ಮದುವೆ ಎನ್ನುವ ಸ್ವಾಭಿಮಾನ ವ್ಯವಸ್ಥೆ-ಪೆರಿಯಾರ್ ಕಣ್ಣಲ್ಲಿ
ವೈದಿಕ ಹಿನ್ನೆಲೆಯ ಸಾಂಪ್ರದಾಯಿಕ ಮದುವೆಗಳು ಹೇಗೆ ಅರ್ಥಹೀನ ಮತ್ತು ಅದು ಮಹಿಳೆಯರ ಸ್ವಾಭಿಮಾನಕ್ಕೆ ತರುವ ಧಕ್ಕೆ ಏನು ಎನ್ನುವುದನ್ನು ವಿವರಿಸುವ ಕೃತಿ ಪೆರಿಯಾರ್ ಅವರ ‘ಸ್ವಾಭಿಮಾನದ ಮದುವೆಗಳು’. ಪೆರಿಯಾರ್ ದ್ರಾವಿಡ ಜನರ ಏಳಿಗೆಗಾಗಿ ಆತ್ಮಗೌರವ ಚಳವಳಿಯನ್ನು ಆರಂಭಿಸಿದವರು. 1925ರ ಸಂದರ್ಭದಲ್ಲಿ ಇದೊಂದು ಪರ್ಯಾಯ ಸ್ವಾತಂತ್ರ ಹೋರಾಟದ ರೂಪ ಪಡೆದಿರುವುದು ಮತ್ತು ದಕ್ಷಿಣ ಭಾರತದಲ್ಲಿ ಸಂಚಲನ ಮೂಡಿಸಿರುವುದನ್ನು ನಾವು ಮರೆಯುವ ಹಾಗಿಲ್ಲ. ಬ್ರಾಹ್ಮಣ ಪೌರೋಹಿತ್ಯದ ಮದುವೆಗಳು ಹೇಗೆ ಶೋಷಿತ ಜನರನ್ನು ಸುಲಿಯುತ್ತಿದೆ, ಅವರನ್ನು ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡುತ್ತಿದೆ ಮತ್ತು ಮಾನಸಿಕವಾಗಿ ಗುಲಾಮರನ್ನಾಗಿ ಮಾಡುತ್ತಿದೆ ಎನ್ನುವುದನ್ನು ಗಮನಿಸಿ ಅವರು ಅಂತರ್ಜಾತಿ ವಿವಾಹ, ಪ್ರೇಮವಿವಾಹವನ್ನು ವ್ಯವಸ್ಥಿತಿ ವಿವಾಹವಾಗಿ ಪರಿವರ್ತಿಸುವ ಸುಧಾರಣೆಯನ್ನು ತರಲು ಪ್ರಯತ್ನಿಸಿದರು. ಇದು ಆತ್ಮಗೌರವ ಚಳವಳಿ ರೂಪವನ್ನು ಪಡೆಯಿತು. ಈ ಮದುವೆಗಳು ಬ್ರಾಹ್ಮಣ್ಯ ಪೌರೋಹಿತ್ಯ ಒಂದನ್ನು ಬಿಟ್ಟು ಉಳಿದಂತೆ ಎಲ್ಲ ಆಚರಣೆಗಳು ಸಾಂಪ್ರದಾಯಿಕವಾಗಿಯೇ ಇದ್ದವು. ಡಿಸೆಂಬರ್ 8 1929ರಂದು ಪೆರಿಯಾರ್ ಅವರ ಸಮ್ಮುಖದಲ್ಲಿ ಮೊಟ್ಟ ಮೊದಲ ಬಾರಿಗೆ ಆತ್ಮಗೌರವ ಚಳವಳಿಯ ಹೆಸರಾಂತ ಬರಹಗಾರ ಕುಧುಸಿ ಗುರುಸ್ವಾಮಿ ಅವರ ವಿವಾಹವು ಇನ್ನೊಬ್ಬ ಜನಪ್ರಿಯ ನಾಯಕಿ ಕಂಜಧಾಮ್ ಜೊತೆ ನಡೆಯಿತು. ಈ ಕೃತಿಯಲ್ಲಿ ಒಟ್ಟು 20 ಲೇಖನಗಳು ಇವೆ. ಮದುವೆ ಕುರಿತಂತೆ ವೈಚಾರಿಕ ವ್ಯಾಖ್ಯಾನ, ಅದಕ್ಕೆ ಆಗಬೇಕಾದ ಆಧುನಿಕ ಸುಧಾರಣೆಗಳು, ಕಾನೂನಿನ ದೃಷ್ಟಿಯಲ್ಲಿ ಮದುವೆಯ ಸ್ಥಾನಮಾನ, ಶೂದ್ರರ ಬದುಕಿನಲ್ಲಿ ಮದುವೆಯ ಪಾತ್ರ, ಪುರೋಹಿತರಿಂದ ಮದುವೆ ಎನ್ನುವ ಒಪ್ಪಂದಕ್ಕೆ ಆಗಿರುವ ಧಕ್ಕೆ, ಮದುವೆಯನ್ನು ಸುತ್ತಿಕೊಂಡಿರುವ ಜ್ಯೋತಿಷ್ಯ ಮೊದಲಾದ ವೌಢ್ಯ ಇವೆಲ್ಲವನ್ನು ಇಲ್ಲಿರುವ ಲೇಖನಗಳು ಬೇರೆ ಬೇರೆ ರೀತಿಯಲ್ಲಿ ಚರ್ಚಿಸುತ್ತದೆ. ಮಹಿಳಾಶಿಕ್ಷಣ, ಮಕ್ಕಳ ಪೋಷಣೆ, ಸಮಾನ ಹಕ್ಕುಗಳು ಮೊದಲಾದ ವಿಷಯಗಳ ಬಗ್ಗೆಯೂ ಪೆರಿಯಾರ್ ಇಲ್ಲಿ ಬರೆದಿದ್ದಾರೆ. ಎಲ್ಲ ಕಾಲಕ್ಕೂ ಸಲ್ಲುವಂತಹ ಲೇಖನಗಳು ಇವು. ಪೆರಿಯಾರ್ ಎಷ್ಟು ಆಧುನಿಕ ಪ್ರಜ್ಞೆಯನ್ನು ಹೊಂದಿದ್ದರು ಎನ್ನುವುದನ್ನು ಇಲ್ಲಿರುವ ಲೇಖನಗಳು ತಿಳಿಸುತ್ತವೆ.
ಬಿ. ಸುಜ್ಞಾನ ಮೂರ್ತಿಯವರು ಈ ಲೇಖನಗಳನ್ನು ಕನ್ನಡಕ್ಕಿಳಿಸಿದ್ದಾರೆ. ಲಡಾಯಿ ಪ್ರಕಾಶನ ಗದಗ ಇದನ್ನು ಪ್ರಕಟಿಸಿದೆ. ಕೃತಿಯ ಮುಖಬೆಲೆ 70 ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.