ಟ್ರಂಪ್, ಮೋದಿ ಭೇಟಿ: ಒಂದು ಪರಾಮರ್ಶೆ
ಭಾಗ-2
ಉಭಯ ನಾಯಕರ ಹೇಳಿಕೆಗಳಲ್ಲಿರುವ ಕೆಲವೊಂದು ಮುಖ್ಯ ವಿಷಯಗಳತ್ತ ಗಮನ ಹರಿಸೋಣ.
ವಾಣಿಜ್ಯ ಸಂಬಂಧಗಳು
ಅಮೆರಿಕ, ಭಾರತ ನಡುವಿನ ವ್ಯಾಪಾರ ವಹಿವಾಟುಗಳಲ್ಲಿ ಅಮೆರಿಕ ಸುಮಾರು 31 ಬಿಲಿಯ ಡಾಲರುಗಳ ಕೊರತೆ ಎದುರಿಸುತ್ತಿದೆ ಎನ್ನಲಾಗಿದೆ. ತಾನು ಅಧಿಕಾರಕ್ಕೆ ಬಂದರೆ ಅಮೆರಿಕದ ಸರಕುಗಳನ್ನು ಹೆಚ್ಚೆಚ್ಚು ರಫ್ತು ಮಾಡುವೆ, ಅಧಿಕ ಉದ್ಯೋಗಗಳನ್ನು ಸೃಷ್ಟಿಸುವೆ ಎಂಬುದು ಟ್ರಂಪ್‌ನ ಚುನಾವಣಾ ಭರವಸೆಗಳಲ್ಲೊಂದು. ಇತ್ತೀಚೆಗೆ ಅಮೆರಿಕದ ಸಂಸದರು ಟ್ರಂಪ್‌ಗೆ ಪತ್ರ ಬರೆದು ಭಾರತ ಸರಕಾರ ಅಮೆರಿಕದಿಂದ ಆಮದು ಮತ್ತು ವಾಣಿಜ್ಯ ವಹಿವಾಟುಗಳಿಗೆ ಹೊಸ ಅಡೆತಡೆಗಳನ್ನು ಹಾಕಿದೆ ಎಂದು ದೂರಿದ ಹಿನ್ನೆಲೆಯಲ್ಲಿ ಪ್ರಸಕ್ತ ಮಾತುಕತೆಗಳು ನಡೆದಿವೆ. ಅಮೆರಿಕದ ಉತ್ಪನ್ನಗಳಿಗೆ ಭಾರತ ತನ್ನ ಬಾಗಿಲನ್ನು ಇನ್ನಷ್ಟು ತೆರೆಯಬೇಕು, ನಷ್ಟದಲ್ಲಿರುವ ಉದ್ದಿಮೆಗಳಿಗೆ ಭಾರತದಲ್ಲಿ ಮಾರುಕಟ್ಟೆ ಒದಗಿಸಿ ಆ ಮೂಲಕ ತನ್ನಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕೆಂಬುದು ಅಮೆರಿಕದ ಬಯಕೆಯಾಗಿದೆ.
ಜೊತೆಗೆ ತನ್ನಲ್ಲಿನ ನೈಸರ್ಗಿಕ ಅನಿಲವನ್ನು ಭಾರತಕ್ಕೆ ರಫ್ತು ಮಾಡಲು ಅದು ತುದಿಗಾಲಲ್ಲಿ ನಿಂತಿದೆ. ಸ್ಪೈಸ್ ಜೆಟ್ ಸಂಸ್ಥೆ ಈಗಾಗಲೇ ಅಮೆರಿಕದ ಬೋಯಿಂಗ್ ಕಂಪೆನಿಯಿಂದ 100 ಹೊಚ್ಚ ಹೊಸ ವಿಮಾನಗಳಿಗೆ ಆರ್ಡರ್ ಕೊಟ್ಟಿದೆ. ಮೋದಿ, ಟ್ರಂಪ್ ಮಾತುಕತೆಗಳ ವೇಳೆ ಅಮೆರಿಕದಿಂದ 366 ಮಿಲಿಯ ಡಾಲರ್ ಬೆಲೆಬಾಳುವ ಸಿ17 ವಿಮಾನ ಮತ್ತು 2 ಬಿಲಿಯ ಡಾಲರ್ ಬೆಲೆಯ ಮಿಲಿಟರಿ ಡ್ರೋನ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದರಿಂದ ಅಮೆರಿಕದ ಮಿಲಿಟರಿ ಉದ್ದಿಮೆಗಳಿಗೆ ಭಾರೀ ಪ್ರಯೋಜನವಾಗಲಿದೆ. ಇನ್ನೊಂದು ಮುಖ್ಯ ಬೆಳವಣಿಗೆಯಲ್ಲಿ, ಆಂಧ್ರದಲ್ಲಿ 6 ಅಣು ವಿದ್ಯುತ್ ಸ್ಥಾವರಗಳ ವಿನ್ಯಾಸ ಮತ್ತು ಸಲಹೆಯ ಗುತ್ತಿಗೆಯನ್ನು ದಿವಾಳಿ ಎದ್ದಿರುವ ಅಮೆರಿಕದ ವೆಸ್ಟಿಂಗ್‌ಹೌಸ್ ಕಂಪೆನಿಗೆ ನೀಡಲಾಗಿದ್ದು ಇದರ ಒಟ್ಟು ವೆಚ್ಚ 20 ಬಿಲಿಯ ಡಾಲರುಗಳು ಎನ್ನಲಾಗಿದೆ.
ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಬೃಹದಾಕಾರ ತಾಳಿರುವಾಗ, ನೋಟು ರದ್ದತಿಯ ಫಲವಾಗಿ ಅನೌಪಚಾರಿಕ ವಲಯ ನೆಲಕಚ್ಚಿ ಲಕ್ಷಾಂತರ ಕಾರ್ಮಿಕರು ನೌಕರಿ ಕಳೆದುಕೊಂಡಿರುವಾಗ ನಿರ್ದಿಷ್ಟವಾಗಿ ಭಾರತದ ನಿರುದ್ಯೋಗಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಬೇಡಿಕೆ ಇಟ್ಟಿರುವ ಹಾಗಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಇನ್ನಷ್ಟು ದೃಢಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿಷ್ಟೆ ಹೇಳಲಾಗಿದೆ. ಸಾವಿರಾರು ಭಾರತೀಯ ಐಟಿ ಉದ್ಯೋಗಾಕಾಂಕ್ಷಿಗಳ ಆತಂಕಕ್ಕೆ ಕಾರಣವಾದ ಎಚ್1 ಬಿ ವೀಸಾ ವಿಷಯವನ್ನು ಸದ್ದಿಲ್ಲದೆ ಕೈಬಿಡಲಾಗಿದೆ.
ಪರಿಣಾಮವಾಗಿ ಅವರೆಲ್ಲರ ಭವಿಷ್ಯ ತಕ್ಕಡಿಯಲ್ಲಿ ತೂಗುತ್ತಿದೆ. ಎರಡನೆಯದಾಗಿ ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ಹತ್ಯೆಗಳು ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಯ ವಿಚಾರವನ್ನು ಎತ್ತದಿರುವುದರ ಹಿಂದೆ ಪ್ರಾಯಶಃ ಅದು ತಿರುಗುಬಾಣವಾಗಿ ಪರಿಣಮಿಸಬಹುದು ಎಂಬ ಎಣಿಕೆ ಇರಬಹುದು. ಅಂದಹಾಗೆ ‘‘ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆಂದಿರುವ ನಮ್ಮ ಎಲ್ಲಾ ಪ್ರಮುಖ ಯೋಜನೆ, ಕಾರ್ಯಕ್ರಮಗಳಲ್ಲಿ ನಾವು ಅಮೆರಿಕವನ್ನು ನಮ್ಮ ಪ್ರಮುಖ ಪಾಲುದಾರ ಎಂದು ಪರಿಗಣಿಸುತ್ತೇವೆ’’ ಎಂದ ಮೋದಿಯ ಮಾತಿನ ಅರ್ಥವೇನೆಂದು ಯಾರಿಗೂ ಗೊತ್ತಿಲ್ಲ!
ಬಳಿಕ ಆ್ಯಪಲ್, ಗೂಗಲ್ ಸೇರಿದಂತೆ ಅಮೆರಿಕದ 20 ಕಾರ್ಪೊರೇಟ್‌ಕುಳಗಳನ್ನು ಭೇಟಿ ಮಾಡಿದ ಮೋದಿ ತನ್ನ ಸರಕಾರ ಭಾರತವನ್ನು ವಾಣಿಜ್ಯಸ್ನೇಹಿಯಾಗಿಸಲು ಸಾವಿರಾರು ಸುಧಾರಣೆಗಳನ್ನು ತಂದಿದೆ ಎಂದರು. ಆದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುವ ಸಂದರ್ಭದಲ್ಲಿ ವಾಣಿಜ್ಯಸ್ನೇಹದ ಮಾತುಗಳು ಹಾಸ್ಯಾಸ್ಪದವಾಗಿವೆ. ಸಂಸ್ಕೃತಿ ರಕ್ಷಕರು, ಗೋರಕ್ಷಕರು ಎಂದು ಹೇಳಿಕೊಳ್ಳುವ ಗುಂಪುಗಳು ಬೀದಿಬೀದಿಗಳಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ಹಲ್ಲೆ, ಕೊಲೆ ನಡೆಸುತ್ತಿರುವ ಸಂದರ್ಭದಲ್ಲಿ ಯಾರೇ ಆಗಲಿ ಹೂಡಿಕೆಗೆ ಹಿಂಜರಿಯುವ ಪ್ರಕ್ಷುಬ್ಧ ಪರಿಸ್ಥಿತಿ ಭಾರತದಲ್ಲಿದೆ. ಈ ವಿಷಯ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲ್ಲಿಯೂ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಎನ್‌ಎಸ್‌ಜಿ ಇತ್ಯಾದಿ ಗುಂಪುಗಳ ಸದಸ್ಯತ್ವ
ಇನ್ನು ಎನ್‌ಎಸ್‌ಜಿ, ಆಸ್ಟ್ರೇಲಿಯಾ ಗುಂಪು, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಮುಂತಾದ ಸಂಸ್ಥೆಗಳಲ್ಲಿ ಭಾರತದ ಸದಸ್ಯತ್ವಕ್ಕೆ ಅಮೆರಿಕ ತನ್ನ ಬೆಂಬಲ ಸೂಚಿಸುತ್ತದೆ ಎಂದು ಟ್ರಂಪ್ ಹೇಳಿಕೆ ತಿಳಿಸುತ್ತದೆ. ಆದರೆ ಈ ವಿಚಾರದಲ್ಲಿ ಹೊಸದೇನೂ ಇಲ್ಲ. ಅಮೆರಿಕದ ಈ ಬೆಂಬಲ ಸೂಚನೆಯನ್ನು ಹಲವು ವರ್ಷಗಳಿಂದಲೂ ಪುನರುಚ್ಚರಿಸಲಾಗುತ್ತಿದೆ!
ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ
ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಚರ್ವಿತ ಚರ್ವಣ ಹೇಳಿಕೆ ಎಂದಿನಂತೆ ಈ ಬಾರಿಯೂ ಹೊರಬಿದ್ದಿದೆ. ನಾವು ತೀವ್ರಗಾಮಿ ಇಸ್ಲಾಮ್‌ವಾದಿಗಳ ಭಯೋತ್ಪಾದನೆಯನ್ನು ನಿರ್ನಾಮ ಮಾಡುವೆವು ಎಂದು ಇಬ್ಬರೂ ಹೇಳಿದ್ದಾರೆ. ತನ್ನ ನೆಲವನ್ನು ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಬಳಕೆ ಮಾಡದಂತೆ ಪಾಕಿಸ್ತಾನ ನೋಡಿಕೊಳ್ಳಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ಕಾಶ್ಮೀರದ ಉಗ್ರ ಸಯ್ಯದ್ ಸಲಾಹುದ್ದೀನ್‌ಗೆ ವಿಶೇಷವಾಗಿ ಹೆಸರಿಸಲಾದ ‘ಜಾಗತಿಕ ಉಗ್ರ’ ಎಂಬ ಹಣೆಪಟ್ಟಿ ನೀಡಲಾಗಿದೆ. 2008ರ ಮುಂಬೈ ದಾಳಿಗಳು ಮತ್ತು ಕಳೆದ ವರ್ಷದ ಪಠಾಣ್‌ಕೋಟ್ ದಾಳಿಗಳ ಆಯೋಜಕರನ್ನು ಶೀಘ್ರಾತಿಶೀಘ್ರದಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದೆ.