ದಣಿವರಿಯದ ಹೋರಾಟಗಾರನಿಗೆ ಗಾಂಧಿ ಸೇವಾ ಪ್ರಶಸ್ತಿ

Update: 2017-10-07 19:00 GMT

ಭಯ, ಚಪಲ, ಹತಾಶೆಗಳಿಂದ ಮುಕ್ತವಾಗಿರುವ ಮನಸ್ಸಿಗೆ ಮಾತ್ರ ಸರಿಯಾಗಿ ಯೋಚಿಸುವ ಶಕ್ತಿ ಇರುತ್ತದೆ ಎಂಬುದು ರಾಮ ಮನೋಹರ ಲೋಹಿಯಾ ಅವರ ನುಡಿ. ದೊರೆಸ್ವಾಮಿಯವರಿಗೆ ಯಾವ ಚಪಲವೂ ಇಲ್ಲ, ಯಾರ ಭಯವೂ ಇಲ್ಲ. ಭ್ರಷ್ಟಾಚಾರ ಮುಕ್ತ ದೇಶ ಮತ್ತು ದೀನದಲಿತರ ಉದ್ಧಾರವೇ ಅವರ ಮುಖ್ಯ ಕಾಳಜಿ-ಕಳಕಳಿ. ಇಂಥ ಮುಕ್ತ ಮನಸ್ಸಿನ ನಿಸ್ವಾರ್ಥ ಜೀವಿ ದೊರೆಸ್ವಾಮಿಯವರ ಸೇವೆ, ಭ್ರಷ್ಟಾಚಾರ ಮತ್ತು ಧರ್ಮಾಂಧತೆಗಳಿಂದ ರೋಗಗ್ರಸ್ತವಾಗಿರುವ ನಮ್ಮ ಈಗಿನ ಸಮಾಜಕ್ಕೆ/ರಾಷ್ಟ್ರಕ್ಕೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.


ಸರಿಸುಮಾರು ಆರು ಅಡಿ ಎತ್ತರದ ಸಪೂರ ಕಾಯ. ಗೋಧಿ ಬಣ್ಣ.ತಲೆಯ ಮೇಲೆ ಯೌವನದಲ್ಲಿ ವಿಜೃಂಭಿಸಿರಬಹುದಾದ ಗುಂಗುರು ಕ್ರಾಪನ್ನು ಜ್ಞಾಪಿಸುವ ಪುಡಿಗೂದಲು. ವಯಸ್ಸಿನ ಪ್ರಭಾವದಿಂದಾಗಿ ಕಂಡೂಕಾಣದಂತೆ ತುಸುವೇ ಬಾಗಿದ ಬೆನ್ನು. ಆದರೆ ಸ್ವಾತಂತ್ರ್ಯ ಸಮಾನತೆಗಳ ಹೋರಾಟದ ಸಂಕಲ್ಪಬಲದ ಮುಂದೆ ಎದುರಾಳಿಗಳು ಬಾಗಬೇಕೆ ಹೊರತು ಅವರೆಂದೂ ಬಾಗಿದವರೂ ಅಲ್ಲ, ಬಗ್ಗಿದವರೂ ಅಲ್ಲ.

ಅವರು ನಮ್ಮ ನಡುವಣ ಶತಾಯುಷಿ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರು. ಪ್ರಾಯ ನೂರಾದರೂ ಯುವಕರನ್ನೂ ನಾಚಿಸುವಂತೆ ಅನ್ಯಾಯಗಳ ವಿರುದ್ಧ ಇಂದಿಗೂ ಹೋರಾಟದ ಮುಂಚೂಣಿಯಲ್ಲಿರುವ ದೊರೆಸ್ವಾಮಿ, ಪತ್ರಿಕೆಗಳಿಗೆ ‘ಬಡವರಿಗೆ ಭೂಮಿ ಹಂಚಿ’ ಎಂಬಂಥ ಬಿಸಿಬಿಸಿ ಸಾಚಾ ಸುದ್ದಿಯೇ! ಆದರೆ ಈ ತಿಂಗಳ ಎರಡರಂದು ಅವರು ಸುದಿಯಲ್ಲಿದ್ದುದು ಭಿನ್ನ ಕಾರಣಕ್ಕಾಗಿ. ಗಾಂಧಿಯುಗದ ಶತಾಯು ‘ಗಾಂಧೀಜೀವಿ’ ದೊರೆಸ್ವಾಮಿಯವರನ್ನು ಅಂದು ಕರ್ನಾಟಕ ಸರಕಾರ ಈ ವರ್ಷದ ಗಾಂಧಿ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿ ತನ್ನನ್ನೇ ಗೌರವಿಸಿಕೊಂಡಿತು. ದೊರೆಸ್ವಾಮಿಗಳು ವಿನಯದಿಂದ ಪ್ರಶಸ್ತಿಯ ಒಂದಷ್ಟು ಮೊತ್ತವನ್ನು ಸೇವಾಕಾರ್ಯ ಸಂಸ್ಥೆಗಳಿಗೆ ಹಂಚಿ ಎಂದಿನಂತೆ ನಗರದ ಸ್ವಾತಂತ್ರ್ಯ ಉದ್ಯಾನವನದತ್ತ (ಫ್ರೀಡಂ ಪಾರ್ಕ್)ಹೆಜ್ಜೆಹಾಕಿದರು.

ಎಂಥ ಭಯೋತ್ಪಾದಕ ಸರ್ವಾಧಿಕಾರ, ನಿರಂಕುಶ ಪ್ರಭುತ್ವಗಳ ಎದುರೂ ಬಾಗದೆ ಸೆಟೆದು ನಿಲ್ಲುವ ದಿಟ್ಟ ದೊರೆಸ್ವಾಮಿಯವರು ಹುಟ್ಟಿದ್ದು ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ. ಬಾಲ್ಯದಲ್ಲೇ ತಂದೆ ಶ್ರೀನಿವಾಸ ಅಯ್ಯರ್ ಅವರ ಪ್ರೀತಿಯಿಂದ ವಂಚಿತರಾದ ದೊರೆಸ್ವಾಮಿಗಳು ತಾತನ ಪಾಲನೆಪೋಷಣೆಯಲ್ಲಿ ಬೆಳೆದವರು. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಾಯಿತು. ‘ಬೆಳೆಯವ ಪೈರಿನ ಸಿರಿಯ ಮೊಳಕೆಯಲ್ಲಿ ನೋಡು’ ಎಂಬಂತೆ ದೊರೆಸ್ವಾಮಿಯವರ ಓದಿನ ಗೀಳು, ಸ್ವಾತಂತ್ರ್ಯದ ಹಂಬಲಗಳು ಶಾಲೆಯ ದಿನಗಳಿಂದಲೇ ಪ್ರಕಟವಾಗತೊಡಗಿದವು. ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಮೋಹನದಾಸ ಕರಮ್‌ಚಂದ್ ಗಾಂಧಿಯವರ ‘ಮೈ ಅರ್ಲಿ ಲೈಫ್’ ಕೃತಿಯನ್ನು ಓದಿ ಪ್ರಭಾವಿತರಾದರು, ಸ್ವಾತಂತ್ರ್ಯದ ಕನಸುಕಂಡರು, ಸತ್ಯಾಗ್ರಹದಲ್ಲಿ ಧುಮುಕುವ ಉಮೇದು ಹತ್ತಿಸಿಕೊಂಡು ಚಡಪಡಿಸಿದರು.

ಇಂಟರ್‌ಮೀಡಿಯಟ್ ಓದುತ್ತಿದ್ದಾಗ ಒಂದು ದಿನ ಬೆಂಗಳೂರಿನ ಬನ್ನಪ್ಪಪಾರ್ಕಿನಲ್ಲಿ(ಕಬ್ಬನ್ ಪೇಟೆಯ ಹತ್ತಿರ) ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಕುರಿತು ಜನಜಾಗೃತಿ ಮೂಡಿಸುವ ಸಭೆ ದೊರೆಸ್ವಾಮಿಯವರನ್ನು ಕೈಬೀಸಿ ಕರೆಯಿತು. ಸಭೆಯಲ್ಲಿ ಪಾಲ್ಗೊಂಡರು. ಸಭೆ ನಡೆಯುತ್ತಿದ್ದಾಗಲೇ ಪೊಲೀಸರು ದಿಢೀರನೆ ಪ್ರತ್ಯಕ್ಷವಾಗಿ ಸಭೆ ವ್ಯವಸ್ಥೆಗೊಳಿಸಿದ್ದ ನಾಯಕರನ್ನು ಬಂಧಿಸಿ ಕರೆದೊಯ್ದರು. ಮರುದಿನ ವಿದ್ಯಾರ್ಥಿಗಳು ನಾಯಕನ ದಸ್ತಗಿರಿ ವಿರುದ್ಧ ತರಗತಿಗಳನ್ನು ತೊರೆದು ಪ್ರತಿಭಟಿಸಿದರು. ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದರು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲ್ಲಿದ್ದ ದೊರೆಸ್ವಾಮಿ ಮೊತ್ತ ಮೊದಲಿಗೆ ಜೀವನದಲ್ಲಿ ಲಾಠಿ ಏಟಿನ ರುಚಿ ಅನುಭವಿಸಿದರು. ಮುಂದೆ ಇದಕ್ಕೆ ಒಗ್ಗಿಕೊಂಡರು. ಅವರಲ್ಲಿ ಸ್ವಾತಂತ್ರ್ಯದ ಜಾಗೃತಿಯಾಗಿತ್ತು. 1942ರಲ್ಲಿ ಬಿಎಸ್ಸಿ ಮುಗಿಸಿದ ದೊರೆಸ್ವಾಮಿಯವರು ಉದರಂಭರಣಕ್ಕಾಗಿ ಕಾಲೇಜು ಉಪನ್ಯಾಸಕರಾದರು. ಆದರೆ ದೇಶ ಬ್ರಿಟಿಷರ ದಾಸ್ಯದಿಂದ ಸ್ವತಂತ್ರವಾಗಬೇಕು ಎನ್ನುವ ತುಡಿತ ಹೆಚ್ಚುತ್ತಲೇ ಇತ್ತು. ಅಣ್ಣ ಎಚ್.ಎಸ್.ಸೀತಾರಾಮ್, ಸರ್ದಾರ್ ವೆಂಕಟ ರಾಮಯ್ಯ, ಎ.ಜಿ.ರಾಮಚಂದ್ರ ರಾವ್ ಮೊದಲಾದ ಗೆಳೆಯರ ಜೊತೆ ಸೇರಿ ಬ್ರಿಟಿಷರ ವಿರುದ್ಧ ಸಮರ ಸಾರಿದರು.

ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಫೋಟಿಸುವ ಬಾಂಬುಗಳ ತಯಾರಿಕೆಯಲ್ಲೂ ಶಾಮೀಲಾದರು. ಸರಕಾರದ ಆಸ್ತಿಪಾಸ್ತಿ, ದಸ್ತಾವೇಜುಗಳನ್ನು ನಾಶಪಡಿಸುವುದು ಈ ಬಾಂಬುಗಳನ್ನು ಸ್ಫೋಟಿಸುವುದರ ಉದ್ದೇಶವಾಗಿತ್ತು. ಬಾಂಬ್ ಸಾಗಿಸುತ್ತಿದ್ದಾಗ ಎ.ಜಿ.ರಾಮಚಂದ್ರ ರಾವ್ ಪೊಲೀಸರ ಕೈಗೆ ಸಿಕ್ಕಿಬಿದ್ದರು. ತನಿಖೆ ವೇಳೆ ಬಾಯಿಬಿಡಿಸುತ್ತಿದ್ದಾಗ ರಾಮಚಂದ್ರರಾಯರು ದೊರೆಸ್ವಾಮಿಗಳ ಹೆಸರನ್ನೂ ಹೇಳಿಬಿಟ್ಟರಂತೆ. ದೊರೆಸ್ವಾಮಿಗಳ ಬಂಧನವಾಯಿತು. ಜೈಲು ಶಿಕ್ಷೆಯಾಯಿತು. ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಹದಿನಾಲ್ಕು ತಿಂಗಳು ಕಳೆದರು. ‘‘ಜೈಲೊಂದು ವಿಶ್ವವಿದ್ಯಾನಿಲಯವಿದ್ದಂತೆ’’ ಎಂದು ಸೆರೆಮನೆ ವಾಸವನ್ನು ಜ್ಞಾಪಿಸಿಕೊಳ್ಳುವ ದೊರೆಸ್ವಾಮಿಯವರು, ಸೆರೆಮನೆಯಲ್ಲಿದ್ದಾಗಲೇ ಹಿಂದಿ, ತಮಿಳು ಮೊದಲಾದ ಭಾಷೆಗಳನ್ನು ಕಲಿತರಂತೆ. ಜೈಲಿನಿಂದ ಹೊರಬಂದ ನಂತರ ಮೈಸೂರಿನಲ್ಲಿ ಸಲ್ಪಕಾಲ ಕನ್ನಡ ಪುಸ್ತಕ ಪ್ರಕಾಶನವೊಂದನ್ನು ನಡೆಸಿದರು. ತಮ್ಮ ಪುಸ್ತಕದ ಅಂಗಡಿಗೆ ಆರ್. ಕೆ. ನಾರಾಯಣ್ ಮತ್ತು ಕೆ. ಎಸ್. ನರಸಿಂಹಸ್ವಾಮಿ ಭೇಟಿ ಕೊಡುತ್ತಿದ್ದುದನ್ನು ದೊರೆಸ್ವಾಮಿ ಹಿಗ್ಗಿನಿಂದ ನೆನಪಿಸಿ ಕೊಳ್ಳುತ್ತಾರೆ. ಈ ಮಧ್ಯೆ ಪತ್ರಿಕಾ ವ್ಯವಸಾಯವೂ ಕೈಬೀಸಿ ಕರೆಯಿತು.

‘ಪೌರವಾಣಿ’ ದಿನಪತ್ರಿಕೆಯನ್ನು ಸೇರಿಕೊಂಡರು. 1941ರಲ್ಲಿ ವಾರಪತ್ರಿಕೆಯಾಗಿ ಕೆ. ಎಸ್. ಎಸ್. ಶಾಸ್ತ್ರಿಯವರ ಸಂಪಾದಕತ್ವದಲ್ಲಿ ಶುರುವಾದ ‘ಪೌರವಾಣಿ’ ನಂತರ ದಿನಪತ್ರಿಕೆಯಾಯಿತು. ಎಂ. ಎಸ್. ಸೀತಾರಾಮಯ್ಯ ಇದರ ಪ್ರಕಾಶಕರು. ಕಾಂಗ್ರೆಸ್ ತತ್ವಗಳ ಪ್ರತಪಾದನೆಗೆ ಹೆಸರಾಗಿದ್ದ ‘ಪೌರವಾಣಿ’ಗೆ ನಂತರದ ದಿನಗಳಲ್ಲಿ ದೊರೆಸ್ವಾಮಿಯವರೂ ಸಂಪಾದಕರಾಗಿದ್ದರು. 1947ರಲ್ಲಿ ಮೈಸೂರು ಚಲೋ ಚಳವಳಿ ಕಾಲದಲ್ಲಿ ದೊರೆಸ್ವಾಮಿಯವರು ಪ್ರಜಾಸತ್ತಾತ್ಮಕ ಸರಕಾರವನ್ನು ಪ್ರತಿಪಾದಿಸಿ ಅನೇಕ ಲೇಖನಗಳನ್ನು ಬರೆದರು. ಸರಕಾರದ ಕಣ್ಣು ಕೆಂಪಾಯಿತು. ‘ಪೌರವಾಣಿ’ ಅಚ್ಚಾಗುತ್ತಿದ್ದ ಮುದ್ರಣಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ದೊರೆಸ್ವಾಮಿಯವರು ಹಿಂದೂಪುರದ ರಹಸ್ಯ ಸ್ಥಳವೊಂದರಲ್ಲಿ ‘ಪೌರವಾಣಿ’ಯನ್ನು ಮುದ್ರಿಸಿ ತಲೆಹೆಗಲಿನ ಮೇಲೆ ಪತ್ರಿಕೆಯ ಕಟ್ಟುಗಳನ್ನು ಹೊತ್ತು ವಾಚಕರಿಗೆ ತಲುಪಿಸಿದರು. ಸರಕಾರ ‘ಪೌರವಾಣಿ’ಯ ಪ್ರಕಟನೆ ರದ್ದುಗೊಳಿಸಿದಾಗ ಸ್ವಲ್ಪಕಾಲ ಅದು ‘ಪೌರವೀರ’ನಾಗಿ ಪ್ರಕಟಗೊಂಡಿತು.

ಸ್ವಾತಂತ್ರ್ಯಾನಂತರ ದೊರೆಸ್ವಾಮಿಯವರು ದೀನದಲಿತರ ಪರವಾಗಿ ದನಿ ಎತ್ತಲು ಕಟಿಬದ್ಧರಾದರು. ಕೋಳೆಗೇರಿ ನಿವಾಸಿಗಳು, ನಿರಾಶ್ರಿತರು, ಬಡಬಗ್ಗರ ಮಧ್ಯೆ ನಿಂತು ಅವರ ಉದ್ಧಾರಕ್ಕೆ ಶ್ರಮಿಸತೊಡಗಿದರು. ವಿನೋಬಾ ಭಾವೆಯವರ ಭೂದಾನ ಚಳವಳಿಯಿಂದ ಆಕರ್ಷಿತರಾದರು. ಬಡವರಿಗಾಗಿ ಶ್ರೀಮಂತ ಜಮೀನ್ದಾರರು ಭೂಮಿಯನ್ನು ಬಿಟ್ಟುಕೊಡಬೇಕಾದ ಅಗತ್ಯವನ್ನು ಮನಗಾಣಿಸಲು ಪಾದಯಾತ್ರೆ ಕೈಗೊಂಡರು. ತಿಂಗಳಲ್ಲಿ ಇಪ್ಪತ್ನಾಲ್ಕು ದಿನ ಊರೂರು ಸುತ್ತಿ ನಡೆಸುತ್ತಿದ್ದ ಭೂದಾನ ಪ್ರಚಾರ ಕಾರ್ಯಕ್ಕೆ ಸಿಗುತ್ತಿದ್ದ ಭತ್ತೆ 100 ರೂಪಾಯಿ. ಇದನ್ನು ಸಂಸಾರ ನಿರ್ವಹಣೆಗೆಂದು ಪತ್ನಿ ಶ್ರೀಮತಿ ಲಲಿತಮ್ಮನವರ ಕೈಯಲ್ಲಿಟ್ಟು, ಭೂಮಿಗಾಗಿ ಜೋಳಿಗೆ ಹಿಡಿದು ಮುಂದಿನೂರಿಗೆ ಸಾಗುತ್ತಿದ್ದರು ದೊರಸ್ವಾಮಿ, ವಿನೋಬಾರ ಚಳವಳಿಗೆ ಸಂಚಲನ ನೀಡುತ್ತಾ.

 ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ್ದ ದೊರೆಸ್ವಾಮಿಯವರು ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ತತ್ವಾದರ್ಶಗಳಿಂದ ಆಕರ್ಷಿತರಾಗಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ಅವರು ಎಂದೂ ಅಧಿಕಾರ ಬಯಸಿದವರಲ್ಲ. ಸೋದರ ಎಚ್.ಎಸ್.ಸೀತಾರಾಂ ಬೆಂಗಳೂರು ನಗರದ ಮೇಯರ್ ಆದರು. ಎ.ಜಿ.ರಾಮಚಂದ್ರ ರಾವ್ ಅವರಂಥ ಸಹಹೋರಾಟಗಾರರು ಸಚಿವರಾದರು. ದೊರೆಸ್ವಾಮಿ ಕ್ರಿಯಾಶೀಲ ಸದಸ್ಯರಾಗಿಯೇ ಉಳಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದ ಶ್ರೀಮತಿ ಇಂದಿರಾಗಾಂಧಿಯವರ ದೃಷ್ಟಿಧೋರಣೆಗಳು ಸರಿಕಾಣಲಿಲ್ಲ. ಅವರ ನಾಯಕತ್ವದಲ್ಲಿ ಭ್ರಮನಿರಸನ ಹೊಂದಿದರು.

ಇಂದಿರಾ ಗಾಂಧಿಯವರು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದಾಗ ‘‘ನೀವು ಆಯ್ಕೆಯಾದದ್ದು ಪ್ರಜಾಪ್ರಭುತ್ವ ಮಾರ್ಗದಲ್ಲಿ ನೀವೀಗ ಸರ್ವಾಧಿಕಾರಿಯಾಗಿದ್ದೀರಿ’’ ಎಂದು ಪತ್ರ ಬರೆದು ಕಾಂಗ್ರೆಸ್ ತೊರೆದರು. ಜೈಲು ಸೇರಿದರು. ‘‘ಭ್ರಷ್ಟಾಚಾರದ ಉಗಮ ಬಿಂದು ಇಂದಿರಾಗಾಂಧಿ’’ ಎಂದು ಬಹಿರಂಗವಾಗಿ ಘೋಷಿಸಿದರು. ಗಾಂಧಿಯವರು ಪ್ರತಿಪಾದಿಸಿದ ಜೀವನಮೌಲ್ಯಗಳಲ್ಲಿ ಹಾಗೂ ಪ್ರಜಾಸತ್ತಾತ್ಮಕ ಅಹಿಂಸಾ ಮಾರ್ಗದಲ್ಲಿ ಅಚಲ ನಂಬಿಕೆ, ನಿಷ್ಠೆಗಳನ್ನು ಹೊಂದಿರುವ ದೊರಸ್ವಾಮಿಯವರು ಇಂದಿಗೂ ದೇಶವನ್ನು ಕಾಡುತ್ತಿರುವ ಬಡತನ, ಅಸಮಾನತೆ, ಶೋಷಣೆ, ಭ್ರಷ್ಟಾಚಾರ ಮೊದಲಾದ ಪಿಡುಗುಗಳ ವಿರುದ್ಧ ದೊರೆವ ಎಲ್ಲ ವೇದಿಕೆಗಳಲ್ಲೂ ದನಿ ಎತ್ತುತ್ತಲೇ ಇದ್ದಾರೆ. ಹೋರಾಟದ ಮುಂಚೂಣಿಯಲ್ಲಿದ್ದಾರೆ.

ಬಂದೂಕಿನ ನಳಿಕೆಯಿಂದ ಮಾತ್ರ ಅಧಿಕಾರಗ್ರಹಣ ಸಾಧ್ಯವೆಂದು ಅಡವಿಯಲ್ಲಿದ್ದು ಕೊಂಡು ಹೋರಾಟ ನಡೆಸುತ್ತಿರುವ ನಕ್ಸಲೀಯರನ್ನು ಬದುಕಿನ ಮುಖ್ಯವಾಹಿನಿಗೆ ಮರಳಿ ಕರೆತಂದು ಅವರನ್ನು ಶಾಂತಿಮಾರ್ಗಕ್ಕೆ ಹಚ್ಚುವ ಪ್ರಯತ್ನದಲ್ಲಿ ಇಂದಿಗೂ ತೊಡಗಿಕೊಂಡಿರುವವರು. ಬೆಂಗಳೂರು ಮಹಾನಗರದಲ್ಲಿ ಭೂಗಳ್ಳರು ಕೆರೆಕಾಲುವೆ ಕಟ್ಟೆ ಯಾವುದನ್ನೂ ಬಿಡದೆ ಭೂಮಿ ಕಬಳಿಸುತ್ತಿರುವುದರ ವಿರುದ್ಧ 2014ರಲ್ಲಿ ನಡೆದ ಭೂಗ್ರಹಣ ವಿರೋಧಿ ಚಳವಳಿಯಲ್ಲಿ ಇಳಿವಯಸ್ಸನ್ನೂ ಲೆಕ್ಕಿಸದೆ ಧುಮುಕಿದರು. ಎ.ಟಿ.ರಾಮಸ್ವಾಮಿ ನೇತೃತ್ವದ ಭೂಗಳ್ಳತನದ ಶೋಧನಾ ಸಮಿತಿ ಕಾರ್ಯದಲ್ಲಿ ಕೈಜೋಡಿಸಿದರು. ಆಮ್ ಆದ್ಮಿ ಪಕ್ಷದ ಚಳವಳಿಯೊಂದಿಗೂ ಸೇರಿಕೊಂಡರು. ನ್ಯಾಯಮೂರ್ತಿ ಸಂತೋಷ ಹೆಗ್ಡೆೆ ಅವರಂಥ ಗಣ್ಯರು ಬೆಂಗಳೂರಿನ ಅಕ್ರಮ ಭೂಗ್ರಹಣ ವಿರೋಧಿ ಚಳವಳಿಯಲ್ಲಿ ದೊರೆಸ್ವಾಮಿಯವರಿಗೆ ಬೆಂಬಲವಾಗಿ ನಿಂತರು. ಭೂಗಳ್ಳತನದ ವಿರುದ್ಧ ಚಳವಳಿ ಇನ್ನೂ ಪೂರ್ಣಫಲ ಕೊಟ್ಟಿಲ್ಲ. ದೊರೆಸ್ವಾಮಿಯವರ ಹೋರಾಟವೂ ನಿಂತಿಲ್ಲ.

ದೊರೆಸ್ವಾಮಿಯವರದು ಮಾಗಿದ ವಯಸ್ಸು, ಮಾಗಿದ ಮನಸ್ಸು. ಭಯ, ಚಪಲ, ಹತಾಶೆಗಳಿಂದ ಮುಕ್ತವಾಗಿರುವ ಮನಸ್ಸಿಗೆ ಮಾತ್ರ ಸರಿಯಾಗಿ ಯೋಚಿಸುವ ಶಕ್ತಿ ಇರುತ್ತದೆ ಎಂಬುದು ರಾಮ ಮನೋಹರ ಲೋಹಿಯಾ ಅವರ ನುಡಿ. ದೊರೆಸ್ವಾಮಿಯವರಿಗೆ ಯಾವ ಚಪಲವೂ ಇಲ್ಲ, ಯಾರ ಭಯವೂ ಇಲ್ಲ. ಭ್ರಷ್ಟಾಚಾರ ಮುಕ್ತ ದೇಶ ಮತ್ತು ದೀನದಲಿತರ ಉದ್ಧಾರವೇ ಅವರ ಮುಖ್ಯ ಕಾಳಜಿ-ಕಳಕಳಿ. ಇಂಥ ಮುಕ್ತ ಮನಸ್ಸಿನ ನಿಸ್ವಾರ್ಥ ಜೀವಿ ದೊರೆಸ್ವಾಮಿಯವರ ಸೇವೆ, ಭ್ರಷ್ಟಾಚಾರ ಮತ್ತು ಧರ್ಮಾಂಧತೆಗಳಿಂದ ರೋಗಗ್ರಸ್ತವಾಗಿರುವ ನಮ್ಮ ಈಗಿನ ಸಮಾಜಕ್ಕೆ/ರಾಷ್ಟ್ರಕ್ಕೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ರೋಗಮುಕ್ತವಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪುನುರುಜ್ಜೀವನಕ್ಕಾಗಿ ನಾವೆಲ್ಲ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ. ದೊರಸ್ವಾಮಿಯವರಿಗೆ ನೀಡಲಾಗಿರುವ ಗಾಧಿ ಸೇವಾ ಪ್ರಶಸ್ತಿ ಯುವಜನರಿಗೆ ಈ ನಿಟ್ಟಿನಲ್ಲಿ ಪ್ರೇರಕಶಕ್ತಿಯಾಗಲಿ. ನಾಡಿನಪರವಾಗಿ ದೊರೆಸ್ವಾಮಿಯವರಿಗೆ ಶುಭಕಾಮನೆಗಳು.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News