ನೋಟು ಬದಲಾವಣೆಯೂ, ಪ್ಲೇಟು ಬದಲಾವಣೆಯೂ

Update: 2017-09-13 18:44 GMT

ಭಾಗ-2

ನೋಟು ರದ್ದತಿ ಬಗ್ಗೆ ಅಂದು 

ನವೆಂಬರ್ 8, 2017ರ ಮಧ್ಯರಾತ್ರಿ ನೋಟು ರದ್ದತಿ ನಿರ್ಧಾರವನ್ನು ರಾಷ್ಟ್ರಕ್ಕೆ ಸಾರಿದ ಸಂದರ್ಭದಲ್ಲಿ ಮೋದಿ ಹೇಳಿದುದೇನು? ‘‘..... ಪ್ರಾಮಾಣಿಕ ಜನ ತಾತ್ಕಾಲಿಕ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು.... ಭ್ರಷ್ಟಾಚಾರ, ಕಪ್ಪುಹಣ, ಖೋಟಾ ನೋಟುಗಳು ಮತ್ತು ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ, ನಮ್ಮ ದೇಶವನ್ನು ಶುದ್ಧೀಕರಿಸುವ ಈ ಚಳವಳಿಯಲ್ಲಿ ಎದುರಾಗುವ ಕಷ್ಟಗಳನ್ನು ನಮ್ಮ ಜನ ಕೆಲವು ದಿನಗಳ ಕಾಲ ಸಹಿಸಿಕೊಳ್ಳಲಾರರೇ?’’ ಎಂದು ಭಾವನಾತ್ಮಕ ಭಾಷಣ ಕುಟ್ಟಿದ್ದರು. ‘‘ನೋಟು ರದ್ದತಿಯ ಪರಿಣಾಮವಾಗಿ ರೂ. 5-7 ಲಕ್ಷ ಕೋಟಿ ಕಪ್ಪುಹಣ ಸಿಗಲಿದೆ, ಭಯೋತ್ಪಾದನೆಗೆ ಆರ್ಥಿಕ ಸಹಾಯ ನಿಲ್ಲಲಿದೆ, ಖೋಟಾ ನೋಟುಗಳ ಸಮಸ್ಯೆಗೆ ಪರಿಹಾರ ದೊರೆಯಲಿದೆ’’ ಎಂದು ಮುಂತಾದ ಭರವಸೆ ಕೊಟ್ಟಿದ್ದರು. ಆದರೆ ಯಾವಾಗ ಜನರು ಬ್ಯಾಂಕುಗಳ ಮುಂದೆ ದಿನಗಟ್ಟಲೆ ಸರದಿಯ ಸಾಲಿನಲ್ಲಿ ನಿಲ್ಲುತ್ತಿರುವ ವರದಿಗಳು ಬರತೊಡಗಿದವೊ ಆಗ ನವೆಂಬರ್ 13ರಂದು ‘‘ಈ ಸಂಕಷ್ಟಗಳು ಕೇವಲ 50 ದಿನಗಳ ಮಟ್ಟಿಗೆ. ಒಮ್ಮೆ ಎಲ್ಲವೂ ಸ್ವಚ್ಛವಾದರೆ ಒಂದು ಸೊಳ್ಳೆ ಕೂಡಾ ಇರಲಾರದು.... ನನಗೆ ಬರೀ 50 ದಿನಗಳ ಕಾಲಾವಕಾಶ ಕೊಡಿ, ವಿಫಲನಾದರೆ ನನ್ನನ್ನು ಜೀವಂತ ಸುಟ್ಟುಬಿಡಿ’’ ಎಂಬ ನಾಟಕೀಯ ಹೇಳಿಕೆ ನೀಡಿದರು.

ನೀತಿ ಆಯೋಗದ ಸದಸ್ಯ ಬಿಬೇಕ್ ದೆಬ್ರಾಯ್ ಪ್ರಕಾರ ಕಪ್ಪುಹಣದ ಪ್ರಮಾಣ ರೂ 1.6 ಲಕ್ಷ ಕೋಟಿಗಳಾಗಿದ್ದರೆ ಮೋದಿ ಭಕ್ತ ಜಗದೀಶ್ ಭಗವತಿಯ ಅಂದಾಜು ರೂ 5 ಲಕ್ಷ ಕೋಟಿಗಳಾಗಿತ್ತು (ದ ಮಿಂಟ್, 27.12.2016).

ಇನ್ನು ಕೆಲವು ಮೋದಿ ಭಕ್ತರಂತೂ ರದ್ದಾದ ನೋಟುಗಳಲ್ಲಿ ಅರೆವಾಸಿ ಗಿಂತಲೂ ಹೆಚ್ಚು ಕಪ್ಪುಹಣ ಆಗಿದ್ದು ಅದೆಲ್ಲವನ್ನು ಮೋದಿ ಸರಕಾರ ವಿಕಾಸ ಕ್ಕಾಗಿ ಬಳಸಿಕೊಳ್ಳಲಿದೆ ಎಂದು ವದಂತಿ ಹಬ್ಬಿಸಿದ್ದರು. ನೋಟು ರದ್ದತಿಯ ಪರಿಣಾಮವಾಗಿ ಬ್ಯಾಂಕುಗಳಿಗೆ ಮರಳಿಸಲಾಗದ ಈ ಕಪ್ಪುಹಣವೆಲ್ಲ ನಾಶವಾಗಲಿದೆ ಎನ್ನುವುದು ಇವರೆಲ್ಲರ ಮಾತುಗಳ ಅರ್ಥವಾಗಿತ್ತು. ನೋಟು ರದ್ದತಿಯಿಂದ ಭಯಭೀತರಾದ ಕಾಳದಂಧೆಕೋರರು ತಮ್ಮ ಕಪ್ಪುಹಣವನ್ನು ಯಾಕೆ ಬ್ಯಾಂಕುಗಳಿಗೆ ಜಮೆ ಮಾಡಲಾರರು ಎನ್ನುವುದನ್ನು ವಿತ್ತಮಂತ್ರಿ ಅರುಣ್ ಜೇಟ್ಲಿ ವಿವರಿಸಿದ ಪರಿ ಹೀಗಿದೆ: ‘‘ಅಪರಾಧ ಕೃತ್ಯಗಳಿಗೆ ನಗದು ಹಣ ಬಳಸಿದವರು ಆ ನಗದನ್ನು ವ್ಯವಸ್ಥೆಯೊಳಗೆ ತರಲು ಪ್ರಯತ್ನ ಮಾಡುವಷ್ಟು ಮೂರ್ಖರಲ್ಲವೆಂಬುದು ಮೇಲ್ನೋಟಕ್ಕೇ ಸ್ಪಷ್ಟ. ಹಾಗೆಲ್ಲಾದರೂ ಮಾಡಿದರೆ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆಂದು ಅವರಿಗೆ ಗೊತ್ತು.’’

ನೋಟು ರದ್ದತಿ ಬಗ್ಗೆ ಯೂ ಟರ್ನ್‌ಗಳು

ಭಾರತೀಯ ರಿಸರ್ವ್ ಬ್ಯಾಂಕು ತೀರಾ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿ ರುವ ವರದಿಯ ಬಳಿಕ ಮೋದಿ ಮತ್ತವರ ಭಕ್ತರ ಲೆಕ್ಕಾಚಾರ, ಊಹಾಪೋಹಗಳೆಲ್ಲವೂ ತಲೆಕೆಳಗಾಗಿವೆ. ಸುಮಾರು ಶೇ. 99ರಷ್ಟು ಹಳೆ ನೋಟುಗಳು ವ್ಯವಸ್ಥೆಗೆ ಮರಳಿರುವುದಾಗಿ ಹೇಳುತ್ತಿರುವ ಆರ್‌ಬಿಐ ಎಷ್ಟು ಕಪ್ಪುಹಣ ನಿರ್ಮೂಲನೆ ಆಗಿದೆ ಎಂಬ ಮಾಹಿತಿ ತನ್ನಲ್ಲಿಲ್ಲ ಎನ್ನುತ್ತಿದೆ! ರಿಸರ್ವ್ ಬ್ಯಾಂಕಿನ ಋಣಾತ್ಮಕ ವರದಿಯಿಂದ ಕಂಗಾಲಾದ ಮೋದಿ ಸರಕಾರ ನೋಟು ರದ್ದತಿ ಯಶಸ್ವಿಯಾಗಿದೆ ಎಂಬ ಸಂದೇಶವನ್ನು ಪುಂಖಾನುಪುಂಖವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದೆ.

ಖಾಸಗಿ ಸಾರ್ವಜನಿಕ ಸಂಪರ್ಕ ಏಜೆನ್ಸಿಗಳಿಗೆ ದುಡ್ಡು ಕೊಟ್ಟು ಟ್ವಿಟರ್ ಹ್ಯಾಂಡಲ್‌ಗಳನ್ನು ಖರೀದಿಸಿ ಮಂತ್ರಿಗಳ ಹೆಸರಿನಲ್ಲಿ ಒಂದೇ ರೀತಿಯಾದ ಯಶೋಗಾಥೆಯನ್ನು ಕಳುಹಿಸಲಾಗುತ್ತಿದೆ! ಇಂತಹ ಏಜೆನ್ಸಿಗಳನ್ನು ಬಳಸುವ ಮೋದಿ ಸರಕಾರದ ಸಚಿವ ಖಾತೆಗಳು ಅವುಗಳಿಗೆ ವರ್ಷವೊಂದರ ಸುಮಾರು ರೂ. 2 ಕೋಟಿಯಷ್ಟು ಪಾವತಿಸುತ್ತಿರುವುದಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ! ನೋಟು ರದ್ದತಿ ಪ್ರಾರಂಭವಾಗಿ 50 ದಿನಗಳ ನಂತರ ಅದು ವಿಫಲವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಮೋದಿ ಸರಕಾರ ತನ್ನ ಗುರಿಗಳನ್ನು ಬದಲಾಯಿಸತೊಡಗಿದೆ. ಆರ್‌ಬಿಐ ವರದಿಯ ನಂತರ ಅರುಣ್ ಜೇಟ್ಲಿ ಹಾಡುತ್ತಿರುವ ಹೊಸ ರಾಗದ ವೈಖರಿ ಹೇಗಿದೆ ನೋಡಿ: ‘‘ನೋಟು ರದ್ದತಿಯ ನೈಜ ಗುರಿ ಆರ್ಥಿಕ ವ್ಯವಸ್ಥೆಯಲ್ಲಿ ನಗದು ಹಣದ ಪಾತ್ರವನ್ನು ಕಡಿಮೆ ಮಾಡಿ, ತೆರಿಗೆದಾರರ ಸಂಖ್ಯೆ ಹೆಚ್ಚಿಸಿ, ನಗದುರಹಿತ ವ್ಯವಹಾರಕ್ಕೆ ಒತ್ತು ನೀಡುವುದಾಗಿತ್ತು!’’

ನಗದುರಹಿತ ವಹಿವಾಟು
ವಾಸ್ತವ ಏನೆಂದರೆ ನೋಟು ರದ್ದತಿ ನಂತರದ ದಿನಗಳಲ್ಲಿ ನಗದು ರಹಿತ ವ್ಯವಹಾರಗಳಲ್ಲಿ ತಾತ್ಕಾಲಿಕವಾಗಿ ಸ್ವಲ್ಪಹೆಚ್ಚಳ ಆಗಿದ್ದರೂ ಇಂದು ಹೆಚ್ಚುಕಡಿಮೆ ಹಿಂದಿನ ಪ್ರಮಾಣಕ್ಕೇ ಮರಳಿದೆ.
 
ನೇರ ತೆರಿಗೆ ಸಂಗ್ರಹ
ವಿತ್ತ ಮಂತ್ರಾಲಯದ ಆಗಸ್ಟ್ 9, 2017ರ ಪತ್ರಿಕಾ ಹೇಳಿಕೆಯ ಪ್ರಕಾರ 2017ರ ಜುಲೈ ತನಕ ನೇರ ತೆರಿಗೆ ಸಂಗ್ರಹ ಶೇ. 19.1ರಷ್ಟು ಹೆಚ್ಚಳ ಕಂಡಿದೆ. ಆದರೆ ಅದೇ ವಿತ್ತ ಮಂತ್ರಾಲಯದ ಆಗಸ್ಟ್ 9, 2016ರ ಪತ್ರಿಕಾ ಹೇಳಿಕೆಯ ಪ್ರಕಾರ 2016ರ ಜುಲೈ ತನಕ ನೇರ ತೆರಿಗೆ ಸಂಗ್ರಹದಲ್ಲಿ ಶೇ. 24.01ರಷ್ಟು ಹೆಚ್ಚಳವಾಗಿತ್ತು! ಇದರರ್ಥ ಏನೆಂದರೆ ನೋಟು ರದ್ದತಿ ಇಲ್ಲದ ಕಾಲದಲ್ಲಿ ನೇರ ತೆರಿಗೆ ಸಂಗ್ರಹದಲ್ಲಾದ ಹೆಚ್ಚಳದ ವೇಗ ಈಗಿಗಿಂತಲೂ ಜಾಸ್ತಿ ಇತ್ತು!

ತೆರಿಗೆದಾರರ ಸಂಖ್ಯೆ
•ಆಗಸ್ಟ್ 15, 2017ರಂದು ಮಾತನಾಡಿದ ಪ್ರಧಾನಿ ಮೋದಿ ನೋಟು ರದ್ದತಿ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ 56 ಲಕ್ಷದಷ್ಟು ಹೆಚ್ಚಳ ಆಗಿದೆ ಎಂದರು.

* ಮೋದಿ ಸರಕಾರ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ ಪ್ರಕಾರ ನೋಟು ರದ್ದತಿ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ 33 ಲಕ್ಷದಷ್ಟು ಹೆಚ್ಚಳ ಆಗಿದೆ.

* ಆರ್ಥಿಕ ಸಮೀಕ್ಷೆ ಸಂಪುಟ 2ರ ಪ್ರಕಾರ ನೋಟು ರದ್ದತಿ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ 5.4 ಲಕ್ಷದಷ್ಟು ಹೆಚ್ಚಳ ಆಗಿದೆ.

* ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಕಾರ ತೆರಿಗೆದಾರರ ಸಂಖ್ಯೆಯಲ್ಲಿ 91 ಲಕ್ಷದಷ್ಟು ಹೆಚ್ಚಳ ಆಗಿದೆ.

ಹಾಗಾದರೆ ವಾಸ್ತವವೇನು? 

ಅಧಿಕೃತ ಅಂಕಿಅಂಶಗಳ ಪ್ರಕಾರ 2015-16ರ ಸಾಲಿನಲ್ಲಿ ಒಟ್ಟು ತೆರಿಗೆದಾರರ ಸಂಖ್ಯೆಯಲ್ಲಿ ಶೇಕಡಾ 27.6ರಷ್ಟು ಹೆಚ್ಚಳ ಆಗಿದ್ದರೆ ನೋಟು ರದ್ದತಿ ನಂತರ 2016-17ರ ಸಾಲಿನಲ್ಲಿ ಆಗಿರುವ ಹೆಚ್ಚಳ ಕೇವಲ ಶೇಕಡಾ 26!

ಖೋಟಾ ನೋಟುಗಳು 
ರಿಸರ್ವ್ ಬ್ಯಾಂಕು ಇದೀಗ ಒಪ್ಪಿಕೊಂಡಿರುವಂತೆ ಅದರ ಅಂದಾಜಿನ ಪ್ರಕಾರ ನೋಟು ರದ್ದತಿಗೆ ಮುನ್ನ ಚಲಾವಣೆಯಲ್ಲಿದ್ದ ಖೋಟಾ ನೋಟುಗಳ ಬೆಲೆ ರೂ 41 ಕೋಟಿಯಷ್ಟಿತ್ತು. ರದ್ದಾದ ಒಟ್ಟು ನೋಟುಗಳ ಬೆಲೆಗೆ ಹೋಲಿಸಿದರೆ ಇದು ಏನೇನೂ ಅಲ್ಲ. ನೋಟು ರದ್ದತಿಗೂ ಹಿಂದಿನ 2015-16ರ ಆರ್ಥಿಕ ವರ್ಷದಲ್ಲಿ ಒಟ್ಟು 4,04,794 ಖೋಟಾ ನೋಟುಗಳು ಪತ್ತೆಯಾಗಿದ್ದರೆ ನೋಟು ರದ್ದತಿ ನಂತರದ 2016-17ರ ಆರ್ಥಿಕ ವರ್ಷದಲ್ಲಿ ಕೇವಲ ಸುಮಾರು 1,69,097 ಹೆಚ್ಚುವರಿ ಖೋಟಾ ನೋಟುಗಳು ಪತ್ತೆಯಾಗಿವೆ ಅಷ್ಟೆ. ನೋಟು ರದ್ದತಿ ಮಾಡದಿದ್ದರೂ ಇದು ಆಗುತ್ತಿತ್ತು.

ಭಯೋತ್ಪಾದನೆ

ಅಧಿಕೃತ ದಾಖಲೆಗಳ ಪ್ರಕಾರವೆ ಜಮ್ಮುಕಾಶ್ಮೀರದಲ್ಲಿ 2014ರಲ್ಲಿ 222, 2015ರಲ್ಲಿ 208 ಮತ್ತು 2016ರಲ್ಲಿ 322 ಭಯೋತ್ಪಾದಕ ದಾಳಿಗಳು ನಡೆದಿವೆ. ಈ ವರ್ಷದ ಜುಲೈ ತನಕ ಈಗಾಗಲೆ ಸುಮಾರು 194 ಭಯೋತ್ಪಾದಕ ದಾಳಿಗಳು ಸಂಭವಿಸಿರುವುದು ನೋಟು ರದ್ದತಿ ಬಳಿಕವೂ ಉಗ್ರರ ದಾಳಿಗಳು ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ. ಮೋದಿ ಮತ್ತವರ ಚಮಚಾಗಳ ಚಮತ್ಕಾರಿಕ ಮಾತುಗಳನ್ನು ನಂಬಿ ಮುಂಬರುವ ‘ಅಚ್ಚೇ ದಿನ್’ಗಳ ನಿರೀಕ್ಷೆಯಲ್ಲಿ ಪ್ರಸಕ್ತ ಸಂಕಟಗಳನ್ನು ಮರೆತ ಜನರಿಗೆ ಅಂತಿಮವಾಗಿ ಸಿಕ್ಕಿರುವುದೇನು? ಅಚ್ಚೇ ಟೋಪಿ! ಅದೂ ಅಂತಿಂಥಾ ಟೋಪಿ ಅಲ್ಲ, ಅನೌಪಚಾರಿಕ ಅರ್ಥವ್ಯವಸ್ಥೆಯ ನಾಶ, ಮಧ್ಯಮ ಮತ್ತು ಲಘು ಉದ್ಯೋಗಗಳ ನಿರ್ನಾಮ, ಬೀದಿಗೆ ಬಿದ್ದ ಸುಮಾರು 15 ಲಕ್ಷ ಕಾರ್ಮಿಕರು, ಇಳಿಮುಖವಾದ ಉತ್ಪಾದನೆ, ಹೂಡಿಕೆಯಲ್ಲಿ ತೀವ್ರ ಇಳಿಕೆ, ಜಿಡಿಪಿ ದರ ಕುಸಿತ, ನಿರುದ್ಯೋಗಿಗಳ ಸಂಖ್ಯೆಯಲ್ಲಿ ಅಪಾರ ಹೆಚ್ಚಳ, ಜಿಎಸ್‌ಟಿ ಫಲವಾಗಿ ಆಗಿರುವ ದರ ಏರಿಕೆಗಳ ಮಖ್‌ಮಲ್ ಟೋಪಿ!!
********
(ಆಧಾರ: ಜಯೇಶ್ ಶಾರ ಕೃತಿ ಬ್ಲಫ್ ಮಾಸ್ಟರ್; ವಿವೇಕ್ ಕೌಲ್ ಡೈರಿ; ದ ವಯರ್.ಕಾಮ್‌ನಲ್ಲ್ಲಿ ಜೇಮ್ಸ್ ವಿಲ್ಸನ್ ಲೇಖನ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News