ಸೇನ್‌ರಿಗೆ ಸೆನ್ಸಾರ್

Update: 2017-07-15 18:55 GMT

ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞರೊಬ್ಬರ ಮಾತುಗಳನ್ನು, ಪದಪ್ರಯೋಗಗಳನ್ನು ಕಿತ್ತುಹಾಕಿ ಎಂದು ಹೇಳುವುದು ಸೃಜನಶೀಲ ಮಾಧ್ಯಮವಾದ ಚಲಚ್ಚಿತ್ರ ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೆ? ವಿಶ್ವವಿಖ್ಯಾತ ಭಾರತೀಯ ಆರ್ಥ ಶಾಸ್ತ್ರಜ್ಞರೊಬ್ಬರ ಬಾಯಿಗೆ ಈ ರೀತಿ ಬೀಗ ಹಾಕುವುದು ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ನಿರಾಕರಣೆಯಲ್ಲದೆ ಮತ್ತೇನು?

ಚಲನಚಿತ್ರಗಳ ಪೂರ್ವವೀಕ್ಷಣೆ ಮಾಡಿ ಅದು ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವೇ ಇಲ್ಲವೆ ಎಂಬುದನ್ನು ನಿರ್ಧರಿಸುವ ಸೆನ್ಸಾರ್ ಬ್ರಿಟಿಷರಿಂದ ನಮಗೆ ಬಂದಿರುವ ಹಲವು ಬಳುವಳಿಗಳಲ್ಲಿ ಒಂದು. ಚಲನಚಿತ್ರಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನ ಸೆನ್ಸಾರಿಗೊಳಪಡಿಸುವ ಸಿನೆಮಾಟೊಗ್ರಾಫ್ ಶಾಸನ 1920ರಲ್ಲಿ ಜಾರಿಗೆ ಬಂತು. ಈ ಶಾಸನದನ್ವಯ ಪ್ರತಿ ಚಿತ್ರವನ್ನೂ ಸಾರ್ವಜನಿಕ ಪ್ರದರ್ಶನಕ್ಕೆ ಮುನ್ನ ಸೆನ್ಸಾರ್ ಮಂಡಳಿಗೆ ಪೂರ್ವಭಾವಿಯಾಗಿ ತೋರಿಸಿ ‘ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯ’ ಎಂದು ಸಾರುವ ಅರ್ಹತಾ ಪತ್ರವನ್ನು ಪಡೆಯ ಬೇಕೆಂಬುದು ಕಾಯ್ದೆಬದ್ಧ ನಿಯಮವಾಯಿತು.

ಬಾಂಬೆ, ಕೋಲ್ಕತಾ, ಮದ್ರಾಸ್, ರಂಗೂನ್ ಮತ್ತು ಲಾಹೋರ್‌ಗಳಲ್ಲಿ ಸೆನ್ಸಾರ್ ಮಂಡಳಿಗಳನ್ನು ಬ್ರಿಟಿಷ್ ಸರಕಾರ ರಚಿಸಿತು. ಈ ಶಾಸನ ಮಾಡಿದ ಕಾಲಘಟ್ಟದಲ್ಲಿ ಭಾರತದಲ್ಲಿ ಅಮೆರಿಕನ್ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿದ್ದವು. ಭಾರತೀಯರ ಮೇಲೆ ಅಮೆರಿಕನ್ ಚಿತ್ರಗಳ ಪ್ರಭಾವವನ್ನು ಬ್ರಿಟಿಷರಿಂದ ಸಹಿಸಲಾಗಲಿಲ್ಲ. ಚಲಚ್ಚಿತ್ರಗಳಲ್ಲಿ ನಗ್ನತೆ, ಮದ್ಯಪಾನ ಮಾಡುವ ಮಹಿಳೆಯರು, ಪೌರಾತ್ಯ ಪುರುಷರೊಂದಿಗೆ ಪಾಶ್ಚಾತ್ಯ ಮಹಿಳೆಯರ ಪ್ರಣಯ ಸಲ್ಲಾಪ ಮೊದಲ್ಗೊಂಡು ಬಿಳಿಯರನ್ನು ದೋಷಯುಕ್ತವಾಗಿ ತೋರಿಸುವುದು ಸರಿಯಲ್ಲ. ಇವೆಲ್ಲವನ್ನೂ ಚಿತ್ರದಲ್ಲಿ ತೋರಿಸುವುದರಿಂದ ಪಶ್ಚಿಮದ ಮಾನ ಮುಕ್ಕಾಗುವುದು ಎನಿಸಿತು ಅಂದಿನ ಬ್ರಿಟಿಷ್ ಆಡಳಿತಕ್ಕೆ. ಇದು ಸೆನ್ಸಾರ್ ಜಾರಿಗೆ ತರಲು ಪ್ರೇರಣೆಯಾಯಿತು. ಭಾರತೀಯರು ಚಲಚ್ಚಿತ್ರಗಳಲ್ಲಿ ನೋಡಬಾರದ್ದು ಕೇಳಬಾರದ್ದು ಪಟ್ಟಿಯಲ್ಲಿ ಪ್ರಭಾವಿಸಬಹುದಾದ ರಾಜಕೀಯ ಸಿದ್ಧಾಂತಗಳು ಮತ್ತು ಯುದ್ಧ ದೃಶ್ಯಗಳು, ಸಮಾಚಾರಗಳೂ ಸೇರಿಕೊಂಡವು.

  ನೋಡಬಾರದ್ದನ್ನು ನೋಡುವ, ಕೇಳಬಾರದ್ದನ್ನು ಕೇಳಿಸಿಕೊಳ್ಳುವ ಕುತೂಹಲ ಮಾನವಸಹಜವಾದದ್ದು. ಎಂದೇ ಸೆನ್ಸಾರ್ ಶುರುವಾದಂದಿನಿಂದಲೇ ಅದರ ವಿರುದ್ಧ ಪ್ರತಿಭಟನೆಯೂ ಶುರುವಾಗಿರಬೇಕು. ಸೆನ್ಸಾರಿನ ಅಗತ್ಯತೆ ಮತ್ತು ಅದರ ನಿಯಮಗಳ ಅಧ್ಯಯನಕ್ಕಾಗಿ ಬ್ರಿಟಿಷ್ ಸರಕಾರ 1927ರ ಅಕ್ಟೋಬರ್‌ನಲ್ಲಿ ಟಿ.ರಂಗಾಚಾರ್ ಎಂಬವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಜನರನ್ನು ಅನೀತಿಮಾರ್ಗಕ್ಕೆ ಹಚ್ಚುವ, ಧಾರ್ಮಿಕ ಭಾವನೆಗಳನ್ನು ನೋಯಿಸುವ, ಧರ್ಮಗಳ ನಡುವೆ ವಿರಸ ಉಂಟುಮಾಡಬಹುದಾದ ಚಿತ್ರಗಳ ಪ್ರದರ್ಶನ ನಿರ್ಬಂಧಿಸಲು ಭಾರತದಲ್ಲಿ ಚಲಚ್ಚಿತ್ರಗಳನ್ನು ಸೆನ್ಸಾರ್ ಮಾಡಲು ಅಂಥದೊಂದು ವ್ಯವಸ್ಥೆಯ ಅಗತ್ಯವಿದೆ ಎಂದು ರಂಗಾಚಾರ್ ಸಮಿತಿ ಶಿಫಾರಸು ಮಾಡಿತು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಸರಕಾರಗಳೂ ಇದೇ ‘ಘನ’ಉದ್ದೇಶಗಳಿಂದ ಸೆನ್ಸಾರ್ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ.ಇದರ ವಿರುದ್ಧ ಪ್ರತಿಭಟನೆಯ/ಆಕ್ಷೇಪಣೆಯ ದನಿಗಳೂ ನಿಂತಿಲ್ಲ. ಇಂಥ ದನಿ ಕೇಳಿ ಬಂದಾಗಲೆಲ್ಲ ಸಮಿತಿಯೊಂದನ್ನು ನೇಮಕ ಮಾಡುವುದು ಸರಕಾರಕ್ಕೆ ಪರಿಪಾಟವಾಗಿ ಹೋಗಿದೆ. ಸೆನ್ಸಾರ್ ವ್ಯವಸ್ಥೆ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಬಗ್ಗೆ ಅಧ್ಯಯನ ನಡೆಸಿ ವರದಿ ಮಾಡಲು 1969ರಲ್ಲಿ ಖೋಸ್ಲಾ ಸಮಿತಿಯನ್ನು ರಚಿಸಲಾಯಿತು. ಸ್ವಾಯತ್ತ ಅಧಿಕಾರವುಳ್ಳ ಸೆನ್ಸಾರ್ ಮಂಡಳಿ ರಚಿಸಲು ಖೋಸ್ಲಾ ಸಮಿತಿ ಶಿಫಾರಸು ಮಾಡಿತು.

ಜೊತೆಗೆ ಚುಂಬನ, ನಗ್ನತೆ, ಹಿಂಸೆ ಇವುಗಳು ಚಿತ್ರಕಥೆಯ ಅಂತರ್ಗತ ಅಂಶಗಳಾಗಿದ್ದರೆ ಅವುಗಳನ್ನು ತೋರಿಸಲು ಆಕ್ಷೇಪವಿರಬಾರದು ಎಂದೂ ಖೋಸ್ಲಾ ಸಮಿತಿ ಶಿಫಾರಸು ಮಾಡಿತು. ಅಷ್ಟರಲ್ಲಿ ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯಿಂದಾಗಿ ಇನ್ನೂ ಹೆಚ್ಚು ಕಟ್ಟುನಿಟ್ಟಾದ ಸೆನ್ಸಾರ್ ನಿಯಮಗಳು ಜಾರಿಗೆ ಬಂದವು. ‘ಕಿಸ್ಸಾ ಕುರ್ಸಿಕಾ’ದಂಥ ರಾಜಕೀಯ ವಿಡಂಬನೆಗಳ ಪ್ರದರ್ಶನವನ್ನು ನಿಷೇಧಿಸಲಾಯಿತು. ನಂತರ ಬಂದ ಸರಕಾರಗಳೂ ಇದೇ ಸೆನ್ಸಾರ್ ನೀತಿ ಅನುಸರಿಸುತ್ತಾ ಬಂದಿವೆ. ಚಿತ್ರೋದ್ಯಮ ಸೆನ್ಸಾರ್ ವಿರುದ್ಧ ಪ್ರತಿಭಟಿಸುತ್ತಲೇ ಬಂದಿದೆ. ಈ ವಿಷಯದಲ್ಲಿ ಬಿಜೆಪಿ ಸರಕಾರವೂ ಇದಕ್ಕೆ ಹೊರತಲ್ಲ.

ಅದು ಅಧಿಕಾರಕ್ಕೆ ಬಂದ ತರುವಾಯದಲ್ಲೇ ಸೆನ್ಸಾರ್ ಮಂಡಳಿಯನ್ನು ತನ್ನ ಪಕ್ಷದ ಹಿಂಬಾಲಕ ಪೆಹಜ್ ನಿಹಲಾನಿಯವರ ಅಧ್ಯಕ್ಷತೆಯಲ್ಲಿ ಪುನರ್ರಚಿಸಿತು. ಸೆನ್ಸಾರ್ ಬಗ್ಗೆ ಪ್ರತಿಭಟನೆ ವಿರೋಧಗಳು ವ್ಯಕ್ತವಾದಾಗ ಬಿಜೆಪಿ ಸರಕಾರಕ್ಕೆ ಯುಪಿಎ ಸರಕಾರ ನೇಮಿಸಿದ್ದ ಮುದ್ಗಲ್ ಸಮಿತಿ ವರದಿ ಪಥ್ಯವೆನಿಸಲಿಲ್ಲ. 2016ರ ಜನವರಿ 1ರಂದು ಖ್ಯಾತ ಚಿತ್ರ ನಿರ್ದೇಶಕ ಶ್ಯಾಂ ಬೆನಗಲ್ ಅವರ ಅಧ್ಯಕ್ಷತೆಯಲ್ಲಿ ಸೆನ್ಸಾರ್ ನಿಯಮಗಳನ್ನು ಅಧ್ಯಯನ ಮಾಡಿ ಮತ್ತು ಮಾನದಂಡಗಳಲ್ಲಿ ಪರಿಷ್ಕಾರಗಳನ್ನು ಸೂಚಿಸಲು ಮತ್ತೊಂದು ಸಮಿತಿಯನ್ನು ರಚಿಸಿತು. ಶ್ಯಾಮ್ ಬೆನಗಲ್ ಸಮಿತಿ ವರದಿ ಸಲ್ಲಿಸಿಯೂ ಆಗಿದೆ. ಆದರೆ ಸರಕಾರಕ್ಕೆ ಇನ್ನೂ ಅದರ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಶ್ಯಾಮ್ ಬೆನಗಲ್ ಸಮಿತಿಯೂ ಸೆನ್ಸಾರ್ ನಿಯಮಗಳಲ್ಲಿ ಕ್ರಾಂತಿಕಾರಕ ಬದಲಾವಣೆಯ ಶಿಫರಸುಗಳನ್ನೇನೂ ಮಾಡಿಲ್ಲ.

ಅದೂ ಸಹ 1952ರ ಶಾಸನದ (59ಬಿ) ವಿಧಿಗೆ ವಿರುದ್ಧವಾದುದಕ್ಕೆ ಅನುಮತಿ ನೀಡಬಾರದೆಂದು ಶಿಫಾರಸು ಮಾಡಿದೆ. (1952ರ ಶಾಸನದನ್ವಯ ಕೇಂದ್ರ ಸರಕಾರ ಒಂದು ಚಿತ್ರದಲ್ಲಿ ಯಾವುದೆಲ್ಲ ನಿಷಿದ್ಧ ಎನ್ನುವ ಒಂಬತ್ತು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ). ಸೆನ್ಸಾರ್ ಮಂಡಳಿ ಒಂದು ಚಿತ್ರದ ಯಾವುದೇ ಸನ್ನಿವೇಶ ಸಂದರ್ಭಗಳನ್ನು ಬಿಂಬಿಸುವ ದ್ರಶ್ಯಗಳಿಗೆ ಕತ್ತರಿ ಪ್ರಯೋಗಮಾಡುವಂತಿಲ್ಲ ಎಂಬುದು ಶ್ಯಾಂ ಬೆನಗಲ್ ಸಮಿತಿಯ ಮುಖ್ಯ ಶಿಫಾರಸು. ಇದನ್ನು ಚಿತ್ರೋದ್ಯಮ ಸ್ವಾಗತಿಸಿದೆಯಾದರೂ ಅದಿನ್ನೂ ಜಾರಿಗೆ ಬಂದಿಲ್ಲ. 1952ರ ಶಾಸನ 5(ಬಿ)91)ವಿಧಿಯನ್ನು ಉಲ್ಲಂಘಿಸದೆಯೂ ಯಾವುದೇ ದೃಶ್ಯಕ್ಕೆ ಕತ್ತರಿ ಪ್ರಯೋಗಮಾಡದೆಯೂ ಯಾವ ರೀತಿ ಪ್ರದರ್ಶನ ಯೋಗ್ಯ ಎನ್ನುವ ಅರ್ಹತಾ ಪತ್ರ ನೀಡಬಹುದು ಎಂಬುದನ್ನು ಬೆನಗಲ್ ಅವರೇ ವಿಶದೀಕರಿಸಬೇಕು.

ಸೆನ್ಸಾರನ್ನು ರದ್ದುಮಾಡಿ ಎನ್ನುವುದೇ ಈ ಶಿಫಾರಸಿನ ಮುಗುಮ್ಮಾದ ಅರ್ಥ ಎಂದು ವ್ಯಾಖ್ಯಾನಿಸುವವರೂ ಇದ್ದಾರೆ. ಈಗಿರುವಂತೆ ಚಿತ್ರವೊಂದರ ಪ್ರತೀ ಮಾತು, ಪ್ರತೀ ದೃಶ್ಯವನ್ನೂ ಶಾಸನದ ಈ ವಿಧಿಯ ಭೂತಗನ್ನಡಿಯಲ್ಲಿ ನೋಡಿ, ವ್ಯಾಖ್ಯಾನಿಸಿ ಅದಕ್ಕೆ ದೇಶದ್ರೋಹಿ, ಧರ್ಮದ್ರೋಹಿ, ಸಮಾಜದ ಒಂದು ವರ್ಗದ ಭಾವನೆಗಳನ್ನು ನೋಯಿಸುತ್ತದೆ ಇತ್ಯಾದಿ ಹಣೆಪಟ್ಟಿಗಳನ್ನು ಹಚ್ಚಬಹುದಾದ ಸಾಧ್ಯತೆಯೇ ಹೆಚ್ಚು.

ಶ್ಯಾಮ್ ಬೆನಗಲ್ ಸಮಿತಿ ಶಿಫಾರಸುಗಳನ್ನು ಸರಕಾರ ಇನ್ನೂ ಒಪ್ಪಿಕೊಂಡಿಲ್ಲವಾದ್ದರಿಂದ ಸೆನ್ಸಾರ್ ಮಂಡಳಿಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ‘ಲಿಪ್ ಸ್ಟಿಕ್ ಇನ್ ಮೈ ಬುರ್ಕಾ’ ಚಿತ್ರಕ್ಕೆ ಅನುಮತಿ ನಿರಾಕರಿಸಿದ್ದು ಈಗ ಸರ್ವ ವೇದ್ಯ. ಹಾಗೆಯೇ ‘ನಾಮ್ ಶಬಾನ’ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗವಾಗಿರುವುದೂ ಈಗ ಹಳೆಯ ಸುದ್ದಿ. ಯಾವ ಸರಕಾರ ಬಂದರೂ ಅದು ಮೊದಲು ಯೋಚಿಸುವುದು ತನ್ನ ಹಿಡಿತದಲ್ಲಿರುವ ಮಾಧ್ಯಮಗಳನ್ನು ತನ್ನ ಹಿತಕ್ಕೆ ಎಷ್ಟರಮಟ್ಟಿಗೆ ಬಳಸಿಕೊಳ್ಳಬಹುದು ಎಂದು. ಇದು ಸಹಜ.

ಮೋದಿಯವರ ಸರಕಾರವೂ ಇದಕ್ಕೆ ಹೊರತಲ್ಲ. ಸರಕಾರಿ ಮಾಧ್ಯಮಗಳಾದ ಆಕಾಶವಾಣಿ, ದೂರದರ್ಶನ ಸಾಧನಗಳನ್ನು ಸ್ವಪ್ರಚಾರಕ್ಕೆ ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಮೋದಿ ಸರಕಾರ ಮತ್ತೊಂದು ಪ್ರಬಲ ಮಾಧ್ಯಮವಾದ ಸಿನೆಮಾ ರಂಗವನ್ನೂ ಬಳಸಿಕೊಳ್ಳುವ ಹುನ್ನಾರ ನಡೆಸಿರುವಂತಿದೆ. ಸಿನೆಮಾ ಮಾಧ್ಯಮದಿಂದ ತನ್ನ ಪರ ಪ್ರಚಾರವಲ್ಲದಿದ್ದರೂ ವಿರೋಧಿ ಸಂದೇಶ ಜನತೆಗೆ ಮುಟ್ಟಬಾರದು. ತನ್ನ ವಿರೋಧಿ ರಾಜಕೀಯ ತತ್ವ ಸಿದ್ಧಾಂತಗಳಿಗೆ ಪ್ರಚಾರ ಸಿಕ್ಕಬಾರದು ಎಂಬುದು ಅದರ ಆಲೋಚನಾ ಧಾಟಿ ಇದ್ದಂತಿದೆ. ಭಿನ್ನಮತ, ವ್ಯವಸ್ಥೆಯ ವಿರೋಧಿ ಎನ್ನಬಹುದಾದಂಥ ಪ್ರಯತ್ನಗಳನ್ನು ಸುಲಭವಾಗಿ ದೇಶದ್ರೋಹಿ, ಬಹುಜನ ಸಮುದಾಯದ ಭಾವನೆಗಳಿಗೆ ನೋವುಂಟುಮಾಡುತ್ತದೆ, ಕೋಮು ಸೌಹಾರ್ದಕ್ಕೆ ಭಂಗತರುತ್ತದೆ ಇತ್ಯಾದಿ ಕಲಮುಗಳಡಿ ಗಲ್ಲಿಗೇರಿಸಲು ಅಧಿಕಾರಾರೂಢ ಪಕ್ಷಗಳು ಹಿಂದೆಗೆಯುವುದಿಲ್ಲ.

ಸರಕಾರದ ಇಂಥ ಸುಪ್ತ ಬಯಕೆಗಳನ್ನು ಈಡೇರಿಸಲು ಅದರ ಕೃಪೆಯಿಂದ ನೇಮಕಗೊಂಡಿರುವ ಸಮಿತಿಗಳು, ಮಂಡಳಿಗಳು ಟೊಂಕಕಟ್ಟಿ ನಿಂತಿರುತ್ತವೆ. ಈಗ ಬಿಜೆಪಿ ಸರಕಾರವೂ ಮಾಡುತ್ತಿರುವುದು ಇದನ್ನೇ. ಇತ್ತೀಚಿನ ಉದಾಹರಣೆ, ವಿಶ್ವವಿಖ್ಯಾತ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರನ್ನು ಕುರಿತ ಸಾಕ್ಷ್ಯ ಚಿತ್ರವೊಂದಕ್ಕೆ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿದ್ದು ಇದರಿಂದಾಗಿ ದೊಡ್ಡ ವಿವಾದವೊಂದು ಹುಟ್ಟಿಕೊಂಡಿದೆ. ಬಂಗಾಳಿ ಚಲನಚಿತ್ರ ನಿರ್ದೇಶಕ ಸುಮನ್ ಘೋಷ್, ಅಮರ್ತ್ಯ ಸೇನ್ ಅವರ ಬದುಕು ಬರಹ-ವಿಚಾರಧಾರೆ- ಸಾಧನೆಗಳನ್ನು ಬಿಂಬಿಸುವ ‘ದಿ ಆರ್ಗ್ಯುಮೆಂಟಿವ್ ಇಂಡಿಯನ್’ ಎಂಬ ಸಾಕ್ಷ್ಯ ಚಿತ್ರವೊಂದನ್ನು ತಯಾರಿಸಿದ್ದಾರೆ.

ಈ ಚಿತ್ರಕ್ಕೆ ಸಾರ್ವಜನಿಕ ಪ್ರದರ್ಶನ ಯೋಗ್ಯವಾದ ಚಿತ್ರ ಎಂದು ಅರ್ಹತಾ ಪತ್ರ ನೀಡಲಾಗದೆಂದು ಕೇಂದ್ರ ಚಲಚ್ಚಿತ್ರ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಕಚೇರಿ ತಿಳಿಸಿದೆ. ಕಾರಣ:ಚಿತ್ರದಲ್ಲಿ, ‘ಗುಜರಾತ್’, ‘ಕೌ’(ಗೋವು), ‘ಹಿಂದೂ’, ‘ಹಿಂದುತ್ವ’ ಇಂಥ ಪದಗಳನ್ನು ಬಳಸಲಾಗಿದೆ.ಇವೆಲ್ಲ ನಾವೆಲ್ಲರೂ ದಿನನಿತ್ಯದ ವ್ಯವಹಾರದಲ್ಲಿ ಬಳಸುವ ಪದಗಳೇ.ಇದಕ್ಕೆ ಸೆನ್ಸಾರ್ ಆಕ್ಷೇಪ ಏಕೋ ತಿಳಿಯದು ಹಾಗೂ ಈ ಪದಗಳೆಲ್ಲ ಕೇಂದ್ರದಲ್ಲಿ ಈಗ ಅಧಿಕಾರದಲ್ಲಿರುವ ಬಿಜೆಪಿ ಸರಕಾರಕ್ಕೆ ಹಾಗೂ ಅದರ ಹೈಕಮಾಂಡ್ ಆರೆಸ್ಸೆಸ್‌ಗೆ ಪ್ರಿಯವಾದ ಪದಗಳೇ. ಆದರೂ ಆಕ್ಷೇಪ ಏಕೆ?

ಚಿತ್ರದಲ್ಲಿ ಈ ಪದಗಳನ್ನು ಯಾವ ಸಂದರ್ಭದಲ್ಲಿ, ಯಾವ ಧ್ವನಿಧ್ವನ್ಯಾರ್ಥಗಳಲ್ಲಿ ಬಳಸಲಾಗಿದೆಯೋ ನಮಗೆ ತಿಳಿಯದು. ಈ ಪದಗಳನ್ನು ಸ್ವತ: ಅಮರ್ತ್ಯ ಸೇನರೇ ತಮ್ಮ ಅಭಿಪ್ರಾಯಗಳನ್ನು ದಾಖಲಿಸುವಾಗ ಬಳಸಿರಬಹುದು. ಹಾಗೆ ಬಳಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದೆ ಅಥವಾ ಅವರ ಬಗ್ಗೆ ಮಾತನಾಡಿರುವವರು ಅಥವಾ ಚಿತ್ರದ ನಿರೂಪಕರು ಬಳಸಿದ್ದಲ್ಲಿ ಅಂಥ ಸ್ವಾತಂತ್ರ್ಯ ಚಿತ್ರದ ನಿರ್ದೇಶಕರೂ ಸೇರಿದಂತೆ ಎಲ್ಲರಿಗೂ ಇದೆ. ಆದರೆ ಇದೆಲ್ಲ ಅಪ್ರಸ್ತುತ. ಮುಖ್ಯ ಸಂಗತಿ ಎಂದರೆ ಈ ಪದಗಳ ಬಳಕೆ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪಣೆ ಏಕೆ ಎಂಬುದು. ಇವೇನೂ ನಿಷೇಧಿತ ಪದಗಳಲ್ಲ. ಭಾಷೆಗೊಂದು ಚರಿತ್ರೆ ಇರುವಂತೆ ಈ ಪದಗಳ ಹಿಂದೆಯೂ ಇತಿಹಾಸ ಇರಬಹುದು.ಅನೇಕರಿಗೆ ಅದು ಅಪಥ್ಯವಾಗಬಹುದು. ಉದಾಹರಣೆಗೆ ಗುಜರಾತ್ ಎಂದರೆ ಕೆಲವರಿಗೆ ದು:ಸ್ವಪ್ನ ಕಂಡಂತಾಗಬಹುದು.

ಇನ್ನು ಕೆಲವರಿಗೆ ಅಪರಾಧಪ್ರಜ್ಞೆಯಾಗಿ ಕಾಡಬಹುದು (ಆತ್ಮಸಾಕ್ಷಿಯಿದ್ದಲ್ಲಿ).ಅಂತೆಯೇ ಗೋವು ಎಂದರೆ ಕೆಲವರಿಗೆ ಮೈಪುಳಕಗೊಳ್ಳಬಹುದು, ಇನ್ನು ಕೆಲವರಿಗೆ ಮೈನಡುಕ ಉಂಟಾಗಬಹುದು. ಹಾಗೆಂದು ಆ ಪದಗಳನ್ನು ಚಲಾವಣೆಯಿಂದ ತೆಗೆದು ಹಾಕಲು ಸಾಧ್ಯವೇ? ತೆಗೆದು ಹಾಕಿದರೂ ಅದರ ಚರಿತ್ರೆಯನ್ನು ಅಳಿಸಿಹಾಕಲು ಸಾಧ್ಯವೇ? ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗೆ ಜನ್ಮಕೊಟ್ಟ ಹಾಗೂ ಒಂದು ಸಮುದಾಯದ ಜನರ ಬದುಕುವ ಹಕ್ಕನ್ನು ಕೊಂದ ಮತ್ತೊಬ್ಬ ‘ಮಹನೀಯನಿಗೆ’ ಜನ್ಮಕೊಟ್ಟ ವಿಪರ್ಯಾಸದ ಗುಜರಾತನ್ನು ಚರಿತ್ರೆ ಮರೆಯಲು ಸಾಧ್ಯವೇ?

ಆಮರ್ತ್ಯ ಸೇನರ ಬಗ್ಗೆ ಆರೆಸ್ಸೆಸ್ ಮತ್ತು ಬಿಜೆಪಿಗಳ ಪೂರ್ವಾಗ್ರಹಗಳು ಇತ್ತೀಚಿನ ವಿದ್ಯಮಾನಗಳನ್ನು(ನೋಟು ಅಮಾನ್ಯೀಕರಣ ನಂತರದ ಇತ್ಯಾದಿ)ಬಲ್ಲವರಿಗೆ ಆಶ್ಚರ್ಯಚಕಿತಗೊಳಿಸುವಂಥಾದ್ದೇನೂ ಅಲ್ಲ. ತನ್ನೆಜಮಾನರುಗಳನ್ನು ಸುಪ್ರೀತಗೊಳಿಸುವ ಉತ್ಸಾಹದಲ್ಲಿ ಸೆನ್ಸಾರ್ ಮಂಡಳಿ ಈ ಪದಗಳನ್ನು ಕಿತ್ತು ಹಾಕುವಂತೆ ಆದೇಶಿಸಿರುವುದು ಎಷ್ಟರಮಟ್ಟಿಗೆ ಸರಿಯಾದ ತೀರ್ಮಾನ? ವಿಶ್ವ ವಿಖ್ಕಾತ ಅರ್ಥಶಾಸ್ತ್ರಜ್ಞರೊಬ್ಬರ ಮಾತುಗಳನ್ನು, ಪದಪ್ರಯೋಗಗಳನ್ನು ಕಿತ್ತುಹಾಕಿ ಎಂದು ಹೇಳುವುದು ಸೃಜನಶೀಲ ಮಾಧ್ಯಮವಾದ ಚಲಚ್ಚಿತ್ರ ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಲ್ಲವೆ? ವಿಶ್ವವಿಖ್ಯಾತ ಭಾರತೀಯ ಆರ್ಥ ಶಾಸ್ತ್ರಜ್ಞರೊಬ್ಬರ ಬಾಯಿಗೆ ಈ ರೀತಿ ಬೀಗ ಹಾಕುವುದು ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ನಿರಾಕರಣೆಯಲ್ಲದೆ ಮತ್ತೇನು? ಈ ಪದಗಳನ್ನು ಚಿತ್ರದಿಂದ ಕಿತ್ತು ಹಾಕುವುದು ಸಾಧ್ಯವಿಲ್ಲ ಎಂದಿದ್ದಾರೆ ನಿರ್ದೇಶಕರು.

ತೆಗೆಯದಿದ್ದರೆ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ಇಲ್ಲ ಎನ್ನುತ್ತದೆ ಸೆನ್ಸಾರ್ ಮಂಡಳಿ. ಸೆನ್ಸಾರ್ ಮಂಡಳಿಯ ಈ ನಿರ್ಧಾರದಿಂದ ನಿರ್ದೇಶಕರು ಮತ್ತು ಚಿತ್ರದ ಕೇಂದ್ರಬಿಂದುವಾದ ಅಮರ್ತ್ಯ ಸೇನ್‌ರ ಅಭಿವ್ಯಕ್ತಿ ಸ್ವಾತಂತ್ರ್ಯಹರಣವಷ್ಟೇ ಅಲ್ಲ, ಅದನ್ನು ವೀಕ್ಷಿಸುವುದರಿಂದ ವಂಚಿತರಾದ ಈ ದೇಶದ ಪ್ರಜೆಗಳ ಮಾಹಿತಿ ಹಕ್ಕು ಸ್ವಾತಂತ್ರ್ಯದ ಹರಣವೂ ಆಗಿದೆ. ಈ ಪದಗಳನ್ನು ಏಕೆ ತೆಗೆದು ಹಾಕಬೇಕು? ಅವು ಹೇಗೆ ಆಕ್ಷೇಪಣಾರ್ಹ? ಎಂಬುದಕ್ಕೆ ಸೆನ್ಸಾರ್ ಮಂಡಳಿ ಏನು ಕಾರಣಗಳನ್ನು ನೀಡಿದೆಯೋ ತಿಳಿಯದು. ಇದರಿಂದ ಸಾರ್ವಜನಿಕ ಶಾಂತಿ ಕದಡಲಿದೆಯೇ? ಕೋಮು ದ್ಷೇಷ ಹಗೆತನಗಳು ಕೆರಳಲಿದೆಯೆ? ಸೆನ್ಸಾರ್ ಮಂಡಳಿ ಹೌದು ಎನ್ನಬಹುದು. ಆದರೆ ಒಂದು ಚಿತ್ರದ ಪ್ರದರ್ಶನವನ್ನು ನಿಷೇಧಿಸುವುದರಿಂದ ಗತಕಾಲದ ಚರಿತ್ರೆಯಿಂದ ಜನರನ್ನು ವಿಮುಖಗೊಳಿಸಲಾಗದು ಎಂಬುದನ್ನು ಸೆನ್ಸಾರ್ ಮಂಡಳಿ ತನ್ನ ಸ್ವಾಯತ್ತತೆಯ ಕಕ್ಷೆಯೊಳಗೇ ಅರಿತುಕೊಳ್ಳುವುದು ಕ್ಷೇಮ. ಗುಜರಾತಾಗಲೀ, ಗೋವಿನ ಬಾಲ ಹಿಡಿದಿರುವ, ಹಿಂದುತ್ವಕ್ಕೆ ಜೋತು ಬಿದ್ದಿರುವ ಪಕ್ಷವಾಗಲೀ ಇದೆಲ್ಲವನ್ನೂ ತನ್ನ ಉಡಿಯಲ್ಲಿ ಕಟ್ಟಿಕೊಂಡೇ ಭವಿಷ್ಯವನ್ನು ಎದುರಿಸ ಬೇಕಾಗುತ್ತದೆ ಎಂಬುದನ್ನು ಮರೆಯಲಾಗದು.

ಅಕ್ಷೇಪಿತ ಪದಗಳನ್ನು ಕೈಬಿಡಲು ನಿರಾಕರಿಸಿರುವ ನಿರ್ದೇಶಕ ಸುಮನ್ ಘೋಷ್ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಸೆನ್ಸಾರ್ ಮಂಡಳಿಯ ಈ ತೀರ್ಪು ಆಗಲೇ ಸಾಕಷ್ಟು ತೀವ್ರ ಪ್ರತಿಕ್ರಿಯೆಗೆಡೆ ಮಾಡಿಕೊಟ್ಟಿದೆ. ‘‘ಈ ಚಿತ್ರವನ್ನು ನಾನು ಮಾಡಿಲ್ಲ. ಈ ಚಿತ್ರದ ವಸ್ತು ನಾನು. ಏನು ಹೇಳ ಬೇಕೋ ಅದನ್ನು ಚಿತ್ರದ ನಿರ್ದೇಶಕರೇ ಹೇಳಬೇಕು’’ ಎನ್ನುತ್ತಾರೆ ಅಮರ್ತ್ಯ ಸೇನ್. ‘‘ಇದು ವಿರೋಧಿ ಧ್ವನಿಗಳ, ಭಿನ್ನದನಿಗಳ ಮೇಲಣ ಆಕ್ರಮಣ’’ ಎನುತ್ತಾರೆ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ.ವಿರೋಧದ ಪ್ರತಿಯೊಂದು ದನಿಯನ್ನೂ ಹತ್ತಿಕ್ಕಲಾಗುತ್ತಿದೆ.

‘‘ಡಾ. ಅಮರ್ತ್ಯ ಸೇನ್‌ರಂಥ ಪ್ರತಿಷ್ಠಿತ ವ್ಯಕ್ತಿಗಳೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶವಿಲ್ಲ ಎಂದಾದಲ್ಲಿ ಜನಸಾಮಾನ್ಯರಿಗೆ ಇನ್ನಾವ ಭರವಸೆ ಉಳಿದಿದೆ’’ ಎಂದಿರುವ ಮಮತಾ ಬ್ಯಾನರ್ಜಿಯವರ ಮಾತು ಸತ್ಯಕ್ಕೆ ದೂರವಾದುದಲ್ಲ. ಹಿರಿಯ ಚಲನಚಿತ್ರ ನಿರ್ದೇಶಕ ಸೌಮಿತ್ರ ಚಟರ್ಜಿ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ‘ಕ್ರೌರ್ಯಾನಂದ’ ಎಂದು ಬಣ್ಣಿಸಿದ್ದಾರೆ. ‘‘ಇಂಥ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದ ಭಾರತ ಎಂದು ದೇಶದ ಕೀರ್ತಿ ಗೌರವಗಳಿಗೆ ಕಳಂಕ ತರಲಿವೆ’’ ಎನ್ನುತ್ತಾರೆ ಬಂಗಾಳಿ ಸಾಹಿತಿ ನವನೀತ ದೇವ ಸೇನ್. ಹೀಗೆ ಸಾಹಿತಿ/ಕಲಾವಿದ/ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ನಾನಾ ರೀತಿಯಲ್ಲಿ ದಮನಕ್ಕೊಳಗಾಗುತ್ತಿದ್ದರೂ ಮೋದಿ ಸರಕಾರ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ ಎಂದು ಬೂಟಾಟಿಕೆಯ ಮಾತುಗಳನ್ನಾಡುತ್ತ ಆತ್ಮವಂಚನೆ ಮಾಡಿಕೊಳ್ಳುತ್ತಿದೆ, ಲೋಕವನ್ನೂ ವಂಚಿಸುತ್ತಿದೆ.

Writer - ಜಿ. ಎನ್.ರಂಗನಾಥ್ ರಾವ್

contributor

Editor - ಜಿ. ಎನ್.ರಂಗನಾಥ್ ರಾವ್

contributor

Similar News

ನಾಸ್ತಿಕ ಮದ