ಬ್ರಾಹ್ಮಣ ಧರ್ಮದ ಸುತ್ತ ಕಟ್ಟಿರುವ ಮೂರು ಕೋಟೆಗಳಲ್ಲಿ ಅಸ್ಪಶ್ಯತೆ ಹೊರಗಿನ ಕೋಟೆ

Update: 2017-08-10 18:32 GMT

ಮುಂಬೈಯ ಮಾಟುಂಗಾದಲ್ಲಿ ಕುಮಾರ್ ವಿನಯಮಂದಿರ ಅನ್ನುವ ವಿಚಿತ್ರ ಹೆಸರಿನ ದಲಿತ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಸ್ತ್ರೀ ಸಂಘವು ನಡೆಸಿದ ಒಂದು ಶಾಲೆಯಿದು. ಈ ಶಾಲೆಯು ಗಾಂಧೀಜಿಯವರ ಅಸಹಕಾರ ಚಳವಳಿ ಜೋರಿನಲ್ಲಿದ್ದಾಗ ಸ್ಥಾಪಿಸಲಾಗಿತ್ತು. ಅಸಹಕಾರ ಈಗ ಲೋಪವಾಗುತ್ತ ಬಂದಿದ್ದರೂ ಆ ಶಾಲೆಯ ಮೊದಲಿನ ಸ್ವರೂಪದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಶೆಟ್ಯೆ ಅನ್ನುವವರು ಈ ಶಾಲೆಯ ಇತ್ತೀಚಿನ ಮುಖ್ಯಾಧ್ಯಾಪಕರು.

ಇವರು ಸಾಕಷ್ಟು ಕಷ್ಟಪಟ್ಟು ಶಾಲೆಯ ವಿದ್ಯಾರ್ಥಿಗಳ ಒಂದು ಮೇಳವನ್ನು ತಯಾರಿಸಿದ್ದಾರೆ. ಗಣೇಶೋತ್ಸವದಲ್ಲಿ ಈ ಮಕ್ಕಳು ಭಾಗವಹಿಸುವಂತಾಗಲು ಅನೇಕ ಸಾರ್ವಜನಿಕ ಗಣೇಶೋತ್ಸವ ಕಮಿಟಿಗಳಿಗೆ ಅರ್ಜಿ ಬರೆದಿದ್ದಾರೆ. ಅಂತಹುದೇ ಒಂದು ಅರ್ಜಿಯನ್ನು ಮುಂಬೈಯ ಶಂಕರವಾಡಿಯ ಬ್ರಾಹ್ಮಣ ಸಭೆಯ ಗಣೇಶೋತ್ಸವ ಕಮಿಟಿಗೂ ಬರೆದಿದ್ದಾರೆ. ಆಶ್ಚರ್ಯವೆಂದರೆ ಈ ಕುಮಾರ್ ವಿನಯಮಂದಿರದಲ್ಲಿಯ ದಲಿತ ವಿದ್ಯಾರ್ಥಿಗಳಿಂದ ತಮ್ಮ ಗಣೇಶನೆದುರು ಮೇಳ ಮಾಡಿಸಬೇಕೆ, ಬೇಡವೆ? ಅನ್ನುವ ಪ್ರಶ್ನೆಯ ಮೇಲೆ ಬ್ರಾಹ್ಮಣ ಸಭೆಯಲ್ಲಿ ನಡೆದಿರುವಷ್ಟು ವಾದ ವಿವಾದಗಳು ಇನ್ನೆಲ್ಲೂ ನಡೆದಿಲ್ಲ.

ಮೊದಲಿಗೆ ಬ್ರಾಹ್ಮಣ ಸಭೆಯ ವ್ಯವಸ್ಥಾಪಕರು ಸೇರಿ ಇತರ ಮೇಳಗಳನ್ನು ನಾವು ಕರೆಯಿಸುವಾಗ ಬ್ರಾಹ್ಮಣರ ಸಭೆಯಲ್ಲಿ ಈ ಮೇಳವನ್ನೂ ಕರೆಸಿದರಾಯಿತು ಅನ್ನುವ ಮಸೂದೆಯನ್ನು ಬಹುಮತದಿಂದ ಮಂಜೂರು ಮಾಡಿದರು. ಆದರೆ ಇಂತಹ ಮಸೂದೆಯನ್ನು ಮಂಜೂರು ಮಾಡುವುದು ವ್ಯವಸ್ಥಾಪಕ ಮಂಡಳದ ಅಧಿಕಾರವಲ್ಲ, ಈ ಅಧಿಕಾರ ಕೇವಲ ಸಾಧಾರಣ ಸಭೆಗಿದೆ ಎನ್ನುವ ಕಾರಣಗಳನ್ನು ಹೇಳಿ ಬ್ರಾಹ್ಮಣ ಸಭೆಯ ಕೆಲವು ಸಭಾಸದರು ಈ ಪ್ರಶ್ನೆಯನ್ನು ಪರಿಹರಿಸಲು ಸಂಸ್ಥೆಯ ಸರ್ವಸಾಧಾರಣ ಸಭೆಯನ್ನು ಕರೆಯಬೇಕು ಅನ್ನುವಂತಹ ಒಂದು ಅರ್ಜಿಯನ್ನು ಆಗಸ್ಟ್ 18ರಂದು ವ್ಯವಸ್ಥಾಪಕ ಮಂಡಳದವರಿಗೆ ಕೊಡಲಾಯಿತು.

ಅದರಂತೆ 24ನೆಯ ತಾರೀಕಿನಂದು ಸಭೆ ಕರೆಯಲಾಯಿತು ಹಾಗೂ ಅಲ್ಲಿಯ ವ್ಯವಸ್ಥಾಪಕ ಮಂಡಳದವರು ಮಂಜೂರು ಮಾಡಿದ್ದ ಮಸೂದೆಯನ್ನೇ ಬಹುಮತದಿಂದ ಒಪ್ಪಿಕೊಳ್ಳಲಾಯಿತು. ಹಾಗೂ ಅದರಂತೆ ಶೆಟ್ಯೆ ಅವರಿಗೂ ತಿಳಿಸಿಲಾಯಿತು. ಆದರೆ ಈ ಮಸೂದೆಯನ್ನು ಒಪ್ಪಿರದಿದ್ದ ಸುಮಾರು 125 ಪುರಾಣಮತಾಭಿಮಾನಿ ಸಭಾಸದರು 28ರಂದು ಕರೆದ ಸಭೆ ಕಾನೂನುಬಾಹಿರವಾದುದಾಗಿತ್ತು ಹಾಗೂ ಅದರಲ್ಲಿ ಬ್ರಾಹ್ಮಣ ಸಭೆಯ ಸಭಾಸದರಲ್ಲದ ಜನರೇ ಮತ ಚಲಾಯಿಸಿದ್ದಾರೆ ಅನ್ನುವ ಕಾರಣಗಳನ್ನು ಹೇಳಿ ಅದೇ ಪ್ರಶ್ನೆಯನ್ನು ಮತ್ತೆ ಸರಿಯಾಗಿ ಯೋಚಿಸಿ ನಿರ್ಧರಿಸಲು ಬ್ರಾಹ್ಮಣ ಸಭೆಯ ಎರಡನೆಯ ಸರ್ವಸಾಧಾರಣ ಸಭೆಯನ್ನು ಕರೆಯಬೇಕು ಅನ್ನುವ ಅರ್ಜಿಯು ವ್ಯವಸ್ಥಾಪಕ ಮಂಡಳದವರಲ್ಲಿಗೆ ಹೋಯಿತು. ಅದರಂತೆ 9ನೆಯ ಸೆಪ್ಟಂಬರ್‌ಗೆ ಮತ್ತೊಮ್ಮೆ ಸರ್ವಸಾಧಾರಣ ಸಭೆಯನ್ನು ಕರೆಯಲಾಯಿತು. ಏತನ್ಮಧ್ಯೆ ಉಭಯಪಕ್ಷಗಳ ಸಾಕಷ್ಟು ಸಭೆಗಳಾದವು, ಆದರೆ ಎಲ್ಲದರಲ್ಲೂ ವಿರೋಧಕರು ಅಪಯಶಸ್ಸನ್ನೇ ಕಾಣಬೇಕಾಯಿತು.

ಶಾಪಾದಪಿಶರಾದಪಿ ಬ್ರಾಹ್ಮಣಬ್ರುವರು ಅಷ್ಟಕ್ಕೆ ಸುಮ್ಮನಾಗದೆ ಬ್ರಾಹ್ಮಣ ಸಭೆಯ ಮೇಲೆ ಹೈಕೋರ್ಟಿನಲ್ಲಿ ದಾವೆ ಹೂಡಿದರು ಹಾಗೂ 28ನೆ ಆಗಸ್ಟ್‌ನ ಮಸೂದೆಯನ್ನು ಜಾರಿಗೆ ತರದಂತೆ ತಡೆಯಾಜ್ಞೆಯನ್ನು ಕೇಳಿದರು. ಆದರೆ ಅವರ ದುರ್ದೈವ ಅವರಿಗೆ ಅದೂ ಸಿಗಲಿಲ್ಲ. ಹೀಗೆ ಅಸ್ಪಶ್ಯತೆಯನ್ನು ನಿವಾರಿಸುವವರಿಗೆ ಗೆಲುವು ಸಿಗುತ್ತದೆ ಅನ್ನುವಾಗಲೇ ಕೆಲವು ಗಡಿಬಿಡಿಯ ಜನರು ಸೆಪ್ಟಂಬರ್ 9ರ ಸಭೆಯಲ್ಲಿ ದಲಿತರ ಮೇಳವನ್ನು ಇತರ ಮೇಳಗಳು ಒಳಬರುವ ಜಾಗದವರೆಗೆ ಕರೆತರಬೇಕೇ ಇಲ್ಲವೆ ಅನ್ನುವ ಮಸೂದೆಯನ್ನು ಮಂಜೂರು ಮಾಡುವುದನ್ನು ಬಿಟ್ಟು ‘‘ಕುಮಾರ್ ವಿನಯಮಂದಿರದ ಮಕ್ಕಳ ಮೇಳವನ್ನು ಸಭೆಯ ಮಂಟಪದಲ್ಲಿ ಬರಮಾಡಿಕೊಂಡು ಅಲ್ಲಿಯ ಕಾರ್ಯಕ್ರಮ ಮುಗಿದ ಮೇಲೆ ಅವರನ್ನು ದಿವಾನಖಾನೆಯಲ್ಲಿ ಕರೆದುಕೊಂಡು ಹೋಗಿ ಅವರಿಗೆ ದೇವರ ಪ್ರಸಾದ ಕೊಡುವುದು’’ ಅನ್ನುವ ಒಮ್ಮತದ ಮಸೂದೆಯನ್ನು ಮಂಡಿಸಲಾಯಿತು!! ಈ ಮಸೂದೆಯ ಜನಕರು ಡಾ. ಭಾಜೆಕರ್ ಆಗಿದ್ದರು! ಅವರೇ ಮಸೂದೆಯನ್ನು ಮಂಡಿಸಿದ್ದು ಹಾಗೂ ಅವರೇ ಈ ಸಭೆಯ ಅಧ್ಯಕ್ಷರಾಗಿದ್ದರು.

ಮಸೂದೆಯನ್ನು ಮಂಡಿಸಿದ ಮೇಲೆ ಸಭಾಸದರ ಒತ್ತಾಯದ ಮೇಲೆ ವಿರೋಧಕರ ಹಾಗೂ ಪರ ವಹಿಸುವವರ ಐದೈದು ನಿಮಿಷ ಭಾಷಣಗಳಾದವು. ಆದರೆ ಕಡೆಗೆ ಮಸೂದೆಯ ಬಗ್ಗೆ ಮತಗಳನ್ನು ಪಡೆಯುವ ಸಮಯ ಬಂದಾಗ ಮತಗಳನ್ನು ಯಾವ ರೀತಿ ಎಣಿಸಬೇಕು ಅನ್ನುವುದರ ಮೇಲೆ ವಾದ ವಿವಾದಗಳಾಗಿ ಅರಚಾಟ ಕಿರಚಾಟ ಆರಂಭವಾಯಿತು. ಬಹುಶಃ ಒಮ್ಮತದ ಮಸೂದೆ ರದ್ದಾಗಬಹುದೇನೋ ಅನ್ನುವ ಭಯದಿಂದ ಗದ್ದಲದ ಲಾಭ ಪಡೆದು ಮತಗಳನ್ನು ಪಡೆಯದೆಯೇ ಸಭೆ ಮುಗಿಯಿತು ಎಂದು ಸಾರಲು ಹೇಳಿ ಅಧ್ಯಕ್ಷರು ಹೊರಟು ಹೋದರು. ಹಾಗೂ ಅಲ್ಲಿದ್ದ ಪ್ರಶ್ನೆಯ ಮೇಲೆ ಕಡೆಯ ನಿರ್ಣಯ ಕೊಡದೆ ಸಭೆ ಮುಗಿಯಿತು!!

ಮೇಲಿನಂತೆ ಸಭೆ ಪರ್ಯವಸಾನಗೊಂಡಿದ್ದರಿಂದ ಹಾಗೂ ಮರುದಿನವೇ ಗಣೇಶನ ವಿಸರ್ಜನೆ ಇದ್ದುದರಿಂದ ಕುಮಾರ್ ವಿನಯಮಂದಿರದ ಮೇಳದ ಅರ್ಜಿಯ ಬಗ್ಗೆ ಇತ್ಯರ್ಥವಾಗಲು ಹಾಗೂ ಒಂದು ನಿರ್ಧಾರಕ್ಕೆ ಬರುವಂತಾಗಲು ಬ್ರಾಹ್ಮಣ ಸಭೆಯ ವ್ಯವಸ್ಥಾಪಕ ಕಮಿಟಿಯ ತುರ್ತು ಸಭೆಯನ್ನು ಸೆಪ್ಟಂಬರ್ 10ರಂದು ಬೆಳಗ್ಗೆ 8ಗಂಟೆಗೆ ಕರೆಯಲಾಯಿತು. ಕಮಿಟಿಯು ಆಗಸ್ಟ್ 28ರಂದು ಮಂಜೂರು ಮಾಡಿದ್ದ ಮಸೂದೆಯನ್ನು ಜಾರಿಗೆ ತರುವಂತಹ ನಿರ್ಣಯವನ್ನು ತೆಗೆದುಕೊಂಡಿತು!! ಹಾಗೂ ಅದರಂತೆ ಶೆಟ್ಯೆಯವರಿಗೆ ಮೇಳವನ್ನು ತರುವಂತೆ ಹೇಳಲಾದಾಗ ಶೆಟ್ಯೆಯವರು ತಮ್ಮ ಮೇಳವನ್ನು ಅಲ್ಲಿಗೆ ಕರೆದುಕೊಂಡು ಹೋದರು. ಗಮನಿಸಬೇಕಾದಂತಹ ಒಂದು ವಿಷಯವೇನು ಗೊತೇ?, ಸಭಾಗೃಹದ ಮೆಟ್ಟ್ಟಿಲಿಗೆ ಈ ಮೇಳದವರ ಕಾಲು ತಾಗದಂತೆ ವ್ಯವಸ್ಥೆ ಮಾಡಲಾಗಿತ್ತು! ಮೇಳದಲ್ಲಿಯ ಮಕ್ಕಳಿಂದ ಸಭಾಗೃಹದ ಎದುರಿನ ಖಾಲಿ ಜಾಗದಲ್ಲಿ ಪದ್ಯಗಳನ್ನು ಹೇಳಿಸಲಾಯಿತು.

ತೀರ ಬಿಸಿಲಿನಲ್ಲಿ ನಿಲ್ಲಿಸಿದರು ಎಂದಾಗದಿರಲು ಆ ಜಾಗದಲ್ಲೊಂದು ತಾತ್ಕಾಲಿಕ ಮಂಟಪವನ್ನು ಕಟ್ಟಲಾಗಿತ್ತು. ಪದ್ಯಗಳನ್ನು ಹೇಳಿಯಾದ ಮೇಲೆ ಮಕ್ಕಳಿಗೆ ದೇವರ ದರ್ಶನವನ್ನು ಹೇಗೆ ಮಾಡಿಸುವುದು ಅನ್ನುವುದರ ಮೇಲೆ ವಾದವಿವಾದಗಳಾದವು. ಆಗ ಮೆಟ್ಟ್ಟಿಲುಗಳ ಮೇಲಿಂದ ಒಬ್ಬೊಬ್ಬರೇ ಹುಡುಗರು ಗಣೇಶನನ್ನು ಕೂರಿಸಿದ್ದ ದಿವಾನಖಾನೆಯ ಹೊರಬಾಗಿಲಿನಿಂದ ದರ್ಶನ ತೆಗೆದುಕೊಳ್ಳುವುದು ಎಂದು ಸೂಚಿಸಲಾಯಿತು. ಒಬ್ಬೊಬ್ಬರನ್ನೇ ಬಿಡುವಂತಹ ಸೂಚನೆ ಬಂದಿದ್ದರ ಹಿಂದಿನ ಕಾರಣ ಒಟ್ಟಿಗೆ ಒಳಗೆ ಬಿಟ್ಟರೆ ಮಕ್ಕಳು ಅತಿಕ್ರಮಣ ಮಾಡಬಹುದು ಅನ್ನುವ ಅನುಮಾನದಿಂದ. ಹಾಗಾಗಿ ಇದು ವಿನಯ ಮಂದಿರದ ವಿನಯದಿಂದ ಬೆಳೆದ ಮಕ್ಕಳ ಅವಮಾನವಲ್ಲ ಅದು ತನಗಾದ ಅವಮಾನ ಎಂದು ತಿಳಿದ ಶೆಟ್ಯೆಯವರು ಆ ಸೂಚನೆಯನ್ನು ತಳ್ಳಿ ಹಾಕಿದರು.

ಈ ವಿಷಯವೊಂದಕ್ಕೆ ವಾದವಿವಾದಗಳಾಗಿದ್ದು ಏಕೆಂದರೆ ದಿವಾನ ಖಾನೆಯ ಹೊರಗಿನಿಂದ ಮಕ್ಕಳು ಗಣೇಶನ ದರ್ಶನ ಪಡೆಯುವುದು ಶೆಟ್ಯೆಯವರಿಗೆ ಇಷ್ಟವಿರಲಿಲ್ಲ. ಕಡೆಗೆ ಮೆಟ್ಟಿಲಿನ ಮೇಲೆ ಮತ್ತು ದಿವಾನ ಖಾನೆಯ ಐದು ಬಾಗಿಲುಗಳಲ್ಲಿ ಇಬ್ಬಿಬ್ಬರನ್ನು ಕಾವಲು ಇಟ್ಟು ಮಕ್ಕಳನ್ನು ಮೇಲೆ ಕರೆದೊಯ್ಯಲಾಯಿತು ಹಾಗೂ ಹೊರಗಿನ ಗ್ಯಾಲರಿಯಿಂದ ಮಕ್ಕಳು ದರ್ಶನ ಪಡೆದರು. ನಂತರ ಬ್ರಾಹ್ಮಣ ಸಭೆಯ ಅಧ್ಯಕ್ಷರಾದ ಕಾಣೆಯವರು ಮಕ್ಕಳಿಗೆ ಪ್ರಸಾದ ಹಂಚಿದರು! ಹೀಗೆ ಈ ದರ್ಶನದ ಆಸೆಯಿದ್ದ ಮಕ್ಕಳ ಹಾಗೂ ಅವರ ಅಧ್ಯಾಪಕರ ಸ್ವಾಗತವಾದ ಮೇಳವನ್ನವರು ಸ್ವಸ್ಥಾನಕ್ಕೆ ಕರೆದುಕೊಂಡು ಹೋದರು.

ದಲಿತರು ಬ್ರಾಹ್ಮಣರು ಪರಸ್ಪರ ಭೇಟಿಯಾಗಬಾರದು ಅನ್ನುವ ರೂಢಿಯ ಕೋಟೆಯನ್ನು ಒಡೆದು ದಲಿತರನ್ನು ಒಳಗೆ ಕರೆತರಲು ಪ್ರಯತ್ನಿಸಿದ ಬ್ರಾಹ್ಮಣ ಸಂಸ್ಥೆಯ ಕೆಲವು ಸದಸ್ಯರು ತಮ್ಮ ನಿರ್ಧಾರವನ್ನು ಕಡೆತನಕ ಧೈರ್ಯವಾಗಿ ನಿಭಾಯಿಸುವರು ಅನ್ನುವ ಆಸೆಯೊಂದಿತ್ತು. ಆದರೆ ಪಣತೊಟ್ಟ ಈ ಜನ ತಮ್ಮ ಪಣವನ್ನು ಮರೆತು ತಮ್ಮ ಪ್ರತಿಪಕ್ಷಕ್ಕೆ ಶರಣಾದರು ಅನ್ನುವುದೇ ಆಶ್ಚರ್ಯ! ಯುದ್ಧದ ನಿರ್ಧಾರ ಮಾಡಿ ಸಂಗ್ರಾಮಕ್ಕೆ ಸಜ್ಜಾದ ಈ ಜನ ಶರಣಾದದ್ದು ಕೇವಲ ಅಲ್ಪಸಂಖ್ಯಾಕರೆಂದು ಅನ್ನುವ ಮಾತು ನಿಜವಿದ್ದರೆ ನಮಗೆ ಆಶ್ಚರ್ಯವಾಗುತ್ತಿರಲಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ