ಕಾಟಿಪಳ್ಳದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ ಸಾಹಸಿ

Update: 2017-10-24 18:44 GMT

ವರುಷ ಕಳೆದಂತೆ ಸುರತ್ಕಲ್ ಕಾಲೇಜಿಗೆ, ಮಂಗಳೂರಿನ ಕಾಲೇಜುಗಳಿಗೆ ಬರುವ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಮಂಗಳೂರಿಗೆ ಅಲೋಶಿಯಸ್ ಕಾಲೇಜು ಹಾಗೂ ಬದ್ರಿಯಾ ಕಾಲೇಜಿಗೆ ಬರುತ್ತಿದ್ದ ಹುಡುಗರನೇಕರಿಗೆ ನಮ್ಮ ಪರಿಚಯವಾಯ್ತು. ಅವರಲ್ಲಿ ಕೆಲವರಿಗೆ ನಾವು ಸಾಹಿತಿಗಳು ಎಂದು ತಿಳಿದು ಆ ಬಗ್ಗೆ ನಮ್ಮಲ್ಲಿ ಕೇಳುತ್ತಿದ್ದರು. ಶಾಲಾ ಕಾಲೇಜಿನ ಪಠ್ಯಗಳನ್ನು ಮೀರಿ ಪತ್ರಿಕೆ ಓದುವ ಅಭ್ಯಾಸಗಳೇ ಇಲ್ಲದ ವಿದ್ಯಾರ್ಥಿಗಳಿಗೆ ಕತೆ, ಕಾದಂಬರಿಗಳನ್ನು ಬರೆಯುವುದು ಎಂದರೆ ಅದು ಆಶ್ಚರ್ಯದ ಸಂಗತಿ. ಆ ದಿನಗಳಲ್ಲಿ ಬೊಳುವಾರು ಮಹಮದ್ ಕುಂಞಿಯವರ ಕಾದಂಬರಿ ಧಾರಾವಾಹಿಯಾಗಿ ಬರುತ್ತಿತ್ತು. ಫಕೀರ್ ಮುಹಮ್ಮದ್ ಕಟ್ಟಾಡಿಯವರ ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸಾರಾ ಅಬೂಬಕರ್ ಅವರ ಬರಹ ಸಂಚಲನವನ್ನೇ ಉಂಟು ಮಾಡಿತ್ತು. ಇವುಗಳ ಬಗ್ಗೆ ಚರ್ಚಿಸುತ್ತಿದ್ದ ಕೆಲವು ಹುಡುಗರು ನಮ್ಮ ಮನೆಗೆ ಬಂದು ಸಾರಾ ಅವರ ‘ಚಂದ್ರಗಿರಿಯ ತೀರದಲ್ಲಿ’, ‘ವಜ್ರಗಳು’ ಕಾದಂಬರಿಗಳನ್ನು ಓದಲು ಕೊಂಡೊಯ್ದು ಓದಿದವರೂ ಇದ್ದಾರೆ. ಅವರು ಇನ್ನೂ ವಿದ್ಯಾರ್ಥಿಗಳಾಗಿದ್ದುದರಿಂದ ಸಮಾಜದ ಅನೇಕ ವಿಷಯಗಳು ಅವರ ಗಮನಕ್ಕೆ ಬಾರದವುಗಳು. ನಮಗೆ ಈ ಸಾಹಿತಿಗಳ ಪರಿಚಯ ಸ್ನೇಹ ಇದೆ ಎನ್ನುವುದೇ ಅವರಿಗೆ ಆಶ್ಚರ್ಯ.

ಸಾರಾ ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗುತ್ತೇವೆ ಎನ್ನುವುದೆಲ್ಲ ಅವರು ಗ್ರಹಿಸುವುದಕ್ಕೆ ಸಾಧ್ಯವಾಗದ ವಿಷಯವಾದರೂ ಹೀಗೆ ಇರುವುದನ್ನು ಅವರು ಸಂತೋಷ ಪಡುತ್ತಿದ್ದರು. ಜೊತೆಗೆ ನಮ್ಮ ಬಗ್ಗೆ ಈ ಕಾರಣದಿಂದ ವಿಶೇಷವಾದ ಗೌರವವನ್ನೂ ತೋರಿಸುತ್ತಿದ್ದರು. ಹೀಗೆ ಮಂಗಳೂರಿಗೆ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ಹಲವರು ಪದವೀಧರರಾಗಿ ಮಂಗಳೂರಲ್ಲಿ ಬೇರೆ ಬೇರೆ ಉದ್ಯೋಗಗಳಲ್ಲಿದ್ದು ಮುಂದೆ ವಿದೇಶಗಳಿಗೆ ಹೋದವರೂ ಇದ್ದಾರೆ. ಇನ್ನು ಕೆಲವರು ಊರಲ್ಲೇ ಇದ್ದು ಉದ್ಯಮಿಗಳಾಗಿದ್ದಾರೆ. ವಿದ್ಯೆಯ ಪಕ್ಷಪಾತಿಗಳಾದ ಇಂತಹವರಿಂದ ಈಗ ಕಾಟಿಪಳ್ಳದಲ್ಲಿಯೂ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದೆ. ಗಂಡು ಹೆಣ್ಣು ಭೇದವಿಲ್ಲದೆ ಮುಸ್ಲಿಮರ ಮಕ್ಕಳೂ ಶಾಲೆಗೆ ಹೋಗುತ್ತಿದ್ದಾರೆ ಎನ್ನುವುದು ಸಂತೋಷದ ವಿಚಾರ. ಆದರೆ ಎಲ್ಲರೂ ಇಂಗ್ಲಿಷಿನ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದು ಮತ್ತು ಜಾತಿ, ಧರ್ಮಗಳ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಶಾಲೆಗಳಲ್ಲಿ ಓದುವ ಒಂದು ವಿಚಿತ್ರ ಸಮಾಜ ಇಂದು ಸೃಷ್ಟಿಯಾಗುತ್ತಿರುವುದು ಭಾರತದಂತಹ ಬಹು ಸಂಸ್ಕೃತಿಯ, ಬಹು ಭಾಷೆಯ ಹಿನ್ನೆಲೆಯಲ್ಲಿ ಆತಂಕಕಾರಿಯೂ ಹೌದು. ನನ್ನ ಬಾಲ್ಯದಲ್ಲಿ ಇದ್ದ ಎಲ್ಲರ ಜೊತೆ ಸ್ನೇಹ ವಿಶ್ವಾಸಗಳ ಬದುಕಿಗೆ ಅವಕಾಶವಿಲ್ಲವಾಗಿ ಪರಸ್ಪರರ ಬಗ್ಗೆ ಅನುಮಾನ ಸಂದೇಹಗಳೇ ಹುಟ್ಟಿಕೊಳ್ಳುವ ಸಂದರ್ಭಗಳೇ ಸೃಷ್ಟಿಯಾದರೆ ಮುಂದಿನ ಪೀಳಿಗೆಯ ಭಾರತ ಹೇಗಿದ್ದೀತು? ಎಂಬ ಬಗ್ಗೆ ಯೋಚಿಸಬೇಕಾದ ತುರ್ತು ಇಂದು ಅವಶ್ಯವಾಗಿದೆ.

ನಾವು ಕೃಷ್ಣಾಪುರದಲ್ಲಿ ಖರೀದಿಸಿದ್ದು ಹಳೆಯ ಮನೆ ಎಂದು ಈಗಾಗಲೇ ತಿಳಿಸಿದ್ದೇನೆ. ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ನವೀಕರಿಸುವ ಕೆಲಸಗಳೂ ಆಗಿಂದಾಗ್ಗೆ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಕಿಟಕಿ, ಬಾಗಿಲುಗಳಿಗೆ ಮರ ಬೇಕಾಗಿತ್ತು. ಆಗ ನಮಗೆ ಮನೆ ಖರೀದಿಸಲು ಕಾರಣರಾದ ಸಹೋದ್ಯೋಗಿ ಮಿತ್ರ ಪದ್ಮನಾಭ ಐತಾಳರು ತನ್ನ ಸಹಪಾಠಿಯಾಗಿದ್ದ ಕುಳಾಯಿಯಲ್ಲಿ ಮರದ ವ್ಯಾಪಾರಿಗಳಾಗಿದ್ದ ಪಣಂಬೂರು ಸಾಧು ಪೂಜಾರಿಯವರನ್ನು ಪರಿಚಯಿಸಿ ಕೊಟ್ಟರು. ಅವರ ಪರಿಚಯ ಈ ವ್ಯವಹಾರಕ್ಕಷ್ಟೇ ಉಳಿಯದೆ ಅವರ ಬಹುಮುಖ ಸೇವೆಯ ಪರಿಚಯವೂ ಆಯಿತು. ಕಾಟಿಪಳ್ಳದಲ್ಲಿ ಅವರ ಕುಟುಂಬಕ್ಕೆ ದೊರೆತ ಮನೆ ನಿವೇಶನದಲ್ಲಿ ಶ್ರೀ ನಾರಾಯಣ ಗುರುಗಳ ಮಂದಿರ ಕಟ್ಟಿಸಿ ಸಮುದಾಯದ ಸಂಘಟನೆಗೆ ನಾಂದಿ ಹಾಡಿದರು. ಅಲ್ಲಿ ಭಜನಾ ಕಾರ್ಯಕ್ರಮಗಳು ನಿತ್ಯವೂ ನಡೆಯುತ್ತಿದ್ದು ನಾರಾಯಣ ಗುರು ಜಯಂತಿಯಂದು ಶ್ರೀ ಗುರುಗಳ ಜೀವನ ಸಂದೇಶಗಳ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ನಮಗೂ ವೇದಿಕೆ ಕಲ್ಪಿಸಿಕೊಟ್ಟಿದ್ದರು.

‘‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’’ ಎನ್ನುವುದು ಮಾನವೀಯತೆಯ ಹಾಗೂ ಆಧ್ಯಾತ್ಮಿಕ ಭಾವನೆ, ನಂಬಿಕೆಯ ಅತ್ಯಂತ ಸರಳವಾದ ಸೂತ್ರ. ಇದನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವ ಅಪಾಯವೂ ಯಾರಿಗೂ ಇರಲಾರದು. ಅಲ್ಲದೆ ನನಗೆ ನನ್ನ ತಂದೆಯವರಿಂದ ಶ್ರೀ ನಾರಾಯಣ ಗುರುಗಳ ಜೀವನ ಹಾಗೂ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಸ್ಥಾಪನೆಯ ಬಗ್ಗೆ ಮಾತ್ರವಲ್ಲ ಅಲ್ಲಿನ ನಿಕಟವಾದ ಸಂಪರ್ಕವೂ ಬಾಲ್ಯದಲ್ಲಿಯೇ ಇತ್ತು. ಆ ದೇವಸ್ಥಾನಗಳಲ್ಲಿ ಬಿಲ್ಲವ ಬಂಧುಗಳೇ ಅರ್ಚಕ ವೃತ್ತಿಯನ್ನು ಶಿವಗಿರಿಗೆ ಹೋಗಿ ಕಲಿತು ಬಂದು ಮಾಡುತ್ತಿದ್ದರು ಎನ್ನುವುದೂ ಅವರನ್ನು ‘ಶಾಂತಿ’ಗಳೆಂದು ಕರೆಯುತ್ತಿರುವುದೂ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ನಾನು ಅನೇಕ ಕಡೆ ಶ್ರೀ ನಾರಾಯಣ ಗುರುಗಳ ಜೀವನ ಸಂದೇಶದ ಬಗ್ಗೆ ಈ ಮೊದಲೇ ಮಾತನಾಡುವ ಅವಕಾಶಗಳನ್ನೂ ಪಡೆದಿದ್ದೆ. ಶೂದ್ರ ಜಾತಿಗಳನ್ನು ಸರಕಾರವು ಹಿಂದುಳಿದ ವರ್ಗ ಎಂದು ಒಟ್ಟಾಗಿ ದಾಖಲಿಸಿದಾಗ ಅಂತಹ ಹಿಂದುಳಿದ ವರ್ಗಗಳಿಗೆ ಶಾಪವಾಗಿದ್ದ ಅಜ್ಞಾನ, ಬಡತನಗಳ ನಿವಾರಣೆಗೆ ಕೇವಲ ಧಾರ್ಮಿಕತೆ ಸಾಲದು ಎನ್ನುವ ಸ್ಪಷ್ಟತೆಯ ಅರಿವಿದ್ದ ಸಾಧು ಪೂಜಾರಿಯವರು ಶ್ರೀ ನಾರಾಯಣ ಗುರು ಮಂದಿರವನ್ನು ಕೇವಲ ಭಜನಾ ಕೇಂದ್ರವನ್ನಾಗಿಸದೆ ಅಲ್ಲಿ ಮಕ್ಕಳಿಗೆ ಅಂಗನವಾಡಿ ಪ್ರಾರಂಭಿಸಿದರು. ಮಧ್ಯಾಹ್ನದ ಬಳಿಕ ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರವನ್ನೂ ತೆರೆದರು. ಸಂಜೆ ವಯಸ್ಕರ ಶಿಕ್ಷಣ ಕೇಂದ್ರವಾಗಿತ್ತು ಗುರು ಮಂದಿರ.

ಹೀಗೆ ಬಡ ಜನರ ಏಳಿಗೆಗೆ ಹಲವು ದಾರಿಗಳನ್ನು ರೂಪಿಸಿದಂತೆಯೇ ಅವರನ್ನು ಯುವಕರ ನಿರುದ್ಯೋಗ ಸ್ಥಿತಿಯು ಕಾಡುತ್ತಿತ್ತು. ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಿಲ್ಲದ ಹುಡುಗರಿಗೆ ತಾಂತ್ರಿಕ ಶಿಕ್ಷಣ ದೊರೆತರೆ ಆಧುನಿಕ ಬದುಕಿನ ಆವಶ್ಯಕತೆಗಳಿಗೆ ಅನುಗುಣವಾದ ತಾಂತ್ರಿಕ ಸೇವೆ ನೀಡಲು ಸಾಧ್ಯವಾಗುವುದರೊಂದಿಗೆ ನಿರುದ್ಯೋಗಿಗಳಾಗಿ ಅಲೆದಾಡುವ ಯುವಕರು ಸ್ವದ್ಯೋಗಿಗಳಾಗಬಹುದು ಎಂಬ ಅವರ ಚಿಂತನೆಗೆ ಸ್ಥಳಾವಕಾಶ ಬೇಕಾಗಿತ್ತು. ಆಗ ಕಾಟಿಪಳ್ಳ, ಚೇಳ್ಯಾರಿನ ನಡುವೆ ಇದ್ದ ಮದ್ಯ ಎಂಬಲ್ಲಿ ಅವರ ತಾಯಿಯಿಂದ ಪಡೆದ ಸ್ಥಳದಲ್ಲಿ ಶ್ರೀ ನಾರಾಯಣ ಗುರು ಕೈಗಾರಿಕಾ ತಾಂತ್ರಿಕಾ ಶಿಕ್ಷಣ ಎಂಬ ಸಂಸ್ಥೆ ಪ್ರಾರಂಭಿಸಿದರು. ಈ ಐಟಿಐ ಸಂಸ್ಥೆಗೆ ಮಂಗಳೂರಿನಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದುದು ಹಾಗೂ ಅವರು ನಮ್ಮ ಮನೆ ರಸ್ತೆಯಾಗಿಯೇ ಹೋಗುತ್ತಿದ್ದುದನ್ನು ನೋಡುತ್ತಿದ್ದೆ. ಬಹುಶಃ ಕಾಟಿಪಳ್ಳದಂತಹ ಊರಿನಲ್ಲಿ ಖಾಸಗಿಯಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಸಾಹಸ ಮಾಡಿದವರಲ್ಲಿ ಸಾಧು ಪೂಜಾರಿಯವರೇ ಮೊದಲಿಗರು ಎನ್ನಬಹುದು.

ನಾನು ಹಿಂದೆಯೇ ಹೇಳಿದಂತೆ ಎಳೆಯ ಪೀಳಿಗೆಯ ಮಕ್ಕಳಿಗೆ ಶಾಲಾ ಶಿಕ್ಷಣ ಕಡ್ಡಾಯವಾಗಿತ್ತು. ಅವುಗಳನ್ನು ಪೂರೈಸಲು ಸಾಕಷ್ಟು ಸರಕಾರಿ ಪ್ರಾಥಮಿಕ ಶಾಲೆಗಳಿದ್ದರೂ ಇದ್ದ ಒಂದು ಹೈಸ್ಕೂಲು ಖಂಡಿತಾ ಸಾಲದು. ಆದರೆ ಅದನ್ನು ಸುರತ್ಕಲ್‌ನ ವಿದ್ಯಾದಾಯಿನಿ ಸಂಸ್ಥೆ ಪೂರೈಸುತ್ತಿತ್ತು. ಸುರತ್ಕಲ್‌ನ ವಿದ್ಯಾದಾಯಿನಿ ಸಂಸ್ಥೆಗೆ ವಿದ್ಯಾವಂತರ ಮಕ್ಕಳೇ ಹೋಗುತ್ತಿದ್ದು ಉಳಿದ ಮಕ್ಕಳು ಪ್ರೌಢ ಶಾಲೆಗೆ ಹೋಗುವುದಕ್ಕೆ 7ನೆ ಬ್ಲಾಕಿಗೆ ಬರಬೇಕಾಗಿತ್ತು. ಅದು 1, 2, 3, 4ನೆ ಬ್ಲಾಕಿನ ನಿರಾಸಕ್ತ ಜನರಿಗೆ ನೆಪಕ್ಕೆ ದೂರ ಅನ್ನಿಸುವಂತಹುದು. ಈ ಕಾರಣದಿಂದಲೇ ಸಾಧು ಪೂಜಾರಿಯವರು ಶ್ರೀ ನಾರಾಯಣ ಗುರು ಮಂದಿರದ ಬಳಿಯ ನಿವೇಶನಗಳಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಅದು ಮುಂದುವರಿದು ಪ್ರೌಢ ಶಾಲೆಯೂ ಆಯಿತು. ಮದ್ಯದಲ್ಲಿಯೂ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆ ಆರಂಭಿಸಿದರು.

ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನರಹಿತವಾಗಿ ಆರಂಭಿಸಿದ ಉದಾಹರಣೆ ಆ ದಿನಗಳಲ್ಲಿ ಇಲ್ಲದಿರುವಾಗ ಸಾಧು ಪೂಜಾರಿಯವರದು ನಿಜವಾಗಿಯೂ ಸಾಹಸವೇ ಸರಿ. ಈ ನಡುವೆ ಎಲ್ಲಾ ಅನುದಾನಿತ ಶಾಲೆಗಳು ಅನುದಾನರಹಿತವಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸಲು ಸರಕಾರ ಅನುಮತಿ ನೀಡಿದ್ದು ಕರ್ನಾಟಕದ ಪಾಲಿಗೆ ವರವೋ ಶಾಪವೋ ಗೊತ್ತಿಲ್ಲ. ಅವಿಭಜಿತ ದ.ಕ. ಜಿಲ್ಲೆ ಸ್ವಾತಂತ್ರಪೂರ್ವದಿಂದಲೇ ಬಾಸೆಲ್ ಮಿಶನರಿಗಳಿಂದ, ವಿವಿಧ ಕ್ರೈಸ್ತ ಮಿಶನರಿಗಳಿಂದ, ಸಾರಸ್ವತ ಸಮುದಾಯದವರಿಂದ, ಅನ್ನಿ ಬೆಸೆಂಟ್‌ರಿಂದ, ಅಮ್ಮೆಂಬಳ ಸುಬ್ರಾಯ ಪೈಗಳಂತಹವರಿಂದ ಶಾಲೆಗಳನ್ನು ದೊರಕಿಸಿಕೊಂಡಿತು. ಈ ಕಾರಣದಿಂದಲೇ ಇದು ವಿದ್ಯಾವಂತರ ಜಿಲ್ಲೆ ಎಂಬ ಪ್ರಸಿದ್ಧಿಯೊಂದಿಗೆ ಇಲ್ಲಿ ಒಂದಿಷ್ಟು ಇಂಗ್ಲಿಷ್ ವ್ಯಾಮೋಹವೂ ಹೆಚ್ಚಿತ್ತು ಎನ್ನುವುದು ಸುಳ್ಳಲ್ಲ. ಈ ನಿಟ್ಟಿನಲ್ಲಿ ಸರಕಾರದ ಅನುಮತಿ ಸಿಗುವುದಾದರೆ ಕಾಟಿಪಳ್ಳದಲ್ಲಿಯೂ ಯಾಕೆ ಇಂಗ್ಲಿಷ್ ಮಾಧ್ಯಮದ ಶಾಲೆ ಇರಬಾರದು ಎಂದು ಯೋಚಿಸಿದವರು ಸಾಧು ಪೂಜಾರಿಗಳು. ಇಂಗ್ಲಿಷ್ ಮಾಧ್ಯಮ ಎನ್ನುವುದು ಕೇವಲ ಶ್ರೀಮಂತರಿಗೆ ಮಾತ್ರ ಆಗಬಾರದು ಎಂಬ ಅವರ ಧೋರಣೆಯಿಂದ ಕಾಟಿಪಳ್ಳದ ಅಲ್ಪಸಂಖ್ಯಾಕ ವರ್ಗದವರಿಗೆ ಇತರ ಮಧ್ಯಮ ವರ್ಗದ ಜನರಿಗೆ ಇದು ಒಪ್ಪಿಗೆಯಾಯಿತು. ಇಷ್ಟೆಲ್ಲಾ ಶಿಕ್ಷಣ ಸಂಸ್ಥೆಗಳನ್ನು ಏಕ ವ್ಯಕ್ತಿಯಾಗಿ ಪ್ರಾರಂಭಿಸಿದರೂ ಅದಕ್ಕೊಂದು ಭದ್ರವಾದ ವ್ಯವಸ್ಥೆ ಬೇಕೆನ್ನುವ ನಿಟ್ಟಿನಲ್ಲಿ ಮತ್ತು ಈ ಶಿಕ್ಷಣ ಸಂಸ್ಥೆಗಳು ನಿರಂತರವಾಗಿ ಸೇವೆಗೈಯಬೇಕೆನ್ನುವ ಹಿನ್ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಎಜ್ಯುಕೇಷನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ರೂಪಿಸಿ ನೋಂದಣಿ ಮಾಡಿಕೊಂಡರು.

ಪ್ರೌಢ ಶಾಲೆಯು ಪದವಿಪೂರ್ವ ಹಂತವನ್ನೂ ತಲುಪಿತು. ಇವೆಲ್ಲವೂ ನಾವು ಕಾಟಿಪಳ್ಳದ ನಿವಾಸಿಗಳಾಗಿದ್ದಾಗ ನಡೆದ ಚಾರಿತ್ರಿಕ ಘಟನೆಗಳೇ. ಈ ಶಾಲೆಗಳ ವಿವಿಧ ಕಾರ್ಯಕ್ರಮಗಳಿಗೆ ನಮ್ಮಿಬ್ಬರನ್ನು ಕರೆಸಿಕೊಂಡು ಶೈಕ್ಷಣಿಕ ವಿಚಾರಗಳ ಮಹತ್ವವನ್ನು, ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಹಾಗೂ ಶಿಕ್ಷಕರಿಗೂ ನೀಡುವಂತೆ ಪ್ರೇರೇಪಿಸಿ ಪರೋಕ್ಷವಾಗಿ ನಾವು ಈ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯುವುದಕ್ಕೆ ಕಾರಣವಾಯಿತೆಂದೇ ಹೇಳಬೇಕು. ಈ ಕಾರಣಗಳಿಂದ ಈ ಶಿಕ್ಷಣ ಸಂಸ್ಥೆಗಳ ಶಿಕ್ಷಕ ಬಂಧುಗಳೂ ಆತ್ಮೀಯರಾದರು. ಈ ಶಾಲೆಗಳು ಪ್ರಾರಂಭವಾದಾಗ ಇವುಗಳ ಬಗ್ಗೆ ಹುಟ್ಟಿಕೊಂಡ ಗುಸುಗುಸು ಸುದ್ದಿಗಳು ಹತ್ತು ಹಲವು. ಆದರೆ ಅಲ್ಲಿನ ವಿದ್ಯಾರ್ಥಿಗಳು ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಪಬ್ಲಿಕ್ ಪರೀಕ್ಷೆಗಳಿಗೆ ಬರೆದು ಶೇಕಡಾ ನೂರು ಫಲಿತಾಂಶ ಬಂದಾಗ ಇವೆಲ್ಲವೂ ತಣ್ಣಗಾದುದು ಕೂಡಾ ಸತ್ಯವೇ. ಈ ಶೇಕಡಾ ನೂರು ಒಂದು ಬಾರಿಯಲ್ಲ ಹಲವು ಬಾರಿ. ಕನ್ನಡ, ಇಂಗ್ಲಿಷ್ ಮಾಧ್ಯಮದ ಪ್ರೌಢ ಶಾಲೆಗಳು ಮಾತ್ರವಲ್ಲ ಪದವಿಪೂರ್ವ ಕಾಲೇಜು ಕೂಡಾ ಫಲಿತಾಂಶದಲ್ಲಿ ಹಿಂದೆ ಬೀಳದೆ ತನ್ನ ಶಿಕ್ಷಣ ಇಲಾಖೆಯಿಂದ ಗೌರವದ ಪತ್ರಗಳನ್ನು ಪಡೆದಿರುವುದನ್ನು ಸಾಂದರ್ಭಿಕವಾಗಿ ಆಗಾಗ ನೋಡಿದ್ದೇನೆ.

ಆ ಶಾಲೆಗಳ ಬಗ್ಗೆ ಅಲ್ಲಸಲ್ಲದ ಮಾತುಗಳನ್ನು ಮೆಲುಕಾಡುತ್ತಿದ್ದವರು ಕೂಡಾ ಅಲ್ಲಿ ತಮಗೆ ಅರ್ಹವಾದ ಉದ್ಯೋಗವಿದೆಯೆಂದಾಗ ನಮ್ಮನ್ನು ಬಂದು ವಿಚಾರಿಸಿದವರೂ ಇದ್ದರು. ಕೆಲಸಕ್ಕೆ ಸೇರಿಕೊಂಡವರೂ ಇದ್ದರು. ಮುಂದೆ ಅನುದಾನಿತ ಹಾಗೂ ಸರಕಾರಿ ಖಾಯಂ ಉದ್ಯೋಗ ದೊರೆತಾಗ ಹೋದವರೇ ಹೊರತು ಬೇರೆ ಕಾರಣಗಳಿಂದ ಹೋದವರು ಇಲ್ಲ ಎನ್ನುವುದು ಆಡಳಿತ ಮಂಡಳಿಯ ಗುಣಾತ್ಮಕ ಅಂಶವೇ ಎನ್ನುವುದಕ್ಕೆ ಅಲ್ಲಿ ಈಗಲೂ ಪ್ರಾರಂಭದ ದಿನಗಳಲ್ಲಿ ಸೇರಿದ ಶಿಕ್ಷಕ, ಶಿಕ್ಷಕಿಯರು ಇರುವುದೇ ಸಾಕ್ಷಿ. ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್‌ನಿಂದಾಗಿ ಕಾಟಿಪಳ್ಳದ ಅನೇಕ ಬಡ ಕುಟುಂಬಗಳ ಮಕ್ಕಳು ವಿದ್ಯಾವಂತರಾಗಿ ಬದುಕಿನಲ್ಲಿ ಯಶಸ್ವಿಯಾದುದನ್ನು ಕಾಣುವ ಸಂದರ್ಭಗಳು ನನಗೆ ಅನೇಕ ಬಾರಿ ದೊರಕಿದೆ.

ಸಂಸ್ಥೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ ಶಿಕ್ಷಕಿಯರಿಗೆ ಗೌರವ ಮನ್ನಣೆಗಳು ಸಿಕ್ಕಾಗ ಆಡಳಿತ ಮಂಡಳಿ ಸಂಭ್ರಮಿಸುವುದನ್ನೂ ನೋಡಿದ್ದೇನೆ. ಸಂಸ್ಥೆಗಳು ಪ್ರಾರಂಭದ ದಿನಗಳಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಿ ಇಂದು ಮೂರು ಶಿಕ್ಷಣ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ಪಡೆಯುತ್ತಿದ್ದು, ಪದವಿ ಕಾಲೇಜಿನ ಹಂತಕ್ಕೆ ಬೆಳೆಯುವುದೆಂದರೆ ಅದೂ ಕಾಟಿಪಳ್ಳದಂತಹ ಊರಿನಲ್ಲಿ ಸಾಮಾನ್ಯವಾದ ವಿಷಯವಲ್ಲ. ತನ್ನ 25ನೆ ಬೆಳ್ಳಿ ಹಬ್ಬದ ಆಚರಣೆಯನ್ನು ನಡೆಸುವಲ್ಲಿ ನಮ್ಮಿಬ್ಬರಿಗೆ ಜವಾಬ್ದಾರಿಯೊಂದಿಗೆ ಆತ್ಮೀಯತೆಯನ್ನು ತೋರಿ, ಅರ್ಥಪೂರ್ಣವಾದ ಸಂಭ್ರಮವನ್ನು ಹಳೆಯ ವಿದ್ಯಾರ್ಥಿಗಳೊಂದಿಗೆ, ಹಿತೈಷಿಗಳೊಂದಿಗೆ ಹಂಚಿಕೊಂಡುದು ನಮ್ಮ ಮರೆಯಲಾಗದ ನೆನಪು. ಈ ಶಿಕ್ಷಣ ಸಂಸ್ಥೆಗಳಿಲ್ಲದೆ ಹೋಗಿದ್ದರೆ ಇಲ್ಲಿ ವಿದ್ಯೆ ಕಲಿತು ಗೌರವ ಪಡೆದವರು, ಯಶಸ್ಸು ಪಡೆದವರು ಏನಾಗಿರುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಅವರ ಅದೃಷ್ಟವೋ, ವಿಧಿಯೋ ಅಥವಾ ಸಾಮಾಜಿಕ ಪರಿವರ್ತನೆಯ ಸಾಧನೆ ಕೈಗೊಂಡ ಸಾಹಸಿ ಸಾಧು ಪೂಜಾರಿಗಳ ಸಾಮಾಜಿಕ ಬದ್ಧತೆಯೋ? ಉತ್ತರಿಸಬೇಕಾದವರು ಅಲ್ಲಿಂದ ಉಪಕೃತರಾದವರು. ಅವರ ಈ ಕಾರ್ಯವನ್ನು ಕರ್ನಾಟಕ ಸರಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎನ್ನುವುದು ಕಾಟಿಪಳ್ಳ ಎಂಬ ಊರಿಗೂ ಹೆಮ್ಮೆ ಎನ್ನುವುದು ನಿಜವಲ್ಲವೇ?

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News

ಸಂವಿಧಾನ -75