ಒಣ ಬಾಡಿನ ಗಮಲು-ಕರಿ ಕಣಗಿಲ
ತೆಲುಗು ಸಾಹಿತ್ಯವು ವಾಸ್ತವವಾದಿಯಾಗುವಂತೆ ದಲಿತ ಸಾಹಿತ್ಯ ಒತ್ತಾಯಿಸಿತು. ರೋಮ್ಯಾಂಟಿಕ್ ಕವಿತೆಯ ಏಕತಾನತೆ ಮತ್ತು ಪುನರುಜ್ಜೀವನ ಕಾಲದ ನವೋದಯ ಕವಿತೆಯಿಂದ ದೂರ ಸರಿದು ದಲಿತ ಕವಿತೆ ಸ್ಥಾನ ಸೃಷ್ಟಿಸಿಕೊಂಡಿತು. ಸ್ವಾತಂತ್ರೋತ್ತರ ಕಾಲದಲ್ಲಿ ಬೆಚ್ಚಗೆ ಕುಳಿತು ಬರೆಯುತ್ತಿದ್ದ ಓಲೈಕೆ ಕವಿಗಳನ್ನು ಆರು ಜನ ದಿಗಂಬರ ಕವಿಗಳು ಕಟು ಮಾತುಗಳಲ್ಲಿ ಚಚ್ಚಿ ಬಿಸಾಡಿದರು. ಅದು ತೆಲುಗು ಕವಿತೆಗೆ ಬಹು ಅವಶ್ಯವಿದ್ದ ಒಂದು ತಿರುವನ್ನೊದಗಿಸಿತು. ಸಾಹಿತ್ಯ ಮತ್ತು ಸಮಾಜವನ್ನು ಬೆಸೆಯಿತು. ಕದ್ದನೆಂಬ ಹುಸಿ ಆರೋಪ ಹೊರಿಸಲ್ಪಟ್ಟು, ಮೇಲ್ಜಾತಿಯವರಿಂದ ಜೀವಂತ ಸುಡಲ್ಪಟ್ಟ ದಲಿತ ಹುಡುಗ ಕಂಚಿಕರ್ಲ ಕೋಟೇಶನಿಗೆ ದಿಗಂಬರ ಕವಿಗಳು ತಮ್ಮ 1968ರ ಕವನ ಸಂಗ್ರಹವನ್ನು ಅರ್ಪಿಸಿದರು. ಆನಂತರದ ಮಹಿಳಾ, ದಲಿತ, ಆದಿವಾಸಿ ಇತ್ಯಾದಿ ಅಸ್ಮಿತೆಯ ಚಳವಳಿಗಳಿಗೆ ಇದು ಮುನ್ನುಡಿ ಬರೆಯಿತು. ಬಹುಶಃ ಬಂಡಾಯ ಕವಿತೆಗಳೂ ಮತ್ತು ಆಂಧ್ರದ ಕ್ರಾಂತಿಕಾರಿ ಹೋರಾಟಗಳೂ ಜೊತೆ ಜೊತೆಯಾಗಿ ಮುನ್ನಡೆಯಿತು ಎಂದರೆ ಅಡ್ಡಿಯಿಲ್ಲ.
‘ಕರಿ ಕಣಗಿಲ’ ತೆಲುಗು ದಲಿತ ಕಾವ್ಯ ಕ್ರಿಯೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ. ಮೊದಲ ತಲೆಮಾರಿನಿಂದ ಹಿಡಿದು ಈಗ ಬರೆಯುತ್ತಿರುವವರ ತನಕ ಒಟ್ಟಾರೆ 39 ಕವಿಗಳ 73 ಕವಿತೆಗಳು ಇಲ್ಲಿದ್ದು ಅವು ವಿಭಿನ್ನ ಕಾಲ, ವಿಷಯ, ಸಿದ್ಧಾಂತ, ಶೈಲಿ ಕಾಳಜಿಗಳನ್ನೊಳಗೊಂಡಿವೆ. 100 ವರ್ಷಕ್ಕಿಂತ ಅಧಿಕ ಕಾಲಮಾನದ ದಲಿತ ಕವಿತೆಗಳ ಪ್ರತಿನಿಧಿಸುತ್ತ, ತೆಲುಗು ಕಾವ್ಯದಲ್ಲಿ ದಲಿತ ಕಾವ್ಯ ಒಂದು ಸಾಹಿತ್ಯಕ ಪ್ರಕಾರವಾಗಿ ಬೆಳೆದು ಬಂದ ಬಗೆಯನ್ನು ಇವು ತೋರಿಸಿಕೊಡುತ್ತವೆ. ಇಲ್ಲಿ ದಲಿತ ಸಮುದಾಯದ ಪ್ರತಿಭಟನೆ, ಪ್ರತಿಪಾದನೆಗಳಿಂದ ಶುರುವಾಗಿ ದಲಿತ ದೇವತೆಗಳು, ಆಚರಣೆಗಳು, ವಿಧಿಗಳು, ದಲಿತ ರಂಗಭೂಮಿ, ದಲಿತ ಭಾಷೆ ಮತ್ತು ಆಡುನುಡಿಗಳಿಂದ ದಲಿತರ ಸಾಂಸ್ಕೃತಿಕ ಪರ್ಯಾಯಗಳನ್ನು ಹುಡುಕುವ ತನಕದ ಮಾಗುವಿಕೆ ಕಂಡು ಬರುತ್ತದೆ. 39 ಕವಿಗಳ ಸಣ್ಣ ಪರಿಚಯ ಮತ್ತು ಅವರ ಕವಿತೆಗಳು ಒಟ್ಚಂದದಲ್ಲಿ ತೆಲುಗಿನ ದಲಿತರ ನೋವು, ಸಂಕಟ, ಆಕ್ರೋಶ, ಬಂಡಾಯವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಡಾ. ಎಚ್. ಎಸ್. ಅನುಪಮಾ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ.
ಲಡಾಯಿ ಪ್ರಕಾಶನ ಗದಗ ಈ ಕೃತಿಯನ್ನು ಹೊರತಂದಿದೆ. ಕೃತಿಯ ಮುಖಬೆಲೆ 140 ರೂಪಾಯಿ.