ಕನ್ನಡ ಕಲಿಕೆ ಈಗ ಕಡ್ಡಾಯ

Update: 2017-10-21 18:54 GMT

ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಬಗ್ಗೆ ಮತ್ತು ಪಠ್ಯಪುಸ್ತಕಗಳ ಬಗ್ಗೆ ಸರಕಾರದ ಆಜ್ಞೆಯೇನೋ ಖಚಿತವಾಗಿದೆ. ಈಗ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಹೊಣೆ ಶಿಕ್ಷಣ ಇಲಾಖೆಯದ್ದಾಗಿದೆ. ನಮ್ಮ ಶಿಕ್ಷಣ ವ್ಯಾಪಾರೋದ್ಯಮದಲ್ಲಿ ರಂಗೋಲಿ ಕೆಳಗೆ ನುಸುಳುವ ಚಾಣಾಕ್ಷರಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ಕನ್ನಡ ಬೋಧನೆಯನ್ನು ಅನುಷ್ಠಾನಕ್ಕೆ ತರುವ ಹೊಣೆ ಇನ್ನಷ್ಟು ಗುರುತರವಾಗಲಿದೆ.


ಮತ್ತೊಂದು ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ಈ ವರ್ಷ ಕನ್ನಡಿಗರು ಎಂದಿಗಿಂತ ಹೆಚ್ಚು ಸಂಭ್ರಮದಿಂದ ರಾಜ್ಯೋತ್ಸವವನ್ನು ಆಚರಿಸಿದಲ್ಲಿ ಅದು ಸಕಾರಣವಾದುದು. ಶಿಕ್ಷಣದಲ್ಲಿ ಕನ್ನಡದ ಸ್ಥಾನ ಏನು ಎನ್ನುವ ಬಹುದಿನಗಳ ವಿವಾದಕ್ಕೆ ಕರ್ನಾಟಕ ಸರಕಾರ ಕೊನೆಗೂ ಇತಿಶ್ರೀ ಹಾಡಿದೆ. ಕರ್ನಾಟಕದಲ್ಲಿನ ಎಲ್ಲ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತನೆ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸುವ ದಿಟ್ಟ ನಿರ್ಧಾರವನ್ನು ಸಿದ್ದರಾಮಯ್ಯನವರ ಸರಕಾರ ಪ್ರಕಟಿಸಿದೆ. ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಬಿಡಿ ಎಂದ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ಕನ್ನಡ ತನ್ನ ಮನೆಯಲ್ಲೇ ಅನಾಥವಾಗುವಂಥ ಪರಿಸ್ಥಿತಿ ಸೃಷ್ಟಿಯಾಗಿರುವ ಈ ಸನ್ನಿವೇಶದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆನ್ನುವ ನಿರ್ಧಾರ ಸ್ವಾಗತಾರ್ಹವಾದುದು.

‘‘ನಾವು ನಮ್ಮ ತಾಯಿ ನುಡಿಯ ಮೂಲಕ ಕಲಿತಿದ್ದರಿಂದಲೇ ಬುದ್ಧಿ ಚುರುಕಾಯಿತು’’ ಎಂಬುದು ಕವಿ ರವೀಂದ್ರನಾಥ ಠಾಕೂರರ ಮಾತು. ಇಲ್ಲಿ ಮೂಲಕ ಎಂದರೆ ಮಾಧ್ಯಮ ಎಂದೇ ಅರ್ಥ. ‘‘ನಾನು ನನ್ನ ಹನ್ನೆರಡನೆಯ ವಯಸ್ಸಿನ ತನಕ ನನ್ನ ಮಾತೃಭಾಷೆ ಗುಜರಾತಿ ಮೂಲಕವೇ ಜ್ಞಾನವನ್ನು ಗಳಿಸಿದೆ’’ ಎನ್ನುತ್ತಾರೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು. ಜಗತ್ತಿನಾದ್ಯಂತ ಎಲ್ಲರೂ ಒಪ್ಪುವಂಥ ಸತ್ಯ ಇದು. ಶಿಕ್ಷಣ ಮಾಧ್ಯಮ ಸಾರ್ವತ್ರಿಕವಾಗಿ ಮಾತೃ ಭಾಷೆಯಲ್ಲೇ ಆಗಬೇಕು. ಇದಕ್ಕೆ ಮನಶ್ಶಾಸ್ತ್ರೀಯ ಆಧಾರವೂ ಇದೆ. ಎಲ್ಲ ಸ್ವತಂತ್ರ ರಾಷ್ಟ್ರಗಳೂ ಇದನ್ನು ಮಾನ್ಯ ಮಾಡಿವೆ. ಇದರಲ್ಲಿ ಕರ್ನಾಟಕ ಸರಕಾರವೂ ಹಿಂದೆ ಬೀಳಲಿಲ್ಲ. 1983ರಲ್ಲಿ ಕರ್ನಾಟಕ ವಿಧಾನ ಮಂಡಲ ಕನ್ನಡವನ್ನು ರಾಜ್ಯದಲ್ಲಿ ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರುವ ಮಸೂದೆಯನ್ನು ಅಂಗೀಕರಿಸಿತು. 1995ರಲ್ಲಿ ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಿದರು. ಅಂದಿನಿಂದ ಕರ್ನಾಟಕ ಸರಕಾರದ ಹೊಸ ಶಿಕ್ಷಣ ಕಾಯ್ದೆ ಜಾರಿಗೆ ಬಂತು.

ಈ ಕಾಯ್ದೆಯ ಅನ್ವಯ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಜಾರಿಗೆ ತರಲು ಅಗತ್ಯವಾದ ನಿಯಮಗಳನ್ನು ರೂಪಿಸುವ ಅಧಿಕಾರ ಸರಕಾರಕ್ಕೆ ಹಸ್ತಗತವಾಗಿದೆ. ಏತನ್ಮಧ್ಯೆ ಖಾಸಗಿ ಶಾಲೆಗಳ ಪಟ್ಟಭದ್ರ ಹಿತಾಸಕ್ತಿಗಳು ಕನ್ನಡ ಮಾಧ್ಯಮದಲ್ಲಿ ಕಲಿಸಬೇಕೆನ್ನುವ ಕರ್ನಾಟಕ ಸಕಾರದ ನೀತಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದವು. ಶಾಲೆಗಳು ಹೃತ್ಪೂರ್ವಕವಾಗಿ ಇದನ್ನು ಜಾರಿಗೆ ತರಲಿಲ್ಲ. ಕೆಲವು ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಪರವಾನಿಗೆ ಪಡೆದು ಕದ್ದುಮುಚ್ಚಿ ಇಂಗ್ಲಿಷ್ ಮಾಧ್ಯಮದಲ್ಲೇ ಬೋಧಿಸತೊಡಗಿದವು. ಅನುದಾನ ರಹಿತ ಶಾಲೆಗಳು ಕನ್ನಡ ಮಾಧ್ಯಮದಿಂದ ತಪ್ಪಿಸಿಕೊಳ್ಳಲು ಕೇಂದ್ರದ ಐ.ಸಿ.ಎಸ್.ಸಿ. ಅಥವಾ ಸಿ.ಬಿ.ಎಸ್.ಇ. ಪಠ್ಯಕ್ರಮಗಳನ್ನು ಅಳವಡಿಸಿಕೊಂಡವು. ಒಟ್ಟಾರೆಯಾಗಿ ರಾಜ್ಯದಲ್ಲಿ ಶಿಕ್ಷಣ ಪದ್ಧತಿ ಗೊಂದಲದ ಗೂಡಾಯಿತು. ‘‘ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಿ’’ ಎಂದ ತೀರ್ಪಿನಿಂದಾಗಿ ಸರ್ವೋಚ್ಚ ನ್ಯಾಯಾಲಯ ಈ ಗೊಂದಲದಿಂದ ನಮ್ಮನ್ನು ಪಾರು ಮಾಡ ಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು.

ಇದಕ್ಕೆ ಪರಿಹಾರವಿಲ್ಲವೇ? ಮಾತೃ ಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಲು ಅನುವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡ ಬೇಕೆಂದೂ ಇಲ್ಲವಾದಲ್ಲಿ ಪ್ರದೇಶ ಭಾಷೆಗಳು ಅವಸಾನ ಹೊಂದುವವೆಂಬ ಸತ್ಯ ರಾಷ್ಟ್ರವ್ಯಾಪಿ ಮನವರಿಕೆಯಾಗಿ ಚರ್ಚೆ ಸಂವಾದಗಳಾದವು. ‘ಮಾತ್ರಭಾಷಾ ದಿವಸ’ದ ಆಚರಣೆ ಜಾರಿಗೆ ಬಂತು. ಮಾತೃ ಭಾಷೆಯನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವನ್ನಾಗಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿಗಾಗಿ ಆಗ್ರಹಿಸಿ ಕವಿ ಚಂದ್ರಶೇಖರ ಕಂಬಾರರು ಸಾವಿರಾರು ಕನ್ನಡ ಪ್ರಮುಖರ ಮನಃಪೂರ್ವಕ ಸಹಿಯುಳ್ಳ ಮನವಿ ಪತ್ರವೊಂದನ್ನು ಪ್ರಧಾನ ಮಂತ್ರಿಯವರಿಗೆ ಸಲ್ಲಿಸಿದರು. ಈ ಮನವಿ ಬಗ್ಗೆ ಪ್ರಧಾನ ಮಂತ್ರಿಯವರು ದಿವ್ಯ ಮೌನ ವಹಿಸಿದಂತಿದೆ.

ಭಾರತಕ್ಕೆ ಬಹುತ್ವ ಬೇಡ, ಎಲ್ಲ ರಂಗಗಳಲ್ಲೂ ಒಂದೇ ಒಂದು ಸಾಕು ಎನ್ನುವ ಈಗಿನ ಸರಕಾರದ ಅನ್ನಿಸಿಕೆಗೆ ಅನುಗುಣವಾಗಿಯೇ ಇದೆ ಮೋದಿಯವರ ಮೌನ. ಎಲ್ಲ ಪ್ರಯತ್ನಗಳೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಶಿಕ್ಷಣ ಮಾಧ್ಯಮವಾಗಿ ಅಲ್ಲವಾದರೂ ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ಕ್ರಮವಾಗಿ ಸರಕಾರ 2015ರಲ್ಲಿ ಕನ್ನಡ ಭಾಷಾ ಕಲಿಕೆ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆ ಪ್ರಕಾರ ರಾಜ್ಯದ ಎಲ್ಲ ಮಾಧ್ಯಮದ ಶಾಲೆಗಳಲ್ಲೂ, ಒಂದರಿಂದ ಹತ್ತನೆಯ ತರಗತಿವರೆಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಸಲೇ ಬೇಕು. ಈ ಕಾಯ್ದೆ ಜಾರಿಗೆ ತರಲು ಅಗತ್ಯವಾದ ನಿಯಮಗಳನ್ನ್ನು ಕೊನೆಗೂ ಸರಕಾರ ರೂಪಿಸಿದ್ದು ಅದು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. 2026-27ರ ವೇಳೆಗೆ ಹತ್ತನೆ ತರಗತಿವರೆಗೂ ಸರಕಾರದ ಈ ಆದೇಶ ಅನ್ವಯವಾಗಲಿದೆ.

ಈ ನಿಯಮಾನುಸಾರ, ಹೊರ ರಾಜ್ಯಗಳಿಂದ ವಲಸೆ ಬಂದು ಎರಡರಿಂದ ಎಂಟನೆ ತರಗತಿವರೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಮೊದಲ ವರ್ಷ ಒಂದನೆ ತರಗತಿಗೆ ನಿಗದಿಪಡಿಸಿದ ಕನ್ನಡ ಭಾಷಾ ಪಠ್ಯವನ್ನು ಕಲಿಯ ಬೇಕು. ಎರಡು ಮತ್ತು ನಂತರದ ವರ್ಷಗಳಲ್ಲಿ ಎರಡನೆ ತರಗತಿ ಮತ್ತು ಅನುಕ್ರಮವಾಗಿ ಮುಂದಿನ ತರಗತಿಗಳ ಪಠ್ಯಗಳನ್ನು ಕಲಿಯಬೇಕಾಗುತ್ತದೆ. ಯಾವ ಯಾವ ತರಗತಿಗೆ ಯಾವ ಯಾವ ಪಠ್ರವನ್ನು ಬೋಧಿಸಬೇಕೆಂಬುದನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ನಿಗದಿಪಡಿಸಿದ್ದು ಪಠ್ಯಪುಸ್ತಕಗಳನ್ನು ಪಠ್ಯ ಪುಸ್ತಕ ಸಂಘದಿಂದಲೇ ಖರೀದಿಸಬೇಕಾಗುತ್ತದೆ. ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಬಗ್ಗೆ ಮತ್ತು ಪಠ್ಯಪುಸ್ತಕಗಳ ಬಗ್ಗೆ ಸರಕಾರದ ಆಜ್ಞೆಯೇನೋ ಖಚಿತವಾಗಿದೆ. ಈಗ ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಹೊಣೆ ಶಿಕ್ಷಣ ಇಲಾಖೆಯದ್ದಾಗಿದೆ.

ನಮ್ಮ ಶಿಕ್ಷಣ ವ್ಯಾಪಾರೋದ್ಯಮದಲ್ಲಿ ರಂಗೋಲಿ ಕೆಳಗೆ ನುಸುಳುವ ಚಾಣಾಕ್ಷರಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ಕನ್ನಡ ಬೋಧನೆಯನ್ನು ಅನುಷ್ಠಾನಕ್ಕೆ ತರುವ ಹೊಣೆ ಇನ್ನಷ್ಟು ಗುರುತರವಾಗಲಿದೆ. ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರಕಾರ ಪ್ರತ್ಯೇಕ ಪ್ರಾಧಿಕಾರವೊಂದನ್ನು ರಚಿಸಲು ನಿರ್ಧರಿಸಿರುವುದು ಒಂದು ಒಳ್ಳೆಯ ನಡೆ. ಕಡ್ಡಾಯ ಕನ್ನಡ ಬೋಧನೆಯನ್ನು ಅನುಷ್ಠಾನಕ್ಕೆ ತರದ ಶಾಲೆಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ಈ ಪ್ರಾಧಿಕಾರಗಳಿಗೆ ನೀಡಲುದ್ದೇಶಿಸಿರುವುದು ಕದ್ದುಮುಚ್ಚಿ ಕನ್ನಡವನ್ನು ಹೊರಗಿರಿಸುವ ಆಂಗ್ಲ ವ್ಯಾಮೋಹಿ ಶಿಕ್ಷಣ ಸಂಸ್ಥೆಗಳನ್ನು ಹದ್ದುಬಸ್ತಿನಲ್ಲಿಡಲು, ಲೋಪವೆಸಗಿದವರನ್ನು ಶಿಕ್ಷಿಸಲು ಅತ್ಯಗತ್ಯವಾಗಿದ್ದ ಕ್ರಮವಾಗಿದೆ.

ಶೈಕ್ಷಣಿಕ ವರ್ಷದ ಶುರುವಿಗೆ ಮುನ್ನವೇ ಈ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯೊಳಗಣ ಶಾಲೆಗಳಿಗೆ ಕನ್ನಡದ ಕಡ್ಡಾಯ ಬೋಧನೆ ಬಗ್ಗೆ ಮಾರ್ಗಸೂಚಿಗಳನ್ನು ಕಳುಹಿಸಿ ಕನ್ನಡದ ಕಡ್ಡಾಯ ಬೋಧನೆಯಲ್ಲಿ ಯಾವುದೇ ನೆಪದಿಂದ ಲೋಪವಾಗದಂತೆ ನೋಡಿಕೊಳ್ಳುವುದು ಪ್ರಾಧಿಕಾರದ ಹೊಣೆಯಾಗಿರುತ್ತದೆ. ಅಂತೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯೊಳಗಣ ಶಾಲೆಗಳಲ್ಲಿನ ಕನ್ನಡ ಬೋಧನೆಯ ಬಗ್ಗೆ ಕಾಲಕಾಲಕ್ಕೆ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗುತ್ತದೆ. ಕನ್ನಡವನ್ನು ಬೋಧಿಸುತ್ತಿಲ್ಲ ಎಂಬ ದೂರುಗಳು ಬಂದ ಶಾಲೆಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿ ಮೂವತ್ತು ದಿನಗಳೊಳಗೆ ಅಂಥ ಶಾಲೆಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ಜಾರಿ ಪ್ರಾಧಿಕಾರಗಳಿಗೆ ನೀಡಲಾಗಿದೆ. ಹೀಗಾಗಿ ಈ ಪ್ರಾಧಿಕಾರಗಳು ಕೇವಲ ಹಲ್ಲಿಲ್ಲದ ಹುಲಿಗಳಲ್ಲ ಎಂದು ಭಾವಿಸಬಹುದಾಗಿದೆ. ಪ್ರಾಧಿಕಾರಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೊಡಗೂಡಿ ಕನ್ನಡ ಕಡ್ಡಾಯ ಬೋಧನೆಯನ್ನು ಜಾರಿಗೊಳಿಸದ ಶಾಲೆಗಳ ವಿರುದ್ಧ ಬರುವ ದೂರುಗಳ ವಿಚಾರಣೆ ನಡೆಸಿ ಅಂಥ ಶಾಲೆಗಳನ್ನು ಶಿಕ್ಷೆಗೆ ಗುರಿಪಡಿಸುವ ಅಧಿಕಾರವನ್ನೂ ಸರಕಾರ ಈ ಪ್ರಾಧಿಕಾರಗಳಿಗೆ ನೀಡಿರುವುದು ಆಜ್ಞೆಯನ್ನು ಜಾರಿಗೆ ತರುವುದರಲ್ಲಿನ ಸರಕಾರದ ಬದ್ಧತೆಯ ಇಂಗಿತವಿದೆ.

ಕರ್ನಾಟಕ ಸರಕಾರದ ಈ ಕ್ರಮಕ್ಕೆ ರಾಜ್ಯದಲ್ಲಿನ ಕೇಂದ್ರೀಯ ಶಾಲೆಗಳ ವಲಯದಿಂದ ಅಪಸ್ವರ ಕೇಳಿಬಂದಿರುವುದು ನಿರೀಕ್ಷಿತವೇನಲ್ಲ. ಸುಲಿದ ಬಾಳೆಯ ಹಣ್ಣಿನಂದದ ಕನ್ನಡವನ್ನು ‘ಕಲಿಸುವುದು ಕಷ್ಟ’ವಂತೆ. ರಾಜ್ಯದ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬಹುದೇ ಹೊರತು, ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂಬುದು ಸಿಬಿಎಸ್‌ಇ ಆಡಳಿತ ಮಂಡಳಿಗಳ ಅಂಬೋಣ.. ಇದರ ವಿರುದ್ಧ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗೆ ತಿಳಿಸುವುದಾಗಿಯೂ ಸಂಘ ಹೇಳಿದೆ.

ಕರ್ನಾಟಕ ಸರಕಾರ ಏಕಾಏಕಿ ಇದನ್ನು ಜಾರಿಗೆ ತಂದಿಲ್ಲ. ಕನ್ನಡವನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸುವ ತನ್ನ ನಿರ್ಧಾರವನ್ನು ಪ್ರಕಟಿಸುವ ಮುನ್ನ ಅದನ್ನು ಸಾರ್ವಜನಿಕರ ಅವಗಾಹನೆಗೆ ತರಲಾಗಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಒಂದು ತಿಂಗಳು ಕಣ್ಣುಮುಚ್ಚಿಕೊಂಡಿದ್ದು ಈಗ ನಿಯಮವನ್ನು ಜಾರಿಗೊಳಿಸುವ ಆಜ್ಞೆ ಹೊರಬಿದ್ದ ನಂತರ ‘ಕಷ್ಟದ’ ಮಾತನ್ನಾಡುತ್ತಿರುವುದನ್ನು ಕನ್ನಡ ವಿರೋಧಿ ಪೂರ್ವಗ್ರಹವಾಗಿಯೇ ತೋರುತ್ತದೆ. ಸಿಬಿಎಸ್‌ಇ ಶಾಲೆಗಳ ಈ ನಿಲುವು ಸರಿಯಲ್ಲ. ಕೇಂದ್ರೀಯ ಶಾಲೆಗಳಲ್ಲಿ ಕನ್ನಡಿಗರ ಮಕ್ಕಳು ಮತ್ತು ಅನ್ಯ ಭಾಷಿಕರ ಮಕ್ಕಳೂ ಓದುತ್ತಿರುತ್ತಾರೆ. ಕೇಂದ್ರ ಸರಕಾರದ ಶಾಲೆಗಳಾದ್ದರಿಂದ ರಾಜ್ಯ ಭಾಷೆ ಮತ್ತು ರಾಜ್ಯ ಸರಕಾರಗಳ ಕಾನೂನುಗಳಿಗೆ ತಾವು ಬದ್ಧರಲ್ಲ ಎನ್ನುವ ನಿಲುವು ಸರಿಯಲ್ಲ.

ಮುಖ್ಯವಾದ ಮಾತೆಂದರೆ ಯಾವ ರಾಜ್ಯವೇ ಆದರೂ ಅಲ್ಲಿ ಭಾಷಾ ಆಲ್ಪಸಂಖ್ಯಾತರಿಗೆ ಅವರವರ ಭಾಷೆಗಳನ್ನು ಕಲಿಯುವ ಅವಕಾಶವಿರಬೇಕು. ಆದರೆ ಅವರು ಪ್ರಾದೇಶಿಕ ಭಾಷೆಯಿಂದ ತಪ್ಪಿಸಿಕೊಳ್ಳಬಾರದು. ಆ ಪ್ರದೇಶದ ನೆಲನೀರುಗಳನ್ನು ಅವಲಂಬಿಸಿದ ಜನ ಅಲ್ಲಿನ ಭಾಷೆಯನ್ನು ದೂರ ಮಾಡುವುದು ಹೇಗೆ ಸಾಧ್ಯ? ಎಂದೇ ಇಲ್ಲಿನ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಂಡ ಮೇಲೆ ಭಾಷೆಯನ್ನು ಕಲಿಸುವುದು ಅವರ ಕನಿಷ್ಠ ಋಣ. ಅದನ್ನೂ ತೀರಿಸದೆ ತಿನ್ನುವ ಅನ್ನಕ್ಕೆ ದ್ರೋಹ ಬಗೆಯಬಾರದು ಎಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯನವರ ಮಾತು ಕಟುವಾದ ಸತ್ಯ.

ಕರ್ನಾಟಕ ಸರಕಾರ ಇಂಥ ಬೆದರಿಕೆಗಳಿಗೆ ಸೊಪ್ಪು ಹಾಕಬಾರದು. ಸಿಬಿಎಸ್‌ಇಗೆ ಹಾಗೂ ಅಗತ್ಯ ಬಿದ್ದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧ್ಧಿ ಸಚಿವ ಶಾಖೆಗೆ ಕಾನೂನಾತ್ಮಕವಾಗಿಯೇ ತನ್ನ ನಿರ್ಧಾರ ಸರಿಯಾದುದೆಂಬುದನ್ನು ಮನವರಿಕೆ ಮಾಡಿಕೊಡಬೇಕು.ಅಲ್ಲದೆ ಪ್ರಾಧಿಕಾರದಂಥ ಜಾರಿ ವ್ಯವಸ್ಥೆ ತಡವಾಗಿಯಾದರೂ ಈ ನಿಯಮವನ್ನು ಅನುಷ್ಠಾನಗೊಳಿಸುವುದರಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು, ಕಟ್ಟುನಿಟ್ಟಾಗಿ ವರ್ತಿಸಬೇಕು. ಇಲ್ಲದಿದ್ದಲ್ಲಿ ಕನ್ನಡಿಗರು ಅಧಿಕಾರಿಗಳ ಕರ್ತವ್ಯಲೋಪವನ್ನು ಕ್ಷಮಿಸುವುದಿಲ್ಲ.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News