ಭಗತ್‌ಸಿಂಗ್‌ರ ಆಶಯಗಳು ಉಳಿಯಲಿ
ಬದುಕಿದ್ದ 23 ವರ್ಷಗಳಲ್ಲಿ ಇಡೀ ಜೀವನವನ್ನು ದೇಶಕ್ಕಾಗಿ, ದೇಶದ ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್ ದೇಶಪ್ರೇಮಿಗಳಲ್ಲಿ ಭಗತ್‌ಸಿಂಗ್ ಮೊದಲ ಸಾಲಲ್ಲಿ ನಿಲ್ಲುತ್ತಾರೆ. ಸ್ವಾತಂತ್ರ ಹೋರಾಟಗಾರರ ಕುಟುಂಬದಲ್ಲಿ 1907, ಸೆ.27ರಂದು (28 ಎನ್ನುವ ವಾದವೂ ಇದೆ) ಜನಿಸಿದ್ದ ಭಗತ್‌ಸಿಂಗ್ ಬಾಲ್ಯದಿಂದಲೇ ಕ್ರಾಂತಿಕಾರಿ ವಿಚಾರಗಳನ್ನು ಮೈಗೂಡಿಸಿಕೊಂಡು ಮಹಾನ್ ಕ್ರಾಂತಿಕಾರಿಯಾಗುವಲ್ಲಿ ಯಶಸ್ವಿಯಾದರು.
ಮನೆ ಬಿಟ್ಟು ಹೋಗುವಾಗ ಭಗತ್‌ಸಿಂಗ್ ‘ನನ್ನ ಬದುಕು ಒಂದು ಉನ್ನತ ಧ್ಯೇಯಕ್ಕೆ, ದೇಶದ ಸ್ವಾತಂತ್ರಕ್ಕೆ ಮೀಸಲು. ಯಾವುದೇ ಲೌಕಿಕದ ಆಸೆಗಳು ನನ್ನನ್ನು ಆಮಿಷಗೊಳಿಸಲಾರವು’’ ಎನ್ನುವ ಪತ್ರ ಬರೆದಿಟ್ಟು ಸ್ವಾತಂತ್ರ ಚಳವಳಿಗೆ ಧುಮುಕುತ್ತಾರೆ.
1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, 1922ರ ಚೌರಿಚೌರ ಘಟನೆಗಳು ಅವರ ಮನಸನ್ನು ಬಾಲ್ಯದಲ್ಲಿಯೇ ಘಾಸಿಗೊಳಿಸಿದ್ದವು. ಆನಂತರದ ಅಸಹಕಾರ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸೈಮನ್ ಕಮಿಷನ್ ವಿರೋಧಿ ಹೋರಾಟದಲ್ಲಿ ಸಂಪುರ್ಣವಾಗಿ ಭಾಗವಹಿಸಿದರು. ನಂತರ ಲಾಲಾ ಲಜಪತ್ ರಾಯ್ ಹತ್ಯೆಗೆ ಪ್ರತೀಕಾರವಾಗಿ ಸೌಂಡರ್ಸ್‌ನ ಅಂತ್ಯವಾದಾಗ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದರು.
ಸ್ವಾತಂತ್ರ, ಸಮಾನತೆ, ಸಹೋದರತೆ, ಸಮಾಜವಾದ, ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಸಿದ ಭಗತ್‌ಸಿಂಗ್ ಬ್ರಿಟಿಷರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದರು. ‘ಇಂಕ್ವಿಲಾಬ್ ಜಿಂದಾಬಾದ್ ಸಾಮ್ರಾಜ್ಯಶಾಹಿ ಮುರ್ದಾಬಾದ್’ ಎನ್ನುವ ಮೂಲಕ ಕ್ರಾಂತಿಯ ಕಹಳೆ ಮೊಳಗಿಸಿದರು.
1923ರಲ್ಲಿ ಲಾಹೋರಿನ ನ್ಯಾಷನಲ್ ಕಾಲೇಜು ಸೇರಿಕೊಂಡು ಕ್ರಾಂತಿ ಕಾರಿ ವಿಚಾರಗಳನ್ನು ಮೈಗೊಡಿಕೊಳ್ಳಲು ಪ್ರಾರಂಭಿಸಿದರು. ಅಸಮಾನತೆ, ಶೋಷಣೆ, ದಬ್ಬಾಳಿಕೆ, ಬಂಡವಾಳ ಶಾಹಿ, ಜಾತೀಯತೆ, ಅಸ್ಪಶ್ಯತೆ, ಬಡತನ ರಹಿತ ಸಮಾಜ ನಿರ್ಮಾಣದ ಕನಸನ್ನು ಕಂಡು, ಅದೇ ದಿಕ್ಕಿನತ್ತ ಮುನ್ನಡೆದರು.
1926ರಲ್ಲಿ ‘ನೌಜವಾನ್ ಭಾರತ್ ಸಭಾ’ ಸ್ಥಾಪಿಸಿ ಸುಖದೇವ್, ರಾಜಗುರು, ಬಟುಕೇಶ್ವರ ದತ್, ಜತೀನ್ ದಾಸ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ಚಂದ್ರಶೇಖರ್ ಆಝಾದ್ ಇತರ ಯುವಜನರನ್ನು ಇದರಲ್ಲಿ ಸಂಘಟಿಸಿದರು. ಮುಂದೆ ‘ಹಿಂದೂಸ್ಥಾನ್ ರಿಪಬ್ಲಿಕ್ ಅಸೋಸಿಯೇಷನ್’ ಎಂಬ ಸಂಘಟನೆಯಲ್ಲಿ ಸಕ್ರಿಯರಾಗಿ ಭಾಗವಹಿಸಿದರು. 1927ರ ಎ.8ರಂದು ಬ್ರಿಟಿಷರ ಗಮನ ಸೆಳೆಯಲು ಸಂಸತ್‌ನೊಳಗಡೆ ಭಗತ್‌ಸಿಂಗ್ ಸಂಗಾತಿಗಳು ಸೇರಿ ನಿಷ್ಕ್ರಿಯ ಬಾಂಬ್ ಎಸೆದರು. ಆದರೆ ಯಾವುದೇ ಪ್ರಾಣಹಾನಿ ಮಾಡದ ಇವರನ್ನು ದೊಡ್ಡ ಅಪರಾಧ ಎಂದು ಬಿಂಬಿಸಿದ ಬ್ರಿಟಿಷ್ ಸರಕಾರ ಜೈಲಿಗಟ್ಟಿತು.
‘‘ಬೂದಿಯ ಪ್ರತೀ ಕಣವೂ ನನ್ನ ಬೆಂಕಿಯ ಜೊತೆ ಚಲಿಸುತ್ತಿರುತ್ತದೆ. ನಾನೆಂಥ ಹುಚ್ಚನೆಂದರೆ ಬಂಧಿಖಾನೆಯಲ್ಲಿಯೂ ಸ್ವತಂತ್ರನಾಗಿರುವೆ’’ ಎಂದು ತಮ್ಮ ಜೈಲಿನ ದಿನಚರಿಯಲ್ಲಿ ಭಗತ್‌ಸಿಂಗ್ ದಾಖಲಿಸಿದ್ದಾರೆ. ಸೆರೆಮನೆಯಲ್ಲಿ ಲೆನಿನ್, ಕಾರ್ಲ್‌ಮಾರ್ಕ್ಸ್ ಬಗ್ಗೆ ಮತ್ತು ಇಟಲಿ ಏಕೀಕರಣ, ಜರ್ಮನಿ ಇತರ ಕ್ರಾಂತಿಕಾರಿ ಚಳವಳಿಗಳ ಅಧ್ಯಯನ ಮಾಡುತ್ತಿದ್ದರು. ಜೈಲಿನ ಅವ್ಯವಸ್ಥೆಯ ವಿರುದ್ಧ ಭಗತ್‌ಸಿಂಗ್ ಮತ್ತು ಅವರ ಸಂಗಾತಿಗಳು 116 ದಿನಗಳ ಕಾಲ ಉಪವಾಸವಿದ್ದರೂ ಇದನ್ನು ನಮ್ಮ ಇತಿಹಾಸದಲ್ಲಿ ಮರೆಮಾಚಲಾಗಿದೆ. ‘‘ನನ್ನ ದೇಶಕ್ಕೆ, ಮಾನವಕುಲಕ್ಕೆ, ಏನಾದರೂ ಉಪಯೋಗವಾಗುವಂಥದ್ದನ್ನು ಮಾಡಬೇಕೆಂಬ ಮಹತ್ವಾಕಾಂಕ್ಷೆ ನನ್ನದೆಯಲ್ಲಿತ್ತು’’ ಎಂದು ತಮ್ಮ ದಿನಚರಿಯಲ್ಲಿ ಹೇಳಿದ್ದಾರೆ.
‘‘ಬಿಳಿಯ ಜನರ ಜಾಗದಲ್ಲಿ ನಮ್ಮ ಜನರು ಕುಳಿತು ನಮ್ಮನ್ನು ಅದೇ ಶೋಷಣೆ, ಅಸಮಾನತೆ, ದಬ್ಬಾಳಿಕೆಯಿಂದ ಆಳಬಾರದು’’ ಎಂದು ಭಗತ್‌ಸಿಂಗ್ ಅಂದೇ ಹೇಳಿದ್ದರು. ಅವರು ಕನಸು ಕಂಡ ಭಾರತವನ್ನು ನಿರ್ಮಿಸಲು ಯಾಕೆ ಸಾಧ್ಯವಾಗಿಲ್ಲ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
ಬ್ರಿಟಿಷ್ ಸರಕಾರ ಭಗತ್‌ಸಿಂಗ್ ಹಾಗೂ ಅವರ ಸಂಗಾತಿಗಳನ್ನು 1931 ಮಾರ್ಚ್ 23ರಂದು ನೇಣಿಗೇರಿಸಲು ರಾತ್ರೋರಾತ್ರಿ ನಿರ್ಣಯ ತೆಗೆದುಕೊಂಡಿತು. ಗಲ್ಲಿಗೇರುವ ಮುನ್ನ ನಿನ್ನ ಕೊನೆಯ ಆಸೆ ಏನೆಂದು ಜೈಲು ಅಧಿಕಾರಿ ಕೇಳಿದಾಗ ‘‘ಲೆನಿನ್ ಪುಸ್ತಕ ಓದಲು ಹತ್ತು ನಿಮಿಷ ನೀಡಿ’’ ಎಂದು ಕೇಳಿ ನಂತರ ನಗುನಗುತ್ತಲೇ ನೇಣಿಗೆ ಏರಲು ಹೊರಟರು. ನೇಣಿಗೇರುವ ಮೂಲಕ ವ್ಯಕ್ತಿಗಳನ್ನು ಕೊಲ್ಲಬಹುದು ಆದರೆ ವಿಚಾರಗಳಿಗೆ ಸಾವಿಲ್ಲ ಎಂಬ ಅವರ ಮಾತನ್ನು ಸಾಬೀತು ಪಡಿಸಿದರು. ಅವರ ವಿಚಾರಗಳು ನಮ್ಮಿಂದಿಗಿವೆ.
ಇವತ್ತು ಅದೆಷ್ಟೋ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ, ಯುವಜನ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಭಗತ್‌ಸಿಂಗ್ ಆಶಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿವೆ. ಇನ್ನೊಂದೆಡೆ ಕೆಲವು ಸಂಘಟನೆಗಳು ಭಗತ್‌ಸಿಂಗ್ ಫೋಟೊ ಇಟ್ಟುಕೊಂಡು ಯುವಕರಲ್ಲಿ ವಿಷಬೀಜವನ್ನು ಬಿತ್ತುವ ಹಾಗೂ ಹೋರಾಟದ ನಾಟಕ ಮಾಡುತ್ತಿರುವ ನಕಲಿ ದೇಶಪ್ರೇಮಿಗಳು ಇದ್ದಾರೆ. ಭಗತ್‌ಸಿಂಗ್ ಆಶಯಗಳ, ಅವರು ಕಂಡ ಭಾರತದ ನಿರ್ಮಾಣಕ್ಕೆ ಯುವಜನ ಒಂದಾಗಬೇಕಿದೆ. ಇಂದಿನ ಯುವಜನಾಂಗಕ್ಕೆ ಭಗತ್‌ಸಿಂಗ್‌ರ ಆಶಯಗಳು, ಹೋರಾಟದ ಹೆಜ್ಜೆಗಳು, ತ್ಯಾಗ ಬಲಿದಾನ ದಾರಿದೀಪ ಮತ್ತು ಆದರ್ಶವಾಗಲಿ.