ಸಾಯಿನಾಥರ ‘ಅಸಮಾನತೆಯ ಜಾಗತೀಕರಣ’

Update: 2017-09-09 18:43 GMT

ಇದು ದೇಶ ಗ್ರಾಮೀಣ ಸಮಸ್ಯೆಗಳನ್ನು ಒಂದಿಷ್ಟಾದರೂ ಗಂಭೀರವಾಗಿ ತೆಗೆದುಕೊಂಡಿದೆಯೆಂದರೆ ಅದರ ಹಿಂದೆ ಹಿರಿಯ ಪತ್ರಕರ್ತ ಪಿ. ಸಾಯಿನಾಥರ ಕೊಡುಗೆ ಬಹುದೊಡ್ಡದು. ಅವರ ಚಿಂತನೆ, ಬರಹಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ‘ಅಸಮಾನತೆಯ ಜಾಗತೀಕರಣ’ ಪಿ.ಸಾಯಿನಾಥರ ಭಾಷಣ ಮತ್ತು ಲೇಖನವನ್ನೊಳಗೊಂಡ ಪುಟ್ಟ ಕೃತಿ.

2005ರ ಫೆಬ್ರವರಿ 25ರಂದು ಅಮೆರಿಕದ ವ್ಯಾಂಕೋವರ್‌ನಲ್ಲಿ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯ ‘ಸಾಮಾಜಿಕ ಮತ್ತು ಪರಿಸರ ನ್ಯಾಯ ಕೇಂದ್ರ’ ಪ್ರಾಯೋಜಿಸಿ, ಪಿಡಿಎಕ್ಸ್ ಮೀಡಿಯಾ ಪ್ರೊಡಕ್ಷನ್ಸ್ ಪ್ರಸ್ತುತಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾಡಿದ ಭಾಷಣವನ್ನು ಇಲ್ಲಿ ನೀಡಲಾಗಿದೆ. ಪತ್ರಿಕೆಗಳು ಹೇಗೆ ಕೃಷಿ ಕ್ಷೇತ್ರವನ್ನು ಮತ್ತು ಕಾರ್ಮಿಕ ರಂಗವನ್ನು ನಿರ್ಲಕ್ಷಿಸಿವೆ ಎನ್ನುವ ಅಂಶವನ್ನೂ ಈ ಲೇಖನದಲ್ಲಿ ಪ್ರಖರವಾಗಿ ನಿರೂಪಿಸುತ್ತಾರೆ. ಭಾಷಣದ ಕೊನೆಯಲ್ಲಿ ಅವರು ಹೇಳುವ ಮಾತು, ಈ ದೇಶ ಮಾತ್ರವಲ್ಲ, ಈ ಜಗತ್ತಿನ ಭವಿಷ್ಯದ ಬಗ್ಗೆ ಕಳವಳ ಹುಟ್ಟಿಸುವಂತಹದು.

‘...ನನ್ನ ಭರವಸೆಯನ್ನೆಲ್ಲ ಮುರಿದು ಬಿಡುವಂಥ ಒಂದು ವಿಚಾರವೆಂದರೆ ಸಾವಿರಾರು ಮಾನವ ಜೀವಿಗಳ ಆತ್ಮಹತ್ಯೆಯನ್ನು ವರದಿ ಮಾಡಬೇಕಾಗಿರುವುದು. ಆ ಸಾವುಗಳು ಅನಿವಾರ್ಯವಲ್ಲದವು. ಅವು ನಡೆಯಬೇಕಾಗಿರಲಿಲ್ಲ. ಅವುಗಳನ್ನು ಕುರಿತು ವರದಿ ಮಾಡುತ್ತಿರುವ ಕಳೆದ ಐದು ವರ್ಷಗಳಲ್ಲಿ ನನಗೆ, ‘ನೀರೋನ ಅತಿಥಿಗಳು ಯಾರಾಗಿದ್ದರು?’ ಎಂಬ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿ ಬಿಟ್ಟಿದೆ. ಬಹುಶಃ ಅದು ನಾವೆಲ್ಲರೂ ಆಗಿದ್ದೇವೆ ಎನ್ನಿಸುತ್ತದೆ....’ ವ್ಯವಸ್ಥೆಯ ಭಾಗವಾಗಿರುವ ನಮ್ಮೆಲ್ಲರ ವೌನವೇ ಈ ಆತ್ಮಹತ್ಯೆಯ ಮೂಲ ಕಾರಣ ಎನ್ನುವುದನ್ನು ಅವರು ಉಲ್ಲೇಖಿಸುತ್ತಾರೆ. ಇದಕ್ಕೆ ಪರಿಹಾರವೆಂದರೆ ನಾವು ವೌನವನ್ನು ಮುರಿಯುವುದು ಮತ್ತು ವರ್ತಮಾನದ ದುರಂತಗಳಿಗೆ ಸ್ಪಂದಿಸುವುದು. ಪರಿಹಾರದ ಮೊದಲ ಆರಂಭ ಬಿಂದುವೆಂದರೆ, ನಾವ್ಯಾರೂ ನೀರೋನ ಅತಿಥಿಗಳಾಗಲು ಸಮ್ಮತಿಸದೇ ಇರುವುದು. ಅಸಮಾನತೆಯ ಜಾಗತೀಕರಣಕ್ಕೆ ಹೇಗೆ ಗ್ರಾಮೀಣ ಜನರು ಬಲಿಪಶುವಾಗುತ್ತಿದ್ದಾರೆ ಎನ್ನುವುದನ್ನು ಹೇಳುತ್ತಲೇ ಸಾಮೂಹಿಕ ಹೊಣೆಗಾರಿಕೆಯನ್ನೂ ಎಚ್ಚರಿಸುವ ಕೃತಿ ಇದಾಗಿದೆ. ಸಿಂಚನ ತಂಡ ಕೃತಿಯನ್ನು ಕನ್ನಡಕ್ಕಿಳಿಸಿದೆ.

ಲಡಾಯಿ ಪ್ರಕಾಶನ ಗದಗ ಕೃತಿಯನ್ನು ಹೊರತಂದಿದೆ. 62 ಪುಟಗಳ ಈ ಕೃತಿಯ ಮುಖಬೆಲೆ 40 ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News