ನಗರದಲ್ಲಿ ಬೈಕ್‌ಗಳ ಕರ್ಕಶ ಶಬ್ದ: ನಾಗರಿಕರ ಆಕ್ರೋಶ

Update: 2017-07-20 18:31 GMT

ಶಿವಮೊಗ್ಗ, ಜು. 20: ಶಿವಮೊಗ್ಗ ನಗರದ ಕರ್ಕಶ ಸದ್ದು ನಾಗರಿಕರ ಪುಟಾಣಿ ಮಕ್ಕಳಿಗೆ ಹಾಗೂ ನಾಗರಿಕರಿಗೆ ತುಂಬಾ ಕಿರಿಕಿರಿಯುಂಟು ಮಾಡುತ್ತಿದೆ.

ನಗರದಲ್ಲಿ ಕೆಲ ಮೋಟಾರ್ ಬೈಕ್‌ಗಳು ಉಂಟು ಮಾಡುತ್ತಿರುವ ಶಬ್ದ ಮಾಲಿನ್ಯ ಮಕ್ಕಳ ಹಾಗೂ ನಾಗರಿಕರ ಮನಸ್ಥಿತಿ ಹಾಳುಗೆಡುವುವಂತೆ ಮಾಡಿದೆ.

ಇತ್ತೀಚೆಗೆ ಮೋಟಾರ್ ಬೈಕ್‌ಗಳ ಶಬ್ದ ಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಕೆಲ ಬೈಕ್‌ಗಳು ಅಕ್ಷರಶಃ ನಾಗರಿಕರ ಎದೆ ನಡುಗಿಸುತ್ತಿವೆ. ಕರ್ಣ ಕಠೋರವಾಗಿವೆ. ಹಾಗೆಯೇ ಚಾಲನಾ ಸ್ಥಿತಿಯಲ್ಲಿರುವ ಇತರ ಬೈಕ್ ಸವಾರರು, ಪಾದಚಾರಿಗಳು ಭಯಗೊಳ್ಳುವಂತೆ ಮಾಡುತ್ತಿವೆ.

ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲ ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸೃಷ್ಟಿಸುತ್ತಿದೆ.

ಭಾರತ ಮೋಟಾರು ಕಾಯ್ದೆಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ಇಂತಿಷ್ಟೆ ಇರಬೇಕೆಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಹೊರಸೂಸುವ ವಾಹನಗಳ ಮಾಲಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಲಿಕ ಅವಧಿಗೆ ನೋಂದಣಿ ರದ್ದುಗೊಳಿಸಲು ಅವಕಾಶವಿದೆ.

ಇಷ್ಟೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಒದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಇದರಿಂದ ದಿನದಿಂದ ದಿನಕ್ಕೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸೈಲೈನ್ಸರ್ ಪೈಪ್ ಮಾರ್ಪಾಡು: 80 ಡೆಸಿಬಲ್ ಮೀರಬಾರದು!: ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲ ಮಾಲಕರು ವಾಹನಗಳ ಶಬ್ದ ಹೆಚ್ಚಿಸಿಕೊಳ್ಳುತ್ತಾರೆ. ಇದಕ್ಕಾಗಿ ಸೈಲೈನ್ಸರ್ ಪೈಪ್‌ಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಈ ವಾಹನಗಳು ರಸ್ತೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಸಂಬಂಧಿಸಿದ ಮಾಲಕರ ವಿರುದ್ದ ಕ್ರಮ ಜರಗಿಸಬಹುದಾಗಿದೆ.

ಬೈಕ್ ಅಥವಾ ಇತರ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾು ವಾಹನ ಕಾಯ್ದೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲಕರ ವಿರುದ್ಧ ಕ್ರಮ ಜರಗಿಸಬಹುದಾಗಿದೆ. ಹಾಗೆಯೇ ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇಂತಹ ವಾಹನಗಳ ನೋಂದಣಿ ಕೂಡ ತಡೆಹಿಡಿಯಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆ: 9449864014 ಗೆ ಮಾಹಿತಿ ರವಾನಿಸಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಕ್ರಮ ಜರಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆಟ್ ಧರಿಸದೇ ಇರುವವರ ಮೇಲೆ ಕೇಸ್ ಹಾಕುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಸುವ ವಾಹನಗಳ ಮಾಲಕರ ವಿರುದ್ಧವು ಕಾನೂನು ಕ್ರಮ ಜರಗಿಸಬೇಕಾಗಿದೆ. ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆಗಳ ನೆರವಿನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
    ಎನ್.ಗೋಪಿನಾಥ್, ನನ್ನ ಕನಸಿನ ಶಿವಮೊಗ್ಗ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News