ಕೇಸರಿ ರಾಷ್ಟ್ರಕ್ಕೆ ಪೂರ್ವಸಿದ್ಧತೆಗಳು

Update: 2017-10-03 18:36 GMT

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ತರುವಾಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳು ರಾಕೆಟ್ ವೇಗ ಪಡೆದುಕೊಂಡಿವೆ. ಆರೆಸ್ಸೆಸ್‌ನ ಕೇಸರಿ ರಾಷ್ಟ್ರ ನಿರ್ಮಾಣದ ಅಜೆಂಡಾವನ್ನು ಕಾರ್ಯಗತಗೊಳಿಸಲು ಕಟಿಬದ್ಧವಾದ ಮೋದಿ ಸರಕಾರ ಅದಕ್ಕೆ ಬೇಕಿರುವ ಸಕಲ ಪೂರ್ವಸಿದ್ಧತೆಗಳನ್ನು ನಡೆಸುತ್ತಿದೆ. ಕಳೆದ ಸುಮಾರು ಮೂರೂವರೆ ವರ್ಷಗಳ ಅವಧಿಯಲ್ಲಿ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಲಯಗಳಲ್ಲಿ ಆಗಿರುವ ಭಾರೀ ಪಲ್ಲಟಗಳು ಒಂದು ವ್ಯವಸ್ಥಿತ ಯೋಜನೆಗೆ ಅನುಸಾರವಾಗಿ ನಡೆದಿವೆ. ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಮೊದಲಾದ ರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಮುಖ್ಯಸ್ಥರು ಮತ್ತಿತರ ನಿರ್ಣಾಯಕ ಹುದ್ದೆಗಳು ಮೋದಿಭಕ್ತರ ಮತ್ತು ಆರೆಸ್ಸೆಸ್ ನಿಷ್ಠಾವಂತರ ಪಾಲಾಗುತ್ತಿರುವುದು ಇದೇ ಪೂರ್ವಸಿದ್ಧತೆಗಳ ಭಾಗವಾಗಿ.

ನರೆಂದ್ರ ಮೋದಿ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆಗಿದ್ದ ಅಥವಾ ಕೆಲವೊಂದು ನಿರ್ಣಾಯಕ ತನಿಖೆಗಳ ಭಾಗವಾಗಿದ್ದ ಹಸ್ಮುಖ್ ಆಧ್ಯ, ಪಿ.ಕೆ.ಪೂಜಾರಿ, ರೀಟಾ ತಿಯೊತಿಯ, ತಪನ್ ರಾಯ್, ಅರವಿಂದ ಕುಮಾರ್ ಶರ್ಮ ಮೊದಲಾದ ಅಧಿಕಾರಿಗಳು 2014ರ ನಂತರ ಕೇಂದ್ರ ಸರಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಗುಜರಾತಿನಲ್ಲಿದ್ದು ಈಗ ದಿಲ್ಲಿಗೆ ಬಂದಿರುವ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನ ಕಳೆದ ವರ್ಷ ಸಿಬಿಐನ ಹಂಗಾಮಿ ನಿರ್ದೇಶಕರಾಗಿದ್ದರು. ಮತ್ತೋರ್ವ ಐಪಿಎಸ್ ಅಧಿಕಾರಿ ಎ.ಕೆ.ಪಟ್ಟನಾಯಕ್ ರಾಷ್ಟ್ರೀಯ ಗುಪ್ತಚರ ಜಾಲದ ಮುಖ್ಯಸ್ಥನಾಗಿದ್ದಾರೆ. ಇದಲ್ಲದೆ ಕನಿಷ್ಠ 14 ಐಎಎಸ್ ಅಧಿಕಾರಿ ಗಳನ್ನು ಗುಜರಾತಿನಿಂದ ದಿಲ್ಲಿಗೆ ಆಮದು ಮಾಡಿಕೊಳ್ಳಲಾಗಿದೆ.

ಗುಜರಾತಿನ ಕುಖ್ಯಾತ ಎನ್‌ಕೌಂಟರ್ ಪ್ರಕರಣಗಳಲ್ಲಿ ಜೈಲುಪಾಲಾಗಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಹೆಚ್ಚುಕಮ್ಮಿ ಎಲ್ಲರೂ ಬಿಡುಗಡೆಯಾಗಿ ಹಳೆ ಹುದ್ದೆಗಳಿಗೆ ಮರಳಿದ್ದಾರೆ. ಕೆಲವರಿಗೆ ಮುಂಭಡ್ತಿ ಭಾಗ್ಯವೂ ದೊರೆತಿದೆ. ಆರೆಸ್ಸೆಸ್ ಪ್ರಣೀತ ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಈಗ ಪುದುಚೇರಿಯ ರಾಜ್ಯಪಾಲೆ. 2002ರ ಗುಜರಾತ್ ಗಲಭೆ ಪ್ರಕರಣ ವನ್ನು ತನಿಖೆ ಮಾಡಿ ಮೋದಿಗೆ ಕ್ಲೀನ್‌ಚಿಟ್ ನೀಡಿದ್ದ ಎಸ್‌ಐಟಿಯ ಮುಖ್ಯಸ್ಥನಾಗಿದ್ದ ಆರ್.ಕೆ.ರಾಘವನ್‌ರನ್ನು ಇತ್ತೀಚೆಗೆ ಸೈಪ್ರಸ್‌ನಲ್ಲಿ ಭಾರತದ ರಾಯಭಾರಿ ಆಗಿ ನಿಯೋಜಿಸಲಾಗಿದೆ. ಇದೇ ಜುಲೈ 2017ರಲ್ಲಿ ಗುಜರಾತ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಅಚಲ್ ಕುಮಾರ್ ಜೋತಿ ಎಂಬ ಐಎಎಸ್ ಅಧಿಕಾರಿಯನ್ನು ಪ್ರಧಾನ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದೆ. ಇವರೆಲ್ಲರೂ ಮೋದಿ ಆಣತಿಯನ್ನು ಚಾಚೂ ತಪ್ಪದೆ ಪರಿಪಾಲಿಸುವವರೆಂದು ಬೇರೆ ಹೇಳಬೇಕಾಗಿಲ್ಲ.

ಅಧಿಕಾರಕ್ಕೆ ಬಂದಂದಿನಿಂದಲೂ ಮೋದಿ ಸರಕಾರ ಕೆಲವೊಂದು ಪ್ರಮುಖ ಕೇಸರಿ ಭಯೋತ್ಪಾದನೆ ಪ್ರಕರಣಗಳಲ್ಲಿ ವಿಶೇಷ ಆಸಕ್ತಿ ವಹಿಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಹಾಲಿ ಮುಖ್ಯಸ್ಥ ಶರದ್ ಕುಮಾರ್‌ರ ಅಧಿಕಾರಾವಧಿಯನ್ನು ಎರಡೆರಡು ಬಾರಿ ವಿಸ್ತರಿಸಿರುವುದರ ಹಿಂದೆ ಸಂಜೋತಾ, ಮಾಲೆಗಾಂವ್, ಪಠಾಣ್‌ಕೋಟ್, ಬರ್ದ್ವಾನ್ ಪ್ರಕರಣಗಳ ತನಿಖೆಯನ್ನು ಸುಖಾಂತ್ಯಗೊಳಿಸುವ ಉದ್ದೇಶಗಳಿರುವಂತೆ ತೋರುತ್ತಿದೆ. ಇದಕ್ಕೆ ಸರಿಯಾಗಿ ಈ ಹೊತ್ತು ಕೇಸರಿ ಭಯೋತ್ಪಾದಕ ಆರೋಪಿಗಳ ವಿರುದ್ಧದ ಪ್ರಕರಣಗಳು ದುರ್ಬಲಗೊಳ್ಳು ತ್ತಿರುವ ವಿದ್ಯಮಾನ ನಮ್ಮ ಕಣ್ಣೆದುರೇ ನಡೆಯುತ್ತಿದೆ.

ಇಂತಹ ದುರ್ದೆಸೆಗೆ ತಲುಪಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮುಂದಿನ ಮುಖ್ಯಸ್ಥರಾಗಲಿರುವ ವ್ಯಕ್ತಿ ಯಾರು ಗೊತ್ತೇ? 2003ರಲ್ಲಿ ಗುಜರಾತಿನ ಹಿರಿಯ ಬಿಜೆಪಿ ನಾಯಕರೂ ಮಾಜಿ ಗೃಹಸಚಿವರೂ ಆಗಿದ್ದ ಹರೇನ್ ಪಾಂಡ್ಯರ ಹತ್ಯೆಯ ವಿವಾದಾತ್ಮಕ ತನಿಖೆಯಲ್ಲಿ ಭಾಗಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ವೈ.ಸಿ. ಮೋದಿ. 2010ರಿಂದ 2012ರ ತನಕ ಈತ ಗುಜರಾತ್ 2002ರ ನರೋದ ಗಾಂವ್, ನರೋದ ಪಾಟಿಯ, ಗುಲ್ಬರ್ಗ್ ಸೊಸೈಟಿ ದಂಗೆಗಳ ತನಿಖೆ ನಡೆಸಿದ ಎಸ್‌ಐಟಿ ತಂಡದ ಭಾಗವಾಗಿಯೂ ಕೆಲಸ ಮಾಡಿದ್ದರು. ಪ್ರಸಕ್ತವಾಗಿ ಸಿಬಿಐನಲ್ಲಿ ವಿಶೇಷ ನಿರ್ದೇಶಕ ಆಗಿರುವ ವೈ.ಸಿ. ಮೋದಿ, ಹಾಲಿ ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್‌ರ ನಿವೃತ್ತಿಯ ಬಳಿಕ ಅಕ್ಟೋಬರ್ 31ರಂದು ಎನ್‌ಐಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗುಜರಾತಿನ ಹಿರಿಯ ಬಿಜೆಪಿ ನಾಯಕ, ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಹತ್ಯಾ ಪ್ರಕರಣದಲ್ಲಿ ಇದುವರೆಗೂ ಯಾರಿಗೂ ಶಿಕ್ಷೆಯಾಗದಿರು ವುದು ಬಹುಶಃ ವೈ.ಸಿ. ಮೋದಿ ನೇತೃತ್ವದ ಸಿಬಿಐ ತಂಡದ ಪ್ರಯತ್ನಗಳ ಫಲವಾಗಿಯೇ ಎಂದು ತೋರುತ್ತದೆ. ಸಿಬಿಐ ಅಂದು ಪಾಂಡ್ಯರನ್ನು 2002ರ ಗಲಭೆಗಳಿಗೆ ಪ್ರತೀಕಾರವಾಗಿ ಕೊಲೆ ಮಾಡಲಾಗಿದೆ ಎಂಬ ಪ್ರಮೇಯವನ್ನು ಮುಂದಿಟ್ಟಿತ್ತು. ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ಪಾಂಡ್ಯ ಕುಟುಂಬಸ್ಥರು ಸಿಬಿಐ ಸಂಸ್ಥೆ ತನಿಖೆಯನ್ನು ಹಳಿ ತಪ್ಪಿಸಿದೆ ಎಂದು ಆರೋಪಿಸಿದ್ದರು. ಹರೇನ್ ಪಾಂಡ್ಯ ಹತ್ಯೆಯ ಘಟನೆಯಲ್ಲಿ 12 ಮಂದಿಯನ್ನು ಆರೋಪಿಗಳಾಗಿ ಹೆಸರಿಸಿ ಅವರ ಮೇಲೆ ಪೋಟಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅವರೆಲ್ಲ ಎಂಟು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಬಳಿಕ 2011ರಲ್ಲಿ ಗುಜರಾತ್ ಉಚ್ಚನ್ಯಾಯಾಲಯ ಎಲ್ಲರೂ ನಿರ್ದೋಷಿಗಳೆಂದು ಹೇಳಿ ಅವರನ್ನು ಬಿಡುಗಡೆಗೊಳಿಸಿದೆ.

ತನಿಖಾಧಿಕಾರಿಗಳ ಮೇಲೆ ಚಾಟಿ ಬೀಸಿದ ನ್ಯಾ ಡಿ.ಎಚ್.ವಗೇಲಾ ಮತ್ತು ಜೆ.ಸಿ.ಉಪಾಧ್ಯಾಯರನ್ನೊಳಗೊಂಡ ದ್ವಿಸದಸ್ಯ ಪೀಠ ತನ್ನ ತೀರ್ಪಿನಲ್ಲಿ ‘‘ಪ್ರಸಕ್ತ ಪ್ರಕರಣದ ದಾಖಲೆಗಳನ್ನು ಪರಿಶೀಲಿಸುವಾಗ ಒಂದು ವಿಷಯ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಹರೇನ್ ಪಾಂಡ್ಯ ಹತ್ಯಾ ಪ್ರಕರಣದ ತನಿಖೆ ಯನ್ನು ಬಹಳ ಅತೃಪ್ತಿಕರವಾಗಿ ನಡೆಸಲಾಗಿದೆ. ತನಿಖೆಯ ಉದ್ದಕ್ಕೂ ಕಣ್ತಡೆ ಹಾಕಿಕೊಂಡು ಒಡ್ಡೊಡ್ಡಾಗಿ ಮಾಡಲಾಗಿದೆ. ಈ ರೀತಿಯಾಗಿ ತಮ್ಮ ಅಸಾಮರ್ಥ್ಯದ ಮೂಲಕ ಅನ್ಯಾಯಕ್ಕೆ ಕಾರಣರಾಗಿರುವ, ಸಾರ್ವಜನಿಕ ಸಂಪನ್ಮೂಲಗಳು ಮತ್ತು ನ್ಯಾಯಾಲಯಗಳ ಸಾರ್ವಜನಿಕ ಸಮಯದ ಅಗಾಧ ವ್ಯಯಕ್ಕೆ ಕಾರಣರಾಗಿರುವ ಮತ್ತು ಅನೇಕ ಸಂಬಂಧಿತ ವ್ಯಕ್ತಿಗಳಿಗೆ ಭಾರೀ ಕಿರುಕುಳ ನೀಡಿರುವ ಸಂಬಂಧಪಟ್ಟ ತನಿಖಾಧಿಕಾರಿಗಳನ್ನು ಉತ್ತರದಾಯಿಗಳಾಗಿ ಮಾಡಬೇಕಾಗಿದೆ’’ ಎಂದು ಅಭಿಪ್ರಾಯಪಟ್ಟಿದೆ.

ಫಿರ್ಯಾದಿಯ ವಾದಗಳು ಒಂದಕ್ಕೊಂದು ವಿರುದ್ಧವಾದ ಹೇಳಿಕೆಗಳಿಂದ ತುಂಬಿರುವುದರೊಂದಿಗೆ ಪ್ರಧಾನವಾಗಿ ದಾಖಲಿತ ತಪ್ಪ್ಪೊಪ್ಪಿಗೆ ಹೇಳಿಕೆೆಗಳನ್ನು ಪುರಾವೆಯಾಗಿ ಉಳಿಸಿಕೊಂಡಿರುವ ವಿಷಯವನ್ನು ನ್ಯಾಯಾಲಯದ ತೀರ್ಪು ಹೊರಗೆಡವುತ್ತದೆ. ತನಿಖೆಯನ್ನು ಒಡ್ಡೊಡ್ಡಾಗಿ ಮತ್ತು ಅಡ್ಡ ದಾರಿಯಲ್ಲಿ ಮಾಡಿರುವುದು ಸ್ಪಷ್ಟವಾಗಿ ತೋರಿ ಬರುತ್ತದೆ. ಎಷ್ಟರ ಮಟ್ಟಿಗೆ ಎಂದರೆ ಪೊಲೀಸರ ವಶದಲ್ಲಿದ್ದ ಆರೋಪಿಗಳು ಯಾವನೇ ಪೊಲೀಸ್ ಅಧಿಕಾರಿ ಮುಂದೆ ದಾಖಲಿಸಿದ ಹೇಳಿಕೆಗಳನ್ನು ವಿಶ್ವಸನೀಯ ಆಧಾರವಾಗಿ ಪರಿಗಣಿಸಿ ಯಾರೊಬ್ಬನನ್ನೂ ಕೊಲೆ ಅಪರಾಧಿ ಎಂದು ತೀರ್ಮಾನಿಸಲು ಸಾಧ್ಯವಾಗಿಲ್ಲ ಎಂದು ತೀರ್ಪಿನಲ್ಲಿ ಬರೆಯಲಾಗಿದೆ.

ಪಾಂಡ್ಯ ಕೊಲೆ ಕಾರಿನೊಳಗೇ ನಡೆದಿತ್ತೆಂದು ಸಿಬಿಐ ವಾದಿಸಿತ್ತು. ವೈ.ಸಿ. ಮೋದಿ ನೇತೃತ್ವದ ಸಿಬಿಐ ತನಿಖೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಪೀಠ ಸಿಬಿಐನ ಮೂಲ ವಾದವನ್ನೆ ಶಂಕಿಸಿದೆ. ದಾಖಲೆಗಳ ಪ್ರಕಾರ ಹರೇನ್ ಪಾಂಡ್ಯರ ಕೊರಳು ಮತ್ತು ಮುಂಗೈಗಳಿಗೆ ಆದ ಗಾಯಗಳಿಂದ ಸಾಕಷ್ಟು ರಕ್ತ ಸುರಿದಿತ್ತೆಂದು ಆತ ಧರಿಸಿದ್ದ ಬಟ್ಟೆಗಳಲ್ಲಿದ್ದ ರಕ್ತದ ಕಲೆಗಳಿಂದ ತಿಳಿದುಬಂದಿದೆ. ಹೀಗಿರುವಾಗ ಡ್ರೈವರ್ ಪಕ್ಕದ ಸೀಟಿನಲ್ಲಿದ್ದ ಚಿಕ್ಕದೊಂದು ಕಲೆಯನ್ನು ಹೊರತುಪಡಿಸಿ ಇನ್ಯಾವ ರಕ್ತದ ಕಲೆಗಳೂ ಪಾಂಡ್ಯರ ಕಾರಿನಲ್ಲಿ ಸಿಗದಿರುವುದು ಕೊಲೆಯ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಪಾಂಡ್ಯ ಪ್ರಕರಣದಲ್ಲಿ ಖುಲಾಸೆಗೊಂಡ 12 ಮಂದಿಗೆ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆ ಯಾಗಿದೆ. ಅದು 2003ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕನಾಗಿದ್ದ ತಿವಾರಿಯ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣ. ಇಲ್ಲಿ ಆರೋಪಿಗಳ ವಕೀಲರು ರಿಯಾಯಿತಿ ತೋರಿಸಿ ಶಿಕ್ಷೆಗೆ ಸಮ್ಮತಿಸಿದ್ದರಾದರೂ ಸಿಬಿಐನ ತನಿಖಾ ವೈಖರಿ ಬಗ್ಗೆ ನ್ಯಾಯಾಲಯ ಮಾಡಿರುವ ಟೀಕೆ ಗಮನಾರ್ಹವಿದೆ: ಪ್ರತಿಯೊಂದು ಪ್ರಮುಖ ಪುರಾವೆಯ ವಿಷಯದಲ್ಲಿ ಪುಟಗಟ್ಟಲೆ ವಿವಾದಾತ್ಮಕ ಅಂಶಗಳು ಮತ್ತು ದಾಖಲೆಪತ್ರ ಗಳಿರುವುದನ್ನು ನ್ಯಾಯಾಲಯ ಗಮನಿಸಿದೆ.
ಭವಿಷ್ಯದಲ್ಲಿ ಎನ್‌ಐಎ ತನಿಖೆಗಳ ಕಾರ್ಯವೈಖರಿ ಹೇಗಿರಬಹುದೆಂದು ಈಗಲೇ ಊಹಿಸಬಹುದಲ್ಲವೇ

(ಆಧಾರ: 19.9.2017ರ ದ ವಯರ್.ಕಾಮ್ ಲೇಖನ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News