ನೋಟು ರದ್ದತಿ: ಯಾರಿಗೆ ಲಾಭ ಯಾರಿಗೆ ನಷ್ಟ?
ಭಾಗ-1
ಮಾಧ್ಯಮಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡು ತನ್ನ ಸರಕಾರ ದಕ್ಷ, ಬಲಿಷ್ಠ, ‘ಭ್ರಷ್ಟಾಚಾರ ಮುಕ್ತ’ ಎಂಬ ಭ್ರಮೆಯೊಂದನ್ನು ಜನರ ಮಧ್ಯೆ ಬಿತ್ತಿರುವ ಮೋದಿ ಈಗ ಅದನ್ನು ಉಳಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ಒಂದಾದ ಮೇಲೊಂದರಂತೆ ವೈಫಲ್ಯಗಳಾಗುತ್ತಿದ್ದಂತೆ ಮೋದಿ ಸರಕಾರ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಳನ್ನು ರೂಪಿಸುತ್ತಿದೆ. ಹೀಗಾಗಿಯೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲವೊಂದು ಚಟುವಟಿಕೆಗಳು ಭಾರೀ ಚುರುಕು ಪಡೆದುಕೊಂಡಿವೆ. ಒಂದು ಕಡೆೆ ದಲಿತ, ಅಲ್ಪಸಂಖ್ಯಾತರ ದಮನ ನಡೆಯುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿಯೇತರ ರಾಜ್ಯಗಳನ್ನು ಕಬ್ಜಾ ಮಾಡಿಕೊಳ್ಳಲು ನಾನಾ ಅನೈತಿಕ ಕಸರತ್ತುಗಳು ಜಾರಿಯಲ್ಲಿವೆ. ಕಳೆದ ವರ್ಷದ ನವೆಂಬರ್ 8ರಂದು ಮೋದಿ ಇದ್ದಕ್ಕಿದ್ದಂತೆ ‘ಭ್ರಷ್ಟಾಚಾರ ಮುಕ್ತಿ’ಗೆ ಎನ್ನಲಾದ ನೋಟು ರದ್ದತಿಯನ್ನು ಘೋಷಿಸಿದಾಗ ಇದಕ್ಕೂ ಸಂಘ ಪರಿವಾರದ ಘೋಷಿತ ಗುರಿಯಾದ ‘ಕಾಂಗ್ರೆಸ್ ಮುಕ್ತ’ (ಅರ್ಥಾತ್ ‘ಪ್ರತಿಪಕ್ಷ ಮುಕ್ತ’) ಹಿಂದೂ ರಾಷ್ಟ್ರ ಸ್ಥಾಪನೆಗೂ ಸಂಬಂಧವಿರುವ ಕುರಿತು ಅನುಮಾನಗಳು ವ್ಯಕ್ತವಾಗಿದ್ದವು. ನೋಟು ರದ್ದತಿಯ ನಂತರದ ವಿದ್ಯಮಾನಗಳನ್ನು ಅದರಲ್ಲೂ ವಿಶೇಷವಾಗಿ ಕೇವಲ ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಿದ ಐಟಿ ದಾಳಿಗಳನ್ನು ನೋಡಿದರೆ ಆ ಅನುಮಾನಗಳು ದೃಢವಾಗುವಂತಿವೆ. ಅಂದಹಾಗೆ ನೋಟು ರದ್ದತಿಯನ್ನು ಆರ್‌ಬಿಐ ಗವರ್ನರ್ ಬದಲು ಖುದ್ದು ಮೋದಿ ಘೋಷಿಸಿರುವುದು ತನ್ನ ತಥಾಕಥಿತ ಭ್ರಷ್ಟಾಚಾರ ವಿರೋಧಿ ಇಮೇಜನ್ನು ಬೆಳೆಸುವ ಉದ್ದೇಶದಿಂದ ಎಂದು ಬೇರೆ ಹೇಳಬೇಕಾಗಿಲ್ಲ. ನೋಟು ರದ್ದತಿ ಮತ್ತು ಇತ್ತೀಚಿನ ಜಿಎಸ್‌ಟಿ ಯೋಜನೆಗಳು ಯಶಸ್ವಿಯಾಗಿರುವುದಷ್ಟೇ ಅಲ್ಲ, ಜನರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಮೋದಿ, ಅವರ ವಿತ್ತಮಂತ್ರಿ ಮತ್ತವರ ತುತ್ತೂರಿ ಮಾಧ್ಯಮಗಳು ಅವ್ಯಾಹತ ಪ್ರಚಾರ ಮಾಡುತ್ತಿವೆ. ಅವರ ಈ ದಣಿವಿಲ್ಲದ ಹೇಳಿಕೆಗಳು ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಕೊನೆಗೆ ಜನ ಅದನ್ನು ನಂಬು ತ್ತಾರೆ ಮತ್ತು ಸಮ್ಮತಿ ಉತ್ಪಾದನೆ ಎಂಬ ತತ್ವಗಳಿಗೆ ಅನುಗುಣವಾಗಿ ಇವೆ. ಆದರೆ ಇಂದು ಆರ್ಥಿಕ ಕ್ಷೇತ್ರದ ಹಲವಾರು ಸೂಚಕಗಳು ನೋಟು ರದ್ದತಿಯ ವೈಫಲ್ಯವನ್ನು ಸಾರಿ ಹೇಳುತ್ತಿವೆ. ನೋಟು ರದ್ದತಿ ಮತ್ತು ಜಿಎಸ್‌ಟಿಗಳ ದುಷ್ಪರಿಣಾಮವನ್ನು ಅನುಭವಿಸುತ್ತಿರುವ ಸಾಮಾನ್ಯ ಜನತೆಗೂ ಮೋದಿ, ಜೇಟ್ಲಿ ಮಾತುಗಳ ಪೊಳ್ಳುತನದ ಅರಿವಾಗತೊಡಗಿರುವುದಕ್ಕೆ ಸಾಕ್ಷಿಯಾಗಿದೆ ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ಗ್ರಾಹಕ ವಿಶ್ವಾಸ ಸಮೀಕ್ಷೆ (Consumers Confidence Survey).
ಗ್ರಾಹಕ ವಿಶ್ವಾಸ ಸಮೀಕ್ಷೆ ಏನು ಹೇಳುತ್ತದೆ?
ಭಾರತೀಯ ರಿಸರ್ವ್ ಬ್ಯಾಂಕು ದೇಶದ ಆರ್ಥಿಕಸ್ಥಿತಿ ಕುರಿತು ಆಗಾಗ ಜನಾಭಿಪ್ರಾಯವನ್ನು ಸಂಗ್ರಹಿಸುತ್ತಿರುತ್ತದೆ. ಇದನ್ನು ಗ್ರಾಹಕ ವಿಶ್ವಾಸ ಸಮೀಕ್ಷೆ ಎಂದು ಕರೆಯಲಾಗುತ್ತದೆ. ಉತ್ತರಗಳನ್ನು ಆಧರಿಸಿ ಪ್ರಸಕ್ತ ಸ್ಥಿತಿ ಸೂಚಕವನ್ನು (Current Situation Index; ಸಿಎಸ್‌ಐ) ತಯಾರಿಸಲಾಗುತ್ತದೆ. ಸಿಎಸ್‌ಐ 100ಕ್ಕೆ ಮೇಲಿದ್ದರೆ ಜನರಲ್ಲಿ ಆಶಾವಾದ ಇರುವುದನ್ನೂ, 100ಕ್ಕೆ ಕೆಳಗಿದ್ದರೆ ಜನರಲ್ಲಿ ನಿರಾಶೆಯ ಭಾವನೆಯನ್ನು ಸೂಚಿಸುತ್ತದೆ. ಮೋದಿ ಸರಕಾರ ಬಂದ ಹೊಸದರಲ್ಲಿ 2014ರ ಸಪ್ಟೆಂಬರ್‌ನಲ್ಲಿ ಸೂಚ್ಯಂಕ 108 ಇದ್ದುದು ನಿರೀಕ್ಷಿತವೇ ಆಗಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಇದೇ ಸೂಚ್ಯಂಕ 96.8ಕ್ಕೆ ಕುಸಿದಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಬಹುತೇಕ ಭಾರತೀಯರ ಅಭಿಪ್ರಾಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ತುಂಬಾ ಹದಗೆಟ್ಟಿದೆ. ಇತ್ತೀಚಿನ ಸಮೀಕ್ಷೆಯನ್ನು ಆರು ಮಹಾನಗರಗಳಲ್ಲಿ ನಡೆಸಲಾಗಿತ್ತು. ಉದ್ಯೋಗ, ಆದಾಯ, ಉಪಭೋಗ, ಬೆಲೆಗಳೇ ಮೊದಲಾದ ಆರ್ಥಿಕತೆಯ ಸೂಚಕಗಳ ಬಗ್ಗೆ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತ, ಮುಂಬೈ ಮತ್ತು ಹೊಸದಿಲ್ಲಿಗಳಲ್ಲಿ ಜನರ ಅನುಭವಗಳನ್ನು ದಾಖಲಿಸಲಾಗಿತ್ತು. ಸಮೀಕ್ಷೆ ಪರೋಕ್ಷವಾಗಿ ಸೂಚಿಸುತ್ತಿರುವುದೇನೆಂದರೆ ಮತದಾರರು ಎಚ್ಚತ್ತುಕೊಳ್ಳುತ್ತಿದ್ದಾರೆ; ಭ್ರಮಾಲೋಕದಿಂದ ಹೊರಬಂದು ವಾಸ್ತವವನ್ನು ಅರಿತುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ಬಚ್ಚಿಟ್ಟ ಕಪ್ಪುಹಣವೆಲ್ಲ ಸಿಕ್ಕಿತೆ?
ನೋಟು ರದ್ದತಿ ಬಚ್ಚಿಟ್ಟ ಕಪ್ಪುಹಣವನ್ನೆಲ್ಲ ಬಯಲಿಗೆಳೆಯ ಲಿದೆ ಎಂಬುದು ಮೋದಿ ಸರಕಾರದ ಪ್ರಮುಖ ಘೋಷಣೆಗಳಲ್ಲೊಂದಾ ಗಿತ್ತು. ಆದರೆ ಈಗ ಬಾಯ್ಬಿಟ್ಟರೆ ಖಂಡಿತಾ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಇದೆ. ಇಂದು, ಅಂದರೆ ರೂ. 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ 9 ತಿಂಗಳ ನಂತರ, ಒಟ್ಟು ಚಲಾವಣೆಯಲ್ಲಿದ್ದ ರೂ. 15.44 ಲಕ್ಷ ಕೋಟಿ ಮೌಲ್ಯದ ಆ ನೋಟುಗಳಲ್ಲಿ ಎಷ್ಟು ಮರಳಿಬಂದಿದೆ ಎಂಬುದು ಇದುವರೆಗೂ ಗೊತ್ತಾಗಿಲ್ಲ ಎನ್ನುತ್ತಿದೆ ಮೋದಿ ಸರಕಾರ! ವಿತ್ತಮಂತ್ರಿ ಇತ್ತೀಚೆಗೆ ಸಂಸತ್ತಿಗೆ ತಿಳಿಸಿರುವಂತೆ ರಿಸರ್ವ್ ಬ್ಯಾಂಕು ಈಗ ಹಳೆ ನೋಟುಗಳ ಪ್ರಮಾಣವನ್ನು ಸಮಂಜಸಗೊಳಿಸುತ್ತಿದೆಯಂತೆ. ಅಂದರೆ ಮತ್ತೊಮ್ಮೆ ಲೆಕ್ಕ ಮಾಡಲಾಗುತ್ತಿದೆಯಂತೆ. ಇರುವ ಗಣತಿಯಂತ್ರಗಳು ಸಾಕಾಗದಿರುವುದರಿಂದ ಇದೀಗ ಹೊಸ ಗಣತಿಯಂತ್ರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆಯಂತೆ! ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಜನವರಿ 2017ರ ತನಕ ಶೇ. 90ಕ್ಕೂ ಹೆಚ್ಚು ಹಳೆ ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿವೆ.
ಆದರೆ ಭಾರತೀಯ ರಿಸರ್ವ್ ಬ್ಯಾಂಕಿನ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಶೇ.98.8ರಷ್ಟು ಹಳೆ ನೋಟುಗಳು ಮರಳಿ ಬಂದಿರುವುದಾಗಿ ತಿಳಿದುಬರುತ್ತದೆ. ಇದರರ್ಥ ಇನ್ನುಳಿದಿರುವುದು ಕೇವಲ ಶೇ.1.2 ಅಥವಾ ಹೆಚ್ಚೆಂದರೆ ಶೇ. 10ರಷ್ಟು ಹಳೆ ನೋಟುಗಳು. ಹೀಗಿರುವಾಗ ಹೊಸ ಯಂತ್ರಗಳ ಅಗತ್ಯ ಈಗೇಕೆ ಹುಟ್ಟಿಕೊಂಡಿತು? ಯಂತ್ರಗಳ ಅಭಾವವಿರುವುದು ಇವರಿಗೆ ಈಗ, 9 ತಿಂಗಳ ನಂತರವಷ್ಟೆ ತಿಳಿಯಿತೇ? ಹಾಗಾದರೆ ಇಲ್ಲಿಯ ವರೆಗೆ ಇವರು ಏನು ಮಾಡುತ್ತಿದ್ದರು ಎಂದು ಮುಂತಾದ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಇಲ್ಲಿ ಇನ್ನೂ ಒಂದು ಕುತೂಹಲಕಾರಿ ಅಂಶ ಏನೆಂದರೆ ಕಳೆದ ನವೆಂಬರ್‌ನಲ್ಲೇ ವರದಿಯಾಗಿರುವಂತೆ ವಾಪಾಸು ಬಂದ ಹಳೆ ನೋಟುಗಳನ್ನೆಲ್ಲ ಹರಿದು ಚೂರುಮಾಡಿ ಚಿಕ್ಕ ಇಟ್ಟಿಗೆಗಳಾಗಿ ಪರಿವರ್ತಿಸುವ ಗುತ್ತಿಗೆಯನ್ನು ಕೇರಳದ ಕಂಪೆನಿಯೊಂದಕ್ಕೆ ನೀಡಲಾಗಿತ್ತು. ಇದು ನಿಜವೇ ಆಗಿದ್ದಲ್ಲಿ ಇನ್ನಷ್ಟು ಪ್ರಶ್ನೆಗಳು ಏಳುತ್ತವೆ. ಇಟ್ಟಿಗೆಗಳಾಗಿ ಪರಿವರ್ತಿಸುವ ಕಾರ್ಯವನ್ನು ನಿಲ್ಲಿಸಲಾಗಿದೆಯೇ? ಹೌದಾದರೆ ಯಾವತ್ತಿನಿಂದ? ಈಗ ಯಾವುದನ್ನು ಸಮಂಜಸಗೊಳಿಸಲಾಗುತ್ತಿದೆ? ಉಳಿದಿರುವ ನೋಟುಗಳನ್ನು ಮತ್ತೆ ಲೆಕ್ಕ ಹಾಕುವುದರಿಂದ ಏನು ಉಪಯೋಗ?