‘ಅನುಭವ ಮಂಟಪ’ವೆಂಬ ಪ್ರಜಾತಾಂತ್ರಿಕ ಸಂಸತ್ತು
ಶರಣರು ಸರ್ವಾಂಗೀಣ ಸಮಾನತೆಯ ಉದ್ದೇಶ ಈಡೇರಿಕೆಗಾಗಿ ‘ಅನುಭವ ಮಂಟಪ’ವೆಂಬ ಅತ್ಯದ್ಭುತ ಪ್ರಜಾಸಂಸತ್ತು ಮಾದರಿಯ ವ್ಯವಸ್ಥೆಯೊಂದನ್ನು ಹುಟ್ಟುಹಾಕಿದರು. ಆ ಮೂಲಕ ಮಾನವ ಹಕ್ಕುಗಳ ಪ್ರತಿಷ್ಠಾಪನೆಗೆ ವಚನ ಚಳವಳಿ ಎಂಬ ವಿನೂತನ ಅಕ್ಷರ ಸ್ವಾತಂತ್ರದ ಮಾಧ್ಯಮವನ್ನು ಪ್ರಾಯೋಗಿಕ ಅಸ್ತ್ರವಾಗಿ ಶೋಧಿಸಿಕೊಂಡರು.
ಭಾರತ ಉಪಖಂಡ ಅದರಲ್ಲೂ ಕನ್ನಡದ ನೆಲದಲ್ಲಿ ಘಟಿಸಿದ ಹನ್ನೆರಡನೆ ಶತಮಾನದ ಬಸವಾದಿ ಶರಣರ ಚಳವಳಿ ಒಂದು ವಿಶಿಷ್ಟ ಹಾಗೂ ವಿನೂತನ ಸರ್ವಾಂಗೀಣ ಜನಾಂದೋಲನ. ಬಹುಜನರು ಒಂದೆಡೆಗೆ ಸೇರಿ ಬಹುದ್ದೇಶಗಳ ಅನುಷ್ಠಾನಕ್ಕೆ ನಡೆದುಹೋದ ಒಂದು ಅಪರೂಪದ ಕ್ರಾಂತಿ. ಈ ನೆಲದಲ್ಲಿ ಅಸ್ಥಿತ್ವದಲ್ಲಿದ್ದ ಶ್ರೇಣೀಕ್ರತ ಸಾಮಾಜಿಕ ವ್ಯವಸ್ಥೆ ಇಲ್ಲಿನ ಮೂಲನಿವಾಸಿಗಳನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮುಂತಾದ ಮೂಲಭೂತ ಹಕ್ಕುಗಳಿಂದ ವಂಚಿಸಿ ಅಟ್ಟಹಾಸ ಮೆರೆಯುತ್ತಿದ್ದ ಕಾಲಘಟ್ಟವದು.
ಆಚಾರ ಪ್ರಧಾನ ನಡವಳಿಕೆಗಳು ವಿಚಾರಗಳನ್ನು ನಗಣ್ಯಗೊಳಿಸಿ ಜೀವಂತ ಮಾನವನಿಗಿಂತ ಕಲ್ಪನೆಯ ದೇವರಿಗೆ ಪ್ರಾಧಾನ್ಯತೆ ನೀಡುತ್ತ ಈ ನೆಲದ ಮೂಲನಿವಾಸಿಗಳಿಗೆ ಅವರ ಮೂಲಭೂತ ಮಾನವ ಹಕ್ಕುಗಳಿಂದ ವಂಚಿಸಿ ಅಮಾನುಷವಾಗಿ ಶೋಷಿಸುತ್ತಿದ್ದ ಸಮಯದಲ್ಲಿ ಶರಣರು ವೈಚಾರಿಕ ಆಂದೋಲನವನ್ನು ಹೆಣೆದರು. ಹೊಸ ವಿಚಾರಗಳ ಆಧಾರದಲ್ಲಿ ವರ್ಗ-ವರ್ಣ-ಲಿಂಗ ತಾರತಮ್ಯ ರಹಿತ ಸಮಾಜ ನಿರ್ಮಾಣದ ರೂಪುರೇಷೆಗಳೊಂದಿಗೆ ಜನಾಂದೋಲನವೊಂದನ್ನು ರೂಪಿಸಿದರು. ಶರಣರು ಸರ್ವಾಂಗೀಣ ಸಮಾನತೆಯ ಉದ್ದೇಶ ಈಡೇರಿಕೆಗಾಗಿ ‘ಅನುಭವ ಮಂಟಪ’ವೆಂಬ ಅತ್ಯದ್ಭುತ ಪ್ರಜಾಸಂಸತ್ತು ಮಾದರಿಯ ವ್ಯವಸ್ಥೆಯೊಂದನ್ನು ಹುಟ್ಟುಹಾಕಿದರು.
ಆ ಮೂಲಕ ಮಾನವ ಹಕ್ಕುಗಳ ಪ್ರತಿಷ್ಠಾಪನೆಗೆ ವಚನ ಚಳವಳಿ ಎಂಬ ವಿನೂತನ ಅಕ್ಷರ ಸ್ವಾತಂತ್ರದ ಮಾಧ್ಯಮವನ್ನು ಪ್ರಾಯೋಗಿಕ ಅಸ್ತ್ರವಾಗಿ ಶೋಧಿಸಿಕೊಂಡರು. ಶಿಕ್ಷಣದಿಂದ ವಂಚಿತರಾಗಿದ್ದ ಕೃಷಿಕಾಯಕದ ಜನಸಮುದಾಯದವರನ್ನು ಅಕ್ಷರಸ್ಥರನ್ನಾಗಿಸುವ ಮುಖೇನ ಇನ್ನುಳಿದ ಮಾನವ ಹಕ್ಕುಗಳ ಹೋರಾಟಕ್ಕೆ ಸೂಕ್ತ ವೇದಿಕೆಯೊಂದನ್ನು ನಿರ್ಮಿಸಿದರು. ಶರಣರು ತಮ್ಮ ವಚನ ಚಳವಳಿಯ ಮೂಲಕ ಈ ಕೆಳಗಿನ ಪಂಚಸೂತ್ರ ಸಿದ್ಧಾಂತಗಳನ್ನು ಪ್ರತಿಪಾದಿಸಿದರು.
1. ಎಲ್ಲರಿಗೂ ಸ್ವಾತಂತ್ರ್ಯ
2. ಎಲ್ಲರೂ ಸಮಾನರು
3. ಎಲ್ಲರೂ ಸಹೋದರರು
4. ಎಲ್ಲರೂ ಕಾಯಕ ಮಾಡಬೇಕು
5. ಎಲ್ಲರೂ ದಾಸೋಹ ಮಾಡಬೇಕು.
ಮೇಲ್ಕಾಣಿಸಿದ ಪಂಚಸೂತ್ರ ಸಿದ್ಧಾಂತಗಳ ಮುಖೇನ ಶರಣರು ಮಾನವ ಹಕ್ಕುಗಳ ಪ್ರತಿಷ್ಠಾಪನೆಗೆ ಅನುಭವ ಮಂಟಪವೆಂಬ ಪ್ರಜಾಸಂಸತ್ತನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು.
ಅನುಭವ ಮಂಟಪದ ಮೂಲ ಉದ್ದೇಶಗಳು:
1. ಶಿಕ್ಷಣದಿಂದ ವಂಚಿತ ಜನಸಮುದಾಯಕ್ಕೆ ಅಕ್ಷರಭ್ಯಾಸ. ದೇವರು ಮತ್ತು ಭಕ್ತರ ನಡುವಿನ ಮಧ್ಯವರ್ತಿಯ ಅಸ್ಥಿತ್ವ ನಿರಾಕರಣೆ.
2. ಸಂಕೀರ್ಣವಾದ ಸಂಸ್ಕೃತ ಭಾಷೆಯನ್ನು ಧಿಕ್ಕರಿಸಿ ನೆಲಮೂಲದ ಕನ್ನಡ ಭಾಷೆಯಲ್ಲಿ ವಚನಗಳ ರಚನೆಗೆ ಇಂಬು.
3. ಅನುಭವ ಮಂಟಪದಲ್ಲಿ ವಚನಗಳ ಬಗ್ಗೆ ಮಂಥನ, ಪರಾಮರ್ಶೆ ಮತ್ತು ಅವುಗಳೊಳಗಿನ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಮೂಲಕ ಶೋಷಿತ ಜನಾಂಗದಲ್ಲಿ ಜಾಗೃತಿ.
4. ಅನುಭವ ಮಂಟಪದ ಕಾರ್ಯಚಟುವಟಿಕೆಗಳಲ್ಲಿ ಸ್ತ್ರೀಯರಿಗೆ ಮತ್ತು ಸಮಾಜದ ಎಲ್ಲ ವರ್ಗದ ಜನಗಳಿಗೆ ಭಾಗವಹಿಸುವ ಅವಕಾಶ ಹಾಗೂ ಎಲ್ಲ ರಂಗಗಳಲ್ಲೂ ಸ್ತ್ರೀ ಮತ್ತು ತಳಸಮುದಾಯದ ಜನ ತಮ್ಮ ಹಕ್ಕುಗಳ ಅನುಷ್ಠಾನಕ್ಕೆ ಆದ್ಯತೆ.
5. ಅಭಿವ್ಯಕ್ತಿ ಸ್ವಾತಂತ್ರದ ಅನುಷ್ಠಾನ ಮತ್ತು ಒಟ್ಟಾರೆ ವರ್ಣ-ವರ್ಗ- ಲಿಂಗ ತಾರತಮ್ಯ ರಹಿತ ಸಮಾಜ ನಿರ್ಮಾಣದ ಉದಾತ್ತ ಉದ್ದೇಶ.
ಹೀಗಾಗಿ ಜಗತ್ತಿನಲ್ಲಿಯೇ ಪ್ರಥಮವಾಗಿ ಪ್ರಜಾಪ್ರಭುತ್ವ ಮಾದರಿಯ ಜನಸಂಸತ್ತೆಂಬ ಅನುಭವ ಮಂಟಪದ ಅದ್ಭುತ ಪರಿಕಲ್ಪನೆಯೊಡನೆ ಕಲ್ಯಾಣದಲ್ಲಿ ಘಟಿಸಿದ ಹನ್ನೆರಡನೆ ಶತಮಾನದ ಸರ್ವಾಂಗೀಣ ಆಂದೋಲನ ಈ ನೆಲದಲ್ಲಿ ಪ್ರಪಥಮವಾಗಿ ಮಾನವ ಹಕ್ಕುಗಳ ಪ್ರತಿಷ್ಠಾಪನೆಗೆ ಧ್ವನಿ ಎತ್ತಿದ ಯಶಸ್ವಿ ಜನಾಂದೋಲನ ಎನ್ನುವುದು ಕನ್ನಡಿಗರಾದ ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ.
ಸಾಮಾಜಿಕ ನ್ಯಾಯದ ಕುರಿತು ಇಪ್ಪತ್ತೊಂದನೆ ಶತಮಾನದಲ್ಲೂ ನಾವು ಕೇವಲ ಮಾತನಾಡುತ್ತೇವೆ. ಆದರೆ ಬಸವಾದಿ ಶರಣರು ಎಂಟುನೂರು ವರ್ಷಗಳ ಹಿಂದೆಯೇ ಅದನ್ನು ಸಮರ್ಥವಾಗಿ ಜಾರಿಗೆ ತಂದಿದ್ದು ಇದೇ ಅನುಭವ ಮಂಟಪದಲ್ಲಿ. ತಮ್ಮ ಪೂರ್ವಾಶ್ರಮದ ಸಂಕೋಲೆಗಳನ್ನು ಕಿತ್ತ್ತು ಬಿಸಾಕಿ ಶರಣ ಧರ್ಮದ ಕಂಕಣ ಕಟ್ಟಿದ ಸಮಾಜದ ಅಂತ್ಯಜರನ್ನೆಲ್ಲ ಅನುಭವ ಮಂಟಪದ ಸದಸ್ಯತ್ವ ನೀಡಲಾಗಿ, ಅವರೆಲ್ಲ ಅಲ್ಲಿ ಅನುಭಾವದ ಚಿಂತನೆಗೈಯುತ್ತಿದ್ದರು. ಸ್ತ್ರೀಯರಿಗೂ ಅನುಭವ ಮಂಟದಲ್ಲಿ ಭಾಗವಹಿಸುವ ಹಕ್ಕು ನೀಡಲಾಗಿತ್ತು.
ಅಲ್ಲಿನ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಡೆಸುವುದಕ್ಕಾಗಿ ಅನುಭವ ಮಂಟಪಕ್ಕೆ ಒಬ್ಬ ಸಮರ್ಥ ಅಧ್ಯಕ್ಷರನ್ನು ನೇಮಿಸುವ ಸಂವಿಧಾನವೂ ಸಿದ್ಧಗೊಳಿದ್ದ ಶರಣರು ಬಳ್ಳಿಗಾವೆಯ ನಟವರ್ ಎಂಬ ಅತ್ಯಂತ ಹಿಂದುಳಿದ ಸಮುದಾಯದ ಅಲ್ಲಮ ಪ್ರಭುದೇವರಿಗೆ ಲಿಂಗದೀಕ್ಷೆ ನೀಡಿ ಅದರ ಪ್ರಥಮ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅಲ್ಲಮರು ಅತ್ಯಂತ ಆಳವಾದ ಅಧ್ಯಾತ್ಮದ ಪರಿಣಿತರಾಗಿದ್ದು ಅವರ ಬೆಡಗಿನ ವಚನಗಳು ಬಹು ಸಂಕೀರ್ಣ ಅನುಭಾವ ಸಾಧನೆಯ ವಿಚಾರಗಳನ್ನು ಒಳಗೊಂಡಿವೆ. ಅಲ್ಲಮರು ಬಸವಾದಿ ಶರಣರ ಪ್ರಭಾವಕ್ಕೆ ಮಾರುಹೋಗಿ ಕಲ್ಯಾಣಕ್ಕೆ ಬಂದು, ಅನುಭವ ಮಂಟಪವೆಂಬ ಜಗತ್ತಿನ ಪ್ರಪ್ರಥಮ ಪ್ರಜಾ ಸಂಸತ್ತಿನ ಮೊದಲ ಅಧ್ಯಕ್ಷರಾಗಿ ಅತ್ಯುನ್ನತ ಸಂಸದೀಯ ನಡಾವಳಿಗಳ ಅನುಷ್ಠಾನಗೈದ ಮಹಾನ್ ದಾರ್ಶನಿಕ ಶರಣರು. ಅವರ ಅಲ್ಪಾವಧಿಯ ಇರುವಿಕೆ ಶರಣರಲ್ಲಿ ಅದಮ್ಯ ಪರಿಣಾಮಗಳನ್ನುಂಟುಮಾಡಿತ್ತು. ಅಲ್ಲಮರ ಅಕ್ಕನೊಂದಿಗಿನ ಅನುಭವ ಮಂಟಪದೊಳಗಿನ ಸಂವಾದ ಇಂದಿಗೂ ಶರಣರ ಚರಿತ್ರೆಯ ಮಹೋನ್ನತ ಘಟನೆಯೆಂದೇ ಗುರುತಿಸಿಕೊಂಡಿದೆ.
ಅನುಭವ ಮಂಟಪವು ಶರಣರ ಗಹನವಾದ ಚರ್ಚೆಗಳಿಗೆ ಸಾಕ್ಷಿಯಾಗುವ ಮೂಲಕ ಶರಣ ಸಾಹಿತ್ಯಕ್ಕೆ ಅನೇಕ ಹೊಸ ಪಾರಿಭಾಷಿಕ ಶಬ್ಧಗಳನ್ನು ರೂಪಿಸಿದ ಮಹಾನ್ ಜ್ಞಾನದ ಆಗರ.
ತನ್ನೊಳಗೆ ಏನೂ ಇಲ್ಲವೆನ್ನುವ ಅರ್ಥವನ್ನು ಮೇಲ್ನೊಟದಲ್ಲಿ ಅನ್ನಿಸಿದರೂ ಆಂತರ್ಯದಲ್ಲಿ ಸರ್ವವನ್ನೂ ಇಂಬುಗೊಂಡಿರುವ ಶೂನ್ಯ ಅಥವಾ ಬಯಲು ಶಬ್ಧ ಅಲ್ಲಮರ ಅಮೋಘ ಪರಿಕಲ್ಪನೆ ಅದಮ್ಯ ಅಧ್ಯಾತ್ಮದ ಅನುಭೂತಿ ಹೊಂದಿದೆ. ಅಲ್ಲಮರು ಶೂನ್ಯ ಮತ್ತು ಬಯಲನ್ನು ಕೇಂದ್ರವಾಗಿಟ್ಟುಕೊಂಡು ನಿರಾಕಾರ, ನಿರ್ಗುಣನಾದ ಲಿಂಗದೇವನೊಂದಿಗಿನ ಅನುಭಾವದ ಅನುಸಂಧಾನಗೈದಿರುವುದು ಶರಣ ಸಾಹಿತ್ಯದ ಬಹು ಮುಖ್ಯ ಘಟನೆ.
ಇದೇ ಕಾರಣವಾಗಿಯೇ ಇರಬೇಕು ಶರಣರೆಲ್ಲ ಒಮ್ಮತದಿಂದ ಅನುಭವ ಮಂಟಪದ ಅಧ್ಯಕ್ಷಸ್ಥಾನವನ್ನು ಶೂನ್ಯಪೀಠ ಅಥವಾ ಶೂನ್ಯಸಿಂಹಾಸನ ಎಂಬ ವಿನೂತನ ಹಾಗೂ ಅರ್ಥಪೂರ್ಣ ಪರಿಭಾಷೆಯ ಮೂಲಕ ಗುರುತಿಸಿರುವುದು. ಅನುಭವ ಮಂಟಪ ಮತ್ತು ಶೂನ್ಯಪೀಠಗಳೆಂಬ ಶರಣರ ಪರಿಪೂರ್ಣ ಪರಿಕಲ್ಪನೆಗಳ ಗ್ರಹಿಕೆ ಅವರೆಲ್ಲರ ಅಪಾರ ಜೀವನಾನುಭವ ಮತ್ತು ಆಧ್ಯಾತ್ಮ ಜ್ಞಾನದ ತಳಹದಿಯಲ್ಲಿ ಹುಟ್ಟುಪಡೆದಂತದ್ದು. ಅದಕ್ಕೆ ಕಳಶವಿಟ್ಟಂತೆ ಅನುಭವ ಮಂಟಪದ ಶೂನ್ಯಪೀಠಕ್ಕೆ ಅಲ್ಲಮರನ್ನೇ ಪ್ರಪ್ರಥಮ ಮುಖ್ಯಸ್ಥರನ್ನಾಗಿ ಸರ್ವಾನುಮತದಿಂದ ಆರಿಸಿ ಶರಣರು ಸಂಭ್ರಮಿಸಿದರು ಮತ್ತು ಅಲ್ಲಿನ ಚಟುವಟಿಕೆಗಳನ್ನು ಅರ್ಥಪೂರ್ಣಗೊಳಿಸಿದರು.
ಹಳೆಯ ಸಂಪ್ರದಾಯವನ್ನು ನಿರಾಕರಿಸುವ ವಿಷಯದಲ್ಲಿ ಅನುಭವ ಮಂಟಪದ ಶರಣ ಸಂಕುಲದಲ್ಲಿ ಭಿನ್ನಾಭಿಪ್ರಾಯವಿರಲಿಲ್ಲವಾದರೂ ಹೊಸ ಪ್ರಯೋಗಗಳಾದ ಸ್ಥಾವರಲಿಂಗವನ್ನು ನಿರಾಕರಿಸಿ ಇಷ್ಟಲಿಂಗವನ್ನು ಸ್ವೀಕರಿಸುವ ಪ್ರಕ್ರಿಯೆಯಿಂದ ಹಿಡಿದು ಇನ್ನೂ ಅನೇಕ ವಿಷಯಗಳಲ್ಲಿ ಶರಣರನೇಕರಿಗೆ ಭಿನ್ನ ನಿಲುವುಗಳಿದ್ದವು. ಅವುಗಳೆಲ್ಲದರ ಬಗ್ಗೆ ಅನುಭವ ಮಂಟಪದಲ್ಲಿ ಆಮೂಲಾಗ್ರ ಸಂವಾದ, ಚರ್ಚೆಗಳನ್ನು ನಡೆಸುವ ಮೂಲಕ ಶರಣರು ಹೊಸ ವಿಚಾರ ಮತ್ತು ವ್ಯವಸ್ಥೆಯೊಂದರ ಜಾರಿಯನ್ನು ಅನುಮೋದಿಸುತ್ತಿದ್ದರು. ಆ ಮಟ್ಟಿಗಿನ ಆಂತರಿಕ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಅಂದಿನ ಅನುಭವ ಮಂಟಪ ನೀಡಿತ್ತು ಎನ್ನುವುದು ನಮ್ಮನ್ನೆಲ್ಲರನ್ನು ಬೆರಗುಗೊಳಿಸುವ ಸಂಗತಿ.
ಅನುಭವ ಮಂಟಪದಲ್ಲಿ ಮಂಥನವಾದ ವಿಚಾರಗಳು ವಚನಗಳೆಂಬ ಪ್ರತಿಮೆಗಳಾಗಿ ಹೊರಹೊಮ್ಮುವ ಮೂಲಕ ವಿವಿಧ ಮಾಧ್ಯಮಗಳ ಮುಖೇನ ಜನಮನವನ್ನು ತಲುಪಿಸುವ ವಿಧಾನಗಳು ಶರಣರು ಸಂಶೋಧಿಸಿ ಅನುಷ್ಠಾನಗೊಳಿಸಿದ್ದರು. ಮನಸ್ಸಿನಲ್ಲಿ ಮೂಡಿದ ಅಮೂರ್ತ ರೂಪದ ವಿಚಾರಗಳಿಗೆ ವಚನಗಳೆಂಬ ಮೂರ್ತರೂಪ ನೀಡಿದ ಶರಣರು ‘ದೇವಭಾಷೆ’ ಎಂದು ಅತಿರಂಜಿತಗೊಂಡಿದ್ದ ಅಂದಿನ ಸಂಸ್ಕೃತವೆಂಬ ಅಸಹಜ ಪಂಡಿತರ ಕ್ಲಿಷ್ಟ ಭಾಷೆಯನ್ನು ಧಿಕ್ಕರಿಸಿ ನೆಲಮೂಲದ ಆಡುಭಾಷೆ ಯಾದ ಕನ್ನಡವನ್ನು ಎತ್ತಿಹಿಡಿದರು. ಹಾಗಾಗಿ ವಚನ ಸಾಹಿತ್ಯವು ತನ್ನ ಅನನ್ಯತೆ ಮತ್ತು ಸರಳತೆಯಿಂದ ಜನಸಾಮಾನ್ಯನಿಗೆ ತಲುಪು ವಲ್ಲಿ ಸಂಪೂರ್ಣ ಯಶಸ್ವಿಯಾಯಿತು. ಅನುಭವ ಮಂಟಪ ವ್ಯವಸ್ಥೆಯು ಮೇಲು-ಕೀಳು, ಅಗ್ರಜ-ಅಂತ್ಯಜ, ಗಂಡು-ಹೆಣ್ಣು ಮುಂತಾದ ತಾರತಮ್ಯಪೂರಿತ ವೈದಿಕ ಆಚಾರಗಳನ್ನು ಧಿಕ್ಕರಿಸಿ ವರ್ಣ-ವರ್ಗ- ಲಿಂಗರಹಿತ ವೈಚಾರಿಕ ವ್ಯವಸ್ಥೆಯೊಂದನ್ನು ಅನುಷ್ಠಾನಗೊಳಿಸಿತ್ತು.
ಅಸಮಾನತೆಗೆ ಮೂಲ ಕಾರಣವಾದ ಜಾತಿವಾದವನ್ನು ತಿರಸ್ಕರಿಸಿದ ಶರಣ ಸಂಕುಲ ಅನುಭವ ಮಂಟಪವನ್ನು ಅಜ್ಞಾತರು ಮೊದಲ್ಗೊಂಡು ಸರ್ವರಿಗೂ ಮುಕ್ತ ಪ್ರವೇಶಿಸುವ ಅವಕಾಶವನ್ನು ಒದಗಿಸಿತ್ತು. ಶೋಷಿತರ ಅಜ್ಞಾನಕ್ಕೆ ಕಾರಣವಾಗಿದ್ದ ಶಿಕ್ಷಣದ ಅಭಾವವನ್ನು ನಿವಾರಿಸಲು ಅನುಭವಿ ಶರಣರಿಂದ ಪ್ರಶಿಕ್ಷಣದ ಕಾಯಕ ಅನುಭವ ಮಂಟಪದ ಮುಖ್ಯ ಚಟುವಟಿಕೆಯಾಗಿತ್ತು. ಅರಿವಿನ ಕೊರತೆಯಿಂದಾಗುವ ಅವಘಡಗಳನ್ನು ಅಕ್ಷರದ ಮೂಲಕ ಹೋಗಲಾಡಿಸುವ ಅನುಭವ ಮಂಟಪದ ಕಾರ್ಯ ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸಕ್ಕೂ ಮೀರಿದ್ದಾಗಿತ್ತೆಂದು ಹೇಳಿದರೆ ಅತಿಶಯೋಕ್ತಿಯೇನಲ್ಲ. ತಮ್ಮ ದೈನಂದಿನ ಕಾಯಕ ಮುಗಿಸಿ ಬಿಡುವಿನ ಸಮಯವನ್ನು ಶರಣರು ಅನುಭವ ಮಂಟಪದ ಕಾರ್ಯಕಲಾಪಗಳಿಗೆ ಮೀಸಲಿಡುತ್ತಿದ್ದರು. ಶರಣರ ಸಮಾಜಮುಖಿ ಚಿಂತನೆಗಳು ಅನುಭವ ಮಂಟಪಲ್ಲಿ ಅರಳಿ ವಚನಗಳ ರೂಪತಾಳುತ್ತಿದ್ದವು. ಹಾಗಾಗಿ ಅನುಭವ ಮಂಟಪವು ಒಂದು ಪ್ರಜಾಸಂಸತ್ತಷ್ಟೇ ಅಲ್ಲದೆ ಅದೊಂದು ಉನ್ನತ ಶಿಕ್ಷಣದ ಕೇಂದ್ರಸ್ಥಾನವಾಗಿಯೂ ಗುರುತಿಸಲ್ಪಟ್ಟಿತ್ತು.
ಕರ್ನಾಟಕದ ಇತಿಹಾಸದಲ್ಲಿ ಮಹೋನ್ನತ ಸಾಮಾಜಿಕ ಪಲ್ಲಟಗಳಿಗೆ ಕಾರಣವಾದ ಶರಣರ ವಚನ ಚಳವಳಿ ಮತ್ತು ಅದರ ಮೂಲನೆಲೆಯಾದ ಅನುಭವ ಮಂಟಪವು ಅತ್ಯಂತ ಮಹತ್ವದ ಮತ್ತು ಗೌರವದ ಸ್ಥಾನವನ್ನು ಕಾಯ್ದುಕೊಂಡಿದೆ. ವಿಪರ್ಯಾಸದ ವಿಷಯವೆಂದರೆ ಇಂಥಹ ವೈಚಾರಿಕ ವ್ಯವಸ್ಥೆಯೊಂದರ ಹುಟ್ಟಿಗೆ ಕಾರಣವಾಗಿರುವ ಪ್ರಗತಿಪಗರ ಶರಣಾನುಯಾಯಿಗಳೆಂದು ಗುರುತಿಸಿಕೊಂಡವರು ಅಂದು ಶರಣರು ಹೊಡೆದೋಡಿಸಲು ಪ್ರಯತ್ನಿ ಸಿದ ಶೋಷಣೆಯ ವಿಚಾರಧಾರೆಯ ತಳಹದಿಯಲ್ಲಿ ಕೆಲಸಮಾಡುವ ಕರ್ಮಠರ ಸಂಘಟನೆಗಳ ದಾಳವಾಗಿ ಗುರುತಿಸಿಕೊಳ್ಳುತ್ತಿರುವುದು. ಮತ್ತು ಆ ಮೂಲಕ ಶರಣ ತತ್ವಕ್ಕೆ ತದ್ವಿರುದ್ಧವಾದ ಮೌಢ್ಯಯುಕ್ತ ವೈದಿಕ ವ್ಯವಸ್ಥೆಯ ಭಾಗವಾಗುತ್ತಿರುವುದು.