ನ್ಯಾಯಾಂಗದಲ್ಲಿ ಅಹಿತಕರ ಬೆಳವಣಿಗೆಗಳು

Update: 2017-08-29 18:38 GMT

ಭಾಗ-1

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅದರ ನಾಲ್ಕು ಆಧಾರಸ್ತಂಭಗಳಲ್ಲಿ ಒಂದಾದ ನ್ಯಾಯಾಂಗ ಯಾರಿಗೂ ಬಗ್ಗದೆ ಸಗ್ಗದೆ ನ್ಯಾಯದ ಪರವಾಗಿ, ಸಂವಿಧಾನದ ಪರವಾಗಿ, ಜನಪರವಾಗಿ ಕಾರ್ಯಾಚರಿಸುತ್ತದೆ ಎಂದು ನಿರೀಕ್ಷಿಸಲಾಗುತ್ತದೆ. ಆದರೆ ಭಾರತದಲ್ಲಿ ಇಂದು ಆ ನಂಬಿಕೆಯ ಬುಡವನ್ನೇ ಅಲುಗಾಡಿಸುವಂತಹ ಘಟನೆಗಳು ಸಂಭವಿಸುತ್ತಿವೆ. ಕಳೆದ ಮೂರು ವರ್ಷಗಳಿಂದೀಚೆಗೆ ನ್ಯಾಯಾಂಗದಲ್ಲಿ ನಡೆಯುತ್ತಿರುವ ಕೆಲವೊಂದು ವಿದ್ಯಮಾನಗಳು ಜನ ಅದರ ಮೇಲಿಟ್ಟಿರುವ ಭರವಸೆಯನ್ನು ಕಳೆದುಕೊಳ್ಳುವ ಹಾಗಿವೆ.

ಉದಾಹರಣೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಳಗೊಂಡಿದ್ದ ಪ್ರಕರಣವೊಂದರಲ್ಲಿ ಅವರಿಗೆ ಅನುಕೂಲಕರವಾದ ತೀರ್ಪು ನೀಡಿದ್ದ ಗುಜರಾತ್ ಹೈಕೋರ್ಟಿನ ನ್ಯಾ ಎಂ. ಆರ್. ಶಾರನ್ನು ಹೊರರಾಜ್ಯಗಳಿಗೆ ವರ್ಗಾವಣೆ ಮಾಡಲು ಮೋದಿ ಸರಕಾರ ಸಮ್ಮತಿಸಿಲ್ಲ. ಕುಟುಂಬಸ್ಥರು ಆರ್ಥಿಕವಾಗಿ ಅನುಚಿತ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿರುವ ನ್ಯಾ ಹೇಮಂತ್ ಗುಪ್ತಾರನ್ನು ವ್ಯಾಪಕ ಭ್ರಷ್ಟಾಚಾರದ ಆರೋಪಗಳಿರುವ ಮಧ್ಯಪ್ರದೇಶಕ್ಕೆ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಕರ್ನಾಟಕ ಹೈಕೋರ್ಟಿನ ನ್ಯಾ ಜಯಂತ್ ಪಟೇಲರಿಗೆ ಮುಖ್ಯ ನ್ಯಾಯಾಧೀಶರ ಹುದ್ದೆ ತಪ್ಪಿಹೋಗಲು ಇಶ್ರತ್ ಜಹಾನ್ ಪ್ರಕರಣದಲ್ಲಿ ನೀಡಿದ ಆದೇಶವೇ ಕಾರಣ ಎನ್ನಲಾಗುತ್ತಿದೆ. ಉತ್ತರಾಖಂಡದಲ್ಲಿ ಸರಕಾರ ರಚನೆಯ ಸಂದರ್ಭದಲ್ಲಿ ನ್ಯಾ ಕೆ.ಎಂ.ಜೋಸೆಫ್‌ರ ತೀರ್ಮಾನ ಮೋದಿ ಸರಕಾರಕ್ಕೆ ರುಚಿಸದ ಕಾರಣ ಅವರನ್ನು ಸುಪ್ರೀಂ ಕೋರ್ಟಿಗೆ ನೇಮಕ ಮಾಡಲಾಗಿಲ್ಲ ಎನ್ನಲಾಗಿದೆ.

ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಕಳಂಕಿತ ಪೊಲೀಸ್ ಅಧಿಕಾರಿಗಳು ಖುಲಾಸೆಗೊಳ್ಳುತ್ತಿದ್ದರೆ ಅತ್ತ ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಕೆಲವೊಂದು ಸಂಘ ಪರಿವಾರದ ಕಾರ್ಯಕರ್ತರು ಜಾಮೀನಿನ ಮೇಲೆ ಬಿಡುಗಡೆಗೊಳ್ಳುತ್ತಿದ್ದಾರೆ. ರಾಜಸ್ಥಾನ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ತಾನು ನಿವೃತ್ತಿಯಾಗುವ ದಿನದಂದು ದನವನ್ನು ರಾಷ್ಟ್ರೀಯ ಪ್ರಾಣಿಯಾಗಿಸಬೇಕೆಂದು ಸೂಚಿಸಿದ ಪ್ರಸಂಗ ನಡೆದಿದೆ. ಮದ್ರಾಸ್ ಹೈಕೋರ್ಟಿನ ಇತ್ತೀಚಿನ ತೀರ್ಪೊಂದು ತಮಿಳ್ನಾಡಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಸರಕಾರಿ ಕಚೇರಿಗಳು, ಸ್ಟೇಡಿಯಂಗಳಂತಹ ಜಾಗಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕೂ ಮುಂಚೆ ಸುಪ್ರೀಂ ಕೋರ್ಟಿನ ಪೀಠವೊಂದು ಸಿನೆಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆಯನ್ನು ನುಡಿಸಬೇಕೆಂದು ಆದೇಶಿಸುವುದರೊಂದಿಗೆ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕೆಂದು ಸೂಚಿಸಿದೆ. ಇದನ್ನು ನೋಡಿದರೆ ಕಾನೂನುಗಳ ವ್ಯಾಖ್ಯಾನಕ್ಕೆ ಸೀಮಿತವಾಗಬೇಕಿರುವ ನ್ಯಾಯಾಲಯ ತನ್ನ ವ್ಯಾಪ್ತಿಯನ್ನು ಮೀರಿ ಆಳುವ ಪ್ರಭುತ್ವದ ಪ್ರೀತಿಪಾತ್ರ ವಿಷಯಗಳ ಮೇಲೆ ಕಾನೂನು ರಚಿಸಲು ಹೊರಟಿರುವ ಹಾಗಿದೆ.

ಇತ್ತೀಚಿನ ದಿನಗಳಲ್ಲಿ ಜನಗಣಮನ, ವಂದೇ ಮಾತರಂ ಹಾಡುಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಆರಂಭವಾಗಿರುವ ಗುಂಪು ಹಲ್ಲೆಗಳಿಗೂ ಇಂತಹ ತೀರ್ಪುಗಳಿಗೂ ಸಂಬಂಧವಿಲ್ಲ ಎಂದು ಹೇಳಬಲ್ಲೆವೇ?

ಭಾರತದ ಸರ್ವೋಚ್ಚ ನ್ಯಾಯಾಲಯ

ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳು ತೀರ ನಿರಾಶಾದಾಯಕವಾಗಿವೆ ಎಂದೇ ಹೇಳಬೇಕಾಗಿದೆ. ಸ್ವಲ್ಪಸಮಯದ ಹಿಂದೆ ಇದೇ ಸರ್ವೋಚ್ಚ ನ್ಯಾಯಾಲಯ ತನ್ನ ಚಾರಿತ್ರಿಕ ತೀರ್ಪೊಂದರಲ್ಲಿ ‘‘ನಮ್ಮದು ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ದೇಶ. ಇಲ್ಲಿ ವ್ಯಕ್ತಿ ಪ್ರಾಪ್ತವಯಸ್ಕನಾ/ಳಾದ ಬಳಿಕ ತನಗಿಷ್ಟ ಬಂದವಳ/ನ ಜತೆ ಮದುವೆಯಾಗಬಹುದು. ಅಂತರ್ಜಾತೀಯ, ಅಂತರ್ಧರ್ಮೀಯ ವಿವಾಹಕ್ಕೆ ಸಮ್ಮತಿಸದ ತಂದೆತಾಯಂದಿರು ಹೆಚ್ಚೆಂದರೆ ಅವರೊಂದಿಗಿನ ಸಾಮಾಜಿಕ ಸಂಬಂಧಗಳನ್ನು ಕಡಿದುಕೊಳ್ಳಬಹುದು.........

ವಾಸ್ತವವಾಗಿ ಅಂತರ್ಜಾತೀಯ ವಿವಾಹಗಳು ದೇಶದ ಹಿತಾಸಕ್ತಿಯಲ್ಲಿವೆ. ಏಕೆಂದರೆ ಅವು ಜಾತಿ ವ್ಯವಸ್ಥೆಯನ್ನು ನಾಶಪಡಿಸಲಿವೆ’’ ಎಂದು ಸ್ಪಷ್ಟವಾಗಿ ಹೇಳಿದೆ. ಇನ್ನೂ ಕೆಲವು ವರ್ಷಗಳ ಹಿಂದಕ್ಕೆ ಹೋದರೆ ಸರ್ವೋಚ್ಚ ನ್ಯಾಯಾಲಯ ಅಂದು ನೀಡಿರುವ ತೀರ್ಪೊಂದರಲ್ಲಿ ಪ್ರಾಪ್ತವಯಸ್ಕ ಯುವತಿಯೊಬ್ಬಳಿಗೆೆ ತಾನು ವಿವಾಹವಾಗಲಿಚ್ಛಿಸಿದ ವ್ಯಕ್ತಿಯ ಜೊತೆ ಹೋಗಲು ಅನುಮತಿ ನೀಡಿದೆ. ರಾಜಸ್ಥಾನ ಹೈಕೋರ್ಟಿನ ನ್ಯಾಯಾಧೀಶ ಆರ್.ಎಸ್.ರಾಠೋಡ್‌ರ ಮಗಳಾದ ಆಕೆ ಬೇರೊಂದು ಜಾತಿಗೆ ಸೇರಿದ ಯುವಕನನ್ನು ವಿವಾಹವಾಗಲು ಬಯಸಿದ್ದ ಕಾರಣಕ್ಕೆ ಆಕೆಯನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. 20 ವರ್ಷಗಳ ಕೆಳಗೆ ಇದೇ ರೀತಿಯಾದ ಇನ್ನೊಂದು ಪ್ರಕರಣ ನಡೆದಿದೆ. ದಿಲ್ಲಿಯಲ್ಲಿ ಜಾಟ್ ಸಿಖ್ ಯುವತಿ ಮತ್ತು ಖತ್ರಿ ಹಿಂದೂ ಯುವಕನ ಅಂತರ್ಜಾತೀಯ ಪ್ರೇಮ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಅವರ ಪರವಾಗಿ ಆದೇಶ ನೀಡಿತ್ತು. ಆದರೆ ಕೋರ್ಟಿನ ಆದೇಶಕ್ಕೆ ಸೊಪ್ಪುಹಾಕದ ಪಂಜಾಬ್ ಪೊಲೀಸರು ಜೋಡಿಯನ್ನು ನ್ಯಾಯಾಲಯದ ಆವರಣದ ಹೊರಗಿನಿಂದ ಅಪಹರಿಸಿದ್ದರು ಎಂಬ ಆರೋಪಗಳಿವೆ.

ಆಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಎಂ.ಎನ್. ವೆಂಕಟಾಚಲಯ್ಯ ನೇರವಾಗಿ ಪಂಜಾಬ್ ಪೊಲೀಸ್ ಮುಖ್ಯಸ್ಥ ಮತ್ತು ದಿಲ್ಲಿ ಪೊಲೀಸರಿಗೆ ಎಚ್ಚರಿಕೆ ನೀಡಿ ಗಂಭೀರ ಪರಿಣಾಮ ಎದುರಿಸಬೇಕಾಗಿ ಬರಬಹುದು ಎಂದ ಬೆನ್ನಲ್ಲೆ ಜೋಡಿಯನ್ನು ಬಿಟ್ಟುಬಿಡಲಾಯಿತು. ಬಳಿಕ ಅವರಿಬ್ಬರೂ ವಿವಾಹವಾದರು. ಆದರೆ ಇಂದು ಏನಾಗುತ್ತಿದೆ? ಕೇರಳದಲ್ಲಿ ಓರ್ವ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ನಡುವಿನ ಅಂತರ್ಧರ್ಮೀಯ ಮದುವೆ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಪರಿಣಮಿಸಿರುವುದನ್ನು ಕಾಣುತ್ತಿದ್ದೇವೆ. ಇದೇ ಮೇ ತಿಂಗಳಲ್ಲಿ ಈ ವಿವಾಹವನ್ನು ಅಸಿಂಧುಗೊಳಿಸಿದ ಕೇರಳ ಹೈಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.

ಆದರೆ ಸರ್ವೋಚ್ಚ ನ್ಯಾಯಾಲಯ ಏನು ಮಾಡಿತು? ಯುವತಿ ಪ್ರಾಪ್ತವಯಸ್ಕಳಾಗಿದ್ದರೂ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಮರ್ಥಳಾಗಿದ್ದರೂ ಆಕೆಯನ್ನು ಮಾತನಾಡಿಸಿ ಆಕೆಯ ಅಭಿಪ್ರಾಯ ತಿಳಿಯದೆ ಪ್ರಕರಣವನ್ನು ಸೀದಾ ಎನ್‌ಐಎ ತನಿಖೆಗೊಪ್ಪಿಸಿತು! ಆದರೆ ಕಾನೂನಿನಲ್ಲಿ ಆಕೆಯ ಮತಾಂತರವಾಗಲಿ, ಆಕೆಯ ತಂದೆಯ ಆಕ್ಷೇಪಗಳಾಗಲಿ, ಆಕೆ ಉಗ್ರಗಾಮಿ ಸಂಘಟನೆಗಳಿಗೆ ಸೇರಬಹುದು ಎಂಬ ವಾದವಾಗಲಿ, ಆಕೆಯ ಪತಿಗೆ ಉಗ್ರಗಾಮಿ ಸಂಘಟನೆಗಳ ಜೊತೆ ಸಂಬಂಧ ಇರಬಹುದು ಎಂಬ ವಾದವಾಗಲಿ ಅವರಿಬ್ಬರು ಪರಸ್ಪರ ಒಪ್ಪಿಆದ ಮದುವೆಯ ರದ್ದತಿಗೆ ಕಾರಣಗಳಾಗಲಾರವು. ಇಂತಹ ಸಂದರ್ಭಗಳಲ್ಲಿ ಮದುವೆಯನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲವೆಂದು ಕಾನೂನುತಜ್ಞರು ಅಭಿಪ್ರಾಯಿಸುತ್ತಾರೆ.

ಯುವತಿಯ ಮದುವೆ ನ್ಯಾಯಸಮ್ಮತವೇ ಅಲ್ಲವೇ ಎಂಬುದನ್ನು ತೀರ್ಮಾನಿಸುವುದಕ್ಕೂ ಮುನ್ನ ಎನ್‌ಐಎ ತನಿಖೆ ಅತ್ಯಗತ್ಯವೆಂದು ಹೇಳಿರುವ ನ್ಯಾಯಾಲಯದ ನಿರ್ಧಾರ ದೇಶಾದ್ಯಂತ ಪೋಷಕರೊಲ್ಲದ ತೀರ್ಮಾನ ತೆಗೆದುಕೊಳ್ಳುವ ಪ್ರಾಪ್ತವಯಸ್ಕ ಮಹಿಳೆಯರ ಬದುಕಿನಲ್ಲಿ ಸ್ಥಳೀಯ ಅಧಿಕಾರಿಗಳ ಅನಗತ್ಯ ಮಧ್ಯಪ್ರವೇಶ ಮತ್ತು ಕಿರುಕುಳಕ್ಕೆ ದಾರಿ ಮಾಡಿಕೊಟ್ಟಂತಾಗಬಹುದು. ಅಂತರ್ಜಾತೀಯ, ಅಂತಧರ್ಮೀಯ ವಿವಾಹಗಳನ್ನು ಅಥವಾ ಅಸಾಂಪ್ರದಾಯಿಕ ವಿವಾಹಗಳನ್ನು ತಡೆಯಲು ಮುಕ್ತ ಪರವಾನಿಗೆ ನೀಡಿದಂತಾಗಬಹುದು. ‘‘ಇದು ನಿಶ್ಚಯವಾಗಿಯೂ ಭಯಾನಕ ವಿದ್ಯಮಾನ’’ ಎನ್ನುತ್ತಾರೆ ಹಿರಿಯ ವಕೀಲರಾದ ಸಂಜಯ ಹೆಗ್ಡೆ. ಇಲ್ಲಿ ಯುವತಿ ಮತ್ತು ಆಕೆಯ ವಿವಾಹವೆ ಪ್ರಧಾನ ವಿಷಯ. ತನಿಖೆಯ ಅಗತ್ಯವೇನಿದೆ?... ಎಂದು ಪ್ರಶ್ನಿಸುತ್ತಾರೆ ಮತ್ತೋರ್ವ ಹಿರಿಯ ವಕೀಲ ಆನಂದ್ ಗ್ರೋವರ್.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News