ಅಕ್ಷರ ಸಂಸ್ಕೃತಿಯನ್ನು ಅಲಕ್ಷಿಸಿದ ಶ್ರಮಜೀವಿಗಳು

Update: 2017-08-01 18:50 GMT

‘‘ಮೊದಲಿದ್ದ ಕಿವಿಗಿಂತ ಮತ್ತೇ ಬಂದ ಕೋಡು ಹೆಚ್ಚಾಯಿತಲ್ಲವೇ?’’ ಎಂಬ ವ್ಯಂಗ್ಯದ ಮಾತುಗಳನ್ನು ಕೇಳಿದ ನೀರು ಬಿಡುವ ಯುವಕ ಅಸಹಾಯಕನಾಗಿ ತನ್ನ ಮೊದಲ ವೇಳಾಪಟ್ಟಿಯನ್ನೇ ಅನುಸರಿಸಿದ. ಈಗ ಅವನ ಸಹಾಯವೂ ಇಲ್ಲದೇ ಆದಾಗ ನಮ್ಮ ಮನೆಯ ಜೀವನ ಶೈಲಿಯಲ್ಲಿ ನೀರಿನ ಅಡಚಣೆಯನ್ನು ಕಾನೂನು ರೀತ್ಯಾ ಪರಿಹರಿಸಿಕೊಳ್ಳಲು ಸಾಧ್ಯವಿದೆಯೇ ಎಂಬ ಆಲೋಚನೆ ಮಾಡಿದೆ. ಒಂದು ದಿನ ಪಂಚಾಯತ್ ಆಫೀಸ್‌ಗೆ ಹೋಗಿ ನನ್ನ ಬ್ಲಾಕ್‌ನ ನಳ್ಳಿ ನೀರಿನ ವ್ಯವಸ್ಥೆಯ ಕುರಿತಾದ ಸಮಸ್ಯೆಯನ್ನು ವಿವರಿಸಿ ಅಲ್ಲೇ ಸುತ್ತಮುತ್ತಲಲ್ಲಿ ಇನ್ನೊಂದು ನಳ್ಳಿ ಅಥವಾ ನಮ್ಮ ಮನೆಗೆ ನಳ್ಳಿ ನೀರಿನ ಸಂಪರ್ಕಕೊಡಲು ಸಾಧ್ಯವೇ ಎಂದು ವಿಚಾರಿಸಿದಾಗ, ಮನೆಗಳಿಗೆ ನಳ್ಳಿನೀರಿನ ವ್ಯವಸ್ಥೆಗೆ ಇನ್ನೂ ಆದೇಶ ಇಲ್ಲದಿರುವುದರಿಂದ, ಸಾರ್ವಜನಿಕವಾಗಿ ಇನ್ನೊಂದು ನಳ್ಳಿ ಹಾಕಿ ಕೊಡುವ ಸಾಧ್ಯತೆ ಇದೆಯೇ ಎನ್ನುವುದನ್ನು ಪರಿಶೀಲಿಸುತ್ತೇವೆ. ಯಾವುದಕ್ಕೂ ನೀವು ಒಂದು ಅರ್ಜಿಪತ್ರ ಬರೆದು ಕೊಡಿ ಎಂದರು.

ನಾನು ಹಾಗೆಯೇ ಅರ್ಜಿಪತ್ರ ಬರೆದು; ಹತ್ತಿರದ ಕೆಲವು ಮನೆಗಳವರ ಸಹಿಗಾಗಿ ಅವರಿಗೆ ವಿಷಯವನ್ನು ವಿವರಿಸಿ ಸಹಿ ಹಾಕುವಂತೆ ಒತ್ತಾಯಿಸುವಲ್ಲಿ ಸಮರ್ಥಳಾದೆ. ಆ ವಿನಂತಿ ಪತ್ರವನ್ನು ಸ್ವೀಕರಿಸಿದ ಸಂಬಂಧಪಟ್ಟ ಅಧಿಕಾರಿಗಳು ಈ ಬ್ಲಾಕ್‌ಗೆ ಸಂಬಂಧಪಟ್ಟ ಕಂಟ್ರಾಕ್ಟರ್‌ರನ್ನು ಕರೆದು ಪರಿಚಯಿಸಿದರು. ಈ ಅವಧಿಯಲ್ಲಿ ನಮ್ಮ ಬ್ಲಾಕ್‌ಗೆ ಸೀತಾರಾಮ ಐತಾಳರು ಪಂಚಾಯತ್‌ನ ಅಧ್ಯಕ್ಷರೋ, ಉಪಾಧ್ಯಕ್ಷರೋ ಆಗಿದ್ದರು ಎಂಬ ನೆನಪು. ಅವರನ್ನು ಭೇಟಿ ಮಾಡಿ ಈ ವಿಷಯವನ್ನು ತಿಳಿಸಿದ್ದೆ. ಹೀಗೆ ಒಂದರ್ಥದಲ್ಲಿ ನನ್ನ ವಿನಂತಿ ಪತ್ರದ ಹಿಂದೆ ನಮ್ಮ ವ್ಯಕ್ತಿತ್ವದ ಪ್ರಭಾವವೂ ಕೆಲಸ ಮಾಡಿತು. ಕಂಟ್ರಾಕ್ಟರ್ ಬಂದು ಸ್ಥಳ ಪರಿಶೀಲಿಸಿದರು. ನಾವು ಸಹಿ ಹಾಕಿದ ಮನೆಗಳವರೆಗೆ ಅನುಕೂಲವಾಗುವಂತೆ ಮುಖ್ಯರಸ್ತೆಯಲ್ಲೇ ನಮ್ಮ ಮನೆಯ ಮುಂದುಗಡೆ ನಳ್ಳಿ ಹಾಕಿಸಿ ಕೊಟ್ಟರು. ಅದರ ವೆಚ್ಚವನ್ನು ನಾವೇ ಭರಿಸಿದರೂ ನಳ್ಳಿ ಸಾರ್ವಜನಿಕವಾದುದು ಎಂಬ ಎಚ್ಚರ ನಮಗಂತೂ ಇತ್ತು.

ಈಗ ನಮ್ಮಲ್ಲಿ ಅಸಮಾಧಾನ ಇದ್ದವರಿಗೆ ಬಾಲ ಕತ್ತರಿಸಿದಂತೆ ಆದುದು ಮಾತ್ರ ಸುಳ್ಳಲ್ಲ. ಆದರೆ ನಾನು ಗೆದ್ದಿದ್ದೇನೆ ಎಂಬ ಅಹಂಭಾವ ನನ್ನಲ್ಲಿ ಇಲ್ಲದೇ ಇದ್ದರೂ ಈ ನಳ್ಳಿಯಿಂದ ನೀರು ಹಿಡಿಯಲು ಸಹಿ ಹಾಕಿದ ಮನೆಯವರು ಉಳಿದವರಿಗೆ ಬಿಡುತ್ತಿರಲಿಲ್ಲ. ಆದರೆ ನಿಧಾನಕ್ಕೆ ಈ ಅಸಮಾಧಾನ ಕರಗಿಹೋಯಿತು. ಯಾಕೆಂದರೆ ಈಗ ದಿನಾ ಜಗಳಕ್ಕೆ ಅವಕಾಶವಿರಲಿಲ್ಲವಲ್ಲ. ಜಗಳ ಎನ್ನುವುದು ಮಾಡುತ್ತ ಇದ್ದಾಗಲೇ ಬೆಳೆಯುವುದು. ನಡುವೆ ವೌನಕ್ಕೆ ಅವಕಾಶ ಸಿಕ್ಕಿದಾಗ, ಮಾತು ಇಲ್ಲವಾದಾಗ, ಮಾತುಬೇಕು ಅನ್ನಿಸುತ್ತದೆ. ಆಗ ಮಾತು ಪ್ರಾರಂಭವಾಗುತ್ತದೆ. ಅಲ್ಲಿ ಜಗಳವಿರುವುದಿಲ್ಲ. ಹೀಗೆ ಈಗ ಜಗಳ, ಅಸಮಾಧಾನ ಎಲ್ಲವೂ ನಿಂತು ನನಗೂ ಮಾನಸಿಕ ನೆಮ್ಮದಿ ಸಿಕ್ಕಂತಾಯಿತು.

ಜತೆಗೆ ಕೆಲವರಿಗಾದರೂ ವಿದ್ಯಾವಂತರಾದರೆ ಆಗುವ ಪ್ರಯೋಜನಗಳೇನು ಎನ್ನುವುದು ನಿಧಾನವಾಗಿ ಅರ್ಥವಾಗಲು ಶುರುವಾಯಿತೆಂದರೂ ತಪ್ಪಲ್ಲ. ಹಾಗೇಯೇ ಈಗ ಈ ನಳ್ಳಿ ತಗ್ಗಿನಲ್ಲಿದ್ದರಿಂದ ಹೆಚ್ಚು ಸಮಯ ನೀರು ಬರುತ್ತಿತ್ತು, ನಾವೆಲ್ಲಾ ನೀರು ಹಿಡಿದಾದ ಬಳಿಕ ಹಿಂದೆ ಜಗಳಾಡುತ್ತಿದ್ದವರು ಹಿಡಿಯುವುದಕ್ಕೆ ಅವಕಾಶ ಸಿಕ್ಕಿದಾಗ ಅವರು ಜಗಳಾಡಿರುವುದು ತಪ್ಪು ಎಂಬ ಮನವರಿಕೆ ಆಯಿತು ಎಂದರೆ ಹೆಚ್ಚು ಸರಿ. ಜತೆಗೆ ನಳ್ಳಿ ಹಾಕಿ ಕೊಟ್ಟ ಕಂಟ್ರಾಕ್ಟರ್‌ರನ್ನು ಒಳ್ಳೆಯವರೆಂದು ಹೊಗಳಲೂ ಶುರು ಮಾಡಿದರು. ಒಳ್ಳೆಯ ಕೆಲಸದ ಪರಿಣಾಮ ಒಳ್ಳೆಯದಾದಾಗಲೇ ಕೆಲಸ ಮಾಡಿದ ವ್ಯಕ್ತಿಯೂ ಒಳ್ಳೆಯವನಾಗುತ್ತಾನೆ. ಆಗ ಅವನ ಜಾತಿ, ಧರ್ಮಗಳು ಹಿಂದಕ್ಕೆ ಸರಿಯುತ್ತವೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಯಿತು.

ಯಾಕೆಂದರೆ ಆ ಕಂಟ್ರಾಕ್ಟರ್ ಮುಸ್ಲಿಂ ಆಗಿದ್ದರು. ನಾನು ಅವರಿಗೆ ಯಾವ ರೀತಿಯ ಲಂಚವನ್ನೂ ಕೊಟ್ಟಿರಲಿಲ್ಲ ಎನ್ನುವುದೂ ನನ್ನ ಪಾಲಿಗೆ ಮುಖ್ಯ ವಿಷಯವಾಗಿತ್ತು. ಯಾಕೆಂದರೆ ನಳ್ಳಿ ಹಾಕಿರುವುದು ಲಂಚಕೊಟ್ಟು ಎಂಬ ಮಾತು ಹಿಂದಿನಿಂದ ಆಡಿಕೊಳ್ಳುತ್ತಿದ್ದುದು ಕಿವಿಗೆ ಬಿದ್ದಿತ್ತು. ಹೀಗೆ ನೀರಿಗಾಗಿ ಉಂಟಾದ ಜಗಳ ನೀರಿನಿಂದಲೇ ಕೊನೆಯಾಗಿ ನಮ್ಮ ಮನೆ ಹಾಗೂ ಸುತ್ತು ಮುತ್ತಲ ಮನೆಗಳಲ್ಲಿ ಸೌಹಾರ್ದ ಉಂಟಾಯಿತು. ಈಗ ಆ ಮನೆಗಳಿಂದಲೂ ಹಲಸಿನ ಹಣ್ಣು ನಮ್ಮ ಮನೆಗೆ ಬರಲಾರಂಭಿಸಿತು. ಜತೆಗೆ ಈ ಹಿಂದೆ ಅವರವರ ಕಾರಣಗಳಿಂದಲೇ ಮಾತು ಬಿಟ್ಟವರೂ ಕೂಡಾ ಮಾತನಾಡಲಾರಂಭಿಸಿದರು ಎನ್ನುವುದು ನನಗೆ ಖಷಿಯಾಯ್ತು.

  ಈ ನಡುವೆ ಇನ್ನೊಂದು ಸಂದರ್ಭ ನೆನಪಾಯಿತು ನೋಡಿ. ನಾವು ಕೃಷ್ಣಾಪುರಕ್ಕೆ ಹೋದ ಪ್ರಾರಂಭದ ದಿನಗಳಲ್ಲಿಯೇ ನಡೆದುದು. ವಾಮನ ನಂದಾವರರ ಹೆಸರು ಕೇಳಿ ನಂದಾವರದ ಒಬ್ಬರು ನಮ್ಮ ಮನೆಗೆ ಬಂದರು. ಅವರು ಇದೇ 5ನೆ ಬ್ಲಾಕಿನಲ್ಲಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ರಾಮರಾಯರು ಎನ್ನುವವರು. ಇವರು ಕೂಡಾ ನಾವು ಬ್ರಾಹ್ಮಣರೆಂದೇ ಪರಿಚಯಿಸಿಕೊಳ್ಳಲು ಬಂದರೆನ್ನುವುದು ನನ್ನ ಗುಮಾನಿ. ಆದರೆ ಅವರಿಗೆ ನಾವು ಬ್ರಾಹ್ಮಣರಲ್ಲ ಎನ್ನುವುದು ನಂದಾವರದ ಮನೆಯ ಪರಿಚಯದಿಂದ ತಕ್ಷಣವೇ ಆಯಿತು. ಜತೆಗೆ ನನ್ನ ಊರು ಮನೆ ಇತ್ಯಾದಿಗಳನ್ನು ತಿಳಿಸಬೇಕಾದ ಸಂದರ್ಭವೂ ಮಾತುಕತೆಯಲ್ಲಿ ಬಂದಾಗ ನಾನು ಕೊಂಡಾಣ ವಾಮನ ಮಾಸ್ಟ್ರ ಮಗಳು ಎಂದು ಗೊತ್ತಾದಾಗ ತಂದೆಯ ಬಗ್ಗೆ ಗೊತ್ತಿದ್ದ ಅವರು ‘‘ಹರಿದಾಸರಲ್ಲವೇ? ಕಾವ್ಯವಾಚನಮಾಡುವವರಲ್ಲವೇ ? ನನಗೆ ಗೊತ್ತಿದೆ.

ನಮ್ಮ ಶಾಲಾ ತಿಂಗಳ ಸಭೆಯಲ್ಲಿ ಅವರನ್ನು ಕೇಳಿದ್ದೇನೆ. ತುಂಬಾ ಚೆನ್ನಾಗಿ ಹಾಡುತ್ತಾರೆ, ಒಳ್ಳೆಯ ಕಂಠ, ಒಳ್ಳೆಯ ಸಜ್ಜನ’’ ಎಂದು ಹೊಗಳಿದರು. ರಾಮರಾಯರಿಗೆ ಚಹಾ ನೀಡಿದ್ದೂ ಆಯ್ತು. ಅವರು ಸ್ವೀಕರಿಸಿದ್ದೂ ಆಯಿತು. ಆಚೆ ಮನೆಯ ಅಜ್ಜಿ ನೋಡಿದ್ದೂ ಆಯಿತು. ಸುತ್ತಮುತ್ತಲಲ್ಲಿ ಸುದ್ದಿಯೂ ಆಯಿತು. ಆ ಶಾಲೆಗೆ ಹೋಗುತ್ತಿದ್ದ ಮಕ್ಕಳ ಮನೆಯಲ್ಲಿ ಇದು ಸಣ್ಣ ಸುದ್ದಿಯಲ್ಲ ರಾಮರಾಯರು ಹೋದವರು ಅಷ್ಟಕ್ಕೇ ಉಳಿಯಲಿಲ್ಲ. ಇನ್ನೊಮ್ಮೆ ನಮ್ಮಲ್ಲಿಗೆ ಬಂದು ಅಪ್ಪನ ಮನೆ ವಿಳಾಸ ಪಡಕೊಂಡರು. ಆಗಿನ್ನೂ ಫೋನಿನ ವ್ಯವಸ್ಥೆ ಎಲ್ಲರಲ್ಲೂ ಇರಲಿಲ್ಲ. ತಮ್ಮ ಶಾಲೆಯಲ್ಲಿ ಒಂದು ಹರಿಕಥೆ ಏರ್ಪಡಿಸುವ ಯೋಜನೆ ಹಾಕಿಕೊಂಡಿದ್ದರು. ಅಪ್ಪನೂ ಒಪ್ಪಿಕೊಂಡು ಮುಂದಿನ ಒಂದು ದಿನ ವಿದ್ಯಾರ್ಥಿಗಳಿಗಾಗಿ ‘ಭಕ್ತ ಧ್ರುವ’ನೋ, ‘ಭಕ್ತ ಪ್ರಹ್ಲಾದ’ನೋ ಹರಿಕಥೆ ನಡೆಯಿತು. ನಾವೂ ಹೋಗಿದ್ದೆವು.

ರಾಮರಾಯರು ಅಪ್ಪನನ್ನು, ನಮ್ಮನ್ನೂ ತುಂಬು ಗೌರವದಿಂದ ನಡೆಸಿಕೊಂಡರು. ಹರಿಕಥೆ ಎನ್ನುವುದು ಶಾಲಾ ಮಕ್ಕಳಿಗಾಗಿ ನಡೆದಿದ್ದರೂ ಊರಿನ ಹಿರಿಯ ಗಣ್ಯರು ಎಲ್ಲರೂ ಸೇರಿದ್ದರು. ಆದರೆ ಸೇರಿದ ಹಿರಿಯರು ಎಂಬ ಗುಂಪಿನಲ್ಲಿ ಮೇಲ್ಜಾತಿಯವರೇ ಇದ್ದರೆ, ಗಣ್ಯರು ಎಂಬ ಗುಂಪಿನಲ್ಲಿ ಮೇಲ್ಜಾತಿಯವರೊಂದಿಗೆ ವಿದ್ಯಾವಂತ ಶೂದ್ರರಿದ್ದರೇ ಹೊರತು, ಬಹುಸಂಖ್ಯಾತ ಊರಿನ ಹಿರಿಯ ಪುರುಷರು ಇರಲಿಲ್ಲ, ಹಾಗೆಯೇ ಮಹಿಳೆಯರನ್ನು ಗಮನಿಸಿದರೆ ಊರಿನ ಹಿರಿಯ ಶೂದ್ರ ಮಹಿಳೆಯರಿದ್ದರೇ ವಿನಾ ಊರಿನ ಮೇಲ್ಜಾತಿಯ ಮನೆಯ ಹಿರಿಯ ಮಹಿಳೆಯರು ಭಾಗವಹಿಸಿರಲಿಲ್ಲ, ಎನ್ನುವುದು ಕೂಡಾ ಒಂದು ಸಾಮಾಜಿಕ ವ್ಯವಸ್ಥೆಯ ಅಲಿಖಿತ ರೀತಿ ಎನ್ನುವುದು ನನ್ನ ಗ್ರಹಿಕೆ.

ಮುಂದಿನ ಜೂನ್ ತಿಂಗಳ ವೇಳೆಗೆ ಮಗಳನ್ನು ಪ್ರಾಥಮಿಕ ಶಾಲೆಗೆ ಸೇರಿಸಬೇಕು ಎನ್ನುವ ಕಾರಣದಿಂದ ಇದೇ ಐದನೆ ಬ್ಲಾಕ್‌ನ ಶಾಲೆಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಮುಖ್ಯೋಪಾಧ್ಯಾಯಿನಿ ಕೂಡಾ ಕಾಪಿಕಾಡು ಶಾಲೆಯ ಮುಖ್ಯೋಪಾಧ್ಯಾಯಿನಿಯಂತೆಯೇ ‘‘ನೀವೆಲ್ಲಾ ಇಲ್ಲಿ ಯಾಕೆ ಸೇರಿಸುತ್ತೀರಿ?’’ ಎಂಬ ಪ್ರಶ್ನೆ ಕೇಳಿದಾಗಲೇ ನನಗೆ ಅಸಹನೆ ಉಂಟಾಯಿತು. ಮನೆ ಹತ್ತಿರವಿರುವ ಶಾಲೆ. ಮಧ್ಯಾಹ್ನ ಮನೆಗೆ ಬಂದು ಊಟಮಾಡಿ ಹೋಗಬಹುದಾದ ದೂರ, ಜತೆಗೆ ಶಾಲೆಗೆ ಹೋಗಲು ಪಕ್ಕದ ಮನೆಯ ಮಕ್ಕಳು. ಈ ಎಲ್ಲಾ ಸುಲಭೋಪಾಯಗಳ ವ್ಯವಸ್ಥೆ ಇದ್ದರೂ ಈ ಸರಕಾರಿ ಶಾಲೆಗಳ ಅಧ್ಯಾಪಕರ ಮನಸ್ಥಿತಿ ಮಾತ್ರ ಯಾಕೆ ಹೀಗೆ ಎನ್ನುವುದು ಅರ್ಥವಾಗಲಿಲ್ಲ.

ಆ ಮುಖ್ಯೋಪಾಧ್ಯಾಯಿನಿ ಮಂಗಳೂರಿನಿಂದ ಅಲ್ಲಿಗೆ ಬರುತ್ತಿದ್ದವರು. ಅವರೇ ನನಗೆ ‘‘ನೀವು ದಿನಾ ಮಂಗಳೂರಿಗೆ ಹೋಗುತ್ತೀರಲ್ಲಾ ಅಲ್ಲಿಯೇ ಒಳ್ಳೆಯ ಶಾಲೆಗೆ ಸೇರಿಸಬಹುದಲ್ಲಾ?’’ ಎಂದು ಸಲಹೆ ನೀಡಿದರು. ಹೀಗೆ ನಾವು ಬೇಡ ಅನ್ನುವ ಮನಸ್ಥಿತಿಯವರ ಬಳಿಗೆ ಒತ್ತಾಯಪೂರ್ವಕ ಹತ್ತಿರವಾಗುವ ಸ್ವಭಾವ ಇಲ್ಲದ ನಾನು ಅವರ ಸಲಹೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಆ ಶಾಲೆಯ ಎಲ್ಲಾ ಅಧ್ಯಾಪಿಕೆಯರ ಮಕ್ಕಳು 5ನೆ ತರಗತಿ ಅಲ್ಲಿ ಮುಗಿಸಿಕೊಂಡು 6ನೆ ತರಗತಿಗೆ ಸುರತ್ಕಲ್‌ನ ವಿದ್ಯಾದಾಯಿನಿ ಪ್ರಾಥಮಿಕ ಶಾಲೆಗೆ ಸೇರಿಕೊಳ್ಳುತ್ತಿದ್ದರು. ಅವರೆಲ್ಲಾ ವಿದ್ಯಾಭ್ಯಾಸವನ್ನು ಮುಂದುವರಿಸುವವರು ಎಂಬುದು ಅದರ ಹಿನ್ನೆಲೆಯಾಗಿತ್ತು. ಉಳಿದಂತೆ ಊರಿನ ಇತರ ಮಕ್ಕಳು ಅದೇ ಶಾಲೆಯಲ್ಲಿ 7ನೆ ತರಗತಿಯವರೆಗೆ ಓದಿ, ಅಲ್ಲಿಗೆ ಓದು ಮುಗಿಸುವವರೇ ಹೆಚ್ಚು.

ಅದರಲ್ಲೂ ಹುಡುಗಿಯರಿಗೆ ಅದೇ ಮೊದಲಶಾಲೆ, ಅದೇ ಕೊನೆಯ ಶಾಲೆಯೂ ಹೌದು. ಕೆಲವು ಹುಡುಗರು 7ನೆ ಬ್ಲಾಕ್‌ನಲ್ಲಿರುವ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಸೇರಿಕೊಳ್ಳುತ್ತಿದ್ದರು. ನನ್ನ ಮನೆಯ ಆಸುಪಾಸಿನಲ್ಲಿ ನನ್ನ ಒಟ್ಟು ಹನ್ನೆರಡು ವರ್ಷದ ವಾಸ್ತವ್ಯದ ಕಾಲದಲ್ಲಿ ಹತ್ತು ಹದಿನೈದು ಹುಡುಗರು ಸೇರಿದ್ದರೆ ಅದೇ ದೊಡ್ಡ ವಿಷಯ. ಇನ್ನು ಅವರಲ್ಲೂ ಹತ್ತನೆಯ ತರಗತಿಯನ್ನು ಪೂರ್ಣಗೊಳಿಸಿದವರು ಮೂರು ನಾಲ್ಕು ಮಂದಿ ಇದ್ದರೆ, ಪದವಿಪೂರ್ವ ಕಾಲೇಜಿಗೆ ಸೇರಿದವರು ನನ್ನ ನೆನಪಿನಲ್ಲಿ ಯಾರೂ ಸಿಗುತ್ತಿಲ್ಲ ಎನ್ನುವುದು ಮರೆವಿನಿಂದಾಗಿ ಅಲ್ಲ, ಸಹಜವಾದ ಸ್ಥಿತಿ ಹಾಗೇ ಇತ್ತು. ಇನ್ನು ಹುಡುಗಿಯರನ್ನು ಗಮನಿಸಿದರೆ ನನ್ನ ಮನೆಯ ಮುಖ್ಯ ರಸ್ತೆಯಿಂದ ಹೋಗುತ್ತಿದ್ದ ಅಜ್ಜರೊಬ್ಬರ ಮಗಳ ಮಗಳು 7ನೆ ಬ್ಲಾಕ್‌ನ ಪ್ರೌಢಶಾಲೆಗೆ ಸೇರಿದ ಹುಡುಗಿಯರಲ್ಲಿ ಮೊದಲಿಗಳು. ಆಕೆ ಚಿಕ್ಕಗಾತ್ರದ ಚುರುಕು ನಡೆಯ ಹುಡುಗಿ.

ನಾನು ಆಕೆಯನ್ನು ‘ಗುಬ್ಬಿ’ ಎಂದು ಪ್ರೀತಿಯಿಂದ ಹೇಳುತ್ತಿದ್ದೆ. ಆಕೆ ಪ್ರಾಥಮಿಕ ಶಾಲೆಯಲ್ಲೂ ಕಲಿಯುವುದರಲ್ಲಿ ಜಾಣೆ ಇದ್ದಳು ಎಂದು ಉಳಿದ ಮಕ್ಕಳು ಹೇಳುತ್ತಿದ್ದರು. ಅವಳು ಹೈಸ್ಕೂಲು ಓದು ಮುಗಿಸಿದಳು ಎಂದು ತಿಳಿದಿದ್ದೇನೆ. ಬಳಿಕ ನನ್ನ ಮನೆಯ ಹಿಂದಿನ ಮನೆಯ ಶೀನ ದೇವಾಡಿಗರ ದೊಡ್ಡ ಮಗಳು ಪ್ರಾಥಮಿಕ ಶಾಲೆ ಮುಗಿಸಿ ಮನೆಯಲ್ಲಿದ್ದಳು. ಅವಳು ಹೈಸ್ಕೂಲಿಗೆ ಹೋಗುವಂತೆ ಒತ್ತಾಯಿಸಿದೆ, ನನ್ನ ಒತ್ತಾಯದಿಂದ ಆಕೆ 7ನೆ ಬ್ಲಾಕಿನ ಹೈಸ್ಕೂಲಿಗೆ ಸೇರಿದಳು. ಇವಳಿಗಿಂತ ಮೊದಲು ಸೇರಿದ ಇನ್ನೊಬ್ಬಾಕೆ ನನ್ನ ಮನೆಯ ದಾರಿಯಲ್ಲಿದ್ದ ಮನೆಯ ಬ್ಯಾಂಕ್ ಸಿಬ್ಬಂದಿಯ ಮಗಳು. ಆಕೆ ಹೈಸ್ಕೂಲು ಮುಗಿಸಿ, ಪದವಿಪೂರ್ವ ಕಾಲೇಜಿಗೂ ಸೇರಿಕೊಂಡದ್ದು ಹೆಚ್ಚುಗಾರಿಕೆ ಮಾತ್ರವಲ್ಲ. ಹತ್ತಿರದ ಅನೇಕರ ಮತ್ಸರಕ್ಕೂ ಕಾರಣವಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಾಣದೆ ಇದ್ದ ವಾಸ್ತವ. 7ನೆ ಬ್ಲಾಕ್‌ನ ಶಾಲೆಯಲ್ಲಿ ಈ ಕಾರಣಗಳಿಂದಲೇ ಹಿಂದೂ ಮಕ್ಕಳ ಸಂಖ್ಯೆ ಕಡಿಮೆಯಾಗಿ ಮುಸ್ಲಿಮರೇ ಅದರಲ್ಲೂ ಹುಡುಗರ ಸಂಖ್ಯೆಯೇ ಜಾಸ್ತಿಯಾಗಿರುವುದು ಎದ್ದು ಕಾಣುವಂತಿತ್ತು.

ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಕಡ್ಡಾಯ ಶಿಕ್ಷಣದ ಬಗೆಗಿನ ಫಲಕಗಳನ್ನು ಹಿಡಿದುಕೊಂಡು ಪ್ರಭಾತ ಫೇರಿ ಹೋಗುತ್ತಿದ್ದೆವು. ಆದರೆ ಇಲ್ಲಿ ಬ್ಲಾಕ್‌ಗೊಂದು ಶಾಲೆ, ಇಡೀ ಕಾಟಿಪಳ್ಳಕ್ಕೆ ಒಂದು ಹೈಸ್ಕೂಲು, ಒಂದು ಪದವಿಪೂರ್ವ ಕಾಲೇಜ್ ಇದ್ದರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಶ್ರೇಣೀಕೃತ ಜಾತಿವ್ಯವಸ್ಥೆಯ ಹಿಂದಿನ ಮೂಢನಂಬಿಕೆಗಳಿಂದ ಈ ದೇಶದ ಶ್ರಮಜೀವಿಗಳು ಅಕ್ಷರ ಸಂಸ್ಕೃತಿಯ ಕಡೆಗೆ ‘ಕ್ಯಾರೇ’ ಎನ್ನದೇ ಬದುಕಿದ್ದುದನ್ನು ನೋಡಿದರೆ ಸರಿ ತಪ್ಪುಗಳ ವಿಮರ್ಶೆ ಮಾಡುವುದು ಸರಳವಾದುದಲ್ಲ ಎಂದು ನನಗೆ ಇಂದು ಮನವರಿಕೆಯಾಗಿದೆ. ಮೇಲ್ಜಾತಿಯ ಗಂಡು, ಹೆಣ್ಣು ಮಕ್ಕಳು ಹಾಗೆಯೇ ವಿದ್ಯಾವಂತ ಶೂದ್ರರ ಮಕ್ಕಳ ಶಿಕ್ಷಣದ ಆವಶ್ಯಕತೆಯನ್ನು ಸುರತ್ಕಲ್ಲಿನ ವಿದ್ಯಾದಾಯಿನಿ ಪ್ರೌಢಶಾಲೆ ಹಾಗೂ ಗೋವಿಂದ ದಾಸ ಕಾಲೇಜು ಪೂರೈಸಿದೆ ಎನ್ನುವುದು ಕೂಡಾ ಗಮನಾರ್ಹವಾದುದು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News

ಸಂವಿಧಾನ -75