ನೋಟು ರದ್ದತಿ: ಯಾರಿಗೆ ಲಾಭ? ಯಾರಿಗೆ ನಷ್ಟ?
ಭಾಗ-3
ಆರ್ಥಿಕ ಪರಿಸ್ಥಿತಿ
ನೋಟು ರದ್ದತಿಯ ಉದ್ದೇಶ ಆರ್ಥಿಕಸ್ಥಿತಿಯನ್ನು ಸುಧಾರಿಸಿ ಅದನ್ನು ಮೇಲಕ್ಕೆತ್ತುವುದು ಎಂದು ಆರ್‌ಬಿಐ ಗವರ್ನರ್ ಹೇಳಿದ್ದರು. ಆರ್‌ಬಿಐ ಸಲಹೆಯಂತೆ ನೋಟು ರದ್ದತಿ ಮಾಡಲಾಯಿತೆಂದು ಮೋದಿ ಸರಕಾರ ಹೇಳಿತ್ತು. ಆದರೆ ನೋಟು ರದ್ದತಿಯಿಂದ ಆರ್ಥಿಕತೆಯ ಯಾವುದೇ ಕ್ಷೇತ್ರಕ್ಕೆ ಪ್ರಯೋಜನವಾಗಿರುವ ಬಗ್ಗೆ ಖಾತರಿ ಇಲ್ಲ ಎಂದು ಇತ್ತೀಚಿನ ಅಧಿಕೃತ ಆರ್ಥಿಕ ಸಮೀಕ್ಷೆ ಹೇಳುತ್ತಿದೆ! ವಾಸ್ತವದಲ್ಲಿ ನೋಟು ರದ್ದತಿ ಪರಿಣಾಮವಾಗಿ ಔಪಚಾರಿಕ ಹಾಗೂ ಅನೌಪಚಾರಿಕ ಆರ್ಥಿಕತೆಗಳೆರಡೂ ಗಂಡಾಂತರಕ್ಕೆ ಸಿಲುಕಿವೆ; 9 ತಿಂಗಳ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ. ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ನಿರುದ್ಯೋಗ ವಿಪರೀತ ಮಟ್ಟಕ್ಕೆ ಬೆಳೆದಿದೆ. ಜನರ ಆದಾಯಗಳಲ್ಲಿ ಹೆಚ್ಚಳ ಆಗಿಲ್ಲ.
2016-17ರ ಸಾಲಿನಲ್ಲಿ ಒಟ್ಟು ಮೌಲ್ಯವರ್ಧನೆ (Gross Value Added) ಕಳೆದ ಸಾಲಿಗಿಂತ ಶೇ.1.3ರಷ್ಟು ಕಡಿಮೆಯಾಗಿದೆ. ಗಣಿಗಾರಿಕೆ, ವಿದ್ಯುತ್, ಮೂಲವ್ಯವಸ್ಥೆ, ನಿರ್ಮಾಣ ಸಾಮಗ್ರಿಗಳು, ಗೃಹಬಳಕೆ ವಸ್ತುಗಳು ಮುಂತಾದ ಉತ್ಪಾದನಾ ಕ್ಷೇತ್ರಗಳಲ್ಲಿ ಸಾಧನೆ ಕಳಪೆಯಾಗಿದೆ. ಕೈಗಾರಿಕಾ ಉತ್ಪಾದನೆ ಕಳೆದ ವರ್ಷ ಎಪ್ರಿಲ್-ಜೂನ್ ಅವಧಿಯಲ್ಲಿ ಶೇ.7.1 ಇದ್ದರೆ ಈ ವರ್ಷ ಶೇ.2ಕ್ಕೆ ಇಳಿದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2017ರ ಜೂನ್ ತಿಂಗಳ ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತವಾಗಿದೆ ಎಂದು ಸರಕಾರದ ಅಂಕಿಅಂಶಗಳೇ ಹೇಳುತ್ತಿವೆ. 2017ರ ಎಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ ಶೇ. 3.4 ಏರಿಕೆಯಾಗಿತ್ತು. ಬಳಿಕ ಮೇನಲ್ಲಿ ಶೇ. 2.8ಕ್ಕೆ ಇಳಿದು ಜೂನ್‌ನಲ್ಲಿ ಶೇ. -0.1ಕ್ಕೆ ತಲಪಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಸೂಚ್ಯಂಕ ಶೇ. 8ರಷ್ಟಿದ್ದುದನ್ನು ಗಮನಿಸಬೇಕು. ಆರ್‌ಬಿಐ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್ 30ಕ್ಕೆ ಅಂತ್ಯವಾದ ವಾರದ ಆಯವ್ಯಯ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ.
ಹೂಡಿಕೆ ಮತ್ತು ಉತ್ಪಾದನೆ
ಮೋದಿ ಸರಕಾರದ ಆಡಳಿತದಡಿ ಹೂಡಿಕೆಯೂ ಕಡಿಮೆಯಾಗಿದ್ದು ಕೈಗಾರಿಕಾ ಉತ್ಪಾದನೆಯೂ ಕುಂಠಿತವಾಗಿದೆ. ಮೋದಿಯವರ ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟ್ ಅಪ್ ಇಂಡಿಯಾ’ ಇತ್ಯಾದಿ ಯೋಜನೆಗಳು ಮತ್ತು ಹತ್ತಾರು ವಿದೇಶೀ ಪ್ರವಾಸಗಳ ಹೊರತಾಗಿಯೂ ಹೂಡಿಕೆಯ ಪ್ರಮಾಣ ಕೆಳಗಿಳಿಯುತ್ತಲೇ ಸಾಗಿದೆ. 2014ರಲ್ಲಿ ಹೂಡಿಕೆ ಮತ್ತು ಜಿಡಿಪಿ ನಡುವಿನ ನಿಷ್ಪತ್ತಿ 30.8 ಪ್ರತಿಶತ ಇದ್ದರೆ 2016ರಲ್ಲಿ ಅದು 26.6 ಪ್ರತಿಶತಕ್ಕೆ ಕುಸಿದಿದೆ. ಹೂಡಿಕೆಯ ಮಟ್ಟವನ್ನು ತೋರಿಸುವ ಮೂಲವಸ್ತುಗಳ ಉತ್ಪಾದನೆಯ ಬೆಳವಣಿಗೆ ಕಳೆದ ವರ್ಷ ಶೇ. 14.8ರಷ್ಟಿದ್ದರೆ ಈ ವರ್ಷ ಶೇ. 8ಕ್ಕೆ ಇಳಿದಿದೆ. ಬ್ಯಾಂಕುಗಳು ಕೈಗಾರಿಕೆಗಳಿಗೆ ನೀಡುವ ಸಾಲದ ಪ್ರಮಾಣದಲ್ಲಿಯೂ ಕುಸಿತವಾಗಿದೆ. ಸಂದಾಯವಾಗದ ಸಾಲಗಳ ಹೊರೆಯಿಂದ ತತ್ತರಿಸಿರುವ ಬ್ಯಾಂಕುಗಳು ಈಗ ಸಾಲ ನೀಡುವ ವಿಷಯದಲ್ಲಿ ಭಾರೀ ಎಚ್ಚರಿಕೆ ವಹಿಸುತ್ತಿವೆ. ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಕೈಗಾರಿಕೆಗಳ ಉತ್ಪಾದನೆಯ ಮೇಲೆ ತೀವ್ರ ದುಷ್ಪರಿಣಾಮಗಳಾಗಿವೆ.
ಅಧಿಕೃತ ದತ್ತಾಂಶಗಳೇ ಹೇಳುವಂತೆ 2016ರಲ್ಲಿ 9.3 ಕೋಟಿ ಜನ ಉದ್ಯೋಗಸ್ಥರಾಗಿದ್ದರೆ 2017ರಲ್ಲಿ ಉದ್ಯೋಗಿಗಳ ಸಂಖ್ಯೆ 8.6 ಕೋಟಿಗೆ ಇಳಿದಿದೆ. 2016ರಲ್ಲಿ ಶೇ. 47ರಷ್ಟು ಇದ್ದ ಕಾರ್ಮಿಕರ ಭಾಗವಹಿಸುವಿಕೆ 2017ರಲ್ಲಿ ಶೇ. 43.5ಕ್ಕೆ ಇಳಿದಿರುವುದರ ಅರ್ಥ ಉಳಿದ ಶೇ. 3.5ರಷ್ಟು ಮಂದಿಗೆ ಕೆಲಸ ಸಿಕ್ಕಿಲ್ಲ. ಜಿಎಸ್‌ಟಿ ಜಾರಿಯಾದ ನಂತರ ಉಪಭೋಗದ (consumption) ಮೇಲೆ ತೆರಿಗೆ ಹೆಚ್ಚಾಗಿದೆ. ಪರಿಣಾಮವಾಗಿ ಉಪಭೋಗ ಮತ್ತು ಅಂತಿಮವಾಗಿ ಉತ್ಪಾದನೆಯೂ ಕಡಿಮೆಯಾಗಲಿದೆ. ಇನ್ನು ಗೃಹ ನಿರ್ಮಾಣ ಕ್ಷೇತ್ರದಲ್ಲಿ ಆದ ಬೆಲೆ ಇಳಿಕೆಗೆ ನೋಟು ರದ್ದತಿಯೇ ಕಾರಣವೆಂದು ಮೋದಿ ಸರಕಾರ ಹೇಳಿಕೊಂಡಿತ್ತು. ಆದರೆ ಈಗ ಬೆಲೆಗಳು ಮತ್ತೆ ಏರುಗತಿಯಲ್ಲಿವೆ!
ನೋಟು ರದ್ದತಿಯೂ ತೆರಿಗೆ ಸಂಗ್ರಹವೂ
ನೋಟು ರದ್ದತಿಯ ಪರಿಣಾಮವಾಗಿ ಆದಾಯ ತೆರಿಗೆ ಸಂಗ್ರಹದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ. 2016-17ರಲ್ಲಿ ಆದಾಯ ತೆರಿಗೆ ಮತ್ತು ಜಿಡಿಪಿ ನಡುವಿನ ನಿಷ್ಪತ್ತಿ ಹೆಚ್ಚಾಗಿದೆ ನಿಜ. ಆದರೆ ಇದಕ್ಕೆ ಆ ಸಾಲಿನ ಎರಡೆರಡು ತೆರಿಗೆ ಮನ್ನಾ ಸ್ಕೀಮುಗಳೇ ಕಾರಣ ಹೊರತು ಬೇರೇನೂ ಅಲ್ಲ. ಈ ಸ್ಕೀಮುಗಳು ಇಲ್ಲದಿದ್ದರೆ ನಿಷ್ಪತ್ತಿ ಹೆಚ್ಚುಕಡಿಮೆ ಹಿಂದಿನ ವರ್ಷಗಳಷ್ಟೆ ಇರುತ್ತಿತ್ತು. ವಾಸ್ತವದಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಹೇಳಿಕೊಳ್ಳುವಷ್ಟು ಹೆಚ್ಚಳವೇನೂ ಆಗಿಲ್ಲ, ಎಲ್ಲೊ ಅಲ್ಪಸ್ವಲ್ಪಆಗಿದೆ ಅಷ್ಟೆ. ಇನ್ನು ಸಮಗ್ರ ನೇರ ತೆರಿಗೆ ಸಂಗ್ರಹವನ್ನು (ಆದಾಯ ತೆರಿಗೆ+ಕಾರ್ಪೊರೇಟ್ ತೆರಿಗೆ) ನೋಡಿದರೆ ಅದರ ಪ್ರಮಾಣ ಹೆಚ್ಚುಕಡಿಮೆ ಹಿಂದಿನ ವರ್ಷಗಳಲ್ಲಿ ಇದ್ದಷ್ಟೆ ಇದೆ. ಹಾಗೆ ನೋಡಿದರೆ 2013-14ರ ತನಕ ಅಂದರೆ ನೋಟು ರದ್ದತಿ ಇಲ್ಲದ ಕಾಲದಲ್ಲಿ ಸಮಗ್ರ ನೇರ ತೆರಿಗೆ ಸಂಗ್ರಹದ ಪ್ರಮಾಣ ಈಗಿರುವುದಕ್ಕಿಂತಲೂ ಅಧಿಕವಿತ್ತು.
ಭಯೋತ್ಪಾದಕ ದಾಳಿಗಳು
ಮೋದಿ ಹೇಳಿಕೊಂಡಂತೆ ನೋಟು ರದ್ದತಿ ನಂತರದಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಕಡಿಮೆಯಾಗಬೇಕಿತ್ತು. ಆದರೆ ವಾಸ್ತವ ಬೇರೆಯೇ ಇದೆ. 2016ರಲ್ಲಿ ಜಮ್ಮುಕಾಶ್ಮೀರದಲ್ಲಿ ಒಟ್ಟು 322 ಭಯೋತ್ಪಾದಕ ದಾಳಿಗಳು ನಡೆದಿವೆ. 2016ರ ನವೆಂಬರ್ 8ರ ಬಳಿಕವೂ ಉಗ್ರರ ದಾಳಿಗಳು ಮುಂದುವರಿದಿವೆ. ಮೋದಿ ಸರಕಾರ ಲೋಕಸಭೆಗೆ ತಿಳಿಸಿರುವಂತೆ ಈ ವರ್ಷದ ಜುಲೈ ತನಕ ಈಗಾಗಲೇ ಸುಮಾರು 194 ಭಯೋತ್ಪಾದಕ ದಾಳಿಗಳು ಸಂಭವಿಸಿವೆ. ಹಿಂದಿನ ದಾಖಲೆಗಳನ್ನು ನೋಡುವುದಾದರೆ 2015ರಲ್ಲಿ 208 ದಾಳಿಗಳಾಗಿದ್ದರೆ 2014ರಲ್ಲಿ 222 ಘಟನೆಗಳು ಸಂಭವಿಸಿದ್ದವು.
ಕೊನೆ ಹನಿ:
ನೋಟು ರದ್ದತಿಯ ನಿರ್ಧಾರ ಒಂದು ದೊಡ್ಡ ತಪ್ಪುಎಂಬುದಕ್ಕೆ ಮತ್ತು ಮೇಲೆ ಉಲ್ಲೇಖಿಸಲಾಗಿರುವ ಎಲ್ಲಾ ವಿಷಯ ಗಳಿಗೆ ಪುರಾವೆಯಾಗಿ ಈಗ ಬಂದಿದೆ ಸಂಸತ್ತಿನ ಸಮಿತಿಯೊಂದರ ವರದಿ. ನೋಟು ರದ್ದತಿ ಕುರಿತ ಸಂಸತ್ತಿನ ಸಮಿತಿ ಇತ್ತೀಚೆಗಷ್ಟೆ ತನ್ನ ವರದಿಯನ್ನು ಸಲ್ಲಿಸಿದ್ದು ಅದರ ಪ್ರಕಾರ ನೋಟು ರದ್ದತಿ ಒಂದು ಪ್ರಮಾದವಾಗಿದ್ದು ಅದರ ಉದ್ದೇಶಗಳಲ್ಲಿ ಒಂದಾದರೂ ಈಡೇರಿಲ್ಲ! ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದೆ, ಇಲ್ಲವೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ಅದನ್ನು ಯಾವುದೇ ಕಾರಣಕ್ಕೂ ಪ್ರಕಟಿಸಬಾರದೆಂದು ಮಾಧ್ಯಮಗಳಿಗೆ ತಾಕೀತು ಮಾಡಲಾಗಿರುವುದಾಗಿ ತಿಳಿದುಬಂದಿದೆ! ನೋಟು ರದ್ದತಿಯಿಂದ ಯಾರಿಗೆ, ಎಷ್ಟು, ಏನೆಲ್ಲ ಲಾಭವಾಯಿತೊ ಬಲ್ಲವರಾರು. ಆದರೆ ದೇಶಕ್ಕಂತೂ 180ಕ್ಕೂ ಅಧಿಕ ಪ್ರಾಣಗಳೊಂದಿಗೆ ವೆಚ್ಚಗಳ ಬಾಬತ್ತು ರೂ. 30,000 ಕೋಟಿಗೂ ಅಧಿಕ ನಷ್ಟವಾಗಿದೆ.
****
(ಆಧಾರ: 1.8.2017ರ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಅರುಣ್ ಕುಮಾರ್, 10.8.2017ರ ನ್ಯೂಸ್‌ಕ್ಲಿಕ್‌ನಲ್ಲಿ ಬೊದಪತಿ ಸೃಜನ, 7.8.2017ರ ವಿವೇಕ್ ಕೌಲ್ಸ್ ಡೈರಿಯಲ್ಲಿ ವಿವೇಕ್, 3.8.2017ರ ತೆಹೆಲ್ಕಾದಲ್ಲಿ ಎಂ.ವೈ. ಸಿದ್ದೀಕ್‌ರ ಲೇಖನಗಳು; 10.8.2017ರ ಪಿಟಿಐ, 11.8.2017ರ ಕ್ಯಾಚ್ ನ್ಯೂಸ್ ಮತ್ತು 8.8.2017ರ ಡೆಕ್ಕನ್ ಹೆರಾಲ್ಡ್ ವರದಿಗಳು)