ಟ್ರಂಪ್, ಮೋದಿ ಭೇಟಿ: ಒಂದು ಪರಾಮರ್ಶೆ

Update: 2017-07-10 18:41 GMT

ಭಾಗ -1

ಭರ್ಜರಿ ಪೂರ್ವಪ್ರಚಾರದ ನಂತರ ಜೂನ್ 25 ಮತ್ತು 26ರಂದು ಮೋದಿ ಕೈಗೊಂಡ ಐದನೆ ಅಮೆರಿಕ ಪ್ರವಾಸ ಈಗ ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡಿದೆ. ಕಳೆದ ಹಲವಾರು ವಾರಗಳಿಂದ ಮೋದಿ, ಟ್ರಂಪ್ ಭೇಟಿಯ ಸುತ್ತ ದೇಶಾದ್ಯಂತ ಒಂದು ವಿಧದ ಸಮೂಹ ಸನ್ನಿಯನ್ನು ಹುಟ್ಟುಹಾಕಿದ್ದ ತುತ್ತೂರಿ ಮಾಧ್ಯಮಗಳು ಈಗ ಎಂದಿನಂತೆ ಅದನ್ನೊಂದು ತುಂಬಾ ಸಫಲವಾದ ಭೇಟಿ ಎಂಬುದಾಗಿ ಬಣ್ಣಿಸುತ್ತಾ ಹುತ್ತವನ್ನು ಬೆಟ್ಟವೆಂದು ಬಿಂಬಿಸುತ್ತಿವೆ. ಒಂದು ವಿಧದಲ್ಲಿ ನೋಡಿದರೆ ಇದೊಂದು ವಿಶೇಷ ಭೇಟಿಯೆ ಹೌದು.

ಏಕೆಂದರೆ ಇವರಿಬ್ಬರ ಮನೋವಿಕಾರಗಳು ಈಗಾಗಲೇ ಸಾಕಷ್ಟು ಮಂದಿ ತಜ್ಞರ ವಿಶ್ಲೇಷಣೆಗೊಳಗಾಗಿವೆ! ಸಾಮಾಜಿಕ ಮಾಧ್ಯಮಗಳ ಕ್ಷೇತ್ರದಲ್ಲಿ ತಾವಿಬ್ಬರೂ ವಿಶ್ವ ಮಟ್ಟದ ನಾಯಕರೆಂದು ಟ್ರಂಪ್ ತನ್ನ ಹೇಳಿಕೆಯಲ್ಲಿ ಕೊಚ್ಚಿಕೊಂಡಿದ್ದಾರೆ. ನಿಜ, ಇಬ್ಬರಿಗೂ 3 ಕೋಟಿಗೂ ಮಿಕ್ಕಿ ಟ್ವಿಟರ್ ಅನುಯಾಯಿಗಳಿದ್ದಾರೆ. ಸಾಮಾಜಿಕ ಮಾಧ್ಯಮಗಳ ಸಮರ್ಥ ಬಳಕೆಯಲ್ಲಿ ಇವರಿಬ್ಬರನ್ನು ಮೀರಿಸುವವರು ಪ್ರಾಯಶಃ ಯಾರೂ ಇಲ್ಲ. ಆದರೆ ಇಬ್ಬರೂ ಸಾಂಪ್ರದಾಯಿಕ ಮಾಧ್ಯಮಗಳನ್ನು ಎದುರಿಸಲು ಅಸಮರ್ಥರೆನ್ನುವುದು ಮತ್ತೊಮ್ಮೆ ಸಾಬೀತಾಯಿತು.

ಅದು ಹೇಗೆಂದರೆ ಅಮೆರಿಕದಲ್ಲಿ ಮಾತುಕತೆಗಳ ನಂತರದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಯೊಬ್ಬ ಪತ್ರಕರ್ತನಿಗೆ ಎರಡು ಪ್ರಶ್ನೆಗಳಿಗೆ ಅವಕಾಶ ನೀಡುವ ಸಂಪ್ರದಾಯವಿದೆ. ಆದರೆ ಮೋದಿ, ಟ್ರಂಪ್ ಮಾತುಕತೆ ನಂತರ ಪ್ರಶ್ನೆಗಳಿಗೆ ಅವಕಾಶ ಇಲ್ಲ ಎಂದು ಮೊದಲೇ ಹೇಳಲಾಯಿತು! ಒಂದಂತೂ ನಿಚ್ಚಳ, ರಾಜಕೀಯ ಮುತ್ಸದ್ದಿತನ ಇಲ್ಲದ ಇವರನ್ನು ವಿಶ್ವ ಮಟ್ಟದ ರಾಜಕಾರಣಿಗಳೆಂದು ಕರೆಯಲು ಸಾಧ್ಯವೇ ಇಲ್ಲ. ಇಂಥವರ ಕೈಯಲ್ಲಿ ದೇಶದ ಕೀಲಿಕೈಯನ್ನು ನೀಡುವುದೆಂದರೆ ‘ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ’ ಎಂಬ ಅನುಭವದ ಮಾತುಗಳು ಈಗೀಗ ಕೇಳಿಬರತೊಡಗಿವೆ!

ಸಾಮ್ಯತೆಗಳು
ದಲಿತ, ಅಲ್ಪಸಂಖ್ಯಾತರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿಸಲು ಕಟಿಬದ್ಧವಾದ ಆರೆಸ್ಸೆಸ್‌ನ ಕಟ್ಟಾ ಅನುಯಾಯಿ ಆಗಿರುವ ನರೇಂದ್ರ ಮೋದಿ ಪ್ರಧಾನಿಯಾದ ನಂತರದಲ್ಲಿ ತನ್ನ ಮಾತೃ ಸಂಘಟನೆಯ ಅಜೆಂಡಾವನ್ನು ಚಾಚೂತಪ್ಪದೆ ಜಾರಿಗೊಳಿಸುತ್ತಿದ್ದಾರೆ. ಅದರ ಭಾಗವಾಗಿ ಭಾರತದ ಗತ ವೈಭವವನ್ನು ಮರಳಿ ಸ್ಥಾಪಿಸುವ ಗುರಿಯನ್ನು ಇಟ್ಟುಕೊಂಡಿರುವ ಮೋದಿಯ ನವ ಭಾರತ ಕಲ್ಪನೆಗೂ ಟ್ರಂಪ್‌ನ ಅಮೆರಿಕವನ್ನು ಮತ್ತೆ ಉನ್ನತಿಗೆ ಏರಿಸುವ ಕಲ್ಪನೆಗೂ ಬಹಳಷ್ಟು ಸಾಮ್ಯತೆಗಳಿವೆ. ಟ್ರಂಪ್ ಭೇಟಿಯ ವೇಳೆ ಇದನ್ನು ಪ್ರಸ್ತಾಪಿಸಿದ ಮೋದಿ ‘‘ತಮ್ಮೀರ್ವರ ಕಲ್ಪನೆಗಳು ಒಮ್ಮುಖವಾಗಿರುವುದು ತಮ್ಮ ನಡುವಿನ ಸಹಕಾರಕ್ಕೆ ಹೊಸ ಆಯಾಮಗಳನ್ನು ಸೇರಿಸುವುದೆಂಬುದು ತನ್ನ ದೃಢ ನಂಬಿಕೆಯಾಗಿದೆ’’ ಎಂದು ಹೇಳಿದ್ದಾರೆ.

ಮೋದಿ ಭಕ್ತರ ವರ್ಗವೊಂದು ಟ್ರಂಪ್‌ಭಕ್ತರೂ ಆಗಿರುವುದು ಇದೇ ಸಾಮ್ಯತೆಗಳ ಕಾರಣಕ್ಕೆ. ಚುನಾವಣೆಗೆ ಮೊದಲು ಟ್ರಂಪ್ ವಿಜಯಕ್ಕಾಗಿ ಹೋಮಹವನ ಮಾಡಿದ ಇವರು ಚುನಾವಣೆ ನಂತರ ಸಂಭ್ರಮಾಚರಣೆ ಮಾಡಿದ್ದಾರೆ. ಮೊನ್ನೆಮೊನ್ನೆ ಹರ್ಯಾಣದ ಮರೋರಾ ಎಂಬ ಹಳ್ಳಿಯ ಹೆಸರನ್ನು ‘ಟ್ರಂಪ್ ಗ್ರಾಮ’ ಎಂದು ಬದಲಾಯಿಸುವ ವಿಫಲ ಯತ್ನವೊಂದನ್ನೂ ಮಾಡಿದ್ದಾರೆ! ವಾಸ್ತವದಲ್ಲಿ ಇಂತಹ ಗತ ವೈಭವದ ಮರುಸ್ಥಾಪನೆಯ ಮಾತುಗಳು ಬಂಡವಾಳವಾದದ ಪ್ರಸಕ್ತ ಬಿಕ್ಕಟ್ಟಿನಿಂದಾಗಿ ತತ್ತರಿಸಿರುವ ಅತೃಪ್ತ ವರ್ಗಗಳನ್ನು ಸೆಳೆಯುವ ಮೂಲಕ ಅಧಿಕಾರಕ್ಕೆ ಬಂದು ಸರ್ವಾಧಿಕಾರ ಹೇರುವ ಸಂಚಿನ ಭಾಗವಲ್ಲದೆ ಇನ್ನೇನೂ ಅಲ್ಲ. ಕಳೆದ ಶತಮಾನದಲ್ಲಿ ಇಟಲಿ, ಜರ್ಮನಿಗಳಲ್ಲಿ ಆದದ್ದೂ ಇದೇ.

ಅಮೆರಿಕದ ಬಹುಪಾಲು ಜನತೆ ಮತ್ತು ಮಾಧ್ಯಮಗಳು ಟ್ರಂಪ್ ಅಧ್ಯಕ್ಷರಾದಂದಿನಿಂದಲೂ ಅವರಿಗೆ ಭಾರೀ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕದ ಪತ್ರಕರ್ತರು ತಮ್ಮ ಅಧ್ಯಕ್ಷನ ಮೇಲೆ ಮಾಡುತ್ತಿರುವಷ್ಟು ವೈವಿಧ್ಯಮಯ ಟೀಕಾಪ್ರಹಾರಗಳನ್ನು ಭಾರತ ಸೇರಿದಂತೆ ಇನ್ಯಾವ ದೇಶದ ಪತ್ರಕರ್ತರೂ ತಮ್ಮ ನಾಯಕರ ಮೇಲೆ ಮಾಡುತ್ತಿಲ್ಲ!

ಉಭಯ ನಾಯಕರ ಭೇಟಿ
ಈಗ ಈ ಉಭಯ ನಾಯಕರ ಭೇಟಿಯ ವಿಚಾರಕ್ಕೆ ಮರಳೋಣ. ಭೇಟಿಯ ಉದ್ದೇಶ ಉಭಯ ದೇಶಗಳ ನಡುವಿನ ವಾಣಿಜ್ಯ ಸಂಬಂಧಗಳು, ಯುದ್ಧತಾಂತ್ರಿಕ ಸಹಕಾರ, ಭಯೋತ್ಪಾದನೆ, ಅಫ್ಘಾನಿಸ್ತಾನ ಮುಂತಾದ ವಿಷಯಗಳ ಕುರಿತು ಮಾತುಕತೆ ನಡೆಸುವುದಾಗಿತ್ತೆಂದು ಹೇಳಲಾಗಿದೆ. ಮಾತುಕತೆಗಳ ಒಂದು ಉದ್ದೇಶ ಚೀನಾದ ಗಮನ ಸೆಳೆಯುವುದಾಗಿತ್ತೆಂದು ಹೇಳಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಉತ್ತರ ಕೊರಿಯ ತನ್ನ ಪರಮಾಣು ಮತ್ತು ಕ್ಷಿಪ್ತ ಕ್ಷಿಪಣಿಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಚೀನಾ ಒತ್ತಡ ಹಾಕದಿರುವ ಬಗ್ಗೆ ಟ್ರಂಪ್‌ಗೆ ನಿರಾಸೆಯಾಗಿರುವುದೆ ಇದಕ್ಕೆ ಕಾರಣ ಎಂದು ವರದಿ ಮಾಡಿದೆ.

ಇತ್ತೀಚಿನ ಭಾರತ, ಚೀನಾ ಗಡಿ ಸಂಘರ್ಷ ಕಾಕತಾಳೀಯವೆಂಬಂತೆ ಮೋದಿಯ ಅಮೆರಿಕ ಭೇಟಿಯ ಸಂದರ್ಭದಲ್ಲೆ ಪ್ರಾರಂಭವಾಗಿರುವುದು, ಭಾರತದ ಸಡ್ಡುಹೊಡೆಯುವ ನಿಲುವು ಟ್ರಂಪ್ ಮೇಲೆ ಪ್ರಭಾವ ಬೀರುವ ಸಲುವಾಗಿರಬಹುದು ಎಂಬ ವರ್ತಮಾನವೂ ಕೇಳಿಬರುತ್ತಿದೆ. ಗಮನಾರ್ಹವಾಗಿ ಮೋದಿ, ಟ್ರಂಪ್ ಮಾತುಕತೆಗಳ ನಂತರ ಇಬ್ಬರೂ ಪ್ರತ್ಯೇಕ, ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದು ಅವು ಬೋರ್ ಹಿಡಿಸುವಷ್ಟು ನೀತಿಪಾಠಗಳಿಂದ ತುಂಬಿತುಳುಕುತ್ತಿವೆ. ಒಳಹೊಕ್ಕು ನೋಡಿದರೆ ಅವುಗಳಲ್ಲಿ ಯಾವುದೇ ತಿರುಳಿಲ್ಲವೆಂದು ತಿಳಿಯುತ್ತದೆ. ಎಚ್1 ಬಿ ವೀಸಾ, ತೊಡಕಿನ ವಿಷಯಗಳನ್ನು ಬಹುಶಃ ಬೇಕಂತಲೇ ಹೊರಗಿಡಲಾಗಿದೆ. ಪ್ರತ್ಯೇಕ ಹೇಳಿಕೆಗಳನ್ನು ನೀಡುವುದರ ಹಿಂದೆ, ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಅವಕಾಶ ನೀಡದಿರುವುದರ ಹಿಂದೆ ಬಹುಶಃ ಇದೇ ಕಾರಣ ಇರಬೇಕು 

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News