ಮುಂಬೈ ಮನಾಪ ಕಟ್ಟಡಕ್ಕೆ 125ರ ಸಂಭ್ರಮ, ಫಲಿತಾಂಶ ಗೊಂದಲಕ್ಕೆ ಪರಿಹಾರವಿಲ್ಲ!
ಏಶ್ಯಾದ ಅತಿದೊಡ್ಡ ಮಹಾನಗರ ಪಾಲಿಕೆ ಮುಂಬೈ ಮನಪಾದ ಮುಖ್ಯಾಲಯವಿರುವ ಕಟ್ಟಡ ಆಗಸ್ಟ್ 1ರಂದು 124 ವರ್ಷ ಕಳೆದು 125ನೆ ವರ್ಷಕ್ಕೆ ಕಾಲಿಟ್ಟಿದೆ. ವಿಶ್ವ ಹೆರಿಟೇಜ್ ಕಟ್ಟಡಗಳಲ್ಲಿ ಇದಕ್ಕೂ ಸ್ಥಾನ ದೊರಕಿರುವ ಹೆಮ್ಮೆ. ಮೊನ್ನೆ ಈ ಪ್ರಯುಕ್ತ ವಿಶೇಷ ಸಮಾರಂಭವೂ ನಡೆಯಿತು. ಈ ಕಟ್ಟಡದ ನಿರ್ಮಾಣವನ್ನು ಮರಳು ಮತ್ತು ಸುಣ್ಣದ ಕಲ್ಲುಗಳಿಂದ ಮಾಡಲಾಗಿತ್ತು. ಇದು ಬ್ರಿಟಿಷರ ಕೊಡುಗೆ. ಇದರ ಪಕ್ಕದಲ್ಲಿರುವ ಸಿ.ಎಸ್.ಟಿ. ರೈಲ್ವೆ ಕಟ್ಟಡವೂ ವಿಶ್ವ ಸ್ಮಾರಕ ಪಟ್ಟಿಗೆ ಸೇರಿದೆ. ಈ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಮನಪಾ ಆಯೋಜಿಸಿದೆ.
ಎಪ್ರಿಲ್ 25, 1889ರಂದು ಆರಂಭವಾದ ಈ ಕಟ್ಟಡ ನಿರ್ಮಾಣದ ಕಾರ್ಯಗಳು 31 ಜುಲೈ 1893ರಂದು ಪೂರ್ಣಗೊಂಡಿತು. ಈ ಕಟ್ಟಡ ಪಾರ್ಕಿಂಗ್ ಸಹಿತ ಏಳು ಮಾಳಿಗೆಯದ್ದಾಗಿದೆ. ಬ್ರಿಟಿಷ್ ಕಾಲದ ಎಲ್ಲಾ ಕಟ್ಟಡಗಳ ಮೇಲ್ಗಡೆ ಗೋಲಾಕಾರದ ನಿರ್ಮಾಣವಿರುತ್ತದೆ. ಇದೇ ದೃಶ್ಯವನ್ನು ಪಕ್ಕದ ಸಿ.ಎಸ್.ಟಿ. ಕಟ್ಟಡ ಅಥವಾ ಜಿ.ಪಿ.ಒ ಕಟ್ಟಡದಲ್ಲೂ ಕಾಣಬಹುದು. ಈ ಗುಂಬಜದಲ್ಲಿ ಚಿಕ್ಕ ಚಿಕ್ಕ ತೂತುಗಳಿವೆ. ಈ ತೂತುಗಳ ಮೂಲಕ ಎಂಟು ದಿಕ್ಕುಗಳಿಂದಲೂ ಗಾಳಿ ಒಳ ಪ್ರವೇಶಿಸುತ್ತದೆ. ಕಟ್ಟಡದ ಮೆಟ್ಟಿಲುಗಳು ಮರದಿಂದ ತಯಾರಿಸಲಾಗಿದೆ. ಇಲ್ಲಿನ ಕೋಣೆಗಳ ಎತ್ತರವೂ ಅಧಿಕವಿದೆ. ಇವೆಲ್ಲ ಗೋಥಿಕ್ ಶೈಲಿಯ ಕಟ್ಟಡಗಳು. ಈ ಕಟ್ಟಡದ ಮೇಲ್ವಿಚಾರಣೆಗೆ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಲಾಗಿದೆ.
ಸಮಾಜ ಸೇವಕ ಜಗನ್ನಾಥ ನಾನಾ ಶಂಕರ ಸೇಠ್ ಈ ಜಮೀನು ದಾನ ಮಾಡಿದ್ದರು. ಬ್ರಿಟಿಷರ ಜೊತೆ ಬೈಠಕ್ ಕೂಡಾ ನಡೆಸಿದ್ದರು. ಮುಂಬೈಯ ವಿಕಾಸದಲ್ಲಿ ನಾನಾ ಶಂಕರ ಸೇಠ್ ಅವರ ಕೊಡುಗೆ ಅಪಾರ.
ಕ್ರಿ.ಶ. 1889ರಲ್ಲಿ ಈ ಕಟ್ಟಡ ಕಟ್ಟಿಸುವಾಗ ಕೆಲಸಗಾರರು ರಾಜಸ್ಥಾನ ದಿಂದ ಬಂದಿದ್ದರು. ವಿವಿಧ ದೇಶಗಳ ಕಾರ್ಮಿಕರನ್ನು ಇಲ್ಲಿ ಹುಡುಕಾಟ ನಡೆಸಿದರೂ ಬ್ರಿಟಿಷರಿಗೆ ಕೊನೆಗೆ ರಾಜಸ್ಥಾನಿ ಕೆಲಸಗಾರರು ಒಪ್ಪಿಗೆ ಆದರಂತೆ. ಗೋಥಿಕ್ ಶೈಲಿಯಲ್ಲಿ ನಿರ್ಮಾಣ ಮಾಡಿದ್ದರಿಂದ ಅದು ಪೂರ್ಣಗೊಳ್ಳಲು ನಾಲ್ಕು ವರ್ಷಗಳ ಕಾಲ ಹಿಡಿಯಿತು.
ಇಲ್ಲಿನ ಕಟ್ಟಡಕ್ಕೆ ಬಳಸಲಾದ ಮರಳು ಮತ್ತು ಸುಣ್ಣದ ಕಲ್ಲುಗಳನ್ನು ಆಗ್ರಾ-ಮಥುರಾದಿಂದ ತರಿಸಲಾಗಿತ್ತು. ಈ ಕಟ್ಟಡದಲ್ಲಿ 68 ಅಡಿ ಉದ್ದ, 32 ಅಡಿ ಅಗಲ, 38 ಅಡಿ ಎತ್ತರದ ಸಭಾಗೃಹವಿದೆ. ಕ್ರಿ.ಶ. 1866ರಲ್ಲಿ ಮನಪಾ ಕಾರ್ಯಾಲಯ ಗಿರ್‌ಗಾಂವ್‌ನ ಒಂದು ಚಿಕ್ಕ ಕಟ್ಟಡದಲ್ಲಿತ್ತು.
ಈಗಿನ ಕಟ್ಟಡದ ವಾಸ್ತು ತಜ್ಞ ಎಫ್.ಡಬ್ಲ್ಯೂ. ಸ್ಟೀವನ್ಸ್ ಆಗಿರುತ್ತಾರೆ. ಇದರ ಅಧ್ಯಕ್ಷ ಥಾಮಸ್ ಬ್ಲಾನಿ ಮತ್ತು ಆಯುಕ್ತ ಹರಿ ಅಕ್ವರ್ಥ್ ಆಗಿದ್ದರು. ಆಗ ರಾವ್ ಬಹಾದುರ್ ಸೀತಾರಾಮ್ ಖಂಡೇರಾವ್‌ರನ್ನು ನಿರ್ಮಾಣ ವಿಭಾಗದ ಇಂಜಿನಿಯರ್ ಆಗಿ ನಿಯುಕ್ತಿಗೊಳಿಸಿದ್ದರು. ಮಹಾತ್ಮ ಫುಲೆ ಅವರ ನಿಕಟವರ್ತಿ ಬಾಲಾಜಿ ಅವರು ಈ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದರು. ಮನಪಾ ಸಭಾಗೃಹದಲ್ಲಿ ಮೇಯರ್ ಕುರ್ಚಿಗೆ ತನ್ನದೇ ಪ್ರತ್ಯೇಕ ಇತಿಹಾಸವಿದೆ. 21 ಮಾರ್ಚ್, 1914ರಲ್ಲಿ ಆಗಿನ ವೈಸ್‌ರಾಯ್ ಜ. ಲಾರ್ಡ್ ಹಾರ್ಡಿಸ್ ಮುಂಬೈ ಮನಪಾದ ವತಿಯಿಂದ ನೀಡಲಾದ ಗೌರವ ಕಾರ್ಯಕ್ರಮದಲ್ಲಿ ಈ ಕುರ್ಚಿ ಬಳಸಿದ್ದರು. ಈ ಕುರ್ಚಿಯಲ್ಲಿ ಬ್ರಿಟಿಷ್ ರಾಜಮುದ್ರೆಯ ಚಿಹ್ನೆ ಕೂಡಾ ಇದೆ. ಹಾಗೂ ಮನಪಾದ ಬೋಧ್ ಚಿಹ್ನೆ ಕೂಡಾ ಇದೆ. ಕ್ರಿ.ಶ. 1931ರಲ್ಲಿ ಮೇಯರ್ ದರ್ಜೆಯು ಆರಂಭವಾಯಿತು.
* * *
ಏಕಕಾಲದಲ್ಲಿ ಕೆಂಗಣ್ಣಿಗೆ ಗುರಿ!
ಪರೀಕ್ಷಾ ಫಲಿತಾಂಶ ಘೋಷಿಸುವಲ್ಲಿ ಅತೀ ವಿಳಂಬದ ನಂತರ ಮುಂಬೈ ವಿಶ್ವವಿದ್ಯಾನಿಲಯಕ್ಕೆ ಪ್ರತೀ ದಿನ ಹೊಸ ಹೊಸ ಸವಾಲುಗಳನ್ನು ಎದುರಿಸುವ ಸ್ಥಿತಿ ಬಂದಿದೆ. ಈ ತನಕ 250ಕ್ಕೂ ಹೆಚ್ಚು ಪರೀಕ್ಷಾ ಫಲಿತಾಂಶ ಘೋಷಿಸಿದ್ದರೂ ಇನ್ನೂ 200ಕ್ಕೂ ಹೆಚ್ಚು ಪರೀಕ್ಷಾ ಫಲಿತಾಂಶ ಘೋಷಿಸಲು ಬಾಕಿ ಇದೆ. ಕೆಲವು ಕಾಲೇಜುಗಳಲ್ಲಿ ಈ ಬಗ್ಗೆ ‘‘ನೀವೇ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗವನ್ನು ಸಂಪರ್ಕಿಸಿ’’ ಎನ್ನುವ ಉತ್ತರ ಬಂದದ್ದರ ವಿರುದ್ಧ ವಿದ್ಯಾರ್ಥಿಗಳು ಸಿಟ್ಟುಗೊಂಡು ದೂರು ಕೂಡಾ ನೀಡಬೇಕಾಯಿತು. ವಿಧಾನ ಪರಿಷತ್‌ನಲ್ಲೂ ಮುಂಬೈ ವಿ.ವಿ. ಪರೀಕ್ಷಾ ಫಲಿತಾಂಶ ವಿಳಂಬವನ್ನು ಮುಂದಿಟ್ಟು ಚರ್ಚಿಸಲಾಗುತ್ತಿದೆ. ಸಂಘ ಪರಿವಾರದ ಬೆಂಬಲಿಗ ಉಪಕುಲಪತಿಯವರ ಕಾರಣ ಸರಕಾರವೇ ಇಕ್ಕಟ್ಟಿಗೆ ಸಿಲುಕಿದೆ!
ಮುಂಬೈ ವಿವಿಯ ತೃತೀಯ ವರ್ಷ ಸ್ನಾತಕ ಪರೀಕ್ಷೆಗಳಲ್ಲಿ ಸುಮಾರು ಐನೂರರಷ್ಟು ಪಠ್ಯಕ್ರಮಗಳಿಗಾಗಿ ಎಪ್ರಿಲ್‌ನಲ್ಲಿ ಪರೀಕ್ಷೆ ಪಡೆಯಲಾಗಿತ್ತು. ಈ ಪರೀಕ್ಷೆಗಳ ಫಲಿತಾಂಶ ನಿಯಮಾನುಸಾರ 45 ದಿನಗಳಲ್ಲಿ ಅರ್ಥಾತ್ ಮೇ ತಿಂಗಳ ಕೊನೆಯೊಳಗೆ ಅಥವಾ ಜೂನ್ ಮೊದಲವಾರದಲ್ಲಿ ಬರಬೇಕಾಗಿತ್ತು. ಇದರ ಅಂತಿಮ ದಿನ ಜುಲೈ 31 ಆಗಿತ್ತು. ಎಲ್ಲಾ ಮಹಾವಿದ್ಯಾಲಯಗಳನ್ನು 8 ದಿನಗಳ ಕಾಲ ಬಂದ್ ಮಾಡಿ ಎಲ್ಲಾ ಶಿಕ್ಷಕರನ್ನು ಉತ್ತರ ಪತ್ರಿಕೆ ಮೌಲ್ಯ ಮಾಪನಕ್ಕೆ ತೊಡಗಿಸಿದರೂ ಫಲಿತಾಂಶ ಇನ್ನೂ ಪೂರ್ಣವಾಗಿ ಬಂದಿಲ್ಲ. ಹೀಗಾಗಿ ಇದಕ್ಕೆ ಉಪಕುಲಪತಿಯೇ ಜವಾ ಬ್ದಾರಿ. ಇಲ್ಲಿ ಕೂಡಾ ಹಗರಣ ನಡೆದಿದೆ ಹಾಗೂ ಇದು ಗಂಭೀರವಾಗಿದೆ.
ಆರಂಭದಲ್ಲಿ ಜುಲೈ 31ರೊಳಗೆ ಫಲಿತಾಂಶ ಘೋಷಿಸಬೇಕು ಎನ್ನಲಾಗಿತ್ತು. ಆನಂತರ ವಿ.ವಿ. ಉಪಕುಲಪತಿಯವರು ಆಗಸ್ಟ್ 5 ರೊಳಗೆ ಫಲಿತಾಂಶ ಘೋಷಿಸಲಾಗುವುದು ಎಂದರು. ಇದೀಗ ಆಗಸ್ಟ್ 16ರೊಳಗೆ ಎನ್ನಲಾಯಿತು. ಈ ದಿನಾಂಕ ಮುಂದೆ ಹೋಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಶಿಕ್ಷಣ ಮಂತ್ರಿ ವಿನೋದ್ ತಾವ್ಡೆ ಮತ್ತು ವಿ.ವಿ. ಕುಲಪತಿ ಇಬ್ಬರೂ ಈಗ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ವಿವಿಧ ರಾಜಕೀಯ ಪಕ್ಷಗಳೂ ತಮ್ಮ ತಮ್ಮ ಲಾಭವನ್ನು ಮುಂದಿಟ್ಟು ಬೀದಿಗಿಳಿದಿವೆ. ವಿ.ವಿ. ಉಪಕುಲಪತಿಯವರು ದಿನಾಂಕಗಳನ್ನು ಮುಂದೂಡುತ್ತಾ ಭ್ರಮೆ ಸೃಷ್ಟಿಸುತ್ತಿದ್ದಾರೆಂದು ಶಾಸಕರು ಸದನದಲ್ಲಿ ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹಾಗೂ ಉಪಕುಲಪತಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ಉಪಕುಲಪತಿಯವರನ್ನು ರಾಜ್ಯಪಾಲರು ನಿಯುಕ್ತಿಗೊಳಿಸುತ್ತಾರೆ. ಅವರ ವಿರುದ್ಧ ಕಾರ್ಯಾಚರಣೆ ನಡೆಸುವ ಅಧಿಕಾರ ರಾಜ್ಯಪಾಲರಿಗೆ ಮಾತ್ರ ಇದೆ. ಈ ವಿಷಯ ರಾಜ್ಯಪಾಲರೂ ಗಂಭೀರವಾಗಿ ಸ್ವೀಕರಿಸಿದ್ದಾರೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಪರೀಕ್ಷಾ ಫಲಿತಾಂಶ ತಡವಾಗಿರುವ ಬಗ್ಗೆ ಸರಕಾರವೂ ಚಿಂತಿತವಾಗಿದೆ ಎಂಬ ಮಾತನ್ನೂ ಅವರು ಹೇಳುತ್ತಿದ್ದಾರೆ. ಇಂತಹ ದೃಶ್ಯ ಮತ್ತೆ ಕಾಣಿಸದಂತೆ ಸರಕಾರ ಗಮನ ಹರಿಸುವುದು ಎಂಬ ಭರವಸೆ ಕೂಡಾ ನೀಡಿದ್ದಾರೆ.
ಮುಂಬೈ ವಿ.ವಿ. ಮಾಜಿ ಉಪಕುಲಪತಿ ಡಾ. ಬಾಲಚಂದ್ರ ಮುಣಗೇಕರ್ ಅವರು ಈ ವಿಷಯವಾಗಿ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದಾರೆ. ಅವರು ಪತ್ರದಲ್ಲಿ ಈಗಿನ ಉಪಕುಲಪತಿಯವರ ರಾಜೀನಾಮೆಯನ್ನು ತಕ್ಷಣ ಪಡೆದು ಹೊಸ ಉಪಕುಲಪತಿಯವರ ಆಯ್ಕೆ ಪ್ರಕ್ರಿಯೆ ಶುರು ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಒಬ್ಬ ಪ್ರಶಾಸಕರನ್ನು ಮತ್ತು ಒಬ್ಬ ಪರೀಕ್ಷಾ ನಿರ್ದೇಶಕರನ್ನು ನಿಯುಕ್ತಿಗೊಳಿಸುವಂತೆಯೂ ಅದರಲ್ಲಿ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂಬೈ ಹೈಕೋರ್ಟ್‌ನ ಓರ್ವ ಸೇವಾ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸುವಂತೆಯೂ, ಪರೀಕ್ಷಾ ಪ್ರಕ್ರಿಯೆಯಲ್ಲಿ ನಡೆದಿರುವ ಹಗರಣವನ್ನ್ನು ತನಿಖೆಗೊಳಪಡಿಸುವಂತೆಯೂ ಆ ಪತ್ರದಲ್ಲಿ ವಿನಂತಿಸಿದ್ದಾರೆ.
ವಿವಿ ಉಪಕುಲಪತಿ ಡಾ. ಸಂಜಯ್ ದೇಶ್‌ಮುಖ್ ಅವರೀಗ ವಿದ್ಯಾರ್ಥಿ ಸಂಘಟನೆ ಮತ್ತು ರಾಜಕೀಯ ಪಾರ್ಟಿಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ ವಿಶ್ವವಿದ್ಯಾನಿಲಯದ ಸಾಂತಾಕ್ರೂಜ್ ಪೂರ್ವದ ಕಲೀನಾ ಪರಿಸರದಲ್ಲಿ ಪೊಲೀಸ್ ಛಾಪು ಕಾಣಿಸುವಂತಾಯಿತು. ಎನ್.ಎಸ್.ಯು.ಐ. ಸಂಘಟನೆಯ ನೇತೃತ್ವವನ್ನು ಕಾಂಗ್ರೆಸ್‌ನ ಮುಂಬೈ ಅಧ್ಯಕ್ಷ ಸಂಜಯ್ ನಿರೂಪಮ್ ಅವರು ವಹಿಸಿದ್ದಾರೆ. ನೈತಿಕತೆಯ ಆಧಾರದಲ್ಲಿ ತಕ್ಷಣ ಉಪಕುಲಪತಿಯವರು ರಾಜೀನಾಮೆ ನೀಡುವಂತೆಯೂ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಿವೆ. ಮುಖ್ಯಮಂತ್ರಿಯವರ ಬಳಿ ಜುಲೈ 31ರ ನಂತರ ಆಗಸ್ಟ್ 5ಕ್ಕೆ ಎಲ್ಲಾ ಪರೀಕ್ಷಾ ಫಲಿತಾಂಶ ಘೋಷಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿರುವುದಕ್ಕೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಉಪಕುಲಪತಿಯವರು ಮುಖ್ಯಮಂತ್ರಿಯವರನ್ನೂ ಭ್ರಮೆಗೆ ತಳ್ಳುತ್ತಿದ್ದಾರೆಂಬ ಟೀಕೆಗಳೂ ಕೇಳಿ ಬಂದಿವೆ.
ಇತ್ತ ಶಿವಸೇನೆ ತನ್ನ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ‘‘ಸಂಘ ಪರಿವಾರದ ವಿಚಾರಧಾರೆಗಳ ವ್ಯಕ್ತಿಯನ್ನು ವಿಶ್ವವಿದ್ಯಾನಿಲಯದಲ್ಲೂ ಇರಿಸುವ ಪರಂಪರೆ ಈಗ ಕಾಣುತ್ತಿದ್ದೇವೆ. ಸಂಘ ವಿಚಾರಗಳ ಮಹಾನುಭಾವರು ದೇಶ್‌ಮುಖ್‌ರನ್ನು ಉಪಕುಲಪತಿಯಾಗಿ ನಿಯುಕ್ತಿಗೊಳಿಸಲು ರಾಜಕೀಯ ಶಿಫಾರಸು ಮಾಡಿದ್ದರು. ಆದರೆ ಶಿಕ್ಷಣದ ಗುಣಮಟ್ಟ ಕಾಪಾಡುವವರನ್ನು ಇಡಬೇಕಿತ್ತು. ಯುವ ಪೀಳಿಗೆಯನ್ನು ಸಶಕ್ತಗೊಳಿಸುವ ಸಮಾಜ ನಿರ್ಮಾಣ ಆಗಬೇಕಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಸಂಘ ಪರಿವಾರದ ವಿಚಾರಗಳ ಜನರಿಂದ ದೂರ ಇರಿಸಬೇಕಾಗಿದೆ. ಡಾ. ದೇಶ್‌ಮುಖ್ ಸಂಘದ ರಾಮಭಾವೂ ಮಹಾಲಗೀ ಸಂಸ್ಥೆಯ ಜೊತೆಗೂಡಿದವರು. ಅವರನ್ನು ಸಂಘ ಪರಿವಾರದವರು ಎಂಬ ಕಾರಣಕ್ಕಾಗಿ ನಿಯಿಕ್ತಿಗೊಳಿಸಿದ್ದರೆ ಇದು ದುರದೃಷ್ಟಕರ’’ ಎಂದು ಬರೆದಿದೆ.
ವಿಶ್ವವಿದ್ಯಾನಿಲಯದ ಆಡಳಿತ ಸಮಿತಿ ಆನ್‌ಲೈನ್ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ವಿರೋಧಿಸಿತ್ತಾದರೂ ಉಪಕುಲಪತಿಗಳು ಆನ್‌ಲೈನ್ ಆಗಲೇಬೇಕೆಂದು ಹಠ ಹಿಡಿದಿದ್ದರು. ಆದರೆ ಈಗ ಫಲಿತಾಂಶ ಬರುವುದಕ್ಕೆ ತೀವ್ರ ತಡವಾಗಿದೆ. ವಿಚಾರಗಳ ಜೊತೆ ಅಂತಹವರಿಗೆ ಯೋಗ್ಯತೆ ಕೂಡಾ ಇರಬೇಕೆಂಬ ಪ್ರಜ್ಞೆ ನಿಯುಕ್ತಿಗೊಳಿಸುವಾಗ ಸರಕಾರಕ್ಕೆ ಇರಬೇಕಾಗಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಮತ.
* * *
ಮಹಿಳೆಯರ ಕಳ್ಳ ಸಾಗಾಟ: ಮಹಿಳೆಯರು ಕಾಣೆ
ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ತಾಗಿಕೊಂಡಿರುವ ಮಹಾ ರಾಷ್ಟ್ರದ ಗಡಿ ಜಿಲ್ಲೆಗಳ ಊರುಗಳಲ್ಲಿ ವಿವಾಹದ ಹೆಸರಲ್ಲಿ ಮಹಿಳೆಯರ ಕಳ್ಳ ಸಾಗಾಟ ನಡೆಯುತ್ತಿದೆ ಎನ್ನುವ ಮಾತು ವಿಧಾನ ಸಭೆಯಲ್ಲಿ ಚರ್ಚೆಗೆ ಬಂದಿದೆ. ಲಾತೂರ್‌ನಲ್ಲಿ ಮಹಿಳೆಯೊಬ್ಬರ ಕಳ್ಳ ಸಾಗಾಟ ಪ್ರಕರಣವು ಬಹಿರಂಗಗೊಂಡ ನಂತರ ವಿಧಾನ ಸಭೆಯಲ್ಲಿ ಚರ್ಚೆಗೆ ಬಂತು. ಆನಂತರ ರಾಜ್ಯ ಮಹಿಳಾ ಆಯೋಗವು ಲಾತೂರ್ ಪೊಲೀಸ್ ಅಧೀಕ್ಷಕರಿಂದ ಇಡೀ ಪ್ರಕರಣದ ವರದಿಯನ್ನು ನೀಡುವಂತೆ ಹೇಳಿತು.
11 ವರ್ಷದ ಒಂದು ಹೆಣ್ಣು ಮಗುವನ್ನು ಲಾತೂರ್‌ನಲ್ಲಿ ಅಪಹರಣಗೈದ ಘಟನೆಯ ತನಿಖೆಯಲ್ಲಿ ಇಂತಹ ಪ್ರಕರಣವು ಬೆಳಕಿಗೆ ಬಂತು. ಸಾಂಗ್ಲಿಯಲ್ಲಿ 34 ವರ್ಷದ ವ್ಯಕ್ತಿಯೊಬ್ಬರಿಗೆ ಈ ಬಾಲಕಿಯನ್ನು ವಿವಾಹಕ್ಕಾಗಿ ಮಾರಲಾಗಿತ್ತು. ಈ ಬಾಲಕಿಯ ಕುಟುಂಬದವರು ಕಾಣೆಯಾದ ಪ್ರಕರಣ ದಾಖಲಿಸಿದ್ದರು. 25 ದಿನಗಳ ನಂತರ ಅವಕಾಶ ಸಿಕ್ಕಿದಾಗ ಈ ಬಾಲಕಿ ತನ್ನ ಮನೆಗೆ ಫೋನ್ ಮಾಡಿದಳು. ಆವಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಲ್ಲಿ ಲಾತೂರುನಿಂದ 300ರಷ್ಟು ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾದ ರಿಪೋರ್ಟ್ ಪೊಲೀಸರು ದಾಖಲಿಸಿ ದ್ದಾರೆ. ಹಾಗಿದ್ದರೂ ಅಲ್ಲಿನ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.