ಶಿವಸೇನೆಗೀಗ ತನ್ನ ಅಸ್ತಿತ್ವದ್ದೇ ಚಿಂತೆ!

Update: 2017-09-11 18:55 GMT

ಕೇಂದ್ರದ ಮಂತ್ರಿಮಂಡಲ ಪುನರ್ ರಚನೆಯಾಗಿದೆ. 9 ಮಂದಿ ಮೋದಿ ಸಂಪುಟಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಆದರೆ ಎನ್‌ಡಿಎಯ ಮಿತ್ರ ಪಕ್ಷ ಶಿವಸೇನೆಯನ್ನು ಮೋದಿ-ಶಾ ಜೋಡಿ ಉಪೇಕ್ಷೆ ಮಾಡಿದ್ದಾರೆ. ಇದು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎನ್ನುವ ಮಾತನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ಶಿವಸೇನಾ ನಾಯಕ ಸಂಜಯ್ ರಾವುತ್ ಇದನ್ನು ‘‘ಎನ್‌ಡಿಎಯ ಸಾವು’’ ಎಂದಿದ್ದಾರೆ. ಇದೀಗ ಶಿವಸೇನೆಗೆ ಹಿಂದುತ್ವದ ಹೆಸರಲ್ಲಿ ಎನ್‌ಡಿಎ ಜೊತೆ ಅಂಟಿಕೊಳ್ಳುವುದರಿಂದ ಏನೂ ಪಡೆಯಲಾಗದು ಎಂದು ಅರ್ಥವಾಗಿದೆ.

ಕೇಂದ್ರದ ಮಂತ್ರಿ ಮಂಡಲ ವಿಸ್ತರಿಸಿದ ಮರುದಿನವೇ ಶಿವಸೇನೆಯ ಪ್ರಮುಖ ಬೈಠಕ್ ನಡೆಯಿತು. ಈ ಬೈಠಕ್‌ನಲ್ಲಿ ಮುಂದಿನ ಚುನಾವಣೆ ಯನ್ನು ಮುಂದಿಟ್ಟು ಪಕ್ಷದ ಪಾತ್ರವೇನು ಎಂಬ ಬಗ್ಗೆ ವಿಚಾರ ವಿಮರ್ಶೆ ನಡೆಯಿತು. ಬೈಠಕ್‌ನ ಪ್ರಮುಖ ಚರ್ಚೆಯ ಬಗ್ಗೆ ಶಿವಸೇನೆ ಸ್ಪಷ್ಟವಾಗಿ ಏನೂ ಹೇಳಿಲ್ಲ. ಆದರೆ ಮೂಲಗಳ ಪ್ರಕಾರ ಬಿಜೆಪಿಯ ಹೆಚ್ಚುತ್ತಿರುವ ಪ್ರಭಾವವನ್ನು ಮಹಾರಾಷ್ಟ್ರದಲ್ಲಿ ಹೇಗೆ ತಡೆಯಬಹುದಾಗಿದೆ ಎಂಬ ಏಕಮಾತ್ರ ಅಜೆಂಡಾ ಅಲ್ಲಿತ್ತು. ಅನಿರೀಕ್ಷಿತವಾಗಿ ಕರೆಯಲಾದ ಈ ಬೈಠಕ್‌ನಲ್ಲಿ ಕೇಂದ್ರ ಮಂತ್ರಿಮಂಡಲದಲ್ಲಿ ಎನ್‌ಡಿಎಯಲ್ಲಿದ್ದ ಶಿವಸೇನೆಯನ್ನು ನಿರ್ಲಕ್ಷಿಸಿದ ಬಗ್ಗೆ ಏನಾದರೂ ತೀರ್ಮಾನ ಕೈಗೊಳ್ಳುವುದೇ ಎಂಬ ಬಗ್ಗೆ ಕುತೂಹಲ ತಾಳಲಾಗಿತ್ತು. ಆದರೆ ಶಿವಸೇನೆಯ ಅಸಲಿ ಚಿಂತೆ 2019 ರ ಚುನಾವಣೆಯಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದಾಗಿದೆ. ಉದ್ಧವ್ ಠಾಕ್ರೆಯವರು ಇತ್ತೀಚೆಗೆ ಪಕ್ಷದ ವರಿಷ್ಠ ನಾಯಕರಿಗೆ ಪ್ರತ್ಯೇಕ ಕ್ಷೇತ್ರಗಳ ಜವಾಬ್ದಾರಿ ಒಪ್ಪಿಸಿದ್ದಾರೆ. ಆದರೆ ಶಿವಸೇನೆಗೆ ಬಿಜೆಪಿಯದ್ದೇ ಹೆದರಿಕೆ ಹೆಚ್ಚಾಗಿದೆ.

 ಶಿವಸೇನೆಯ ಎಲ್ಲಾ ಲಕ್ಷ್ಯ ಈ ತನಕ ನಗರದ ಮಧ್ಯಮ ವರ್ಗದ ನೌಕರಿ ಮಾಡುವ ಮತದಾರರ ಕಡೆಗಿತ್ತು. ಈ ಮತದಾರರು ದಿ. ಬಾಳಾ ಸಾಹೇಬ ಠಾಕ್ರೆಯ ಆಕರ್ಷಣೆಯಲ್ಲಿ ಶಿವಸೇನೆ ಜೊತೆಗಿದ್ದರು. ಆದರೆ ಕಳೆದ ವಿಧಾನ ಸಭೆ ಮತ್ತು ಮನಪಾ ಚುನಾವಣೆಯ ಫಲಿತಾಂಶ ನೋಡಿದರೆ ನಗರದ ಮಧ್ಯಮ ವರ್ಗ ಈಗ ಮೋದಿಯವರ ಆಕರ್ಷಣೆಯಿಂದ ಬಿಜೆಪಿ ಕಡೆಗಿದೆ. ಹೀಗಾಗಿ ಶಿವಸೇನೆ ಈಗ ಗ್ರಾಮೀಣ ಕ್ಷೇತ್ರದತ್ತ ಗಮನಹರಿಸಿದೆ. ಶಿವಸೇನೆಯ ಇತಿಹಾಸವನ್ನು ಗಮನಿಸಿದರೆ ಅದು ಸದಾ ಚಿಕ್ಕಚಿಕ್ಕ ಸ್ವಾರ್ಥಕ್ಕಾಗಿ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಬಂದಿದೆ. ಹೀಗಾಗಿ ಅದು ರಾಷ್ಟ್ರೀಯ ಪಾರ್ಟಿ ಆಗುವುದರ ಬದಲು ಪ್ರಾದೇಶಿಕ ಪಾರ್ಟಿಯಾಗಿಯೇ ಉಳಿದಿದೆ. ಆದರೆ ಇದಕ್ಕೆ ಕೆಲವರು ನರೇಂದ್ರ ಮೋದಿಗೆ ಕ್ರೆಡಿಟ್ ನೀಡುತ್ತಿದ್ದಾರೆ. ವಾಸ್ತವವೆಂದರೆ ಬಿಜೆಪಿಯು ಇದಕ್ಕಾಗಿ ದಶಕದ ಮೊದಲೇ ಪ್ರಮೋದ್ ಮಹಾಜನ್‌ರ ವರ್ಚಸ್ಸಿನ ಕಾಲದಲ್ಲೇ ಬ್ಲೂಪ್ರಿಂಟ್ ರೂಪಿಸತೊಡಗಿತ್ತು. ಅದು ಈಗಿಂದೀಗ ದಕ್ಕಿದ ಲಾಭವಲ್ಲ.

ಪ್ರಮೋದ್ ಮಹಾಜನ್‌ಗೆ ಗೊತ್ತಿತ್ತು ಬಿಜೆಪಿಗೆ ಸ್ಪರ್ಧೆ ನೀಡುವುದಾದರೆ ಅದು ಶಿವಸೇನೆ ಮಾತ್ರ ಎಂದು. ಹಾಗಾಗಿ ಮಹಾಜನ್ ಅವರು ಶಿವಸೇನೆಯ ಸುತ್ತ ಚಕ್ರವ್ಯೆಹ ನಿರ್ಮಿಸಿದ್ದರು. ಅರ್ಥಾತ್ ಮಹಾರಾಷ್ಟ್ರಕ್ಕೇ ಅದು ಸೀಮಿತಗೊಳ್ಳಲಿ ಎಂದು.

1993ರ ಮುಂಬೈ ದಂಗೆಯ ನಂತರ ಶಿವಸೇನಾ ಪ್ರಮುಖ ಬಾಳಾ ಸಾಹೇಬ್ ಠಾಕ್ರೆಯವರು ಜನಪ್ರಿಯರಾಗಿದ್ದು ದೇಶದ ಗಮನ ಸೆಳೆದಿದ್ದರು. ದೇಶಾದ್ಯಂತ ಜನ ಬಾಳಾಠಾಕ್ರೆಯನ್ನು ಕಾಣಬೇಕೆಂದು ಇಚ್ಛಿಸುತ್ತಿದ್ದರು. ಆದರೆ ಶಿವಸೇನೆ ಇದರ ಲಾಭವನ್ನು ಪಕ್ಷಕ್ಕಾಗಿ ಪಡೆಯಲು ಸೋತಿತ್ತು.

ಈಗ ಶಿವಸೇನೆ ಮತ್ತೆ ಪಕ್ಷವನ್ನು ಬಲಪಡಿಸಲು ಸಂಘಟನಾತ್ಮಕವಾಗಿ ತಲೆ ಎತ್ತಲು ಸರ್ವಭಾಷೆಯ ಜನರನ್ನು ಸೇರಿಸಿಕೊಳ್ಳಬೇಕಾಗಿದೆ. ಕೇವಲ ಮರಾಠಿ - ಬೆಳಗಾವಿ ಎಂದು ಮಂತ್ರ ಜಪಿಸಿದರೆ ಮೇಲೇಳಲು ಸಾಧ್ಯವಿಲ್ಲ ಎನ್ನುವುದು ಶಿವಸೇನೆಗೆ ಅರ್ಥವಾಗಿದೆ. ಅತ್ತ ಪರಪ್ರಾಂತೀಯರಿಗೆ ಹೊಡೆದು-ಬಡಿದು ಮರಾಠಿ ಜನರ ಮತಗಳಿಸಲು ಸಾಧ್ಯವಿಲ್ಲ ಎಂದು ಮನಸೇಯ ರಾಜ್‌ಠಾಕ್ರೆ ತೋರಿಸಿಕೊಟ್ಟಿದ್ದಾರೆ. (ಆದರೆ ಆಗಸ್ಟ್ 29ರ ಮಳೆ-ಪ್ರವಾಹಕ್ಕೆ ಪರಪ್ರಾಂತೀಯರೇ ಕಾರಣ ಎಂದಿದ್ದರು ರಾಜ್‌ಠಾಕ್ರೆ!) ಶಿವಸೇನೆಗೂ ಮರಾಠಿ ಮತದಾರರ ಓಟು ಸಿಗುತ್ತಿಲ್ಲ. ಅದಕ್ಕೆ ಶಿವಸೇನೆ ಇತರ ಭಾಷಿಕರ ಮೇಲೆ ಸಿಟ್ಟು ಇಳಿಸಿಕೊಳ್ಳುತ್ತಿದೆ. ಇತ್ತೀಚೆಗೆ ಜೈನ ಮುನಿಯವರನ್ನೂ ಟೀಕಿಸಿದೆ. ಇದರಿಂದ ಶಿವಸೇನೆಗೆ ಮತದಾರರ ಬೆಂಬಲ ಸಿಗುವುದೇ ಎಂದರೆ ಅದೂ ಇಲ್ಲ.

ಶಿವಸೇನೆಗೆ ಈಗ ಕೊಂಕಣದ ಭಯ ಉಂಟಾಗಿದೆ. ಮುಂಬೈ -ಥಾಣೆ-ನವಿ ಮುಂಬೈ ಇಂತಹ ನಗರಗಳಲ್ಲಿ ವಾಸಿಸುವ, ನೌಕರಿ ಮಾಡುತ್ತಿರುವ ಕೊಂಕಣದ ಮರಾಠಿ ಸಮಾಜ ದೀರ್ಘ ಕಾಲದಿಂದ ಶಿವಸೇನೆಯ ಶಕ್ತಿ ಆಗಿದೆ. ಆದರೆ ಈ ಶಕ್ತಿಯನ್ನು ಕಡಿಮೆ ಮಾಡಲು ಬಿಜೆಪಿಯು ನಾರಾಯಣ ರಾಣೆಯವರನ್ನು ಶಿವಸೇನೆಯ ವಿರುದ್ಧ ಪರೋಕ್ಷವಾಗಿ ಎತ್ತಿ ಕಟ್ಟುವ ಸಾಧ್ಯತೆಗೆ ಶಿವಸೇನೆ ಭಯಗೊಂಡಿದೆ. ಒಂದು ವೇಳೆ ನಾರಾಯಣ ರಾಣೆ ಕೊಂಕಣ ಸಮಾಜವನ್ನು ಬಿಜೆಪಿಯತ್ತ ಸೆಳೆದರೆ ಮತ್ತೆ ಶಿವಸೇನೆಗೆ ತಲೆ ಎತ್ತಲು ಸಾಧ್ಯವಾಗದು. ಹಾಗಿದ್ದರೂ ಸದ್ಯಕ್ಕೆ ಶಿವಸೇನೆಗೆ ಮರಾಠವಾಡದ ಬಗ್ಗೆ ಉಮೇದು ಇದೆ. ಬರಗಾಲ ಪೀಡಿತ ರೈತರ ನಡುವೆ ಕೆಲಸ ಮಾಡಿದರೆ ಅರ್ಥಾತ್ ‘ಸಂಪೂರ್ಣ ಸಾಲ ಮನ್ನಾ ಮಾಡಿ’ ಎಂಬ ಮಂತ್ರವನ್ನು ಫಡ್ನವೀಸ್ ಸರಕಾರದ ಮುಂದೆ ಇರಿಸಿ ಬಿಜೆಪಿಯನ್ನು ಪೇಚಿಗೆ ಸಿಕ್ಕಿಸಿ ಮರಾಠವಾಡದ ರೈತರ ಮನಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಶಿವಸೇನೆ ಇದೆ.

* * *

ರಾಮ್ ರಹೀಮ್‌ನ ವರ್ಕ್ ಪರ್ಮಿಟ್ ರದ್ದು
ಬಲಾತ್ಕಾರ ಕೇಸ್‌ನಲ್ಲಿ 20 ವರ್ಷದ ಸಜೆ ಅನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನಿಂದ ಬಾಲಿವುಡ್ ಕೂಡಾ ದೂರ ಸರಿದಿದೆ. ಸಿನಿ ಆ್ಯಂಡ್ ಟೆಲಿವಿಷನ್ ಆರ್ಟಿಸ್ಟ್ ಎಸೋಸಿಯೇಶನ್ (ಸಿಂಟಾ) ಇದೀಗ ರಾಮ್ ರಹೀಮ್‌ನ ವರ್ಕ್ ಪರ್ಮಿಟ್ ರದ್ದುಗೊಳಿಸಿದೆ. ಸಿಂಟಾದ ಜತೆ ಕಾರ್ಯದರ್ಶಿ ಅಮಿತ್ ಬಹಲ್ ಅವರು ಹೇಳುವಂತೆ ಆಗಸ್ಟ್ 30 ರಂದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಗುರ್ಮೀತ್ ಕೆಲವು ಸಿನೆಮಾಗಳಲ್ಲೂ ಅಭಿನಯಿಸಿದ್ದು ಅವುಗಳಲ್ಲಿ ‘ದ ಮೆಸೆಂಜರ್ ಆಫ್ ಗಾಡ್’ ಮುಖ್ಯವಾಗಿದೆ. ವರ್ಕ್ ಪರ್ಮಿಟ್ ರದ್ದುಗೊಳಿಸಲು ಕಾರಣ ಕೇವಲ ಸಿಬಿಐ ಕೋರ್ಟ್ ನ ತೀರ್ಪು ಮಾತ್ರವಲ್ಲ, ಇನ್ನೂ ಹಲವು ಕಾರಣಗಳಿವೆ. 2017ರಲ್ಲಿ ಕಾಮೆಡಿಯನ್ ಕಿಕೂ ಶಾರದಾ ಅವರ ವಿರುದ್ಧ ಹರ್ಯಾಣದಲ್ಲಿ ಕೇಸ್ ದಾಖಲಿಸಿದ್ದೂ ಇಲ್ಲಿದೆ. ಸಿಂಟಾ ಅದರಿಂದ ತುಂಬಾ ಬೇಸರಗೊಂಡಿದೆ.

ವರ್ಕ್ ಪರ್ಮಿಟ್ ಗರಿಷ್ಠ ಎರಡು ವರ್ಷ ಇರುತ್ತದೆ. ವರ್ಕ್ ಪರ್ಮಿಟ್‌ನ ಸ್ಕೀಮ್ ನಾಲ್ಕು ವರ್ಷ ಮೊದಲಿಗೆ ಶುರುವಾಗಿತ್ತು. ಇದಕ್ಕಿಂತ ಮೊದಲು ಕೇವಲ ರೆಗ್ಯುಲರ್ ಮೆಂಬರ್ಸ್ ಮತ್ತು ಲೈಫ್ ಮೆಂಬರ್ಸ್ ಮಾತ್ರ ಇತ್ತು. ಆಗ ಬಹಳಷ್ಟು ಕಲಾವಿದರು ಒಂದೆರಡು ವರ್ಷ ಕೆಲಸ ಮಾಡಿದ ನಂತರ ಇಂಡಸ್ಟ್ರಿ ತ್ಯಜಿಸಿ ಹೋಗುತ್ತಿದ್ದರು. ನಂತರ ವರ್ಕ್ ಪರ್ಮಿಟ್ ಆರಂಭವಾಯಿತು. ಮೊದಲ ವರ್ಷ ವರ್ಕ್ ಪರ್ಮಿಟ್ ನೀಡುವುದಕ್ಕೆ ಹತ್ತು ಸಾವಿರ ರೂ. ಫೀಸ್ ಪಡೆಯಲಾಗುತ್ತದೆ. ಒಂದು ವರ್ಷ ಪೂರ್ಣಗೊಂಡ ನಂತರ ಮುಂದಿನ ವರ್ಷವೂ ಹತ್ತು ಸಾವಿರ ರೂಪಾಯಿ ಫೀಸ್, ಮೂರನೇ ವರ್ಷಕ್ಕೆ 15 ಸಾವಿರ ರೂ. ಫೀಸ್ ನೀಡಿ ನಿಯಮಿತ ಸದಸ್ಯ ಆಗಬಹುದಾಗಿದೆ. ಆನಂತರ ವರ್ಷಕ್ಕೆ 1,200 ರೂಪಾಯಿ (ತಿಂಗಳಿಗೆ ರೂ. 100) ನೀಡಬೇಕು. ಯಾರಿಗಾದರೂ ಲೈಫ್ ಮೆಂಬರ್ ಆಗಬೇಕಾದರೆ 15 ಸಾವಿರ ರೂ. ಒಟ್ಟಿಗೆ ನೀಡಬೇಕು. ಈಗ ಗುರ್ಮೀತ್‌ನ ವರ್ಕ್ ಪರ್ಮಿಟ್ ಸಿಂಟಾ ರದ್ದು ಮಾಡಿದೆ,

* * *

ಮುಂಬೈ ಮಳೆ: ಸಿನೆಮಾ-ಟಿವಿ ಇಂಡಸ್ಟ್ರಿಗೂ ನಷ್ಟ
ಮುಂಬೈಯಲ್ಲಿ ಆಗಸ್ಟ್ 29 ರಂದು ಸುರಿದ ಧಾರಾಕಾರ ಮಳೆಯಿಂದ ನಿಧಾನವಾಗಿ ನಗರ ಚೇತರಿಸಿಕೊಳ್ಳುತ್ತಿದೆ. ಈ ಮಳೆಯಿಂದ ಜನ ಸಾಮಾನ್ಯರು ಮಾತ್ರವಲ್ಲ, ಫಿಲ್ಮ್ ಮತ್ತು ಟಿವಿ ಜಗತ್ತಿನ ಜನರೂ ಬಹಳಷ್ಟು ಪ್ರಭಾವಗೊಂಡಿದ್ದಾರೆ. ಅನೇಕ ಟಿವಿ ಶೋ ಸೆಟ್‌ಗಳಲ್ಲಿ ನೀರು ತುಂಬಿದ್ದು, ಅನೇಕ ಶೂಟಿಂಗ್‌ಗಳನ್ನು ಕೆಲವು ದಿನ ರದ್ದು ಪಡಿಸಬೇಕಾಗಿ ಬಂದಿತ್ತು. ತೆನಾಲಿರಾಮದ ನಟ ಪಂಕಜ್ ಬೇರಿ, ‘‘ನಾನು ಆ ದಿನವನ್ನು ಯಾವತ್ತ್ತೂ ಮರೆಯಲಾರೆ. ಆ ದಿನ ನನ್ನ ಪತ್ನಿಯ ಹುಟ್ಟುಹಬ್ಬವಾಗಿತ್ತು. ಹಾಗಾಗಿ ನಾನು ಬೇಗನೆ ಮನೆಗೆ ಹೋಗಬೇಕಿತ್ತು. ಸಂಜೆ 6 ಗಂಟೆಗೆ ಸೆಟ್‌ನಿಂದ ಹೊರಟಿದ್ದೆ. ಆದರೆ ಮಳೆಯ ಕಾರಣ ದಾರಿಯಲ್ಲೇ ಸಿಲುಕಿಕೊಂಡೆ. ಆದರೂ ರಾತ್ರಿ 11 ಗಂಟೆಗೆ ಮನೆಗೆ ತಲುಪಿದೆ. ಅಂದು ಹುಟ್ಟುಹಬ್ಬ ಆಚರಿಸಲು ಆಗಲೇ ಇಲ್ಲ.’’

ಕಳೆದ ಕೆಲವು ಸಮಯದಿಂದ ಸಿನೆಮಾ ಮತ್ತು ಟಿವಿ ಇಂಡಸ್ಟ್ರಿ ಒಂದರ ನಂತರ ಒಂದರಂತೆ ಏನಾದರೂ ತೊಂದರೆ ಅನುಭವಿಸುತ್ತಿವೆ. ಇದರ ಪ್ರಭಾವ ಶೂಟಿಂಗ್ ಮೇಲೆ ಬೀಳುತ್ತಿದೆ. ಕೆಲ ಸಮಯದ ಹಿಂದೆ ಫಿಲ್ಮ್‌ಸಿಟಿ ಕ್ಷೇತ್ರದಲ್ಲಿ ಚಿರತೆಯೊಂದು ಸುತ್ತಾಡುತ್ತಿದೆ ಎಂಬ ಕಾರಣಕ್ಕೆ ಸಂಜೆಯ ನಂತರ ಶೂಟಿಂಗ್ ರದ್ದುಗೊಳಿಸಲಾಗುತ್ತಿತ್ತು. ನಂತರ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸಾ ಮುಷ್ಕರ ಹೂಡಿದ್ದರಿಂದ ಅನೇಕ ದಿನಗಳ ಕಾಲ ಶೂಟಿಂಗ್ ಪ್ರಭಾವಿತಗೊಂಡಿತು. ಈಗ ಮಳೆಯ ಕಾರಣ ಮತ್ತೆ ಕೆಲವು ತೊಂದರೆಗಳನ್ನು ಎದುರಿಸಿದೆ. ಅರ್ಥಾತ್ ಕೆಲವು ದಿನಗಳ ಕಾಲ ಶೂಟಿಂಗ್‌ನ ಮೇಲೆ ಪ್ರಭಾವ ಬೀರಿತ್ತು. ನಗರದ ಹೊರಗೆ ನಾಯ್‌ಗಾಂವ್ ಎಂಬಲ್ಲಿರುವ ಫಿಲ್ಮ್‌ಸಿಟಿಯಲ್ಲಿ ಭಾರೀ ಮಳೆಯ ಕಾರಣ ನಟ - ನಟಿಯರು ಮತ್ತು ಕ್ರೂ ಮೆಂಬರ್ಸ್ ಬಹಳ ತೊಂದರೆ ಅನುಭವಿಸಿದರು. ದೆವ್ವ ಬರುವ ಟಿವಿ ಧಾರಾವಾಹಿಗಳಿಗಂತೂ ಭಾರೀ ಕಷ್ಟವಾಯಿತು. ಮುಂಬೈಲ್ಲಿ ಕರೆಂಟ್ ಹೋಗೋದು ಬಹಳ ಅಪರೂಪ. ಆದರೆ ಆಗಸ್ಟ್ 29ರ ಭಾರೀ ಮಳೆಗೆ ಅನೇಕ ಕಡೆ ಕರೆಂಟ್ ತೆಗೆದಿದ್ದರು. ಹಾಗಾಗಿ ಆ ಕಾರಣವೂ ಶೂಟಿಂಗ್‌ನ ಮೇಲೆ ಪರಿಣಾಮ ಬೀರಿತ್ತು. ಆಗಸ್ಟ್ 29 -30 ರಂದು ಆ ಎರಡು ದಿನಗಳಲ್ಲಿ ಶೂಟಿಂಗ್ ರದ್ದುಗೊಳಿಸಿದ್ದರಿಂದ ಇಂಡಸ್ಟ್ರಿ ಕೋಟಿಗಟ್ಟಲೆ ರೂಪಾಯಿ ನಷ್ಟವನ್ನು ಅನುಭವಿಸಬೇಕಾಯಿತು.

* * *

ಮುಂಬೈ ವಿ.ವಿ. ಅರ್ಥಶಾಸ್ತ್ರ ವಿಭಾಗದ ಹೆಸರು ಬದಲು
ದೇಶದ ಎಲ್ಲಕ್ಕಿಂತ ಹಳೆಯ ಅರ್ಥಶಾಸ್ತ್ರ ವಿಭಾಗದ (ಮುಂಬೈ ವಿ.ವಿ.) ‘ಮುಂಬೈ ಸ್ಕೂಲ್ ಆಫ್ ಇಕಾನಮಿಕ್ಸ್’ನ್ನು ಅಂತಾರಾಷ್ಟ್ರೀಯ ಸಂಸ್ಥೆಯ ದರ್ಜೆ ನೀಡುವುದಕ್ಕಾಗಿ ಅದರ ಹೆಸರು ಬದಲಿಸಿ ‘ಮುಂಬೈ ಸ್ಕೂಲ್ ಆಫ್ ಇಕಾನಾಮಿಕ್ಸ್ ಆ್ಯಂಡ್ ಪಬ್ಲಿಕ್ ಪಾಲಿಸಿ’ ಎಂದು ಹೊಸ ಹೆಸರು ಇರಿಸಲಾಗಿದೆ. ಇದರ ಜೊತೆಗೆ ವಿತ್ತ ವರ್ಷ 2017-2018ರಿಂದ ಮುಂದಿನ ಐದು ವರ್ಷಗಳಲ್ಲಿ 25 ಕೋಟಿ ರೂಪಾಯಿ ನಿಧಿ ನೀಡುವ ತೀರ್ಮಾನವನ್ನು ಮಂತ್ರಿಮಂಡಲದ ಬೈಠಕ್‌ನಲ್ಲಿ ಕೈಗೊಳ್ಳಲಾಗಿದೆ.

* * * 
ಸಮನ್ಸ್ ತಲುಪಿಸುವ ಕೆಲಸ ಇನ್ನು ಅಂಚೆ ಇಲಾಖೆಗೆ!
ಹಲವು ಒತ್ತಡಗಳ ನಡುವೆ ಸಿಲುಕಿರುವ ಮುಂಬೈ ಪೊಲೀಸರಿಗೆ ಈಗ ಸ್ವಲ್ಪಉಸಿರು ಬಿಡುವಂತಾಗಿದೆ. ನ್ಯಾಯಾಲಯಗಳು ಆರೋಪಿಗಳ ವಿರುದ್ಧ ಜಾರಿಗೊಳಿಸುವ ಸಮನ್ಸ್‌ನ್ನು ಈ ತನಕ ಮುಂಬೈ ಪೊಲೀಸರು ತಲುಪಿಸುತ್ತಿದ್ದರು. ಆದರೆ ಇನ್ನು ಮುಂದೆ ಪೊಲೀಸರಿಗೆ ಈ ಹೊರೆ ತಪ್ಪಲಿದೆ. ಯಾಕೆಂದರೆ ಆರೋಪಿಗಳ ಮನೆಗೆ ಸಮನ್ಸ್ ತಲುಪಿಸುವ ಕೆಲಸವು ಅಂಚೆ ವಿಭಾಗ ಮಾಡಲಿದೆ. ಇದರ ಮಾಹಿತಿಯನ್ನು ಅಂಚೆ ವಿಭಾಗವು ಇತ್ತೀಚೆಗೆ ಮುಂಬೈ ಹೈಕೋರ್ಟ್‌ಗೆ ನೀಡಿತು.

ಅಂಚೆ ವಿಭಾಗವು ಕೋರ್ಟ್‌ಗೆ ಹೇಳಿದಂತೆ ಮಹಾರಾಷ್ಟ್ರದಾದ್ಯಂತ ಈ ಜವಾಬ್ದಾರಿಯನ್ನು ಅಂಚೆ ವಿಭಾಗ ಎತ್ತಿಕೊಳ್ಳಲು ತಯಾರಿದೆ. ಇದುವರೆಗೆ ಅನೇಕ ಪೊಲೀಸರು ಸಮನ್ಸ್ ತಲುಪಿಸುವ ಕೆಲಸದಲ್ಲಿ ತೊಡಗಿರುವ ಕಾರಣ ಸುರಕ್ಷಾ ಸಹಿತ ಇತರ ಕೆಲಸಗಳಲ್ಲಿರುವ ಪೊಲೀಸರಿಗೆ ರಜೆ ಕೂಡಾ ಸಿಗುತ್ತಿಲ್ಲವಂತೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ಸಂವಿಧಾನ -75