ಎಂ.ಬಿ.ಪಾಟೀಲ್ ಎಂಬ ಸರಳ-ರೇಖೆ
ಖ್ಯಾತ ಕಲಾವಿದ ಎಂ. ಎಫ್.ಹುಸೈನ್ ತೀರಿಹೋದ ಸಂದರ್ಭದಲ್ಲಿ, ಅವರನ್ನು ಹತ್ತಿರದಿಂದ ಬಲ್ಲ ಕರ್ನಾಟಕದ ಕಲಾವಿದರ ಬಗ್ಗೆ ಯೋಚಿಸಿದಾಗ, ಥಟ್ಟಂತ ನೆನಪಾಗಿದ್ದು ಎಂ. ಬಿ. ಪಾಟೀಲ್. ಅವರನ್ನು ಕಂಡು ಮಾತನಾಡಲು, ಮಲ್ಲೇಶ್ವರಂನಲ್ಲಿದ್ದ ಅವರ ಮನೆಗೆ ಹೋದಾಗ, ಪಾಟೀಲರು ತಮ್ಮ ಎಂದಿನ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ‘‘ಬರ್ರಿ ಬರ್ರಿ...’’ ಎಂದರು. ಕೂರಲಿಕ್ಕೆ ಕುರ್ಚಿ ಕೊಟ್ಟು, ‘‘ಚಾ ಕುಡಿತಿರೇನು’’ ಎಂದು, ನನ್ನ ಮಾತಿಗೂ ಕಾಯದೆ, ‘‘ಏ ಚಾ ಕ್ಯಾಟಲ್ ತರ್ರಿಲ್ಲಿ...’’ ಎಂದು, ಒಂದು ಲೋಟಕ್ಕೆ ಟೀ ಬಗ್ಗಿಸಿ ಕೊಟ್ಟರು. ತಾವೊಂದು ಲೋಟಕ್ಕೆ ಚಾ ಬಗ್ಗಿಸಿಕೊಂಡು ಉದ್ದನೆ ಬೆರಳುಗಳ ಮಧ್ಯಕ್ಕೆ ಸಿಗರೇಟು ಸಿಕ್ಕಿಸಿಕೊಂಡು ಒಂದು ದಮ್ ಎಳೆದು, ‘‘ಇಷ್ಟೇ ನೋಡಪ...’’ ಎಂದು ಕೈ ಎತ್ತಿದರು.
ಆ ‘‘ಇಷ್ಟೇ’’ ಎನ್ನುವುದು ಪಾಟೀಲರ ಬದುಕಿನ ಯಥಾವತ್ ಚಿತ್ರಣವನ್ನು ಬಿಡಿಸಿಟ್ಟಿತ್ತು. ಅದಕ್ಕೆ ಸಾಕ್ಷಿಯಾಗಿ ಅವರ ಮನೆಯಿತ್ತು. ಅದಕ್ಕೊಪ್ಪುವಂತೆ ಅವರ ಸರಳ ಸಹಜ ಆತ್ಮೀಯತೆ; ಏಳಡಿ ಎತ್ತರದ ಮೂವತ್ತು ಕೆಜಿಯ ಸಪೂರ ದೇಹ, ಬೊಚ್ಚು ಬಾಯಿ, ಗಾಳಿಗೆ ಹಾರಾಡುವ ಬಿಳಿ ಕೂದಲು. ಅವರಿದ್ದದ್ದು ಹಳೆಕಾಲದ ಮಣ್ಣಿನ ಗೋಡೆಯುಳ್ಳ ಪುಟ್ಟ ಮನೆ, ಅದರೊಳಗೆ ಗುಹೆಯಂತಹ ಅಟ್ಟ. ಅಟ್ಟದ ಮೇಲೆ ಪಾಟೀಲರ ಪಟ್ಟಾಂಗ. ಅಲ್ಲಿ ಅವರು ಮಲಗಲು ಬಳಸುತ್ತಿದ್ದ ಮಂಚವಿತ್ತು, ಬಂದ ಅತಿಥಿಗಳು ಕೂರಲಿಕ್ಕೆ ಮಂಚದ ಪಕ್ಕಕ್ಕೆ ಒಂದು ಮುರುಕಲು ಚೇರಿತ್ತು. ಆ ಮಂಚದ ತುಂಬಾ ದಿನಪತ್ರಿಕೆಗಳು, ವಾರಪತ್ರಿಕೆಗಳು, ಪುಸ್ತಕಗಳು... ಗೋಡೆ ತುಂಬಾ ಪ್ರಶಸ್ತಿ ಫಲಕಗಳು, ಬಣ್ಣಗೆಟ್ಟ ಗಂಧದ ಹಾರಗಳು, ಅವರೇ ರಚಿಸಿದ ಕೆಲವು ಪೋರ್ಟ್ರೈಟ್‌ಗಳು... ಹೀಗೆ ಒಬ್ಬ ಕಲಾಕಾರನ ಕೋಣೆ ಹೇಗಿರಬೇಕೋ ಹಾಗೆಯೇ ಇತ್ತು. ಅದು ಪಾಟೀಲರ ಪಾಲಿನ ಅರಮನೆ, ಕಲಾ ಗ್ಯಾಲರಿ ಎಲ್ಲವೂ ಆಗಿತ್ತು.
ತಾವಿರುವ ಸ್ಥಿತಿ ಬಗ್ಗೆ ತಮ್ಮನ್ನು ತಾವೇ ಗೇಲಿ ಮಾಡಿ ಕೊಂಡು ನಗಾಡುತ್ತಿದ್ದರು. ‘‘ಮೊನ್ನೆ ಯಾರೋ ಬಂದರ್ರಿ, ಮಗಳಿಗೆ ಹೇಳತಿದ್ರು, ಲೇ ತಾಯಿ, ನಿಮ್ಮಪ್ಪಗ ಒಂಚೂರು ತಾವು ಮಾಡಕೊಡವ್ವ, ಇಲ್ಲದಿದ್ರ ಆ ಪೇಪರ್ ರದ್ದಿಯೊಳಗ ಹುಡುಕಬೇಕಾದೀತು... ಅಂತ’’ ಎಂದು ಪಕಪಕನೆ ನಗಾಡಿದರು.
ಖ್ಯಾತ ಕಲಾವಿದ ಎಂ. ಎಫ್. ಹುಸೈನ್‌ಗೆ ಈ ನಮ್ಮ ಪಾಟೀಲರು ತೀರಾ ಆತ್ಮೀಯರಾಗಿದ್ದರು. ಬೆಂಗಳೂರಿಗೆ ಬಂದರೆ, ಪಾಟೀಲರನ್ನು ಪಕ್ಕಕ್ಕಿಟ್ಟುಕೊಂಡು ತಿರುಗುತ್ತಿದ್ದರು. ಆ ಬಗ್ಗೆ ಪಾಟೀಲರನ್ನು ಕೇಳಿದರೆ, ‘‘ಅದು 1983-84, ರಾಮಕೃಷ್ಣ ಹೆಗಡೆ ಸಿಎಂ, ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಕಲಾ ಮೇಳ ಏರ್ಪಡಿಸಿದ್ದರ್ರಿ. ಅದಕ್ಕೆ ಹುಸೈನ್ ಬಂದಿದ್ರು. ಆಗ ಹುಸೈನ್ ಸ್ಟಾರ್ ಕಲಾವಿದ. ಅವನಿಗೆ ರಾಯಲ್ ಟ್ರೀಟ್‌ಮೆಂಟು, ಓಬೇರಾಯ್ ಹೋಟ್ಲಲ್ಲಿ ರೂಮು. ಅವ ಹೋಟ್ಲು ಬಿಟ್ಟು ಬರಿಗಾಲಲ್ಲಿ ನಡಕೋಂತ ಕಬ್ಬನ್ ಪಾರ್ಕಿಗೆ ಬಂದುಬಿಡೋನ್ರಿ. ಆ ಬ್ಯಾಂಡ್‌ಸ್ಟಾಂಡ್ ಅದಲ್ರಿ... ಅಲ್ಲಿ ಹಂಗಾ ಮಕ್ಕಂಬುಡನು. ನಾವು ಅವುನ್ ಕಾಯ್ತಿ ಕೂರೋದು. ಚಪ್ಪಲಿ ಗಿಪ್ಪಲಿ ಹಾಕ್ತಿರಲಿಲ್ಲ. ಬರೀಗಾಲಲ್ಲೇ ನಡಕೋಂತ ಹೊಂಟುಬುಡರು. ನಟರಾಜ ಥಿಯೇಟರ್ ಇದಲ್ರಿ, ಅದರ ಹಿಂದ್‌ಕ ‘ರಾಜ್ ಆರ್ಟ್ಸ್’ ಅಂತ ಸಿನೆಮಾ ಕಟೌಟು, ಬ್ಯಾನರ್ ಬರಿಯೋ ಒಂದು ಅಂಗಡಿ ಅದೆ. ಅಲ್ಲಿಗೆ ಹುಸೈನ್ ಎರಡು ಸಲ ನಡಕೊಂಡ್ ಹೋಗಿ ಆ ಬಣ್ಣ ತುಂಬೋ ಹುಡುಗರ ತಲೆನೆಲ್ಲ ಮುಟ್ಟಿ, ಕೈಗೆ ಸಿಕ್ಕದಷ್ಟು ದುಡ್ಡು ಕೊಟ್ಟು, ‘ನಾನೂ ನಿಮ್ಮಂಗೇ ಇದ್ದೆ...’ ಅಂತೇಳಿತಿದ್ರು. ಕಲಾ ಮೇಳದ ಟೈಮ್‌ನಲ್ಲಿ ಹೆಗಡೆಯವರು ಹುಸೈನ್‌ನಂಥವರು ಕರ್ನಾಟಕದಲ್ಲಿರಬೇಕು ಅಂತ ಬೆಂಗಳೂರಿನ ಕೋರಮಂಗಲದಲ್ಲಿ ಒಂದು ಸೈಟ್ ಕೊಟ್ರು. ಅವರಿಗೆ ಕೊಟ್ಟಾಗಲೇ ನನಗೂ ಬನಶಂಕರಿಯಲ್ಲೊಂದ್ ಸೈಟ್ ಕೊಟ್ರು, ನಾನು ಅದರ ಕಂತು ಕಟ್ಟಕ್ಕಾಗದೆ, ನನಗ್ಯಾಕ್ರಿ ಅಪಾ ಅಂತೇಳಿ ಬಿಟ್ಟೆ...’’ ಎಂದಿದ್ದರು.
ಅಂದರೆ ಪಾಟೀಲರಿಗೆ, ಕಲಾವಿದರ ಕೋಟಾದಲ್ಲಿ ಸೈಟ್ ಸಿಕ್ಕರೂ ಕನಿಷ್ಠ ಹಣ ಕಟ್ಟಲಿಕ್ಕೂ ಸಾಧ್ಯವಿಲ್ಲದಂತಹ ಸ್ಥಿತಿ ಇತ್ತು. ಆ ಸ್ಥಿತಿಗೆ ಅವರ ಸ್ವಭಾವವೂ ಕಾರಣವಾಗಿತ್ತು. ಇವರ ಈ ಒಳ್ಳೆಯತನವನ್ನು ಅನೇಕ ಕಲಾವಿದರು, ಅಧಿಕಾರಿಗಳು, ಹಿತೈಷಿಗಳು ದುರುಪಯೋಗಪಡಿಸಿಕೊಂಡರು. ಕೆಲವರಂತೂ ಪಾಟೀಲರಿಗೆ ಬರಿ ಸಿಗರೇಟು, ಟೀ ಕುಡಿಸಿ ಮೌಲ್ಯಯುತ ಪೇಟಿಂಗ್‌ಗಳನ್ನು ಹಣ ಕೊಡದೆ ಎತ್ತಿಕೊಂಡು ಹೋದರು. ಇನ್ನು ಕೆಲವರು ಒಂದು ಪೆಗ್ ವ್ಹಿಸ್ಕಿ ಕುಡಿಸಿ ತಮ್ಮ ಹೊಸ ಮನೆಯ ಗೋಡೆ, ಕಾಂಪೌಂಡ್‌ಗೆ ಹಸೆ ಚಿತ್ರ ಬಿಡಿಸಿಕೊಂಡರು. ಇಷ್ಟಾದರೂ, ಪಾಟೀಲರು ಅವರನ್ನು ದೂರ ಮಾಡಲಿಲ್ಲ. ಅದನ್ನು ಮೋಸ, ಅನ್ಯಾಯ, ಶೋಷಣೆ, ದುರುಪಯೋಗವೆಂದು ಭಾವಿಸಲಿಲ್ಲ. ಪಾಟೀಲರು ಮುಂಬೈ-ಬೆಂಗಳೂರುಗಳನ್ನು ನೋಡಿದ್ದರೂ, ನಗರದ ನಾಜೂಕನ್ನು ಕಲಿಯಲಿಲ್ಲ. ಒಂದು ಪೈಂಟಿಂಗನ್ನು ಒಂದು ಕೋಟಿಗೆ ಮಾರಿದ ಎಂ.ಎಫ್.ಹುಸೈನ್‌ರಂತಹವರ ಜೊತೆ ಒಡನಾಡಿದ್ದರೂ, ವ್ಯಾವಹಾರಿಕ ಜ್ಞಾನವನ್ನು ಮೈಗೂಡಿಸಿಕೊಳ್ಳಲಿಲ್ಲ. ಅದೇ ಜುಬ್ಬಾ, ಅದೇ ಪೈಜಾಮ. ಅದೇ ನಗುಮುಖ. ಅದೇ ಬಿಜಾಪುರದ ಜವಾರಿ ಭಾಷೆ.
ಇಂತಹ ಪಾಟೀಲರು ಜನಿಸಿದ್ದು ಡಿಸೆಂಬರ್ 10, 1939ರಲ್ಲಿ ಬಿಜಾಪುರದ ತಿಕೋಟಾದಲ್ಲಿ. ಮುಂಬೈನ ನೂತನ್ ಕಲಾ ಮಂದಿರದಿಂದ 1964ರಲ್ಲಿ ಕಲಾ ಪದವಿ ಪಡೆದಿದ್ದರು. ದೇಶದ ನಾನಾ ನಗರಗಳಲ್ಲಿ ಏರ್ಪಡಿಸುತ್ತಿದ್ದ ಪ್ರತಿಷ್ಠಿತ ಕಲಾಶಿಬಿರಗಳಲ್ಲಿ ಪಾಲ್ಗೊಂಡಿದ್ದರು. ನಂತರ ಬೆಂಗಳೂರಿನಲ್ಲಿ ವಾರ್ತಾ ಇಲಾಖೆಯ ಮುಖ್ಯ ಕಲಾವಿದರಾಗಿ ಕಾರ್ಯ ನಿರ್ವಹಿಸಿದರು. ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಸ್ತಬ್ಧ ಚಿತ್ರಕ್ಕೆ ಎಂ.ಬಿ. ಪಾಟೀಲರದೇ ವಿನ್ಯಾಸ. ಅವರು ವಿನ್ಯಾಸಗೊಳಿಸಿದ ಸ್ತಬ್ಧಚಿತ್ರಗಳಿಗೆ ಎರಡು ಬಾರಿ ಪ್ರಥಮ ಹಾಗೂ ಮೂರು ಬಾರಿ ದ್ವಿತೀಯ ಬಹುಮಾನ ಲಭಿಸಿದೆ. ಹಲವು ಪೌರಾಣಿಕ ಚಲನಚಿತ್ರಗಳಿಗೆ ವಿನ್ಯಾಸಕಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದುಂಟು. ನಿವೃತ್ತಿಯ ನಂತರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇಬ್ಬರು ಪುತ್ರರು, ಮೂವರು ಪುತ್ರಿಯರಿದ್ದು, ಆರೋಗ್ಯ ಕೈ ಕೊಟ್ಟಾಗ ಧಾರವಾಡಕ್ಕೆ ಹೋಗಿಬರುತ್ತಿದ್ದರು.
ಪಾಟೀಲರಲ್ಲಿ ಎಲ್ಲರನ್ನು ಪ್ರೀತಿಸುವ, ಎಲ್ಲರ ಒಳಿತನ್ನು ಬಯಸುವ ಸ್ವಚ್ಛ ಶುದ್ಧ ಮನಸ್ಸಿತ್ತು. ನಗುನಗುತ್ತಲೆ ಎಲ್ಲರೊಳಗೊಂದಾಗುವ ಗುಣವಿತ್ತು. ಕಿರಿಯ ಕಲಾವಿದರ ಕಾರ್ಯಕ್ರಮಕ್ಕೆ ಬರಲು ಖ್ಯಾತನಾಮರು ಹಿಂದೇಟು ಹಾಕಿದರೆ, ಪಾಟೀಲರು ತಾವೇ ಆಟೊ ಹತ್ತಿ ಹೋಗಿ, ಹರಸಿ ಹಾರೈಸಿ ಬರುವ ಪ್ರಾಂಜಲ ಮನಸ್ಸಿತ್ತು. ಉಣ್ಣಲು-ಉಡಲು-ಮಲಗಲು ಮನೆ ಇಲ್ಲದಿದ್ದರೂ, ಕಿರಿಯ ಕಲಾವಿದರ ದಂಡು ಕಟ್ಟಿಕೊಂಡು ತಿರುಗುತ್ತಿದ್ದರು. ಅವರಿಗೆ ಮಾರ್ಗದರ್ಶನ ಮಾಡುತ್ತಾ, ಅವರ ಗೆರೆಗಳನ್ನು ತಿದ್ದುತ್ತಾ, ಅವರ ಚಿತ್ರಗಳಿಗೆ ಚಿಂತನೆಯ ಲೇಪ ಹಚ್ಚುತ್ತಾ, ಅವರದೊಂದು ಎಕ್ಸಿಬಿಷನ್ ಮಾಡಿಸಲು, ನೆಲೆ ಒದಗಿಸಿಕೊಡಲು ಹೆಣಗಾಡುತ್ತಿದ್ದರು. ಅವರಿಗೆ ಕೆಲಸ ಸಿಕ್ಕಿ ನೆಲೆ ನಿಂತ ಮೇಲೆ, ಇವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಕಾಕತಾಳೀಯವೋ ಏನೋ, ಇವರ ಬಳಿ ಬರುತ್ತಿದ್ದವರು ಉತ್ತರ ಕರ್ನಾಟಕದ ಕಲಾವಿದರೇ ಆಗಿದ್ದರು. ಅವರೆಲ್ಲ ಬೆಂಗಳೂರೆಂಬ ಮಾಯಾನಗರಿ, ಇಂಗ್ಲಿಷಿನ ಎಲೀಟ್ ಕಲಾಜಗತ್ತು, ಅಲ್ಲಿನ ಥಳಕು ಬಳುಕಿಗೆ ಬೆಚ್ಚಿ ಬಿದ್ದವರು. ಅಂಥವರಿಗೆ ಪಾಟೀಲರು ದಾರಿದೀಪವಾಗಿದ್ದರು. ವ್ಯಕ್ತಿಚಿತ್ರಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಪಾಟೀಲರು, ಗ್ರಾಮೀಣ ಬದುಕನ್ನು, ಹಾಲಕ್ಕಿ ಮಹಿಳೆಯರ ಜೀವನಶೈಲಿಯನ್ನು ಬಣ್ಣದಲ್ಲಿ ಹಿಡಿದಿಟ್ಟು ಕಲಾಲೋಕಕ್ಕೆ ಪರಿಚಯಿಸಿದ್ದರು. ಪೋರ್ಟ್ರೈಟ್, ಲ್ಯಾಂಡ್‌ಸ್ಕೇಪ್, ಅಬ್‌ಸ್ಟ್ರಾಕ್ಟ್, ಫಿಗರಿಟಿವ್ ಕಂಪೋಸಿಷನ್, ಮ್ಯೂರಲ್ಸ್, ಸ್ಕಲ್ಪ್ಚರ್ ಎಲ್ಲಾ ವಿಭಾಗದಲ್ಲೂ ಪಾಟೀಲರದು ಎತ್ತಿದ ಕೈ. ಅವರ ಗೆರೆಗಳಲ್ಲಿ ಜೀವವಿತ್ತು, ಚಿತ್ರರಚನೆಯಲ್ಲಿ ಅಸಲಿತನವಿತ್ತು. ಆದರೆ ಆ ಕಲೆಯನ್ನು ಮಾರ್ಕೆಟ್ ಮಾಡುವ ಕಲೆ ಗೊತ್ತಿಲ್ಲದೆ ಬದುಕು ಬಡವಾಗಿತ್ತು. ಬಡತನಕ್ಕೆ ಮುಗ್ಧತೆಯೂ ಜೊತೆಯಾಗಿತ್ತು. ತಮಗಿಂತ ಚಿಕ್ಕವರು ಅದೇ ಕಲೆಯನ್ನು ಮಾರ್ಕೆಟ್ ಮಾಡಿ ಕಾರು, ಬಂಗಲೆ, ಕಂಫರ್ಟ್ ಲೈಫ್, ವಿದೇಶ ಅಂತೆಲ್ಲ ಸುತ್ತಾ ಡುತ್ತಿದ್ದರೂ ‘ನಾನ್ ಹಿಂಗೇರಿ’ ಎನ್ನುತ್ತಿದ್ದರು. ತಮ್ಮ ಮನಸ್ಥಿತಿಗೆ ಒಗ್ಗುವ ಸದಭಿರುಚಿ ಸಾಹಿತ್ಯ-ಸಂಗೀತದ ಬಗ್ಗೆ ಒಲವಿದ್ದು, ಚಿರಂಜೀವಿಸಿಂಗ್, ಅನಂತಮೂರ್ತಿ, ಲಂಕೇಶ್, ದೇವರಾಜ ಅರಸರಂತಹ ವ್ಯಕ್ತಿಗಳ ಸಂಪರ್ಕದಲ್ಲಿದ್ದರು. ತಮ್ಮ ಕಲಾಜಗತ್ತಿನ ಕೆ.ಟಿ.ಶಿವಪ್ರಸಾದ್, ಅಂದಾನಿ, ಹಡಪದ್, ಶಂಕರ ಪಾಟೀಲ, ಬಾಳೆಕಾಯಿ, ಎಂ.ಎಸ್.ಮೂರ್ತಿಯಂಥವರ ಸ್ನೇಹ ವಲಯದಲ್ಲಿ ಗುರುತಿಸಿಕೊಳ್ಳಲು ಆಸೆಪಡುತ್ತಿದ್ದರು.
ಹಳ್ಳಿಯ ಪರಿಸರದಲ್ಲಿ ಬಡತನದ ಬದುಕಿನಲ್ಲಿ ಪಾಟೀಲರ ಕರುಳಿಗೆ ಕಲೆ ಬಿತ್ತನೆಯಾದ ಬಗೆಯೇ ಭಿನ್ನವಾದುದು. ಅದನ್ನು ಕೇಳಿದರೆ, ‘‘ನಾನು ಸಣ್ಣವಿದ್ದಾಗ ಚಿತ್ರ ಬರೀತಿದ್ದನಂತ್ರಿ, ಆಮೇಲೆ ನಮ್ಮೂರಿನ ಹಬ್ಬಗಳು, ಜಾತ್ರೆಗಳು ನನ್ನನ್ನು ಅಪಾರವಾಗಿ ಸೆಳೆದ್ವು. ಅದಕ್ಕಿಂತ ನಮ್ ಹಳ್ಳಿ ಹೆಂಗಸ್ರು ಮಡಕೆ, ಕುಡಿಕೆ ಮೇಲೆ ಬರೀತಿದ್ದ ಚಿತ್ರಗಳು; ಮನೆಗಳ ಗೋಡೆಗಳ ಮೇಲೆ ಬರೀತಿದ್ದ ನವಿಲು, ಗಿಣಿ, ಹಸೆ, ಇವೆಲ್ಲ ನನ್ನೊಳಗೆ ಇಳಿಯಿತು. ಸ್ಕೂಲಲ್ಲಿ ಅದನ್ನೇ ಬರೀತಿದ್ದೆ. ಗಣೇಶ ಮೂರ್ತಿ ಮಾಡೋದನ್ನು ಇಡೀ ದಿನ ಊಟ ತಿಂಡಿ ಬಿಟ್ಟು ಕುಂತು ನೋಡತಿದ್ದೆ. ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಮೆಟ್ರಿಕ್ಯುಲೇಷನ್‌ಗೆ ಹೋಗುವಾಗ, ‘ನೀನು ಇಲ್ಲಿದ್ದು ಕಲಿಯದೇನಿಲ್ಲ, ಬಾಂಬೆಗೋಗು’ ಅಂತ ನಮ್ಮ ದೊಡ್ಡಣ್ಣ ಕಳಿಸಿದ್ರು. ಅಲ್ಲಿ ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಸೀಟ್ ಸಿಗಲಿಲ್ಲ. ನೂತನ್ ಕಲಾ ಮಂದಿರದಲ್ಲಿ ಡಿಪ್ಲೊಮೋ ಕೋರ್ಸಿಗೆ ಸೇರಿದೆ. ದಂಡವತಿಮಠ್ ಅಂತ ಪ್ರಿನ್ಸಿಪಾಲರು. ಅವರು ದಿನಕ್ಕೆ ಮೂರು ಪೋರ್ಟ್ರೈಟ್, ನೂರು ಡ್ರಾಯಿಂಗ್ ಕಂಪಲ್ಸರಿ ಬರೀಬೇಕು ಅಂತ ಕೂರಿಸ್ತಿದ್ರು. ನಾನ್ ಬರೆಯೋನಿದ್ದೆ. ಆದರೆ ಡ್ರಾಯಿಂಗ್ ಶೀಟೇ ಇರಲಿಲ್ಲ. ಸಹಪಾಠಿಗಳು ಸಹಕರಿಸಿದ್ರು. ಕೋರ್ಸ್ ಮುಗಿದ ಮೇಲೆ ಹಿಂದಿ ಸಿನೆಮಾದ ಪೋಸ್ಟರ್ ಬರೀತಿದ್ದೆ, ಹಳೇ ಫೋಟೊಗಳಿಗೆ ಕಲರ್ ಹಚ್ಚುತ್ತಿದ್ದೆ. ಹುಬ್ಬಳ್ಳಿಗೆ ಬಂದು ಮೆಡಿಕಲ್ ಕಾಲೇಜಿನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದೆ. ಕೊನೆಗೆ ವಾರ್ತಾ ಇಲಾಖೆಗೆ ಸೇರಿ, 1998ರಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ರಿಟೈರ್ ಆದೆ. ಈಗ ಹಿಂಗಾ ನಿಮ್ ಮುಂದ್ ಕುಂತಿನ್ ನೋಡ್ರಿ’’ ಎಂದಿದ್ದರು. ಕೆಲವು ವರ್ಷಗಳ ಹಿಂದೆ, ಕಲಾಶಿಬಿರವೊಂದರಲ್ಲಿ ಒಬ್ಬ ಮಹಿಳೆಯನ್ನು ಕರೆದು ಮುಂದೆ ಕೂರಿಸಿಕೊಂಡ ಪಾಟೀಲರು, ಕೇವಲ 15 ನಿಮಿಷಗಳಲ್ಲಿ ಆಕೆಯ ಚೆಂದದ ಪೋರ್ಟ್ರೈಟ್ ಬಿಡಿಸಿ, ಅಲ್ಲಿದ್ದ ಖ್ಯಾತ ಕಲಾವಿದರನ್ನು ಬೆಚ್ಚಿ ಬೀಳಿಸಿದ್ದರು. ಇಂತಹ ಸೃಜನಶೀಲ ಕಲಾಕಾರ ಪಾಟೀಲರಿಗೆ ರಾಜ್ಯ ಲಲಿತಕಲಾ ಅಕಾಡಮಿ, ಕರ್ನಾಟಕ ರಾಜ್ಯೋತ್ಸವ ಮತ್ತು ಪ್ರತಿಷ್ಠಿತ ವರ್ಣಶಿಲ್ಪಿವೆಂಕಟಪ್ಪಪ್ರಶಸ್ತಿಗಳು ಹುಡುಕಿಕೊಂಡು ಬಂದು, ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ. ‘‘ಈ ಪ್ರಶಸ್ತಿಗಳನ್ನು, ಚಿತ್ರಗಳನ್ನು, ಪುಸ್ತಕಗಳನ್ನು ಇಟ್ಟುಕೊಂಡು ಏನ್ಮಾಡದ್ರಿ’’ ಎಂದು ತಮ್ಮ ಗೆಳೆಯ ಅಂದಾನಿಯ ಕಲಾ ಕಾಲೇಜಿಗೆ ಕೊಡುಗೆಯಾಗಿ ಕೊಟ್ಟಿದ್ದರು.
ಇದ್ದಷ್ಟು ದಿನವೂ ಯಾರ ಮರ್ಜಿ-ಮುಲಾಜಿಗೂ ಒಳಪಡದ; ಕಷ್ಟ-ಕೊರತೆ-ಸಮಸ್ಯೆಗಳ ಜೊತೆಜೊತೆಗೆ ಬದುಕುತ್ತಿದ್ದ; ಅದೇ ಬದುಕು ಎಂದು ಭಾವಿಸಿದ್ದ ಪಾಟೀಲರು ಕಲಾ ಲೋಕದ ಸಂತ. ಆ ಸಂತನಿಗೂ ಒಂದು ಆಸೆ ಇತ್ತು- ಬೆಳಗಾವಿ ಯಲ್ಲೊಂದು ಪುಟ್ಟ ಗುಡಿಸಲು ಕಟ್ಟಿಕೊಂಡು, ಬುದ್ಧನಂತೆ ತಣ್ಣಗೆ ಕೂರಬೇಕೆಂದು. ಆದರೆ ಆ ಕೊನೆ ಆಸೆಯೂ ಕೈಗೂಡದೆ, ಕಳೆದ ಸೋಮವಾರ ಕೊನೆಯುಸಿರೆಳೆದರು.