ನಾನೇ ಅಭಿನಯ ಬಸವಣ್ಣ !

Update: 2017-08-26 18:35 GMT

ರಾಜ್ಯದಲ್ಲಿ ಲಿಂಗಾಯತರೆಲ್ಲ ತಮ್ಮದು ಸ್ವತಂತ್ರ ಧರ್ಮ ಎಂದು ಕೂಗೆಬ್ಬಿಸುವುದು ನೋಡಿ ಪತ್ರಕರ್ತ ಎಂಜಲು ಕಾಸಿಗೆ ಅಚ್ಚರಿಯಾಯಿತು. ಹಾಗಾದರೆ ಲಿಂಗಾಯತರನ್ನು ಮುಂದಿಟ್ಟು ಓಟು ಕೇಳುತ್ತಿದ್ದ ಯಡಿಯೂರಪ್ಪ ಅವರದು ಯಾವ ಧರ್ಮ ಎಂಬ ಯಕ್ಷ ಪ್ರಶ್ನೆ ಆತನಿಗೆ ಎದುರಾಯಿತು. ನೇರವಾಗಿ ಯಡಿಯೂರಪ್ಪರಲ್ಲಿಯೇ ಕೇಳಿ ಬಗೆ ಹರಿಸಿಕೊಳ್ಳೋಣ ಎಂದು ಅವರ ನಿವಾಸದ ಕಡೆಗೆ ನಡೆದ. ಬಾಗಿಲು ತಟ್ಟಿದ.

‘‘ಯಾರ್ರೀ ಅದು...’’ ಎನ್ನುತ್ತಾ ಯಡಿಯೂರಪ್ಪರೇ ಬಾಗಿಲು ತೆಗೆದರು. ನೋಡಿದರೆ ಕಾಸಿ...‘‘ಮತ್ತೆ ನೀನಾ? ಇಲ್ಯಾಕೆ ಬಂದೆ....?’’ ಯಡಿಯೂರಪ್ಪ ಸಿಡಿಮಿಡಿಗೊಂಡರು.

‘‘ಸಾರ್...ಅದ್ಯಾರೋ ಮಾಜಿ ಪತ್ರಕರ್ತರೊಬ್ಬರು ತಮ್ಮನ್ನು ‘ಅಭಿನಯ ಬಸವಣ್ಣ’ ಎಂದು ವ್ಯಂಗ್ಯ ಮಾಡಿದರಲ್ಲ...ಅದಕ್ಕೆ ತಮ್ಮನ್ನು ಇಂಟರ್ಯೂ ಮಾಡೋಣ ಎಂದು ಬಂದೆ...’’

‘‘ಅದು ಅಭಿನಯ ಬಸವಣ್ಣ ಅಲ್ಲಾರಿ, ಅಭಿನವ ಬಸವಣ್ಣ...ಅದಕ್ಕೇನಾಗಬೇಕು ಈಗ?’’ ಯಡಿಯೂರಪ್ಪ ಕೇಳಿದರು.

‘‘ಸಾರ್...ನೀವು ಹಿಂದೆ ಸ್ವತಂತ್ರವಾದ ಪಕ್ಷ ಕಟ್ಟಿದ ಹಾಗೆ ಲಿಂಗಾಯತರು ಸ್ವತಂತ್ರ ಧರ್ಮ ಕೇಳುತ್ತಿದ್ದಾರೆ....ಅಭಿನವ ಬಸವಣ್ಣರಾಗಿರುವ ನಿಮ್ಮ ಧರ್ಮ ಯಾವುದು ಸಾರ್?’’ ಕಾಸಿ ಪ್ರಶ್ನಿಸಿದ.

‘‘ನೋಡ್ರೀ...ಅದೆಲ್ಲ ಮುಂದಿನ ಚುನಾವಣಾ ಸಂದರ್ಭಗಳಲ್ಲಿ ನಿರ್ಧಾರವಾಗತ್ತೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಾನೇ ಮುಂದುವರಿಯುವುದಾದರೆ ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಅಗತ್ಯವಿಲ್ಲ. ಒಂದು ವೇಳೆ ಆರೆಸ್ಸೆಸ್‌ನೋರು ಬೇರೆ ಯಾರನ್ನಾದರೂ ಮುಖ್ಯಮಂತ್ರಿಯಾಗಿ ಘೋಷಿಸಿದರೆ, ಲಿಂಗಾಯತ ಸ್ವತಂತ್ರಧರ್ಮವಾಗಬೇಕು ಎನ್ನುವ ಚಳವಳಿಯ ನೇತೃತ್ವ ನಾನೇ ವಹಿಸುತ್ತೇನೆ...’’ ಯಡಿಯೂರಪ್ಪ ಘೋಷಿಸಿದರು.

‘‘ಸಾರ್ ನೀವು ಸ್ವತಂತ್ರ ಧರ್ಮದ ಹಿಂದೆ ಹೋದರೆ, ಹಿಂದೂ ಧರ್ಮದ ಗತಿಯೇನು?’’

‘‘ಅದಕ್ಕಿದ್ದಾರಲ್ಲ, ಅನಂತಕುಮಾರ್, ಸುರೇಶ್ ಕುಮಾರ್ ಮೊದಲಾದವರು. ಅವರು ನೋಡ್ಕೋತಾರೆ...’’

‘‘ಕರಂದ್ಲಾಜೆಯವರು ನಿಮ್ಮನ್ನು ಬೆಂಬಲಿಸಬಹುದೆ’’ ಕಾಸಿ ಅನುಮಾನದಿಂದ ಕೇಳಿದ.

‘‘ಲಿಂಗಾಯತ ಸ್ವತಂತ್ರ ಧರ್ಮವಾದರೆ ನಾನು ಅಭಿನವ ಬಸವಣ್ಣ. ಹಾಗೆಯೇ ಶೋಭಾ ಅವರು ಅಭಿನವ ಅಕ್ಕಮಹಾದೇವಿ...’’

‘‘ಸಾರ್...ನೀವೇಕೆ ಲಿಂಗಾಯತರ ಸಮಾವೇಶದಲ್ಲಿ ಭಾಗವಹಿಸಲಿಲ್ಲ...’’ ‘‘ಯಾರ್ರೀ ಹೇಳಿರೋದು ನಾನು ಹೋಗಿಲ್ಲ ಅಂತ? ನಾನು ಮಾರುವೇಷದಲ್ಲಿ ಹೋಗಿದ್ದೆ. ನೇರವೇಷದಲ್ಲಿ ಹೋಗಿದ್ದರೆ ಅದನ್ನೇ ಹಿಡಿದುಕೊಂಡು ಈಶ್ವರಪ್ಪನೋರು ಸಂಗೊಳ್ಳಿ ರಾಯಣ್ಣ ವೇಷ ಹಾಕಿ ಕುಣಿಯೋರು. ಅದಕ್ಕಾಗಿ ಮಾರು ವೇಷದಲ್ಲಿ ಸಮಾವೇಷದಲ್ಲಿ ಭಾಗವಹಿಸಬೇಕಾಯಿತು...’’

‘‘ಸಾರ್ ಹಂಗಾದ್ರೆ ನೀವು ಎರಡು ದೋಣಿಯ ಮೇಲೆ ಕಾಲಿಟ್ಟಿದ್ದೀರಿ ಅಂತಾಯ್ತು..’’ ಕಾಸಿ ಆತಂಕದಿಂದ ಕೇಳಿದ.

‘‘ಅಯ್ಯೋ ಬಿಜೆಪಿಯದ್ದು ತೂತು ದೋಣಿ ಕಣ್ರೀ...ಇದನ್ನೇ ನಂಬಿಕೊಂಡರೆ ನಡುವೆ ಹೊಳೆಯಲ್ಲಿ ಮುಳುಗಿ ಸಾಯಬೇಕಾಗುತ್ತದೆ. ಅದಕ್ಕೆ...ನನ್ನ ಒಂದು ಕಾಲು ಲಿಂಗಾಯತ ಸ್ವತಂತ್ರದ ಕಡೆಗೆ. ಇನ್ನೊಂದು ಕಾಲು ಹಿಂದುತ್ವದ ಕಡೆಗೆ...’’ ಯಡಿಯೂರಪ್ಪ ವಿವರಿಸಿದರು.

‘‘ಆದರೆ ಬಿಜೆಪಿಯ ನಾಯಕರು ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಅಲ್ಲವೇ ಅಲ್ಲ ಎಂದು ಹೇಳುತ್ತಿದ್ದಾರೆ. ಲಿಂಗಾಯತ ಸ್ವಾಮೀಜಿಗಳೆಲ್ಲ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮ್ಮ ಬಗ್ಗೆ ಆಕ್ರೋಶಗೊಂಡಿದ್ದಾರೆ....’’ ಕಾಸಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದ.

‘‘ನೋಡ್ರೀ ಕಾಸಿಯವರೆ...ನಾನು ಸ್ಥಾವರಲ್ಲ, ಜಂಗಮ ಎನ್ನುವುದು ನಮ್ಮ ಸ್ವಾಮೀಜಿಗಳಿಗೆ ಚೆನ್ನಾಗಿ ಗೊತ್ತಿದೆ. ಈ ಹಿಂದೆ ನನ್ನದೇ ಸ್ವತಂತ್ರ ಪಕ್ಷವನ್ನು ಘೋಷಿಸಿ ಈ ಬಿಜೆಪಿಯೋರಿಗೆ ಪಾಠ ಕಲಿಸಿದ್ದೆ. ಒಂದಲ್ಲ ಒಂದು ದಿನ ನಾನು ಲಿಂಗಾಯತ ಸ್ವತಂತ್ರ ಧರ್ಮದ ಕಡೆಗೆ ಕೂಡಲ ಸಂಗಮ ಆಗಲಿದ್ದೇನೆ. ಅದಕ್ಕಾಗಿಯೇ ನಾನು ಬಸವಣ್ಣ ಅವರ ವೇಷಗಳನ್ನು ಸಿದ್ಧಗೊಳಿಸಿ ಇಟ್ಟಿದ್ದೇನೆ....ಒಟ್ಟಿನಲ್ಲಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ...ಈಗಾಗಲೇ ಕೆಲವು ರಾಜಕೀಯ ವಚನಗಳನ್ನು ನಾನು ಬರೆದಿಟ್ಟಿದ್ದೇನೆ...ಸಮಯ ಬಂದಾಗ ಯಾವುದಾದರೂ ಒಂದು ಟಿವಿಯ ಮುಂದೆ ಅದನ್ನು ಓದಲಿದ್ದೇನೆ...’’

‘‘ಸಾರ್...ಕೆಲವು ಸ್ಯಾಂಪಲ್ ವಚನಗಳನ್ನು ಇಲ್ಲಿ ಓದಿ ಸಾರ್...’’ ಕಾಸಿ ಅಂಗಲಾಚಿದ.

‘‘ಸರಿ ಹಾಗಾದರೆ...’’ ಎನ್ನುತ್ತಾ ಕಿಸೆಯಿಂದ ಚೀಟಿ ತೆಗೆದು ಓದ ತೊಡಗಿದರು. ‘‘ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಬರಡು ಹಸಿರಾಗುವುದಯ್ಯ,

ಹರ ಹರ ಮೋದೀಶ್ವರ, ಈ ಶರಣಂಗೆ ಒಲಿದರೆ

ರಾಜ್ಯಗಾದಿಯ ಏರಿ ನಿನ್ನ ಜಪಿಸುವೆನಯ್ಯ...’’

ಕಾಸಿ ಆ ವಚನಗಳ ಸಾಲುಗಳಿಂದ ರೋಮಾಂಚನಗೊಂಡ. ‘‘ಸಾರ್ ಇನ್ನೊಂದು ಓದಿ ಸಾರ್...’’ ಪ್ರೋತ್ಸಾಹಿಸಿದ.

‘‘ಇವನಾರವ ಇವನಾರವ ಎಂದೆನಿಸದಿರಯ್ಯ

ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ

ಹರ ಹರ ಮೋದೀಶ್ವರ, ನಿನ್ನ ಕೃಪೆವೊಂದಿದ್ದರೆ ನಾನೇ ಹಿಂದೂ, ನಾನೇ ಶರಣ, ನಾನೇ ವೀರಶೈವ

ನೀ ಬಯುಸುವುದೆಲ್ಲ ನಾನಾಗುವೆನಯ್ಯ...’’ ಎಂದು ತನ್ಮಯರಾಗಿ ಕಣ್ಣು ಮುಚ್ಟಿದರು.

‘‘ಸಾರ್, ಲಿಂಗಾಯತ ಸ್ವತಂತ್ರ ಧರ್ಮವಾದರೆ ಕುಮಾರಸ್ವಾಮಿಯವರು ಒಕ್ಕಲಿಗ ಜಾತಿಯನ್ನು ಸ್ವತಂತ್ರ ಧರ್ಮ ಮಾಡುತ್ತಾರಂತೆ ಹೌದೇ?’’ ಕಾಸಿ ಇನ್ನೊಂದು ಪ್ರಶ್ನೆ ಕೇಳಿದ.

‘‘ಒಕ್ಕಲಿಗ ಜಾತಿ ಮೊದಲು ದೇವೇಗೌಡರ ಹಿಡಿತದಿಂದ ಸ್ವತಂತ್ರವಾಗಬೇಕಾಗಿದೆ. ಅದಕ್ಕಾಗಿ ನನ್ನ ಬೆಂಬಲವೂ ಇದೆ’’ ಯಡಿಯೂರಪ್ಪ ಘೋಷಿಸಿದರು.

‘‘ಸಾರ್, ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆಯಾ?’’

‘‘ನನ್ನ ಪ್ರಯತ್ನವನ್ನು ನಾನು ಗರಿಷ್ಠ ಮಟ್ಟದಲ್ಲಿ ಮಾಡುತ್ತಿದ್ದೇನೆ’’ ಯಡಿಯೂರಪ್ಪ ಹೇಳಿದರು.

‘‘ಏನು ಪ್ರಯತ್ನ ಸಾರ್?’’ ‘‘ಅದೇ ಬಿಜೆಪಿ ಅಧಿಕಾರಕ್ಕೆ ಬರದ ಹಾಗೆ ನೋಡಿಕೊಳ್ಳಲು ನನ್ನ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇನೆ. ಹಾಗೆಯೇ ಈಶ್ವರಪ್ಪ ಅವರೂ ನನಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದಾರೆ. ಹೀಗೆ ಪರಸ್ಪರ ನಾವು ಸಹಕರಿಸುತ್ತಾ ಹೋದರೆ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಬಹುದು...’’ ಯಡಿಯೂರಪ್ಪ ಹೇಳಿದರು.

‘‘ಅಲ್ಲ ಸಾರ್...ನಿಮ್ಮ ಕೆಲಸ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದಲ್ಲವಾ?’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ನೋಡ್ರೀ...ನಾವು ಅಧಿಕಾರಕ್ಕೆ ತಂದ ಬಳಿಕ, ಆ ಆರೆಸ್ಸೆಸ್‌ನ ಸಂತೋಷ್‌ನನ್ನು ತಂದು ಕೂರಿಸಿದರೆ, ನಮ್ಮ ಸಂತೋಷ ಬೀದಿ ಪಾಲಾಗುವುದಿಲ್ಲವೇ?’’

‘‘ಸಾರ್, ಕಾಂಗ್ರೆಸ್ ಜೊತೆಗೆ ಒಳ ಒಪ್ಪಂದ ಏನಾದರೂ ಮಾಡಿದ್ದೀರಾ?’’

‘‘ನೋಡ್ರೀ...ಈ ಕಾಂಗ್ರೆಸ್‌ನೋರು ಯಾವತ್ತೂ ಗೆಲ್ಲೋರಲ್ಲ. ಬಿಜೆಪಿ ಸೋಲತ್ತೆ. ಅದಕ್ಕಾಗಿ ಕಾಂಗ್ರೆಸ್ ಗೆಲ್ಲತ್ತೆ. ಈ ಬಾರಿಯೂ ನನ್ನ ಪೂರ್ಣ ಪ್ರಮಾಣದ ಕೊಡುಗೆ ನೀಡುತ್ತೇನೆ ಎಂದು ಕಾಂಗ್ರೆಸ್‌ಗೆ ಹೇಳಿದ್ದೇನೆ’’

‘‘ಸಾರ್, ಸಮೀಕ್ಷೆ ಕಾಂಗ್ರೆಸ್ ಗೆಲ್ತದೆ ಎಂದು ಹೇಳಿದೆ. ನಿಮ್ಮ ಅಭಿಪ್ರಾಯವೇನು?’’

‘‘ಆ ಸಮೀಕ್ಷೆಯನ್ನು ನಡೆಸಿರೋದೆ ನಾನು ಕಣ್ರೀ...’’ ಎಂದು ಯಡಿಯೂರಪ್ಪ ಮೀಸೆ ತಿರುವಿದರು. ಯಡಿಯೂರಪ್ಪರ ರಾಜಕೀಯಕ್ಕೆ ಕಾಸಿ ತಲೆತಿರುಗಿ ಬಿದ್ದೇ ಬಿಟ್ಟ.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News