದೆ ಇದ್ದ ಅಕ್ರಮ ಗಣಿಗಾರಿಕೆಯ ಬಗ್ಗೆ ಈಗ ತಿಳಿದಿರುವಾಗ ಆ ಭಾರೀ ಗಾತ್ರದ ಕಲ್ಲುಗಳ ಮೂಲಕ ಅದೆಷ್ಟು ದೇಶ ದ್ರೋಹಿಗಳು ದೇಶವನ್ನು ಲೂಟಿ ಮಾಡಿದ್ದಾರೋ ಎಂದು ಅನ್ನಿಸಿದರೆ ತಪ್ಪಾಗಲಾರದು ಎಂದು ಭಾವಿಸುತ್ತೇವೆ. ಆಗೆಲ್ಲಾ ಅಕ್ರಮ, ಭ್ರಷ್ಟಾಚಾರ ಎನ್ನುವ ಶಬ್ದಗಳು ಇಂದಿನಷ್ಟು ಚಲಾವಣೆಯಲ್ಲಿರಲಿಲ್ಲ.

ಕಲ್ಲುಗಳ ರಾಶಿಯಂತೆಯೇ ಇನ್ನೊಂದು ರಾಶಿಯೆಂದರೆ ಮೋಪುಗಳದ್ದು. ಇವು ಹಡಗುಗಳ ಮೂಲಕ ನಮ್ಮ ದೇಶಕ್ಕೆ ಬಂದವು. ಮಲೇಷ್ಯಾದ ಮರಗಳಂತೆ. ಆಗ ಮನೆ ಕಟ್ಟುವುದಕ್ಕೆ ಈ ಮರಗಳನ್ನೇ ಬಳಸುವುದು ರೂಢಿಯಾಯಿತು. ಊರಿನ ಮಂದಿ ಅದನ್ನು ಇಷ್ಟ ಪಡದೆ ಅದು ಮೃದುವಾದ ಮರ, ಗಟ್ಟಿಯಲ್ಲ ಎಂಬಂತಹ ಮಾತುಗಳನ್ನಾಡಿದರೂ ಬಹಳಷ್ಟು ಕಾಲ ಈ ವ್ಯಾಪಾರ ನಡೆದದ್ದು ನಿಜ. ಇವುಗಳು ಆಮದಾಗುತ್ತಿದ್ದುದರಿಂದ ನಮ್ಮ ದೇಶದ ಅರಣ್ಯಗಳು ಹಸಿರಾಗಿಯೇ ಉಳಿಯಬೇಕಿತ್ತು ನಿಜ, ಆದರೆ ಹಾಗಾಗದೆ ಆಮದಾದುದರ ಜತೆಗೆ ನಮ್ಮ ಅರಣ್ಯಗಳೂ ಬೋಳಾದುದು, ಕಾಡಿಲ್ಲದೆ ತಾಪಮಾನ ಹೆಚ್ಚಾದುದು, ಮಳೆ ಕಡಿಮೆಯಾದುದು, ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಇಂದು ಒದಗಿದರೂ ಕೋಟಿಗಟ್ಟಲೆೆಯ ಯೋಜನೆಗಳನ್ನು ಹಾಕಿ ಪಾತಾಳ ಗಂಗೆಯ ನೀರು ಎತ್ತುವ ಅತೀ ಬುದ್ಧಿವಂತಿಕೆ ಎನ್ನುವುದನ್ನೇ ‘ವಿನಾಶಕಾಲೇ ವಿಪರೀತ ಬುದ್ಧಿಃ’ ಎಂದು ಹಿರಿಯರು ಸಾರಿ ಹೇಳಿದ್ದರಲ್ಲವೇ? ಇದು ಇಂದಿನ ವರ್ತಮಾನ.

ಅಂದು ದೇಶೀಯ ಹಾಗೂ ವಿದೇಶೀಯ ವಿಶಿಷ್ಟವಾದ ಹಡಗುಗಳು ಬಂದಾಗ ಸಾರ್ವಜನಿಕರಿಗೆ, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೋಡಲು ಅವಕಾಶ ಕಲ್ಪಿಸಲಾಗುತ್ತಿತ್ತು. ಆಗ ನಾವು ಕಾಲೇಜಿನಿಂದ ವಿದ್ಯಾರ್ಥಿಗಳೊಂದಿಗೆ ಹೋಗಿ ನೋಡಿ ಬಂದಿರುವುದಲ್ಲದೆ, ಸಹೋದ್ಯೊಗಿಗಳು ಪ್ರತ್ಯೇಕವಾಗಿ ಕುಟುಂಬ ಪರಿವಾರದೊಂದಿಗೆ ರಜಾದಿನಗಳಲ್ಲಿ ಆ ಅವಕಾಶವನ್ನು ಬಳಸಿಕೊಂಡದ್ದೂ ಇದೆ. ಹಡಗನ್ನು ನೋಡಿದಾಗ ದೊಡ್ಡ ದೋಣಿ ಎಂಬ ಕಲ್ಪನೆ ಸುಳ್ಳಾಗಿ ಅದೊಂದು ಬಹು ಅಂತಸ್ತಿನ ದೊಡ್ಡ ಅರಮನೆಯೇ, ಬಂಗ್ಲೆಯಂತೆಯೇ ಇದ್ದುದು, ಅದರೊಳಗೆ ಪ್ರಯಾಣಿಕರಿಗೆ, ಸಿಬ್ಬಂದಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಇದ್ದುದನ್ನು ನೋಡಿದರೆ ಹಡಗಿನಲ್ಲಿ ಒಮ್ಮೆ ಪ್ರಯಾಣಿಸಬೇಕು ಎನ್ನುವ ಆಸೆ ಹುಟ್ಟುವುದು ಸಹಜವೇ.

ದಿನಗಟ್ಟಲೆ ಹಡಗಿನಲ್ಲಿ ಪ್ರಯಾಣಿಸುವಾಗ. ಎತ್ತ ಕಣ್ಣು ಹೊರಳಿದರೂ ನೀರೇ ಕಾಣುವಾಗ ಮನಸ್ಥಿತಿ ಹೇಗಿರಬಹುದು ಎನ್ನುವುದು ಆಶ್ಚರ್ಯದೊಂದಿಗೆ ಕುತೂಹಲದ ವಿಷಯವೇ. 50ರ ದಶಕದಲ್ಲಿ ಕೊಂಡಾಣದ ದೊಡ್ಡಜ್ಜಿ ತನ್ನ ಮಗ ಮುಂಬೈಯಲ್ಲಿದ್ದಾಗ ಹಡಗಿನಲ್ಲೇ ಹೋಗಿದ್ದರಂತೆ. ಹಾಗೆಯೇ ನನ್ನ ಬಿಜೈಯ ದೊಡ್ಡಮ್ಮ, ದೊಡ್ಡಕ್ಕನ ಬಾಣಂತನ ಮಾಡಲು ಮುಂಬೈಗೆ ಹಡಗಲ್ಲೇ ಹೋಗಿದ್ದರಂತೆ. ಮುಂಬೈಗೆ ಬಸ್ಸುಗಳು ಓಡಾಡುವ ವ್ಯವಸ್ಥೆ ಬಂದ ಮೇಲೆ ಹಡಗುಗಳ ಪ್ರಯಾಣ ನಿಂತಿದೆ. ಆದರೂ ಇದೀಗ ಮುಂಬೈ, ಲಕ್ಷದ್ವೀಪಗಳಿಗೆ ಪ್ರವಾಸೋದ್ಯಮ ಇಲಾಖೆ ಹಡಗಿನ ಪ್ರಯಾಣ ಪ್ರಾರಂಭಿಸುತ್ತದೆ ಎಂಬ ಸುದ್ದಿ ಆಗೀಗ ಉಲ್ಲೇಖವಾಗುತ್ತಿರುವುದು ಉಂಟು. ಅದು ಸಾಧ್ಯವಾದರೆ ಒಮ್ಮೆಯಾದರೂ ಹಡಗಿನ ಪ್ರಯಾಣದ ಸುಖ ಅನುಭವಿಸಬಹುದು.

ಈಗೇನು ಮನುಷ್ಯನ ತಾಂತ್ರಿಕ ಆವಿಷ್ಕಾರಗಳಿಂದ ವಿಮಾನ ಪ್ರಯಾಣವು ಮಧ್ಯಮ ವರ್ಗದ ಜನರಿಗೂ ಎಟಕುವುದರಲ್ಲಿ ಅನುಮಾನವಿಲ್ಲ. ಹಡಗಿನ ಪ್ರಯಾಣದ ಬಗ್ಗೆ ಯೋಚಿಸಿದಾಗ 50ರ ದಶಕದಲ್ಲಿ ಕೂಳೂರಿನ ಮುಂದೆ ಮುಲ್ಕಿಯ ಅಜ್ಜ ಹಾಗೂ ಮಾವನ ಮನೆಗಳಿದ್ದ ವಳಲಂಕೆ, ಕಾರ್ನಾಡುಗಳಿಗೆ ದೋಣಿಯಲ್ಲೇ ಪ್ರಯಾಣ ಮಾಡಿದ ನೆನಪುಗಳಾಗುತ್ತಿವೆ. ಆಗ ಶಾಂಭವಿ, ನಂದಿನಿ ನದಿಗಳಿಗೆ ಸೇತುವೆ ಇರಲಿಲ್ಲ ಎನ್ನುವುದನ್ನು ಹೇಳಿದರೆ ಅದ್ಯಾವ ಶತಮಾನದಲ್ಲಿ ಎಂದು ಇಂದಿನ ಯುವ ಪೀಳಿಗೆ ಕೇಳೀತು. ಹೌದು ಕಾಲದ ಗತಿ ವೇಗವಾಗಿದೆ ಎಂದು ಹೇಳುತ್ತಿರುವಂತೆಯೇ ಬದುಕಿನ ಶೈಲಿಯೂ ಬದಲಾಗಿದೆ.

ಮನುಷ್ಯನ ಆಸೆ ಆಕಾಂಕ್ಷೆಗಳೂ ಹೆಚ್ಚುತ್ತಿವೆ. ಅವನ ಆವಶ್ಯಕತೆಗಳು ಹೆಚ್ಚಾಗುತ್ತಿವೆ: ಈ ಆವಶ್ಯಕತೆಗಳು ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಗುವಂತೆಯೇ ಈ ಭೂಮಿ, ಆಕಾಶ, ಸಮುದ್ರಗಳು ಮನುಷ್ಯ ಪ್ರಾಣಿಗೆ ಮಾತ್ರ ಮೀಸಲು ಎನ್ನುವ ದುರಾಸೆಯ ಪ್ರತಿಫಲವನ್ನು ಪ್ರಕೃತಿ ತನ್ನ ಅಸಮಾಧಾನದ ಮೂಲಕ ತೋರ್ಪಡಿಸಿದರೂ ಮನುಷ್ಯ ಪ್ರಾಣಿಗೆ ಅರ್ಥವಾಗುತ್ತಿಲ್ಲವಲ್ಲ ಎಂಬ ಖಿನ್ನತೆ ಕಾಡುತ್ತಿದೆ. ಜತೆಗೆ ‘ವಿನಾಶಕಾಲೇ ವಿಪರೀತ ಬುದ್ಧಿಃ’ ಎನ್ನುವುದು ನಿಜವಾಗುತ್ತಿದೆಯೇ ಎಂದು ಅನ್ನಿಸುತ್ತದೆ. ಮನುಷ್ಯ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಇದ್ದವನು ಇಂದು ಅದನ್ನು ಮರೆತಂತೆ ಮನುಷ್ಯ ಮನುಷ್ಯರ ಜತೆಗಿನ ಸಂಬಂಧವನ್ನು ಮರೆಯುತ್ತಿದ್ದಾನೆ ಎನ್ನುವುದು ಮನುಕುಲದ ನಾಶಕ್ಕೂ ಆತನೇ ಕಾರಣ ಎನ್ನುವುದು ಸಾಬೀತಾಗುತ್ತದೆ. ಇಂತಹ ನಾಶ ಒಮ್ಮಿಂದೊಮ್ಮೆಗೆ ನಡೆಯುವಂತಹುದಲ್ಲ. ಮನುಷ್ಯ ತನ್ನೊಳಗಿನ ಅನೇಕ ಸದ್ಗುಣಗಳನ್ನು ಕಳಕೊಂಡಿದ್ದಾನೆ, ಅದು ತಿಳಿದೋ ತಿಳಿಯದೆಯೋ ಎನ್ನುವುದು ಅವನೇ ಯೋಚಿಸಬೇಕಾದ ವಿಷಯವೆಂದರೂ ಸರಿಯೇ. ‘‘ಉನ್ನತವಾಗಿ ಚಿಂತಿಸು, ಸರಳವಾಗಿ ಬದುಕು’’ ಎನ್ನುವುದು ಹಿರಿಯರು ಹೇಳಿದ ಮಾತು ಮಾತ್ರ ಅಲ್ಲ, ಬದುಕಿ ತೋರಿದ ದಾರಿಯೂ ಆಗಿತ್ತು. ಆದರೆ ಇಂದು ಏನಾಗಿದೆ?

ನಮ್ಮ ಈ ಮನೆಗೆ ಬಂದ ಪ್ರಾರಂಭದ ತಿಂಗಳಲ್ಲಿಯೇ ನಮ್ಮನ್ನು ನೋಡಿ ಮಾತನಾಡಿಸಲು ಬಂದ ಮೂರನೆಯ ತಂಡ ಮಹಿಳೆಯರದ್ದು. ಒಂದು ರವಿವಾರದ ಮಧ್ಯಾಹ್ನ ಆರೇಳು ಮಂದಿ ಮಹಿಳೆಯರು ಹಿರಿಯ ವೃದ್ಧ ಮಹಿಳೆಯೊಬ್ಬರ ನೇತೃತ್ವದಲ್ಲಿ ಬಂದರು. ಅವರಲ್ಲಿ ಒಬ್ಬ ಮಹಿಳೆ ವಿವಾಹಿತೆಯಾಗಿದ್ದು ನನ್ನ ವಯಸ್ಸಿನವರಾಗಿದ್ದರೆ, ಉಳಿದ ಎಲ್ಲರೂ ಯುವತಿಯರು. ಇವರೆಲ್ಲಾ ಕೃಷ್ಣಾಪುರದ ಮಹಿಳಾ ತಂಡದ ಅಧ್ಯಕ್ಷೆ ಹಾಗೂ ಇತರ ಪದಾಧಿಕಾರಿಗಳು ಎಂದು ತಮ್ಮನ್ನು ಪರಿಚಯಿಸಿಕೊಂಡರು. ಹಾಗೆಯೇ ನಮ್ಮಂತಹ ವಿದ್ಯಾವಂತರು, ಸಾರ್ವಜನಿಕವಾಗಿ, ಸಾಮಾಜಿಕವಾಗಿ ಗುರುತಿಸಿಕೊಂಡವರು ಊರಿಗೆ ಬಂದುದು ಸಂತೋಷವೆಂದರು. ನನ್ನ ಮಾರ್ಗದರ್ಶನ ಸಲಹೆ ಸೂಚನೆಗಳು ಅಗತ್ಯವಾಗಿ ಬೇಕಾಗಿದೆ.

ಸಂಘದ ಸದಸ್ಯೆಯಾಗಬೇಕೆಂದು ಕೇಳಿಕೊಂಡರು. ನನಗೂ ಮಂಗಳೂರಲ್ಲಿಯೂ ಸ್ವಾತಂತ್ರ್ಯಪೂರ್ವದ ‘ಮಹಿಳಾ ಸಭಾ’ ಒಂದನ್ನು ಬಿಟ್ಟರೆ ಈ ರೀತಿಯ ಮಹಿಳಾ ಮಂಡಲ ಇಲ್ಲ ಎನ್ನುವುದು ಗಮನಕ್ಕೆ ಬಂದು ಅವರನ್ನು ಈ ಸಂಘಟನೆಗಾಗಿ ಅಭಿನಂದಿಸಿದೆ. ಈ ಹಳ್ಳಿಯೊಳಗಿನ ಪೇಟೆಯಲ್ಲಿ ಇಂತಹ ರಚನಾತ್ಮಕ ಸಂಘಟನೆಯು ಮಹಿಳಾ ಸಬಲೀಕರಣದ ಕಾರ್ಯಕ್ರಮಗಳನ್ನು ಟೈಲರಿಂಗ್ ತರಬೇತಿ, ಬಾಲವಾಡಿ ತರಗತಿಗಳನ್ನು ನಡೆಸುತ್ತಿರುವುದರ ಮೂಲಕ ಸಾಧಿಸ ಹೊರಟಿರುವುದು ಖುಷಿ ಕೊಡುವ ವಿಚಾರವೆ ಅಲ್ಲವೇ? ಹಾಗೆಯೇ ಕೃಷ್ಣಾ ಪುರದ ಯುವಕ ಮಂಡಲದ ವಾರ್ಷಿಕೋತ್ಸವದೊಂದಿಗೆ ತಾವೂ ವಾರ್ಷಿಕೋತ್ಸವ ನಡೆಸುವುದು ಅದರಲ್ಲಿ ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೆಲ್ಲಾ ಕೇಳಿ ನಿಜಕ್ಕೂ ಸಂತೋಷವಾಯಿತು.

ನಾನು ತಿಳಿದಂತೆ ಈ ಊರಲ್ಲಿ ಅರಿವಿನ ಕೊರತೆ ಇದ್ದಂತೆ ಅರಿವಿನ ಜಾಗೃತಿಯ ಕಾರ್ಯಕ್ರಮಗಳೂ ನಡೆಯುತ್ತಿರುವುದು ನಾಗರಿಕ ಬದುಕಿಗೆ ಹೊರಳುತ್ತಿರುವ ಊರಿನ ಲಕ್ಷಣವೆಂದೂ ಭಾವಿಸಿದೆ. ಹೀಗೆ ಮಾತುಕತೆ ಆಗುತ್ತಲೇ ಹಿರಿಯ ಮಹಿಳೆಯ ಬಗ್ಗೆ ವಿಚಾರಿಸಿದಗ ಅವರು ಮಂಗಳೂರಿನ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ನಿವೃತ್ತರಾದವರೆಂದು ತಿಳಿಯಿತು. ಆಗ ನಾನು ನನ್ನ ತಂದೆಯವರ ಪರಿಚಯ ಹೇಳಿಕೊಂಡು ಅವರನ್ನು ಗೊತ್ತಿದೆಯೇ ಎಂದು ವಿಚಾರಿಸಿದಾಗ ಹೌದೆಂದು ಉತ್ತರಿಸಿದ ಆ ಹಿರಿಯರಿಗೆ ಆಶ್ಚರ್ಯವೂ ಆಯಿತು. ಮಾತ್ರವಲ್ಲ ಅವರ ಮುಖಭಾವವೇ ಬದಲಾಯಿತು.

ಈ ನಡುವೆ ಒಳ ಹೊರಗೆ ಓಡಾಡುತ್ತಾ ನಾನು ಬಂದವರಿಗೆ ಲಿಂಬೆ ಶರಬತ್ತು ಮಾಡಿ ಎಲ್ಲರಿಗೂ ತಂದು ಕೊಟ್ಟು ತೆಗೆದುಕೊಳ್ಳಲು ಹೇಳಿದಾಗ, ‘‘ಛೇ, ಇದೆಲ್ಲಾ ಯಾಕೆ ಮಾಡ ಹೋದಿರಿ’’ ಎಂದು ಯಾರೋ ಒಬ್ಬರು ಔಪಚಾರಿಕವಾಗಿ ಕೇಳುತ್ತಿದ್ದಾರೆ ಎನ್ನಿಸಿದರೆ, ಆ ನಿವೃತ್ತ ಶಿಕ್ಷಕಿ ತಾನು ಯಾರ ಮನೆಯಲ್ಲೂ ಏನೂ ತೆಗೆದುಕೊಳ್ಳುವುದಿಲ್ಲ ಎಂದರು. ಅವರು ತೆಗೆದುಕೊಳ್ಳದಿದ್ದರೇನಂತೆ ಉಳಿದವರಾದರೂ ತೆಗೆದುಕೊಳ್ಳಬಹುದಲ್ಲಾ ಎಂದು ಮನಸ್ಸಿನಲ್ಲೇ ಯೋಚಿಸಿದಂತೆ ಉಳಿದವರು ತಮಗೂ ಬೇಡ ಎಂದು ಹೇಳಿ ಬಿಡಬೇಕೇ? ಈ ತಿರಸ್ಕಾರಕ್ಕೆ ಕಾರಣ ನಾನು ಯಾರ ಮಗಳೆಂದು ತಿಳಿಯುವ ಮೂಲಕ ಆ ಹಿರಿಯ ಮಹಿಳೆಗೆ ನನ್ನ ಜಾತಿ ತಿಳಿಯಿತಲ್ಲವೇ? ಶೂದ್ರರ ಮನೆಯಲ್ಲಿ ಆಹಾರ ಪಾನೀಯ ಸ್ವೀಕಾರಾರ್ಹವಲ್ಲ ಎಂಬುದು ನನಗೆ ಹೊಳೆದ ಸತ್ಯ.

ಆ ಗುಂಪಿನಲ್ಲಿ ಇದ್ದ ಒಬ್ಬಳೇ ಒಬ್ಬ ಶೂದ್ರ ಮಹಿಳೆಯೂ ಹಾಗೆಯೇ ನಡೆದುಕೊಂಡಾಗ ಆಕೆಯ ಅರ್ಥವಿಲ್ಲದ ಅನುಕರಣೆ ಹಾಗೂ ಉಳಿದ ಮಹಿಳೆಯರ ಮೇಲರಿಮೆಯ ಬಗ್ಗೆ ನನಗೇನನ್ನಿಸಬೇಕು? ಆ ಬಗ್ಗೆ ಮಾತನಾಡದೆ ಇಂತಹ ಮಹಿಳಾ ಸಂಘಟನೆಯ ಸದಸ್ಯತ್ವದಿಂದ ನಾನು ಕಲಿಯಬೇಕಾದುದು ಏನಿದೆ? ಅಥವಾ ನನ್ನಂಥವಳಿಂದ ಇವರು ಪಡೆಯಬೇಕಾದ ಮಾರ್ಗದರ್ಶನವಾದರೂ ಏನಿದೆ ಎಂದೆನ್ನಿಸಿ ಕೂಡಲೇ ‘‘ನಾನು ನಿಮ್ಮ ಸಂಘದ ಸದಸ್ಯೆಯಾಗಲಾರೆ. ಕ್ಷಮಿಸಿ, ನನ್ನ ಮನೆಗೆ ಬರುವ ತಾಪತ್ರಯ ತೆಗೆದುಕೊಂಡ ಬಗ್ಗೆ ನಿಮ್ಮ ಶ್ರಮ ವ್ಯರ್ಥವಾಯ್ತಲ್ಲಾ?’’ ಎಂದು ಹೇಳಿಯೇ ಬಿಟ್ಟೆ. ಈ ನನ್ನ ಸ್ವಭಾವ ಆ ಊರಲ್ಲಿ ನಾನು ಸ್ವಲ್ಪ ಜೋರಿನವಳು ಎಂಬ ಬ್ರಾಂಡ್ ಮಾಡಿದ್ದೂ ಸಹಜವೇ. ಹೀಗೆ ನಡೆದ ಘಟನೆಯು ಊರಿನಲ್ಲಿ ಸುದ್ದಿಯಾಗುವುದು ಏನೂ ವಿಶೇಷವಾಗಿರಲಿಲ್ಲ. ಊರಿನ ಗಣ್ಯರೆನಿಸಿದ ಮೇಲ್ಜಾತಿಯ ಪುರುಷರು ಬಂದು ಬಾಯಾರಿಕೆ ಸ್ವೀಕರಿಸಿ ಹೋಗುವ ಬದಲಾವಣೆ ಆಗಿದ್ದರೆ ಈ ಮಹಿಳೆಯರು ಯಾಕೆ ಹೀಗೆ? ಎನ್ನುವುದರ ಹಿಂದೆ ಈಗಾಗಲೇ ನಮ್ಮ ಎದುರು ಮನೆಯ ಅಜ್ಜಿಯ ಮನೋಭಾವ, ಊರಲ್ಲಿ ಹೆಸರಿನೊಂದಿಗೆ ಜಾತಿಯನ್ನು ಸೇರಿಸಿ ಮಾತಾಡುವ ಭಾಷೆ ಇವುಗಳ ಮೂಲಕ ಊರನ್ನು ಗುರುತಿಸಿಕೊಂಡಿದ್ದ ನಾನು ಗ್ರಹಿಸಿದ್ದು ಸರಿಯಾಗಿಯೇ ಇದೆ. ಈ ಊರಿನೊಳಗೆ ಮೇಲ್ನೋಟಕ್ಕೆ ಕಾಣದ ಸೂಕ್ಷ್ಮವಾದ ಕತ್ತಲು ಮೂಲೆಗಳಿವೆ ಎನ್ನುವುದು ಸ್ಪಷ್ಟವಾಯಿತು. ಆದರೆ ಬೆಳಕು ಎಂದರೆ ಏನೆಂದು ಖಚಿತವಾಗಿರುವ ನನಗೆ ಇಂತಹ ಕತ್ತಲೆಯೊಳಗೆ ಸೇರಿ ಗುದ್ದಾಡಬೇಕಾದ ಅನಿವಾರ್ಯತೆ ಇರಲಿಲ್ಲ ಎನ್ನುವುದೂ ಸತ್ಯವೇ ಆಗಿತ್ತು. ಜತೆಗೆ ಗಂಡಸರ ಬದುಕು ವ್ಯವಹಾರದ ದೃಷ್ಟಿಯದ್ದು, ಹೆಂಗಸರ ಬದುಕು ಸಂಪ್ರದಾಯದ್ದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ದೊರೆತಂತೆಯೇ ಈ ಸಂಪ್ರದಾಯದ ರಕ್ಷಣೆಯನ್ನು ಹೆಂಗಸರ ಹೆಗಲಿಗೆ ಹೊರಿಸಿದವರು ಯಾರು ಎಂಬ ಪ್ರಶ್ನೆಯೂ ಜಾಗೃತವಾಯ್ತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News

ಸಂವಿಧಾನ -75