ಕಾಟಿಪಳ್ಳದ ಕುರಿತಾದ ಆಕರ್ಷಣೆ

Update: 2017-08-08 18:48 GMT

ಮಗಳನ್ನು ಬಾಲವಾಡಿಗೆ ಕರೆದೊಯ್ಯುತ್ತಿದ್ದ ಮಾವ ಅಂದು ಬೆಳಗ್ಗೆ ಹೋಗಿಬಿಟ್ಟು ಬಂದಿದ್ದರು. ಮಧ್ಯಾಹ್ನ ಕರೆದೊಯ್ಯಲು ಎಂದಿನಂತೆ ಹೊರಟಿದ್ದರು. ಚಿಕ್ಕಮಕ್ಕಳಾದುದರಿಂದ ಎಲ್ಲ ಮಕ್ಕಳ ಮನೆಯಿಂದಲೂ ಯಾರಾದರೂ ಬಂದು ಕರೆದೊಯ್ಯಬೇಕಾಗಿತ್ತು. ಬಾಲವಾಡಿಯ ಟೀಚರ್ ಆ ಎಲ್ಲ ಮಕ್ಕಳು ಹೋದ ಬಳಿಕವೇ ಶಾಲೆಗೆ ಬೀಗ ಹಾಕಿ ಹೋಗುವ ಕ್ರಮ. ಆದರೆ ಅಂದು ಟೀಚರ್ ನನ್ನ ಮಾವನನ್ನು ಕಾದು ಕಾದು ಸಾಕಾಗಿ ಶಾಲೆಗೆ ಬೀಗ ಹಾಕಿ ನನ್ನ ಮಗಳನ್ನು ತಾನೇ ನಮ್ಮ ಮನೆಗೆ ತಂದು ಬಿಟ್ಟರು.

ಜತೆಗೆ ಮಗುವಿನ ಅಜ್ಜ ಯಾಕೆ ಬರಲಿಲ್ಲ ಎಂದು ಕೇಳಿದಾಗ ಅವರು ಮನೆಯಿಂದ ಹೊರಟಿದ್ದಾರೆ ಎಂದು ತಿಳಿದು ಅವರಿಗೂ ಗಾಬರಿಯಾದ ನನ್ನ ಅತ್ತೆ, ಸೊಸೆಗೂ ಗಾಬರಿಯಾಯಿತು. ನನ್ನ ಮಗಳಂತೂ ಅಜ್ಜ ಇಲ್ಲ ಎನ್ನುವುದನ್ನು ತಿಳಿದು ಅಳುವುದಕ್ಕೇ ಪ್ರಾರಂಭಿಸಿದಳಂತೆ. ಊಟ ಮಾಡಲು ಒಪ್ಪಲಿಲ್ಲ. ಅವಳಿಗೆ ಅಜ್ಜಿಗಿಂತ ಅಜ್ಜ ಎಂದರೆ ತುಂಬಾ ಪ್ರೀತಿಯೆನ್ನುವುದೂ ನಿಜವೇ. ಅಜ್ಜ್ಜ ಮನೆಗೆ ಬಂದ ಬಳಿಕವೇ ಎಲ್ಲರೂ ಊಟ ಮಾಡಿದರಂತೆ. ಸಂಜೆ ಮನೆಗೆ ಬಂದ ಬಳಿಕ ವಿಷಯ ತಿಳಿಯಬೇಕಾದುದು ನನ್ನ ಮನೆ ದಾರಿಯುದ್ದಕ್ಕೂ ಇದ್ದ ಮನೆಗಳವರು ನನಗೆ ಮೊದಲೇ ತಿಳಿಸಿ ಮನೆಗೆ ತಲಪುವುದರೊಳಗೆ ಅದರ ಬಗೆಗೆ ಇದ್ದ ಕಾರಣಗಳ ಬಗ್ಗೆ ನಾನು ಯೋಚಿಸುವಂತೆ ಮಾಡಿತ್ತು. ಸೊಸೆ ವಿಷಯ ತಿಳಿಸಿದಾಗ ನಾನು ಮಾವನಲ್ಲಿ 'ದಾರಿ ತಪ್ಪಿರಬೇಕಲ್ಲ' ಎಂದು ಕೇಳಿದೆ.

'ಹೌದು' ಎಂದರು. ಹಿಂದೆಯೇ ನಮ್ಮ ಊರಿನ ವ್ಯವಸ್ಥಿತವಾದ ರಸ್ತೆಯ ಬಗ್ಗೆ ಹೇಳಿದ್ದೆ. ಬಹಳ ವ್ಯವಸ್ಥಿತವಾದ ರಸ್ತೆಯಾಗಿದ್ದರೂ ಒಂದು ತಿರುವು ತಪ್ಪಿದರೂ ಚಕ್ರವ್ಯೆಹವೇ! ಮತ್ತೆ ಎಲ್ಲಿ ತಿರುಗಿ ಯಾವ ದಿಕ್ಕಿನಲ್ಲಿ ಹೋಗುವುದು ಎನ್ನುವುದು ಪೇಟೆಯಲ್ಲಿದ್ದ ನನಗೇ ಕಷ್ಟ ಅನ್ನಿಸಿರುವಾಗ ಹಳ್ಳಿಯ ದಾರಿಯಲ್ಲಿ ನಡೆದಾಡಿದ ವಯಸ್ಸಾದ ಮಾವನಿಗೆ ದಾರಿ ತಪ್ಪಿರುವುದು ಸಹಜವೇ ಅನ್ನಿಸಿತ್ತು. ಮಾವ ತಿರುಗಿ ತಿರುಗಿ ಸುಸ್ತಾಗಿ ಮುಖ್ಯರಸ್ತೆಗೆ ಬಂದಿದ್ದಾರೆ. ಅಲ್ಲಿದ್ದ ಅಂಗಡಿಯೊಂದರಲ್ಲಿ ಬಾಲವಾಡಿ ಶಾಲೆ ಎಲ್ಲಿ ಎಂದು ವಿಚಾರಿಸಿದಾಗ, ಶಾಲೆ ಬಿಟ್ಟು ಬಹಳ ಹೊತ್ತಾಯಿತು. ನೀವು ಶಾಲೆಯ ಟೀಚರ್ ಮನೆಗೆ ಹೋಗಿ ಎಂದು ಅಲ್ಲಿದ್ದ ಒಬ್ಬ ಹುಡುಗನನ್ನು ಜತೆ ಮಾಡಿ ಕಳುಹಿಸಿ ಕೊಟ್ಟರಂತೆ. ಆ ಮನೆಯಲ್ಲಿದ್ದ ಹಿರಿಯ ಮಹಿಳೆಗೆ ಇವರು ಯಾರೆಂದು ತಿಳಿಯಿತು.

ತಿರುಗಿ ತಿರುಗಿ ಸುಸ್ತಾಗಿದ್ದ ಮಾವನನ್ನು ಕುಳಿತುಕೊಳ್ಳಲು ಹೇಳಿ ಕುಡಿಯಲು ನೀರು ಕೊಟ್ಟಂತೆಯೇ ಒಳಗಿಂದ ಅವರ ಮಗಳು ಬಾಲವಾಡಿಯ ಟೀಚರ್ ಹೊರ ಬಂದರು. ಆಕೆ ತಾನು ಮಗುವನ್ನು ಮನೆಗೆ ಬಿಟ್ಟು ಬಂದುದನ್ನು ತಿಳಿಸಿದ್ದಲ್ಲದೆ, ಮಾವನಿಗೆ ಪುನಃ ತನ್ನ ಮನೆಯ ದಾರಿ ತೋರಿಸಲು ಜತೆಗೆ ಬಂದು ಸಹಕರಿಸಿದರು. ಆ ಮನೆ ನಾನು ಹಿಂದೆ ಪರಿಚಯಿಸಿದ ವೆಂಕಟ್ರಮಣ ಐತಾಳರ ಮನೆಯಾಗಿತ್ತು. ಅವರ ವಯಸ್ಸಾದ ತಂದೆ ತಾಯಿಗಳು ಅವರ ಜತೆಯಲ್ಲೇ ಇರುತ್ತಿದ್ದವರಿಗೆ ನಾವು ಅವರ ಮನೆಗೆ ಹೋಗಿದ್ದಾಗ ಪರಿಚಯವೂ ಆಗಿತ್ತು. ಈ ಬಗ್ಗೆ ಮತ್ತೊಂದು ದಿನ ನಾನು ಆ ದಾರಿಯಾಗಿ ಬರುವಾಗ ಐತಾಳರ ತಾಯಿ ಸಿಕ್ಕಿದವರು ಮಾವನಿಗೆ ದಾರಿ ತಪ್ಪಿದ ವಿಷಯ ಕುರಿತು ತಿಳಿಸಿ ಅವರೆಲ್ಲೋ 'ಕುಲೆತಪ್ಪು' ಮುಟ್ಟಿರಬೇಕು; ಅದಕ್ಕೇ ದಿಕ್ಕು ತಪ್ಪಿ ಸುತ್ತಾಡುವಂತಾಯಿತು ಎಂದು ಹೇಳಿದರು.

ಆ ರಸ್ತೆಗಳ ಬದಿಯಲ್ಲಿ ಕುಲೆತಪ್ಪು ಇರುವುದು ಸಾಧ್ಯವಿಲ್ಲ. ಹಾಗೆಂದೇ 'ಕುಲೆತಪ್ಪು' ಎಂದರೇನೆಂದು ಮಾವನಲ್ಲಿ ಕೇಳಿದರೆ ಹಾಗೊಂದು ಗಿಡ ಉಂಟಂತೆ ನನಗೆ ಗೊತ್ತಿಲ್ಲ ಎಂದರು. ನೀವು ಯಾವುದಾದರೂ ಗಿಡ ಮುಟ್ಟಿದ್ದೀರಾ, ಅಂದರೆ ದಾರಿಯಲ್ಲಿ ಎಲ್ಲಿ ಗಿಡಗಳಿವೆ. ಅಲ್ಲದೆ ನಾನ್ಯಾಕೆ ಗಿಡಗಳನ್ನು ಮುಟ್ಟಲಿ ಎಂದವರೇ ಒಟ್ಟು ನನಗೆ ಕಣ್ಣುಕಟ್ಟಿದಂತಾದುದು ನಿಜ ಎಂದರು. ಎಷ್ಟು ರಸ್ತೆಯಲ್ಲಿ ಹೋದರೂ ಶಾಲೆ ಮಾತ್ರ ಯಾಕೆ ಸಿಗಲಿಲ್ಲ ಎನ್ನುವುದು ಈಗಲೂ ನನಗೆ ವಿಸ್ಮಯವೇ ಎಂದರು. ಶಾಲೆಗೆ ಕರೆದೊಯ್ಯುವ ಜವಾಬ್ದಾರಿ ವಹಿಸಿದಾಗ ಇದ್ದ ನನ್ನ ಭಯ ಸತ್ಯವೇ ಆಗಿತ್ತು. ನನ್ನ ಸೊಸೆಯನ್ನು ಕಳುಹಿಸುವಲ್ಲೂ ಇದೇ ಭಯ. ಯಾಕೆಂದರೆ ಹಳ್ಳಿಯಲ್ಲಿ ಗದ್ದೆ ಹುಣಿ, ಗುಡ್ಡಗಳ ಅಡ್ಡಾದಿಡ್ಡಿಯ ದಾರಿಗಳಲ್ಲಿ ಸಲೀಸಾಗಿ ನಡೆದಷ್ಟು ಸುಲಭ ಈ ವ್ಯವಸ್ಥಿತ ದಾರಿಯಲ್ಲ್ಲ ಎನ್ನುವುದು ನನಗೆ ಗೊತ್ತು.

ಬೆಂಗಳೂರಿನ ಬಡಾವಣೆಗಳಲ್ಲಿರುವ ನನ್ನ ಗೆಳತಿಯರ ಮನೆಗೆ ಎಷ್ಟು ಬಾರಿ ಹೋಗಿದ್ದರೂ ಪ್ರತೀ ಬಾರಿ ಹೋಗುವಾಗಲೂ ದಿಕ್ಕು ತಪ್ಪುತ್ತಿರುವ ಅನುಭವ ನನಗಾಗಿದೆ. ಈಗ ಈ ಅನುಭವವೂ ನಮ್ಮ ಮಗಳನ್ನು ನಮ್ಮ ಜತೆಗೆ ಮಂಗಳೂರಿನ ಶಾಲೆಗೆ ಕರೆದೊಯ್ಯುವ ನಿರ್ಣಯಕ್ಕೆ ಪೂರಕವಾಯಿತು. ನಮ್ಮಿಬ್ಬರ ಕನ್ನಡಾಭಿಮಾನ ಮಗಳನ್ನು ಕನ್ನಡ ಶಾಲೆಗೆ ಸೇರಿಸುವ ನಿರ್ಧಾರವನ್ನೇ ಕೈಗೊಂಡಿತ್ತು. ನಮ್ಮ ಇಬ್ಬರ ಶಾಲಾ ಕಾಲೇಜುಗಳ ಆವರಣದಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳಿದ್ದವು. ನನಗೋ ಮನೆಯ ಹೆಚ್ಚಿನ ಜವಾಬ್ದಾರಿಗಳೊಂದಿಗೆ ಕಾಲೇಜಿನ ಅವಧಿಯಲ್ಲೂ ಮಗಳ ಜವಾಬ್ದಾರಿ ಹೊರುವ ಸಾಧ್ಯತೆ ಇರಲಿಲ್ಲ. ಜತೆಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಅಶಿಸ್ತಿನ ವಾತಾವರಣದ ದಿನನಿತ್ಯದ ಪರಿಚಯ ಆಗುವುದು ಇಷ್ಟವಾಗದ ವಿಷಯವಾಗಿತ್ತು.

ಆದ್ದರಿಂದ ನಮ್ಮವರನ್ನು ಒಪ್ಪಿಸಿ ಅವರ ಶಾಲಾ ಆವರಣದಲ್ಲೇ ಇದ್ದ ಸೈಂಟ್ ಆ್ಯನ್ಸ್ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದೆವು. ಅದೇ ಆವರಣದಲ್ಲಿ ಕಾರ್ಮೆಲ್ ಇಂಗ್ಲಿಷ್ ಮಾಧ್ಯಮದ ಶಾಲೆ ಇದ್ದರೂ ನಮ್ಮ ಆಯ್ಕೆ ಕನ್ನಡ ಮಾಧ್ಯಮದ ಶಾಲೆಯಾಗಿತ್ತು. ಬೆಳಗ್ಗೆ ನನಗಿಂತ ಮೊದಲು ಮಗಳು ಅಪ್ಪ ಹೊರಡುತ್ತಿದ್ದರು. ಅವರ ಶಾಲೆಗಳು ಒಂಬತ್ತು ಗಂಟೆಗೆ ಪ್ರಾರಂಭವಾಗುತ್ತಿದ್ದರೆ, ನನ್ನ ಕಾಲೇಜು ಹತ್ತುಗಂಟೆಗೆ ಪ್ರಾರಂಭವಾಗುತ್ತಿತ್ತು. ಅವರಿಬ್ಬರು 45ಬಿ ಅನಿಲ್ ಬಸ್ಸಿನ ಬೆಳಗ್ಗಿನ ನಿತ್ಯದ ಪ್ರಯಾಣಿಕರಾದರೆ ನಾನು 45ಸಿ ಭವಾನಿ ಬಸ್ಸಿಗೆ ಸರಿಯಾಗಿ ಹೊರಡುತ್ತಿದ್ದೆ. ತಪ್ಪಿದರೆ 45ಸಿ ಜನತಾ ಬಸ್ಸು ಮುಂದಿನ ಹತ್ತು ನಿಮಿಷಗಳೊಳಗೆ ಬರುತ್ತಿದ್ದುದರಿಂದ ಮನೆಯಲ್ಲಿ ಸಣ್ಣ ಮಗನ ಬಗೆಗಿನ ಜವಾಬ್ದಾರಿಗಳನ್ನು ಮುಗಿಸಲು ಅನುಕೂಲವಾಗುತ್ತಿತ್ತು. ಸಂಜೆ ಅಪ್ಪ ಮಗಳು ಅದೇ ಅನಿಲ್ ಬಸ್ಸಲ್ಲಿ ಬರುತ್ತಿದ್ದರೆ, ನನಗೆ 45ಸಿ ಮೋಹನ್ ಬಸ್ಸು ನನ್ನ ಸಮಯಕ್ಕೆ ಸರಿಯಾಗಿ ಸಿಗುತ್ತಿತ್ತು.

 ಕಾಟಿಪಳ್ಳ ಎನ್ನುವುದು ಮಂಗಳೂರಿನ ಜನರಿಗೆ ಒಂದು ವಿಶೇಷ ಆಕರ್ಷಣೆಯಂತಿತ್ತು. ಇದಕ್ಕೆ ಕಾರಣಗಳು ಕೆಲವು. ಒಂದು ನಮ್ಮಂತೆ ಪೇಟೆಯಲ್ಲಿ ಬಾಡಿಗೆಯಲ್ಲಿದ್ದ ಮಧ್ಯಮ ವರ್ಗದ ಜನರು ಸ್ವಂತಕ್ಕೆ ಮಂಗಳೂರಿನ ಆಸುಪಾಸಿನಲ್ಲಿ ಮನೆ ಹಿತ್ತಿಲುಕೊಂಡು ಕೊಳ್ಳುವುದು ಸಾಧ್ಯವಿಲ್ಲದ ಮಾತಾಗಿತ್ತು. ನಾನು ಹಿಂದೆಯೇ ಹೇಳಿದಂತೆ ಯಾವುದೇ ರೀತಿಯ ಸಾಲ ಸೌಲಭ್ಯಗಳಿರಲಿಲ್ಲ. ಸರಕಾರದ ಯೋಜನೆಗಳೂ ಇರಲಿಲ್ಲ. ಕಾಟಿಪಳ್ಳದ ಪುನರ್ವಸತಿಯ ಜನರಿಗೆ ಈಗ ಹನ್ನೆರಡು ವರ್ಷದ 'ಗಡು' ದಾಟಿದುದರಿಂದ ತಮ್ಮಲ್ಲಿದ್ದ ಜಾಗ ಮಾರಾಟ ಮಾಡುವುದಕ್ಕೆ ಇದ್ದ ಅಡ್ಡಿ ದೂರವಾಗಿತ್ತು. ಈ ನಡುವೆ ನಾವೂ 'ಕೈಕಾಗದದ' ಅವಧಿ ಮುಗಿದು ಉಳಿದ ಹನ್ನೊಂದು ಸಾವಿರದ ಮೊತ್ತ ಕೊಟ್ಟು ನಮ್ಮ ಹೆಸರಿಗೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದೆವು.

ಇರುವುದಕ್ಕೆ ಸ್ವಂತ ಮನೆಯೊಂದಿದ್ದು, ಉಳಿದಂತೆ ಹೆಚ್ಚುವರಿ ಸೈಟುಗಳಿದ್ದವರು ಮಾರಾಟ ಮಾಡುತ್ತಿದ್ದರು. ಯಾಕೆಂದರೆ ಆ ಖಾಲಿ ಹಿತ್ತಿಲಿನಿಂದ ಅವರ ನಿತ್ಯ ಜೀವನದ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಿಲ್ಲ ತಾನೇ? ಆದ್ದರಿಂದ ಕೆಲವರು ಸೈಟು ಮಾರಾಟ ಮಾಡಿ ಮಗನಿಗೋ, ತಮ್ಮನಿಗೋ ರಿಕ್ಷಾಕೊಂಡುಕೊಂಡರು, ಇಲ್ಲವೇ ಬಾಡಿಗೆಗೆ ಓಡಿಸಲು ಕಾರುಕೊಂಡವರೂ ಇದ್ದಾರೆ. ಇನ್ನು ಕೆಲವರು ಹೆಣ್ಣು ಮಕ್ಕಳ ಮದುವೆಗೆ ಮಾಡಿದ ಸಾಲಕ್ಕಾಗಿ ಮಾರಾಟ ಮಾಡುತ್ತಿದ್ದರು. ಹೀಗೆ ಮಾರಾಟ ಮಾಡುವ ಸ್ಥಿತಿಯಲ್ಲಿ ಮಂಗಳೂರಿನ ಪೇಟೆಯವರು ದೂರವಾದರೂ ಚಿಂತಿಲ್ಲ; ಬೇಕಾದಷ್ಟು ಬಸ್ಸುಗಳಿವೆ. ಇಲ್ಲಿ ಬಾಡಿಗೆಗೆ ಕೊಡುವ ಹಣ ಬಸ್ಸಿಗೆ ಕೊಟ್ಟರೆ, ಮನೆ ಕೊಂಡುಕೊಳ್ಳುವ ಸಾಧ್ಯತೆಯವರು ಕಾಟಿಪಳ್ಳದ ಕಡೆಗೆ ಆಕರ್ಷಿತರಾದುದು ಆಶ್ಚರ್ಯವಲ್ಲ.

ಬ್ಯಾಂಕ್‌ನವರು ಬಹಳ ಮಂದಿ ಕಾಟಿಪಳ್ಳಕ್ಕೆ ಬಂದರು. ನಮ್ಮ ಪರಿಸರಕ್ಕೆ ಬಂದ ದಂಪತಿ ನಮಗೆ ಬಸ್ಸಿನಲ್ಲಿ ಜತೆಯಾದರು. ಎರಡನೆ ಬ್ಲಾಕ್‌ನಲ್ಲಿ ಮನೆಕೊಂಡ ಬ್ಯಾಂಕ್ ಉದ್ಯೋಗಿ ನಂದಾವರದ ಕಾಲೇಜು ಸಹಪಾಠಿ. ಬಸ್ಸಿನಲ್ಲಿ ಮತ್ತೆ ಜತೆ ಸೇರಿದವರು ಪರಸ್ಪರರ ಮನೆಗಳಿಗೆ ಅಪರೂಪದಲ್ಲಿ ಹೋಗಿ ಬರುವ ರೂಢಿ ಇಟ್ಟುಕೊಂಡೆವು. ನಮ್ಮ ಮನೆಯ ಮುಂದುಗಡೆಯ ರಸ್ತೆಯಲ್ಲೇ ಇದ್ದ ಮನೆ ಹಿತ್ತಿಲನ್ನು ಕೊಂಡವರು ಕೊಟ್ಟಾರದಲ್ಲಿದ್ದ ಲಾರಿ ಡ್ರೈವರ್ ಚಂದಪ್ಪ ಎನ್ನುವವರು. ಇವರು ಮೊದಲೇ ನಮಗೆ ಪರಿಚಿತರಾಗಿದ್ದವರು. ಅವರ ಹಿರಿಯ ಮಗಳು ಅಪ್ಪನ ಶಿಷ್ಯೆಯಾಗಿದ್ದರೆ, ಎರಡನೆ ಮಗ ಕಾಲೇಜಲ್ಲಿ ನನ್ನ ಶಿಷ್ಯನಾಗಿದ್ದ. ಅವರ ಚಿಕ್ಕ ಹೆಣ್ಣು ಮಕ್ಕಳಿಬ್ಬರು ಶಶಿಕಲಾ ಮತ್ತು ಪೂರ್ಣಿಮಾ ನಮ್ಮ ಮನೆಗೆ ಬಂದು ಮಕ್ಕಳೊಂದಿಗೆ ಆಡುತ್ತಿದ್ದರು.

ತಮ್ಮ ಮನೆಗೂ ಕರೆದೊಯ್ಯುತ್ತಿದ್ದರು. ಅವರ ಅಮ್ಮ ಸಂಜೀವಿಯವರೂ ನಮ್ಮಲ್ಲಿಗೆ ಬಂದು ಹೋಗುವ ರೂಢಿ ಇಟ್ಟುಕೊಂಡಿದ್ದರು. ನಮ್ಮ ಅಪ್ಪ ಅಮ್ಮ ಬಂದವರು ಅವರ ಮನೆಗೂ ಒಮ್ಮೆ ಹೋಗಿಬರುವುದು ಸಂಪ್ರದಾಯವೇ ಆಯ್ತು. ಈ ಮನೆಯವರು ನನ್ನ ನೆರೆಯವರಾದುದು ನನ್ನ ಬಂಧುಗಳೇ ಸಮೀಪ ಇದ್ದಂತಾಯಿತು ಎಂದರೆ ತಪ್ಪಲ್ಲ. ಅವರಿಗೂ ಹಾಗೆಯೇ ನಾವು ಅಲ್ಲಿದ್ದುದು ಭಾವನಾತ್ಮಕ ಸಂಬಂಧವೇ ಆಗಿ ಪರಸ್ಪರರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದೆವು. ಮಂಗಳೂರಿನ ಬಿಇಎಂ ಪ್ರಾಥಮಿಕ ಶಾಲೆಯ ಅಧ್ಯಾಪಕಿ ನನ್ನ ಸಹಪಾಠಿಯ ತಂಗಿ ಜಯಂತಿಯೂ ಕಾಟಿಪಳ್ಳದಲ್ಲಿ ಮನೆ ಹಿತ್ತಲು ಖರೀದಿಸಿದರು.

ಅವಳ ಪತಿ ಮಿಲಿಟರಿಯಲ್ಲಿದ್ದು ನಿವೃತ್ತರಾಗಿ ಇಲ್ಲಿಯೇ ನೆಲೆಸಿದರು. ಜತೆಗೆ ಮನೆಯ ಅರ್ಧಭಾಗದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಿರ್ವಹಣೆಗೆ ದಾರಿ ಮಾಡಿಕೊಂಡರು. ವಿದ್ಯಾದಾಯಿನಿ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕಿಯಾಗಿದ್ದ, ಮುಂದೆ ನನ್ನ ಮಗನ ಅಧ್ಯಾಪಕಿಯೂ ಆದ ಕಲಾವತಿ ಟೀಚರ್ ಕೂಡ ನಮ್ಮ ಮನೆಯ ಪರಿಸರದಲ್ಲೇ ಸ್ವಂತ ಮನೆ ಹಿತ್ತಲು ಖರೀದಿಸಿದರು. ಅವರ ಪತಿಯೂ ಪೊಲೀಸ್ ಆಗಿದ್ದವರು ಅಕಾಲದಲ್ಲಿ ನಿಧನರಾದಾಗ ಚಿಕ್ಕಮಕ್ಕಳಾದ ಮೋಹನ್ ಮತ್ತು ಉಮಾಳನ್ನು ಸಾಕಿ ಸಲಹಿ ವಿದ್ಯಾವಂತರನ್ನಾಗಿ ಮಾಡಿದ, ವೃದ್ಧರಾದ ಮಾವನನ್ನು ನೋಡಿಕೊಂಡ ಕಲಾವತಿ ಟೀಚರ್‌ರವರ ಒಂಟಿ ಸಾಹಸ ಮೆಚ್ಚುವಂತಹುದೇ.

 ಪೊಲೀಸ್ ಇಲಾಖೆಯಲ್ಲಿ ನಿವೃತ್ತರಾದ ಒಂದೆರಡು ಕುಟುಂಬಗಳೂ ಇಲ್ಲಿ ಮನೆ ಹಿತ್ತಿಲು ಖರೀದಿಸಿದರು. ಅವರಲ್ಲಿ ಒಬ್ಬರು ನನ್ನ ಸಹೋದ್ಯೋಗಿ ಮಿತ್ರ ಐತಾಳರ ಸಂಬಂಧಿ ಪುಟ್ಟಪ್ಪಯ್ಯನವರು. ಇವರ ಮಗಳೂ ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಅವರು ಮುಂದೆ ಗುಮಾಸ್ತರ ರೇಶನ್ ಅಂಗಡಿ ಇದ್ದುದನ್ನು ಪಡೆದು ಅದನ್ನು ಸಂಪೂರ್ಣ ಜೀನಸಿನ ಅಂಗಡಿಯಾಗಿ ಹಾಗೆಯೇ ಹಣ್ಣು ತರಕಾರಿ ಬ್ರೆಡ್ಡು, ಬಿಸ್ಕಿಟು, ಚಾಕೆಲೇಟ್‌ಗಳನ್ನೆಲ್ಲಾ ಇಟ್ಟುಕೊಂಡಾಗ ನಮಗಂತೂ ತುಂಬಾ ಉಪಕಾರವಾಯಿತು. ಮಂಗಳೂರಿನಿಂದ ಜೀನಸುಗಳನ್ನು ಒಯ್ಯುತ್ತಿದ್ದ ನನ್ನ ಶ್ರಮ ಕಡಿಮೆಯಾಯ್ತು ಎನ್ನುವಂತೆಯೇ ಅವರಿಗೆ ಉತ್ತಮ ವ್ಯಾಪಾರವೂ ಆಯಿತು. ಯಾಕೆಂದರೆ ಅಲ್ಲಿ ಹತ್ತಿರದಲ್ಲಿ ಬೇರೆ ಅಂಗಡಿಗಳಿರಲಿಲ್ಲ. ಹಾಗೆಯೇ 7ನೆ ಬ್ಲಾಕಿನಲ್ಲಿ ಮನೆ ಹಿತ್ತಲು ಖರೀದಿಸಿದವರು ಮೂಲ್ಕಿ ಮೆಡಿಲಿನ್ ಹೈಸ್ಕೂಲಿನ ಶಿಕ್ಷಕಿ. ಅವರ ಪತಿ ವಿದೇಶದಲ್ಲಿದ್ದವರು. ಊರಲ್ಲಿ ನೆಲೆಸುವ ವೇಳೆ ಹೀಗೆ ಸ್ವಂತಕ್ಕೆ ಜಾಗ ಖರೀದಿಸಿದರು.

ಮಂಗಳೂರು ಪೇಟೆಯ ಜನ ಪೇಟೆಯ ಸೌಲಭ್ಯವುಳ್ಳ, ಮಂಗಳೂರಿಗೆ ಸಾಕಷ್ಟು ಬಸ್ಸುಗಳ ವ್ಯವಸ್ಥೆಯಿರುವ ಕಾಟಿಪಳ್ಳದ ಬಗ್ಗೆ ಹೀಗೆ ಆಕರ್ಷಿತರಾದರೆ ಇನ್ನೊಂದು ಆಕರ್ಷಣೆ ಎಂದರೆ ಕಾಟಿಪಳ್ಳದ ಯುವಕ ಯುವತಿಯರ ವೈವಾಹಿಕ ಸಂಬಂಧಗಳಿಗೂ ಪ್ರಾಶಸ್ತ್ರವಿತ್ತು. ಪೇಟೆಯಲ್ಲಿ ಬಾಡಿಗೆಯಲ್ಲಿರುವ ಮಧ್ಯಮ, ಕೆಳಮಧ್ಯಮ ವರ್ಗದ ಮಂದಿಗೆ ಇಲ್ಲಿಯ ಹೆಣ್ಣನ್ನು ಮನೆ ತುಂಬಿಸುವಲ್ಲಿ ಹೆಣ್ಣಿನ ತವರಿಗೆ ಸ್ವಂತದೆಂಬ ಸೂರು ಇದೆ ಎನ್ನುವುದಾದರೆ, ಪೇಟೆಯ ಹುಡುಗಿಯರನ್ನು ಕೊಡುವಲ್ಲಿಯೂ ಹುಡುಗನ ಬಗ್ಗೆ ಅದೇ ಸ್ವಂತದ್ದಾದ ಮನೆ ಹಿತ್ತಿಲಿನ ಘನತೆ ಮುಂದಾಗುತ್ತಿತ್ತು. ಆದರೆ ಇಲ್ಲಿ ಹೆಚ್ಚು ಕಲಿತ ಹುಡುಗರಿಲ್ಲದ್ದರಿಂದ ಇಲ್ಲಿಗೆ ಸೊಸೆಯರಾಗಿ ಬರುವ ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾವಂತರಾಗಿರುತ್ತಿರಲಿಲ್ಲ ಎನ್ನುವುದು ನಿಜವೇ. ಬೀಡಿಕಟ್ಟುವ, ಟೈಲರಿಂಗ್ ತಿಳಿದಿರುವ ಹೆಣ್ಣು ಮಕ್ಕಳಿಗೂ ಗಂಡನ ಮನೆ ಸ್ವಂತದ್ದೆನ್ನುವುದೇ ಪ್ಲಸ್ ಪಾಯಿಂಟ್.

ಇನ್ನು ಕಾಟಿಪಳ್ಳದಲ್ಲಿ ಬಾಡಿಗೆಗೆ ಸಣ್ಣ ಸಣ್ಣ ಮನೆಗಳೂ ಸಿಗುತ್ತಿದ್ದುದರಿಂದ ಇನ್ನು ಕೆಲವರು ಇಲ್ಲಿ ಬಾಡಿಗೆದಾರರಾಗಿಯೂ ಬರುತ್ತಿದ್ದುದು ಉಂಟು. ಹೀಗೆ ಮಂಗಳೂರಿಂದ ಬಂದ ಕೆಲವರು ಪರಿಚಿತರಿದ್ದರು. ಇವೆಲ್ಲಾ ಒಂದೇ ವರ್ಷದಲ್ಲಿ ಆದವುಗಳಲ್ಲದಿದ್ದರೂ ಕಾಟಿಪಳ್ಳದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ನಿಧಾನಗತಿಯ ಬದಲಾವಣೆಗಳು. ಮಸೀದಿ ಸರ್ಕಲ್ ಬಳಿ ಒಬ್ಬರೇ ಒಬ್ಬ ಡಾಕ್ಟರರು ಇದ್ದು, ಅವರು ಊರಿನ ಡಾಕ್ಟರರೆಂದೇ ಗುರುತಿಸಿಕೊಂಡಿದ್ದರು. ಉಳಿದಂತೆ ಸುರತ್ಕಲ್‌ಗೆ ಬರಬೇಕಾಗಿತ್ತು. ಸುರತ್ಕಲ್‌ನಲ್ಲಿ ಸರಕಾರಿ ಆಸ್ಪತ್ರೆಯೂ ಇದ್ದುದಲ್ಲದೆ ಡಾ. ವೇಣುಗೋಪಾಲ್ ಮತ್ತು ಡಾ. ಸುರೇಶ್ ಪ್ರಸಿದ್ಧರಾಗಿದ್ದರು. ಹೀಗೆ ಪಣಂಬೂರಿನ ಪ್ರತಿರೂಪವಾಗದೆ ತನ್ನದೇ ಆದ ಸ್ವಂತಿಕೆಯಿಂದ ಕಾಟಿಪಳ್ಳ ನಿಧಾನಗತಿಯಲ್ಲಿ ಅಭಿವೃದ್ಧಿ ಪಥದತ್ತ ಹೋಗುತ್ತಿತ್ತು. ನನ್ನ ಅನುಭವಕ್ಕೆ ಬಂದವುಗಳು ನನ್ನ ಸುತ್ತಣ ಪರಿಸರದ್ದೇ ಆಗಿದ್ದರೂ ಉಳಿದ ಬ್ಲಾಕ್‌ಗಳ ಮುಸ್ಲಿಂ ಜನಸಮುದಾಯಕ್ಕೂ ಈ ಮೇಲಿನ ಬದಲಾವಣೆಗಳು ಆಕರ್ಷಣೆಗಳು ಅನ್ವಯವಾಗುತ್ತವೆ ಎಂದು ತಿಳಿದಿದ್ದೇನೆ.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News